ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರ್ನಾಟಕದ ಹಸುರು ಹೊನ್ನು ಹಾಗೂ ಸ್ಕಾಟ್ಲೆಂಡ್‌ನ ಕ್ಲೆಗ್‌ಹಾರ್ನ್

Last Updated 17 ಡಿಸೆಂಬರ್ 2016, 19:30 IST
ಅಕ್ಷರ ಗಾತ್ರ

‘ದಿ ಕ್ಲೆಗ್‌ಹಾರ್ನ್ ಕಲೆಕ್ಷನ್ಸ್’ ಎಂಬ ವಿಶಿಷ್ಟ ಕೃತಿಯ ಅನಾವರಣ ಇತ್ತೀಚೆಗೆ ಮೈಸೂರಿನಲ್ಲಿ ಸದ್ದುಗದ್ದಲವಿಲ್ಲದೆ ನಡೆಯಿತು. ಈ ಗ್ರಂಥದ ಕರ್ತೃ ಸ್ಕಾಟ್ಲೆಂಡಿನ ಹೆನ್ರಿ ನಾಲ್ಟಿ. ಅವರು ದಕ್ಷಿಣ ಭಾರತದ, ಅದರಲ್ಲೂ ಕರ್ನಾಟಕದ ಅನೇಕಾನೇಕ ವನಸುಮಗಳನ್ನು ಕಣ್ಮನಗಳಿಗೆ ತುಂಬಿಕೊಂಡು ನಮ್ಮಲ್ಲಿಗೆ ಕಾಲಿಟ್ಟವರು.

ತಮ್ಮ ಪೂರ್ವಿಕ ಸಸ್ಯಶಾಸ್ತ್ರಜ್ಞರ ಪರಂಪರೆಯನ್ನು ಅನುಸರಿಸಿ, ವನ್ಯಸಸ್ಯಗಳ ಇರುವಿಕೆಯನ್ನು ಅರಸುತ್ತ ನಮ್ಮಲ್ಲಿಗೆ ಬಂದ ಹೆನ್ರಿನಾಲ್ಟಿಯವರಿಗೆ ಕರ್ನಾಟಕ, ಅದರಲ್ಲೂ ಮೈಸೂರೆಂದರೆ ಅಚ್ಚುಮೆಚ್ಚು. ತಮ್ಮ ಸಂಶೋಧನೆಯ ಮೂಲಕ ಇವರು ದೂರಾತಿದೂರದ ಸ್ಕಾಟ್ಲೆಂಡಿಗೂ ಕರ್ನಾಟಕಕ್ಕೂ ಪುಷ್ಪಸೇತುವೆಯನ್ನು ಕಟ್ಟಿದವರು. ಹೆನ್ರಿಯವರ ಸಸ್ಯಪ್ರೇಮದ ಹಿಂದೆ ಪಶ್ಚಿಮದ ಸ್ಕಾಟ್ಲೆಂಡಿನಿಂದ ಪೂರ್ವದ ಭಾರತಕ್ಕೆ ಬಂದ ವೈದ್ಯರೂ ಸಸ್ಯಶಾಸ್ತ್ರರೂ ಆಗಿದ್ದ ಹಲವು ಮಹನೀಯರ ಅಪೂರ್ವ ಚರಿತ್ರೆಯೇ ಇದೆ.

ವ್ಯಾಪಾರಕ್ಕಾಗಿ ಬಂದ ಬ್ರಿಟಿಷರು ನಮ್ಮನ್ನೇ ಆಳುವವರಾದರು ಎಂಬ ಅಸಮಾಧಾನದ ಜೊತೆಗೂ ಬ್ರಿಟಿಷರಿಂದ ನಾವು ಒಂದಷ್ಟನ್ನು ಪಡೆದದ್ದೂ ಇದೆ. ಶಿಕ್ಷಣ, ವೈದ್ಯಕೀಯ, ಜ್ಞಾನಾರ್ಜನೆ, ಶಿಸ್ತು ಇತ್ಯಾದಿ. ಕನ್ನಡ ಭಾಷೆಗೆ ರೆವರೆಂಡ್ ಕಿಟ್ಟಲ್, ಮೊಗ್ಲಿಂಗ್‌ರ ಕೊಡುಗೆಯನ್ನು ನಾವು ಮರೆಯುವಂತಿಲ್ಲ. ಇದೇ ಪರಂಪರೆಯಲ್ಲಿ ಹದಿನೆಂಟನೆ ಶತಮಾನದಲ್ಲಿ ‘ಈಸ್ಟ್ ಇಂಡಿಯಾ ಕಂಪೆನಿ’ಯ ವೈದ್ಯರಾಗಿ ಬಂದ ಅನೇಕ ಮಹನೀಯರು ಭಾರತದ ಸಸ್ಯಗಳನ್ನು ಅಭ್ಯಾಸ ಮಾಡಿ ಸಸ್ಯಶಾಸ್ತ್ರದ ಜಗತ್ತಿಗೆ ಕೊಟ್ಟ ಕೊಡುಗೆ ಮಹತ್ತರವಾದದ್ದು. ವೈದ್ಯರಿಗೂ ಸಸ್ಯಗಳಿಗೂ ಎಲ್ಲಿಯ ಸಂಬಂಧ ಎನ್ನಿಸಬಹುದು.

ಹದಿನೆಂಟನೇ ಶತಮಾನದಲ್ಲಿ ಭಾರತಕ್ಕೆ ಬಂದ ಪಾಶ್ಚಿಮಾತ್ಯ ವೈದ್ಯರು ತಮ್ಮ ದೇಶದಲ್ಲಿ ವೈದ್ಯಕೀಯದ ಜೊತೆಗೇ ಸಸ್ಯಶಾಸ್ತ್ರವನ್ನು ಕಲಿಯಲೇಬೇಕಿತ್ತು. ಹೀಗೆ ವೈದ್ಯರೂ, ಸಸ್ಯಶಾಸ್ತ್ರಜ್ಞರೂ ಆಗಿ ಸ್ಕಾಟ್ಲೆಂಡಿನಿಂದ ಭಾರತಕ್ಕೆ ಬಂದವರಲ್ಲಿ ವಿಲಿಯಂ ರಾಕ್ಸ್‌ಬರ್ಗ್, ಬುಕಾನನ್, ರಾಬರ್ಟ್‌ವೈಟ್, ಗಿಬ್ಸನ್, ಕ್ಲೆಗ್‌ಹಾರ್ನ್ ಪ್ರಮುಖರು. ಇವರಲ್ಲಿ ರಾಬರ್ಟ್ ವೈಟ್, ಕ್ಲೆಗ್ ಹಾರ್ನ್ ಕರ್ನಾಟಕದಲ್ಲಿ ತಮ್ಮ ವೃತ್ತಿಯ ಜೊತೆಯಲ್ಲೇ ಸಸ್ಯ ಸಂಗ್ರಹಣೆ ಮತ್ತು ಅವುಗಳ ಅಧ್ಯಯನ, ಸಸ್ಯ ಚಿತ್ರಗಳನ್ನು ಬರೆಸುವ ಕೆಲಸವನ್ನೂ ಮಾಡಿದರು.

ಈ ವೈದ್ಯರು ತಮ್ಮ ವೈದ್ಯಕೀಯ ವೃತ್ತಿಯ ಅಂಗವಾಗಿ ಸಸ್ಯಗಳ ಸಂಗ್ರಹಣೆ ಮಾಡಿ, ಆ ಸಸ್ಯಗಳನ್ನು ಪೇಪರ್ ಮಧ್ಯೆ ಒತ್ತಿ ಇಟ್ಟು, ಒಣಗಿಸಿ ಅವುಗಳ ವಿವರಗಳನ್ನು ದಾಖಲಿಸುತ್ತಿದ್ದರು. ಹೀಗೆ ದಾಖಲಿಸಿದ ಒಣಸಸ್ಯ ಮಾದರಿಗಳಿಗೆ ಒಂದು ಮಿತಿ ಇತ್ತು. ಒಂದು ಒಣಸಸ್ಯ ಮಾದರಿಯನ್ನು ವೀಕ್ಷಿಸಿದಾಗ ಅದರ ಜಾತಿ, ಹೆಸರು, ಅದರ ಭೌಗೋಳಿಕ ಪರಿಸರದ ಬಗ್ಗೆ ತಿಳಿಯಬಹುದಾಗಿತ್ತು. ಆದರೆ ಅದೇ ಸಸ್ಯದ ಹೂವು, ಕಾಯಿ, ಕಾಂಡ, ಎಲೆಗಳನ್ನು ಚಿತ್ರಿಸಿದಾಗ ಒಂದು ಸಸ್ಯದ ಬೆಳವಣಿಗೆಯ ವಿವಿಧ ಹಂತಗಳು ತಿಳಿಯುತ್ತಿದ್ದವು.

ಸಸ್ಯಚಿತ್ರಗಳ ಅವಶ್ಯಕತೆಯನ್ನು ಮನಗಂಡ ಈ ವೈದ್ಯರು ಮೊದಲಿಗೆ ಪಾಶ್ಚಿಮಾತ್ಯ ಕಲಾವಿದರನ್ನು ಸಸ್ಯ ಚಿತ್ರರಚನೆಗೆ ನೇಮಿಸಿಕೊಂಡರು. ಈ ಸಮಯದಲ್ಲಿ ಭಾರತೀಯ ಸ್ಥಳೀಯ ಚಿತ್ರಕಲೆಗಳಾದ ಮೊಗಲ್ ಮಿನಿಯೇಚರ್ ಶೈಲಿ, ಕಲಮಕಾರಿ ಪದ್ಧತಿಗಳ ಮೂಲಕ ಹೂಗಿಡ ಮರ ಬಳ್ಳಿಗಳ ಚಿತ್ರಣ ಇದ್ದೇ ಇತ್ತು. ಆದರೆ ಇಲ್ಲಿನ ಚಿತ್ರಕಲೆಗೂ ಬ್ರಿಟಿಷರ ವೈಜ್ಞಾನಿಕ ಸಸ್ಯಚಿತ್ರಣಕ್ಕೂ ಅಗಾಧ ವ್ಯತ್ಯಾಸವಿತ್ತು. ಸಸ್ಯವಿಜ್ಞಾನಕ್ಕೆ ತಕ್ಕಂತೆ ಚಿತ್ರಿಸುವಾಗ ಸಸ್ಯಗಳ ಕಾಂಡ, ಬಳ್ಳಿ ಎಲೆ, ಹೂವು, ಹೂವಿನ ವಿವಿಧ ಭಾಗಗಳನ್ನು ವೈಜ್ಞಾನಿಕ ನಿಖರತೆಗೆ ತಕ್ಕಂತೆ ಚಿತ್ರಿಸುವುದು ಅನಿವಾರ್ಯ. ಹೀಗಿರುವಾಗ ಪಾಶ್ಚಿಮಾತ್ಯರು ತಮ್ಮ ಅಗತ್ಯಕ್ಕೆ ತಕ್ಕಂತೆ ಸ್ಥಳೀಯ ಕಲಾವಿದರಿಗೆ ತರಬೇತಿ ಕೊಡುವ ಮೂಲಕ ಒಂದು ಅದ್ಭುತ ಹೈಬ್ರಿಡ್ ಶೈಲಿಯ ಚಿತ್ರಕಲೆಯನ್ನು ರೂಪಿಸಿದರು.

ಎಡಿನ್‌ಬರಾ ನಗರದ ‘ರಾಯಲ್ ಬಟಾನಿಕ್ ಗಾರ್ಡನ್‌’ನ ಕ್ಯುರೇಟರ್ ಹಾಗೂ ಸಸ್ಯ ವರ್ಗೀಕರಣ ಶಾಸ್ತ್ರಜ್ಞರಾದ ಹೆನ್ರಿ ನಾಲ್ಟಿಯವರು ಮೇಲೆ ಹೇಳಿದ ಪ್ರಮುಖ ಸಸ್ಯಶಾಸ್ತ್ರಜ್ಞರ ಕಾರ್ಯಗಳ ಬಗ್ಗೆ ಸಂಶೋಧನೆ ನಡೆಸಿ ‘ಇಂಡಿಯನ್ ಬಟಾನಿಕಲ್ ಡ್ರಾಯಿಂಗ್ಸ್ ಇನ್ ಸರ್ಚ್ ಆಫ್ ರಾಬರ್ಟ್ ವೈಟ್ ಡಾಪುರಿ ಪೇಂಟಿಂಗ್ಸ್’ ಮತ್ತು ಮೊನ್ನೆ ಮೈಸೂರಿನಲ್ಲಿ ಬಿಡುಗಡೆಗೊಂಡ ‘ಕ್ಲೆಗ್‌ಹಾರ್ನ್ ಕಲೆಕ್ಷನ್ಸ್’ ಕೃತಿಗಳನ್ನು ರಚಿಸಿದ್ದಾರೆ.

19ನೇ ಶತಮಾನದ ಸಸ್ಯಶಾಸ್ತ್ರಜ್ಞ ಹಾಗೂ ವೈದ್ಯ ಕ್ಲೆಗ್‌ಹಾರ್ನ್‌ನ ಸಸ್ಯ ಚಿತ್ರಗಳು, ಕ್ಲೆಗ್‌ಹಾರ್ನ್‌ನ ಸ್ವಂತ ಲೈಬ್ರರಿ ಮತ್ತು ಮ್ಯೂಸಿಯಂಗಳಿಂದ ‘ಎಡಿನ್‌ಬರೊ ರಾಯಲ್ ಬಟಾನಿಕ್ ಗಾರ್ಡ್‌ನ್‌’ಗೆ ಸೇರಿದ್ದವು. ಕರ್ನಾಟಕ ಹಾಗೂ ದಕ್ಷಿಣಭಾರತದ ಸಸ್ಯಚಿತ್ರಗಳು ನಾಲ್ಟಿಯವರ 17 ವರ್ಷಗಳ ಪರಿಶ್ರಮದಿಂದ ಪುಸ್ತಕ ರೂಪದಲ್ಲಿ ಬೆಳಕುಕಂಡಿವೆ.

ಈ ಸಸ್ಯಚಿತ್ರಗಳ ಹೆಚ್ಚುಗಾರಿಕೆ ಏನು ಎನಿಸಬಹುದಲ್ಲವೆ? ಪರದೇಶೀಯರು ತಮ್ಮ ವಿದ್ಯಾಭ್ಯಾಸ, ಉದ್ಯೋಗ, ಆಸಕ್ತಿಗಳ ಫಲವಾಗಿ ಅವಿರತ ಶ್ರಮದಿಂದ ಸಂಗ್ರಹಿಸಿದ ಸಸ್ಯಗಳ ಅದ್ಭುತ ಚಿತ್ರಗಳನ್ನು ಅವರು ಮಾಡಿಸಿದ್ದು – ಸ್ಥಳೀಯ ಕಲಾವಿದರಿಂದ. ವೈಜ್ಞಾನಿಕ ನಿಖರತೆ ಹಾಗೂ ಕಲಾ ಸೌಂದರ್ಯದ ಸಮ್ಮಿಶ್ರಣವಾದ ಈ ಚಿತ್ರಗಳು ಪೂರ್ವಪಶ್ಚಿಮಗಳನ್ನು ಒಂದುಗೂಡಿಸುವ ಜ್ಞಾನತಂತುಗಳಾಗಿವೆ. ಈ ಚಿತ್ರಗಳು ಇಂದು ಪುಸ್ತಕ ರೂಪದಲ್ಲಿರುವುದು ನಮ್ಮದೇ ನಿಧಿ ನಮಗೆ ದೊರಕಿದಂತಾಗಿದೆ.

ಸೈನ್ಯದ ಸರ್ಜನ್ ಆಗಿದ್ದ ಕ್ಲೆಗ್‌ಹಾರ್ನ್ ಕರ್ನಾಟಕದಲ್ಲಿದ್ದ ಅವಧಿಯಲ್ಲಿ ಮೈಸೂರು, ಶಿವಮೊಗ್ಗ, ಕೊಡಗು, ಮಲಬಾರ್‌ಗಳಲ್ಲಿ ದೀರ್ಘ ಪ್ರವಾಸ ಮಾಡಿದಾಗ ಬಹಳಷ್ಟು ಸಸ್ಯ ಸಂಗ್ರಹಣೆ ಮಾಡಿದ್ದಷ್ಟೇ ಅಲ್ಲ, ಸ್ಥಳೀಯ ಕಲಾವಿದರಿಂದಲೂ, ಮದ್ರಾಸಿನಲ್ಲಿದ್ದ ಅವಧಿಯಲ್ಲಿ ಗೋವಿಂದೂ ಎಂಬ ಚಿತ್ರಕಾರನಿಂದಲೂ ಸಸ್ಯಚಿತ್ರಗಳನ್ನು ಸಾದರಪಡಿಸಿದ.

ಕ್ಲೆಗ್‌ಹಾರ್ನ್ ಮೈಸೂರು ಪ್ರಾಂತದಲ್ಲಿದ್ದ ಅವಧಿಯ ಚಿತ್ರಗಳನ್ನು ನಾಲ್ಟಿಯವರು ‘ಶಿವಮೊಗ್ಗ ಡ್ರಾಯಿಂಗ್ಸ್’ ಎಂದೂ, ಮದ್ರಾಸಿನಲ್ಲಿ ಕ್ಲೆಗ್‌ಹಾರ್ನ್ ಮೂಲಕ – ಗೋವಿಂದೂ ಮತ್ತು ‘ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್‌’ನ ವಿದ್ಯಾರ್ಥಿಗಳಾದ ಮುರುಗೇಸನ್ ಮುದಲಿಯಾರ್, ರಂಗಸ್ವಾಮಿಯಂತಹ ಚಿತ್ರಕಾರರಿಂದ ರಚನೆಗೊಂಡ ಸಸ್ಯಚಿತ್ರಗಳನ್ನು ‘ಮದ್ರಾಸ್ ಡ್ರಾಯಿಂಗ್ಸ್’ ಎಂದೂ ವಿಂಗಡಿಸಿದ್ದಾರೆ. ಕ್ಲೆಗ್‌ಹಾರ್ನ್‌ನ ಮೈಸೂರು ಅವಧಿಯಲ್ಲಿ ರಚಿತವಾದ ‘ಶಿವಮೊಗ್ಗ ಡ್ರಾಯಿಂಗ್ಸ್’ ಮನಸೆಳೆಯುವ ಸುಂದರ ಸಸ್ಯಚಿತ್ರಗಳ ಸಮೂಹ. ಈ ಆಕರ್ಷಕ ಸಸ್ಯಚಿತ್ರಗಳನ್ನು ಒಂದು ನಿರ್ದಿಷ್ಟ ತಂತ್ರ ಬಳಸಿ ರಚಿಸಿದ್ದಾರೆ.

ಕೆಲವು ಸಸ್ಯಗಳ ರೇಖಾಕೃತಿಯ ಎಲೆ, ಹೂವು, ಬಳ್ಳಿ ಇತ್ಯಾದಿಗಳಿಗೆ ಪೂರ್ತಿ ಬಣ್ಣ ತುಂಬಿದೆ. ಇನ್ನು ಕೆಲವು ಚಿತ್ರಗಳಲ್ಲಿ ಸಸ್ಯಗಳ ಮುಖ್ಯ ಭಾಗಗಳಿಗೆ ಮಾತ್ರ ಬಣ್ಣ ತುಂಬಿದೆ. ‘ಶಿವಮೊಗ್ಗ ಡ್ರಾಯಿಂಗ್ಸ್‌’ನಲ್ಲಿನ ಚಿತ್ರಗಳಿಗೆ ನಿರ್ದಿಷ್ಟವಾದ ಸಂಖ್ಯೆ, ಸಸ್ಯ ಸಿಕ್ಕಿದ ಸ್ಥಳ ಮತ್ತು ದಿನಾಂಕ ನಮೂದಾಗಿರುವುದರಿಂದ ಈ ಮನೋಹರ ಸಸ್ಯಶಾಸ್ತ್ರೀಯ ಚಿತ್ರಗಳು 1845ರ ಆಗಸ್ಟ್‌ನಿಂದ 1849ರ ಜುಲೈವರೆಗೆ ಕ್ಲೆಗ್‌ಹಾರ್ನ್‌ನ ಸಸ್ಯಕಲಾವಿದರಿಂದ ರೂಪುಗೊಂಡವು ಎನ್ನುವುದು ಸ್ಪಷ್ಟವಾಗುತ್ತದೆ.

ಮತ್ತೊಂದು ಮಹತ್ವದ ಸಂಗತಿಯೆಂದರೆ ಲ್ಯಾಟಿನ್ ಭಾಷೆಯಲ್ಲೂ ಸ್ಥಳೀಯ ಭಾಷೆಯಲ್ಲೂ ಸಸ್ಯಗಳ ಹೆಸರು ನಮೂದಾಗಿರುವುದು. ಕ್ಲೆಗ್‌ಹಾರ್ನ್ ಮೈಸೂರು ಪ್ರಾಂತದಲ್ಲಿದ್ದ ಅವಧಿಯಲ್ಲಿ ಶಿವಮೊಗ್ಗ ಸುತ್ತಮುತ್ತ ಮತ್ತು ಪಶ್ಚಿಮಘಟ್ಟಗಳ ಸಸ್ಯಗಳ ಚಿತ್ರಗಳನ್ನು ಅವರೊಡನಿದ್ದ ಅನಾಮಿಕ ಮರಾಠಿ ಕಲಾವಿದ ಚಿತ್ರಿಸಿರುವನೆಂದು ತಿಳಿದುಬರುತ್ತದೆ. ಕ್ಲೆಗ್‌ಹಾರ್ನ್ ಕನ್ನಡ ಕಲಿತಿರಬಹುದೆಂದು ಊಹಿಸಬಹುದಾದರೂ ಆ ಚಿತ್ರಗಳಲ್ಲಿರುವ ಸಸ್ಯಗಳ ಸ್ಥಳೀಯ ಹೆಸರುಗಳನ್ನು ಮೋಡಿ ಅಕ್ಷರಗಳ ಕನ್ನಡದಲ್ಲಿ ಆ ಅನಾಮಿಕ ಮರಾಠಿ ಕಲಾವಿದನೇ ಬರೆದಿದ್ದಾನೆ.

ಸ್ಥಳೀಯ ಮರಾಠಿ ಕಲಾವಿದನು ಚಿತ್ರಿಸಿರುವ ಬಳ್ಳಿ, ಹೂ, ಹಣ್ಣುಗಳಲ್ಲಿ ಗೆರೆಗಳ ಸೂಕ್ಷ್ಮತೆಯನ್ನು ನೋಡಿದಾಗ ಅವನು ಶಿವಮೊಗ್ಗಾದ ಗುಡಿಗಾರ ಕಲಾವಿದನೇ ಇರಬೇಕೆಂದು ಹೆನ್ರಿನಾಲ್ಟಿ ಊಹಿಸುತ್ತಾರೆ. ಸ್ಥಳೀಯ ಕಲಾವಿದನು ಎಷ್ಟು ಪ್ರತಿಭಾಶಾಲಿಯಾಗಿದ್ದನೆಂದರೆ ಅವನಲ್ಲಿ ಬಣ್ಣಗಳು ಮುಗಿದುಹೋದಾಗ ತನ್ನ ಸುತ್ತಲಿರುವ ವಿವಿಧ ಸಸ್ಯಗಳಿಂದ ಬಣ್ಣಗಳನ್ನು ತಯಾರಿಸಿಕೊಂಡು ಕೆಲಸ ಮುಂದುವರಿಸಿದ ಎಂದು ಕ್ಲೆಗ್‌ಹಾರ್ನ್ ಪ್ರಶಂಸಿಸಿದ್ದಾರೆ.

ಮುಂದೆ ಕ್ಲೆಗ್‌ಹಾರ್ನ್ ಮದ್ರಾಸಿನಲ್ಲಿ ಗೋವಿಂದೂ ಎಂಬ ಚಿತ್ರಕಾರನನ್ನೂ ಮತ್ತು ಅಲೆಕ್ಸಾಂಡರ್‌ ಹಂಟರ್ ಎನ್ನುವವರಿಂದ ಸ್ಥಾಪಿತವಾಗಿದ್ದ ‘ಮದ್ರಾಸ್ ಸ್ಕೂಲ್ ಆಫ್ ಆರ್ಟ್ಸ್‌’ನ ವಿದ್ಯಾರ್ಥಿಗಳಾದ ಮುರುಗೇಸನ್ ಮುದಲಿಯಾರ್, ರಂಗಸ್ವಾಮಿಯಂತಹ ಕಲಾವಿದರಿಂದ ಸಸ್ಯಚಿತ್ರಗಳನ್ನು ತಯಾರಿಸಿದರು. ಇವೆಲ್ಲವೂ ಆತನ ನಿವೃತ್ತಿಯ ನಂತರ ಎಡಿನ್‌ಬರಾಗೆ ಹೋಗಿ ಕಾಲಕ್ರಮೇಣ ಕ್ಲೆಗ್‌ಹಾರ್ನ್‌ರ ಲೈಬ್ರರಿ, ಮ್ಯೂಸಿಯಂಗಳನ್ನು ಸೇರಿ ಕೊನೆಗೆ ‘ರಾಯಲ್ ಬಟಾನಿಕ್ ಗಾರ್ಡನ್‌’ ಸೇರಿದವು.

ನಮ್ಮ ದೇಶದ ಸಸ್ಯಗಳ ವರ್ಣಮಯ ವೈಜ್ಞಾನಿಕ ಸಸ್ಯಚಿತ್ರಗಳ ಸಂಪತ್ತನ್ನು ಬೆಳಕಿಗೆ ತಂದವರು ಅಲ್ಲಿನ ಕ್ಯುರೇಟರ್ ಹೆನ್ರಿ ನಾಲ್ಟಿಯವರು. ಅವರ ಶ್ರಮ ನಾಲ್ಕು ಹೊತ್ತಿಗೆಗಳಾಗಿ ರೂಪುಗೊಂಡಿವೆ. ಈ ಸಸ್ಯಚಿತ್ರರಚನೆಗೆ ಕಾರಣರಾದ ಸ್ಕಾಟ್ಲೆಂಡಿನ ಅಂದಿನ ವೈದ್ಯ ಹಾಗೂ ಸಸ್ಯಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದ ಮಹನೀಯರ ಬಗೆಗೂ, ಆ ಚಿತ್ರಗಳನ್ನು ರಚಿಸಿದ ನಮ್ಮ ಕಲಾವಿದರ ಬಗೆಗೂ ನಾಲ್ಟಿಯವರು ವಹಿಸಿದ ಶ್ರಮ, ಅನೇಕ ಅನಾಮಿಕ ಮತ್ತು ಹೆಸರು ಗೊತ್ತಿರುವ ಕಲಾವಿದರ ಬಗ್ಗೆ ಅವರ ಪ್ರೀತಿ, ಕಾಳಜಿಗಳು ಎರಡೂ ದೇಶಗಳ ನಡುವೆ ಒಂದು ಪ್ರೀತಿಯ ನಂಟನ್ನು ಸೃಷ್ಟಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT