ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಮ್ಮೊಡನಿದ್ದೂ ನಿಮ್ಮಂತಾಗದೆ...

Last Updated 20 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘‘ಇಲ್ಲಿ ನಾವು ಕಾಣುವ, ಗದ್ಯಮುಖೇನವೂ ವಿವರಿಸಬಹುದಾಗಿದ್ದ ಪರಿಕಲ್ಪನೆಗಳನ್ನು ಕಾವ್ಯವಾಗಿ ಪ್ರಸ್ತುತಪಡಿಸಿರುವುದೇ ಒಂದು ಸೂಚನೆಯಂತಿದೆ. ಇಲ್ಲಿನ ಭಾಷೆಯನ್ನು – ಪ್ರತಿಶಬ್ದ, ಶಬ್ದಗಳ ನಡುವೆ ಉದ್ದೇಶಪೂರ್ವಕ ಕಾಯ್ದುಕೊಂಡ ಅಂತರ, ಪ್ರತಿಸಾಲನ್ನು ಒಡೆದ ವಿನ್ಯಾಸವೂ ಸೇರಿದಂತೆ – ಭಾಷೆಯನ್ನು ಬಳಸಿರುವ ರೀತಿ ಓದುಗ ಇಲ್ಲಿನ ಪ್ರತಿಯೊಂದೂ ಏನನ್ನೋ ಹೇಳುತ್ತಿದೆ ಎಂಬ ಎಚ್ಚರದಿಂದ ಇದನ್ನು ಗಮನಿಸಬೇಕೆಂದು ಸೂಚಿಸುವಂತಿದೆ.

ಒಬ್ಬ ನಿಪುಣ ಕುಶಲಿಯ ನುರಿತ ಹದವನ್ನು ಕಾಯ್ದುಕೊಂಡು ನಾರಾಯಣನ್ ತಮ್ಮ ಓದುಗರೊಂದಿಗೆ ತೊಡಗುವ ಈ ಪಯಣದಲ್ಲಿ ‘ಇತಿಹಾಸವು ವರ್ತಮಾನದೊಂದಿಗೆ ಜೀವಂತವಾಗಿದ್ದು ಉಸಿರಾಡುತ್ತಿರಬೇಕೇ ಹೊರತು ಅದು ಸತ್ತ ದೇಹವನ್ನು ಕಾದಿರಿಸಿದಂತೆ ರಕ್ಷಿಸಲ್ಪಡಬೇಕಾದ ವಸ್ತುವಲ್ಲ’; ‘ಭಾಷೆ ಮತ್ತು ಕವಿತೆ ನಿತ್ಯಕುತೂಹಲಿಯೂ, ಜಾಗೃತವೂ ಆದ ಮನಸ್ಸಿಗೆ ಒಂದು ಕೀಲಿಗೈಯಿದ್ದಂತೆ’ – ಎಂಬಂಥ ಒಳನೋಟಗಳನ್ನು ಹೇಳದೇನೆ ಕಾಣಿಸುತ್ತಾ ಹೋಗುತ್ತಾರೆ’’.

ಈ ಮಾತುಗಳನ್ನು ವಿವೇಕ್ ನಾರಾಯಣನ್ ಅವರ ಕವಿತೆಗಳ ಬಗ್ಗೆ ಬರೆದಿದ್ದು, ಸರಿಯೇ. ಆದರೆ ಇದು ಯಾರ ಬಗ್ಗೆ ಎನ್ನುವುದಕ್ಕಿಂತ ಹೆಚ್ಚು ಆಸಕ್ತಿ ಹುಟ್ಟಿಸಿದ್ದು ಈ ಮಾತುಗಳನ್ನು ಬರೆದ ವ್ಯಕ್ತಿ ಯಾರಿರಬಹುದೆಂಬ ಕುತೂಹಲವೇ! ಹಾಗೆ ನನಗೆ ಸಿಕ್ಕಿದವರು ಅಥೆನಾ ಕಶ್ಯಪ್.

ಅಥೆನಾ ಕಶ್ಯಪ್ ಸ್ವತಃ ಕವಿ. ಇದುವರೆಗೆ ಪ್ರಕಟವಾಗಿರುವುದು ಒಂದೇ ಒಂದು ಕವನ ಸಂಕಲನ. ಅದರಿಂದಲೇ ಸಾಕಷ್ಟು ಖ್ಯಾತರಾದವರು. ಸಂಕಲನದ ಹೆಸರು ‘ಕ್ರಾಸಿಂಗ್ ಬ್ಲ್ಯಾಕ್ ವಾಟರ್ಸ್’. ಹದಿನೆಂಟರ ಹರಯದಲ್ಲೇ ಭಾರತದಿಂದ ಅಮೆರಿಕೆಗೆ ವಲಸೆ ಹೋದ ಅಥೆನಾ, ಎಂಎ ಪದವಿ ಪಡೆದಿದ್ದು, ಕಾವ್ಯದ ಕುರಿತು ಎಂ.ಎಫ್ಎ ಇತ್ಯಾದಿ ಮಾಡಿದ್ದೆಲ್ಲ ಅಲ್ಲಿಯೇ. ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಉದ್ಯೋಗ ಹಿಡಿದ ಅವರ ಕವನಸಂಕಲನವನ್ನು ಪ್ರಕಟಿಸಿರುವುದು ‘ಸ್ಟೀಫನ್ ಎಫ್ ಆಸ್ಟಿನ್ ಸ್ಟೇಟ್ ಯೂನಿವರ್ಸಿಟಿ ಪ್ರೆಸ್’.ಅವರ ಎರಡನೆಯ ಕವನಸಂಕಲನ ‘ಸೀತಾ ಆಫ್ ದಿ ಅರ್ಥ್ ಯಂಡ್ ಫಾರೆಸ್ಟ್ಸ್’ ಕೃತಿಯನ್ನು ಕೂಡ ‘ಎಸ್‌ಎಫ್‌ಎ’ ಪ್ರಕಟಿಸುವ ನಿರೀಕ್ಷೆಯಿದೆ.

ಅಲ್ಲಿ ಇಲ್ಲಿ ಓದಿದ ಅಥೆನಾ ಅವರ ಒಂದೆರಡು ಕವಿತೆಗಳು, ಅವುಗಳ ಕುರಿತ ಚರ್ಚೆ – ಎಲ್ಲವೂ ಅವರ ಕವಿತೆಗಳನ್ನು ಓದಬೇಕೆಂಬ ಒತ್ತಡ ಹೆಚ್ಚಿಸುತ್ತಲೇ ಇದ್ದವು. ಇದೆಲ್ಲಕ್ಕಿಂತ ಮುಖ್ಯವೆನಿಸಿದ್ದು ಬೆಂಗಳೂರಿನೊಂದಿಗೆ ಅವರಿಗಿರುವ ನಂಟು! ತನ್ನ ಹದಿನೆಂಟನೆಯ ವಯಸ್ಸಿನಲ್ಲಿ ದೇಶ ಬಿಟ್ಟು ಅಮೆರಿಕಕ್ಕೆ ತೆರಳುವವರೆಗೆ ಅಥೆನಾ ಬೆಳೆದಿದ್ದು, ಕಲಿತಿದ್ದು ಬೆಂಗಳೂರಿನಲ್ಲಿಯೇ. 

ಇಲ್ಲಿ ಹುಟ್ಟಿ, ಬಾಲ್ಯದ ಅಪೂರ್ವ ಸ್ಮೃತಿಯನ್ನೆಲ್ಲ ತಮ್ಮ ವ್ಯಕ್ತಿತ್ವದ ಭಾಗವಾಗಿಸಿಕೊಂಡು ಬೆಳೆದು, ಹುಟ್ಟಿದೂರು, ಭಾಷೆ, ದೇಶ ಎಲ್ಲವನ್ನೂ ಬಿಟ್ಟು, ಇನ್ನೆಲ್ಲೊ ಬೇರುಗಳನ್ನಿಳಿಸಿ, ಹಾಗೆ ಅಲ್ಲಿಂದ ಕಿತ್ತು ತಂದ ಜೀವದ್ರವ್ಯವನ್ನು ಇಲ್ಲಿ ಜೀವಂತಗೊಳಿಸಿಕೊಳ್ಳಲು ಬಯಸುವ ಎಲ್ಲರನ್ನೂ ಕಾಡುವ ಒಂದು ತಂತು ಸದಾಕಾಲ ಅಲ್ಲಿಗೂ ಇಲ್ಲಿಗೂ ಒಂದು ನಂಟು ಬೆಸೆಯುತ್ತಲೇ, ಜೀವಂತಿಕೆಯಿಂದ ತುಡಿಯುತ್ತಲೇ ಇರುತ್ತದೆ. ಅಥೆನಾ ಕಶ್ಯಪರ ಕವಿತೆಗಳಲ್ಲಿ ಬಹುಮುಖ್ಯವಾಗಿ ನಾವು ಕಾಣುವ ಎಳೆ ಇದುವೇ ಎನ್ನುವುದು ನಿಜ.

ಆದರೆ ಈ ಬಗೆಯ ಒಂದು ‘ಅನ್ಯ ಪ್ರಜ್ಞೆ’ ಹಲವು ಸ್ತರಗಳಲ್ಲಿ ನಮ್ಮನ್ನು ಕಾಡಬಹುದಾದ ಹತ್ತು ಹಲವು ಆಯಾಮಗಳಿವೆ ಎನ್ನುವುದು ಕೂಡ ಇವೇ ಕವಿತೆಗಳ ನೆಲೆಯಲ್ಲಿ ನಿಜ. ಅಂದರೆ, ಊರು–ಪರವೂರು, ದೇಶ–ಪರದೇಶಗಳಷ್ಟೇ ಈ ‘ಅನ್ಯ ಪ್ರಜ್ಞೆ’ಗೆ ಕಾರಣವಾಗಬೇಕಿಲ್ಲ. ಒಂದು ನಾಯಿ ಕೂಡ ತನ್ನದು ಎನ್ನುವ ಪ್ರದೇಶಕ್ಕೆ ಗಡಿರೇಖೆಗಳನ್ನಿರಿಸಿಕೊಂಡು ಸ್ವಸ್ಥಭಾವ ತಾಳುತ್ತದೆ, ಅಲ್ಲಿಗೆ ಬೇರೆ ನಾಯಿಯ ಪ್ರವೇಶವನ್ನು ಪ್ರತಿರೋಧಿಸುತ್ತದೆ.

ಹಾಗೆಯೇ ಮನುಷ್ಯ ದೇಹವು ಕೂಡ ಬೇರೊಂದು ದೇಹವನ್ನು ತೀರ ಸನಿಹಕ್ಕೆ ಬಿಟ್ಟುಕೊಳ್ಳುವ ಮುನ್ನ ಪ್ರತಿರೋಧವನ್ನೊಡ್ಡುವುದೋ ಹಿತವನ್ನು ಕಾಣುವುದೋ ಮಾಡುತ್ತಿರುತ್ತದೆ. ಮನಸ್ಸು ಅನುಭವಿಸುವ ಅನ್ಯಪ್ರಜ್ಞೆಗೆ ಕೂಡ ಹಲವು ಹತ್ತು ಕಾರಣಗಳಿರಲು ಸಾಧ್ಯ. ಇದೊಂದು ಭೌತಿಕವೂ ಅಲ್ಲದ ಅಮೂರ್ತವೂ ಅಲ್ಲದ ವಿಸಂಗತಿ ಎನ್ನುವುದಂತೂ ಅಥೆನಾ ಕಶ್ಯಪರ ಕವಿತೆಗಳ ಓದಿನಿಂದ ಮನನವಾಗುತ್ತ ಹೋಗುತ್ತದೆ.

ಮನುಷ್ಯನ ಗಡಿರೇಖೆಗಳು ಯಾವುವು? ದೇಹ ಒಂದು ಗಡಿ. ಅದನ್ನು ಮೀರಿದಾಗ ಅವನು ಅಸ್ತಿತ್ವವನ್ನು ಕಳೆದುಕೊಳ್ಳುತ್ತಾನೆ ಎನ್ನುವುದು ನಮ್ಮ ನಂಬಿಕೆ. ಮನಸ್ಸು ಒಂದು ಗಡಿಯಾದರೂ ಅದನ್ನು ದಾಟಿದವರು ಇದ್ದಾರೋ ಇಲ್ಲವೊ! ‘ಬೃಹದಾರಣ್ಯಕ ಉಪನಿಷತ್ತು’ ದಾಟುವುದನ್ನು ನಿಷೇಧಿಸುವ ಒಂದು ವಿಧಾಯಕವನ್ನು ಹೇಳುತ್ತದೆ.

ಅದು ಗಡಿ ದಾಟುವ ಬಗ್ಗೆ, ದಾಟಿದವರ ಬಗ್ಗೆ ಇರುವಂತೆಯೇ ಸಾಗರವನ್ನು ದಾಟುವ ಕುರಿತೂ ಇದೆ ಎನ್ನುವುದಾದರೆ – ‘ಕ್ರಾಸಿಂಗ್ ಬ್ಲ್ಯಾಕ್ ವಾಟರ್ಸ್’ ಸಂಕಲನದ ಕವಿತೆಗಳಿಗೆ ಆ ನಿಟ್ಟಿನ ಅರ್ಥದ ಗಡಿಗಳ ಹಂಗೂ ಇದೆ! ಹಾಗೆ ಅಥೆನಾ ಹಿರಿಯರು ದೇಶ ವಿಭಜನೆಯ ತಲ್ಲಣವನ್ನು ಕಂಡವರು, ಲಾಹೋರನ್ನು ತ್ಯಜಿಸಿ ಬಂದವರು. ಮುಂದೆ ಅವಕಾಶವನ್ನರಸಿ ವಿದೇಶಕ್ಕೆ ಹಾರಿ ಹೋದವರು.

ಇಪ್ಪತ್ತೊಂದನೆಯ ಶತಮಾನದ ಜಾಗತಿಕ ಗ್ರಾಮದ ಪರಿಕಲ್ಪನೆಯಲ್ಲಿ ವಲಸೆ, ದೇಶಿ–ಪರದೇಶಿ ಪರಿಕಲ್ಪನೆಗಳೇ ಅರ್ಥ ಕಳೆದುಕೊಂಡಿವೆ ಎನ್ನುವುದು ಅವರಿಗೆ ಗೊತ್ತು. ಆದರೆ ನಿಸಾರರ ‘ನಿಮ್ಮೊಡನಿದ್ದೂ ನಿಮ್ಮಂತಾಗದೆ’ ಕವಿತೆಯ ಭಾವ ಯಾವತ್ತಿಗೂ ಪ್ರಸ್ತುತವಾಗಿಯೇ ಉಳಿದುಬಿಟ್ಟಿರುವುದನ್ನು ಕೂಡ ಕಂಡುಕೊಂಡವರು! ನಾವು ಕಾಯಂ ಆಗಿ ಕಳೆದುಕೊಂಡ ನಮ್ಮ ಪ್ರೀತಿಪಾತ್ರರ ಕುರಿತ ತೀವ್ರವಾದ ಹಂಬಲ, ಒಂದು ಕಾಲಾವಧಿಗೂ ಮೀರಿ ಅಷ್ಟು ಅಪೇಕ್ಷಿತವೂ ಅಲ್ಲ, ಅದು ಜೀವನ್ಮುಖಿಯಾದುದೂ ಅಲ್ಲ.

ಇಲ್ಲಿನ ಕೆಲವು ಕವಿತೆಗಳು ಅಂಥ ಹಂಬಲ, ನೆನಪುಗಳ ಭಾವುಕತೆಯಲ್ಲಿ ಅದ್ದಿದಂತಿವೆ. ಅಥೆನಾ ತಮ್ಮ ಒಂಬತ್ತನೆಯ ವಯಸ್ಸಿನಲ್ಲಿ ತಮ್ಮ ಮೂವತ್ತೊಂಬತ್ತರ ತಂದೆಯನ್ನು ಕಳೆದುಕೊಂಡವರು. ತಂದೆಯ ಕುರಿತ ಹಂಬಲ ಇಂದಿಗೂ ಅವರ ಕವಿತೆಗಳಲ್ಲಿ ಜೀವಂತವಾಗಿ ಉಸಿರಾಡುತ್ತಿದೆ. ಕವಿತೆಗಳು, ಅಲ್ಲಿನ ಶಬ್ದ, ಅಕ್ಷರ, ಭಾಷೆ – ಇವೆಲ್ಲವೂ ಅರ್ಥದ ಗಡಿರೇಖೆಗಳನ್ನು ಮೀರಿ ನಿಂತರೆ ಚೆನ್ನ.

ಹಾಗಾಗಿ ಅಥೆನ್ನಾರ ವ್ಯಕ್ತಿಗತ ಬದುಕಿನ ಯಾವೆಲ್ಲ ಅಂಶಗಳು ಈ ಕವಿತೆಗಳಿಗೆ ಪ್ರೇರಣೆಯನ್ನೊದಗಿಸಿವೆಯೋ ಆ ಅಂಶಗಳನ್ನು ತಿಳಿದೂ, ಈ ಕವಿತೆಗಳನ್ನು ಓದುವಾಗ ಅವುಗಳನ್ನು ಮರೆಯುವುದು ಅವಶ್ಯ. ಆಗಲೇ ನಮಗೆ ಕವಿತೆಗಳು ಎಲ್ಲ ಬಗೆಯ ಗಡಿಯೊಳಗಿನ ಮತ್ತು ಹೊರಗಿನ ಎರಡೂ ಹೊಳಹುಗಳನ್ನು ಒದಗಿಸಲು ಸಾಧ್ಯ. ನಮ್ಮ ಕವಿ ಕೆ.ವಿ. ತಿರುಮಲೇಶರ ಮಾತುಗಳು ಇಲ್ಲಿ ಹೆಚ್ಚು ಪ್ರಸ್ತುತ ಎನಿಸುತ್ತದೆ: ‘‘.... ‘ಕವಿತೆಯಾಗು’ ಅನ್ನುವ ಪದವನ್ನು ನಾನು ಒಂದು ಪ್ರಕ್ರಿಯೆಯಾಗಿ ಇಲ್ಲಿ ಬಳಸಿದ್ದೇನೆ;

ಯಾಕೆಂದರೆ, ಕವಿತೆ ಪ್ರತಿಯೊಂದು ಸಲವೂ ಕವಿತೆ ‘ಆಗಬೇಕಿದೆ.’ ಅದೊಂದು ಸಿದ್ಧವಸ್ತುವಲ್ಲ... ಕವಿತೆಯಾಗುವ ಸಂದರ್ಭವನ್ನು ಪ್ರತಿಬಾರಿಯೂ ಬದಲಿಸುತ್ತ ಹೋಗುವುದರಿಂದ ಮಾತ್ರವೆ ಇದು ಸಾಧ್ಯ. ಬದಲಿಸುವುದೆಂದರೆ ಹೊಸದಾಗಿಸುವುದು. ಕವಿತೆಯ ಸಾಮಾಜಿಕ ಸಂದರ್ಭ ಹೀಗಿರುತ್ತದೆ ಎಂದು ನಾನು ತಿಳಿದುಕೊಂಡಿದ್ದೇನೆ.

ಆದ್ದರಿಂದಲೇ ಅದು ಯಾವುದಕ್ಕೂ ಕಮಿಟೆಡ್ ಅರ್ಥಾತ್ ಬದ್ಧವಾಗಿರದೆ ಸ್ವತಂತ್ರವಾಗಿರಲು ಯತ್ನಿಸುವುದು. ಸ್ವಾತಂತ್ರ್ಯದ ಕುರಿತಾದ ಬದ್ಧತೆ ಮಾತ್ರವೇ ಅದಕ್ಕಿರುವ ಬದ್ಧತೆ... ಮಿಗುವುದೆಂದರೆ ಬರೀ ಮಿಗುವುದೇ ಅಂದುಕೊಳ್ಳೋಣ. ಅಂದರೆ ನಮಗೆ ದಕ್ಕಿಯೂ, ಇನ್ನೂ ಇದೆಯೆಂಬ ಭಾವನೆ’’ (‘ಕಾವ್ಯಕಾರಣ’, ಪುಟ ೧೮–೧೯).ಟೆಕ್ಸಾಸ್‌ನ ‘ಎ ಯಂಡ್ ಎಮ್ ಯೂನಿವರ್ಸಿಟಿ ಪ್ರೆಸ್’ ನಡೆಸಿದ ಸಂದರ್ಶನವೊಂದರಲ್ಲಿ ಅಥೆನಾ ತಮ್ಮ ಕವಿತೆಗಳ ಹಿಂದಿನ ಪ್ರೇರಣೆಗಳನ್ನು ವಿವರಿಸಿದ್ದಾರೆ.

‘‘ನನಗೆ ಬೇರೆ ಬೇರೆ ಬಗೆಯ ಗಡಿಗಳ ಬಗ್ಗೆ ಹೆಚ್ಚು ಹೆಚ್ಚು ಅರ್ಥಮಾಡಿಕೊಳ್ಳುವುದರಲ್ಲಿಯೂ ತುಂಬ ಆಸಕ್ತಿಯಿದೆ. ರಾಷ್ಟ್ರೀಯ ಗಡಿಗಳು, ಸ್ವಂತ ಮತ್ತು ಬೇರೆಯವರ ನಡುವಿನ ಗಡಿಗಳು, ಭೌಗೋಳಿಕವಾದ ಗಡಿಗಳು, ಬದುಕು ಮತ್ತು ಸಾವಿನ ನಡುವಿನ ಗಡಿ ಮತ್ತು ಕವನ ಮತ್ತು ಪುಟದ ನಡುವಿನವು. ನಾನು ಬದುಕು ಮತ್ತು ಸಾವಿನ ನಡುವಿನ ಗಡಿಗಳನ್ನು ಶೋಧಿಸುತ್ತಲೇ ವಾಸ್ತವ ಮತ್ತು ಕಲ್ಪನೆ/ಕಟ್ಟುಕತೆ/ಕಲೆಗಳ ನಡುವಿನ ಗಡಿಗಳನ್ನೂ ಶೋಧಿಸಿದ್ದೇನೆ.

ಒಂದಿಷ್ಟು ಕವಿತೆಗಳು ಪದ್ಯ ಮತ್ತು ಗದ್ಯದ ನಡುವೆ, ಕೆಲವೊಂದು ಹಾಳೆಯಲ್ಲಿ ಚದುರಿಸಿದ ಪದಗಳ ನಡುವೆ, ಸಾಲೊಂದರ ಪಾರಮ್ಯವನ್ನು ಪ್ರಶ್ನಿಸುತ್ತ, ಪಾರಂಪರಿಕ ಕವಿತೆಯ ಪರಿಕಲ್ಪನೆಯನ್ನು ಅಲ್ಲಗಳೆಯುತ್ತ ಹುಟ್ಟಿವೆ”. ಹೀಗೆ ಪಾರಂಪರಿಕ ಕಾವ್ಯದ ಪರಿಕಲ್ಪನೆಯನ್ನು ಅಲ್ಲಗಳೆಯುವ ಯತ್ನದ ಅಥೆನ್ನಾ ಅವರ ಕೆಲವು ಕವಿತೆಗಳನ್ನು ಇಲ್ಲಿ ಕನ್ನಡಕ್ಕೆ ತಂದಿದ್ದೇನೆ.

ಈ ಕವಿತೆಗಳ ಓದು, ಮೂಲದಲ್ಲಿ ಅವುಗಳನ್ನು ಓದುವ ಒತ್ತಡವನ್ನು ಸಹೃದಯರಲ್ಲಿ ಉಂಟುಮಾಡಲಿ ಎನ್ನುವ ಹಂಬಲ ನನ್ನದು. ಇಲ್ಲಿನ ಮೊದಲ ಕವಿತೆಯೇ ಸಂಕಲನದ ಹೆಸರಿನದು. ಬಹುಹಿಂದೆಯೇ ಸಿದ್ಧವಾಗಿದ್ದೂ ಮತ್ತೆ ಮತ್ತೆ ತಿದ್ದಿಸಿಕೊಳ್ಳುತ್ತಿರುವ ಅಥೆನ್ನಾ ಅವರ ಎರಡನೆಯ ಕವಿತಾ ಸಂಕಲನದ ಹೆಸರು ‘ಸೀತಾ ಆಫ್ ದಿ ಅರ್ಥ್ ಯಂಡ್ ಫಾರೆಸ್ಟ್ಸ್’ ಉಸುರುವ ಭಾವದಲ್ಲಿ ನೋಡಿದರೆ ಇಲ್ಲಿಯೂ ಸೀತೆಯ ನೆರಳಿರುವುದು ಕಾಣಿಸುತ್ತದೆ.

ಸೀತೆಯೂ ಕಡಲು ದಾಟಿದವಳೇ. ಅಷ್ಟೇ ಏಕೆ, ಅವಳು ಅಗ್ನಿಯನ್ನೂ ಹಾಯ್ದವಳು, ಕಾಡನ್ನೂ ಹಾಯ್ದವಳು. ಒಂದರ್ಥದಲ್ಲಿ ಭೂಮಿಯನ್ನೂ ಹಾಯ್ದವಳು! ಹಾಗೆಯೇ ಇಲ್ಲಿನ ಸಾಲುಗಳಲ್ಲಿ ನಮಗೆ ಹೊಸಿಲು ದಾಟಿದ ಹೆಣ್ಣುಮಗಳ ಉಸಿರೂ ಕೇಳಿಸುತ್ತದೆ. ಅದು ನಮ್ಮ ಸುಬ್ಬಮ್ಮ ಹೆಗ್ಗಡಿತಿ, ಕಾರಂತರ ಸುನಾಲಿನಿ, ಟಾಲ್‌ಸ್ಟಾಯ್‌ನ ಅನ್ನಾ, ಲಾರೆನ್ಸ್‌ನ ಲೇಡಿ ಚ್ಯಾಟರ್ಲಿ, ಇಬ್ಸನ್‌ನ ಸೂಸನ್ – ಹೀಗೆ ಯಾರು ಕೂಡ ಆಗಬಹುದು!

ಅಸ್ಪೃಶ್ಯರು

1
ತನ್ನ ಚರ್ಮವ ಕಳಚಿಟ್ಟು ದೇಹದ ಬಣ್ಣದ
ಮೊಸಾಯಿಕ್ನಂಥ ಗೋಡೆಯನ್ನುಟ್ಟವನು
ಶೇವಿಂಗಿಗೆ ಹೊಸಬಣ್ಣವನ್ನು ಬಳಿಯೆ ತಯಾರು
2
ರಬ್ಬರ್ ಸ್ಲಿಪ್ಪರುಗಳಲ್ಲಿ ಅವಳು ಚರಪರ ನಡೆದಾಡಿದಂತೆಲ್ಲ
ಕೊಳೆತ ತರಕಾರಿಗಳು ಅವಳ ಕಾಲನ್ನು ಹದವಾಗಿ ರಸಸೀರಿ ತೊಳೆದಿವೆ
3
ಡ್ರೈನೇಜು ಪೈಪುಗಳ ರಾಗತಾನಪಲ್ಲವಿ ಬಲ್ಲವನ
ಕೈಬೆರಳುಗಳು ಇದೀಗ ಕಟ್ಟಿಕೊಂಡ
ಮಲದ ಕಗ್ಗಂಟು ಬಿಡಿಸಿ ಪೈಪಿನಗುಂಟ ಎಲ್ಲ ನಿರಾಳ
4
ನೊಂದವರ ವಿದಾಯದ ಬಳಿಕ
ಸತ್ತದೇಹದ ಬಳಿ ಉಳಿದ
ಅವನೊಬ್ಬನೇ
ಜೊತೆಗಾರ
5
ಹಗಲು ಇರುಳಿನ ನಡುವೆ ಹರಿದಾಡುವ
ನೆರಳುಗಳು ಎಲ್ಲರೂ.
ನೆಲವ ಸೋಕುವ ಗುಂಡಿಗೆ
ಇಲ್ಲ ಇಲ್ಲಿ ಯಾವ ನೆರಳಿಗೂ.

***
ಒಂಟಿ, ಮನೆ

ಆ ನನ್ನ ಕೋಣೆ
ಕರೆಯುತ್ತಲೇ ಇದೆ ನನ್ನ

ಜಗುಲಿಗುಂಟ ತೆರೆದಿದೆ ಹಾದಿ
ಅಲ್ಲಿ ಅಮ್ಮ (ನ ಬದಲಿಗೆ ಒಂದು ಉಂಡಾಡಿ ಬೆಕ್ಕು)

ನನ್ನ ಹದಿಮೂರನೇ ಬರ್ತ್‌ಡೇಗೆ
ನೀ ಕೊಟ್ಟ, ನಾ ಕಳೆದ ಪೆನ್ನು

ಕಾರ್ಖಾನೆಯಿಂದ ಹೊರಬಿದ್ದ ಕೆಟ್ಟ ಹಾಲು
ಭುವಿಯ ಮೊಲೆ ಕುಡಿವ ಕಡಲ ಕಡು ಮೊರೆತ

ಮಳೆನೀರು ರಾಚುತ್ತಿರುವ ಕಿಡಕಿ
ಯ ಸದ್ದಿನಲ್ಲಿ ಕೇಳಿಸಿದಂತಿರುವ ನನ್ನದೇ ಹೆಸರು

ಆಟದ ಗನ್ನು ಹಿಡಿದು ಆಡುತ್ತಿದ್ದ ನೀನು
ಬದನೆ ಬಾರ್ತು ಬೆಂದ ಹಸಿ ಪರಿಮಳ

ಮುಂಬಯಿ, ಹೆಡ್ಲಿ, ಲಾಸೆಂಜಲೀಸ್, ಸ್ಯಾನ್ಫ್ರಾನ್ಸಿಸ್ಕೊ
ಹೆಸರುಗಳಲ್ಲಿ ಕರಗುತ್ತಿರುವ ನಮ್ಮದೇ ಗತ–ಭೂತ

ಕಭೀಕಭೀ ಮೆರೆ ದಿಲ್ ಮೆ
ಖಯಾಲ ಆತಾ ಹೇ...

ಹೊರ ಹೋಗುವ
ಮತ್ತೆ
ಹಿಂದಿರುಗುವ

ಭರವಸೆ ಹುಟ್ಟಿಸಿದ್ದ ಆ ಸ್ನೇಹ
ಕಡುಬಣ್ಣ, 101, ದಕ್ಷಿಣ, ರೂಟ್ ನಂ.89

ನಿನ್ನ ಕೊನೆಯ ಅಪ್ಪುಗೆಯ ಬಿಸುಪು
ತುಂಬಿದ ಗುಹೆ, ಅನೂಹ್ಯ ಅಮೂರ್ತ

ಯೋಚನೆಗಳ ಕವಾಟ ಪಟಪಟ
ಮನದ ಉಯ್ಯಾಲೆ ತಟವಟ

***
ಹಿಮಗಿರಿಯ ಕಂದರದಿಂದ ಎದ್ದು ಬಂದವನು

ಲಾಸೆಂಜಲೀಸಿನ ನನ್ನ ಕೋಣೆಯೊಳಗೆ ಮೆಲ್ಲನೆ ಅಡಿಯಿಟ್ಟ ತಾತ ಹಿಮಗಿರಿಯ ಕೆಸರು ಮೆತ್ತಿದ ಎರಡು ಬೇರುಗಳ ಕಟ್ಟು ತಂದಿದ್ದಾನೆ. ತುಂಬ ತಡವಾಯ್ತು ಕ್ಷಮಿಸು ಪುಟ್ಟಿ, ರಾತ್ರಿ, ಕತ್ತಲ ದಾರಿ ದೂರ ಎನ್ನುತ್ತಾನೆ. ಲಾಹೋರಿನಲ್ಲಿ ಅವನು ಕಟ್ಟಿದ ಕುಟುಂಬದ ಮನೆಯಿನ್ನೂ ನಿಂತಿದೆ ಆದರದರೊಳಗೀಗ ನಮ್ಮವರಿಲ್ಲ, ನೆರೆಹೊರೆಯ ಮಂದಿ ಹೂಡಿದ್ದಾರೆ ಒಲೆ ಯೂನಿವರ್ಸಿಟಿಯಲ್ಲಿ ಅವನೇ ಕಟ್ಟಿ ಬೆಳೆಸಿದ ಬಾಟನಿ ಲ್ಯಾಬಿನಲ್ಲೆಲ್ಲೂ ಅವನ ಹೆಸರೂ ಇಲ್ಲ. ಅವನು ಕಲಿಸಿದ ಮಕ್ಕಳೆಲ್ಲ ವಯಸ್ಸಾಗಿದ್ದಾರೀಗ–
ಒಬ್ಬರಿಗೂ ಸಿಗಲಿಲ್ಲ ಗುರುತು.

ಅವನಿಗೂ ಕಣ್ಣಿನ ಸಮಸ್ಯೆ ಎಲ್ಲವೂ ಅರ್ಧರ್ಧ ಕಾಣುತ್ತೆ – ಕಲಿಸಿದ ಮಕ್ಕಳು, ಗೋಡೆ ಮೇಲಿನ ಭಾರತದ ನಕ್ಷೆ. ಅದು ಬಿಡಿ, ಇದೇ ಊರಿನ ಗುಡಿ, ಸೀರೆಯಂಗಡಿ, ಹಾದಿ ಬೀದಿಯ ಹೆಸರು ಎಲ್ಲ ಎಲ್ಲೋ ಕಳೆಯುತ್ತಿದೆ. ಹಿಮಗಿರಿಯ ನೆನಪೊಂದೇ ಇನ್ನೂ ಮಾಸದೆ ಅವನ ಊರಿಂದ ಅದನ್ನೇರಿದ ನೆನಪೊಂದೇ ಇನ್ನೂ ಮಾಸದೆ ಬೆಚ್ಚಗಿದೆ. ಸುಸ್ತಾಗಿದೆ ಅವನಿಗೆ. ಆಸರೆಯಾಗಲು ಆಸೆಯಾಗಿದೆ ನನಗೆ. ಆದರೆ ನಾನೂ ಈ ನಗರದ ಹೊಳೆವ ಬಲ್ಬುಗಳ ಹೊಳೆಯಲ್ಲಿ ಮಸುಕಾಗಿ ಮಿಣುಕುತ್ತಿದ್ದೇನೆ.

ನಮ್ಮವರೆಲ್ಲ ಹೊಲದಲ್ಲಿ ಚೆಲ್ಲಿದ ಕಾಳುಗಳಂತೆ ಎಲ್ಲೆಲ್ಲೊ ಹಂಚಿ ಹೋದರು; ಕಳೆದುಹೋದ ಗಿರಿಕಂದರಗಳಲ್ಲಿ ಒಬ್ಬರನ್ನೊಬ್ಬರು ಅರಸುತ್ತ, ತಮ್ಮನ್ನೇ ತಾವು ಹುಡುಕುತ್ತ.ಹಾಗೋ ಎನ್ನುತ್ತಾನೆ ತಾತ ಅರೆಗಣ್ಣ ಕತ್ತಲಲ್ಲಿ ತಡಕಾಡುತ್ತ. ಮತ್ತೆ, ಸತ್ತ ಬೇರುಗಳ ಕೈಯಾಡಿಸುತ್ತ ಅವನು ಮರೆಯಾಗುತ್ತಾನೆ.

***
ಹುಕ್ಕಾ

(ದೇಶ ವಿಭಜನೆಯ ಹಿನ್ನೆಲೆಯಲ್ಲಿ)

ಅವನಿಗೇನೂ ಅನಿಸುತ್ತಿಲ್ಲ
ಅಥವಾ
ಮಾತಿಗೆ ನಿಲುಕದಷ್ಟು
ಮಾತು ಮೂಕವಾಗುವಷ್ಟು
ಅಷ್ಟು

ಹೊಸಗಡಿಯ ಉದ್ದಕ್ಕೂ
ಹಾಯ್ದ ಆ ಭೀಕರ ತಾಂಡವ
ಇಂಚು ಇಂಚಾಗಿ ಎರಡೂ ಕಡೆ
ಸಮಾನಾಂತರ ಹೆಜ್ಜೆ
ಹೆಜ್ಜೆಗೊಂದರಂತೆ ಉರುಳಿದ ದೇಹ
ಸಮಾನಾಂತರದ ಅಂತರ
ಒಂದು ಶಬ್ದ, ಒಂದು ಇರಿತ

ಅವನ ದಿಟ್ಟಿನೋಟದ ತುಂಬ ನೀರು
ಒಂದೊಂದು ಬೊಬ್ಬುಳಿಯೂ ಒಂದೊಂದು
ಲೋಕ, ಅವನು ಸೃಷ್ಟಿಕರ್ತ
ಸೀಪುತ್ತ ಉಗುಳುತ್ತ
ಸೀಪುತ್ತ ಉಗುಳುತ್ತ
ನಳಿಗೆಯ ಬಾಯಿಂದ ಬೊಬ್ಬುಳಿ ಬೊಬ್ಬುಳಿ

***
ಸಪ್ನಗಿರಿ

ಲಾಹೋರಿನ ನೆಲದಲ್ಲಿ
ತಾತ ನೆಟ್ಟ ಅಷ್ಟೆಲ್ಲ
ಬೀಜಗಳಲ್ಲಿ
ಕೇವಲ ಮರಗಳಷ್ಟೇ
ಉಳಿದಿವೆ
ಓಲಾಡುತ್ತ.

***
Luv-A-JAVA Cafeಯ ಒಂದು ಪೇಂಟಿಂಗ್

ಹಿಂದಿನ ಆ ಗೋಡೆ ಮೇಲಿನ ಪೇಂಟಿಂಗ್ ಇಡೀ ಕೋಣೆ ತುಂಬ ತುಂಬಿಕೊಂಡಿದೆ ಆ ಬೆಲ್ಲಿಡ್ಯಾನ್ಸರಿನ ಸ್ಕರ್ಟ್ ಇಡೀ ಕೋಣೆಗೆ ಹರಡಿಕೊಂಡಿದೆ, ಬಿಚ್ಚಿ ನೆರಿಗೆ ನೆರಿಗೆಯಾಗಿ
ಡೊಳ್ಳುಹೊಟ್ಟೆಯ ಹುಕ್ಕಾವಾಲರು ಫ್ರೇಮಿನಿಂದ ಹೊರಗುಕ್ಕುವಷ್ಟು ಚಾಚಿಕೊಂಡಿದ್ದಾರೆ ಸುತ್ತಲೂ ಪೇಂಟಿಂಗ್ ಒಳ ಹೋಗಲು ಒಂದಿಂಚು ಸಂದುಕಟ್ಟಿಲ್ಲ ಅಷ್ಟೂ ಭರ್ತಿ, ಚಿನ್ನದ ಬಣ್ಣದ ಅದರ ಕಟ್ಟು ಕೂಡಾ ಬಿಟ್ಟುಕೊಳ್ತಿಲ್ಲ ಯಾರನ್ನೂ ಒಳಗೆ.

ಕ್ಯಾಶಿಯರನ ರೇಡಿಯೋ ವಟಗುಟ್ಟುತ್ತಲೇ ಇದೆ ಸೂಯಿಸೈಡ್ ಬಾಂಬರಿನ ದೈನಂದಿನ ಬಲಿಯ ಲೆಕ್ಕ ರಕ್ತ ಮಾಂಸ, ಮೂಳೆಗಳೆಲ್ಲ ಚಿಂದಿಯಾದ ಚಿತ್ರ ಕತೆ ಆ ಮಿನುಮಿನುಗುವ ಬೆಳಕಿನ ಧಾರೆ ಎಲ್ಲೆಲ್ಲೂ ಹಾಸಿದ ರತ್ನಗಂಬಳಿ ವೈಭವದ ರೇಶ್ಮೆಯ ತೆರೆತೆರೆ ಎದ್ದು ಕೊಡವಿ ಬಿಡ್ತೇನೆ ಒಮ್ಮೆ ಎನಿಸುವುದು.

***
ಮೃಗ ವಿ ನಯನಿ

ಈ ಎಲ್ಲ ಮರಗಳೂ ಉಳಿಯುತ್ತವೆ ಇಲ್ಲಿ ಪುಸ್ತಕಗಳಾಗಿ
ತೆರೆವ ಒಂದೊಂದು ಪುಟಗಳು ಮಂದಾನಲವ ಬೀಸಿ

ಮನದಲ್ಲಿ ಫಡಫಡಿಸಿ ರೆಕ್ಕೆ ಪದಗಳು ಮರ್ಮರ ಸಂಚಲಿಸಿ
ತಿಕ್ಕಿ ತೀಡಿ ತೂರಾಡಿ ರೆಂಬೆ ಓಲಾಡಿ ಕೊಂಬೆ ಮೆಲ್ಲನೇ ಬೇರಿಳಿಸಿ

ಬೆಳೆದು ಕಾಡುಗಳಾಗಿ ಕಾನನ ತಂತಂನನನ ಪುಸ್ತಕಗಳಾಗಿ

ಕನಸೊಳಗಿಂದ ಕರಿಮೋಡವೊಂದು ಸರಿದುಹೋದಂತೆ
ಕೊನೆಯ ಕಾಡುಕೋಣ ಕಾಡೊಳಗೆ ಕಣ್ಮರೆ

ಇನ್ನು ಕಾಡುಗಳೇಕೆ ನಮಗೆ, ನಮ್ಮ ನವನವೀನ ಮೃಗೀಯ
ಪಿಪಾಸೆಗಳೆಲ್ಲ ಇಲ್ಲೆ ನರನಾಡಿಗಿಳಿದು ದೇಹದೊಳಗರಳುತಿವೆ

ಮನದೊಳಗೆ ಸುಳಿಯುತಿವೆ, ಅಳಿದುಳಿದ ಜಗವೆಲ್ಲ
ಇಲ್ಲೆ ನಮ್ಮೊಳಗೆ ಮನದೊಳಗೆ ಕೈಯಳತೆಯೊಳಗೇ ಬಿದ್ದಿವೆ

ಈಗಿನ್ನು ಹಾದಿಬೀದಿ ರಸ್ತೆಗಳನೆಲ್ಲ ಒಂದಿಂಚೂ ಬಿಡದೆ
ಮೂಸಿಮೂಸಿ ಅರಸಬೇಕು ಕೊಲ್ಲುವುದಕ್ಕೇನಾದರೂ
ಈಗ ಬೇಕೇಬೇಕು. ಇಲ್ಲಾಂದ್ರೆ ಜೀವಂತಿಕೆಯ ಕುರುಹಾಗಿ
ಪುಟಪುಟನೆ ಪುಟಗಟ್ಟಲೆ ಅಲೆದಾಡಬೇಕು

***
ನೀರಗಡಿಗಳ ದಾಟಿ...

ಒಂದೊಮ್ಮೆ ಹೊಸಿಲು ದಾಟಿದ್ದೇ
ಕರಗಿ ನೀರಾದಳವಳು ನಿಲಲಾರದೆ ನಿಂತಲ್ಲಿ

ಹರವಿ ಹರಿದಳು ವರುಷಗಳಾಚೆ ವರ್ಷಾ
ಧಾರೆ ಧಾರಿಣಿಯ ಮೇಲೆ ಗಂಗೆ

ಹಿಮಾಲಯದ ಗುಪ್ತ ಗುಹಾಂತರದ ಗುಂಜನ
ಬಯಲ ನೇವರಿಸಿ ಸವರಿ ಸಲಹಿದ ಗಂಗಾಂಜನ

ಮತ್ತೀಗ ಕಡಲ ಹಾಯುವ ಗಳಿಗೆ
ನಿಶ್ಶಕ್ತ ನಿತ್ರಾಣ ಸುಯ್ಯುವಳು ಸುಳಿಯಾಗಿ

ಬೀಜಗಳ, ಹಲ್ಲುಗಳ, ತಲೆಗೂದಲ ಜಾಲ
ಕಳಚಿ ಬೀಳುತ್ತ ಸ್ವತಂತ್ರವಾದವಳ

ಹೋಗಗೊಡಿ ಹರಿಯಗೊಡಿ ಕಳಚಿ ಎಲ್ಲ ಬೇಡಿ
ಮುಕ್ತ ತಾರೆಗಳ ಸುಪ್ತ ಗುರುತ್ವದಾಗಸದಡಿ

***
ಶೂನ್ಯ ತಲೆಮಾರು

ಕನಿಷ್ಠ ಒಂದು ಸಲ ಸತ್ತಿದ್ದೇವೆ
ಹುಟ್ಟಿದ್ದೇವೆ ಮತ್ತೆ
ಅಥೆನ್ನಾಳಂತೆ ಅಯೋನಿಜರಾಗಿ

ನಮ್ಮ ಭೂತ ಅನಾಥ, ಭವಿಷ್ಯ ಪರಭಾರೆ
ಯಾರು ಆಗಿದ್ದೆವು ಆಗಲಿದ್ದೇವೆ ಯಾರಿಗೆ ಏನು

ನಿಮ್ಮೊಳಗಾಗುವಾಸೆ ಅನ್ಯವಾಗುಳಿವ ಬಯಕೆ
ಅಲ್ಲಿಗೇ ಬಿಟ್ಟುಬಂದಲ್ಲಿಗೇ ತುಯ್ಯುವ ನೆನಕೆ

ಸತ್ತು ಮರೆಯಾದವರ ಜೊತೆ ನಿರಂತರವಿದೆ ಮಾತುಕತೆ
ಮನದಲ್ಲೆ ಇನ್ನೂ ಆಡಿದೆ ಬದುಕಿನುಸಿರು
ಬಿಟ್ಟುಬಂದ ಆ ದಿನದಿಂದೇನೇನೇನೂ ಬದಲಾಗಿಲ್ಲ ನಮ್ಮದೀದಿನ

ಎಷ್ಟು ನಾಲಗೆ ನಮಗೆ, ಪುಟಿವುದು ಕಾರಂಜಿಯಂತೆ ಹಿಂಗ್ಲೀಷ್
ಕಂಗ್ಲೀಷ್ ಡಾಟ್ಕಾಂ ಡ್ಯಾಶ್ ಎಸ್ಸೆಮ್ಮೆಸ್ ಝಟ್ಫಟ್ ಫಟಾಫಟ್

ಉಕ್ಕೇರುವ ಕಡಲು, ನಮ್ಮ ತಾಂಡವ ನೃತ್ಯ
ಕಠಿಣ ಹೃದಯ, ನಿಶ್ಶಕ್ತ ಜಾಗೃತಿಯ ಪಥಮಾರ್ಗ

***
ಮರಳಿ ಮನೆಗೆ

ಸೂಟುಕೇಸುಗಳು ತಯಾರು, ಅವನು ಕಾಯ್ತಿದಾನೆ
ಮರಳಲು ಮನೆಗೆ – ಆ ಸುಮಧುರ ಪರಿಮಳ

ದ ತಾಜಾ ಜಂಬೂನೇರಳೆ ಬಣ್ಣ
ದ ನಾಲಗೆ, ಹಲ್ಲು, ಕೈಬಾಯಿ ಎಲ್ಲ ಜಾಂಬಳಿ

ಇಟ್ಟಲ್ಲೇ ಕರಗಿ ನಾಲಗೆಯಲ್ಲೆ ರುಚಿನಿಲ್ಲುವ
ಅಮ್ಮನಡುಗೆ
ತಂಗಿ ಮೀನಾ

ಹೇಳಿದ್ದು, ನಿಧಾನ ನಿಧಾನ
ಅವನಿಗೆ. ನೀ ತುಂಬಾ ಗಡಿ
ಬಿಡಿ ಮಾಡ್ತಿದೀ

ಅಪ್ಪ ಮಾತ್ರ ‘‘ನೀನು ಚೆನ್ನಾಗಿ
ಕಲಿತು ಮುಂದೆ ಬರದೇ ಇದ್ರೆ

ಹಿಂದೆ ಬಿದ್ದು ಬಿಡ್ತೀ
ನಮ್ಮ ಹಾಗೇ ಆಗ್ತೀ’’

ತುಂಬ ದೂರ ಹೋಗಿ ಬಿಟ್ನಾ ಅವನು
ಅವನಿಗಿಂತ್ಲೂ ದೂರ ಹೊರಟ್ನೇ...

ವರ್ಷಗಳೇ ಜರ್ರೆಂದು ಜಾರಿ
ನಮ್ಮ ಮಧ್ಯೆ – ಮಾ, ಪಾ, ಮೀ ನಾ

ಒಂದೆಡೆ
ಮತ್ತವನು
ಆ ಕಡೆ
ಜೊತೆಗೆ

ಒಂದು ದೊಡ್ಡ ಬಂಗ್ಲೆ, ಕಾರು, ತೇಲುದೋಣಿ
ಮತ್ತೊಂದಿಷ್ಟು ಖಾಲಿ ಸೂಟುಕೇಸುಗಳು

***
ವಿಭಜನೆಯ ಗಾಥೆ

ನಿನ್ನ ಕಳೆದುಕೊಂಡೆನೆಂದುಕೊಂಡೆ
ಇಷ್ಟುಕಾಲ
ಈ ಮೂವತ್ತು ವರ್ಷಗಳ ಸುದೀರ್ಘ ಹಂಬಲದ
ಕೊನೆಗೆ
ಮತ್ತೆ ನಿನ್ನ ಮುಖ ನೋಡುತ್ತಿದ್ದೇನೆ.
ಆ ಕಂದು ಕಂಗಳು, ಹಣೆಯ ಮೇಲಿನ ಮುಂಗುರುಳು
ನಿನ್ನ ಆ ನಗು. ಮತ್ತಿದು, ಈ ಲಾಹೋರಿಗೆ ಹೋಗುವ,
ಮನೆಯನ್ನು ನೋಡುವ ಅವಕಾಶ.
ತುಂಬ ಆಸೆ ಇಟ್ಕೋಬೇಡಿ ಎಂದ ಪಪ್ಪ.
ಅದೇನೂ ಈಗ ನಮ್ಮನೆ ಅಲ್ಲ.
ಆದರೆ ನನಗೆ ಅದೇ ಗುಲ್‌ಮೊಹರ್ ಮರಗಳ ಸಾಲಲ್ಲಿ
ನಿಧಾನ ತೇಲುತ್ತ ಸುಳಿಸುಳಿಯಾಗಿ ಉದುರಿದ
ಅಬೋಲಿ ಬಣ್ಣದ ಹೂಹಾದಿಯಲ್ಲಿ ಕಂಡಿದ್ದು ನಮ್ಮನೆಯೇ.
ಮನೆಯ ಕದ ತೆರೆದ ಹೆಂಗಸಿಗೆ
ನಮ್ಮದೇ ಪ್ರಾಯ. ನಾವಿಲ್ಲೇ ಇದ್ದವರು...
ಭಾಗ ಆಗೋಕೂ ಮೊದಲು. ಮುಗುಳ್ನಗು.
ನಿಮ್ಮನ್ನೆ ಕಾಯ್ತಿದ್ದೆ, ಬನ್ನಿ, ಒಳ ಬನ್ನಿ.

ಮನೆಯೊಳಗೆ ಅವೇ ಮೇಜು ಕುರ್ಚಿಗಳು
ನಿನ್ನಜ್ಜನ ಮೆಚ್ಚಿನ ಸಾಗವಾನಿಯ ಟೀಪಾಯಿ,
ತಿಳಿಹಸಿರು ಸೋಫಾ ಮತ್ತದರ ಕೆತ್ತನೆಯ ಮಾಟ.
ನೋಡಬಹುದೆ ನಾವು...?
ಅಯ್ಯೊ, ದಯವಿಟ್ಟು ಬನ್ನಿ, ಇದು ನಿಮ್ಮದೇ ಮನೆ.
ಕಾರಿಡಾರಿನ ಗುಂಟ ನಡೆಯುತ್ತೇನೆ. ಮುಂಬಯಿಯಲ್ಲು
ಇದೇ ನಡಿಗೆ ನಡೆದ ನೆನಪು ಗಾಢ ಕನಸಿನ ಹಾದಿಯಲ್ಲಿ
ಇಷ್ಟೇ, ನಿನ್ನ ಕೋಣೆ, ಅಡುಗೆಮನೆಯಲ್ಲ, ಅಲ್ಲಿ ಬಾಲ್ಕನಿಯಲ್ಲಿ
ಈಗಿಲ್ಲಿ ಅಡುಗೆಮನೆಯೊಳಗೆ ವಲಸೆ ಬಂದ ಹಕ್ಕಿಯಂತೆ
ಅಕ್ಕಿ,ಗೋಧಿ,ಸಾಸಿವೆ, ಮೆಣಸುಗಳ ಇಟ್ಟ ಜಾಗವ ತಡಕಾಡಿ
ವೆ ಕೈಗಳು.

ಅವೆಲ್ಲವೂ ಇವೆಯಿಲ್ಲಿ ಹಾಗೆಯೇ, ಮತ್ತೆ
ಈ ಹೆಂಗಸೂ ನಮ್ಮಂತಿದ್ದಾಳೆ, ಮಾತು ನಮ್ಮಂತೆ.
ಏನಾಭಾವದ ಅಚ್ಛೆ
ಮೇಲ್ಗಡೆ ಹೋಗಲಾ...
ದಯವಿಟ್ಟು, ಇದು ನಿಮ್ಮ ಮನೆ.

ಮೆಟ್ಟಿಲುಗಳನೇರಿ ನಡೆದೆ. ಇಲ್ಲಿನ್ನೂ ಗಾಳಿ ಮಿಸುಕುತ್ತಿದೆ.
ನಿನ್ನಪ್ಪ ಈಗಷ್ಟೇ ಸರಿಯಿನ್ನು ನಾವೆಲ್ಲ ಹೊರಡಬೇಕು ಎಂದಂತೆ.
ಮುದ್ದು ಸುನೀಲನ್ನ ಕೊಂದಿದ್ದರವರು ಸಂತೆ ಮಾರ್ಕೆಟ್ಟಿನಲ್ಲಿ
ಅವನ ಆಯಾ ಜೊತೆಗೇನೆ. ಮೂರೇ ದಿನ ಮೊದಲು ಇದೇ
ಬೀದೀಲಿ ಮನೆಯೊಂದು ಹೊತ್ತಿ ಉರಿದಿತ್ತು. ಎಲ್ಲ ಅಲ್ಲಿ ಇಲ್ಲಿ
ಕೇಳಿದ್ದು, ಕತೆಗಳು. ಆಮೇಲೆ ಬಂತು ನಮ್ಮದೇ ಬಾಗಿಲಿಗೆ
ಭಯದ ಕಂಬಳಿ ಹೊದ್ದು
ಮುದುರಿ ಕೂತೆವು ಮೂಲೆಯಲ್ಲಿ
ಅಜ್ಜ ಈ ಗೋಡೆ, ಮೇಜು, ಟೀಪಾಯಿ, ನೆಲವನ್ನೆಲ್ಲ
ಮುಟ್ಟಿ ನೇವರಿಸಿ ಅರಸಿದರು, ಸುಮ್ಮನೇ ಮನೆತುಂಬ ಓಡಾಡಿ
ನಲವತ್ತು ವರ್ಷ ಹಿಡಿದಿತ್ತು ಈ ಮನೆಯ ಸಾಕಾರಕ್ಕೆ
ಏನೂ ತಗೋಬೇಡಿ, ನಿನ್ನಪ್ಪನ ದನಿ.
ಹಣ, ಒಡವೆ, ಒಂದು ಜೊತೆ ಬಟ್ಟೆ ಅಷ್ಟೇ.

ನಿನ್ನ ಹಾಸುಗೆಯೀಗಲೂ ಅಲ್ಲೇ ಕಿಟಕಿಯ ಪಕ್ಕ ಇದೆ
ಆದರೆ ಗೋಡೆ ಖಾಲಿ – ನೀನೀಗ ಇಲ್ಲ!
ಓ ನನ್ನ ಮುದ್ದು ಮಗನೆ, ಓಹ್! ಬರೇ ಹನ್ನೆರಡು
ವರ್ಷ ನಿನ್ನ ಋಣವಿತ್ತು ಭೂಮಿಗೆ. ಆದರೂ ಈ ಗೋಡೆಯ
ಮೇಲೆ ನೀನು ಸದಾ ನಗುವ ಮೊಗದ ಒಂದು ಚಿತ್ರವಿತ್ತು
ಈಗ ಅದೂ ಇಲ್ಲ, ನೀನಿಲ್ಲವಾದೆ ನಿಜವಾಗಿಯೂ ಈಗಿಲ್ಲ
ಉದ್ದುದ್ದ ದಿನಗಳು ಸುದೀರ್ಘ ರಾತ್ರಿಗಳು
ನೀನಿಲ್ಲಿ ಹೀಗೆ ಇದ್ದಿ ಸುರಕ್ಷಿತ ಎಂಬ ಭಾವವೊಂದಿತ್ತು ಅಲ್ಲಿ ನನ್ನಲ್ಲಿ
ಮುಚ್ಚಿದ ಬಾಗಿಲುಗಳಾಚೆ ನಿನ್ನದೇ ಕೋಣೆಯ ಗೋಡೆಯಲ್ಲಿ
ನಿನ್ನಪ್ಪ ಮೊದಲೇ ಹೇಳಿದ್ದರು ನನಗೆ
ಹರಿದೊಗೆದ ಜಗತ್ತಿನ ಹಾಳೆಯನ್ನೆಂತು ನೋಡಲಿ ನಾನು
ಈ ಭೂಮಿ, ಜನ, ಮಗನನ್ನು ಕಳೆದುಕೊಂಡ ಒಬ್ಬ ತಾಯಿ
ಓ ನನ್ನ ಮಗೂ! ಕುಸಿಯುತ್ತೇನೆ ಮೆಟ್ಟಿಲ ಬಳಿ.

ನಿಲ್ಲಿ, ಏನವಸರ, ಟೀಯನ್ನಾದರೂ ಕುಡಿವರಂತೆ
ಇಲ್ಲ, ಪಪ್ಪ ಬೇಡವೆಂದರು.
ಫ್ಲೈಟಿಗೆ ತಡವಾಗುವುದು, ಹೋಗಬೇಕು.

ಅವಳು ಒಂದು ಪ್ಯಾಕೆಟ್ ತುರುಕುತ್ತಾಳೆ ಮಡಿಲಿಗೆ
ಹಾದಿಯ ಕೊನೆಯಲ್ಲಿ ಕಾದಿದೆ ಟ್ಯಾಕ್ಸಿ
ಅಲ್ಲಿ ಸದಾ ಕಾಯುತ್ತಿರುವ ಟ್ಯಾಕ್ಸಿಯೊಂದು ಇದ್ದೇ ಇರುವುದು
ಕೊನೆಯಲ್ಲಿ. ಪಾದಗಳಡಿ ಹೂವಿನ ಮೃದು ಮಿಸುಕು
ಹಾದಿಯ ತುಂಬ ಅಬೋಲಿಯ ಪಾದಗಳ ಹಚ್ಚೆ
ಹಳದಿಗಟ್ಟಿದ ಹಾಳೆಗಳಿಂದ ನಾನು ಕಳಚಿಕೊಳ್ಳುವೆ
ಹೆಡ್ಲೈಟುಗಳಲ್ಲಿ ಇನ್ನೂ ಉಳಿದ ಆಕ್ರಂದನ....

ಸುಟ್ಟು ಕರಕಲಾದ ದೇಹಗಳ ರೈಲ್ವೇ ಬೋಗಿಗಳು
ನಿರಾಶ್ರಿತರ ರಕ್ತದಿಂದ ತುಂಬಿ ಹರಿದ ನದಿಗಳು
ರಾವಲ್ಪಿಂಡಿಯಲ್ಲಿ ಸಾವಿರಾರು ಮಂದಿಯ ಮಾರಣಹೋಮ

ಕೊನೆಯಲ್ಲಿ ಒಂದು ಕ್ಯಾನ್ವಾಸ್
ಇಷ್ಟೆಲ್ಲ ವರ್ಷ
ಬಿಡಿಸುತ್ತೇನೆ ಮೆಲ್ಲಗೆ
ಸೋಕಿವೆ ನಿನ್ನ ನಸುಗಂದು ಬೆಳ್ಳಿಗೂದಲು
ಆ ನಿನ್ನ ಕಣ್ಣುಗಳ ಮಿಂಚು, ಗುಲಾಬಿ ತುಟಿ
ಪುಟ್ಟ ಭುಜ, ಕಿರಿದಾದ ಎದೆ
ಯಿನ್ನೂ ಏರಿಳಿಯುತಿದೆ!
ಮೆತ್ತಗೆ ಹಿಡಿದೆತ್ತುವೆ ನಿನ್ನ
ನಗುತಿರುವೆ ನೀನು,
ಸುರಿದಂತೆ ಮೇಲಿಂದ ಹೂಮಳೆ

***
ಕವಿತೆ ಎಲ್ಲಿ

ಗಂಟೆಯಿಂದ ಹೀಗೇ
ಕೈಲಿ ಟೀ ಹಿಡಿದು
ಪದವೊಂದಕ್ಕೆಡವಿ
ಅದೆ ಎದ್ದು ಪರ್ವತವಾಗಿ
ಅದನೇರ ಹೊರಟಿದ್ದೆ
ಕೈ ಜಾರಿ ಹೋಗಿ
ಎಲ್ಲಿ ಎಲ್ಲಿ ಅದೆಲ್ಲಿ
ಕಣ್ಣಲ್ಲಿ ಕಣ್ಣಿಟ್ಟು ನೋಡು
ಪುಟ್ಟ ಶಂಖವ ಎತ್ತಿ ಕೈಲಿಟ್ಟು
ನೋಡಿದಂತೆ
ಕವಿತೆಯು ಅದರ ಅರ್ಥಕ್ಕಿಂತ ದೊಡ್ಡದು
ಪ್ರಶ್ನೆಯೆದುರು ಸದಾ ಮೀರಿಯೇ ನಿಲುವುದು
ಅದು ತೆರೆವ ಆಕಾಶ ಮುಚ್ಚಲಾಗದು ಕತ್ತಲು
ಕವಿತೆ ಅತೃಪ್ತ ಸಂತ
ಅವಿಶ್ರಾಂತ

***

ಇಲ್ಲಿನ ಕವಿತೆಗಳಿಂದ ತೀರ ಭಿನ್ನವಾದ ಆಶಯ, ಆಕೃತಿ ಎರಡೂ ಇರುವ ಇತರ ಹಲವಾರು ಕವನಗಳು ಈ ಸಂಕಲನದಲ್ಲಿವೆ. ಅವುಗಳನ್ನು ಪೂರ್ತಿಯಾಗಿ ಒಂದು ಗುಕ್ಕಿನಲ್ಲಿ ಓದುವುದು ಚೆನ್ನಾಗಿರುತ್ತದೆ. ಅಥೆನಾ ಇಲ್ಲಿ ಬರೆದಿರುವ ಬಹು ಮಹತ್ವದ ಗೊಂಡೆಗಂಟುಗಳ (knots) ಕುರಿತ ಯಾವುದೇ ಕವನವನ್ನು ನಾನು ಅನುವಾದಿಸಿಲ್ಲ. ಹಾಗೆಯೇ ಅವರು ಪಂಕ್ತಿ ವಿನ್ಯಾಸವನ್ನು ಸಂಯೋಜಿಸಿ, ಕವಿತೆ ಮತ್ತು ಅದು ನಿಂತ ಹಾಳೆಯ ನಡುವಿನ ಅನುಸಂಧಾನವನ್ನು ಶೋಧಿಸುವ ಉದ್ದೇಶದಿಂದಲೇ ಬರೆದ ಕವಿತೆಗಳನ್ನು ನನ್ನ ಭಾಷೆಯಲ್ಲಿ ಪುನರ್‌ ರಚಿಸುವ ಸಾಹಸಕ್ಕೂ ಕೈ ಹಾಕಿಲ್ಲ.

ಕವಿಯೊಬ್ಬನ ಹೃದಯಕ್ಕೆ ನೇರ ಪ್ರವೇಶಿಕೆಯನ್ನೊದಗಿಸುವ ಕವಿತೆಗಳ ವಿಚಾರದಲ್ಲಿ ಸದಾ ಕಾಲ ‘ಮಿಗು’ವ ಸಂಗತಿಗಳೇ ಹೆಚ್ಚು. ಹಾಗೆ ಯಾವ ಕವಿಯ ಪರಿಚಯವೂ ಎಂದೂ ಸಮಗ್ರವಾಗುವುದು ಸಾಧ್ಯವಿಲ್ಲ. ಹೀಗೆ ಅದು ಸದಾ ಒಡ್ಡುವ ಸವಾಲು ಮತ್ತು ನೀಡುವ ಆಹ್ವಾನವೇ ಅದರ ಆಕರ್ಷಣೆ ಮತ್ತು ಸೌಂದರ್ಯ ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT