ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಣದ ಕುರಕ್ಕೆ ಕನ್ನಡಿ ಬೇಡವೆ?

ಮಂದಹಾಸ
Last Updated 5 ನವೆಂಬರ್ 2016, 19:30 IST
ಅಕ್ಷರ ಗಾತ್ರ

‘ಮಾನವ ದೇಹವು ಮೂಳೆ ಮಾಂಸದ ತಡಿಕೆ’ ಎಂಬ ‘ಭಕ್ತಕುಂಬಾರ’ ಸಿನಿಮಾದ ಹಾಡು ಯಾರು ಕೇಳಿಲ್ಲ? ಈ ಮೂಳೆ–ಮಾಂಸದ ತಡಿಕೆಯಲ್ಲಿ, ಭೂಮಿಯನ್ನು ಹೇಗೆ ಅನೇಕ ಜೀವಿಗಳು ತಮ್ಮ ಆವಾಸ ಮಾಡಿಕೊಂಡಿವೆಯೋ ಹಾಗೆಯೇ ರೋಗಗಳೂ ನಮ್ಮ  ದೇಹವನ್ನು ಮನೆ ಮಾಡಿಕೊಂಡು ಇಲ್ಲದ ಯಾತನೆ ಕೊಡುತ್ತಿರುವುದು ಸರ್ವವೇದ್ಯ!

ಇನ್ನೂ ಸ್ಪಷ್ಟವಾಗಿ ಹೇಳುವುದಾದರೆ, ಭೂಮಿಯನ್ನು ಮಾನವ ಬೇಕಾಬಿಟ್ಟಿ ಬಗೆದು ಬಗೆದು ಸಂಪನ್ಮೂಲ ಖಾಲಿ ಮಾಡಿ, ಭೂಮಿಯ ವಾತಾವರಣವನ್ನು ಹೇಗೆ ಘಾಸಿಗೊಳಿಸಿದ್ದಾನೆಯೋ ಹಾಗೆಯೇ ಈ ರೋಗಗಳು ನಮ್ಮ ದೇಹದ ಮೇಲೆ ಆಕ್ರಮಣ ಮಾಡುತ್ತಿವೆ. ಇಷ್ಟು ಮಾತ್ರವಲ್ಲ, ಸ್ವತಃ ನಾವೇ  ನಮ್ಮ ದೇಹವನ್ನು ರೋಗಗಳಿಗೆ ಒಪ್ಪಿಸಿರುವುದೂ ಇದೆ ಎಂದರೆ ಅದು ನಗುವ ಮಾತಲ್ಲ!

ಈಗ ನಾನು ಹೇಳಲು ಹೊರಟಿರುವುದು ‘ಕುರು’ವಿನ ಬಗ್ಗೆ. ಈ ಶಬ್ದದ ಅರ್ಥ ನೋಡಲು ನಾನು ಮುಂದಾದದ್ದು ನನಗೆ ಚೊಚ್ಚಲ ಕುರು ಉದ್ಭವಿಸಿದಾಗ! ಮಹಾಭಾರತದಲ್ಲಿ ಆಳಿದ ಕುರುವಂಶದ ಬಗ್ಗೆ ಇರುವ ಪರಿಚಯ ಪದವೆಂದು ‘ಕನ್ನಡ ರತ್ನಕೋಶ’ ಓದಿ  ತಿಳಿದೆ. ಆದರೆ, ಕುರು ಎಂಬ ಪದವನ್ನು ಮಧ್ಯ ಕರ್ನಾಟಕದ ನಮ್ಮ ಕಡೆ ‘ಕುರ’ ಎಂದೇ ಕರೆಯುವ ವಾಡಿಕೆ.

ಪ್ರತಿಯೊಂದು ರೋಗವೂ ತನ್ನದೇ ಆದ ರೀತಿಯಲ್ಲಿ ನೋವು–ಫಜೀತಿಗಳನ್ನು ಉಂಟುಮಾಡುತ್ತದೆ. ಹಳ್ಳಕ್ಕೆ ಬಿದ್ದ ತೋಳಕ್ಕೆ ಆಳಿಗೊಂದು ಕಲ್ಲು ಎಂಬಂತೆ, ದೇಹಕ್ಕೆ ಬಿದ್ದ ರೋಗಕ್ಕೆ – ಕಂಡವರೆಲ್ಲ ಉಚಿತ ಸಲಹೆ ನೀಡುತ್ತಾರೆ. ಇದರಿಂದಾಗಿ ಬಡಪಾಯಿ ರೋಗಿಗೆ ನೆಮ್ಮದಿ ದೊರಕುವುದಕ್ಕಿಂತ ಬೀಪಿ ಹೆಚ್ಚುವುದೇ ಹೆಚ್ಚು!

ಆದರೆ,  ಜೀವವನ್ನೇ ಜಾಲಾಡುವ, ಮರ್ಮಾಘಾತಮಾಡುವ,  ಚಿಕ್ಕವರಿಂದ ಅಣಕಿಸಿಕೊಳ್ಳುವ, ದೊಡ್ಡವರಿಂದ  ಬುದ್ಧಿ ಹೇಳಿಸುವ, ವೈದ್ಯರಿಂದ ಸ್ವಚ್ಛತೆಯ ಪಾಠ ಹೇಳಿಸುವ, ಸ್ನೇಹಿತರಲ್ಲಿ ನಗೆಪಾಟಲಿಗೀಡು ಮಾಡುವ, ಮಾನವ ರೋಗ ಕುಲದಲ್ಲಿ ನಗಲು ಒಲ್ಲದವರಲ್ಲೂ ನಗಿಸುವ ರೋಗ ಎಂದರೆ ‘ಕುರು’ ಒಂದೇ ಎಂದು ನಾನು ಘಂಟಾಘೋಷವಾಗಿ ಹೇಳಿದರೆ ನಿಮಗೂ ನಗು ಬರಬಹುದು! ‘ಸ್ವಲ್ಪ ಇರ್ರಿ, ನಗೆಗಡಲಲ್ಲಿ ತೇಲಿಸುವ ಇನ್ನೂ ಒಂದು ರೋಗವಿದೆ’ ಎಂದು ನನ್ನಾಕೆ ಹೇಳಿದಾಗಲೇ ನೆನಪಾದುದು – ನೆಗಡಿ!

ಕುರು ಸಾಮಾನ್ಯವಾಗಿ ವೃದ್ಧರಿಗೆ ಬರುವ ರೋಗವಲ್ಲ ಎಂದುಕೊಂಡಿರುವೆ. ಓದುಗ ಸಹೃದಯರಿಗೆ ಈ ಮಾತು ಅನ್ವಯವಾಗದಿದ್ದಲ್ಲಿ  ಮೂಗು ಮುರಿಯಬೇಡಿ! ಏಕೆಂದರೆ, ಆ ವಯಸ್ಸಿನಲ್ಲಿ ಅವರ ಫಜೀತಿಗಳು ರಸ ಉಕ್ಕಿಸುವ ಬದಲು ಮರುಕ ಹುಟ್ಟಿಸುವುದರಿಂದ ಈ ರೋಗಪೀಡಕನಿಗೆ ಅಷ್ಟು ಕುಖ್ಯಾತಿ ದೊರಕುವುದಿಲ್ಲವೆಂದು ಬಾರದಿರಬಹುದು!
ಕುರುವಿನ ಬಗ್ಗೆ ಬರೆಯುವ ದುಸ್ಸಾಹಸ ಮಾಡಿರುವುದರ ಹಿಂದೆ ನನ್ನ ಹಲವು ಫಜೀತಿಗಳಿವೆ!

ಸಾಮಾನ್ಯವಾಗಿ ಹದಿವಯಸ್ಸಿನವರಿಗೆ ಹೆಚ್ಚು ದಾಳಿ ಮಾಡುವ ಈ ರೋಗ ನನ್ನ ಪಾಲಿಗೆ ಕಳೆದುಹೋದ ಅವಕಾಶ! ಆದರೆ, ಈಗ  ನನ್ನದೇನೂ ಹದಿಹರೆಯದ ವಯಸ್ಸಲ್ಲಾ ಸ್ವಾಮಿ! ನಲವತ್ತರ ಆಸುಪಾಸು.

ಕುರು ಎದ್ದಿರುವವರ ಅನುಭವ ನೋಡಿ ಅನೇಕ ಸಾರಿ ನಾನೂ ತಮಾಷೆ ಪಡೆದದ್ದೂ ಉಂಟು. ಬಾಲ್ಯದಲ್ಲಿ ನನಗೂ ಕುರು ಏಳಬೇಕೆಂದು ಆಸೆಪಟ್ಟು, ಶಾಲೆಗೆ ಚಕ್ಕರ್ ಹಾಕಿ ಮನೆಯಲ್ಲೇ ಅರಾಮಾಗಿ ಇರುವ ಕನಸು ಕಂಡಿದ್ದಂತೂ ನಿಜ! ಆದರೆ, ಆ ಆಸೆ ಈಡೇರಲೇ ಇಲ್ಲ! ಇಲ್ಲಿಯವರೆಗೂ ಯಾರಿಗಾದರೂ ಕುರು ಎದ್ದಿರುವ ವಿಚಾರ ಕೇಳಿದಾಗ ನಗುಬಂದು, ‘ನನಗಂತೂ ಕುರ ಎಂದೂ ಎದ್ದಿಲ್ಲಪ್ಪ!’ ಎಂದು ಹೆಮ್ಮೆಯಿಂದ ಬೀಗುತ್ತಿದ್ದೆ!

ಕುರಕ್ಕೆ ಬಗ್ಗೆ ನಾನೇನೂ ಪ್ರತ್ಯಕ್ಷ ಸಾಕ್ಷಿಯಾಗಿಲ್ಲ ಅಂದುಕೊಳ್ಳಬೇಡಿ! ಬಾಲ್ಯದಲ್ಲಿ ನೋಡಿದ ಎಷ್ಟೋ ಘಟನೆಗಳು ಇನ್ನೂ ಹಸಿರಾಗಿಯೇ ಇವೆ.  ಈ ಕುರುಗಳು ಎಲ್ಲೆಲ್ಲಿ ಏಳುತ್ತವೆ ಎಂದು ಸಾಮಾನ್ಯವಾಗಿ ಎಲ್ಲರಿಗೂ ಗೊತ್ತು. ಆದರೆ, ವಿಶೇಷವಾಗಿ ಕೆನ್ನೆಯ ಮೇಲೆ, ಭುಜದ ಮೇಲೆ, ಕತ್ತಿನ ಮೇಲೆ, ಹೊಟ್ಟೆಯ ಮೇಲೆ ಏಳುವುದರಿಂದ ಕುರಪೀಡಿತರನ್ನು ಬಹು ವಿಶೇಷವಾಗಿ ಕಂಡಿದ್ದೂ ನೆನಪಿದೆ.

ಪಕ್ಕದ ಮನೆಯ ಬಾಲ್ಯಗೆಳೆಯನ ಕೆನ್ನೆಯ ಮೇಲೆ ಎದ್ದ  ಕುರು ಅವನ ಮುಖ ಊಹಿಸದ ವಿಕಾರಕ್ಕೆ ತಿರುಗಿ ಮಾನವನ ಅವತಾರದಿಂದ ವರಾಹ ಅವತಾರಕ್ಕೆ ತಿರುಗಿದ ಬಗ್ಗೆ ಚೇಷ್ಟೆ ಮಾಡಿದ್ದು ಇನ್ನೂ ಕಣ್ಣಿಗೆ ಕಟ್ಟಿದಂತಿದೆ.

ಶಾಲೆಯ ಸಹಪಾಠಿಯ ಹೊಟ್ಟೆಯ ಮೇಲೆ ಕುರು ಎದ್ದು, ಆಟವಾಡುವಾಗ ಗೊತ್ತಿಲ್ಲದೇ ಅವನ ಹೊಟ್ಟೆಗೆ ತಿವಿದುದರ ಪರಿಣಾಮ, ಹೊಟ್ಟೆಯ ಮೇಲಿನ ಬಟ್ಟೆಯಲ್ಲಾ ಹಸು ಕರು ಹಾಕಿದ ರೀತಿ ರಕ್ತಮಯವಾಗಿದ್ದನ್ನು ಮರೆಯಲುಂಟೆ! ತೊಡೆಯಲ್ಲಿ, ತೊಡೆಯ ಮೇಲ್ಭಾಗ, ತೊಡೆಯ ಕೆಳಭಾಗ ಕುರು ಏಳುವುದು ಸಾಮಾನ್ಯ ಬಿಡಿ. ನನ್ನ ಮಾವನಿಗೆ ತೊಡೆಯ ಮೇಲೆ ಕುರ ಎದ್ದುದರಿಂದ, ಅವರು ಚಡ್ಡಿ ಹಾಕದೇ ಬರೀ ಪಂಚೆಯಲ್ಲಿರುವುದನ್ನು ಚೇಷ್ಟೆ ಮಾಡಿ ಬೈಸಿಕೊಂಡಿದ್ದು ಈಗ ಒಂದು ರಸಪ್ರಸಂಗ!

ಅದೊಂದು ಭಾನುವಾರ. ನನ್ನ ಕೈ ನನಗೆ ಗೊತ್ತಿಲ್ಲದೆಯೇ ನನ್ನ ಹಿಂಭಾಗದ ಸಮ ದಿನ್ನೆಯೊಂದರ  ಮೇಲೆ ಕೈ ಆಡಿಸುತ್ತಿದ್ದಂತೆ ದಪ್ಪನೆ ಗುಳ್ಳೆಯೊಂದು ಕೈಗೆಟುಕಿದಂತೆ ಬಾಸವಾಯ್ತು. ನಮ್ಮ ಬೆನ್ನು ನಮಗೆ ಕಾಣಲು ಸಾಧ್ಯವೇ? ಅದೇ ರೀತಿ ನಮ್ಮ ನಿತಂಬ ನಮಗೆ ಕಾಣುವುದು ಹೇಗೆ? ಹಿರಿಯರು ಹೇಳಿದ ಗಾದೆ ಮಾತು – ‘ಅಂಗೈ ಹುಣ್ಣಿಗೆ ಕನ್ನಡಿ ಬೇಕೆ’ ನೆನಪಿಗೆ ಬಂತು. ಗಾದೆ ಮಾತೇನೋ ಆ ಸಂದರ್ಭಕ್ಕೆ ಸರಿಯಾದದ್ದೇ. ಆದರೆ, ಕುಂಡೆಯ ಮೇಲಿನ ಕುರಕ್ಕೆ ಕನ್ನಡಿ ಬೇಕೇ ಬೇಕು ಎಂದು ಹಿರಿಯರು  ಏಕೆ ಹೇಳಲಿಲ್ಲ?

ಕುರ ನೋಡಿಕೊಳ್ಳಲು ನಾನು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಭದ್ರವಾಗಿ ಗೋಡೆಗೆ  ಮೊಳೆಹೊಡೆದು ನೇತುಹಾಕಿದ್ದ ಕನ್ನಡಿಯನ್ನು ಕೈಗೆ ತೆಗೆದುಕೊಳ್ಳುವ ಸಾಹಸ ಮಾಡಿ, ಕನ್ನಡಿಯಲ್ಲಿ ನೋಡಿಕೊಂಡು ಅಪರೂಪಕ್ಕೆ ಬಸಿರಾದವರಂತೆ ನನ್ನೊಳಗೆ ನಾನೇ ಖುಷಿಪಟ್ಟೆ! 

ಕುರು ಉದ್ಭವಿಸಿದ ವಿಚಾರ ಏರು ಬಿಸಿಲ ಹೊತ್ತಿಗೆ ಮನೆಯವಳಿಗೆ, ನೆತ್ತಿಯ ಬಿಸಿಲ ಹೊತ್ತಿಗೆ ಮಕ್ಕಳಿಗೆ, ಇಳಿ ಹೊತ್ತಿಗೆ ಅಮ್ಮನಿಗೂ ಗೊತ್ತಾಯಿತು. ಆ ವೇಳೆಗೆ, ಅವರೆಕಾಳು ಗಾತ್ರದಲ್ಲಿದ್ದ ಕುರ ಗಜನಿಂಬೆ ಗಾತ್ರಕ್ಕೆ ತಿರುಗಿತ್ತು! ನೋವು ಸಹಿಸಲಾಗದೆ, ಮನೆಯೊಳಗೇ ಅತ್ತಿಂದಿತ್ತ ಇತ್ತಿಂದತ್ತ ಪಂಜರದೊಳಗಣ ಹುಲಿಯಂತೆ ರಿಂಗಣಿಸುತ್ತಿದ್ದೆ.

ನೋವಿನಲ್ಲಿ ನೆನಪು ಬರುವುದು ಅಮ್ಮ ಅಲ್ಲವೇ? ಏನು ಮಾಡುವುದು? ಅಮ್ಮನಿಗೆ ಫೋನ್ ಮಾಡಿ ನನ್ನೀ ಚೊಚ್ಚಲ ರೋಗದ ಯಾತನೆ ನಿವೇದಿಸಿಕೊಂಡೆ. ಬಾಲ್ಯದಲ್ಲಿ ಮನೆ ಮಂದಿಗೆಲ್ಲಾ ಕುರು ಎದ್ದಾಗ ಮಾಡಿದ ಉಪಚಾರವನ್ನೆಲ್ಲಾ ನೆನಪು ಬರುವಂತೆ ಅಮ್ಮ ಒಂದೊಂದೇ ಬಿಡಿಸಿ ಹೇಳಿದಳು. ಅಮ್ಮ ಹೇಳಿದ ಔಷಧೋಪಚಾರಕ್ಕೆ ಒಲ್ಲದ ಮನಸ್ಸಿನಿಂದ ಸಿದ್ಧಗೊಂಡೆ.

ಹಳ್ಳಿಯಾದುದರಿಂದ, ಗೆಳೆಯರೊಬ್ಬರಿಂದ ತಿಪ್ಪೆಯ ಮೇಲೆ ಬೆಳೆಯುವ ಕರಿ ಉತ್ಮದ ಎಲೆ ತರಿಸಿದೆ. ನನ್ನಾಕೆಯಿಂದ ಅದಕ್ಕೆ ಕೊಬ್ಬರಿ ಎಣ್ಣೆ ಹಚ್ಚಿಸಿ, ಕಾಯಿಸಿ ಅಮ್ಮ ಹೇಳಿದ ಮಾರ್ಗದರ್ಶನದಲ್ಲಿ ಕುರದ ಮೇಲೆ ಬಿಸಿ ಬಿಸಿ ಎಲೆ ಇರಿಸಿಕೊಂಡೆ. ಅದರಿಂದ ನೋವು ಇನ್ನೂ ಹೆಚ್ಚಾಗಿ ‘ಸಾಕಪ್ಪ ಈ ಕುರದ ಸಹವಾಸ’ ಎಂದುಕೊಂಡೆ! ದೂರದಿಂದಲೇ ಮಕ್ಕಳ ತುಂಟ ನಗು ನನ್ನೊಳಗೇ ಹೇಸಿಗೆ ಮೂಡಿಸಿತ್ತು.

ಅಕ್ಷರಶಃ ನನ್ನ ಕಷ್ಟ ಕುರದ ಮೇಲೆ ಬರೆ ಎಳೆದಂತಿತ್ತು! ಕುರೋಪಚಾರದ ಒಂದನೇ ಚರಣ ಹೇಗೋ ಮುಗಿಯಿತು. ಇನ್ನು ಎರಡನೇ ಚರಣಕ್ಕೆ ಸಿದ್ಧಗೊಳ್ಳಲು ನನ್ನಾಕೆ ಮುಂದಾದಳು. ಅಮ್ಮನ ಮಾತನ್ನು ಚಾಚೂ ತಪ್ಪದೇ ಪಾಲಿಸುವ ಹಂಬಲ ನನ್ನಾಕೆಯದು! ಫ್ರಿಜ್ ಒಳಗಿನ ಬೆಣ್ಣೆಯ ಪಾತ್ರೆಗೆ ಕೈ ಹಾಕಲು ಹೋದಳು. ಸ್ವಲ್ಪ ಹೊತ್ತಿನಲ್ಲೇ ಬೆಣ್ಣೆಯೊಂದಿಗೆ ಕುಂಕುಮ ಮೆದ್ದು ಕುರದ ಮೇಲಿನ ಸಿಟ್ಟನ್ನು ತೀರಿಸಿಕೊಳ್ಳಲು ನನ್ನತ್ತ ಬಂದಳು!

ನಾನೋ ಬೇಡವಾದ ವಸ್ತುವಿನಂತೆ ಬೆಡ್ಡಿನ ಮೇಲೆ ಮಲಗಿದ್ದರಿಂದ ಯಾವ ಉಪಚಾರಕ್ಕೂ ಮರುಮಾತನಾಡದೆ ನನ್ನ ಮಾಂಸದ ತಡಿಕೆಯನ್ನು ಔಷಧೋಪಚಾರಕ್ಕೆ ಬಿಟ್ಟುಕೊಟ್ಟಿದ್ದೆ! ಬರುವ ಹಬ್ಬಗಳಿಗೆಲ್ಲ ಅಮ್ಮ ಮನೆಗೆ ಬಣ್ಣ ಬಳಿದಂತೆ ಕುರು ಇನ್ನೆಂದೂ ಬರಬಾರದೆಂಬಂತೆ ಎಲ್ಲಾ ಕಾಳಜಿ ತೋರಿಸಿ ಬೆಣ್ಣೆಕುಂಕುಮ ಹಚ್ಚಲು ಮುಂದಾದಳು.ಎಲ್ಲಾ ಮುಗಿಯಿತು! ಕುರದ ನೋವಿನ ಯಾತನೆ ನನ್ನೊಳಗೇ ನನ್ನನ್ನು ಖಿನ್ನನನ್ನಾಗಿಸಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT