ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಂಡು ಹೆಣ್ಣಾಗುವ ‘ಕ್ಲೌನ್ ಮೀನು’

Last Updated 18 ಅಕ್ಟೋಬರ್ 2014, 19:30 IST
ಅಕ್ಷರ ಗಾತ್ರ

ಮಹಾವಿಷ್ಣು ಮೋಹಿನಿಯಾಗಿ ರೂಪಾಂತರಗೊಳ್ಳುವುದು, ನಾರದ ಮುನಿ ಸುಂದರ ಸ್ತ್ರೀ ಆಗುವುದು, ಮಹಾಭಾರತದಲ್ಲಿ ಅರ್ಜುನ ಬೃಹನ್ನಳೆಯಾಗುವುದು– ಇವೆಲ್ಲವೂ ಪುರಾಣಗಳಲ್ಲಿನ ವೇಷ ಬದಲಾವಣೆಯ ಪ್ರಸಂಗಗಳು. ಈ ರೂಪಾಂತರದ ಪ್ರಕ್ರಿಯೆ ಕೆಲವು ಮೀನುಗಳಲ್ಲೂ ನಡೆಯುತ್ತದೆ. ಹೆಣ್ಣಾಗಿ ಹುಟ್ಟಿ ‘ಸಾಕಪ್ಪಾ ಈ ಹೆಣ್ಣು ಜನ್ಮ’ ಎಂದುಕೊಳ್ಳುವಂತೆ ಕೆಲವು ಮೀನುಗಳು ಗಂಡಾಗಿ ಬದಲಾಗುತ್ತವೆ. ಗಂಡಾದ ಈ ಮೀನುಗಳು ತಂದೆಯ ಕರ್ತವ್ಯವನ್ನು ಶ್ರದ್ಧೆಯಿಂದ ನಿರ್ವಹಿಸುತ್ತವೆ. ಅಂತೆಯೇ, ಗಂಡಾಗಿ ಜನಿಸಿ, ಬೆಳೆದು, ಒಂದು ಹಂತದಲ್ಲಿ ಸಂಪೂರ್ಣವಾಗಿ ಹೆಣ್ಣಾಗಿ ಪರಿವರ್ತನೆಗೊಂಡು ತಾಯ್ತನದ ಪೂರ್ಣ ಸುಖವನ್ನು ಅನುಭವಿಸುವ ಮೀನುಗಳೂ ಇವೆ. ಎರಡನೇ ವರ್ಗಕ್ಕೆ ಸೇರಿದ ಕ್ಲೌನ್ ಮೀನಿನ ಕುತೂಹಲದ ಕಥೆ ಇಲ್ಲಿದೆ.

ಕ್ಲೌನ್ ಮೀನು ಸಮುದ್ರವಾಸಿಯಾದ ಲಿಲಿಪುಟ್ ಮೀನು. ಅಂದರೆ ಇದು ದೊಡ್ಡ ಗಾತ್ರಕ್ಕೆ ಬೆಳೆಯುವುದಿಲ್ಲ. ಇವುಗಳ ಗರಿಷ್ಠ ಉದ್ದ ಸುಮಾರು 18 ಸೆಂ.ಮೀ. ಅಂದರೆ ಬರೆಯುವ ಒಂದು ಪೆನ್‌ಗಿಂತ ಚೂರು ಹೆಚ್ಚು ಉದ್ದ. ಈ  ಮೀನುಗಳು ಆಕರ್ಷಕ ಹಳದಿ, ಕಿತ್ತಲೆ, ಕೆಂಪು ಬಣ್ಣ ಹೊಂದಿರುತ್ತವೆ. ನಡುವೆ ಬಿಳಿ ಪಟ್ಟೆ ಇರುವುದು ಕ್ಲೌನ್‌ಗಳ ಸೌಂದರ್ಯ ಇಮ್ಮಡಿಗೊಳ್ಳಲು ಕಾರಣವಾಗಿದೆ. ಕೆಂಪು ಸಮುದ್ರ, ಮಹಾ ಹವಳ ದಿಬ್ಬ ಸೇರಿದಂತೆ ಹಿಂದು ಮಹಾಸಾಗರ, ಶಾಂತಿ ಸಾಗರಗಳಲ್ಲಿ ಹೆಚ್ಚು ಆಳವಿಲ್ಲದ ಹವಳ ಹಾಸುಗಳ ಮಧ್ಯೆ ಈ ಮೀನುಗಳು ಜೀವಿಸುತ್ತವೆ. ನಮ್ಮ ದೇಶದ ತಮಿಳುನಾಡಿನ ರಾಮೇಶ್ವರಂ ಹತ್ತಿರ ಹಾಗೂ ಅಂಡಮಾನ್ ಸಮುದ್ರಗಳಲ್ಲಿ ಕ್ಲೌನ್ ಮೀನುಗಳನ್ನು ನೋಡಬಹುದು.

‘ಸಿ ಅನೆಮೋನ್’ ಅನ್ನುವ ಇನ್ನೊಂದು ಸಾಗರ ಜೀವಿಯ ಜೊತೆ ಕ್ಲೌನ್ ಮೀನು ‘ಹೊಂದಾಣಿಕೆ’ಯ ಜೀವನ ನಡೆಸುತ್ತದೆ. ಸಿ ಅನೆಮೋನ್ ಅಚಲ ಜೀವಿಯೆಂದೇ ಹೇಳಬಹುದು. ಇತರ ಭಕ್ಷಕ ಮೀನುಗಳಿಂದ ಕ್ಲೌನ್ ಮೀನಿಗೆ ಸಿ ಅನೆಮೋನ್ ರಕ್ಷಣೆ ಕೊಟ್ಟರೆ, ಕ್ಲೌನ್ ಮೀನು ತನ್ನ ರಂಗು ರಂಗಾದ ಬಣ್ಣದಿಂದ ಇತರ ಪುಟ್ಟ ಮೀನುಗಳನ್ನು ಹತ್ತಿರ ಸೆಳೆದು ಸಿ ಅನೆಮೋನ್‌ಗೆ ಆಹಾರ ಸರಬರಾಜು ಮಾಡುತ್ತದೆ.  ಸಿ ಅನೆಮೋನ್ ವಿಷವನ್ನು ಉಗುಳುವ ಶಕ್ತಿ ಹೊಂದಿದೆ. ಇದು ತನ್ನ ಹತ್ತಿರ ಸುಳಿದ ಆಹಾರದ ಮೀನನ್ನು ತನ್ನ ವಿಷದಿಂದ ನಿಷ್ಕ್ರಿಯಗೊಳಿಸಿದ ನಂತರ ಸೇವಿಸುತ್ತದೆ. ಆಶ್ಚರ್ಯವೆಂದರೆ ಸಿ ಅನೆಮೋನ್‌ನ ವಿಷ, ಕ್ಲೌನ್ ಮೀನಿಗೆ ನಿರಪಾಯಕಾರಿ. ಇದಕ್ಕೆ ಕಾರಣ ಕ್ಲೌನ್ ಮೀನಿನ ಹುರುಪೆಯ ಮೇಲಿರುವ ಅಂಟು ಸಿ ಅನೆಮೋನ್‌ನ ವಿಷದಿಂದ ರಕ್ಷಣೆ ನೀಡುತ್ತದೆ.  ಸಿ ಅನೆಮೋನ್‌ನ ಸನಿಹದಲ್ಲೆ ವಿಹರಿಸುವ ಕ್ಲೌನ್ ಮೀನು, ಅಪಾಯದ ವಾಸನೆ ಬಂದರೆ ತಕ್ಷಣ ಸಿ ಅನೆಮೋನ್‌ನ ಬಾಹುಗಳ ಮಧ್ಯೆ ಬೆಚ್ಚಗೆ ಅವಿತುಕೊಳ್ಳುತ್ತದೆ. ಆ ಕಾರಣದಿಂದಲೇ ಕ್ಲೌನ್ ಮೀನನ್ನು ಅನೆಮೋನ್ ಮೀನೆಂದೂ ಕರೆಯುತ್ತಾರೆ. 

ಅಂದಹಾಗೆ, ಕ್ಲೌನ್ ಮೀನು ‘ಕಾಲೊನಿ ಜೀವಿ’. ಒಂದು ಕಾಲೊನಿಯೆಂದರೆ ಒಂದು ಹೆಣ್ಣು, ಹಲವಾರು ಗಂಡು ಒಳಗೊಂಡಿರುವ ವ್ಯವಸ್ಥೆ. ಗಂಡುಗಳಲ್ಲಿ ಒಂದು ಮಾತ್ರ ಪ್ರೌಢವಾಗಿದ್ದು ಉಳಿದವು ಕಿಶೋರ ಅವಸ್ಥೆಯಲ್ಲಿರುತ್ತವೆ. ಈ ಮೀನುಗಳಲ್ಲಿ ಶಿಸ್ತಿನ ವರ್ಗಶ್ರೇಣಿ ವ್ಯವಸ್ಥೆ ಕಂಡುಬರುತ್ತದೆ. ಗುಂಪಿನಲ್ಲಿ ದೊಡ್ಡ ಮತ್ತು ಪ್ರಬಲ ಮೀನೆಂದರೆ ಹೆಣ್ಣು. ಯಾವಾಗಲೂ ಕಾಲೊನಿಯ ಮೇಲ್ಭಾಗದಲ್ಲೇ ಇದರ ಸ್ಥಾನ. ಯಾವುದೇ ಕಾರಣದಿಂದ ಹೆಣ್ಣು ಮೀನು ಮರಣ ಹೊಂದಿದರೆ, ಕಾಲೊನಿಯ ಬಲಿಷ್ಠ ಗಂಡು ಮೀನು ಹೆಣ್ಣಾಗಿ ಪರಿವರ್ತನೆಗೊಂಡು ಆ  ಸ್ಥಾನ ತುಂಬುತ್ತದೆ. ಉಳಿದ ಕಿಶೋರರಲ್ಲಿ ದೊಡ್ಡ ಗಾತ್ರದ ಕೇವಲ ಒಂದು ಮೀನು ಮಾತ್ರ ಅತ್ಯಂತ ತ್ವರಿತವಾಗಿ ಬೆಳೆದು ಪ್ರೌಢತೆ ಹೊಂದುತ್ತದೆ. ಈ ವ್ಯವಸ್ಥೆ ಒಂದು ಹೆಣ್ಣಿಗಾಗಿ ಹಲವು ಗಂಡುಗಳ ಪೈಪೋಟಿ ಹಾಗೂ ಕದನ ತಪ್ಪಿಸಿ, ನೈತಿಕ ಹಾಗೂ ಶಾಂತಿಯ ಜೀವನಕ್ಕೆ ಅನುವು ಮಾಡಿಕೊಡುತ್ತದೆ. ಇದರ ಜೊತೆಗೆ ದುರ್ಬಲ ಗಂಡುಗಳನ್ನು ಪ್ರಬಲ ಗಂಡುಗಳು ಕಾಲೊನಿಯಿಂದ ಹೊರದಬ್ಬುವ ಸನ್ನಿವೇಶವೂ ಉದ್ಭವಿಸುವುದಿಲ್ಲ. ಆದರೆ, ಕ್ಯೂನಲ್ಲಿ ಇರುವ ಕಿಶೋರರಿಗೆ ಪ್ರೌಢತೆ ಹೊಂದುವ ಅವಕಾಶ ಸಿಗುತ್ತದೆ ಎನ್ನುವುದಕ್ಕೆ ಯಾವ ಖಾತರಿಯೂ ಇಲ್ಲ!

ಹುಣ್ಣಿಮೆ ಮತ್ತು ಅಮಾವಾಸ್ಯೆಯ ಆಸುಪಾಸು ದಿನಗಳಲ್ಲಿ ಮರಿಗಳು ಜನಿಸುವಂತೆ ಕ್ಲೌನ್ ಮೀನು ಮೊಟ್ಟೆಯಿಡುತ್ತದೆ. ಮೊಟ್ಟೆಯಿಟ್ಟ ನಂತರ ಹೆಣ್ಣು ಮೀನಿನ ಕರ್ತವ್ಯ ಮುಗಿದಂತೆ. ಪಾಪ, ಗಂಡು ಮೀನು ಆರರಿಂದ ಹತ್ತು ದಿನ ಮೊಟ್ಟೆಗಳನ್ನು ನೋಡಿಕೊಂಡು, ತನ್ನ ಈಜು ರೆಕ್ಕೆಗಳನ್ನು ಚಾಮರದಂತೆ ಬೀಸುತ್ತ, ಮೊಟ್ಟೆಗಳ ಸುತ್ತ ನೀರು ಹರಿವು ಇರುವಂತೆ ನೋಡಿಕೊಳ್ಳುತ್ತದೆ. ಹುಟ್ಟುವ ಮೀನುಗಳೆಲ್ಲಾ ಗಂಡುಜಾತಿಗೆ ಸೇರಿದ್ದು ಎಂದು ನೀವು ಈಗಾಗಲೇ ಊಹಿಸಿದ್ದರೆ, ನಿಮ್ಮ ಊಹೆ ಸರಿ.

ಕ್ಲೌನ್ ಮೀನು ಆರರಿಂದ ಹತ್ತು ವರ್ಷ ಬದುಕುತ್ತದೆ. ನೀರಿನಲ್ಲಿ ದೊರಕುವ ಸೂಕ್ಷ್ಮ ಸಸ್ಯ ಮತ್ತು ಪ್ರಾಣಿಗಳು ಇದರ ಆಹಾರ. ಜೊತೆಗೆ ಸಿ ಅನೆಮೋನ್ ತಿಂದುಳಿದ ಆಹಾರದ ತುಣುಕುಗಳನ್ನೂ ಕುರುಕಲಾಗಿ ಬಳಸುತ್ತದೆ.

ಕ್ಲೌನ್ ಮೀನು ಬಹು ಬೇಡಿಕೆಯಿರುವ ಅಲಂಕಾರಿಕ ಮೀನು. ವಾಲ್ ಪೇಪರ್ ತಯಾರಿಕರಿಗೂ ಇದು ಅಚ್ಚುಮೆಚ್ಚಿನ ವಸ್ತು. ವಾಲ್ಟ್ ಡಿಸ್ನಿ ನಿರ್ಮಾಣದ ಪ್ರಸಿದ್ಧ ಅನಿಮೇಟಡ್ ಚಿತ್ರ ‘ಫೈಂಡಿಂಗ್ ನಿಮೊ’ದಲ್ಲಿ ಕ್ಲೌನ್ ಮೀನಿನದು ಮುಖ್ಯ ಪಾತ್ರ. ಈ ಚಿತ್ರ ಬಿಡುಗಡೆಯಾದ ನಂತರ ಕ್ಲೌನ್ ಮೀನು ಮತ್ತು ಇತರ ಹವಳ ಸಮುದಾಯದ ಮೀನುಗಳಿಗೆ, ಅಲಂಕಾರಿಕ ಮೀನು ಮಾರುಕಟ್ಟೆಯಲ್ಲಿ ಬೇಡಿಕೆ ಗಗನಕ್ಕೇರಿತು. ಇದರಿಂದಾಗಿ ಕೆಲವೆಡೆ ಈ ಮೀನುಗಳ ಸಂತತಿಗೆ ವಿಪರೀತ ಹಾನಿಯೂ ಉಂಟಾಯಿತು. ಪ್ರಸ್ತುತ ನೈಸರ್ಗಿಕವಾಗಿ ದೊರೆಯುವ ಕ್ಲೌನ್‌ ಮೀನುಗಳ ಜೊತೆಗೆ ಮರಿ ಉತ್ಪಾದನೆ ಮಾಡಿ ಅಲಂಕಾರಿಕ ಮೀನು ಮಾರುಕಟ್ಟೆಯ ಬೇಡಿಕೆ ಪೂರೈಸಲಾಗುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT