ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳ ಅರಿವಿನ ಹರಿವಿನ ‘ಕನ್ನಡ’

Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಮನುಷ್ಯ ಮಾತನ್ನು ಮೂರು ರೀತಿಯಲ್ಲಿ ಮುಟ್ಟುತ್ತಾನೆ. ಮಾತನಾಡುವುದು, ಆಲೋಚಿಸಿ ಮಾತನಾಡುವುದು ಮತ್ತು ಮಾತಿನ ಬಗ್ಗೆ ಆಲೋಚಿಸುವುದು. ತನ್ನ ಮಾತಿನ ಬಗ್ಗೆಯೇ ಆಲೋಚಿಸುವುದು ಮನುಷ್ಯನ ಅತ್ಯಂತ ಮುಂದುವರಿದ ಸ್ಥಿತಿಯೆಂದು ನಾವು ಭಾವಿಸಿದರೆ, ಅದು ಮಾತಿನಿಂದ ಅತ್ಯಂತ ದೂರವಾಗಿರುವ ಸ್ಥಿತಿಯೂ ಹೌದು. ಮುಂದುವರೆಯುವುದೆಂದರೆ ದೂರವಾಗುವುದು ಅಂತಲೇ ತಾನೇ? ಭಾಷೆಯ ಚೆಲುವನ್ನು, ಬೆರಗನ್ನು, ನಿಗೂಢತೆಯನ್ನು ಆಸ್ವಾದಿಸುವ ಸಲುವಾಗಿ ದೂರ ನಿಂತು ಆಲೋಚಿಸುವುದು ಒಂದು ಬಗೆ.

ಭಾಷೆಯ ಸ್ಥಿತಿ-ಗತಿ, ಅಳಿವು-ಉಳಿವು, ಇತ್ಯಾದಿ ಆತಂಕ ಸೂಚಕ ಪರಾಮರ್ಶೆಯು ಮತ್ತೊಂದು ಬಗೆ. ಕೇವಲ ಸಂಖ್ಯಾಧಾರಿತ ಮಾಹಿತಿಗಳನ್ನು ಕಲೆಹಾಕಿ ಭಾಷೆಯ ಕುರಿತು ಮಾತನಾಡುವುದೆಂದರೆ ಆ ಭಾಷೆಯನ್ನು ಜಡವಾಗಿಸಿದಂತೆಯೇ. ಅದರ ಬಗ್ಗೆ ಆತಂಕದಿಂದ ಆಲೋಚಿಸಬೇಕಾದ ಸ್ಥಿತಿ ಬಂದಿದೆ ಎನ್ನುವವನು, ತಾನೂ ಜಡಗೊಳ್ಳುತ್ತ ಆ ಭಾಷೆಯಿಂದ ದೂರವಾಗಿರುತ್ತಾನೆ. ಇಂಥ ಆತಂಕಕಾರಿ ಪರಿಸರದಲ್ಲಿ ನಾವೆಲ್ಲ ಬದುಕುತ್ತಿದ್ದೇವೆ ಎನ್ನುವುದನ್ನು ಸಾಬೀತುಪಡಿಸುವುದೇ ಕಸುಬಾಗಿ ಆ ಭಾಷೆಯಿಂದ ಮತ್ತಷ್ಟು ದೂರ ಸಾಗುತ್ತಿರುತ್ತಾನೆ. ದೂರ ಸಾಗಿದಂತೆ ಆತನ ಆತಂಕವು ಉಲ್ಬಣಿಸುತ್ತದೆ.

ಅದರಿಂದ ಪಾರಾಗುವ ದಾರಿಯೂ ಸ್ಪಷ್ಟವಿಲ್ಲದೆ, ಉಳಿದವರನ್ನೂ ತನ್ನ ಅಂಕಿ-ಅಂಶಗಳ ಬಿಲದೊಳಗೆ ಸಿಲುಕಿಕೊಳ್ಳುವಂತೆ ತನ್ನ ಆತಂಕವನ್ನೇ ಪದೇ ಪದೇ ಬಿತ್ತರಿಸುತ್ತಾನೆ. ಹೀಗೆ ಕನ್ನಡದ ಬಗ್ಗೆ ದೂರ ನಿಂತು ಆಲೋಚಿಸಬೇಕಾದ ಅನಿವಾರ್ಯತೆ ನನಗಿಲ್ಲವಾದರೂ, ಕನ್ನಡದ ಬಗೆಗಿರುವ ಆತಂಕಗಳಿಗೆ ಉತ್ತರ ಬಯಸುವವರಿಗೆ ಉಪಯೋಗವಾಗಲೆಂದು, ಕನ್ನಡದ ಕುರಿತಾದ ನನ್ನದೇ ಕೆಲವು ಸಂಗತಿಗಳನ್ನು ಮೆಲುಕು ಹಾಕುತ್ತೇನೆ.

ನಾನು ನನ್ನ ಬಾಲ್ಯದ ಬಹುಪಾಲು ದಿನಗಳನ್ನು ಕಳೆದದ್ದು ಬೆಂಗಳೂರಿನ ಶಿವಾಜಿನಗರದಲ್ಲಿ. ತಮಿಳು, ತೆಲುಗು, ಉರ್ದು ಮಾತನಾಡುವವರ ನಡುವೆ ಬೆರಳಣಿಕೆಯಷ್ಟು ಕನ್ನಡಿಗರೂ ಅಲ್ಲಿದ್ದರು. ಎಲ್ಲರೂ ಅವರವರ ಭಾಷೆಯ ಜನರೊಂದಿಗೆ ಅವರದೇ ಭಾಷೆಯಲ್ಲಿ ಮಾತಾಡುತ್ತಿದ್ದರು. ಉರ್ದು ಭಾಷಿಕರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವುದರಿಂದ ಸಹಜವಾಗಿ ಆ ಪರಿಸರದಲ್ಲಿ ಕಿವಿಗೆ ಹೆಚ್ಚಾಗಿ ಕೇಳಸಿಗುವ ಭಾಷೆ ಉರ್ದುವೇ. ಆದರೆ ಅಂತರಭಾಷೀಯ ವ್ಯವಹಾರಕ್ಕೆ ಯಾರು ಯಾರೊಂದಿಗೆ ಯಾವ ಭಾಷೆಯನ್ನು ಬಳಸಬೇಕೆನ್ನುವುದಕ್ಕೆ ಅಲ್ಲಿ ಒಂದು ರೀತಿಯ ಅಲಿಖಿತ ನಿಯಮವಿತ್ತು.

ಉರ್ದು ಮಾತಾಡುವವರು ಮಿಕ್ಕವರೊಂದಿಗೆ ಹೆಚ್ಚಾಗಿ ಅವರವರ ಭಾಷೆಯಲ್ಲಿ– ಅಂದರೆ ತಮಿಳರೊಂದಿಗೆ ತಮಿಳಿನಲ್ಲಿ, ಕನ್ನಡಿಗರೊಂದಿಗೆ ಕನ್ನಡದಲ್ಲಿ ಮಾತಾಡುತ್ತಿದ್ದರು. ತೆಲುಗು–ತಮಿಳಿನ ನಡುವೆ ತಮಿಳಿನದ್ದೇ ಮೇಲುಗೈ. ಕನ್ನಡಿಗರೊಂದಿಗೆ ಮಾತ್ರ ಎಲ್ಲರೂ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಎಷ್ಟೋ ತೆಲುಗು ಮಾತೃಭಾಷಿಗರು ಮನೆಯಲ್ಲೂ ಹೆಚ್ಚಾಗಿ ಕನ್ನಡದಲ್ಲಿಯೇ ಮಾತನಾಡುತ್ತಿದ್ದರು. ಎಲ್ಲರಿಗೂ ಎಲ್ಲ ಭಾಷೆಯ ಪರಿಚಯವಿದ್ದರೂ– ಮೊದಲಿಗೆ ಕನ್ನಡ, ನಂತರ ತಮಿಳು, ತೆಲುಗು, ಕೊನೆಯಲ್ಲಿ ಉರ್ದು– ಇದು ಅಂತರಭಾಷೀಯರ ನಡುವೆ ಪಾಲನೆಯಾಗುತ್ತಿದ್ದ ಕ್ರಮಾಂಕ. ಎಲ್ಲ ಸಂದರ್ಭದಲ್ಲೂ ಇದು ಹೀಗೇ ಜರುಗದಿದ್ದರೂ, ಸಾಮಾನ್ಯವಾಗಿ ಇದೇ ರೂಢಿಯಿತ್ತು. ಜಗಳಗಳಲ್ಲಿ ಮಾತ್ರ ಎದುರಿನವನು ಯಾವ ಭಾಷೆಯವನಿದ್ದರೂ ಬೈಗುಳಗಳು ಅವರದೇ ಸ್ವಂತ ಭಾಷೆಯ ಸೃಜನಶೀಲತೆಯಿಂದಲೇ ಹೊಮ್ಮುತ್ತಿದ್ದವು.

ಕುತೂಹಲದ ಸಂಗತಿಯೆಂದರೆ ಶಿವಾಜಿನಗರದಲ್ಲಿ ಬಹುಸಂಖ್ಯಾತರ ಭಾಷೆಯಾದ ಉರ್ದು ‘ಇತರ’ರೊಂದಿಗಿನ ವ್ಯವಹಾರದಲ್ಲಿ ಅತಿ ಕಡಿಮೆ ಬಳಕೆಯಾಗುತ್ತಿದ್ದರೆ, ಅಲ್ಪಸಂಖ್ಯಾತರ ಭಾಷೆಯಾದ ಕನ್ನಡ ಅತಿ ಹೆಚ್ಚು ಬಳಕೆಯಲ್ಲಿತ್ತು. ನನಗಂತೂ ವ್ಯವಹಾರಕ್ಕಾಗಿ ಉರ್ದುವನ್ನು ಬಳಸಿದ ನೆನಪೂ ಇಲ್ಲ. ಕೆಲವೊಮ್ಮೆ ತರಕಾರಿ ಮಾರುವವರೊಂದಿಗೆ ತಮಿಳನ್ನು ಬಳಸುವ ಸಂದರ್ಭವಿರುತ್ತಿತ್ತು. ಅದೂ ಒಂದೆರಡು ಪದಗಳಷ್ಟೇ. ಅದು ಬಿಟ್ಟರೆ ಶಿವಾಜಿನಗರದ ‘ಸಹವಾಸ’ದಲ್ಲಿ ಸುಮಾರು ಹದಿನೆಂಟು ವರ್ಷಗಳನ್ನು ಮನೆಯ ಒಳಗೂ ಹೊರಗೂ ಕನ್ನಡವನ್ನು ಮಾತನಾಡುತ್ತಲೇ ಕಳೆದಿದ್ದೇನೆ.

ಇದೇ ಸಂದರ್ಭದಲ್ಲಿ ಕಾಲೇಜಿನ ವಾತಾವರಣವು ಸಂಪೂರ್ಣ ಆಂಗ್ಲಮಯವಾಗಿತ್ತು. ಬಾಂಜೋವಿ, ಬ್ರಯನ್ ಆಡಮ್ಸ್‌ಗಳದ್ದೇ ಭರಾಟೆ. ಕನ್ನಡದ ಭಾವಗೀತೆಗಳೆಂದರೆ ಮಹಾ ಬೋರಿಂಗ್. ಕನ್ನಡದ ಸಿನಿಮಾಗಳೆಂದರೆ ಪರಮ ವಾಕರಿಕೆ. ಕನ್ನಡದಲ್ಲಿ ಮಾತನಾಡಿದರೆ ಕೀಳರಿಮೆ ಎನ್ನುವ ಹುಡುಗ ಹುಡುಗಿಯರು. ಇಂಜಿನಿಯರಿಂಗ್ ಮುಗಿಯುವ ಹೊತ್ತಿಗೆ ಕಂಪ್ಯೂಟರಿನ ಒಡಲಾಳದ ಭಾಷೆ ಕರಗತವಾಗುತ್ತ ಕನ್ನಡವನ್ನು ಓದುವ ಅಭ್ಯಾಸವೇ ತಪ್ಪಿಹೋಗಿತ್ತು. ಹಲವರಿಗೆ ಕನ್ನಡದ ಪತ್ರಿಕೆಯ ಒಂದು ಪುಟವನ್ನು ಓದಿ ಮುಗಿಸುವುದಕ್ಕೂ ಹರಸಾಹಸ ಪಡಬೇಕಾದಂಥ ಸ್ಥಿತಿ. ನಮ್ಮ ಕ್ಲಾಸಿನಲ್ಲಿ ಅರ್ಧವಾಸಿ ಕನ್ನಡದ ಹುಡುಗ ಹುಡುಗಿಯರಿದ್ದರೂ ನಾವುಗಳು ಪರಸ್ಪರ ಕನ್ನಡದಲ್ಲಿ ಮಾತನಾಡಿಕೊಂಡಿದ್ದು ವಿರಳವೇ.

ಕನ್ನಡವಾಗಲೀ ಇಂಗ್ಲೀಷಾಗಲೀ ಅನಿವಾರ್ಯವಲ್ಲದ ಇಂಥ ಹಲವಾರು ಕಾಲೇಜುಗಳಿಂದ ಕಲಿತು ಬಂದವರು ಇಂದು ಅನೇಕ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂಥ ಕಂಪೆನಿಗಳಲ್ಲಿ ಕನ್ನಡದಲ್ಲಿ ವ್ಯವಹರಿಸಬೇಕಾದ ಅವಶ್ಯಕತೆಯೇ ಇರದು. ಇಂಗ್ಲೀಷ್ ಎನ್ನುವುದು ಅನಿವಾರ್ಯ. ಆದರೂ ಇಲ್ಲಿ ಕನ್ನಡವನ್ನು ದಿನನಿತ್ಯ ಕೇಳುತ್ತಲೂ ಆಡುತ್ತಲೂ ಇದ್ದೇನೆ. ಇಲ್ಲಿನ ಹೆಚ್ಚಿನ ಕನ್ನಡಿಗರು ಇಂಗ್ಲೀಷ್ ಪತ್ರಿಕೆಗಳನ್ನಷ್ಟೇ ಓದುತ್ತ, ಕನ್ನಡ ಪುಸ್ತಕಗಳನ್ನು ಓದುವ ಸಂಕಷ್ಟಕ್ಕೆ ಸಿಲುಕದೆ, ಒಟ್ಟಿನಲ್ಲಿ ಕನ್ನಡವನ್ನು ಓದುವ ಪದ್ಧತಿಯಿಂದಲೇ ಪಾರಾಗಿದ್ದಾರೆ.

ಆದರೆ ಕಂಪೆನಿಯ ವ್ಯವಹಾರದಲ್ಲಿ ಪರಸ್ಪರ ಕನ್ನಡದಲ್ಲಿ ಮಾತಾಡುತ್ತ ಅಲ್ಲೊಂದು ಆಪ್ತಭಾವದ ವಾತಾವರಣವನ್ನು ಸೃಷ್ಟಿಸಿಕೊಳ್ಳುತ್ತಾರೆ. ಕೆಲಸದ ವಿಚಾರದಲ್ಲಿ ಸಹೋದ್ಯೋಗಿಗಳನ್ನು ಓಲೈಸುವ ಪರಿಸ್ಥಿತಿ ಎದುರಾದಾಗ, ಒಂದೆರಡು ಕನ್ನಡದ ವಾಕ್ಯಗಳನ್ನು ಅದರ ಎಲ್ಲ ಬಾಗು ಬಳುಕಿನೊಂದಿಗೆ ಮನೆಯವರಲ್ಲಿ ಮಾತನಾಡುವಂತೆ ಮಾತನಾಡಿ ಒಪ್ಪಿಸಲು ನೋಡುತ್ತಾರೆ. ಎಂಥ ಕಠಿಣ ಸನ್ನಿವೇಶವನ್ನೂ ಮೆತ್ತಗಾಗಿಸುವ ಸುಲಭ ಅಸ್ತ್ರವೆಂದರೆ ಕನ್ನಡವೇ. ಉದಾಹರಣೆಗೆ, ಆಫೀಸಿನ ಕಂಪ್ಯೂಟರಿನಲ್ಲಿ ನಮಗೆ ಬೇಕಾದ ಸಾಫ್ಟ್‌ವೇರ್‌ಗಳನ್ನು ಇನ್‌ಸ್ಟಾಲ್ ಮಾಡಲೆಂದೇ ಒಂದು ತಂಡವಿರುತ್ತದೆ.

ಸಾಫ್ಟ್‌ವೇರ್‌ಗಳನ್ನು ನಾವೇ ಇನ್‌ಸ್ಟಾಲ್ ಮಾಡಿಕೊಳ್ಳುವ ಹಾಗಿಲ್ಲ. ಯಾವುದೇ ಸಾಫ್ಟ್‌ವೇರ್ ಬೇಕಿದ್ದರೂ ಸರಿಯಾದ ಕಾರಣ ನೀಡಿ ಅರ್ಜಿ ಸಲ್ಲಿಸುವ ಹಾಗೆ, ಆ ತಂಡದವರ ಮೇಲೆ ಒಂದು ‘ರಿಕ್ವೆಸ್ಟ್ ಟಿಕೆಟ್’ (ಮನವಿ ಪತ್ರ) ಓಪನ್ ಮಾಡಬೇಕು. ಅದಕ್ಕೆ ಇಪ್ಪತ್ತೆಂಟು ಮ್ಯಾನೇಜರ್‌ಗಳ ಒಪ್ಪಿಗೆ ಬೇಕು. ಅದೆಲ್ಲವೂ ಆದಮೇಲೆ ಇಂತಿಷ್ಟು ದಿನದೊಳಗೆ ಆ ತಂಡದವರು ನಾವು ಕೇಳಿದ ಸಾಫ್ಟ್‌ವೇರನ್ನು ಇನ್‌ಸ್ಟಾಲ್ ಮಾಡುತ್ತಾರೆ. ಇದೊಂದು ಸಣ್ಣ ಉದಾಹರಣೆಯಷ್ಟೇ. ಹೀಗೆ ಅನೇಕ ಕೆಲಸಗಳನ್ನು ಬೇರೆ ಬೇರೆ ತಂಡದವರಿಂದ ಮಾಡಿಸಿಕೊಳ್ಳಬೇಕಾಗುತ್ತದೆ. ಎಲ್ಲದಕ್ಕೂ ‘ಪ್ರಾಸೆಸ್’ ಪಾಲಿಸುತ್ತ ಕೂತರೆ ಆಗಬೇಕಾದ ಕೆಲಸ ತಡವಾಗುವುದೆಂದು ಎಷ್ಟೋ ಬಾರಿ ಈ ನಿಯಮಗಳನ್ನು ಮೀರಿ ಕೆಲಸಗಳನ್ನು ಮಾಡಿಸಿಕೊಳ್ಳುತ್ತೇವೆ. ‘ಪ್ರಾಸೆಸ್’ ಅನ್ನುವುದು ತನ್ನ ಪಾಡಿಗೆ ತಾನು ಜರುಗುತ್ತದೆ. ಅಂಥ ಸಂದರ್ಭದಲ್ಲಿ ಇಂಗ್ಲೀಷಿನಲ್ಲಿ ಪ್ರೊಫೆಶನಲ್ ಆಗಿ ಮಾತನಾಡಿದರೆ ನೂರೆಂಟು ರೂಲ್ಸು ಹೇಳುತ್ತಾರೆ.

ಅದೇ ಕನ್ನಡದಲ್ಲಿ, ‘‘ಸ್ವಲ್ಪ ಬೇಗ ನೋಡಿ ಸಾರ್... ಟಿಕೆಟ್ ರೈಸ್ ಮಾಡಿದೀನಿ... ಸ್ವಲ್ಪ ಅರ್ಜೆಂಟು’’ ಎಂದರೆ ಅವರ ಮಾತಿನ ಧ್ವನಿಯೇ ಮೆತ್ತಗಾಗಿ ಕೆಲಸ ಮಾಡಿಕೊಡುತ್ತಾರೆ. ಹೀಗೆ ಕನ್ನಡವು ‘ಗಿಟ್ಟಿಸಿಕೊಳ್ಳುವ’ ಉಪಾಯವಾಗಿಯೂ ಐಟಿ ಕಂಪನಿಗಳಲ್ಲಿ ದಿನನಿತ್ಯದ ಬಳಕೆಯಲ್ಲಿದೆ. ಕೇವಲ ಕನ್ನಡ ಮಾತ್ರವಲ್ಲದೆ ತಮಿಳು, ತೆಲುಗು, ಬಂಗಾಲಿ, ಒಡಿಸ್ಸಿ ಭಾಷೆಗಳೂ ಸಹ ಇಂಥ ಸಂಬಂಧವೃದ್ಧಿ ಉಪಕರಣವಾಗಿವೆ. ಐಟಿ ಪ್ರಪಂಚದಲ್ಲಿ ಉನ್ನತ ಮಟ್ಟದಲ್ಲಿ ಸರಾಗವಾದ ಸ್ಪಷ್ಟವಾದ ಇಂಗ್ಲೀಷಿನ ಅವಶ್ಯಕತೆ ಇದ್ದರೂ, ಆಂತರಿಕ ಸಂಬಂಧಗಳನ್ನು ಬೆಸೆಯುವಲ್ಲಿ ಸ್ಥಳೀಯ ಭಾಷೆಗಳ ಪಾತ್ರವೇ ಮಹತ್ವದ್ದಾಗಿದೆ.

ಇದು ಕೇವಲ ಐಟಿ ಕಂಪನಿಗಳ ಒಳಗಿನ ಸಂಗತಿಯಲ್ಲ. ಹೊರಗಿನ ದಿನನಿತ್ಯದ ವ್ಯವಹಾರದಲ್ಲಿಯೂ ಕನ್ನಡದಲ್ಲಿ ಮಾತನಾಡಿದಷ್ಟು ಸುಲಭದಲ್ಲಿ ಇಂಗ್ಲೀಷ್ ಉಪಯೋಗಕ್ಕೆ ಬರಲಾರದು. ಕನ್ನಡ ಬಾರದವರೆಂದರೆ ಮನೆಯ ಮಾಲೀಕ ಬಾಡಿಗೆ ಹೆಚ್ಚಿಸುತ್ತಾನೆ, ಆಟೋದವರು ರಫ್ ಆಗುತ್ತಾರೆ, ಮನೆಗೆಲಸದವರು ಸರಿಯಾಗಿ ಸಹಕರಿಸುವುದಿಲ್ಲ, ತರಕಾರಿಯವನು ಬೆಲೆ ಹೆಚ್ಚಿಸುತ್ತಾನೆ. ಆದ್ದರಿಂದ, ಆಟೋದವರೊಂದಿಗೆ ಮಾತಾಡುವಷ್ಟು ಕನ್ನಡವನ್ನು ಹೊರರಾಜ್ಯದವರೂ ಕಲಿತುಕೊಳ್ಳಲು ಪ್ರಯತ್ನಿಸುತ್ತಾರೆ. ಕೆಲವು ಕಂಪೆನಿಗಳಲ್ಲಿ ಕನ್ನಡ ಸಂಘಗಳನ್ನು ಕಟ್ಟಿಕೊಂಡು ಇತರ ರಾಜ್ಯದವರಿಗೆ ಕನ್ನಡ ಕಲಿಸುವ ತರಗತಿಗಳನ್ನೂ ಏರ್ಪಡಿಸುತ್ತಿದ್ದಾರೆ.

ಆದರೆ, ದಿನನಿತ್ಯದ ವ್ಯವಹಾರದಲ್ಲಿ ಬಳಸುವ ಅನಿವಾರ್ಯತೆಯೇ ಇಲ್ಲದಿರುವಾಗ ಒಂದು ಭಾಷೆಯನ್ನು ಕಲಿಯುವುದಾದರೂ ಹೇಗೆ? ಬಳಕೆಗೆ ಬಾರದ ಯಾವ ಕಲಿಕೆಯೂ ನೆನಪಿನಲ್ಲಿ ಉಳಿಯುವುದಿಲ್ಲ. ಯಾಕೆಂದರೆ ಇಂದು ಮಾಲ್‌ಗಳು ಬಂದಮೇಲೆ ತರಕಾರಿಯವರೊಂದಿಗೆ ಕನ್ನಡದಲ್ಲಿ ವ್ಯವಹರಿಸುವ ಅವಶ್ಯಕತೆಯಿಲ್ಲ. ‘ಓಲಾ’ ಕ್ಯಾಬುಗಳನ್ನು ಮೊಬೈಲಿನ ಕ್ಲಿಕ್ಕಿನಲ್ಲಿ ಹಿಡಿಯಲು ಶುರುವಾದ ಮೇಲೆ ಆಟೋದವರೊಂದಿಗೆ ವ್ಯವಹರಿಸುವ ಅವಶ್ಯಕತೆಯಿಲ್ಲ. ಈಶಾನ್ಯ ರಾಜ್ಯದ ನೌಕರರು ಬಂದಮೇಲೆ ಕೆಲಸದವರೊಂದಿಗೂ ಕನ್ನಡ ಅನಿವಾರ್ಯವಲ್ಲ. ‘ಇ-ಕಾಮರ್ಸ್‌’ನ ಆರ್ಭಟದಲ್ಲಿ ರಕ್ತಬೀಜಾಸುರನಂತೆ ಹುಟ್ಟಿಕೊಳ್ಳುತ್ತಿರುವ ವೆಬ್‌ಸೈಟು – ಮೊಬೈಲ್ ಆಪ್‌ಗಳಿಂದಾಗಿ ತರಕಾರಿ, ದಿನಸಿ, ಬಟ್ಟೆ, ಎಲೆಕ್ಟ್ರಾನಿಕ್ ವಸ್ತುಗಳೆಲ್ಲವನ್ನೂ ಮಾತಿನ ಅವಶ್ಯಕತೆಯೇ ಇಲ್ಲದೆ ಮೊಬೈಲಿನಲ್ಲಿ ಕೇವಲ ಬೆರಳ ಇಶಾರೆಯಿಂದಲೇ ಖರೀದಿಸಬಹುದಾಗಿದೆ.

ಇನ್ನು ಕೆಲವೇ ದಿನಗಳಲ್ಲಿ ಜಿ.ಪಿ.ಎಸ್ ವ್ಯವಸ್ಥೆಯು ಭಾರತದಲ್ಲೂ ಕರಾರುವಕ್ಕಾಗಿ ಕೆಲಸ ಮಾಡಲು ಶುರುವಾದ ಮೇಲೆ, ದಾರಿ ಮಧ್ಯೆ ನಿಂತು ಅಪರಿಚಿತರಲ್ಲಿ, ‘ಅಣ್ಣಾ ಈ ಅಡ್ರೆಸ್ ಎಲ್ಲಿ ಬರುತ್ತೆ’, ‘ಗುರೂ, ಇಲ್ಲಿ ಹತ್ತಿರದಲ್ಲಿ ಪೆಟ್ರೋಲ್ ಬಂಕ್ ಎಲ್ಲಿದೆ’ ಎಂದು ವಿಳಾಸ ಹುಡುಕುವ ಮಾತುಗಳೂ ಕಣ್ಮರೆಯಾಗಬಹುದು. ಹೀಗೆ ಸಾಮಾಜಿಕ ವ್ಯಾವಹಾರಿಕ ವಾತಾವರಣವನ್ನೇ ಬದಲಾಯಿಸುವುದರಿಂದ ಕನ್ನಡಿಗರೂ ಕನ್ನಡಿಗರೊಂದಿಗೆ ಕನ್ನಡದಲ್ಲಿ ಮಾತನಾಡದ ಸ್ಥಿತಿ ಉಂಟಾಗುತ್ತಿದೆ. ನಮ್ಮವರಿದ್ದರೂ ಗುರುತಿಸದೆ, ಎಲ್ಲರೂ ಎಲ್ಲರನ್ನೂ ಅನ್ಯರೇ ಎಂದು ಭಾವಿಸುತ್ತಾರೆ. ಹಾಗಾಗಿ ಎಲ್ಲರೂ ಇಂಗ್ಲೀಷ್‌ನಲ್ಲೇ ಮಾತನಾಡಲು ಮುಂದಾಗುತ್ತಾರೆ. ಕನ್ನಡವು ಶ್ರಮಿಕವರ್ಗದಿಂದ ದೂರವಾದಂತೆ ಸಮಾಜವೂ ಕನ್ನಡದ ಬಳಕೆಯಿಂದ ದೂರ ಸರಿಯುತ್ತದೆ.

ಆದರೂ ಕನ್ನಡಕ್ಕೆ ಇದೆಲ್ಲವನ್ನೂ ಜೀರ್ಣಿಸಿಕೊಳ್ಳುವ ಶಕ್ತಿ ಯಾವತ್ತಿನಿಂದಲೂ ಇತ್ತು; ಇರುತ್ತದೆ. ತೆಲುಗಿನವರ ಚಿಲ್ಲರೆ ದಿನಸಿ ಅಂಗಡಿಗಳು, ಚಿನ್ನದ ಮಳಿಗೆಗಳು, ತಮಿಳರ ತರಕಾರಿ ಮತ್ತು ಬಾಳೇ ಮಂಡಿಗಳು, ಮಾರ್ವಾಡಿಗಳ ಜವಳಿ ಮಾರುಕಟ್ಟೆ, ಉರ್ದು ಭಾಷಿಗರ ಗುಜರಿ ಅಂಗಡಿಗಳು, ಜಗತ್ತಿನ ಎಲ್ಲ ಆಧುನಿಕ ಟೆಕ್ನಾಲಜಿಯ ಕ್ಯಾಮೆರಾ – ಮೊಬೈಲ್ – ಕಂಪ್ಯೂಟರ್‌ಗಳನ್ನು ರಿಪೇರಿ ಮಾಡಬಲ್ಲ ಚತುರರ ಅಗ್ರಹಾರದಂತಿರುವ ಎಸ್.ಪಿ. ರೋಡು, ಐಟಿ-ಬಿಟಿ ಕಾರಿಡಾರುಗಳು, ಎಲ್ಲದರೊಳಗೂ ಕನ್ನಡವು ಯಾವ ಯಾವುದೋ ನೆಪದಲ್ಲಿ ರೂಪದಲ್ಲಿ ನಿಧಾನವಾಗಿ ಹರಡಿಕೊಳ್ಳುತ್ತ ತನ್ನನ್ನು ತಾನು ವಿಸ್ತರಿಸಿಕೊಳ್ಳುತ್ತಲೇ ಬಂದಿದೆ.

ಅವಕಾಶವೇ ಇಲ್ಲದಂಥ ಪಬ್ ಸಂಸ್ಕೃತಿಯಲ್ಲೂ ಕನ್ನಡದ ವಾಕ್ಯಗಳು ಫ್ಯಾಶನ್ ರೂಪದಲ್ಲಿ ನಡುನಡುವೆ ಸುಳಿಯುವುದನ್ನು ಗಮನಿಸಿದ್ದೇನೆ. ಎಫ್‌ಎಂ ರೇಡಿಯೊ ಕನ್ನಡವನ್ನು ನಾವು ಎಷ್ಟೇ ಜರಿದರೂ ಅಲ್ಲಿಯೂ ಯಾವುದೋ ಒಂದು ರೂಪದಿಂದ ಕನ್ನಡವು ತನ್ನ ಸ್ಥಾನವನ್ನು ಕಬಳಿಸಿದೆ. ಹಾಗೆಯೇ, ಪೆಂಡಂಭೂತವಾಗಿ ಬೆಳೆಯುತ್ತಿರುವ ಇ-ಕಾಮರ್ಸಿನ ಜಾಲದೊಳಗೂ ಕನ್ನಡವು ಒಂದಲ್ಲ ಒಂದು ನೆಪದಿಂದ ರೂಪದಿಂದ ನುಸುಳಿಕೊಳ್ಳುತ್ತದೆ.

ಇದೆಲ್ಲವೂ ಕನ್ನಡವನ್ನು ಪಾರಂಪರಿಕವಾಗಿ ಬೆಳೆದುಬಂದ ಸಂಸ್ಕೃತಿಯ ಹಿನ್ನೆಲೆಯಲ್ಲಿ ನೋಡದೆ, ಜನರ ನಡುವಿನ ಆಡುಮಾತಿನ ಬಳಕೆಯ ದೃಷ್ಟಿಯಿಂದ ಮಾತ್ರ ಗಮನಿಸಿರುವಂಥದ್ದು. ಇಂದಿನ ಬದಲಾದ ಸಾಮಾಜಿಕ ಆರ್ಥಿಕ ಪರಿಸರದಲ್ಲಿ ಕನ್ನಡವು ಹೇಗೆ ಪರಿವರ್ತಿತಗೊಂಡು ಪಸರಿಸುತ್ತಿದೆ, ಜನ‘ಪದ’ದ ಬಳಕೆಯಲ್ಲಿ ಕನ್ನಡವು ಯಾವ ಕಾರಣಕ್ಕಾಗಿ ಯಾವ ರೂಪದಲ್ಲಿ ಸಂಚರಿಸುತ್ತಿದೆ ಎನ್ನುವುದು ಕನ್ನಡದ ಸಂಸ್ಕೃತಿಯು ಬದಲಾಗುತ್ತಿರುವ ಸಂಕೇತವೂ ಆಗಿರುತ್ತದೆಯಲ್ಲವೇ? ಹಾಗೆ ಅಂತರ್ಯಾಮಿಯಾಗಿ ಸಂಚರಿಸುತ್ತಲೇ ಭಾಷೆಯು ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುತ್ತಲೂ ಇರುತ್ತದೆ.

ವೈಯಕ್ತಿವಾಗಿ ಹೇಳುವುದಾದರೆ ಶಿವಾಜಿನಗರದಂಥ ವಾತಾವರಣದಲ್ಲಿ ಬೆಳೆದು, ಸಂಪೂರ್ಣ ಆಂಗ್ಲಮಯವಾಗಿದ್ದ ವಾತಾವರಣದಲ್ಲಿ ಕಲಿತು, ಕನ್ನಡದ ಅನಿವಾರ್ಯತೆಯೇ ಇಲ್ಲದ ಪರಿಸರದಲ್ಲಿ ಉದ್ಯೋಗದಲ್ಲಿದ್ದು, ಹೊರನಾಡುಗಳಲ್ಲಿ ಬದುಕಿರುವಾಗಲೂ ಕನ್ನಡದಿಂದ ಬೇರ್ಪಟ್ಟ ಸಂದರ್ಭವೇ ನನ್ನ ಪಾಲಿಗೆ ಬಂದಿರಲಿಲ್ಲ. ‘ಎದೆಗು ಎದೆಗು ನಡುವಿದೆ ಹಿರಿಗಡಲು’ ಎಂದ ಅಡಿಗರೇ, ‘ಅಮೃತವಾಹಿನಿಯೊಂದು ಹರಿಯುತಿದೆ ಮಾನವನ ಎದೆಯಿಂದಲೆದೆಗೆ ಸತತ...’ ಎಂದು ಹಾಡಿದ್ದಾರೆ. ಎಲ್ಲ ಕಂದರಗಳ ನಡುವೆಯೂ ಎಲ್ಲ ವಲಯಗಳ ಒಳಗೂ ಬಹುಭಾಷಿಗರ ಮಧ್ಯೆಯೂ ಕನ್ನಡದ ಇಂಧನವು ನಿರಾಯಾಸವಾಗಿ ಸಂಚರಿಸುತ್ತಿದೆ. ನನ್ನೊಳಗೆ ಆದಂತೆ ಕನ್ನಡದ ಕಿಡಿ ಯಾರಲ್ಲಿಯೂ ಯಾವ ಸಮಯದಲ್ಲೂ ಝಗ್ಗನೆ ಹೊತ್ತಿಕೊಳ್ಳಬಹುದು.

ಯಾಕೆಂದರೆ ಮಾತೃಭಾಷೆ ಎನ್ನುವುದು ನಮ್ಮ ಜೈವಿಕ ಸಂರಚನೆಯ ಭಾಗವೇ ಅನ್ನುವಷ್ಟು ನಮ್ಮೊಳಗೆ ಸೇರಿಕೊಂಡಿರುತ್ತದೆ. ವ್ಯವಹಾರಕ್ಕಾಗಿ ನಾವು ಯಾವ ಭಾಷೆಯನ್ನು ಅಪ್ಪಿಕೊಂಡರೂ ಆವಾಹಿಸಿಕೊಂಡರೂ ಅದೊಂದು ಪರ್‌ಫಾರ್ಮೆನ್ಸ್ ಮಟ್ಟದಲ್ಲಿ ಮಾತ್ರ ನಮ್ಮೊಳಗೆ ಕೆಲಸ ಮಾಡುತ್ತಿರುತ್ತದೆ. ಭಾಷೆಯಿಂದ ನಮ್ಮ ಜೈವಿಕ ಸಂರಚನೆಯನ್ನು ಬಿಡಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಹಾಗೆ ತನ್ನ ಜೈವಿಕ ಸಂರಚನೆಯನ್ನು ಭಾಷೆಯಿಂದ ಬಿಡಿಸಿಕೊಳ್ಳುವುದಕ್ಕೆ ಸಾಧ್ಯವಾದರೆ ಆಗ ಆ ಮನುಷ್ಯನು ಪ್ರಪಂಚದ ಯಾವ ಭಾಷೆಯಲ್ಲೂ ಅನಾಯಾಸವಾಗಿ ಮಾತನಾಡಬಹುದು! 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT