ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ಕಣ್ಣಲ್ಲಿ ಬದಲಾಗದ ಗಂಡಿನ ಕಾಮಾಲೆ

Last Updated 4 ಏಪ್ರಿಲ್ 2015, 19:30 IST
ಅಕ್ಷರ ಗಾತ್ರ

ಐಎಎಸ್‌ ಅಧಿಕಾರಿ ಡಿ.ಕೆ. ರವಿ ಅವರ ಸಾವಿನ ಪ್ರಸಂಗ ಮತ್ತು ನಂತರದ ಹಲವು ಬೆಳವಣಿಗೆಗಳು ವಿಷಾದ, ಭಯ ಮತ್ತು ಜಿಗುಪ್ಸೆಯನ್ನು ನಮ್ಮಲ್ಲಿ ಮೂಡಿಸುವಂತೆಯೇ ಹಲವು ಉತ್ತರವಿಲ್ಲದ ಪ್ರಶ್ನೆಗಳನ್ನೂ ನಮ್ಮಲ್ಲಿ ಏಳಿಸುತ್ತದೆ. ‘ಸಾಮಾನ್ಯಮೆ ಬಗೆಯ ಭವತ್ಕೇಶಪಾಶಪ್ರಪಂಚಂ’ ಎನ್ನುವ ಪಂಪನ ಉದ್ಗಾರವನ್ನು ಕಾವ್ಯದ ಓದುಗರು, ವಿದ್ವಾಂಸರು ಅನೇಕ ಬಗೆಗಳಲ್ಲಿ ಚರ್ಚೆಗೆ ಎತ್ತಿಕೊಳ್ಳುತ್ತಲೇ ಇದ್ದಾರೆ. ಹೆಣ್ಣಿನ ವ್ಯಕ್ತಿತ್ವದ ನಿಗೂಢತೆಯನ್ನು ಇಲ್ಲಿ ಪಂಪ ಹೇಳುತ್ತಿದ್ದಾನೆ ಎನ್ನುವ ಸರಳಾತಿ ಸರಳ ವ್ಯಾಖ್ಯಾನವು ನಿಜದಲ್ಲಿ ಹೆಣ್ಣಿನ ವ್ಯಕ್ತಿತ್ವದ ಬಹು ಸಾಧ್ಯತೆಗಳನ್ನು, ಶಕ್ತಿಗಳನ್ನು ಕುರಿತ ಗಂಡಿನ ಅಸಹಾಯಕ ಉದ್ಗಾರದಂತೆಯೂ ಕಾಣಿಸಲು ಸಾಧ್ಯವಿದೆ.

ಹಲವು ಪಾತ್ರಗಳನ್ನು ತನ್ನ ಬದುಕಿನುದ್ದಕ್ಕೂ ಒಂದು ಇನ್ನೊಂದಕ್ಕೆ ತಾಗಿ ಘರ್ಷಿಸಿ ಬದುಕಿನಲ್ಲಿ ಕೋಲಾಹಲಗಳು ಏಳದಂತೆ ನಿಭಾಯಿಸುವ ಹೆಣ್ಣಿನ ಶಕ್ತಿ ಗಂಡಿಗೆ ಯಾವಾಗಲೂ ಒಂದು ಸವಾಲು. ಈ ಸವಾಲನ್ನು ನಿಭಾಯಿಸುವ ಅತ್ಯಂತ ದುರ್ಬಲವಾದ ಮಾರ್ಗವೆಂದರೆ ಅವಳನ್ನು ‘ವಸ್ತು ವಿಶೇಷ’ವಾಗಿ ನೋಡುವುದು. ಇದು, ಇದು ಮಾತ್ರ ನಿನ್ನ ಅಸ್ತಿತ್ವದ, ನಿನ್ನ ವ್ಯಕ್ತಿತ್ವದ ಪರಿ ಮತ್ತು ಪರಿಧಿ ಎನ್ನುವ ಗ್ರಹಿಕೆಯನ್ನು ನಿರಂತರವಾಗಿ ಅವಳ ಬುದ್ಧಿ-ಭಾವಗಳಲ್ಲಿ ತುಂಬುವ ಪ್ರಯತ್ನವನ್ನು ಸಾಧ್ಯವಿರುವ ಎಲ್ಲ ಬಗೆಗಳಲ್ಲಿ, ತನ್ನೆಲ್ಲ ಅಧಿಕಾರವನ್ನು ಬಳಸಿ ಪುರುಷರು ಮಾಡುತ್ತಲೆ ಇರುತ್ತಾರೆ. ಯಾವುದೇ ಸನ್ನಿವೇಶವನ್ನು ‘ಹೆಣ್ಣಿನ ಕಾರಣ’ಕ್ಕಾಗಿ ಎಂದು ಸ್ಥಾಪಿಸುವಲ್ಲಿ ಅದೇನು ಆಸಕ್ತಿ, ಹುರುಪು?! ಟ್ರಾಯ್ ಯುದ್ಧಕ್ಕೆ ಯಾರು ಕಾರಣ? ಮಹಾಭಾರತ ಯುದ್ಧಕ್ಕೆ ಯಾರು ಕಾರಣ? ರಾಮಾಯಣಕ್ಕೆ ಯಾರು ಕಾರಣ? ಡಿ.ಕೆ. ರವಿ ಅವರ ಸಾವಿಗೆ ಯಾರು ಕಾರಣ?

ಇಡೀ ಪ್ರಸಂಗವನ್ನು ಅತ್ಯಂತ ಹೀನಾಯವಾದ, ಅಮಾನವೀಯವಾದ ಸ್ಥಿತಿಗೆ ತಂದವರಲ್ಲಿ ರಾಜಕಾರಣಿಗಳು ಮತ್ತು ಮಾಧ್ಯಮಗಳ ಸಮಪಾಲಿದೆ. ವಸ್ತುಸ್ಥಿತಿಯ ಅರಿವಿದ್ದೂ ತಮ ತಮಗೆ ಬೇಕಾದಂತೆ ಪ್ರಜ್ಞಾಪೂರ್ವಕವಾಗಿ ಬೆಳೆಸುತ್ತಾ ಹೋದ ಇವರನ್ನು ಯಾವ ಸಂದೇಹವೂ ಇಲ್ಲದೆ, ಸಂಕೋಚವೂ ಇಲ್ಲದೆ ಸಮಾಜದ್ರೋಹಿಗಳು, ಜೀವವಿರೋಧಿಗಳು, ಶುದ್ಧ ಅನಾಗರಿಕರು ಎಂದು ಕರೆಯಬಹುದು. ರಾಜಕಾರಣಿಗಳಿಗೆ ತಮ್ಮ ರಾಜಕೀಯ ದಾಳವಾಗಿ ಇದನ್ನು ಬಳಸಿಕೊಳ್ಳುವ ಹೀನದಾರಿ, ಮಾಧ್ಯಮಗಳಿಗೆ– ಇಪ್ಪತ್ನಾಲ್ಕು ಗಂಟೆಯೂ ಅಗೆಯಬೇಕಾದ ಎಲೆಯಡಿಕೆಯನ್ನು ತಯಾರಿಸಿಕೊಳ್ಳುವ ದರ್ದು. ಈ ಎರಡೂ ಸೇರಿ ಈ ಪ್ರಸಂಗವನ್ನು ವಾಸ್ತವದ ನೆಲೆಗಟ್ಟಿನಲ್ಲಿ ನೋಡಲು ಬೇಕಾದ ಭಿತ್ತಿಯೇ ನಿರ್ಮಾಣವಾಗದೇ ಹೋಯಿತು.

ಅತ್ಯಂತ ದಕ್ಷ, ಪ್ರಾಮಾಣಿಕ, ಜನಪರ ಅಧಿಕಾರಿಯ ಸಾವು ಯಾವ ಉತ್ಪ್ರೇಕ್ಷೆಯೂ, ಕ್ಲೀಷೆಯೂ ಇಲ್ಲದೆಯೇ ತುಂಬಲಾರದ ನಷ್ಟ. ಇದಕ್ಕೆ ಮಹಿಳಾ ಅಧಿಕಾರಿಯ ಜೊತೆಗಿನ ಸ್ನೇಹವನ್ನು ಕಾರಣವಾಗಿ, ನೆವವಾಗಿ ನೋಡುವ ಹೊತ್ತಿನಲ್ಲಿ ಎಲ್ಲೂ ಆ ಮಹಿಳಾ ಅಧಿಕಾರಿಯ ದಕ್ಷತೆ, ಪ್ರಾಮಾಣಿಕತೆ ಮತ್ತು ಜನಪರ ನಿಲುವುಗಳು ಯಾಕೆ ಚರ್ಚೆಗೆ ಬರುವುದಿಲ್ಲ? ಅವರಿಬ್ಬರ ಸ್ನೇಹದ ಸಮಾನ ಅಂಶಗಳಲ್ಲಿ ಈ ಸಾಮಾಜಿಕ ಮತ್ತು ನೈತಿಕ ನಿಲುವುಗಳು ವಹಿಸಿರಬಹುದಾದ ಪಾತ್ರದ ಬಗೆಗೆ ಯಾಕೆ ದಿವ್ಯ ಮೌನ? ರವಿ ಅವರು ಬರೆದಿದ್ದಾರೆ ಎನ್ನಲಾಗುವ ಪತ್ರದಲ್ಲಿ ಸಖ್ಯವೊಂದರ ಲೌಕಿಕ ವಿವರಗಳಷ್ಟೇ ಅದು ವ್ಯಕ್ತಿಯೊಬ್ಬನಲ್ಲಿ ತರಬಹುದಾದ ರೂಪಾಂತರ ವ್ಯಕ್ತಿತ್ವದ ಪ್ರಸ್ತಾಪವೂ ಇದೆ.

ಹೆಣ್ಣುಮಗಳೊಬ್ಬಳು ತನ್ನ ವ್ಯಕ್ತಿತ್ವದ ಧೀರತೆಯಿಂದ, ಬುದ್ಧಿವಂತಿಕೆ ಮತ್ತು ಪ್ರತಿಭೆಯಿಂದ ಸಹಪಾಠಿಯೊಬ್ಬನಲ್ಲಿ ತಂದಿರಬಹುದಾದ ಬದಲಾವಣೆಗಳ ಬಗ್ಗೆ ಆ ಬರೆಹ ಮತ್ತೆ ಮತ್ತೆ ಪ್ರಸ್ತಾಪ ಮಾಡುತ್ತದೆ. ಅಧಿಕಾರಿಯಾಗಿ ತನ್ನ ದೃಷ್ಟಿಕೋನ, ನಿಲುವು, ಕಾರ್ಯಕ್ಷಮತೆ ಎಲ್ಲದರಲ್ಲೂ ಬೆಳೆಸಿಕೊಳ್ಳಬೇಕಾದ, ಅಳವಡಿಸಿಕೊಳ್ಳಬೇಕಾದ ರೀತಿ ನೀತಿಗಳನ್ನು ಮಾರ್ಗದರ್ಶಕಳ ಹಾಗೆ ತನಗೆ ತೋರಿಸಿಕೊಟ್ಟ ಹೆಣ್ಣಿನ ಬಗೆಗೆ ಕೃತಜ್ಞತೆ ರವಿ ಅವರ ಪತ್ರದಲ್ಲಿ ಉದ್ದಕ್ಕೂ ಇದೆ. ಆದರೆ ಇದನ್ನು ಕ್ಷುದ್ರ ಪ್ರೇಮಪ್ರಸಂಗದಂತೆ ನೋಡುವ ದೃಷ್ಟಿಕೋನವೇ ಆ ಮಹಿಳಾ ಅಧಿಕಾರಿಯ ವ್ಯಕ್ತಿತ್ವದ ಘನತೆಗೆ ಕುಂದು ತರುವ ರೀತಿಯದ್ದು. ಯಾಕೆ ಹೀಗಾಗುತ್ತದೆ? ಒಂದು ಕಡೆ ಈ ಹಿಂದೆಂದೂ ಕಂಡರಿಯದ  ಅಭೂತಪೂರ್ವ ಅಧಿಕಾರಿ ಎನ್ನುವ, ಇನ್ನೊಂದು ಕಡೆ ಈ ಎಲ್ಲದರ ಹಿಂದಿನ ಸ್ಫೂರ್ತಿಯೋ ಪ್ರೇರಣೆಯೋ ಆಗಿರಬಹುದಾದ ಮಹಿಳೆಯನ್ನು ಕೇವಲ ‘ಕಾರಣ’ವಾಗಿ ನೋಡುವ ಪರಿ. ಈ ಎರಡರ ನಡುವೆ ಇರುವ ಕಂದರವನ್ನು ಅರ್ಥ ಮಾಡಿಕೊಳ್ಳುವುದು ಹೇಗೆ?

ಸಾಮಾಜಿಕವಾಗಿ ಅಮಾನ್ಯವಾದ ಸಂಬಂಧವೊಂದನ್ನು ಅಪೇಕ್ಷಿಸಿ ಅದು ಈಡೇರದೇ ರವಿಯವರು ಆತ್ಮಹತ್ಯೆ ಮಾಡಿಕೊಂಡಿದ್ದೇ ನಿಜವಾದರೆ, ಅದನ್ನು ನಾವು ಹೇಗೆ ನೋಡಬೇಕು? ಅಸಾಧಾರಣ ಶಕ್ತಿ ಸಾಧ್ಯತೆಯ ವ್ಯಕ್ತಿ-ಅಧಿಕಾರಿಯೊಬ್ಬ ತಾನೇ ಸೃಷ್ಟಿಸಿಕೊಂಡ ಮತ್ತು ತಾನೇ ಪರಿಹರಿಸಿಕೊಳ್ಳಲಾಗದ ಸಂದರ್ಭದಲ್ಲಿ ತೆಗೆದುಕೊಂಡ ತೀರ್ಮಾನವೆಂದು (ಅದನ್ನು ದೌರ್ಬಲ್ಯವೆನ್ನಿ, ಅತಿರೇಕವೆನ್ನಿ) ನೋಡುತ್ತಾ ಅದಕ್ಕೆ ಸಲ್ಲಬೇಕಾದ ಗೌರವವನ್ನು ಸಲ್ಲಿಸುತ್ತಲೇ ಸಾವಿನ ವೈಯಕ್ತಿಕತೆಯನ್ನೂ ಗೌರವಿಸಬೇಕು. ಕೊನೆಗೂ ಯಾರ ಸಾವಿಗೂ– ಅದೂ ಅದು ಆತ್ಮಹತ್ಯೆಯಾಗಿದ್ದರಂತೂ– ಯಾರೂ ಕಾರಣವಾಗಲು ಸಾಧ್ಯವಿಲ್ಲ ಎನ್ನುವ ವಿವೇಕದಲ್ಲಿ ಇದನ್ನು ನೋಡಬೇಕು. ಒಬ್ಬ ವ್ಯಕ್ತಿ ಆತ್ಯಂತಿಕವಾಗಿ ವೈಯಕ್ತಿಕ ಕಾರಣಕ್ಕಾಗಿಯೇ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಅದನ್ನೂ ನಾವು ಗೌರವಿಸಬೇಕು ಎಂದೇ ತೋರುತ್ತದೆ.

ಆದರೆ ಇದು ಸಾಧ್ಯವಾಗದೇ ಹೋಯಿತು ಎನ್ನುವ ಅಂಶವೇ ನಮ್ಮನ್ನು ಹೆಣ್ಣನ್ನು ಬಳಸಿ ಬಿಸಾಕುವ ದೃಷ್ಟಿಕೋನ ಈ ಕಾಲದಲ್ಲೂ ಎಷ್ಟು ಪ್ರಬಲವಾಗಿದೆ ಎನ್ನುವ ಅಂಶದ ಕಡೆಗೆ ಸೆಳೆಯುತ್ತದೆ. ಐದಾರು ವರ್ಷಗಳ ಕಾಲ ಅಥವಾ ಹೆಚ್ಚುಕಡಿಮೆ ಒಂದು ದಶಕದ ಕಾಲ ವ್ಯಕ್ತಿಯೊಬ್ಬನನ್ನು ಬದ್ಧ, ಜನಾನುರಾಗಿ ವ್ಯಕ್ತಿತ್ವವಾಗಿಸುವಲ್ಲಿ ತನ್ನದೇ ಆದ ಸಣ್ಣದೋ ದೊಡ್ಡದೋ (ರವಿಯವರ ಬರಹದ ಪ್ರಕಾರ ನಿರ್ಣಾಯಕ ಪಾತ್ರ) ಪಾತ್ರ ವಹಿಸಿದ ವ್ಯಕ್ತಿತ್ವವೊಂದು ಆತನ ಸಾವಿನ ಸಂದರ್ಭದಲ್ಲಿ ‘ಹೆಣ್ಣಾಗಿ ಒಡಲ ಪೊರೆದ’ ಕಾರಣಕ್ಕಾಗಿ ‘ಕಾರಣ’ವಾಗಿ ಬಿಡುವುದು ವಿಪರ್ಯಾಸವಾಗಿ ಕಾಣಿಸುತ್ತದೆ.

ತನ್ನ ಶಕ್ತಿ ಮೀರಿ ಆತನನ್ನು ಸ್ನೇಹದ ಸುರಕ್ಷಿತ ವಲಯದೊಳಗೆ ಉಳಿಸಲು ಆಕೆ ನಡೆಸಿದ ಪ್ರಯತ್ನಗಳು ಈ ರಾಜ್ಯಕ್ಕೆ ಒಳ್ಳೆಯ ಅಧಿಕಾರಿಯೊಬ್ಬನನ್ನು ಉಳಿಸಿಕೊಡಲು ನಡೆಸಿದ ಪ್ರಯತ್ನಗಳೂ ಹೌದಲ್ಲವೆ? ಈ ಎಲ್ಲ ಅಂಶಗಳಿಗಿಂತ ಮಿಗಿಲಾದ ಸಂಗತಿಯೊಂದಿದೆ. ಆ ಮಹಿಳಾ ಅಧಿಕಾರಿಯ ಮನಸ್ಥಿತಿ, ಅವಳ ಸಂಸಾರ, ಅವಳ ಪ್ರೈವೆಸಿ, ಅಧಿಕಾರಿಯಾಗಿ ಆಕೆ ಅಪಾರ ಶ್ರಮದಲ್ಲಿ ಗಳಿಸಿ ಉಳಿಸಿಕೊಂಡಿರುವ ವಿಶ್ವಾಸಾರ್ಹತೆಗಳನ್ನು ಹೀಗೆ, ಅಂಗಡಿಯಲ್ಲಿ ಸಾಮಾನು ಕಟ್ಟಲು ಬಳಸುವ ಕಾಗದದಂತೆ ಬಳಕೆಯಾಗುವುದು ತಪ್ಪಲ್ಲವೆ?

ನಿಭಾಯಿಸಲಾಗದ ಯಾವುದೋ ಒತ್ತಡದಲ್ಲಿ ಸಾವಿಗೆ ಶರಣಾಗಿಯೋ ಕೊಲೆಯಾಗಿಯೋ ನಾಡಿನ ಕಣ್ಮಣಿಯಾದ ಆ ಪುರುಷ ಅಧಿಕಾರಿಯ ಎದುರಿಗೆ ಅಷ್ಟೇ ದಕ್ಷಳಾದ (‘ಸ್ವಚ್ಛ ಭಾರತ’ ಅಭಿಯಾನದಲ್ಲಿ ಇತ್ತೀಚೆಗಷ್ಟೇ ಈ ಮಹಿಳಾ ಅಧಿಕಾರಿ ಕೇಂದ್ರ ಸರ್ಕಾರದ ಪ್ರಶಸ್ತಿ ಪಡೆದುಕೊಂಡಿದ್ದಾರೆ), ತಾನು ನಡೆಯುವುದರ ಜೊತೆಗೆ ಸ್ನೇಹಿತನೊಬ್ಬನನ್ನೂ ನಡೆಸಲು ಕೊನೆಯವರೆಗೂ ಪ್ರಯತ್ನಿಸಿದ ಈ ಹೆಣ್ಣು, ‘ಹೆಣ್ಣು’ ಎನುವ ಕಾರಣಕ್ಕಾಗಿ, ಇಲ್ಲಾ ಗುಮಾನಿಗೆ, ಇಲ್ಲಾ ಕರುಣೆಗೆ ಮಾತ್ರ ಪಾತ್ರಳಾಗುವುದು ಖಂಡಿತವಾಗಿಯೂ ದುರಂತ ನಾಟಕದ ಸನ್ನಿವೇಶದಂತೆ ಕಾಣಿಸುತ್ತದೆ. ಆತ ಹುತಾತ್ಮನಾದರೆ, ಈಕೆ ಬಲಿಪಶುವಿನಂತೆ ಕಾಣಿಸುವುದಿಲ್ಲವೆ?

ಗಂಡು ಹೆಣ್ಣಿನ ಸಂಬಂಧ ಅನೇಕ ಸಂದರ್ಭಗಳಲ್ಲಿ ಅಸಂಗತ ನಾಟಕದಂತೆ. ಯಾವಾಗ, ಹೇಗೆ ಅದು ಬದಲಾಗುತ್ತದೆ ಎಂದು ಹೇಳುವುದೇ ಅಸಾಧ್ಯ. ಸೀಸರನ ಹೆಂಡತಿ ಅನುಮಾನಗಳಿಗೆ ಅತೀತಳಾಗಿರಬೇಕು ಎನ್ನುವುದು ಯಾವುದೋ ಕಾಲದ ನಂಬಿಕೆಯೇನಲ್ಲ. ಪುರುಷೋತ್ತಮರು ಹೇಗಿದ್ದರೂ ಎಂತಿದ್ದರೂ ಹೆಣ್ಣು ಮಾತ್ರ ಅನ್ಯಕ್ಕೆಳಸದೆ ಬದುಕಬೇಕೆನ್ನುವ ನಂಬಿಕೆ ಈ ಕಾಲದ್ದೂ ಹೌದು (ಅನ್ಯಕ್ಕೆಳಸುವುದೇ ಸ್ತ್ರೀವಾದವೆಂದು, ಸಮಾನತೆಯ ದಾರಿಯೆಂದು ನಾನು ಪ್ರತಿಪಾದಿಸುತ್ತಿದ್ದೇನೆ ಎನ್ನುವ ಪುರುಷ ಸಿಂಹಗಳಿಗೆ ಇಲ್ಲಿಯೇ ಉತ್ತರ ಕೊಟ್ಟುಬಿಡುತ್ತೇನೆ. ನೈತಿಕತೆಯೆನ್ನುವುದು, ಮೌಲ್ಯವೆನ್ನುವುದು ಇಬ್ಬರಿಗೂ ಒಂದೇ ಆಗಬೇಕಾದ್ದು ಪ್ರಕೃತಿ ನ್ಯಾಯವಲ್ಲವೆ ಎನ್ನುವುದಷ್ಟೇ ನಮ್ಮ ಪ್ರಶ್ನೆ).

ಆ ಮಹಿಳಾ ಅಧಿಕಾರಿಯ ಬದುಕಿನಲ್ಲಿ ಈ ಎಲ್ಲ ಬೆಳವಣಿಗೆಗಳ ನಂತರ ಉತ್ಪಾತಗಳು ಏಳುವುದಿಲ್ಲ ಎನ್ನುವ ಭರವಸೆಯನ್ನು ಕೊಡುವುದು ನಮಗೆ ಸಾಧ್ಯವಿದೆಯೆ? ಅಗ್ನಿಪರೀಕ್ಷೆಯ ನೂರು ಮಾದರಿಗಳನ್ನು ಹೆಣ್ಣಿನ ಸಲುವಾಗಿಯೇ ಕಂಡು ಹಿಡಿಯುವುದರಲ್ಲಿಯೂ ಅವುಗಳನ್ನು ಎಗ್ಗಿಲ್ಲದೆ ನಿರ್ಲಜ್ಜೆಯಲ್ಲಿ ಜಾರಿಗೆ ತರುವುದರಲ್ಲಿಯೂ ಸಿದ್ಧಹಸ್ತರಲ್ಲವೆ ನಾವು? ಆಕೆಯ ಮನಸ್ಥಿತಿಯ ಬಗ್ಗೆ ಯಾವ ಗಮನ, ಎಚ್ಚರವೂ ಇಲ್ಲದಂತೆ ಆಡುವ ಮಾತು ಮತ್ತು ನಡವಳಿಕೆಗಳ ಬಗ್ಗೆ ಇರಬೇಕಾದ ಜವಾಬ್ದಾರಿಯಲ್ಲಿ ಈ ಪ್ರಸಂಗವನ್ನು ನಿಭಾಯಿಸಲಾಗಿದೆ ಎಂದು ಒಪ್ಪಲಾಗದಷ್ಟು ಒರಟಾಗಿ ಸನ್ನಿವೇಶವನ್ನು ನಿರ್ವಹಿಸಲಾಯಿತು.

ಇದರ ಜೊತೆಗೇ ಅಂಟಿಕೊಂಡಿರುವ ಇನ್ನೊಂದು ಪ್ರಶ್ನೆಯೆಂದರೆ, ರವಿ ಅವರ ಪತ್ನಿಯದ್ದು. ಸುಲಭವಾಗಿ ಬಿಡಿಸಲೇ ಆಗದ ಗೋಜಲಿನಲ್ಲಿ ಆ ಹೆಣ್ಣುಮಗಳೂ ಸಿಕ್ಕಿಕೊಂಡಿದ್ದಾರೆ. ಸರಿ ತಪ್ಪುಗಳ ಚೌಕಟ್ಟಿಗೆ ಸುಲಭವಾಗಿ ಸಿಕ್ಕದ ಇಂಥ ಪ್ರಶ್ನೆಗಳನ್ನು ಎದುರಿಸಿ  ಬದುಕುವ ಇಕ್ಕಟ್ಟಿನಲ್ಲಿರುವ ಈ ಹೆಣ್ಣು ಮಕ್ಕಳಿಗೆ ಅಗತ್ಯವಿರುವುದು, ಅವರ ವೈಯಕ್ತಿಕ ಆವರಣದ ಲಭ್ಯತೆ ಮತ್ತು ಅವಕಾಶ. ಗಂಡು-ಹೆಣ್ಣಿನ ಸಂಬಂಧದ ಅನೂಹ್ಯ ಸಾಧ್ಯತೆಗಳು ಮತ್ತು ಅಗೋಚರ ಸ್ವರೂಪಗಳನ್ನು ಗಮನಕ್ಕೇ ತಂದುಕೊಳ್ಳದೆ ಅದರ ಸ್ಥಾಪಿತ ಏಕಮುಖತೆಯನ್ನು ಮಾತ್ರ ನಿರ್ಣಾಯಕ ಎನ್ನುವಂತೆ ಚರ್ಚಿಸುವುದರಿಂದ ಪುರುಷರ ಸ್ಥಾನಮಾನ, ಅಧಿಕಾರ ಯಾವುದಕ್ಕೂ ಸಾಮಾನ್ಯವಾಗಿ ಧಕ್ಕೆ ಬರುವುದಿಲ್ಲ.

ಬಂದರೂ ಅದನ್ನು ಸಮರ್ಥವಾಗಿ ನಿಭಾಯಿಸಲು ಬೇಕಾದ ಎಲ್ಲ ದಾರಿಗಳೂ ಸದಾ ತೆರೆದೇ ಇರುತ್ತವೆ. ಆದರೆ ಹೆಣ್ಣಿನ ವ್ಯಕ್ತಿತ್ವ, ಸಾಮಾಜಿಕ ಸ್ಥಾನಮಾನ, ಉದ್ಯೋಗ ರಂಗ, ಅಲ್ಲಿನ ಸಂಬಂಧಗಳು ಎಲ್ಲದರ ಮೇಲೂ ಈ ಬಗೆಯ ಪ್ರಸಂಗಗಳು ಗಂಭೀರವಾದ ಮತ್ತು ಬಹುತೇಕ ಸಂದರ್ಭಗಳಲ್ಲಿ ನೇತ್ಯಾತ್ಮಕ ಪರಿಣಾಮವನ್ನೇ ಬೀರುತ್ತವೆ ಎನ್ನುವುದೇ ನಮ್ಮ ಸಾಮಾಜಿಕ ಸನ್ನಿವೇಶದ ಸಮಸ್ಯೆಯ ಸ್ವರೂಪವನ್ನು ಹೇಳುತ್ತದೆ. ದಾಂಪತ್ಯದ ಒಳಗಿರಲಿ ಹೊರಗಿರಲಿ, ಹೆಣ್ಣನ್ನು ರಚನಾತ್ಮಕ ಎನ್ನುವಂತೆ ನೋಡದೇ, ಕಾರಣಕರ್ತಳಾಗಿ ಮಾತ್ರ ನೋಡುವ ದೃಷ್ಟಿಕೋನ ಎಂದಿನಷ್ಟೇ ಈಗಲೂ ಪ್ರಬಲವಾಗಿರುವುದೇ ಇದರ ಮೂಲ ಕಾರಣವಿದ್ದೀತು. ಜನಾನುರಾಗಿ ವ್ಯಕ್ತಿತ್ವವೊಂದರ ನಿಗೂಢ ಸಾವನ್ನು ಬಿಡಿಸುವಲ್ಲಿ ಇರುವುದರ ಮುಖ್ಯ ತೊಡಕು ಇಲ್ಲೇ ಇರಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT