ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಲದ ಕ್ಲೇಷಗಳಿಗೆ ‘ಗಣಪ’ಮದ್ದು!

Last Updated 12 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಗಣಪ ಮನಸಿನ ಹಸೀ ಹಸೀ ಮಣ್ಣಿನಲ್ಲಿ ಹುಟ್ಟಿ ಖುಷಿಯ ಕನಸು ಕೊಡುವ ದೇವರು. ಗಣಪ, ಕಟ್ಟಿದ ಕನಸನ್ನು ನನಸಾಗಿಸಿ ನೆಲೆ ಗಟ್ಟಿ ಮಾಡುವ ಅದ್ಭುತ ಶಕ್ತಿ. ನಮ್ಮ ಮನಸ್ಸೋ ಹಾರುವ ಹಕ್ಕಿ. ಈ ಹಕ್ಕಿಗೆ ಅಷ್ಟು ಬೇಗ ಹಾರಿ ಹಾರಿ ದಣಿವಾಗುವುದೇ ಇಲ್ಲ. ಅದಕ್ಕೆ ಹಾರುತ್ತಲೆ ಇರುವ ಹುಮ್ಮಸ್ಸು! ಆದರೂ ಈ ಹಕ್ಕಿಗೂ ತಂಗಲು, ಇಷ್ಟೇ ಇಷ್ಟು ವಿಶ್ರಾಂತಿ ಪಡೆಯಲು ಒಂದು ಕೊಂಬೆಯೋ ರೆಂಬೆಯೋ ಬೇಕೇ ಬೇಕು! ಗಣಪ ಗೆಲ್ಲು ಕೊಟ್ಟು ಗೆಲುವು ತರುವ ದೇವರು.

ಈ ಕಾಯ ಬರೀ ಮಣ್ಣು! ಈ ಜೀವ, ಪ್ರಾಣ ತ್ರಾಣಗಳೂ ಮಣ್ಣಲ್ಲದೆ ಬೇರೇನೂ ಅಲ್ಲ. ಅಂಥ ಮಣ್ಣಿನಿಂದ ಮೂಡಿಬಂದವ ನಮ್ಮ ಗಣೇಶ! ಹೀಗಾಗಿಯೆ ನಾವು ಉಣ್ಣುವ ಅನ್ನ, ಕುಡಿಯುವ ನೀರು, ಸೇವಿಸುವ ಗಾಳಿ– ಎಲ್ಲವೂ ‘ಗಣೇಶ ಮಯ’ವೆ! ಮಣ್ಣಿನಿಂದ ಬಂದು ಮಣ್ಣಲ್ಲೆ ಕರಗಿ ಹೋಗುವ ಈ ಜೀವ ಭಾವಕ್ಕೆ ‘ಹೆದರ ಬೇಡ’ ಎಂದು ಸದ್ದಿಲ್ಲದೆ ಹೇಳುವ ಸ್ಪರ್ಶವೊಂದು ಬೇಕು! ಆ ಸ್ಪರ್ಶವೆ ಗಜಾನನ ಸ್ಪರ್ಶ!

ನಮ್ಮೆಲ್ಲರ ಬದುಕಿನ ಮೂಲದ್ರವ್ಯ ಭಯ! ಭಯವಿಲ್ಲದ ಸ್ಥಿತಿಯಲ್ಲಿ ನಾವಿರುವುದು ತೀರಾ ಕಡಿಮೆಯೆ? ಸದಾ ಒಂದಲ್ಲ ಒಂದು ಭಯದಿಂದಲೇ ಬದುಕುವಾಗ ಆಯಾಸವಾಗುತ್ತದೆ! ಬಾಲ್ಯದಿಂದಲೆ ಕಟ್ಟಿಕೊಂಡು ಬಂದ ಭಯ ಒಂದೆಡೆಯಾದರೆ, ಇಂದಿನ ಭಯ ಇನ್ನೊಂದೆಡೆ! ಇವೆರಡನ್ನೂ ಮೀರಿಸುವ ಭಯ ‘ನಾಳೆಯ ಭಯ!’. ಮನಸ್ಸಿಗೆ ಹಿಂದಕ್ಕೆ ಹೋಗುವ ಮತ್ತು ಮುಂದಕ್ಕೆ ನುಗ್ಗುವ ಹುಚ್ಚು! ಹಿಂದಿನ ನೋವು ಮತ್ತು ಮುಂದಿನ ಕಾವು ಸೇರಿ ಭಯ ಹೆಚ್ಚಾಗುತ್ತದೆ!

ಈ ಭಯದಿಂದ ಹೊರತರುವ ಮನಃಶಾಸ್ತ್ರಜ್ಞನೆ ಗಣಪತಿ! ಆಶ್ಚರ್ಯವೆಂದರೆ ಈ ಮನೋವಿಜ್ಞಾನಿ ನಮ್ಮೊಳಗೇ ಇದ್ದಾನೆ! ನಮಗೆ ನಾವೇ ಧೈರ್ಯ ಹೇಳಿಕೊಳ್ಳುವ, ನಮಗೆ ನಾವೇ ಸಾಂತ್ವನ ಹೇಳಿಕೊಳ್ಳುವ ಸಂದರ್ಭದಲ್ಲೇ ಅಲ್ಲವೆ ಗಣಪತಿ ಪ್ರತ್ಯಕ್ಷವಾಗುವುದು? ಮನಸಿನ ಬೆಳಕಿನಲ್ಲಿ ಮನಸಿನೊಳಗೇ ಪ್ರತ್ಯಕ್ಷವಾಗುವ ದೇವರು ಈ ಗಣಪತಿ! ಹೀಗಾಗಿಯೆ ಈತ ಹೊರಗಿನವನಲ್ಲ; ಒಳಗಿನವ! ನಮ್ಮ ಉಸಿರಿಂದಲೇ ಬಂದು ನಮ್ಮ ಉಸಿರಾದವ; ನಮ್ಮ ಬೆವರಿಂದಲೇ ಬಂದು ನಮ್ಮ ಭವವಾದವ! ಭಯಕ್ಕೂ ಬೆವರಿಗೂ ಒಂದು ಬೆಸುಗೆಯಿದೆ! ಭಯವಾದಾಗ ಬೆವರು ಹರಿಯುತ್ತದೆ! ಆ ಹರಿವಿನಲ್ಲಿ ಹುಟ್ಟಿ ಹಾಯಾದ ಅನುಭವ ಕೊಡುವ ‘ಮಾನಸ ಮಿತ್ರ’ ಈ ಗಣಪತಿ!

ಗಣಪತಿ ವಿಘ್ನ ನಿವಾರಕನಾಗುವುದು ಹೀಗೆ! ವಿಘ್ನ ಹುಟ್ಟಿಕೊಳ್ಳುವುದೆ ನಮ್ಮ ಒಳಮನಸ್ಸಿನಲ್ಲಿ! ವಿಘ್ನಗಳನ್ನು ನಾವು ಕಲ್ಪಿಸಿಕೊಳ್ಳುತ್ತೇವೆಯೇ ಹೊರತು ಅವುಗಳೇ ಹೊರಗಿನಿಂದ ಬರುವುದಿಲ್ಲ!

ನಮ್ಮ ನೇತ್ಯಾತ್ಮಕ ಅಥವಾ ನೆಗೆಟಿವ್‌ ಆಲೋಚನೆಗಳ ಮೂಲಕ ವಿಘ್ನಗಳು ಉದ್ಭವಿಸುತ್ತವೆ! ವಿಘ್ನ ಯಾವತ್ತೂ ‘ಉದ್ಭವ ಮೂರ್ತಿ’ಯೆ! ಅದು ಯಾವತ್ತೂ ಸ್ವಯಂಭು! ಅದಕ್ಕೇ ಅಲ್ಲವೆ ಎಲ್ಲಾ ವಿಘ್ನಗಳೂ ಕಳೆಯಲಿ ಎಂದು ನಾವು ವಿಘ್ನೇಶ್ವರನನ್ನು ಪ್ರಾರ್ಥಿಸುವುದು? ಅಂದರೆ ನಮಗೆ ನಾವೇ ಧೈರ್ಯ ತುಂಬಿಕೊಳ್ಳುವುದು? ಗಣೇಶ, ಗಜಾನನ, ಲಂಬೋದರ, ಏಕದಂತ ಎಂದಾಗ ‘ಕೆಲಸ ಆಗುತ್ತದೆ’ ಎನ್ನುವ ನಂಬಿಕೆ ಬರುವುದು ನೆಗೆಟಿವ್‌ ಆಲೋಚನೆ ಹೋಗಿ ಇತ್ಯಾತ್ಮಕ ಅಂದರೆ ಪೊಸಿಟಿವ್‌ ಆಲೋಚನೆ ಬಂದಾಗಲೆ! ಈ ಬಗೆಯ ಪೊಸಿಟಿವ್‌ ಆಲೋಚನೆಗಳ ಮಹಾ ಉಗ್ರಾಣ ನಮ್ಮ ಮಹಾಗಣಪತಿ!

ತಿಳಿದವರು ಹೇಳುವಂತೆ ಪ್ರತೀದಿನ ನಮ್ಮ ಮನಸ್ಸಿನೊಳಗೆ 60,000 ಆಲೋಚನೆಗಳು ಮೂಡುತ್ತವೆ! ಆಶ್ಚರ್ಯವೆಂದರೆ ಇವುಗಳಲ್ಲಿ 59900 ಆಲೋಚನೆಗಳೂ ನೆಗೆಟಿವ್‌ ಅಥವಾ ಕೆಟ್ಟ ಆಲೋಚನೆಗಳು! ಭಯ ಹುಟ್ಟಿಸುವ ಬೇಡದ ಆಲೋಚನೆಗಳು! ಇವುಗಳಿಂದ ಮುಕ್ತಿ ಪಡೆಯದೆ ಇದ್ದರೆ ಬಾಳು ನರಕವಾಗುತ್ತದೆ. ಇನ್ನೊಬ್ಬರಿಂದ ಈ ಮುಕ್ತಿ ಸಾಧ್ಯವಿಲ್ಲ. ಇದು ನಮ್ಮಿಂದ ಮಾತ್ರ ಸಾಧ್ಯ! ನನ್ನ ಭಯವನ್ನು ನಾನೇ ಹೊರಹಾಕಬೇಕು. ಇದು, ನನ್ನ ನಿದ್ದೆಯನ್ನು ನಾನು ಮಾತ್ರ ಮಾಡಬಲ್ಲೆ ಎನ್ನುವಷ್ಟೆ ಸಹಜವಾದುದು! ಈ ಸಾಧನೆಗೆ ಪ್ರಥಮ ವಂದಿತನ ಪ್ರಣವ ಮಂತ್ರ ಬೇಕು. ನಾವು ಪ್ರಪ್ರಥಮವಾಗಿ ಹೊಡೆದೋಡಿಸಬೇಕಾಗಿರುವುದು ನಮ್ಮ ಭಯವನ್ನೇ ಅಲ್ಲವೆ? ಭಯವಿಲ್ಲದ ಸ್ಥಿತಿಯೆ ಆನಂದದ ಸ್ಥಿತಿ! ಈ ಆನಂದದ ಸ್ಥಿತಿಯನ್ನು ಗಣಪತಿಯ ಸಾಂಗತ್ಯದಲ್ಲಿ ಸಾಧಿಸುವುದಾದರೂ ಹೇಗೆ?

‘ಮುದ್ಗಲ ಪುರಾಣ’ದಲ್ಲಿ ಗಣಪತಿಯ 8 ಅವತಾರಗಳ ಉಲ್ಲೇಖವಿದೆ! ಈ 8 ಅವತಾರಗಳು 8 ಭಾವಗಳನ್ನು ಪ್ರತಿನಿಧಿಸಿ, ಅವುಗಳ ಸಂಹಾರಕ್ಕಾಗಿಯೇ ಈ ಅವತಾರಗಳಾಗಿವೆ ಎನ್ನುವ ಸತ್ಯದರ್ಶನ ಮಾಡಿಸುತ್ತವೆ! ನಿಜ ಹೇಳಬೇಕೆಂದರೆ, ಈ ಅಷ್ಟಭಾವಗಳ ಸಂಹಾರವಾದಾಗಲೆ ಋಣಾತ್ಮಕ ಹೋಗಿ ಧನಾತ್ಮಕ ಆಲೋಚನೆಗಳು ಮೂಡಿಬರುತ್ತವೆ. ಅಂದಹಾಗೆ, ಗಣಪತಿಯ ಆ ಎಂಟು ಅವತಾರಗಳು ಯಾವುವೆಂದರೆ–

1. ವಕ್ರತುಂಡ: ಇದು ಮೊದಲ ಅವತಾರ. ಈ ಅವತಾರದಲ್ಲಿ ಗಣೇಶ ಸಿಂಹವನ್ನೇರಿ ಬಂದು ‘ಮತ್ಸರ’ವನ್ನು ಸಂಹಾರ ಮಾಡುತ್ತಾನೆ ಎನ್ನುವ ಪ್ರತೀತಿ ಇದೆ! ಮತ್ಸರದಿಂದ ಮೂಡಬಹುದಾದ ಕೆಟ್ಟ ಆಲೋಚನೆಗಳ ಪಟ್ಟಿಯನ್ನು ನಾವು ನೀವು ಇಟ್ಟುಕೊಂಡಿದ್ದೇವೆಯೆ? ಪಟ್ಟಿ ತುಂಬಾ ದೊಡ್ಡದಿದೆ! ಮತ್ಸರ ಮಡಿದರೆ ಬರುವ ಹೊಸ ಹುಟ್ಟು ನಿಜಕ್ಕೂ ರಮ್ಯ, ಸುಂದರ!

2. ಏಕದಂತ: ಇಲ್ಲಿ ಗಣಪ ಏಕದಂತನಾಗಿ ಬಂದು ‘ಮದ’ವನ್ನು ಸಂಹಾರ ಮಾಡುತ್ತಾನೆ! ಮದವಿದ್ದಲ್ಲಿ ಮುದವಿಲ್ಲ! ಮದ ಉಬ್ಬಸದ ಹಾಗೆ ಉಸಿರು ಕಟ್ಟಿಸುತ್ತದೆ. ಉಸಿರು ಸಲೀಸಾಗಬೇಕಾದರೂ ಮದದ ಸಂಹಾರವಾಗಲೆ ಬೇಕು. ಇದಕ್ಕೂ ನಮಗೆ ಗಜಾನನ ಸ್ಪರ್ಶ ಬೇಕು!

3. ಮಹೋದರ: ಈ ಮೂರನೆಯ ಅವತರಣ ‘ಮೋಹ’ದ ಸಂಹಾರಕ್ಕಾಗಿ, ಮೋಹವೂ ಅತಿಯಾದಾಗ ಕಣ್ಣ ಕಟ್ಟಿದ ಹಾಗೆ ಆಗುತ್ತದೆ! ಆಗ ಗೋಚರಿಸುವುದು ಕತ್ತಲೆ ಮಾತ್ರ! ಕತ್ತಲೆಯೊಳಗಿನ ಬೆಳಕನ್ನು ಕಂಡಾಗ ವಿಘ್ನಗಳು ಪರಿಹಾರವಾಗಲೇಬೇಕು. ಮನಸ್ಸು ನಿರ್ಮಲವಾಗಲು ಮೋಹದ ಹಿಡಿತದಿಂದ ತಪ್ಪಿಸಿಕೊಳ್ಳಲೆಬೇಕಲ್ಲ?

4. ಗಜಾನನ: ಇದು ‘ಲೋಭ’ ಸಂಹಾರದ ಕಥನ! ನಮ್ಮ ಅಸಂಖ್ಯಾತ ನೇತ್ಮಾತ್ಮಕ ವಿಚಾರಗಳ ಮೂಲವಿರುವುದೆ ಲೋಭದಲ್ಲಿ. ಮನೋವಿಕಾರಕ್ಕೆ ಮತ್ತು ಮುಂಬರುವ ಸಂಕಷ್ಟಗಳಿಗೆ ನಾವೇ ಕಾರಣವಾಗುವುದು ಹೇಗೆ! ಲೋಭ ಅಳಿದರೆ ಲಾಭ ಎನ್ನುವ ತತ್ವ ಇಲ್ಲಿದೆ!

5. ಲಂಬೋದರ: ಈ ಅವತಾರ ‘ಕ್ರೋಧ’ ಎನ್ನುವ ಭಾವ ಸಂಹಾರಕ್ಕಾಗಿ! ಸಿಟ್ಟಿನಷ್ಟು ದೊಡ್ಡ ಭಾರ ಇನ್ನೊಂದಿಲ್ಲ! ಅಡೆತಡೆಗಳು, ಮನಸ್ತಾಪಗಳು, ಜಗಳಗಳು ಬಂದೆರಗುವುದೆ ಕೋಪದಿಂದ! ನಮ್ಮ ಕೋಪಕ್ಕೆ ನಾವೇ ಜವಾಬ್ದಾರರು. ಈ ಒಂದು ಭಾವದ ಸಂಹಾರವಾದರೆ ಕೆಟ್ಟ ಆಲೋಚನೆಗಳಿಂದ ಬಿಡುಗಡೆ ಸಿಗುತ್ತದೆ. ಬಿಡುವುದು ಹೇಗೆ ಎನ್ನುವುದೆ ಪ್ರಶ್ನೆ! ಅದಕ್ಕೂ ದೈವಾನುಗ್ರಹ ಅಥವಾ ಮನಃಶಕ್ತಿ ಬೇಕೋ ಏನೋ! ಅಂಥ ಆತ್ಮವಿಶ್ವಾಸದ ಸಾಕ್ಷಿ ಈ ಲಂಬೋದರ!

6. ವಿಕಟ: ಈ ವಿಕಟಾವತಾರದಲ್ಲಿ ಕಾಮಸಂಹಾರ ನಡೆಯುತ್ತದೆ! ಎಲ್ಲಾ ಬಯಕೆಗಳೂ ಕಾಮನೆಗಳೆ! ಒಂದರ ಹಿಂದೆ ಇನ್ನೊಂದರಂತೆ ಓಡೋಡಿ ಬರುವ ಬಯಕೆಗಳೆಲ್ಲಾ ಪೂರ್ಣಗೊಳ್ಳುವುದು ಸಾಧ್ಯವೇ ಇಲ್ಲ! ಇದು ನಮ್ಮ ಅತೃಪ್ತಿಯ ಮೂಲ! ಅತೃಪ್ತಿ ಇರುವಲ್ಲಿ ಸಂಘರ್ಷವಿರುತ್ತದೆ; ಆತಂಕವೂ ಇರುತ್ತವೆ. ಅತೃಪ್ತಿಯಿಂದ ತೃಪ್ತಿಯೆಡೆಗೆ ಸಾಗುವುದು ಎಂದರೆ ಕತ್ತಲೆಯಿಂದ ಬೆಳಕಿನೆಡೆಗೆ ಹೋಗುವ ಹಾಗೆಯೆ ಅಲ್ಲವೆ?

7. ವಿಘ್ನರಾಜ: ಇದು ‘ಮಮ’ ಎನ್ನುವ, ನಾನು ನನ್ನದು ಎನ್ನುವ ಮಮಕಾರದ ಸಂಹಾರಕ್ಕಾಗಿಯೆ ಎತ್ತಿದ ಅವತಾರ! ನಮ್ಮ ಆಂತರಿಕ ಮತ್ತು ಬಾಹ್ಯ ಎಡರುತೊಡರುಗಳಿಗೆ ‘ಮಮ’ ಎನ್ನುವ ಭಾವವೂ ವಿಶೇಷ ಕಾರಣವಾಗಿ ಕಂಗೊಳಿಸುತ್ತದೆ. ಮನೋವಿಜ್ಞಾನಿಗಳ ಹೇಳಿಕೆಯಂತೆ ಯಾರು ಪ್ರತೀದಿನ, ಪ್ರತೀ ಗಳಿಗೆ ನಾನು, ನನ್ನದು, ನನ್ನಿಂದ ಎಂದು ಹೇಳುತ್ತಿರುತ್ತಾರೋ ಅವರಿಗೆ ಹೃದಯಾಘಾತವಾಗುವ ಸಾಧ್ಯತೆ ಹೆಚ್ಚು! ಯಾರು ನಮ್ಮದು, ಅವರಿಂದ, ಅವರಿಗಾಗಿ ಎಲ್ಲರಿಂದ ಎಂದು’ ಹೇಳುತ್ತಿರುತ್ತಾರೋ ಅವರಿಗೆ ಹೃದಯಾಘಾತದ ಸಾಧ್ಯತೆ ಕಡಿಮೆಯಂತೆ! ವಿಘ್ನರಾಜ ಹೃದಯವನ್ನು ಹದಗೊಳಿಸುವುದು ಹೀಗೆ!

8. ಧೂರ್ಮವರ್ಣ: ಈ ಅವತಾರದಲ್ಲಿ ‘ಅಹಂಕಾರ’ ಮರ್ದನವಾಗುತ್ತದೆ! ಅಹಂಕಾರಕ್ಕೂ ವಿಘ್ನಗಳಿಗೂ ನೇರ ಸಂಬಂಧವಿದೆ! ಅಹಂಕಾರ ಏರಿದಾಗ ವಿಘ್ನಗಳೂ ಹೆಚ್ಚುತ್ತವೆ. ಅಹಂಕಾರ ನಾಶದಲ್ಲಿ ನಾಕವಿದೆ!

ಮದ, ಮೋಹ, ಲೋಭ, ಕ್ರೋಧ, ಕಾಮ, ಮಮ ಮತ್ತು ಅಹಂಕಾರಗಳು ಅಳಿದಾಗ ನೇತ್ಯಾತ್ಮಕ ಆಲೋಚನೆಗಳು ಅಳಿಯುತ್ತವೆ! ಆಗ ವಿಘ್ನ ನಿವಾರಣೆಯಾಗುತ್ತದೆ! ಇಷ್ಟೇ ಅಲ್ಲ, ನಮ್ಮೊಳಗಿನ ವಿನಾಯಕ ನಮಗೆ ‘ಅಂಕುರ’ವನ್ನೂ ಕೊಟ್ಟಿದ್ದಾನೆ! ಗಣಪನ ಹಸ್ತದಲ್ಲಿರುವ ಅಂಕುಶ ನಮ್ಮೊಳಗೇ ಇರುವ ನಿಯಂತ್ರಣ ಶಕ್ತಿಯ ಸಂಕೇತವೂ ಹೌದು!

ಈ ಅಂಕುಶಕ್ಕೆ ಎರಡು ಭಾಗ– ಒಂದು ತುದಿ; ಅದು ಮೊನಚು. ಇನ್ನೊಂದು ಗಾಳದಂತೆ ಬಾಗಿದೆ! ಮಾವುತ ತುದಿಯಿಂದ ಚುಚ್ಚಿ ಆನೆಯನ್ನು ಮುಂದೆ ಸಾಗುವಂತೆ ಮಾಡಿದರೆ, ಕೊಕ್ಕೆಯಿಂದ ಕಿವಿ ಹಿಂಡಿ ನಿಲ್ಲುವಂತೆ ಮಾಡುತ್ತಾನೆ. ಸ್ಥಾವರ – ಜಂಗಮಗಳೆರಡನ್ನೂ ನಿಯಂತ್ರಿಸುವ ಸರಳ ಸಾಧನ ಈ ಅಂಕುಶ. ಮನಸಿಗೆ ಚಲನೆಯೂ ಬೇಕು; ವಿಶ್ರಾಂತಿಯೂ ಬೇಕು. ಸ್ವರವೂ ಬೇಕು; ಮೌನವೂ ಬೇಕು; ಆಲೋಚನೆಯೂ ಬೇಕು; ಆರಾಮದ ಸ್ಥಿತಿಯೂ ಬೇಕು!

ಇಲ್ಲಿ ಅಂಕುಶವೂ ನಾವೇ; ಕಿವಿಗಳೂ ನಮ್ಮವೆ! ಹೊರಗಿನ ಮಾವುತ ಕಿವಿ ಹಿಂಡುವುದೂ ಇಲ್ಲ; ಹದವಾಗಿ ಚುಚ್ಚುವುದೂ ಇಲ್ಲ! ನಮ್ಮ ಕಿವಿಯನ್ನು ನಾವು ಹಿಂಡಿದರೆ ಎಷ್ಟು ಹಿಂಡಿಯೇವು? ಒಂದಿಷ್ಟೂ ನೋವಾಗದಂತೆ ಹಿತವಾಗಿ ಹಿಂಡುತ್ತೇವೋ ಏನೋ! ಅದಕ್ಕೇ ಇರಬೇಕು ಈ ಅಂಕುಶವನ್ನು ನಾವು ವಿನಾಯಕನಿಗೆ ಅಂದರೆ ಒಳಗಿನ ಮನಃಶಾಸ್ತ್ರಜ್ಞನಿಗೆ ಕೊಟ್ಟಿದ್ದೇವೆ; ಅಂದರೆ ಒಳಗಿನ ವಿವೇಕಕ್ಕೆ ಬಿಟ್ಟುಕೊಟ್ಟಿದ್ದೇವೆ! ಗಣಪ ಎನ್ನುವ ವಿವೇಕ ಎಚ್ಚರವಾದರೆ ಎಲ್ಲಾ ಕಾರ್ಯಗಳೂ ನಿರ್ಮಿಘ್ನವಾಗಿ ನೆರವೇರುತ್ತದೆ ಎನ್ನುವ ನಂಬಿಕೆ ದೊಡ್ಡದು! ಲಂಬೋದರ ಅಂಥದ್ದೊಂದು ದೊಡ್ಡ ನಂಬಿಕೆ; ಆತ್ಮವಿಶ್ವಾಸ ತುಂಬುವ ಅಪಾರ ನಂಬಿಕೆ! ಗಣೇಶ ಚತುರ್ಥಿ ಬಾಳಿನ ಉಸಿರಾಗುವುದು ಹೀಗೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT