ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜೋಗತಿ ನೃತ್ಯದ ಜೋಗಿಣಿ ಮಂಜಮ್ಮ ಜೋಗತಿ

Last Updated 16 ಸೆಪ್ಟೆಂಬರ್ 2017, 19:30 IST
ಅಕ್ಷರ ಗಾತ್ರ

ಸಮಾಜದ ಕಣ್ಣಲ್ಲಿ ತೃತೀಯ ಲಿಂಗಿಗಳ ಬಗ್ಗೆ ಆರದ ಮುನಿಸು. ಅವರನ್ನು ಕಂಡ ಕ್ಷಣವೆ ತುಟಿಯ ಮೇಲೊಂದು ಅಪಹಾಸ್ಯದ ನಗು. ಮಗು ಗಂಡಾದರೆ ಅಪ್ಪನಿಗೆ ಮೀಸೆ ಮೇಲೆ ಕೈ. ಹುಟ್ಟಿದ ಗಂಡು ಮಗು ಬೆಳೆಯುತ್ತಲೇ ಮಂಗಳಮುಖಿಯಾಗುವೆನೆಂದರೆ ಧ್ವನಿ ಗಡಸಾಗುತ್ತದೆ. ಅಂತಹ ಗಡುಸಾದ ಅಪ್ಪನ ಮನಸ್ಸನ್ನು ಮೃದುವಾಗಿಸಿ ಮಗನನ್ನು ಮಂಗಳ ಮುಖಿಯಾಗಿ ಸ್ವೀಕರಿಸಿದ ಕಥೆಯ ನಾಯಕಿ. ಮರಿಯಮ್ಮನ ಹಳ್ಳಿ ಮಂಜಮ್ಮ ಜೋಗತಿ.

ಜಾನಪದ ಅಕಾಡೆಮಿ ಪ್ರಶಸ್ತಿ ರಾಜೋತ್ಸವ ಪ್ರಶಸ್ತಿ ಪುರಸ್ಕೃತರು. ತೃತಿಯ ಲಿಂಗಿಗಳೂ ನಮ್ಮ ನಿಮ್ಮಂತೆ. ಸುಸಂಸ್ಕೃತ ಬದುಕು ಕಟ್ಟಿಕೊಂಡರೆ ಸ್ಥಾನಮಾನ ಎಂಬುದನ್ನು ಸಾಬೀತು ಮಾಡಿದ ಸಾಧಕಿ. ಈಗ ಜೋಗತಿಯೊಬ್ಬರನ್ನು ರಾಜ್ಯ ಸರಕಾರ ಪ್ರಥಮ ಬಾರಿಗೆ ಜಾನಪದ ಅಕಾಡೆಮಿಗೆ ಸದಸ್ಯರನ್ನಾಗಿ ನೇಮಿಸಿದೆ. ಸಾಮಾಜಿಕ ಸ್ತರದಲ್ಲಿ ಮಂಗಳಮುಖಿಯೊಬ್ಬರು ಸ್ಥಾನ ಪಡೆದ ಹೆಗ್ಗಳಿಕೆ ಇದು.

ಒಳಗೆ ಸುಳಿವಾತ್ಮಕೆ ಗಂಡು ಹೆಣ್ಣಿನ ಹಂಗಿಲ್ಲ ಎಂಬುದಕ್ಕೆ ಪೂರಕ ಇವರ ಜೀವಕ್ರಮ. ಒಡಲೊಳಗೆ ತೃತೀಯ ಲಿಂಗಿಯಾಗಿ ಬದುಕು ಬೆಂಕಿಯಲಿ ಕುದಿದು ಆವಿಯಾದರೂ ಜೋಗತಿ ಜಾನಪದ ಕಲೆಯನ್ನು ಧ್ಯಾನಸ್ಥ ಸ್ಥಿತಿಯಲ್ಲಿ ಪಡೆಯಲು ಪಟ್ಟ ಸಾಹಸ ವಿಶೇಷ.

ಜರ್ಮನ್‌ನ ಸಾರಾ ಮಾರ್ಕಲೆ (ಇಂಡಿಯಾ ಟ್ರಾನ್ಸ್‌ ಜೆಂಡರ್) ಇವರನ್ನೊಳಗೊಂಡು ಪಿಎಚ್‌.ಡಿ ಮಾಡುತ್ತಿದ್ದಾರೆ. ಇವರ ಮೇಲೆ ಎಮ್‌.ಫಿಲ್ ಮಾಡಿದ ದಾಖಲೆಗಳೂ ಇವೆ. ಜನಪದ ವಿಶ್ವವಿದ್ಯಾಲಯದಿಂದ ಚಂದ್ರಪ್ಪ ಸೊಬಟಿಯವರು ಮಂಜಮ್ಮ ಜೋಗತಿ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಚೌಡಕಿ ಪದದಲ್ಲೂ ಇವರದು ಎತ್ತಿದ ಕೈ. ತಲೆ ಮೇಲೆ ಎಲ್ಲಮ್ಮನ ಕೊಡ ಹೊತ್ತು ಕೈಬಿಟ್ಟು ಒಂಟಿ ಕಾಲಿನಿಂದ ಮಾಡುವ ನೃತ್ಯ ಮಾಮೂಲಿನದ್ದಲ್ಲ. ನೋಡುಗರ ಕಣ್ಣು ಸೋಲಬೇಕೆ ವಿನಃ ಹೆಜ್ಜೆಗಳು ಸೋಲುವುದಿಲ್ಲ.

ಮೋಹಿನಿ ಭಸ್ಮಾಸುರ ರೇಣುಕಾ ಎಲ್ಲಮ್ಮ, ಪರಶುರಾಮ ರಕ್ತರಾತ್ರಿ, ಹೇಮರಡ್ಡಿ ಮಲ್ಲಮ್ಮ, ಕುರುಕ್ಷೇತ್ರ ಮುಂತಾದ ನಾಟಕಗಳಲ್ಲಿ ವೇಷ ತೊಟ್ಟಿದ್ದು ಹೆಣ್ಣು ಗಂಡು ಎರಡೂ.

ಮಂಜಮ್ಮ ಜೋಗತಿ ಮಂಜುನಾಥನಾಗಿ ಜನಿಸಿದ್ದು 1957ರಲ್ಲಿ ಬಳ್ಳಾರಿ ಜಿಲ್ಲೆಯ ಕಲ್ಲಕೊಂಬದಲ್ಲಿ. ಈಗ ಬದುಕಿಗೆ ಆಶ್ರಯ ನೀಡಿದ್ದು ಮರಿಯಮ್ಮನ ಹಳ್ಳಿ, ತಂದೆ ಹನುಮಂತಪ್ಪ ಶೆಟ್ಟಿ. ತಾಯಿ ಜಯಲಕ್ಷ್ಮೀ. ತಾಯಿ ಹೆತ್ತದ್ದು 21 ಮಕ್ಕಳು. ಬದುಕಿದ್ದು ಮಾತ್ರ ಐದು. ಇಬ್ಬರು ತಂಗಿಯರು. ಒಬ್ಬ ಅಣ್ಣ. ಒಬ್ಬ ತಮ್ಮ. ತಂದೆಗೆ ಕಂಪ್ಲಿ ಶುಗರ್ ಫ್ಯಾಕ್ಟರಿ ಕೆಲಸ. ಆಂಧ್ರದ ಬೆಳ್ಳಕುಂಡಿಯಿಂದ ಬಂದ ತಾತ ವೀರಣ್ಣ ಬೇಳೆ ವ್ಯಾಪಾರಸ್ಥರು. ತಂದೆಗೆ ಆರು ಜನ- ಅಣ್ಣ ತಮ್ಮಂದಿರು, ಮೂರು ಜನ ಅಕ್ಕತಂಗಿಯರು. ಊರಲ್ಲಿ ಆರು ಎಕರೆ ಜಮೀನಿನ ಒಡೆಯರಾಗಿದ್ದರು. ದೊಡ್ಡ ವ್ಯಾಪಾರಸ್ಥರೆಂಬ ಗೌರವವೂ ಇತ್ತು. ನಂತರ ಹಿರಿಯೂರು ಬಿರ‍್ಲಾ ಸುಕ್ಕುವಾಡ ಕಂಪೆನಿಗಳಲ್ಲಿ ಕೆಲಸ ಮಾಡುತ್ತಾರೆ.

ತಂದೆ ಹನುಮಂತಪ್ಪ ಶೆಟ್ಟಿ ರಂಗಭೂಮಿಯತ್ತ ಆಸಕ್ತರು. ಊರಲ್ಲಿ ನಾಟಕ ಆಡಿಸಲು ಓಡಾಡುತ್ತಿದ್ದರು. ಕುರುಕ್ಷೇತ್ರ ನಾಟಕದಲ್ಲಿ ಒಂದು ಪಾತ್ರ ಕಾಯಂ. ತಿರುನೀಲಕಂಠ ನಾಟಕದಲ್ಲಿ 6 ನೇ ಕ್ಲಾಸಿನಲ್ಲಿದ್ದಾಗ ಮಂಜುನಾಥನಿಗೆ ಪರಮೇಶ್ವರನ ಪಾತ್ರಕ್ಕೆ ಬಣ್ಣ ಹಚ್ಚಿಸುತ್ತಾರೆ. ಒಮ್ಮೆ ಊರಲ್ಲಿ ಕುರುಕ್ಷೇತ್ರ ನಾಟಕ. ನಟಿಸಲು ಉದಯಕುಮಾರ ಬಂದಿರುತ್ತಾರೆ.

ನಾಟಕದಲ್ಲಿ ರಾಜನಿಗೆ ಹೂ ಚೆಲ್ಲುವ ಹುಡಿಗಿಯರ ಪಾತ್ರಕ್ಕೆ ಒಬ್ಬರು ಕಡಿಮೆ ಬೀಳುತ್ತಾರೆ. ತಕ್ಷಣ ತಂದೆಯೇ ಹೆಣ್ಣು ಹುಡುಗಿಯ ಪಾತ್ರ ಮಾಡಿಸುತ್ತಾರೆ. ವೈ. ಕೆ. ಹನಮಂತಪ್ಪನವರಿಂದ ರಂಗ ನೃತ್ಯ ಹೇಳಿಸುತ್ತಾರೆ. ಆದರೆ ಮಗ ನಿಜವಾಗಿಯೂ ಹೆಣ್ಣಾಗುವೆ ಎಂದಾಗ ಬಾಸುಂಡೆ ಬರುವಂತೆ ಹೊಡಿಯುತ್ತಾರೆ!

ಓದಿನಲ್ಲೂ ಜಾಣನಾಗಿದ್ದ ಮಂಜುನಾಥ. ಮುಂದೆ ಓದಬೇಕೆಂಬ ಹಂಬಲ ತಂದೆಗೆ. ಮನೆಯಲ್ಲಿ ಊರಲ್ಲಿ ಶಾಲೆಯಲ್ಲಿ ನೆರೆಹೊರೆಯಲ್ಲಿ ಇವರ ಹೆಣ್ಣು ಮಗಳ ವರ್ತನೆ ಕಂಡು ಮೈಮೇಲೆ ಎಲ್ಲಮ್ಮ ದೇವರು ಬಂದಿದೆ ಎನ್ನುತ್ತಾರೆ. ನನ್ನ ಮಾನ ಮರ್ಯಾದೆ ಪ್ರಶ್ನೆ ಎಂದು ತಂದೆ ನೊಂದುಕೊಳ್ಳುತ್ತಾರೆ. ಎಸ್.ಎಸ್. ಎಲ್. ಸಿ ಮುಗಿಯುತ್ತದೆ. ಕಲಕಂಬದಲ್ಲಿದ್ದ ಇನ್ನೊಬ್ಬ ಮಗನ ಅಂಗಡಿಯಿಟ್ಟಿದ್ದಲ್ಲಿಗೆ ಕಳಿಸುತ್ತಾರೆ. ಅಲ್ಲಿಯೇ ಇವರ ಹೆಣ್ತನ ಬಾಲ ಬಿಚ್ಚಿದ ಕರುವಾಗುತ್ತದೆ.

ಬೇಗ ಎದ್ದು ಅಂಗಳ ಗೂಡಿಸಿ, ಚೆಂದದ ರಂಗವಲ್ಲಿ ಇಟ್ಟು, ಹೆಣ್ಣು ಮಕ್ಕಳ ಹಾಗೆ ಮನೆ ಓರಣ ಮಾಡತೊಡಗಿದ್ದು ಕಂಡು ಅಣ್ಣನಿಗೂ ಇರಿಸು ಮುರುಸು. ನಂತರ ಉದ್ಯೋಗವೊಂದು ಇರಲಿ ಎಂದು ನಂದಿ ಫೈನಾನ್ಸ್ ಕಾರ್ಪೋರೇಶನ್ ಬ್ಯಾಂಕಿಗೆ ಪಿಗ್ಮಿ ತುಂಬಲು ಸೇರಿಸುತ್ತಾರೆ. ಲಕ್ಷ್ಮೀಪುರ, ದಾದನಾ, ಕುರುಗೋಡು- ಪಿಗ್ಮಿ ಕಲೆಕ್ಟ್‌ ಮಾಡತೊಡಗಿದರೂ ಹೆಣ್ಣು ಮಕ್ಕಳಂತೆಯೇ ಆಡುವುದು ನಿಲ್ಲುವುದಿಲ್ಲ.

18 ನೇ ವರ್ಷಕ್ಕೆ ಹುಲಗಿಯಲ್ಲಿ ತಂದೆಯೇ ಮುಂದೆ ನಿಂತು ವಿಧಿವತ್ತಾಗಿ ಜೋಗತಿ ಮಾಡುತ್ತಾರೆ. ಆಗಲೇ ಅಪ್ಪ ಅಮ್ಮ ದೂರವಾಗುತ್ತಾರೆ. ಅಪ್ಪನಿಗಿಂತ ಮಂಗಳಮುಖಿ ಎಂಬ ಸತ್ಯ ಕಣ್ಣ ಮುಂದೆ. ಅಪ್ಪ– ಅವ್ವನ ಪ್ರೀತಿ, ವಾತ್ಸಲ್ಯ, ಕಾಳಜಿ, ಕಳಕಳಿಗೂ ಮನಸ್ಸು ಬದಲಾಗುವುದಿಲ್ಲ. ಒಳಗೊಂದು ಹೊರಗೊಂದು ಇಟ್ಟುಕೊಂಡು ಇರಲು ಮನಸ್ಸಾಕ್ಷಿ ಒಪ್ಪಲೇ ಇಲ್ಲ.

ಮಂಗಳಮುಖಿಯಾಗಿ ಎಲ್ಲರನ್ನೂ ಎದುರಿಸಿ ಒಂಟಿಯಾಗಿ ಬದುಕಲಾರೆ ಅನಿಸುತ್ತದೆ. ವಿಷ ಕುಡಿಯುತ್ತಾರೆ, ಡಾವಣಗೇರಿ ಆಸ್ಪತ್ರೆಯಲ್ಲಿ 45 ದಿನ ಸಾವು ಬದುಕಿನ ಮಧ್ಯ ಹೋರಾಟ. ಆಸ್ಪತ್ರೆ ಗೇಟ್‌ನಲ್ಲಿ ತಂದೆ ದಾರಿ ಕಾದದ್ದೇ ಬಂತು. ಅಮ್ಮ, ತಮ್ಮ, ತಂಗಿ ಯಾರ ಸುಳಿವೂ ಇಲ್ಲ. ದಟ್ಟ ದರಿದ್ರ ಹಸಿವು. ಹೊಟ್ಟೆ ಕೇಳುವುದಿಲ್ಲ. ಆಗಲೇ ತಲೆ ಮೇಲೆ ತಂಬಗಿ ಇಟ್ಟು ಕುಣೀಲಿಕ್ಕೆ ಶುರು ಮಾಡುತ್ತಾರೆ. ಜೋಗತಿ ನೃತ್ಯದ ಮೊದಲ ಹೆಜ್ಜೆ ಆಸ್ಪತ್ರೆ ವಾರ್ಡಿನಿಂದ! ಹೆಜ್ಜೆ ತಪ್ಪೋ ಒಪ್ಪೋ ಹೆಜ್ಜೆಗೆ ಗೆಜ್ಜೆ ಕಟ್ಟುತ್ತಾರೆ. ಅಂದು ಕಟ್ಟಿದ ಗೆಜ್ಜೆ ಇಂದಿನ ಸ್ಥಾನಕ್ಕೆ ಕಾರಣವಾಗಿದೆ.

ಮನೆಗೆ ಹೋದರೂ ಯಾರೂ ಮಾತಾಡಲ್ಲ. ಹೋಗಿ ಹಾಲಿಸ್ವಾಮಿ ಮಠದಲ್ಲಿ ಭಜನೆ ಮಾಡುತ್ತಿದ್ದಾಗ ‘ನನ್ನ ಮಗ- ಗಂಡಾಗಿದ್ರ ಕೆಲಸಕ್ಕ ಹಚ್ಚತಿದ್ದೆ. ಪೂರಾ ಹೆಣ್ಣಾಗಿದ್ದರೆ ಮದುವೆ ಮಾಡಿ- ಉಡಿ ತುಂಬಿ ಕಳಿಸ್ತಿದ್ದೆ. ಇದ್ಯಾವುದೂ ಆಗಿಲ್ಲ. ಅರ್ಧಂಬರ್ಧ. ಇವತ್ತಿನಿಂದ ನಮ್ಮನಿಗೆ ಅವ ಬರೂದು ಬೇಡ ನಮ್ಮಿಬ್ಬರ ಋಣ ತೀರೈತಿ’ ಎಂದು ಸಂಬಂಧ ಕಡಿದು ಬಿಡುತ್ತಾರೆ. ತಾಯಿ ಸೀರೆ ಉಡುಸಿ ಉಡಕ್ಕಿ ಹಾಕಿ, ಮನೆಯಿಂದ ಅಲ್ಲ ಮನಸ್ಸಿನಿಂದಲೇ ಹೊರಗೆ ಹಾಕುತ್ತಾರೆ.

1985ರಲ್ಲಿ ಮುತ್ತುಕಟ್ಟಿಕೊಂಡ ಮೇಲೆ ಮನೆಯವರಿಂದ ದೂರವಾಗಿ ಚಿಲಕನಟ್ಟಿಗೆ ಬರುತ್ತಾರೆ. ಕೊಡ ಹೊತ್ತು ಕುಣಿದರೂ ಸಿಗುವ ಕಾಸು ಒಂದು ಹೊತ್ತಿನ ಗಂಜಿಗೂ ಆಗತಿರಲಿಲ್ಲ. ದೇವರ ಹೊತ್ತುದಕ್ಕೆ ಉಪವಾಸ. ಬೆಳಗ್ಗೆ ಊರಲ್ಲಿ ಇಡ್ಲಿ ಚಟ್ನಿ ಮಾರಿ. ಸಾಯಂಕಾಲ 5,6,7 ನೇ ಕ್ಲಾಸಿನ ಮಕ್ಕಳಿಗೆ ಟ್ಯೂಶನ್ ಹೇಳಿ ಬದುಕು ಕಟ್ಟಿಕೊಳ್ಳಲು ಹೆಣಗುತ್ತಾರೆ. ಅಲ್ಲಿಯೇ ಕಾಳವ್ವ ಜೋಗತಿ- ಪರಿಚಯವಾಗುತ್ತಾಳೆ. ಅವಳದು ಜೋಗತಿ ನೃತ್ಯದಲ್ಲಿ ಪ್ರಖ್ಯಾತ ಹೆಸರು. ಅವರಿಂದ ಒಂದೊಂದೇ ಹೆಜ್ಜೆ ಕಲಿಯುತ್ತಾರೆ.

ಕಾಲಲ್ಲಿ ರಕ್ತ ಸುರಿದರೂ ಕುಣಿಯುವುದು ನಿಲ್ಲುವುದಿಲ್ಲ. ಜಾತ್ರೆ ಉತ್ಸವ ಹಬ್ಬ ಸಮ್ಮೇಳನ ಸಮಾವೇಶ ಎಲ್ಲೇ ಇದ್ದರೂ ಎಲ್ಲಮ್ಮನ ಕೊಡ ಹೊತ್ತು ಕೈ ಬಿಟ್ಟು ಕುಣಿಯುವ ಜಾನಪದ ಜೋಗತಿ ಕಲೆ ಕರಗತ. ಜೊತೆಗೆ ನಾಟಕದ ಹವ್ಯಾಸವೂ ಕೈ ಹಿಡಿಯುತ್ತದೆ. ಸುಮಧುರವಾಗಿ ಹಾಡುವ ಜಾನಪದ ಚೌಡಕಿ ಪದಗಳು ಜನ ಮನ ಸೂರೆಗೊಳ್ಳುತ್ತವೆ.

ಕಾಳಮ್ಮನವರು ರೇಣುಕಾ ದೇವಿ ಚರಿತ್ರೆ ಜನಪದ ಶೈಲಿಯಲ್ಲಿ ಯಾವುದೇ ಅಕಾಡೆಮಿಕ್ ಶಿಸ್ತಿರುವುದಿಲ್ಲ ಎಂದು ಜನಪದ ನಾಟಕ ರೂಪ ಕೊಟ್ಟು ನಿರ್ದೇಶಿಸಿದ್ದಲ್ಲದೇ ಪ್ರಸಿದ್ಧಿಗೆ ಬರುವಂತೆ ಮಾಡುತ್ತಾರೆ. ಶ್ರೀ ರೇಣುಕಾ ಚರಿತೆ ನಾಟಕದ ಮುಖ್ಯ ಹಾಡುಗಾರ್ತಿಯಾಗಿ ರೇಣುಕಾ ಪಾತ್ರದಲ್ಲಿ ಕಾಳವ್ವ ಜೋಗತಿ ಎದುರು ಗೌಡಶಾನಿ, ಕಾಮಧೇನು, ಪರಶುರಾಮ ಪಾತ್ರ. ಕಾಳವ್ವ ಜೋಗತಿ ನಂತರ ರೇಣುಕಾ ದೇವಿ ಪಾತ್ರ ನಿರ್ವಹಿಸುತ್ತಾ ಜನಪದ ಕಲೆಯ ಪರಿಚಾರಕಿಯಾಗುತ್ತಾರೆ.

ಸಮಾಜದಲ್ಲಿ ಅಸಹ್ಯ, ಹೊರೆ, ಮಾಮಾ ಎಂದೆಲ್ಲ ನಿಂದಿಸುತ್ತಾರೆ. ಒಂಟಿ ನಡೆದು ಬರುವಾಗ ದುಷ್ಟರು ಕುಡಿದ ಅಮಲಿನಲ್ಲಿ ಅತ್ಯಾಚಾರಕ್ಕೂ ಪ್ರಯತ್ನಿಸುತ್ತಾರೆ. ಹೆಣ್ಣು ವೇಷದ ಪುರುಷ ದೇಹವೆಂದರೂ ಬಿಡುವುದಿಲ್ಲ. ಈ ಎಲ್ಲಾ ಅಳುಕಿನ ಆಚೆ ಮಂಜಮ್ಮ ಜೋಗತಿ ಎಂಬ ಹೆಸರಿಗೆ ಶರಾ ಬರೆಯುತ್ತದೆ.

ಟಿ. ವಿ. ಕಾರ್ಯಕ್ರಮಗಳು, ಸಂಘ ಸಂಸ್ಥೆಗಳು ಗುರ್ತಿಸಿ ಜಾತ್ರಾ ಮಹೋತ್ಸವ ಸಂಘಟಕರು ಆಮಂತ್ರಿಸುತ್ತಾರೆ. ಜಾನಪದ ಹಾಡು ಕುಣಿತ, ರಂಗ ಗೀತೆಗಳು, ಪೌರಾಣಿಕ ನಾಟಕಗಳು ಮೇಲಾಗಿ ಜೋಗತಿ ನೃತ್ಯ ನೋಡಲು ರಂಗ ರಸಿಕರು ಮುಂದಾಗುತ್ತಾರೆ. ವೇದಿಕೆ ಮೇಲೆ ಬಂದು ಇವರು ಮಂಗಳಮುಖಿಯೆಂಬುದನ್ನೂ ಮರೆತು ಮದುವೆಯಾಗಲು ಬಯಸುತ್ತಾರೆ. ನೋಟಿನ ಮಾಲೆ ಕೊರಳಿಗೆ ಹಾಕಿ ಖುಷಿ ಪಡುತ್ತಾರೆ. ರಂಗಭೂಮಿಯಲ್ಲಿಯೂ ಹೆಣ್ಣಿನ ಪಾತ್ರ ನಿರ್ವಹಿಸಲು ಅವಕಾಶಗಳು ದೊರೆಯುತ್ತವೆ

1996ನೇ ಇಸ್ವಿ ಬಳ್ಳಾರಿ ಜಿಲ್ಲಾ ಸಾಹಿತ್ಯ ಸಮ್ಮೇಳನದಲ್ಲಿ ಎಲ್ಲಮ್ಮನ ಕೊಡ ಹೊತ್ತು ಕೈ ಬಿಟ್ಟು ಜೋಗತಿ ನೃತ್ಯದಲ್ಲಿ ಕುಣಿಯುವುದನ್ನು ಕಂಡ ಗುಡಿಹಳ್ಳಿ ನಾಗರಾಜ ಅವರು ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಸುದ್ದಿ ಮಾಡುತ್ತಾರೆ. ಪೇಪರ್‌ ಓದಿದ ದೂರ್ವಾಸಮುನಿ ತಂದೆ ಮಂಗಳ ಮುಖಿ ಜೋಗಮ್ಮನ ಹತ್ತಿರವಾಗುತ್ತಾರೆ.

ಸರ್ಕಾರ-ಮಂಗಳಮುಖಿಯಾಗಿ ಗುರ್ತಿಸಿದಾಗ ಅವಕಾಶಗಳು ಲಭ್ಯವಾಗುತ್ತವೆ. ಆದರೂ ಮಂಗಳಮುಖಿ ದೇವಿ ಪಾತ್ರ ನಿರ್ವಹಿಸಬಾರದೆಂದು ಗೌಡರ ಹಳ್ಳಿಯಲ್ಲಿ ದೇವಿ ಪಾತ್ರ ಕೊಟ್ಟು ಬಿಡಿಸಿ ಅಪಮಾನ ಮಾಡುತ್ತಾರೆ. ಆಗ ಮರಿಯಮ್ಮನಹಳ್ಳಿ ಗ್ರಾಮೀಣ ವೃತ್ತಿ ರಂಗ ಭೂಮಿಯ ಡಾ. ನಾಗರತ್ನಮ್ಮ ಮೋಹಿನಿ ಭಸ್ಮಾಸುರ ನಾಟಕದಲ್ಲಿ ಇವರಿಂದ ಭಷ್ಮಾಸುರನ ಪಾತ್ರ ಮಾಡಿಸುತ್ತಾರೆ. ಅದೇ ಮಂಗಳಮುಖಿಯರ ರಂಗ ಪ್ರವೇಶಕ್ಕೆ ಮುನ್ನುಡಿ. ಇದೇ ನಾಟಕದಲ್ಲಿ. ಇಳಕಲ್ ಉಮರಾಣಿ-ಮೋಹಿನಿ, ಪಾರ್ವತಿ ಪಾತ್ರದಲ್ಲಿ.

ಪರಮಾತ್ಮನಾಗಿ ಆದವಾನಿ ವೀಣಾ, ವಿಷ್ಣು ಆಗಿ ಶಿವಕುಮಾರಿ, ಉಳಿದ ಪಾತ್ರಗಳಲ್ಲಿ ರಾಮವ್ವ ಜೋಗತಿ, ಗೌರಮ್ಮ ಜೋಗತಿ, ಭಾಗ್ಯಮ್ಮ ಜೋಗತಿ, ಕೆ.ಮಂಜಮ್ಮ ಜೋಗಿತಿ, ಯಲ್ಲಮ್ಮ ಜೋಗತಿ, ದೇವಿ ಜೋಗತಿ ಗಂಗಮ್ಮ ಜೋಗತಿ ಎಲ್ಲಾ ಮಂಗಳಮುಖಿಯರೇ ಸೇರಿ ಪಾತ್ರ ಮಾಡಿದ್ದು ಹೆಗ್ಗಳಿಕೆ.

ಮೋಹಿನಿ ಭಸ್ಮಾಸುರ ರೇಣುಕಾ ಎಲ್ಲಮ್ಮ, ಪರಶುರಾಮ ರಕ್ತರಾತ್ರಿ, ಹೇಮರಡ್ಡಿ ಮಲ್ಲಮ್ಮ, ಕುರುಕ್ಷೇತ್ರ ಮುಂತಾದ ನಾಟಕಗಳಲ್ಲಿ ವೇಷ ತೊಟ್ಟಿದ್ದು ಹೆಣ್ಣು ಗಂಡು ಎರಡೂ. ಜೊತೆಗೆ ನಾಡಿನ ಜೋಗತಿ ನೃತ್ಯ ಕಲಾವಿದೆಯಾಗಿ ಹೆಸರು ಮಾಡುತ್ತಾರೆ.

ಮಹಿಳಾ ವೃತ್ತಿ ರಂಗ ಕಲಾವಿದರ ಸಂಘದಿಂದ ನಾಗರತ್ನಮ್ಮನವರ ನಿರ್ದೇಶನದಲ್ಲಿ ಶ್ರೀ ಬೇಲೂರು ಕೃಷ್ಣಮೂರ್ತಿ ರಚನೆಯ ನಾರದ ವಿನೋದದಲ್ಲಿ ಗೌರಿ- ಜೋಗತಿ, ಕೃಷ್ಣನ ಪಾತ್ರ ನಿರ್ವಹಿಸಿದರೆ, ಇವರು ನರ್ತಕಿ. ಚಿತ್ರಾಂಗದೆ -ಕಂದಗಲ್ ಹನಮಂತರಾಯರ ನಾಟಕವನ್ನೇ ಮಣಿಪುರ ಹೆಸರಿನಲ್ಲಿ ನಾಗರತ್ನಮ್ಮ ನಿರ್ದೇಶನ ಮಾಡುತ್ತಾರೆ. ಇದರಲ್ಲೂ ಪಾತ್ರ ನಿರ್ವಹಿಸುತ್ತಾರೆ. ಈಗ ಕೂಡ್ಲಗಿ ಶಿವಕುಮಾರಿ ನಿರ್ದೇಶನದಲ್ಲಿ ಕೀಚಕನ ವಧೆ ನಾಟಕದಲ್ಲಿ ಕೀಚಕ ಪಾತ್ರ ಮಾಡುತ್ತಿರುವುದು ವಿಶೇಷ.

ಮರಿಯಮ್ಮನಹಳ್ಳಿ ದುರ್ಗಾದಾಸ ರಂಗ ಮಂಟಪದಿಂದ ಹಿಡಿದು ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದವರೆಗೂ, ರಾಜ್ಯದ ತುಂಬ ಜೋಗತಿ ನೃತ್ಯ ಸುಮಾರು ಸಾವಿರಕ್ಕೂ ಹೆಚ್ಚು ಪ್ರದರ್ಶನ ಕಂಡಿದೆ. ವಿಶ್ವವಿದ್ಯಾಲಯ ಕಾರ್ಯಕ್ರಮಗಳಲ್ಲೂ ಹಂಪಿ, ನವರಸ, ಮಡಿಕೇರಿ, ರಂಗಾಯಣ, ಆಕಾಶವಾಣಿ, ಮಹಿಳಾ, ಜಾನಪದ, ಸಾಹಿತ್ಯ, ಸಾಂಸ್ಕೃತಿಕ ಸಮ್ಮೇಳನ ಉತ್ಸವಗಳಲ್ಲಿ ಜಾನಪದ ಜೋಗತಿ ನೃತ್ಯ ಮಾಡಿ ಜೋಗತಿ ನೃತ್ಯಕ್ಕೆ ಮನ್ನಣೆ ತಂದಿದ್ದಾರೆ. ಕರ್ನಾಟಕ ಜಾನಪದ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ರಾಜ್ಯದ ನೂರಾರು ಸಂಘ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ.

ಜೋಗತಿ ನೃತ್ಯದ ಕುರಿತು ವಿಶ್ವವಿದ್ಯಾಲಯಗಳಲ್ಲಿ ಅಂತರರಾಷ್ಟ್ರೀಯ ಸೆಮಿನಾರ್‌ ನೀಡಿದ್ದಾರೆ. ಸಂಪನ್ಮೂಲ ವ್ಯಕ್ತಿಯಾಗಿಯೂ ಶಿಬಿರಗಳನ್ನು ನಿರ್ದೇಶಿಸಿದ್ದಾರೆ. ಹೀಗೆ ಮಂಜಮ್ಮ ಜೋಗತಿ ತಾನು ಮಂಗಳಮುಖಿಯಾಗಿಯೆ ಬದುಕಿಗೊಂದು ಅರ್ಥ ಕಂಡಿದ್ದಾರೆ.

ತಾನೇ ಪರಪುಟ್ಟಳಾದರೂ ಪರಪುಟ್ಟ ಕೋಗಿಲೆಗಳಿಗೆ ಆಶ್ರಯ ಕೊಟ್ಟ ತಾಯಿ ಕೋಗಿಲೆ. ಹದಿನೈದು ಇಪ್ಪತ್ತು ತೃತೀಯ ಲಿಂಗಿಗಳನ್ನು ಕಟ್ಟಿಕೊಂಡು ಅವರನ್ನು ಸಮಾಜದ ಆದರಕ್ಕೆ ಪಾತ್ರರಾಗಿಸಲು ಹೆಣಗುತ್ತಿದ್ದಾರೆ. ಅವರನ್ನು ಜೋಗತಿ ನೃತ್ಯ, ರಂಗ ಕಲೆ, ರಂಗ ಗೀತೆಗಳ ತರಬೇತಿಯಿಂದ ಸಾಂಸ್ಕೃತಿಕ ಲೋಕಕ್ಕೆ ಪರಿಚಯಿಸಿದ್ದಾರೆ. ಪುಟ್ಟ ಕೋಣೆಯಲ್ಲಿ ಕಾಲು ಚಾಚಿ ಮಲಗಲೂ ಬರ. ಆದರೂ ಹೃದಯ ವೈಶಾಲ್ಯಕ್ಕೆ ಬರವಿಲ್ಲ. ಅವರನ್ನೆಲ್ಲ ಎದೆ ಬಾಚಿ ಒಂದೇ ತಟ್ಟೆಯಲ್ಲಿ ತುತ್ತು ತಿನಿಸುವ ಮಂಜಮ್ಮ ಜೋಗತಿ ಮಂಗಳಮುಖಿಯರ ಪಾಲಿನ ಅಮ್ಮ.

*


ಮಂಜಮ್ಮ ಅವರಿಂದ ಜೋಗತಿ ನೃತ್ಯ ಪ್ರದರ್ಶನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT