ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಡು ಹಣ್ಣುಗಳೊಳಗೆ ಬಾಲ್ಯದ ಸವಿಯಿದೆ...

Last Updated 23 ಏಪ್ರಿಲ್ 2019, 19:30 IST
ಅಕ್ಷರ ಗಾತ್ರ

ವಿಧ ಋತುಮಾನಕ್ಕೆ, ಹವಾಗುಣಕ್ಕೆ ತಕ್ಕಂತೆ ಪ್ರಕೃತಿ ಮಡಿಲಿನಲ್ಲಿ ಕಾಡಿನ ಹಣ್ಣುಗಳು ಲಭ್ಯ. ಅದರಲ್ಲೂ ಈಗ ಬೇಸಿಗೆ ಕಾಲದಲ್ಲಿ ಸಿಗುವ ಕಾಡುಹಣ್ಣುಗಳ ಸಂಖ್ಯೆ ಕೊಂಚ ಹೆಚ್ಚೇ ಘಮವಾಡುತ್ತವೆ. ಒಂದೊಂದು ಭಾಗದಲ್ಲಿ ಅಲ್ಲಿನ ಪ್ರಾದೇಶಿಕ ವೈಶಿಷ್ಟ್ಯತೆಗೆ ಅನುಗುಣವಾಗಿ ಬೇರೆ ಬೇರೆ ಕಾಡು ಹಣ್ಣುಗಳಿವೆ. ಅದರಲ್ಲೂ ನಮ್ಮ ಕರಾವಳಿ, ಮಲೆನಾಡಲ್ಲಂತೂ ಕಾಡು ಹಣ್ಣುಗಳ ವೈವಿಧ್ಯತೆಗೆ ಲೆಕ್ಕವೇ ಇಲ್ಲ. ಚಳಿಗೆ ಚಿಗುರೊಡೆದು ಬಿಟ್ಟಿರುವ ಹೂವುಗಳು ತಾಪಮಾನ ಏರುತ್ತಿದ್ದಂತೆ ಕಾಯಿ ಬಲಿತು ಹಣ್ಣಾಗ ತೊಡಗುತ್ತವೆ.‌

ಅವುಗಳಲ್ಲಿ ಮುಳ್ಳಂಕಾಯಿ, ಚೂರಿ ಮುಳ್ಳು ಹಣ್ಣು, ಅಬ್ಳುಂಕ, ಹೆಬ್ಬಲಸು(ಪೆಜಕಾಯಿ), ಕರಂಡೆ, ನೆಲ್ಲಿಕಾಯಿ, ಪುನರ್ಪುಳಿ(ಕೋಕಮ್‌), ಕೊಟ್ಟೆಹಣ್ಣು, ಮಂತ್‌ಹುಳಿ, ಹಲಸು, ರೆಂಜೆ, ಕೇಪುಳ, ಸರೊಳಿಕಾಯಿ, ಹುಣಸೆ, ಗೇರು, ವಾಟೆಹಣ್ಣು, ಬಿಸಿಲಿನ ರಾಣಿ ಪನ್ನೇರಳೆಯಂತ ಕೆಲವೊಂದು ಈಗಾಗಲೇ ಹಣ್ಣಾಗಿ ಸವಿಯಲು ತಯಾರಾಗಿವೆ. ಇನ್ನೂ ಕೆಲವು ಕಾಡು ಮಾವು, ಚಳ್ಳೆಹಣ್ಣು, ಕುಂಟಾಲಹಣ್ಣು, ಬಿಳಿ ನೇರಳೆ, ನೇರಳೆ ಬೇಸಿಗೆಯ ಮೊದಲ ಮಳೆಗಾಗಿ ಕಾಯುತ್ತಿವೆ. ಒಂದು ಮಳೆ ಬೀಳುತ್ತಿದ್ದಂತೆ ಬಣ್ಣ ಬದಲಾಗಿ ಮೆದುವಾಗುತ್ತವೆ.

ಗಾತ್ರ, ಗುಣ, ಬಣ್ಣದಲ್ಲಿ ವ್ಯತ್ಯಾಸವಿದ್ದಂತೆ ಒಂದೊಂದು ಹಣ್ಣಿಗೆ ಒಂದೊಂದು ರುಚಿ. ಕೆಲವೊಂದಷ್ಟು ಹುಳಿ, ಕೆಲವೊಂದಷ್ಟು ಸಿಹಿ, ಒಗರು, ಇನ್ನೂ ಕೆಲವು ಹುಳಿ ಸಿಹಿಯಿಂದ ಮಿಶ್ರಣಗೊಂಡ ಪಾಕ. ಯಾವ ಹಣ್ಣುಗಳನ್ನೂ ನಾಲಗೆ ಒಲ್ಲೆ ಎನ್ನದು. ಎಲ್ಲವೂ ಪ್ರಿಯವಾದ ಹಣ್ಣುಗಳೇ ಆಯ್ಕೆಗೆ ಅವಕಾಶವಿಲ್ಲ. ಮೊಗೆದಷ್ಟು, ತಿಂದು ಹೊಟ್ಟೆ ತುಂಬುವಷ್ಟು ಹಣ್ಣುಗಳ ಸಂಪತ್ತು ನಮ್ಮ ಕಾಡಿನಲ್ಲಿವೆ. ದೇಹಕ್ಕೆ ಬೇಕಾದ, ಹೆಸರೇ ಗೊತ್ತಿಲ್ಲದ ವಿಟಮಿನ್‌ಗಳು ದೇಹಕ್ಕೆ ಅರಿವಿಲ್ಲದೆ ಸೇರಿಕೊಳ್ಳುತ್ತವೆ. ಆರೋಗ್ಯ ಕಾಪಾಡಿಕೊ ಳ್ಳಲು ಖರೀದಿಸಿ ತಂದ ಹಣ್ಣುಗಳನ್ನು ಸೇವಿಸಬೇಕಿಲ್ಲ.

ಕಾಡುಹಣ್ಣುಗಳಿಗೆ ಯಾವುದೇ ಗೊಬ್ಬರ ನೀರಿನ ಆರೈಕೆ ಬೇಡ. ಕಾಲ ಕಾಲಕ್ಕೇ ಸ್ವಾದಿಷ್ಟವಾದ ಹಣ್ಣುಗಳನ್ನು ಸಮೃದ್ಧವಾಗಿ ನೀಡುತ್ತವೆ. ಈ ಕಾಡು ಹಣ್ಣುಗಳ ಸೀಸನ್‌ಗಾಗಿ ಮನುಷ್ಯರು ಮಾತ್ರ ಕಾಯುವುದಲ್ಲ. ಮಕ್ಕಳಿಗೆ ಕಾಡು ಹಣ್ಣುಗಳ ಕಾಲ ಎಷ್ಟು ಆನಂದವೋ, ಅಷ್ಟೇ ಪಕ್ಷಿ ಪ್ರಾಣಿಗಳೂ ಈ ಕಾಲಕ್ಕಾಗಿ ಕಾದು ಕುಳಿತಿರುತ್ತವೆ. ಅವುಗಳಿಗೆ ಹೊಟ್ಟೆ ತುಂಬುವಷ್ಟು ಬೇಕಾದ ಹಣ್ಣನ್ನು ತಿನ್ನುವ ಅವಕಾಶ. ಈ ಪ್ರಾಣಿ ಪಕ್ಷಿಗಳೇ ಕಾಡುಹಣ್ಣುಗಳ ಸಂತತಿಯನ್ನು ಉಳಿಸುವಲ್ಲಿ ರಾಯಭಾರಿಗಳು ಎಂದರೂ ತಪ್ಪಾಗಲಾರದು. ಆದರೆ ವರ್ಷ ಉರುಳಿದಂತೆ ಕಾಡು ಹಣ್ಣುಗಳ ಸಂಖ್ಯೆ ಕಡಿಮೆಯಾಗುತ್ತಾ ಬಂದಿದೆ. ಕೆಲವೊಂದು ಹಣ್ಣುಗಳು ಸಂಖ್ಯೆಯಲ್ಲಿ ಕಡಿಮೆಯಾಗಿದ್ದರೆ, ಇನ್ನೂ ಕೆಲವು ಹೇಳಹೆಸರಿಲ್ಲದಂತೆ ಗಿಡಗಳೇ ಮಾಯವಾಗಿಬಿಟ್ಟಿವೆ.

ಕೆಲವೊಂದು ಹಣ್ಣುಗಳನ್ನು ಮಿತಿಮೀರಿ ತಿನ್ನುವಂತಿಲ್ಲ. ಮುಳ್ಳಂಕಾಯಿ, ಚೂರಿ ಮುಳ್ಳು, ಅಬ್ಳುಂಕವನ್ನು ಹೊಟ್ಟೆ ತುಂಬುವಷ್ಟು ತಿನ್ನಲಿಕ್ಕಿಲ್ಲ. ಆರೋಗ್ಯ ಕೆಡುವ ಸಾಧ್ಯತೆಯಿದೆ. ಆದ್ದರಿಂದ ರುಚಿ ನೋಡಲಷ್ಟೆ ಮನೆಯವರಿಂದ ಅನುಮತಿ. ಆದರೆ ಆಸೆ ಮಿತಿಮೀರಿ ಕಣ್ತಪ್ಪಿಸಿಕೊಂಡು ತಿನ್ನುವ ಹುಂಬತನ ಹಳ್ಳಿಗರಲ್ಲಿ. ಅದೆಷ್ಟು ವೈವಿಧ್ಯತೆ, ಅದರಲ್ಲೊಂದಷ್ಟು ಕಾಡು ಹಣ್ಣುಗಳು ಇಂದು ಮಾರುಕಟ್ಟೆಗೂ ಲಗ್ಗೆ ಇಟ್ಟಿವೆ. ಒಂದೆಡೆ ಕಾಡು ಹಣ್ಣುಗಳ ಸಂಖ್ಯೆ ಕಡಿಮೆಯಾಗುತ್ತಿವೆ ಎಂದು ಬೇಸರ ಪಟ್ಟುಕೊಂಡರೆ, ಇನ್ನೊಂದೆಡೆ ಕಾಡು ಹಣ್ಣುಗಳು ಮಾರುಕಟ್ಟೆಯ ಮೌಲ್ಯ ಪಡೆಯುತ್ತಿವೆ ಎಂಬ ಖುಷಿಯೂ ಇದೆ.

ಕೆಲವೊಂದು ಹಣ್ಣು ವ್ಯಾಪಾರಿಗಳು ಆಯಾಯ ಋತುಮಾನದ ಕಾಡು ಹಣ್ಣುಗಳನ್ನೇ ತಮ್ಮ ವ್ಯಾಪಾರದ ಸರಕಾಗಿ ಮಾಡಿಕೊಂಡಿರುತ್ತಾರೆ. ಇತರ ಹಣ್ಣು ವ್ಯಾಪಾರಿಗಳು ಅರಣ್ಯವಾಸಿಗಳಿಂದ ಕಾಡುಹಣ್ಣುಗಳನ್ನು ಪಡೆದು ಮಾರುಕಟ್ಟೆಯಲ್ಲಿ ತಂದಿಡುತ್ತಾರೆ. ಪಿತ್ತಕ್ಕೆ ಹೇಳಿ ಮಾಡಿಸಿದ ಪುನರ್ಪುಳಿ ಹಣ್ಣು, ಉಪ್ಪಿನಕಾಯಿ ಡಬ್ಬದೊಳಗೆ ಮಾತ್ರವಿರುತ್ತಿದ್ದ ಕರಂಡೆಪುಳಿ, ನೇರಳೆಹಣ್ಣು, ಪನ್ನೇರಳೆ, ಪೆಜಕಾಯಿ, ಕುಂಟಾಲಹಣ್ಣು ವ್ಯಾಪಾರಿಗಳ ಬುಟ್ಟಿ ಸೇರಿವೆ. ಉಳಿದ ಹಣ್ಣುಗಳಂತಯೇ ಇವುಗಳ ಬೆಲೆಯೂ ವರ್ಷದಿಂದ ವರ್ಷಕ್ಕೆ ದುಬಾರಿಯಾಗುತ್ತಿರುವುದನ್ನು ಗಮನಿಸಬಹುದು. ಹಣ್ಣುಗಳ ಪರಿಚಯವಿದ್ದವರು, ಇಲ್ಲದವರೂ ಕೂಡ ವ್ಯಾಪಾರಿ ಹೇಳಿದ ಬೆಲೆ ತೆತ್ತು ಖರೀದಿಸುವ ಪ್ರಾಧಾನ್ಯತೆ ಇಂದು ಕಾಡುಹಣ್ಣುಗಳಿಗೆ.

ಬಾಲ್ಯದ ನೆನಪು ‘ಕಾಡುಹಣ್ಣು’: ಕಾಡುಹಣ್ಣುಗಳು ಎಂದಾಕ್ಷಣ ಪ್ರತಿಯೊಬ್ಬರ ಸ್ಮೃತಿ ಪಟಲದಲ್ಲೂ ಬಾಲ್ಯದ ನೆನಪಿನ ರೀಲ್‌ ತಿರುಗದೆ ಇರದು. ಶಾಲೆಗೆ ಹೋಗಿ ಬರುವ ದಾರಿಯಲ್ಲೆ ಮುಳ್ಳನ್ನೂ ಲೆಕ್ಕಿಸದೆ ಪೊದೆಯೊಳಗೆ ಕಾಡುಹಣ್ಣುಗಳನ್ನು ಕೊಯ್ದು ತಿನ್ನುತ್ತಿದ್ದ ಬಾಲ್ಯವಿತ್ತು. ಬೇಸಿಗೆ ರಜೆ ಪ್ರಾರಂಭವಾದರೆ ಗೆಳೆಯರ ಜತೆಗೂಡಿ ಕಾಡಿನೊಳಗೆ ಸುತ್ತಾಟ.

ಯಾವ ಹಣ್ಣುಗಳು ಯಾವ ಮರದಲ್ಲಿದೆ ಎಂಬ ಜಾಣತನ. ಅವುಗಳ ಅಂದ ಚಂದ ನೋಡಿಯೇ ಕಿತ್ತು ಜೇಬೊಳಗೆ ತುಂಬಿಸುವುದಿದೆ. ಮಕ್ಕಳು ಒಬ್ಬರೇ ಅಲ್ಲ ಅಕ್ಕಪಕ್ಕದ ಗೆಳೆಯರನ್ನು ಒಟ್ಟಿಗೆ ಕೂಡಿಕೊಂಡು ಕಾಡು ಸುತ್ತುತ್ತಾ, ಚೀಲದಲ್ಲೊಂದಷ್ಟು ಹಣ್ಣುಗಳನ್ನು ಹೊತ್ತು ಮನೆಯಂಗಳಕ್ಕೆ ಹಾಜರು. ಕಿತ್ತು ತಂದ ಹಣ್ಣುಗಳನ್ನೆಲ್ಲ ಎಲ್ಲರೂ ಸೇರಿ ಹಂಚಿ ತಿನ್ನುವ ಖುಷಿ ಇರುತ್ತಿತ್ತು. ಇವುಗಳ ಹಿಂದೆ ಬಾಲ್ಯವಿದೆ. ಕಾಡುವ ನೆನಪುಗಳಿವೆ. ಅವುಗಳನ್ನು ಸವಿದ ಒಬ್ಬೊಬ್ಬರಲ್ಲೂ ಒಂದೊಂದು ಅನುಭವ.

‘ಆಗ ತಿನ್ನಲು ಅಂಗಡಿಯಿಂದ ತಂದ ತಿಂಡಿಗಳಿರಲಿಲ್ಲ. ಕಾಡು ಹಣ್ಣುಗಳೇ ನಮ್ಮ ಪಾಲಿನ ‘ ಲೇಸ್‌ ಕುರ್ಕುರೆ’ ಆಗಿತ್ತು. ಅವುಗಳಲ್ಲೇ ರೋಗ ನಿರೋಧಕ ಗುಣ, ಹಲವು ಕಾಯಿಲೆಗೆ ಔಷಧಿಯಾಗಿಯೂ ಕೆಲಸ ಮಾಡುತ್ತಿತ್ತು. ಮಾರುಕಟ್ಟೆಯಲ್ಲಿರುವ ಹಣ್ಣುಗಳ ರುಚಿಯನ್ನು ನಾಚಿಸುವಂತಹ ರುಚಿ ಕಾಡುಹಣ್ಣುಗಳಲ್ಲಿದೆ.

ಈಗ ನಗರವಾಸಿಗಳಿಗೆ ಕಾಡು ಹಣ್ಣುಗಳ ಪರಿಚಯವಿಲ್ಲವೆಂದುಕೊಂಡರೆ ತಪ್ಪಾದೀತು. ಹೊರತಾಗಿ ನಮ್ಮ ಹಳ್ಳಿ ಮಕ್ಕಳಿಗೇನೇ ಕಾಡುಹಣ್ಣುಗಳ ಗುರುತಿಲ್ಲ. ಹಣ್ಣುಗಳನ್ನು ತಿಂದರೂ ಅವುಗಳ ಹೆಸರು ಗೊತ್ತಿಲ್ಲ, ಮುಂದಿನ ವರ್ಷಕ್ಕೆ ಪರಿಚಯವೇ ಇರುವುದಿಲ್ಲ’ ಎಂದು ತಮ್ಮ ಅನುಭವ ಹಂಚಿಕೊಳ್ಳುತ್ತಾರೆ ಕುತ್ಲೂರಿನ ಹಿರಿಯರಾದ ನಾರಾಯಣ. z

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT