ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕವನ ಕಾರಣ

Last Updated 31 ಅಕ್ಟೋಬರ್ 2015, 19:30 IST
ಅಕ್ಷರ ಗಾತ್ರ

ಏಕಾಂತದ ಹಬೆಯಲ್ಲಿ ಎಷ್ಟು ಹಿತವೋ ಅಷ್ಟು ಬೆಂದು ಮೆದುವಾದ ಶಬ್ದಗಳು ರುಚಿ ಮತ್ತು ಪರಿಮಳ ಪಡೆದು ಹೊರಬರುವಾಗ ಕವನವಾಗುತ್ತದೆ! ನಮ್ಮೊಳಗೆ ಒಂದಿಷ್ಟಾದರೂ ಖಾಸಗಿ ಕ್ಷಣಗಳು ಇಲ್ಲವಾದರೆ ಶಬ್ದಗಳು ಕವನವಾಗುವುದೆ ಇಲ್ಲ! ಆಶ್ಚರ್ಯವೆಂದರೆ ಶಬ್ದಗಳಿಗೆ ನಮ್ಮ ಸಂಗ ಬೇಕು. ಅದಕ್ಕಾಗಿ ಅವುಗಳು ನಿಶ್ಯಬ್ದವಾಗಿ ಕಾಯುತ್ತಲೆ ಇರುತ್ತವೆ! ಆದರೆ ನಮ್ಮೊಳಗೂ ಒಂದು ಮೌನ ನೆಲೆಯಾಗುವ ತನಕ ಶಬ್ದ ಸಾಂಗತ್ಯ ಸಿಗುವುದೆ ಇಲ್ಲ! ಮೌನ ಮೌನದೊಡನೆ ಮಾತುಕತೆ ನಡೆಸಿದಾಗ ಕವನವೊಂದು ಮೆಲ್ಲಗೆ ಹೊರಬರುತ್ತದೆ!

ಮನಸ್ಸು ಎನ್ನುವ ನಮ್ಮದೇ ಶಬ್ದಕೋಶದಲ್ಲಿ ಶಬ್ದಗಳು ಗೂಡುಕಟ್ಟಿಕೊಂಡು ಹಾಯಾಗಿಯೇ ಇರುತ್ತವೆ. ನಮಗೆ ಅರ್ಥ ಗೊತ್ತಿರುವ ಶಬ್ದಗಳಿಗೇನೂ ಇಲ್ಲಿ ಬರವಿಲ್ಲ! ಆದರೆ ಗೂಡಬಿಟ್ಟು ಹೊರಬಂದು ಆಹಾರ ಹುಡುಕುವಂತೆ ಮಾಡುವ ‘ಶಬ್ದ ಚಲನೆ’ ನಮ್ಮ ಅಂತರಂಗಕ್ಕೆ ಬಿಟ್ಟ ವಿಷಯ! ನಾವು ಸುಮ್ಮನಿದ್ದರೆ ‘ಶಬ್ದ ಹಕ್ಕಿಗಳು’ ಹೊರಬರುವುದೆ ಇಲ್ಲ! ಅವುಗಳು ಉಪವಾಸ ಮಾಡುತ್ತವೆಯೇ ಹೊರತು ಹೊರಗೆ ಬರುವುದೇ ಇಲ್ಲ. ಇಲ್ಲೂ ಒಂದು ವಿಸ್ಮಯವಿದೆ! ಉಪವಾಸವಿದ್ದರೂ ಈ ಹಕ್ಕಿಗಳು ಸೊರಗುವುದೂ ಇಲ್ಲ; ಕೊರಗುವುದೂ ಇಲ್ಲ! ಇದು ಕೊಂಬೆಯಲ್ಲಿ ಕುಳಿತ ಹಣ್ಣು ತಿನ್ನುವ ಹಕ್ಕಿಯ ಹಾಗೆ! ಒಂದೇ ಒಂದು ವ್ಯತ್ಯಾಸವೆಂದರೆ, ಈ ಹಕ್ಕಿಗಳು ಹೊರಬಂದು ಹಾಡದೆ ಇದ್ದರೆ ಕವಿ ಸೊರಗುತ್ತಾನೆ, ಕೊರಗುತ್ತಾನೆ. ಹಕ್ಕಿ ಹಾಡಿತೋ ಕವನ ಮೂಡಿತೆಂದೇ ಅರ್ಥ!

ಒಳಗಿರುವ ನಮ್ಮ ಚಿರಪರಿಚಿತ ಚಿರಂಜೀವಿ ಶಬ್ದಗಳನ್ನು ಮಲ್ಲಿಗೆ ಗಿಡದಿಂದ ಮೆಲ್ಲಗೆ ಮೊಗ್ಗನ್ನು ಒಂದೊಂದಾಗಿ ಮೆದುವಾಗಿ ಕಿತ್ತು ತೆಗೆದಂತೆ ತೆಗೆದು, ಬಾಳೆಯ ನಾರಿನಿಂದ ಹೆಣೆದು ಹೆಣೆದು ಮಾಲೆ ಕಟ್ಟಿದಾಗ ಕವನ ಪರಿಮಳದ ನಗೆ ಬೀರುತ್ತದೆ! ಇವತ್ತು ಮೊಗ್ಗು ಕೊಯ್ದರೇನಂತೆ. ನಾಳೆ ಮತ್ತೆ ಹೊಸ ಮೊಗ್ಗುಗಳು ಗಿಡದ ತುಂಬಾ ಮೂಡುತ್ತವೆ! ಶಬ್ದಗಳೂ ಹೀಗೆಯೇ ಅಲ್ಲವೆ! ಇವತ್ತು ಕಾಗದದ ಮೇಲೆ ಕಾಣಿಸುವ ಶಬ್ದಗಳು ನಾಳೆ ಮತ್ತೆ ಚಿಗುರುತ್ತವೆ; ಅರಳುತ್ತವೆ, ಅರಿವಿಗೆ ಬಂದು ಅನುಭವವಾಗುತ್ತವೆ. ಶಬ್ದಗಳಿಗೆ ಸಾವಿಲ್ಲ; ಸತ್ತರದು ಶಬ್ದವೆ ಅಲ್ಲ! ನಾನು ಉಪಯೋಗಿಸದ ಶಬ್ದಗಳನ್ನು ನೀವು ಬಳಸಿ ಭಾವ ತುಂಬಿ ಜೀವಂತಗೊಳಿಸುತ್ತೀರಿ. ನಾವಿಬ್ಬರೂ ಬಳಸದ ಪದಗಳನ್ನು ಮಗುವೊಂದು ಮುಗ್ಧವಾಗಿ ಬಳಸಿ ‘ಶಬ್ದಶಕ್ತಿ’ ಮಾಗಿಸಿಬಿಡುತ್ತದೆ. ಆಶ್ಚರ್ಯವೆಂದರೆ ಶಬ್ದಗಳು ಚಿರಂಜೀವಿಯಾಗುವುದು ಮುದ್ದು ಮಕ್ಕಳಿಂದಲೆ!

ಒಂದು ನಿತ್ಯ ಸತ್ಯದ ಸುಂದರ ಮಾತಿದೆ! ಮೂರೋ ನಾಲ್ಕೋ ವರುಷದ ಮಗುವೊಂದು ವಾರದಲ್ಲಿ 100 ಹೊಸ ಶಬ್ದಗಳನ್ನು ಕಲಿಯುತ್ತದೆಯಂತೆ! ಅದಕ್ಕಿರುವುದು ‘ಶಬ್ದಕುತೂಹಲ’. ಆದರೆ ದೊಡ್ಡವರು, ಬೆಳೆದವರು ಎಂದೆನಿಸಿಕೊಂಡ ನಾವು ವಾರವಾರವೂ ಒಂದೇ ಒಂದು ಹೊಸ ಶಬ್ದವನ್ನು ಕಲಿಯುವುದೇ ಇಲ್ಲವಂತೆ! ಇದು ನಮ್ಮ ‘ಶಬ್ದ ಬಡತನ’. ಇದು ನಮ್ಮ ‘ಶಬ್ದ ಬರ’! ಹೊರಗಿನ ಮುಂಗಾರು ಪ್ರಕೃತಿಯ ಕೃಪೆ! ಮುಂಗಾರು ಕೈಕೊಟ್ಟಾಗ ಬರ ಬರುವುದೂ ಸಹಜವೆ. ಆದರೆ ಈ ಶಬ್ದ ಬರಕ್ಕೆ ನಾವೇ ಕಾರಣ. ಒಳಗಿನ ಶಬ್ದಗಳಿಗೆ ನೀರೆರೆಯುವಷ್ಟು, ಹೊರಗಿನಿಂದ ಹೊಸ ಹೊಸ ಶಬ್ದಗಳನ್ನು ತಂದು ಕೃಷಿ ಮಾಡುವಷ್ಟು ಮುಂಗಾರು – ಹಿಂಗಾರು ಮಳೆ ಮನದೊಳಗೇ ಇದೆ. ಹನಿ ಹನಿ ನೀರೆರೆದು ಹೊಸ ಹೊಸ ರೂಪಕಗಳನ್ನು ಇಷ್ಟೇ ಇಷ್ಟು ಒದ್ದೆ ಮಾಡಿ ಹದವಾದ ಬಿಸಿಲಿಗೆ ಒಡ್ಡಿದಾಗ ಕವನವೊಂದು ಒಲವಿನಿಂದ ಕುಣಿಯುತ್ತದೆ. ಕವಿ ನೀರೆರೆಯುತ್ತಿರುವ ತನಕ ಕವನ ಅರಳುತ್ತಲೆ ಇರುತ್ತದೆ; ಮರಳುತ್ತಲೇ ಇರುತ್ತದೆ.

ಶಬ್ದಗಳಿಗೆ ಸೂತಕದ ಬಂಧನವಿಲ್ಲ! ಶಬ್ದದ ಹುಟ್ಟು ನಿರ್ಮಲ ಸೃಷ್ಟಿ! ಹಟ್ಟಿಯಲ್ಲಿ ಹಸುವೊಂದು ಕರು ಹಾಕಿದಂತೆ ಈ ಹುಟ್ಟು. ಅಲ್ಲಿರುವುದು ಕೇವಲ ಸಂತೋಷ ಮಾತ್ರ. ಹೊಸ ಶಬ್ದವೊಂದರ ಅರ್ಥ ಮೊದಲ ಬಾರಿ ನನ್ನ ಅರಿವಿಗೆ ಬಂದಾಗ ಅದು ನನ್ನ ಮಟ್ಟಿಗೆ ಆ ಶಬ್ದದ ಜನ್ಮದಿನ. ಅದು ಯಾವಾಗ, ಎಲ್ಲಿ ಮತ್ತು ಹೇಗೆ ಹುಟ್ಟಿತು ಎನ್ನುವುದು ನನಗೆ ಮುಖ್ಯವೆ ಅಲ್ಲ. ಇಷ್ಟು ತಡವಾಗಿಯಾದರೂ, ಈಗಲಾದರೂ ಅದು ನನಗೆ ಮಗುವಾಗಿ ಸಿಕ್ಕಿತಲ್ಲಾ ಎನ್ನುವುದು ಮುಖ್ಯವಾಗುತ್ತದೆ! ಆ ಎಲ್ಲಾ ಹೊಸಪದಗಳನ್ನು ಎತ್ತಿ, ಮುದ್ದಾಡಿ ಲಾಲಿ ಹಾಡಿದಾಗಲೂ ಒಂದು ಕವನ ಬಂದೇ ಬರುತ್ತದೆ! ಇದು ಅಜ್ಜನಿಗೆ ಮೊಮ್ಮಗನೋ, ಮೊಮ್ಮಗಳೋ ಕವನ ತಂದುಕೊಟ್ಟ ಹಾಗೆ! ಇದು ಅದೇ ತಾನೆ ಅಪ್ಪನಾದವನಿಗೆ ಮಗನೋ, ಮಗಳೋ ಕವನವೇ ಆದ ಹಾಗೆ!

ಕವಿಯ ಏಕಾಂತದಲ್ಲಿ ಕವನ ಸೃಷ್ಟಿಯಾಗುವುದರಿಂದ ಆ ಏಕಾಂತ ಕೊಡುವ ಎಲ್ಲಾ ತಲ್ಲಣಗಳು ಆತಂಕ, ಆನಂದಗಳು ಕಾವ್ಯಕ್ಕೆ ಆಹಾರವಾಗುತ್ತವೆ! ಏಕಾಂತದ ನೋವು ನಲಿವುಗಳು ಕವನವನ್ನು ಅಪ್ಪಿಕೊಳ್ಳದೆ ಇರುತ್ತವೆಯೆ? ಹೀಗಿದ್ದೂ ಓಕ್ಟೇವಿಯೊ ಪಾಜ್‌ (Octavio Paz) ಮತ್ತೆ ಮತ್ತೆ ಹೇಳುತ್ತಿದ್ದ ಮಾತೊಂದನ್ನು ಗಮನಿಸಿದಾಗ ನಿಜಕ್ಕೂ ಆಶ್ಚರ್ಯವಾಯ್ತು! ಆತ ಹೇಳುತ್ತಾನೆ– ‘‘ಭಾಷೆಯ ತಲೆ ಸುತ್ತುವಿಕೆಯೆ ಕಾವ್ಯ. ಅಲ್ಲಿ ಒಂದಿಷ್ಟು ತಲೆ ತಿರುಗುವ ಅನುಭವ ಇದ್ದೇ ಇದೆ’. ಭಾಷೆಯ ತಲೆ ಸುತ್ತೇ ಕಾವ್ಯ ಎನ್ನುವ ಸ್ಥಿತಿಯಲ್ಲೇ ವಿಸ್ಮಯವಿದೆ. ನಮ್ಮ ನಿಮ್ಮ ಹಾಗೆ ಭಾಷೆಗೂ ಬವಳಿ ಬರುವುದು ಸಾಧ್ಯವೆ? ಎನ್ನುವ ಪ್ರಶ್ನೆ ದಿಗಿಲು ಹುಟ್ಟಿಸುವಂತಿದೆ! ಭಾಷೆಗೆ ಬಂದ ತಲೆ ಸುತ್ತುವಿಕೆ ಕವನವಾಗಿ ಬಿಡುಗಡೆಯಾಗುತ್ತದೆ ಎನ್ನುವಾಗ ಹೊಸ ಅನುಭವ ಸಿಕ್ಕಿದಂತಾಗುತ್ತದೆ! ಇನ್ನೂ ಮುಂದೆ ಹೋಗಿ ಭಾಷೆಗೆ ಬರುವ ಕುತ್ತಿಗೆ ನೋವು, ಬೆನ್ನು ನೋವು, ರಕ್ತದೊತ್ತಡ ಎಂದರೆ ಹೇಗೆ! ಅಥವಾ ಭಾಷೆಗೂ ಮಧುಮೇಹ ಬಂದರೆ ಅದರಿಂದಲೂ ಕವನವೊಂದು ಹೊರಬಂದೀತೆ?

ಭಾಷೆ ನಿರ್ಲಿಪ್ತ, ತಟಸ್ಥ ಎಂದುಕೊಂಡಿದ್ದೇವೆ. ಭಾಷೆ ಕೇವಲ ಸಂವಹನ ಮಾಧ್ಯಮ ಎಂದುಕೊಂಡವರು ನಾವು. ಆದರೆ ಅದೆಷ್ಟೋ ಸಲ ನಾವೇ ಭಾಷೆಯಾಗುವುದಿಲ್ಲ. ನಾವು ಭಾಷೆಯಾಗುವುದು ಒಂದು ತೀವ್ರ ಸ್ಥಿತಿ. ಆ ತೀವ್ರ ಸ್ಥಿತಿಯಲ್ಲಿ ನಮಗೂ ಭಾಷೆಗೂ ಯಾವ ವ್ಯತ್ಯಾಸವೂ ಇರುವುದಿಲ್ಲ. ಅಂಥಹ ಒಂದು ತೀವ್ರವಾದ ಸ್ಥಿತಿಯಲ್ಲಿ ಸಾಮಾನ್ಯ ಶಬ್ದಗಳೂ ಕಾವ್ಯವಾಗಿ, ಕವನವಾಗಿ, ಭಾವಗೀತೆಯಾಗಿ ಹೊರಬಂದರೆ ಆಶ್ಚರ್ಯವಿದೆಯೆ? ಇದು ಶಬ್ದಗಳು ಮೈಮೇಲೆ ಬರುವ ಸ್ಥಿತಿ. ಇದು ನಮ್ಮ ಶರೀರವನ್ನು  ಅಲುಗಾಡಿಸಿ ನಮಗರಿವಿಲ್ಲದಂತೆ ಮನಸ್ಸು ‘ಶಬ್ದಯೋಗ’ ನಡೆಸುವ ಸ್ಥಿತಿ. ಕವನ ಆಗಿ ಮುಗಿಯುವ ತನಕ ಈ ಸ್ಥಿತಿ ಇರುತ್ತದೆ. ಆಮೇಲೆ ನಾವುಂಟು ಕವನವುಂಟು! ಒಂದು ದೀರ್ಘ ಶ್ವಾಸ ಹೊರಬಿಟ್ಟು ವಿರಾಮದ ಸ್ಥಿತಿಗೆ ಬರುವಾಗ ತಲೆ ತಿರುಗುವುದು ನಿಂತುಬಿಡುತ್ತದೆ!

ಭಾಷೆಗೆ ತಲೆಸುತ್ತು ಬಂದು ವಾಂತಿಯಾಗುತ್ತದೋ ಇಲ್ಲವೋ ಗೊತ್ತಿಲ್ಲ! ಆದರೆ ಕವಿಗೆ ಹಾಗೆ ಆಗಿಯೇ ಆಗುತ್ತದೆ. ಪ್ರಾಯಶಃ ಆತ ‘ತಲೆಸುತ್ತುವ’ ಒಂದು ಗುಂಗಿನಲ್ಲಿ ಸದಾ ಇರುತ್ತಾನೆ! ಶಬ್ದಗಳು ಕಲ್ಪನೆಯಾಗಿ ತಲೆಯೊಳಗೆ ಹೀಗಾಗುವುದು ಸಾಮಾನ್ಯವೆ! ಹೀಗಾದ ಮಾತ್ರಕ್ಕೆ, ಆತ ತಲೆಸುತ್ತು ಬಂದು ಕೆಳಗೆ ಬೀಳುವುದಿಲ್ಲ! ಅದೊಂದು ‘ಭಾವಗುಂಗು’ – ಕವನ ಸೃಷ್ಟಿಯೆ ಅದಕ್ಕೆ ಮದ್ದು. ಆ ಮೇಲೆ ಎಲ್ಲವೂ ಯಥಾಸ್ಥಿತಿ; ಅಂದರೆ ಮುಂದಿನ ಕವನದ ಸುತ್ತು ಪ್ರಾರಂಭವಾಗುವ ತನಕ. ಕವಿ ಯಾವಾಗಲೂ ಬರಲಿರುವ ತನ್ನ ಕವನದ ಜೊತೆಗಿರಲು ಬಯಸುತ್ತಾನೆ. ಆ ಕವನ ಯಾವಾಗ ಬರುತ್ತದೆಯೆನ್ನುವ ಕಲ್ಪನೆಯೇ ಆತನಿಗಿರುವುದಿಲ್ಲ. ಅಲ್ಲಿ ‘ನಾಳೆ’ ಎನ್ನುವುದು ಒಂದು ತಿಂಗಳೂ ಆಗಬಹುದು; ಒಂದು ವರ್ಷವೂ ಆಗಬಹುದು. ಅಥವಾ ಆ ಕ್ಷಣ ಮುಂದೆಂದೂ ಬಾರದೆ ಇರಬಹುದು.

ಇದೊಂದು ರೀತಿಯ ಅನಿರೀಕ್ಷಿತತೆ. ಇಲ್ಲಿ ನಿರೀಕ್ಷಿತ ಎನ್ನುವುದೆ ಇಲ್ಲ; ಪರಿಚಿತ ಎನ್ನುವುದೂ ಇಲ್ಲ. ಎಷ್ಟು ಎಂದರೆ ಈ ತಲೆನೋವು, ಈ ಗುಂಗು ಕೂಡಾ ಯಾವಾಗ ಬೇಕಾದರೂ ಬರಬಹುದು. ಬಾರದೆಯೂ ಇರಬಹುದು. ಈ ‘ಬಾರದಿರುವ’ ಕ್ಷಣಗಳೋ, ದಿನಗಳೋ ಇವೆಯಲ್ಲಾ? ಅವು ಕೂಡಾ ಶಬ್ದಗಳಿಗೆ, ಹೊರಬರಲು ಕಾದಿರುವ ಶಬ್ದಗಳಿಗೆ, ತುಂಬಾ ಮುಖ್ಯವೆ! ಆ ಸಮಯ ಕೇವಲ ‘ಕಾಯುವ’ ಸಮಯವಲ್ಲ, ಅದು ‘ಕಾವಿನ’ ಸಮಯ. ಶಬ್ದಗಳಿಗೆ ಕಾವು ಕೊಡುವ ಕೆಲಸವಾಗುವುದು ಆಗಲೆ ಅಲ್ಲವೆ? ಕಾವಿಲ್ಲದೆ ಕಾವ್ಯವಿದೆಯೆ? ಕವನವಿದೆಯೆ? ಎಲ್ಲಾ ಬೀಜಗಳೂ ಮೊಳಕೆಯೊಡೆಯಲೇ ಬೇಕೆಂದೇನೂ ಇಲ್ಲ! ಕೆಲವು ‘ಪೊಟ್ಟು ಬೀಜ’ಗಳಿರುತ್ತವೆ, ಅವು ಮಣ್ಣಿನೊಳಗೇ ಸಾಯುತ್ತವೆ! ಪ್ರಾಯಶಃ ಮಣ್ಣಿನೊಳಗಿರುವ ಗಾಳಿ ಮತ್ತು ನೀರು ಅವುಗಳಿಗೆ ಸಾಕಾಗುವುದಿಲ್ಲ! ಹಾಗೆಯೇ ಎಲ್ಲಾ ‘ಕಾವು’ ಕಾವ್ಯವಾಗುವುದಿಲ್ಲ! ಅಷ್ಟೇ ಏಕೆ– ಎಲ್ಲಾ ‘ನೋವು’ಗಳೂ ಕವನವಾಗುವುದಿಲ್ಲ! ಶಬ್ದಗಳನ್ನು ಹೂವು ಕೊಯ್ಯುವಂತೆ ಕೀಳುವಾಗ ಕೆಲವು ಹೂವುಗಳು ಕೈ ಜಾರಿ ಅಂಗಳ ಸೇರಬಹುದು! ಅಂಥ ಶಬ್ದಗಳು ಕವನ ಸೇರಿಕೊಳ್ಳುವುದಿಲ್ಲ; ಕವನದ ಭಾಗವಾಗುವುದೂ ಇಲ್ಲ.

ಕೊನೆಗೂ ಒಂದು ಮಾತು ಸೇರಿಸಲೆಬೇಕು. ನಾವು ಪ್ರೀತಿಸುವ ಶಬ್ದಗಳಿಗೂ ವಿಶ್ರಾಂತಿ ಬೇಕು. ದಣಿವು ಕವಿಗೋ ಅವನ ಶಬ್ದಗಳಿಗೋ ಎಂದು ಹೇಳುವುದೂ ಕಷ್ಟ. ನಮಗೆ ದಣಿವಾದಾಗ, ಆಯಾಸವಾದಾಗ ನಾವು ಉಪಯೋಗಿಸುವ ಶಬ್ದಗಳು ಕೇಳುಗನಿಗೋ, ಓದುಗನಿಗೋ ‘ದಣಿದ ಶಬ್ದ’ ಗಳಾಗಿಯೆ ಕೇಳಿಸಬಹುದು, ಕಾಣಿಸಬಹುದು. ಕವನವೊಂದು ನೀರಸವಾಗುವುದು ಹೀಗೆ. ಇದು ತನ್ನ ಕವನವೇ ಎಂದು ಕವಿಗೆ ಅನ್ನಿಸಿದರೂ ಅಚ್ಚರಿಯಿಲ್ಲ. ಆಗ ಕವಿ ತನ್ನ ಶಬ್ದಗಳೊಂದಿಗೆ ವಿಶ್ರಾಂತಿ ಪಡೆಯಲೇಬೇಕು.

ಇದು ‘ಶಬ್ದಯೋಗ’ದ ಸಮಯ. ಇಲ್ಲಿ ಶಬ್ದಗಳಿಗೂ ಪದ್ಮಾಸನ ಹಾಕಿಸಿ ನೆಟ್ಟಗೆ ಕುಳ್ಳಿರಿಸಿ, ಪ್ರಜ್ಞಾಪೂರ್ವಕವಾಗಿ ಉಸಿರಾಡಿಸಬೇಕಾಗುತ್ತದೆ! ಹೀಗೆ ಶಬ್ದಗಳನ್ನು ದೀರ್ಘವಾಗಿ ಒಳಗೆಳೆದುಕೊಂಡು ಹೊರಬಿಡುವಾಗ ಉಸಿರೆ ರೂಪಕವಾಗಿ ಬಿಡುತ್ತದೆ! ಇಲ್ಲಿ ಶಬ್ದಗಳಿಗೂ ‘ಸೂರ್ಯ ನಮಸ್ಕಾರ’ ಮಾಡಿಸಿ ಬೊಜ್ಜು ಕರಗಿಸಬೇಕಾಗುತ್ತದೆ! ಕೊಬ್ಬು ತುಂಬಿ ಉಬ್ಬಿದ ಶಬ್ದಗಳನ್ನೆ ಮತ್ತೆ ಮತ್ತೆ ಬಳಸಿದರೆ ಕವನಕ್ಕೂ ಬೊಜ್ಜು ತಟ್ಟಿ ನೋಡಲು, ಕೇಳಲು ಅಸಹ್ಯವಾಗದೆ ಇದ್ದೀತೆ?

ಇಲ್ಲಿ ಎಲ್ಲಕ್ಕಿಂತ ಮುಖ್ಯವಾಗುವುದು ‘ಶಬ್ದ  ಶವಾಸನ’! ಇದು ಶಬ್ದಗಳಿಗೆ ಮರು ಚೈತನ್ಯ ನೀಡುವ ಆಸನ. ಒಂದು ಅರ್ಥದಲ್ಲಿ ಶಬ್ದಗಳಿಗೆ ಲಾಲಿ ಹಾಡಿ ನಿದ್ದೆಯಿಲ್ಲದ ನಿದ್ದೆಗೆ ಜಾರಿಸುವ ಶಬ್ದಾಸನ. ಒಳಗಿನ ಶಬ್ದಗಳಿಗೆ ಉಸಿರಿನಿಂದಲೆ ಸಮಾಧಾನ ಹೇಳಿ ಆರಾಮವಾಗಿಸುವ ಸುಂದರ ಸ್ಪಂದನ! ಶಬ್ದ ಸಮಾಧಾನ ಹೇಳುತ್ತಾ ಕಣ್ಣುಮುಚ್ಚಿ ಎಲ್ಲವನ್ನೂ ಮರೆಯುವುದೂ ಒಂದು ಕಲೆ! ಅಂದಹಾಗೆ, ಎಲ್ಲಾ ಮರೆತಾಗ ಮೂಡುವ ಹಾಡು ನಿಜವಾದ ಅರ್ಥದಲ್ಲಿ ಎಲ್ಲರನ್ನೂ ಕಾಡುತ್ತದೆ!

ಮತ್ತೆ ಓಕ್ಟೇವಿಯೊ ಪಾಜ್‌ಗೆ ಬರುತ್ತೇವೆ. ಆತ ಹೇಳುತ್ತಾನೆ: ‘‘ಕಣ್ಣಿಗೆ ಬಟ್ಟೆ ಕಟ್ಟಿ ಬೆಟ್ಟದಂಚಿನಲ್ಲಿ ನಡೆದ ಹಾಗೆ ಈ ಕವನ ಸೃಷ್ಟಿ; ಪ್ಯಾರಾಚ್ಯೂಟ್‌ ಮೂಲಕ ಕಾಗದದ ಮೇಲೆ ಬಂದಿಳಿಯುವ ಶಬ್ದಗಳಂತೆ ಕಾವ್ಯ ಸೃಷ್ಟಿ’’. ಶಬ್ದಗಳೆ ಗಗನದಿಂದ ಇಳಿದು ಬನ್ನಿ; ಸಮುದ್ರದಾಳದಿಂದ ತೇಲಿ ಬನ್ನಿ; ಬೀಸುಗಾಳಿಗೆ ಹತ್ತಿಯಂತೆ ಜಾರುತ್ತ ಹತ್ತಿರ ಬನ್ನಿ! ಒಟ್ಟಾರೆ ಬನ್ನಿ, ಬರುತ್ತಲೆ ಇರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT