ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಂತ್ರಜ್ಞಾನದ ‘ಕಲಿ’ಗಾಲ

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮುಂದಿನ ಕೆಲವು ದಶಕಗಳಲ್ಲಿ ತಂತ್ರಜ್ಞಾನದ ಸ್ವರೂಪವು ಯಾವೆಲ್ಲ ರೀತಿಯಲ್ಲಿ ಬದಲಾಗಬಹುದು? ನಮ್ಮ ಜೀವನಶೈಲಿಯ ಮೇಲೆ ಅದು ಯಾವ ರೀತಿಯ ಪರಿಣಾಮವನ್ನು ಬೀರಬಹುದು? ಇತ್ತೀಚೆಗೆ ಎಲ್ಲರೂ ಮಾತನ್ನಾಡುತ್ತಿರುವ ‘ಆಟೋಮೇಷನ್’ ಎಂದರೆ ಏನು? ಅದರಿಂದಾಗಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರೆ ಏನರ್ಥ?

​ ಹೀಗೆ ಹಲವು ಪ್ರಶ್ನೆಗಳನ್ನು ನಮ್ಮೊಳಗೆ ಹುಟ್ಟಿಸುವ ಈ ಬರಹ – ನಿರಂತರ ಕಲಿಕೆಯ ಅನಿವಾರ್ಯತೆ ಹೆಚ್ಚುತ್ತ ಹೋಗುವುದೇ ‘ಕಲಿ’ಗಾಲ ಎನ್ನುವ ನಿಲುವಿನಲ್ಲಿ, ಈ ಕ್ರಿಯೆಗಳು ಭಾವನೆಗಳನ್ನು ಒಳಗೊಳ್ಳಬೇಕಾದ ಅಗತ್ಯವನ್ನು ಸೂಚಿಸುತ್ತದೆ.

***
ವಿಜ್ಞಾನ ಮತ್ತು ತಂತ್ರಜ್ಞಾನದ ನಡುವಿನ ವ್ಯತ್ಯಾಸವನ್ನು ಸಾಮಾನ್ಯವಾಗಿ ಎಲ್ಲರೂ ತಿಳಿದಿರುತ್ತಾರೆ. ಜಗತ್ತಿನ ಸತ್ಯಗಳನ್ನು, ಅಲಿಖಿತ ನಿಯಮಗಳನ್ನು ಸೂತ್ರಗಳಾಗಿ ಕಂಡುಕೊಳ್ಳುವುದು ವಿಜ್ಞಾನ. ಮೊದಲಿನಿಂದಲೂ ಭೂಮಿಗೆ ಗುರುತ್ವಾಕರ್ಷಣ ಶಕ್ತಿಯಿದ್ದರೂ, ಅದು ದೇಶ-ಕಾಲಗಳನ್ನು ಮೀರಿದ ಸತ್ಯವಾಗಿ ಗೋಚರಿಸಿ, ಅದಕ್ಕೊಂದು ಚೌಕಟ್ಟಿನ ಸ್ವರೂಪವನ್ನು ಕೊಡುವುದು ವಿಜ್ಞಾನ.

ವಿಜ್ಞಾನದ ಅಳವಡಿಕೆಯ ಉಪಾಯಗಳು ತಂತ್ರಜ್ಞಾನ. ವಿಜ್ಞಾನದ ಬುನಾದಿಯ ಮೇಲೆ ತಂತ್ರಜ್ಞಾನವು ಬೆಳೆಯುತ್ತ ಸಾಗುತ್ತದೆ. ತಂತ್ರಜ್ಞಾನದ ಅಳವಡಿಕೆಯಿಂದಾಗಿ ಜೀವನಶೈಲಿಯು ಬದಲಾಗುತ್ತಿರುತ್ತದೆ. ಆದರೆ, ಅದರ ಅಡಿಪಾಯವಾದ ವಿಜ್ಞಾನವು ಬದಲಾಗುವುದಿಲ್ಲ.

ಉದಾಹರಣೆಗೆ, ನ್ಯೂಟನ್ನಿನ ಮೊದಲ ನಿಯಮವು: ‘ಯಾವುದೇ ವಸ್ತುವು, ಬಾಹ್ಯಶಕ್ತಿಯ ಸಂಪರ್ಕಕ್ಕೆ ಒಳಪಡುವವರೆಗೂ ನಿರಂತರ ನಿಲುಗಡೆಯಲ್ಲಿರುತ್ತದೆ; ಚಲಿಸುತ್ತಿರುವ ವಸ್ತುವು ಅದೇ ವೇಗದಲ್ಲಿ ನಿರಂತರ ಚಲನೆಯಲ್ಲಿರುತ್ತದೆ’ ಎನ್ನುತ್ತದೆ. ಈ ಸೂತ್ರದ ಆಧಾರದ ಮೇಲೆ ವಿಮಾನಗಳನ್ನು ವಿನ್ಯಾಸಗೊಳಿಸಲಾಗಿದೆ.

ಕಾರುಗಳ ಸೀಟ್‌ಬೆಲ್ಟಿನ ವಿನ್ಯಾಸಕ್ಕೂ ಇದೇ ಆಧಾರ. ಒಂದು ವೇಳೆ ಎದುರಿಗೆ ಯಾವುದೇ ತಡೆಯಿಲ್ಲದಿದ್ದರೆ, ವೇಗವಾಗಿ ಚಲಿಸುತ್ತಿರುವ ಕಾರು ಗಕ್ಕನೆ ನಿಂತರೂ, ಅದರಲ್ಲಿ ಕೂತವರು ಸ್ಪ್ರಿಂಗಿನ್ನಿಂದ ಚಿಮ್ಮಿದಂತೆ ಮುಂದಕ್ಕೆ ಹಾರಿಹೋಗುತ್ತಾರೆ. ಇದು ವಾಸ್ತವ. ಇದನ್ನು ನ್ಯೂಟನ್ನನ ಸೂತ್ರವು ಮನಗಾಣುತ್ತದೆ. ಇದರ ಆಧಾರದ ಮೇಲೆ ಸೀಟ್‌ಬೆಲ್ಟಿನ ತಂತ್ರವನ್ನು ಉಪಯೋಗಿಸಲಾಗಿದೆ.

ಇಂಥ ತಂತ್ರಜ್ಞಾನವು ಮುಂದುವರಿದಂತೆ ನಮ್ಮ ಜೀವನಶೈಲಿ ಬದಲಾಗುತ್ತದೆ ಎನ್ನುವುದಕ್ಕೊಂದು ಸಣ್ಣ ಉದಾಹರಣೆ, ನಾವು ಬಳಸುತ್ತಿರುವ ಫೋನುಗಳು. ಈಗಿನ ಸ್ಮಾರ್ಟ್‌ಫೋನುಗಳು ನಮ್ಮ ಜೀವನಕ್ಕೊಂದು ಕ್ಷಿಪ್ರತೆಯನ್ನೊದಗಿಸಿವೆ. ನಮ್ಮ ದೈನಂದಿನ ಸಣ್ಣಪುಟ್ಟ ನಿರೀಕ್ಷೆಗಳೂ ಹೆಚ್ಚಿವೆ.

ಕಳುಹಿಸಿದ ಮೆಸೇಜಿಗೆ ಕಣ್ತೆರೆಯುವುದರೊಳಗೆ ಉತ್ತರ ಬರಬೇಕು. ನಾಲ್ಕು ಜನರ ನಡುವೆ ಸಾಲಿನಲ್ಲಿ ನಿಲ್ಲದೆ, ಮನೆಯೊಳಗೆ ಕೂತಲ್ಲಿಂದಲೇ ನೀರು, ವಿದ್ಯುತ್, ಟೆಲಿಫೋನು ಬಿಲ್ಲುಗಳ ಹಣ ಪಾವತಿಯಾಗಬೇಕು. ಬೆರಳ ತುದಿಯ ಅಣತಿಗೆ ಬಯಸಿದ ಸರಂಜಾಮುಗಳೆಲ್ಲ ಮನೆಬಾಗಿಲಿಗೆ ಬಂದು ಬೀಳಬೇಕೆಂದು ನಿರೀಕ್ಷಿಸುತ್ತೇವೆ.

ಅರೆಕ್ಷಣ ಇಂಟರ್ನೆಟ್, ಮೊಬೈಲ್ ನೆಟ್‌ವರ್ಕ್ ಕೈಕೊಟ್ಟರೆ ಇನ್ನಿಲ್ಲದ ಧಾವಂತ. ಈ ಜಗತ್ತಿನೊಂದಿಗೆ ಸಂಪರ್ಕ ಕಡಿದುಕೊಂಡ ಸಿಡಿಮಿಡಿ. ಕೆಲಸವಿಲ್ಲದೆ ಸುಮ್ಮನೆ ಕೂತಿದ್ದಾಗಲೂ ಅಂಗೈಯಲ್ಲಿ ಪ್ರಪಂಚವೇ ಸ್ಕ್ರೋಲಾಗುತ್ತಿರಬೇಕು. ಅದರಲ್ಲಿಯೇ ತನ್ನ ಅಸ್ತಿತ್ವ. ಇಲ್ಲದಿದ್ದರೆ ತಾನು ಇಲ್ಲವಾಗಿಬಿಟ್ಟೆ ಎನ್ನುವ ಆತಂಕ.

ಟೆಕ್ನಾಲಾಜಿಯು ಅನುಕೂಲತೆಗಳನ್ನು ಒದಗಿಸುವ ಜೊತೆಜೊತೆಯಲ್ಲೇ ನಮ್ಮ ನಿರೀಕ್ಷೆಗಳನ್ನು ಧಾವಂತಕ್ಕೆ ತಿರುಗಿಸುತ್ತ ಸಾಗುತ್ತದೆ. ಈ ನಿರೀಕ್ಷೆಗೆ ತಕ್ಕಹಾಗೆ ಬದಲಾಗದವರನ್ನು ನಿರುಪಯೋಗಿಗಳು ಎನ್ನುವ ಹಾಗೆ ಕಾಣಲು ಶುರುಮಾಡುತ್ತೇವೆ. ಅಂಥದ್ದೊಂದು ಬದಲಾವಣೆಯನ್ನು ಯಾರು ಬಹುಬೇಗ ಅಳವಡಿಸಿಕೊಳ್ಳುತ್ತಾರೋ ಅವರನ್ನು ತೀಕ್ಷ್ಣಮತಿಗಳು ಎನ್ನುತ್ತೇವೆ.

ಬದಲಾಗ ಬಯಸದವರನ್ನು ಪ್ರತಿಗಾಮಿಗಳೆಂದು, ಬದಲಾಗಲು ಪ್ರಯತ್ನಿಸಿ ವಿಫಲರಾದವರನ್ನು ಅನರ್ಹರೆಂದು ಬಗೆಯುತ್ತೇವೆ. ‘ಈಗಿನ ಮಕ್ಕಳು ಎಷ್ಟು ಚುರುಕೆಂದರೆ, ಅವು ಹುಟ್ಟುತ್ತಲೇ ಮೊಬೈಲ್ ಬಳಸುವುದನ್ನು ಕಲಿತಿರುತ್ತವೆ’ ಎಂದು ಸುಮ್ಮನೇ ಬೀಗುತ್ತೇವೆ.

ಇದೆಲ್ಲವೂ ಶುದ್ಧ ಸುಳ್ಳು. ತಂತ್ರಜ್ಞಾನದೊಂದಿಗಿನ ಹೊಂದಾಣಿಕೆಗೂ ನಮ್ಮ ಪ್ರತಿಗಾಮಿತ್ವ–ಪುರೋಗಾಮಿತ್ವಕ್ಕೂ ಬುದ್ಧಿವಂತಿಕೆ–ದಡ್ಡತನಕ್ಕೂ ಯಾವುದೇ ಸಂಬಂಧವಿಲ್ಲ. ತಂತ್ರಜ್ಞಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕಿರುವುದು ಈ ವ್ಯಾವಹಾರಿಕ ಜಗತ್ತಿನ ಆವೇಗದೊಂದಿಗೆ ನಾವು ಸರಿಸಮನಾಗಿ ಹೆಜ್ಜೆ ಹಾಕಬೇಕಿರುವುದಕ್ಕೆ, ಪ್ರಾಪಂಚಿಕ ಅನುಕೂಲತೆಗಳನ್ನು ಪಡೆದುಕೊಳ್ಳುವುದಕ್ಕೆ, ಅಷ್ಟೆ.

ಮುಂದಿನ ಕೆಲವು ದಶಕಗಳಲ್ಲಿ ತಂತ್ರಜ್ಞಾನದ ಸ್ವರೂಪವು ಯಾವೆಲ್ಲ ರೀತಿಯಲ್ಲಿ ಬದಲಾಗಬಹುದು? ನಮ್ಮ ಜೀವನಶೈಲಿಯ ಮೇಲೆ ಅದು ಯಾವ ರೀತಿಯ ಪರಿಣಾಮವನ್ನು ಬೀರಬಹುದು? ಇತ್ತೀಚೆಗೆ ಎಲ್ಲರೂ ಮಾತನ್ನಾಡುತ್ತಿರುವ ‘ಆಟೋಮೇಷನ್’ ಎಂದರೆ ಏನು? ಅದರಿಂದಾಗಿ ಜನರು ಕೆಲಸ ಕಳೆದುಕೊಳ್ಳಲಿದ್ದಾರೆ ಎಂದರೆ ಏನರ್ಥ? ಈ ಎಲ್ಲದರ ಬಗ್ಗೆ ತಂತ್ರಜ್ಞರ ಭವಿಷ್ಯ­ವಾಣಿಯನ್ನು ತಿಳಿದುಕೊಂಡರೆ, ‘ಕೆಲಸ ಕಳೆದುಕೊಳ್ಳುವುದೆಂದರೆ ಏನು’ ಎನ್ನುವುದು ಅರ್ಥವಾಗಬಹುದು.

ಕಳೆದ ಎರಡು ಸಾವಿರ ವರ್ಷಗಳಲ್ಲಿ ಆಗಿರುವ ಬೆಳವಣಿಗೆಗಿಂತ ಮೂವತ್ತು ಪಟ್ಟು ಹೆಚ್ಚಿನ ಆರ್ಥಿಕ ಬೆಳವಣಿಗೆ ಕಳೆದ ಮೂರ್ನಾಲ್ಕು ದಶಕಗಳಲ್ಲಿ ಆಗಿದೆಯೆನ್ನುವುದು ಒಂದು ವಾದ. ಇದರ ನಿಜವಾದ ಮುಖ ಏನೇ ಇರಲಿ; ಇದು ಆರ್ಥಿಕ ತಜ್ಞರ ಅಂಕಿ–ಅಂಶ. ಇದಕ್ಕೆ ಮುಖ್ಯ ಕಾರಣ ಕಂಪ್ಯೂಟರ್ ಮತ್ತು ಇಂಟರ್ನೆಟ್.

ಮುಂದಿನ ದಿನಗಳಲ್ಲಿ ಮನುಷ್ಯರ ನಡುವಿನ ಮತ್ತು ಯಂತ್ರಗಳ ನಡುವಿನ ಸಂಪರ್ಕವು ಹೆಚ್ಚಿದಂತೆಲ್ಲ ಆಟೋಮೇಷನ್ ಕೂಡ ಹೆಚ್ಚಲಿದೆ. ಆಟೋಮೇಷನ್ ಎಂದರೆ ಒಂದು ಕಾರ್ಯದಲ್ಲಿ ಮನುಷ್ಯರ ತೊಡಗುವಿಕೆಯ ಅವಶ್ಯಕತೆಯೇ ಇರದ ಸ್ಥಿತಿಯ ನಿರ್ಮಾಣ. ಅದು ಕೇವಲ ಕಂಪ್ಯೂಟರೀಕರಣವಲ್ಲ.

ಬ್ಯಾಂಕಿನ ರಿಪೋರ್ಟ್ ತಯಾರು ಮಾಡಲು ಒಂದು ಸಾಫ್ಟ್‌ವೇರ್ ಇದೆ ಎಂದುಕೊಳ್ಳಿ. ಆದರೆ ಆ ರಿಪೋರ್ಟನ್ನು ಪರಾಮರ್ಶಿಸಲು ಒಂದು ಮನುಷ್ಯ ಪ್ರಜ್ಞೆಯ ಅವಶ್ಯಕತೆ ಇದ್ದೇ ಇದೆ. ಆ ಪರಾಮರ್ಶೆಯು ಪ್ರತೀ ದಿವಸ ಒಂದೇ ತೆರನಾದ ನಿಯಮಗಳನ್ನು ಅಳವಡಿಸಿ ಪರಾಮರ್ಶಿಸಬೇಕಾದ ಯಾಂತ್ರಿಕ ಕೆಲಸವಾಗಿದ್ದರೆ, ಅದನ್ನು ಮಾಡುವುದಕ್ಕೂ ಒಂದು ಸಾಫ್ಟ್‌ವೇರ್ ಪೊಗ್ರಾಮ್ ಬರೆಯಬಹುದು.

ಇದು, ಎಲ್ಲಿ ಅನವಶ್ಯಕವಾಗಿ ಅತಿಹೆಚ್ಚು ಸಮಯ ವ್ಯಯಿಸಲಾಗುತ್ತಿತ್ತೋ ಅದನ್ನು ಕಡಿತಗೊಳಿಸಿ, ಇನ್ನಿತರ ಸಂಗತಿಗಳತ್ತ ಗಮನ ಹರಿಸಲು ಸಮಯ ಹೊಂದಿಸಿಕೊಡುತ್ತದೆ.

ನಿಗದಿತ ನಿಯಮಗಳ ಯಾಂತ್ರಿಕ ಅಳವಡಿಕೆ ಇರುವಂಥ ಯಾವುದೇ ಕೆಲಸವನ್ನು ಕಂಪ್ಯೂಟರು ತಾನಾಗಿಯೇ ಮಾಡಿ, ನಮ್ಮ ಕೆಲಸವನ್ನು ಹಗುರ ಮಾಡುವುದಕ್ಕೆ ‘ಆಟೋಮೇಶನ್’ ಎನ್ನುತ್ತೇವೆ. ಇದುವರೆಗೆ ಸಂಪೂರ್ಣವಾಗಿ ಆಟೋಮೇಟ್ ಆಗಿರುವ ಪ್ರಕ್ರಿಯೆಗಳು ವಿರಳ. ಆಟೋಮೇಷನ್ ಎನ್ನುವುದೇ ಸದ್ಯದ ಸ್ಥಿತಿಯಲ್ಲಿ ಒಂದು ನಿರಂತರ ಪ್ರಕ್ರಿಯೆ.

ಡಾಟಾ ಸೈನ್ಸ್, ಜೀವವಿಜ್ಞಾನದ ಸಂಶೋಧನೆಗಳು, ಆರ್ಟಿಫಿಶಿಯಲ್ ಇಂಟಲಿಜೆನ್ಸ್ ಮತ್ತು ರೋಬೋಗಳು, ಸಾಮಾಜಿಕ ಜಾಲತಾಣಗಳು, ಸ್ಮಾರ್ಟ್ ಫೋನುಗಳು, ಮತ್ತಷ್ಟು ಚುರುಕಾದ ಕಂಪ್ಯೂಟರುಗಳು, ಈ ಎಲ್ಲ ತಂತ್ರಜ್ಞಾನಗಳು ಒಟ್ಟಾಗಿ ಆಟೋಮೇಟಡ್ ವಾತಾವರಣಕ್ಕೆ ಪೂರಕವಾಗಿರುತ್ತವೆ.

ಇದರ ಬೆಳವಣಿಗೆಯಿಂದಾಗಿ, ಮುಂಬರುವ ದಿನಗಳಲ್ಲಿ ಆಗಲಿರುವ ಆಟೋಮೇಷನ್‌ನ ಪರಿಕಲ್ಪನೆ ದಿಗ್ಭ್ರಮೆ ಉಂಟುಮಾಡುತ್ತದೆ. ನಾವು ಈವರೆಗೆ ನೋಡಿರುವ ಹಾಗೆ, ಕೆಲವೇ ವರ್ಷಗಳ ಹಿಂದೆ ‘ಟೆಲಿಫೋನ್ ಬೂತ್’ ಎನ್ನುವುದು ಯಾರೂ ನಡೆಸಬಹುದಾದ ಸಣ್ಣ ಉದ್ದಿಮೆಯಾಗಿತ್ತು.

ಬೇಕರಿ, ಮೆಡಿಕಲ್ ಸ್ಟೋರ್, ಸಣ್ಣಪುಟ್ಟ ಅಂಗಡಿಗಳ ಪಕ್ಕದಲ್ಲೂ ದೇವಸ್ಥಾನದಲ್ಲಿ ಹುಂಡಿ ಇಟ್ಟಿರುವಂತೆ ಕಾಯಿನ್ ಬೂತ್‌ಗಳಿದ್ದವು, ಬಂದಷ್ಟು ಬರಲಿ ಎನ್ನುವ ಲೆಕ್ಕಾಚಾರದಲ್ಲಿ. ಈ ದೇಶದಲ್ಲಿ ಪ್ರತಿಯೊಬ್ಬರ ಕೈಗೂ ಮೊಬೈಲ್ ಫೋನ್ ಸಿಕ್ಕ ಮೇಲೆ, ಫೋನ್ ಬೂತ್‌ಗಳು ಮಾಯವಾದವು.

ಇತ್ತೀಚೆಗೆ, ಸ್ಮಾರ್ಟ್ ಫೋನುಗಳು ಬಂದ ಮೇಲೆ ಜೆರಾಕ್ಸ್ ಅಂಗಡಿಗೆ ಹೋಗುವುದೂ ಕಡಿಮೆಯಾಗಿದೆ. ಒಂದೆರಡು ಡಾಕ್ಯುಮೆಂಟುಗಳಾದರೆ ಫೋಟೋ ತೆಗೆದು ಇ–ಮೇಲ್ ಮೂಲಕ ಸುಲಭವಾಗಿ ರವಾನಿಸಬಹುದಾಗಿದೆ. ಕೊರಿಯರ್, ಪೋಸ್ಟುಗಳ ವಹಿವಾಟಿಲ್ಲ.

ರೀಲ್ ಹಾಕಿ ಫೋಟೋ ತೆಗೆಯುವ ಹಳೆಯ ಮಾದರಿ ಕ್ಯಾಮೆರಾಗಳಿದ್ದ ಕಾಲದಲ್ಲಿ, ಸಣ್ಣಪುಟ್ಟ ಪ್ರವಾಸದ ಫೋಟೋಗಳನ್ನು ನೋಡಬೇಕಿದ್ದರೂ ಸ್ಟುಡಿಯೋಗೆ ಕೊಟ್ಟು ಡೆವಲಪ್ ಮಾಡಿಸಬೇಕಿತ್ತು. ಈಗ ದೊಡ್ಡ ಸಮಾರಂಭಗಳಿಗೆ ಅಥವ ಕೆಲವು ಆಯ್ದ ಫೋಟೋಗಳನ್ನು ಡೆವಲಪ್ ಮಾಡಿಸಲು ಪ್ರಿಂಟ್ ಹಾಕಿಸಲು ಮಾತ್ರ ಸ್ಟುಡಿಯೋ ಅವಶ್ಯಕತೆಯಿದೆ. ಇದು ನಾವೇ ಗಮನಿಸಿದಂತೆ ಉಂಟಾಗಿರುವ ಸಣ್ಣ ಬದಲಾವಣೆಗಳು.


ಮುಂದಿನ ಬದಲಾವಣೆಗಳ ಬಗ್ಗೆ ಭಾರತದ ಐ.ಟಿ ಕ್ಷೇತ್ರದ ಪ್ರಮುಖರೊಬ್ಬರು ಹೀಗೆ ಹೇಳುತ್ತಾರೆ:
‘‘ಜನರು ಸಮಾಜದಲ್ಲಿ ಕ್ರಿಯಾಶೀಲರೂ ಉತ್ಪನ್ನಶೀಲರೂ ಆಗಿ ಉಳಿಯಬೇಕಿದ್ದರೆ ಬಹುಬೇಗ ಮೇಧಾವಿ ಮೆಶೀನುಗಳ ಜೊತೆ ಹೊಂದಿಕೊಂಡು ಕೆಲಸ ಮಾಡುವುದನ್ನು ಕಲಿತುಕೊಳ್ಳಬೇಕು.

ಸಾರಿಗೆ ವ್ಯವಸ್ಥೆ, ಬ್ಯಾಂಕಿಂಗ್, ಜೀವವಿಜ್ಞಾನ, ವೈದ್ಯಕೀಯ ಕ್ಷೇತ್ರ, ಸರ್ಕಾರೀ ಸೇವೆಗಳು, ಇನ್ನಿತರ ಎಲ್ಲಾ ಕ್ಷೇತ್ರಗಳಲ್ಲೂ ನಾವು ಊಹಿಸುವುದಕ್ಕಿಂತ ಹೆಚ್ಚಿನ ಬದಲಾವಣೆಗಳಾಗುತ್ತವೆ. ‘ವರ್ಚ್ಯುಯಲ್ ರಿಯಾಲಿಟಿ’ಯಿಂದಾಗಿ ಜನರು ತಮಗೆ ಬೇಕಾದ ಬಟ್ಟೆ–ಬರೆಗಳನ್ನು ತಮಗೆ ಬೇಕಾದ ರೀತಿಯಲ್ಲಿ ತಾವೇ ಡಿಸೈನ್ ಮಾಡಿ, ಆರ್ಡರ್ ಮಾಡಬಹುದು.

ಅದಕ್ಕೆ ತಕ್ಕಹಾಗೆ ಶೂ, ಬೆಲ್ಟು, ಕನ್ನಡಕ, ಬಟ್ಟೆ, ಇನ್ನಿತರೆ ಎಲ್ಲ ಉತ್ಪಾದನಾ ವಿಧಾನಗಳೂ ಬದಲಾಗಬೇಕು. ರಿಯಲ್ ಎಸ್ಟೇಟಿನ ಷೇರುಮಾರುಕಟ್ಟೆ ಹುಟ್ಟಿಕೊಳ್ಳುತ್ತದೆ. ಇದರಿಂದಾಗಿ ಬ್ರೋಕರ್ ಹಾವಳಿ ತಪ್ಪುತ್ತದೆ. ಈಗ ಎಲ್ಲರಿಗೂ ಎಲ್ಲ ಸಂದರ್ಭಕ್ಕೂ ಒಂದೇ ಔಷಧ ಎನ್ನುವ ಪದ್ಧತಿಯಿದೆ. ಮುಂದೆ, ಆಯಾ ವ್ಯಕ್ತಿ–ಸಂದರ್ಭಕ್ಕೆ ತಕ್ಕಹಾಗೆ ಔಷಧೋಪಚಾರಗಳು ಬಳಕೆಗೆ ಬರುತ್ತವೆ.

ಕೆಲವೊಂದು ಸಣ್ಣ ಉಪಕರಣಗಳಿಂದಾಗಿ ದೇಹದ ಸ್ಥಿತಿಗತಿಯನ್ನು ನಿರಂತರವಾಗಿ ಗಮನಿಸುವ, ಏನಾದರೂ ತೊಂದರೆ ಕಂಡಾಕ್ಷಣ ಎಚ್ಚರಿಸುವ ಅನುಕೂಲತೆಯಿರುತ್ತದೆ. ಸರ್ಕಾರೀ ಸಂಸ್ಥೆಗಳು ಯಾವುದೇ ಯೋಜನೆಯನ್ನು ಜಾರಿಗೆ ತರುವ ಮೊದಲೇ ಅದರ ಸಾಧಕ–ಬಾಧಕಗಳನ್ನು ಕಂಡುಕೊಳ್ಳುವ ಸೌಲಭ್ಯವಿರುತ್ತದೆ.

ಇದರಿಂದಾಗಿ ಅವೈಜ್ಞಾನಿಕ ಯೋಜನೆಗಳನ್ನು ತಡೆಗಟ್ಟಬಹುದು. ಮುಂದೊಂದು ದಿನ ರಸ್ತೆಗಳಲ್ಲಿ ಬರೀ ಡ್ರೈವರ್‌ಲೆಸ್ ಕಾರುಗಳೇ ಸಾಗುತ್ತಿರುತ್ತವೆ. ಯಾವ ಜಾಗಕ್ಕೆ ತಲುಪಬೇಕೆಂದು ನಿರ್ದೇಶನ ಕೊಟ್ಟರೆ, ಅದು ಮ್ಯಾಪಿನ ಮೂಲಕ ದಾರಿ ಹುಡುಕಿಕೊಂಡು, ಇನ್ನಿತರ ಕಾರುಗಳ ಚಲನವಲನಗಳನ್ನು ಗ್ರಹಿಸಿ, ಬ್ರೇಕ್ ಹಾಕಬೇಕಾದ ಸಂದರ್ಭದಲ್ಲಿ ಬ್ರೇಕ್ ಹಾಕಿ, ತನ್ನ ಪಾಡಿಗೆ ತಾನು ಸಾಗುತ್ತ ನಿಮ್ಮನ್ನು ಸೇರಿಸಬೇಕಾದ ಜಾಗಕ್ಕೆ ಸೇರಿಸುತ್ತದೆ. ಇದರಿಂದಾಗಿ ರಸ್ತೆ ಅಪಘಾತಗಳು ಕಡಿಮೆಯಾಗುತ್ತವೆ. ಟ್ರಾಫಿಕ್ ಜಾಮ್ ಕಡಿಮೆಯಾಗುತ್ತದೆ’’.

‘ಮೊದಲು ನಮ್ಮ ದೇಶದ ರಸ್ತೆಗಳು ಸರಿಹೋದರೆ ತಾನೆ ಇಂಥ ಕಾರುಗಳು ಇಲ್ಲಿ ಕಾಲಿಡುವುದಕ್ಕೆ ಸಾಧ್ಯ?’ ಎಂದು ನಾವಿದನ್ನು ವ್ಯಂಗ್ಯ ಮಾಡಬಹುದು. ಇದೆಲ್ಲ ಎಷ್ಟರಮಟ್ಟಿಗೆ ಜಾರಿಗೆ ಬರಬಹುದೆನ್ನುವುದು ಬೇರೆ ವಿಚಾರ. ಆದರೆ, ತಂತ್ರಜ್ಞಾನ ಕ್ಷೇತ್ರದಲ್ಲಿ ಈಗಾಗಲೇ ಇಂಥ ಕಲ್ಪನೆ ಮೂಡಿ ಅದನ್ನು ಕಾರ್ಯಗೊತಗೊಳಿಸುವ ಎಲ್ಲ ಪ್ರಯತ್ನಗಳು ಮುಂದುವರೆಯುತ್ತಿದೆ.

ಆ ಪ್ರಯತ್ನದಲ್ಲಿ ಟೆಕ್ನಾಲಜಿಯ ಬೆಳವಣಿಗೆಗೆ ಎರಡು ಮುಖವಿದೆ. ಮೊದಲನೆಯದು – ಐ.ಟಿ ಕ್ಷೇತ್ರದಲ್ಲಿ ಸರ್ವೇಸಾಮಾನ್ಯವಾದ ಹೊಸ ಸಾಫ್ಟ್‌ವೇರುಗಳ ಬೆಳವಣಿಗೆ. ದಶಕದ ಹಿಂದೆ ಯಾವ ಸಾಫ್ಟ್‌ವೇರಿಗೆ ಬಹುಬೇಡಿಕೆ ಇತ್ತೋ ಯಾವುದರಲ್ಲಿ ನಾವು ಪರಿಣತರು ಎನಿಸಿಕೊಂಡಿದ್ದೆವೋ, ಅದೇ ಸಾಫ್ಟ್‌ವೇರು ನಮ್ಮ ಕಣ್ಣೆದುರೇ ಬೇಡಿಕೆ ಕಳೆದುಕೊಂಡು ಮೂಲೆಗುಂಪಾಗಿರುವುದನ್ನು ನೋಡಿದ್ದೇವೆ.

ಮತ್ತು, ಇದು ಎಲ್ಲರಿಗೂ ಗೊತ್ತಿರುವ ಸಂಗತಿಯೇ ಆಗಿರುವುದರಿಂದ ಕಾಲಕಾಲಕ್ಕೆ ನಾವು ಅಪ್‌ಡೇಟ್ ಆಗಬೇಕಾಗುತ್ತದೆ. ಇದು ನಿಜಕ್ಕೂ ‘ಕಲಿ’ಯುಗ. ಅದೇ ಸಮಯಕ್ಕೆ ಇಲ್ಲಿ ಮತ್ತೊಂದು ಪವಾಡವು ನಡೆದಿದೆ. ಕಂಪ್ಯೂಟರ್ ಪ್ರೋಗ್ರಾಮಿಂಗ್‌ನಲ್ಲಿ ಯಾವುದನ್ನು ‘ಮೆಶೀನ್ ಲ್ಯಾಂಗ್ವೇಜ್’ (ಕಂಪ್ಯೂಟರಿನ ತಳಮಟ್ಟದ ಭಾಷೆ) ಎನ್ನುತ್ತೇವೋ, ಅದನ್ನು ಹಿಂದಿನ ಕಾಲದಲ್ಲಿ ಬಳಸಲಾಗುತ್ತಿತ್ತು.

ಕಾಲಕ್ರಮೇಣ ಅದಕ್ಕಿಂತ ಸುಲಭದ ಭಾಷೆಗಳು ಬಂದು ಅದರ ಬಳಕೆಯೇ ನಿಂತುಹೋಯಿತು. ಈಗ ಮತ್ತೆ ಮೆಶೀನ್ ಲ್ಯಾಂಗ್ವೇಜಿಗೆ ಬೇಡಿಕೆ ಬಂದಿದೆ. ಅದರ ಪುನರುತ್ಥಾನದಿಂದ ತಂತ್ರಜ್ಞಾನ ಕ್ಷೇತ್ರದಲ್ಲಿ ದೊಡ್ಡದೊಂದು ಕ್ರಾಂತಿಯೇ ಆಗಲಿದೆ ಎಂದು ನಂಬಲಾಗಿದೆ.

ತಂತ್ರಜ್ಞಾನದಿಂದ ಆಗಬಹುದಾದ ಕ್ರಾಂತಿಯಿಂದಾಗಿ ಮನುಷ್ಯ ಕೆಲಸ ಕಳೆದುಕೊಳ್ಳಲಿದ್ದಾನೆ ಅನ್ನುವುದು ಮೇಲ್ಮಟ್ಟದಲ್ಲಿ ಸರಿ. ಆದರೆ, ನಾವು ಈಗಾಗಲೇ ನೋಡಿರುವ ಹಾಗೆ ತಂತ್ರಜ್ಞಾನದ ಬೆಳವಣಿಗೆಯ ಅಗಾಧತೆಯ ಹಿನ್ನಲೆಯಲ್ಲಿ, ಅದರ ಕ್ಷೇತ್ರವಿಸ್ತಾರವನ್ನು ಗಮನದಲ್ಲಿಟ್ಟುಕೊಂಡು ‘ಕೆಲಸ ಕಳೆದುಕೊಳ್ಳುವ’ ಮಾತನ್ನು ಗ್ರಹಿಸಬೇಕು.

ವೈದ್ಯರೇ ಇರದ ಆಸ್ಪತ್ರೆಗಳು, ಶಿಕ್ಷಕರ ಅಗತ್ಯವಿರದ ಶಾಲೆಗಳು, ಡ್ರೈವರ್‌ಗಳು ಬೇಕಿರದ ವಾಹನಗಳು, ವರದಿಗಾರರೇ ಬೇಕಿರದ ಪತ್ರಿಕೆಗಳು, ಮುಂತಾದ ಅನೇಕ ಸಂಗತಿಗಳಿವೆ. ಆಗ ಶಾಲೆಗಳ ಡೊನೇಷನ್ ಭೂತದಿಂದ ಬಿಡುಗಡೆ ಸಿಗಲಿದೆ. ಭ್ರಷ್ಟಾಚಾರಕ್ಕೆ ಕಡಿವಾಣ ಬೀಳಲಿದೆ. ಮಧ್ಯವರ್ತಿಗಳ ಹಾವಳಿ ನಿಲ್ಲಲಿದೆ. ಆಗ ಯಾರೂ ಮಾಡಬಹುದಾದ ಕೆಲಸಗಳನ್ನು ಮಾಡುವುದಕ್ಕೆ ಮನುಷ್ಯರು ಬೇಕಿರುವುದಿಲ್ಲ.

ವಿಶೇಷ ಪರಿಣತಿ ಹೊಂದಿದವರಿಗೆ ಮಾತ್ರ ಬೇಡಿಕೆ ಇರುತ್ತದೆ. ಮುಂದೆ ಅದೂ ಇರುವುದಿಲ್ಲ. ಒಂದು ವಾದದ ಪ್ರಕಾರ, ಮುಂದೊಂದು ದಿನ ಈ ಜಗತ್ತಿನಲ್ಲಿ ದವಸ–ಧಾನ್ಯ, ಹಣ್ಣು, ತರಕಾರಿ, ಹಣ, ವಾಹನ, ವಿದ್ಯುತ್, ಎಲ್ಲವೂ ವಿಪುಲ­ವಾಗಿರುತ್ತದೆ. ಯಾರಿಗೂ ಯಾವುದಕ್ಕೂ ಕೊರೆತೆಯಿರುವುದಿಲ್ಲ.

ತಂತ್ರಜ್ಞಾನವೂ ಮುಂದುವರೆದಿರುತ್ತದೆ. ಶ್ರಮ ಪಡಬೇಕಾಗಿಯೂ ಇಲ್ಲ. ರೋಗ–ರುಜಿನಗಳು ಕಡಿಮೆಯಾಗಿ ಮನುಷ್ಯನ ಆಯಸ್ಸು ಹೆಚ್ಚಿದರೂ ಹೆಚ್ಚಬಹುದೆಂದು ನಂಬಲಾಗಿದೆ. ಅದರೆ, ಮನುಷ್ಯನಿಗೆ ಮಾಡುವುದಕ್ಕೆ ಕೆಲಸವೇ ಇರುವುದಿಲ್ಲ.

ಕೆಲಸವೇ ಇಲ್ಲದಿರುವಾಗ ಆಗುವ ಅನಾಹುತವೆಂದರೆ, ಮನುಷ್ಯ ತನ್ನ ಕೌಶಲವನ್ನೆಲ್ಲ ರೋಬೋಗಳಿಗೆ ವರ್ಗಾಯಿಸಿದ ಮೇಲೆ ಆ ಜ್ಞಾನವೇ ಹುದುಗಿಬಿಡುತ್ತದೆ. ಪುನಃ ಮನುಷ್ಯ ಆ ಪರಿಣತಿಯನ್ನು ಹೊಂದುವ ಮಾರ್ಗವೇ ಇಲ್ಲದಂತಾಗುತ್ತದೆ. ಮನುಷ್ಯ ನಿಷ್ಪ್ರಯೋಜಕನಾಗುತ್ತ ಹೋಗುತ್ತಾನೆ. ಆಗ ಸುಮ್ಮನೆ ಕೂತಿದ್ದರೂ ಸುಮ್ಮನಿರಲಾಗದ ಧಾವಂತ ಹೆಚ್ಚುತ್ತದೆ.

ಮನುಷ್ಯ ವ್ಯಗ್ರನಾಗುತ್ತಾನೆ. ಮನುಷ್ಯನಿಗೆ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ತವಕ ಹೆಚ್ಚುತ್ತದೆ (ಈಗಿನ ಸಾಮಾಜಿಕ ಜಾಲತಾಣಗಳು ಇದರ ಸಣ್ಣ ತುಣುಕಷ್ಟೇ). ಜಗತ್ತಿನ ಎಲ್ಲ ಸಮಸ್ಯೆಗಳಿಗೂ ತನ್ನನ್ನು ತಾನು ಸ್ಥಾಪಿಸಿಕೊಳ್ಳುವ ಈ ಧಾವಂತವೇ ಮೂಲಕಾರಣ. ತಾನೇ ತನ್ನನ್ನು ನಾಶ ಮಾಡಿಕೊಳ್ಳುವ ಸುಂದರ ಬೆಳವಣಿಗೆ ಇದು.

ಇದೆಲ್ಲವೂ ಮುಂದೊಂದು ದಿನದ ಮಾತಾಯಿತು. ಆಗುವುದೋ ಇಲ್ಲವೋ. ಆದರೆ ನಮಗೆ ನಮ್ಮ ಬೆಳವಣಿಗೆಯ ಈಗಿನ ಸಮಸ್ಯೆಗಳೇ ಸರಿಯಾಗಿ ಅರ್ಥವಾದಂತಿಲ್ಲ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ನಮಗೆಲ್ಲ ತಿಳಿದಿರುವುದೇ ಆಗಿದೆ. ಅದಕ್ಕಾಗಿ ಸರ್ಕಾರವನ್ನು, ಐ.ಟಿ–ಬಿ.ಟಿ ಬೆಳವಣಿಗೆಯನ್ನು ದೂರುತ್ತೇವೆ.

‘ಬೆಂಗಳೂರು ಬಿಟ್ಟು ಹೊರಹೋಗುತ್ತೇವೆ’ ಅಂತ ಧಮಕಿ ಹಾಕುತ್ತಾರೆ. ದಿನವಿಡೀ ರಸ್ತೆಯಲ್ಲೇ ಕಳೆಯಬೇಕಾದ ಬಗ್ಗೆ ಜೋಕುಗಳು ಹರಿದಾಡುತ್ತವೆ. ಎಲ್ಲವೂ ಸರಿ. ಆದರೆ ಇವೆಲ್ಲವನ್ನೂ ಮೀರಿದ ಖೇದವೊಂದು ಇತ್ತೀಚೆಗೆ ನನ್ನನ್ನು ಆವರಿಸಿತು.

ಸ್ನೇಹಿತರೊಬ್ಬರನ್ನು ಭೇಟಿ ಮಾಡಲು ನಿಗದಿಯಾದ ಸಮಯಕ್ಕೆ ಹತ್ತು ನಿಮಿಷ ಮುಂಚಿತವಾಗಿ ತಲುಪಬೇಕೆಂದು, ನಾನು ಬೇಗನೆ ಮನೆಯಿಂದ ಹೊರಟೆ. ಆದರೂ ಟ್ರಾಫಿಕ್ಕಿನಲ್ಲಿ ಸಿಲುಕಿ ಅಲ್ಲಿಗೆ ತಲುಪುವುದು ಹದಿನೈದು ನಿಮಿಷ ತಡವಾಯಿತು. ತಲುಪಿದ ಮೇಲೆ ತಡವಾಗಿದ್ದಕ್ಕೆ ಏನೆಂದು ಕ್ಷಮೆ ಕೇಳಬೇಕೆನ್ನುವುದು ಹೊಳೆಯಲಿಲ್ಲ.

‘ಟ್ರಾಫಿಕ್ ಇದ್ದ ಕಾರಣ ತಡವಾಯಿತು, ಸಾರಿ’ ಎನ್ನಬೇಕು. ಅವರು ಅದಕ್ಕೆ, ‘ಇರಲಿ ಬಿಡಿ’ ಎಂದುಬಿಡುವರು! ಅಥವ ನಾನು ಕೇಳುವ ಮುಂಚೆಯೇ ‘ಏನು? ತುಂಬ ಟ್ರಾಫಿಕ್ ಇತ್ತಾ?’ ಎಂದು ಸ್ವಾಗತಿಸಬಹುದು.

ಇಲ್ಲಿ ಎಂಥ ದುರಂತವಿದೆಯೆಂದರೆ, ನಾನು ಸಮಯಕ್ಕೆ ಸರಿಯಾಗಿ ತಲುಪಲಾಗದೇ ಇರುವುದಕ್ಕೆ ಡ್ರೈವ್ ಮಾಡುತ್ತಿರುವಾಗ ನಿಜವಾಗಿ ಸಂಕಟಪಟ್ಟಿದ್ದರೂ, ಟ್ರಾಫಿಕ್ ಸಮಸ್ಯೆಯ ನೆಪವು ಈಗಾಗಲೇ ಒಪ್ಪಿತ ಸತ್ಯವೋ ಸುಳ್ಳೋ ಆಗಿರುವುದರಿಂದ ಆ ಸಂಕಟಕ್ಕೆ ಬೆಲೆಯೇ ಇಲ್ಲದಂತಾಗಿದೆ.

ಅಂದರೆ, ನಾವು ಟ್ರಾಫಿಕ್‌ನಿಂದಾಗಿ ತಡವಾಯಿತು ಎನ್ನುವ ಮಾತನ್ನು ಎಲ್ಲ ಸಂದರ್ಭಕ್ಕೂ ಉಪಯೋಗಿಸಿ ಎಷ್ಟು ಅಬ್ಯೂಸ್ ಮಾಡಿದ್ದೇವೆಂದರೆ, ಆ ಮಾತು ಸತ್ಯವೂ ಅಲ್ಲದ ಸುಳ್ಳೂ ಅಲ್ಲದ ನಿರುಪಯುಕ್ತ ಔಪಚಾರಿಕ ಮಾತಾಗಿ ಸತ್ತುಹೋಗಿದೆ. ಟ್ರಾಫಿಕ್ ಸಲುವಾಗಿ ರಸ್ತೆಯಲ್ಲಿ ಒಂದೂವರೆಗಂಟೆ ಪ್ರಯಾಣಿಸುವ ಯಾತನೆಗಿಂತ, ನಮ್ಮ ಪ್ರಾಮಾಣಿಕ ಸಂಕಟಗಳು ಮತ್ತು ಮಾತುಗಳು ಹೀಗೆ ಅರ್ಥಹೀನವಾಗುವ ಯಾತನೆ ದೊಡ್ಡದು.

ನಾವು ಇದುವರೆಗೆ ಸಾಧಿಸಿದ ಬೆಳವಣಿಗೆ ಮತ್ತು ಮುಂದೆ ಸಾಧಿಸಲಿರುವ ಬೆಳವಣಿಗೆಯ ಬಗ್ಗೆ ನಮ್ಮಲ್ಲಿ ಹಪ್ಪಳ ಮಾಡುವ ಕ್ರಿಯೆಯ ಬಗೆಗಿರುವ ಎರಡು ಧೋರಣೆಗಳನ್ನು ಗಮನಿಸುವುದರೊಂದಿಗೆ ಈ ಬರವಣಿಗೆಯನ್ನು ನಿಲ್ಲಿಸುತ್ತೇನೆ. ನಂದನ್ ನಿಲೇಕಣಿಯವರು ತಮ್ಮ ‘ಇಮ್ಯಾಜಿನಿಂಗ್ ಇಂಡಿಯಾ’ ಪುಸ್ತಕದಲ್ಲಿ ಒಂದು ಕಡೆ, ‘ಹಿಂದಿನ ಕಾಲದಲ್ಲಿ ಹೆಂಗಸರು ಹಪ್ಪಳ–ಸಂಡಿಗೆ ಮಾಡುವುದಕ್ಕೆ ದಿನಗಟ್ಟಲೆ ವ್ಯಯಿಸುತ್ತಿದ್ದರು.

ಈಗಿನ ಮಾರುಕಟ್ಟೆ ವ್ಯವಸ್ಥೆಯಿಂದಾಗಿ ಅವರು ಅದಕ್ಕಾಗಿ ಒದ್ದಾಡಬೇಕಿಲ್ಲ. ಸುಲಭವಾಗಿ ಅಂಗಡಿಗೆ ಹೋಗಿ ರೆಡಿಮೇಡ್ ಹಪ್ಪಳವನ್ನು ಖರೀದಿಸಬಹುದು. ಹಪ್ಪಳ–ಸಂಡಿಗೆ ಮಾಡುವ ಸಮಯವನ್ನು ಬೇರೆ ಉಪಯುಕ್ತ ಕೆಲಸಗಳಿಗೆ ದುಡಿಮೆಗೆ ಮೀಸಲಿಡಬಹುದು. ಇದು ದೇಶದ ಆರ್ಥಿಕ ಬೆಳವಣಿಗೆಗೆ ಸಹಾಯಕವಾಗಿದೆ’ ಎಂದು ಬರೆಯುತ್ತಾರೆ.

ಶಿವರಾಮ ಕಾರಂತರು ತಮ್ಮ ‘ಮರಳಿ ಮಣ್ಣಿಗೆ’ ಕಾದಂಬರಿಯಲ್ಲಿ, ಕರಾವಳಿ ಪ್ರದೇಶದ ಮನೆಗಳಲ್ಲಿ ಹಪ್ಪಳ ಮಾಡುವ ಸಂಗತಿಯನ್ನು ಸವಿಸ್ತಾರವಾಗಿ ಬರೆದಿದ್ದಾರೆ. ಆ ಕ್ರಿಯೆಯಲ್ಲಿ ಮನುಷ್ಯರ ನಡುವಿನ ಭಾವಗಳು ಬೆಸೆಯುವುದನ್ನು ಕಾಣಿಸುತ್ತಾರೆ.

ಹಪ್ಪಳ–ಸಂಡಿಗೆ ಮಾಡುವುದಕ್ಕೆ ಮೂರು ದಿನ ಊರಿನ ಹೆಂಗಸರು, ಮನೆಯ ಹೆಂಗಸರು ಸೇರುವುದೇ ಬದುಕಿನ ಮನೋಲ್ಲಾಸಕಾರಿಯಾದ ಕ್ಷಣಗಳು ಎನ್ನುವ ಭಾವ ಕವಿಯಲ್ಲಿ ಸಾಹಿತಿಯಲ್ಲಿ ಭಾವುಕರಲ್ಲಿರುತ್ತದೆ. ಅದು ಇರುವವರೆಗೆ ಮಾತ್ರ ನಮ್ಮೊಳಗಿನ ತೇವ ನಮ್ಮನ್ನು ಕಾಪಾಡುತ್ತದೆ.

ಎಲ್ಲವನ್ನೂ ಕೇವಲ ವ್ಯಾವಹಾರಿಕ ದೃಷ್ಟಿಕೋನದಿಂದ ನೋಡುತ್ತ, ಅತಿಬುದ್ಧಿವಂತರಾ ಗುತ್ತ, ಪ್ರತಿದಿನವೂ ತಂತ್ರಜ್ಞಾನ ಬದಲಾಗುತ್ತ, ನಿರಂತರ ಕಲಿಕೆಯ ಅನಿವಾರ್ಯತೆ ಹೆಚ್ಚುತ್ತ ಹೋಗುವುದೇ ಬಹುಶಃ ‘ಕಲಿ’ಗಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT