ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಲ್ದಾಣ ಬರುವ ಮುನ್ನವೇ ಇಳಿದ ‘ಹುಬ್ಬಳ್ಳಿಯಾಂವ’

Last Updated 10 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಕಳೆದ ವಾರವಷ್ಟೇ ಹಲವು ಕನಸುಗಳ ಹೊತ್ತು ದಾವಣಗೆರೆಯಿಂದ ಹುಬ್ಬಳ್ಳಿಗೆ ಬಂದಿಳಿದ ಪ್ರಹ್ಲಾದ್, ‘ಈ ವಾರ ಇಲ್ಲ’ ಅಂದರೆ ಮನಸ್ಸು ಒಮ್ಮೆಲೇ ಒಪ್ಪಿಕೊಳ್ಳಲು ತಯಾರಿಲ್ಲ.ಅಂದು ಸುದ್ದಿ ತಿಳಿದೊಡನೆಯೇ ಅಗಾಧ ಅಚ್ಚರಿ, ಸಂಕಟ, ಆತಂಕದಲ್ಲೇ ಓಡಿಹೋಗಿ ಎದುರಿಗೆ ನಿಂತರೆ, ಆಗಷ್ಟೇ ನಿದ್ರೆಗೆ ಜಾರಿದವರಂತೆ ಪ್ರಹ್ಲಾದ್ ಅದೇ ಪ್ರಶಾಂತ ವಿನಯಶೀಲ ಮುಖ ಹೊತ್ತು ‘ಕಿಮ್ಸ್’ನ ಐಸಿಯುನಲ್ಲಿ ತಣ್ಣಗೆ ಮಲಗಿದ್ದರು.

ಸಾವಿಗೊಂದು ಮ್ಯಾಸಿವ್ ಹಾರ್ಟ ಆಟ್ಯಾಕ್ ಎಂಬ ನೆಪವಿತ್ತು. ಮನಸ್ಸು ಆ ಕಹಿಸತ್ಯವನ್ನು ಆ ಕ್ಷಣ ಅರಗಿಸಿಕೊಳ್ಳಲು ತಯಾರಿಲ್ಲದೇ ರಚ್ಚೆ ಹಿಡಿದು ನಿಂತಿತ್ತು. ಸಾವೊಂದೇ ಸತ್ಯ, ಅನಿವಾರ್ಯ ಅನ್ನಿಸಿದ ಗಳಿಗೆಯಲ್ಲಿ ಎಲ್ಲವೂ ವೇದ್ಯವಾಗುತ್ತ ಸಾಗಿತ್ತು.

ಮೂಲತಃ ದಾವಣಗೆರೆಯವರಾದರೂ ಹುಬ್ಬಳ್ಳಿಯವರೆಂದೇ ಗುರುತಿಸಿಕೊಳ್ಳುವ ಕಥೆಗಾರ ಡಾ. ಪ್ರಹ್ಲಾದ ಅಗಸನಕಟ್ಟೆಯವರು, ಕಳೆದ ಜೂನ್ ತಿಂಗಳಲ್ಲಿ ನಿವೃತ್ತಿಯಾಗಿದ್ದರೂ, ‘ಕಿಮ್ಸ್’ ಆಡಳಿತದ ಪ್ರೀತಿಯ ಆಗ್ರಹದ ಮೇರೆಗೆ ತಮ್ಮ ಸೇವೆಯನ್ನು ಕೆಲ ಕಾಲದ ಮಟ್ಟಿಗೆ ಮುಂದುವರೆಸಿದ್ದರು. ನಾನು ಹುಬ್ಬಳ್ಳಿಗೆ ಬಂದು ನೆಲೆ ನಿಂತ ಹೊಸದರಲ್ಲಿ, ಇಲ್ಲಿಯ ಸಾಹಿತ್ಯಕ ವಲಯವನ್ನು ಕ್ರಿಯಾಶೀಲಗೊಳಿಸಲು ಯತ್ನಿಸಿದವರಲ್ಲಿ ಆರೂರು, ಪ್ರಹ್ಲಾದ ಮತ್ತು ಮಂಗಳೂರುಮಠ ಪ್ರಮುಖರು. (ದುಃಖದ ಸಂಗತಿಯೆಂದರೆ, ಈ ಮೂವರೂ ಈಗ ಭೌತಿಕವಾಗಿ ನಮ್ಮೊಂದಿಗಿಲ್ಲ).

ನಾನು ಪ್ರಹ್ಲಾದರ ಹೆಸರು ಕೇಳಿದ ಮೊದಲ ಸಂದರ್ಭ 1998 ಇರಬಹುದು. ಆಗಷ್ಟೇ ಹೊರಬಂದ, ನನ್ನ ಗಂಡ ಪ್ರಕಾಶನ ‘ಆ ಹುಡುಗಿ’ ಕವನ ಸಂಕಲನದ ವಿಮರ್ಶೆಯನ್ನು ಅವರು ಸಂಯುಕ್ತ ಕರ್ನಾಟಕಕ್ಕೆ ಬರೆದಿದ್ದರು. ನಂತರ 2001ರಲ್ಲಿ ನಮ್ಮ ಮನೆ ಬಳಿಯೇ ಮನೆ ಕಟ್ಟಿಸುತ್ತಿದ್ದ, ಅವರ ಸ್ನೇಹಿತರೂ ಕಿಮ್ಸ್‌ನ ವೈದ್ಯರೂ ಆಗಿದ್ದ ಡಾ. ಸುಭಾಸ ಬಬ್ರುವಾಡ ಅವರ ಗೃಹಪ್ರವೇಶದ ಔತಣಕ್ಕೆ ಬಂದವರನ್ನು ಪ್ರಕಾಶ್ ಭೇಟಿಯಾಗಿ ನನ್ನನ್ನು ಪರಿಚಯಿಸಿದ್ದ.

ಅದು ನಮ್ಮಿಬ್ಬರ ಮೊದಲ ಭೇಟಿಯ ಕ್ಷಣ. ಆಗ ನಾನಿನ್ನೂ ಬರವಣಿಗೆ ಆರಂಭಿಸಿರಲಿಲ್ಲ. ಸಾಹಿತಿಗಳು ಇಷ್ಟು ಸಿಂಪಲ್ ಇರುತ್ತಾರೆಯೇ ಅಂತ ನನಗೆ ತುಸು ಬೆರಗೂ ಅನಿಸಿತ್ತು. ಅದಕ್ಕೆ ಕಾರಣವೆಂದರೆ, ಅಂದು ಅವರು ನಮ್ಮ ಹಿಂದೆಯೇ ಬಂದು ನಮ್ಮ ಮನೆಯ ಫೌಂಡೇಷನ್ನಿನ ಮೇಲೆ ಹತ್ತಿ ನಿಂತು, ‘ಇಲ್ಲಿ ಮ್ಯಾಡಂ ಅವರ ಅಡುಗೆ ಮನೆಯೇ? ಇದು ವರಾಂಡಾವೇ? ಇದು ಎಂಟ್ರನ್ಸೇ?’ ಅಂತ ಕೇಳುತ್ತ, ಹಲವು ಸಲಹೆಗಳನ್ನೂ ಕೊಟ್ಟು ಶುಭ ಹಾರೈಸಿ ಹೋಗಿದ್ದರು.

ನಾವು ಮನೆ ಕಟ್ಟಿ ಮುಗಿಸಿ ವಾಸಕ್ಕುಳಿದ ನಂತರ ‘ಡಾ. ಕರ್ಕಿ ಸಾಹಿತ್ಯ ವೇದಿಕೆ’ಯ ನಿರಂಜನ ವಾಲಿಶೆಟ್ಟರ್, ನಡೆಸುವ ಕಾರ್ಯಕ್ರಮಗಳಿಗೆ, ಪತ್ರಿಕೆಯಲ್ಲಿ ಬರುವ ಅಂದಂದಿನ ಸಮಾರಂಭಗಳ ಪಟ್ಟಿ ನೋಡಿ ನಾನೂ ಹಾಜರಾಗತೊಡಗಿದೆ. ಪ್ರಹ್ಲಾದ್ ಅಲ್ಲಿ ಹೆಚ್ಚು ಪರಿಚಿತರಾದರು. ನನ್ನ ಓದಿನ ವಿಸ್ತಾರಕ್ಕೆ ಪ್ರಹ್ಲಾದ್ ಹೇಳುವ ಪುಸ್ತಕಗಳ ಸಾಲೂ ಸೇರತೊಡಗಿತು. 

ಆನಂತರ ನಾನು 2002ರ ಹೊತ್ತಿಗೆ ಪ್ರಕಾಶನ ಹುಟ್ಟುಹಬ್ಬಕ್ಕೆ, ಪ್ರಹ್ಲಾದರ ‘ದೀಪವಾರಿದ ಮೇಲೆ’ ಮುಕ್ತಕಗಳ ಸಂಕಲನವನ್ನು ಕಾಣಿಕೆಯಾಗಿ ಕೊಟ್ಟಿದ್ದೆ. ಆ ಪುಸ್ತಕದ ಕುರಿತು ಕಿಮ್ಸ್ ವಿಳಾಸಕ್ಕೆ ಅವರಿಗೊಂದು ಸಣ್ಣ ಪ್ರತಿಕ್ರಿಯೆಯನ್ನೂ ಬರೆದಿದ್ದೆ. ಪತ್ರ ತಲುಪಿದ ಮರುಕ್ಷಣವೇ ಅವರ ದೂರವಾಣಿ ಕರೆ ಬಂತು. ಅಂದು ಗಜಲ್‌ಗಳು ಹಾಗೂ ಮುಕ್ತಕಗಳಿಗಿರುವ ವ್ಯತ್ಯಾಸವನ್ನು ಕುರಿತು ಹರಟಿದ ನೆನಪು.

ಅವರು ಭೇಟಿಯಾದಾಗಲೆಲ್ಲ ಪ್ರಕಾಶನನ್ನು ಕೇಳುವ ಒಂದೇ ಪ್ರಶ್ನೆಯೆಂದರೆ, ‘ಯಾಕೆ ನಿಲ್ಲಿಸಿಬಿಟ್ರಿ ಓದು ಬರಹ? ಒಂದೇ ಮನೆಯಲ್ಲಿ ಸುಮ್ಮನೇ ಕಾಂಪಿಟೇಶನ್ ಯಾಕೆ ಅಂತಲಾ?’ ಅನ್ನುತ್ತ ಅವರು ನಗುವ ಮೆಲುನಗೆಯಲ್ಲೇ ಚಾಟಿ ಇರುತ್ತಿತ್ತು. ಅವರು ಪ್ರತಿಸಲ ನಮ್ಮ ಮನೆಗೆ ಬರುವಾಗಲೂ ನನ್ನ ಓದಿಗಾಗಿ ಒಂದೆರಡು ಹೊಸ ಪುಸ್ತಕಗಳನ್ನು ಹಿಡಿದು ತರುತ್ತಿದ್ದರು. ಚಿತ್ತಾಲ, ದೇಸಾಯಿ, ಕುಸುಮಾಕರರಂತಹ ಹಲವು ಪುಸ್ತಕಗಳನ್ನು ಅವರು ನನ್ನ ಸಂಗ್ರಹದಿಂದ ಒಯ್ದು ಓದಿದ್ದರೆ – ಲಂಕೇಶ, ತೇಜಸ್ವಿ, ಕುಂ.ವಿ, ಬೆಸಗರಹಳ್ಳಿಯಂತಹವರ ಪುಸ್ತಕಗಳನ್ನು ನಮ್ಮ ಮನೆ ಬಾಗಿಲಿಗೇ ತಂದು ಕೊಟ್ಟು ಓದಿಸಿದವರು ಪ್ರಹ್ಲಾದ.  

ಅವರ ಮಾತು ಬಂದಾಗಲೆಲ್ಲ ಮನೆಯಲ್ಲಿ ನಾನೂ ಹಾಗೂ ಪ್ರಕಾಶ್ ಅವರದೊಂದು ಕವಿತೆಯ ಆಕರ್ಷಕ ಸಾಲುಗಳನ್ನು ನಮ್ಮಷ್ಟಕ್ಕೇ ನಾವು ಮೋಜಿನಿಂದ ಹೇಳಿಕೊಳ್ಳುತ್ತಿದ್ದೆವು. ‘ಅಗಸನಕಟ್ಟೆ ಎಂಬ ಈ ಕವಿಗೆ ಅಗಸನ ಹಾಗೆ ಶಬ್ದಗಳ ಒಗೆವ ಹುಚ್ಚು / ತೊಳೆದಷ್ಟೂ ಹತ್ತಿಕೊಳ್ಳುವುದು ಪದಗಳಿಗೆ ಮೈಲಿಗೆ ಇನ್ನೂ ಹೆಚ್ಚು’ ಅಂತ ಪ್ರಕಾಶನೂ, ‘ಅಗಸನಕಟ್ಟೆ ಎಂಬ ಈ ಹುಚ್ಚು ಕವಿಗೆ ಮಾಡಿವೆ ಪ್ರಾಸಗಳು ಬಲು ಮೋಸ/ ಶಬ್ದ ಜಾಲದಲ್ಲಿ ಬಿದ್ದು ಪಡುತ್ತಿದ್ದಾನೆ ವ್ಯರ್ಥ ಸಾಹಸ’ ಎಂದೂ ನಾನೂ, ಪ್ರಹ್ಲಾದರ ಧ್ಯೇಯವಾಕ್ಯಗಳನ್ನು ಕಂಠಪಾಠ ಮಾಡಿದ್ದೆವು.

ಬಹುಶಃ ಯಾವ ಕಾರಣದಿಂದಲೇ ಏನೋ ಪ್ರಹ್ಲಾದ ತಮ್ಮ ‘ದೀಪವಾರಿದ ಮೇಲೆ’ ಸಂಕಲನದ ನಂತರ ಕವಿತೆಗಳ ಕಡೆಗೆ ಹೆಚ್ಚು ಒಲವು ತೋರಲೇ ಇಲ್ಲ. ಗದ್ಯವನ್ನು ಅವರು ಎಕ್ಸ್‌ಟ್ರೀಮ್ ಅನ್ನುವಂತೆ ಹಚ್ಚಿಕೊಂಡರು. ಅವರು ಬರೆದ ಅನನ್ಯ ಅನುಭವಗಳೆಲ್ಲ ಸಾಲು ಸಾಲು ಕತೆಯಾದವು. ಕೇವಲ ಕಲಾತ್ಮಕತೆಯನ್ನೇ ತಮ್ಮ ಕತೆಗಳ ಮಾನದಂಡವಾಗಿ ಅವರು ಎಂದೂ ಇಟ್ಟುಕೊಂಡವರೇ ಇಲ್ಲ. ಆ ಮಧ್ಯೆ ಅವರು ಕನ್ನಡದ ಬಹುತೇಕ ಯುವ ಬರಹಗಾರರಿಗೆ ಮುನ್ನುಡಿ ಅಥವಾ ಬೆನ್ನುಡಿ ಬರೆದು ಸ್ವಾಗತಿಸಿದ್ದಾರೆ. ಹಾಗಾಗಿ ಅವರ ಹತ್ತು ವಿಮರ್ಶಾ ಸಂಕಲನಗಳಲ್ಲಿ ಇಡೀ ಕನ್ನಡ ಸಾಹಿತ್ಯದ ಪ್ರಸ್ತುತ ಸಂದರ್ಭದ ದೃಶ್ಯಾವಳಿಗೆ ಕನ್ನಡಿ ಹಿಡಿದಂತಿದೆ.

ಅವರು ‘ಬಂಧೀಖಾನೆ’ ಮತ್ತು ‘ಅವಾಂತರ’ ಎಂಬ ಎರಡು ಪುಟ್ಟ ಕಾದಂಬರಿಗಳನ್ನು ಬರೆದಿದ್ದು, ನಿವೃತ್ತಿಯ ನಂತರ ಒಂದು ಸುದೀರ್ಘ ಕಾದಂಬರಿಯೊಂದನ್ನು ಬರೆಯಬೇಕೆಂಬ ಹಂಬಲವನ್ನು, ಕಳೆದ ಜೂನ್ ತಿಂಗಳಲ್ಲಿ ನಾವೇ ನಡೆಸಿದ ಅವರ ‘ಅರವತ್ತರ ಅಭಿನಂದನೆ’ ಕಾರ್ಯಕ್ರಮದಲ್ಲಿ ಹೇಳಿಕೊಂಡಿದ್ದರು. ಅಭಿನಂದನೆ ಸ್ವೀಕರಿಸುತ್ತ ತಮ್ಮ ವೃತ್ತಿ ಪ್ರವೃತ್ತಿ ಹಾಗೂ ಸಾಂಸಾರಿಕ ಬದುಕಿನಲ್ಲಿ ತಾವು ಎಷ್ಟು ಸಂತೃಪ್ತರು ಎಂಬುದನ್ನು ಪ್ರಹ್ಲಾದ್ ಅಂದು ಪರಿಣಾಮಕಾರಿಯಾಗಿ ಮಾತಾಡಿದ್ದರು.

ಇತ್ತೀಚೆಗೆ ಅವರ ಬಾಳಸಂಗಾತಿ –  ಅವರಷ್ಟೇ ವಿನಯಶೀಲೆ ವಿಜಯಾ, ತಮ್ಮ ಸರ್ಕಾರಿ ನೌಕರಿಗೆ ವಿಆರ್‌ಎಸ್ ಕೊಟ್ಟು, ದಾವಣಗೆರೆಯಲ್ಲೇ ಸ್ವಂತ ಮನೆಯಲ್ಲಿ ನೆಲೆಸಿದ್ದರು.ಪ್ರತಿಭಾನ್ವಿತ ಮಗಳು ಅಕ್ಷತಾ, ಮೈಸೂರಿನಲ್ಲಿ ಎಂ.ಡಿ ಓದುತ್ತಿದ್ದಾಳೆ. ಸಾಹಿತ್ಯಕ ಚಳವಳಿಗಳ ಕುರಿತಾದ ಹಲವಾರು ವಿಚಾರಧಾರೆಗಳನ್ನು ನಾನು ಅವರ ಪಿಎಚ್.ಡಿ ಸಂಶೋಧನಾ ಪ್ರಬಂಧ ದಲಿತ ಬಂಡಾಯ ಕಾವ್ಯಗಳ ಮೇಲೆ ವಿಚಾರವಾದಗಳ ಪ್ರಭಾವ ಗ್ರಂಥವನ್ನೋದಿಯೇ ಅರಿತಿದ್ದೆನಾದರೂ, ಪ್ರಹ್ಲಾದ್ ಇತ್ತೀಚೆಗೆ ಹೋರಾಟಗಳಲ್ಲಿ ನಂಬಿಕೆ ಕಳಕೊಂಡವರಂತಿದ್ದರು.

ಯಾವುದಾದರೂ ಕಾಂಟ್ರಾವರ್ಸಿ ವಿಷಯಗಳನ್ನು ಅವರು ಹೆಚ್ಚು ಚರ್ಚಿಸುತ್ತಲೇ ಇರಲಿಲ್ಲ. ‘ಕಥೆ ಕಟ್ಟುವಲ್ಲಿ ಭಾಳ ಅವಸರ ಮಾಡುತ್ತೀರಿ ಪ್ರಹ್ಲಾದ್’ ಎಂದು ವಿಮರ್ಶಕ ಜಗದೀಶ್ ಮಂಗಳೂರಮಠ ಕೆಲವೊಮ್ಮೆ ನಮ್ಮೆಲ್ಲರ ಎದುರೇ ಅವರಿಗೆ ಕಿವಿಮಾತು ಹೇಳಿದ್ದಿದೆ. ಅವರಿಬ್ಬರ ಸುತ್ತ ಸದಾ ಇರುವ ನಾನು, ಮಹಂತಪ್ಪ ನಂದೂರ, ಮುನಿಸ್ವಾಮಿ, ಚಿದಾನಂದ ಕಮ್ಮಾರ, ಕುಮಾರ ಬೇಂದ್ರೆಯಂಥ ಕೆಲವು ಬರಹಗಾರ ಸಂಗಾತಿಗಳು, ಮಂಗಳೂರಮಠರ ಮಾತನ್ನು ಕೇಳಿಸಿಕೊಳ್ಳದವರ ಹಾಗೆ ನಟಿಸುತ್ತಿದ್ದೆವು. ಜಗದೀಶ ಮಂಗಳೂರಮಠ ಎಷ್ಟು ನೇರ ನಿಷ್ಠುರ ವಾದಿಗಳೋ, ಪ್ರಹ್ಲಾದ ಅಗಸನಕಟ್ಟೆ ಅಷ್ಟೇ ಮುಲಾಜಿಗೆ ಬೀಳುವ ಮತ್ತು ಸಂಕೋಚದ ಸ್ವಭಾವವುಳ್ಳವರು.

ಅವರು ಮೂವತ್ತೈದು ವರ್ಷಗಳ ಕಾಲ ಹುಬ್ಬಳ್ಳಿಯಲ್ಲಿ ನೆಲೆಸಿದ್ದರೂ ಇಲ್ಲಿ ಸ್ವಂತ ಮನೆಯೊಂದನ್ನು ಮಾಡಿಕೊಳ್ಳದೇ, ದಾವಣಗೆರೆಯಲ್ಲೇ ಮನೆ ಕಟ್ಟಿ ಗೃಹಪ್ರವೇಶಕ್ಕೆ ಸ್ನೇಹಿತರನ್ನು ಆಹ್ವಾನಿಸಿದ್ದರಲ್ಲದೇ, ಕಳೆದ ಜನವರಿಯಲ್ಲಿ ತಮ್ಮ ಎಂಜಿನಿಯರ್ ಮಗ ಹರ್ಷವರ್ಧನನ ವಿವಾಹವನ್ನೂ ಅಲ್ಲಿಯೇ ನೆರವೇರಿಸಿದ್ದರು. ನನಗೆ ಮಾತ್ರ ಅವೆರಡೂ ಸಮಾರಂಭಗಳಿಗೆ ಹೋಗಲು ಸಾಧ್ಯವಾಗಿರಲಿಲ್ಲ.

ಇತ್ತೀಚಿನ ಆರೇಳು ವರ್ಷಗಳಲ್ಲಿ ಹುಬ್ಬಳ್ಳಿಯ ಸಾಹಿತ್ಯಕ ಸ್ನೇಹಿತರೊಂದಿಗೆ, ಹೆಚ್ಚು ಬೆರೆಯದೇ ದೂರ ಇರುವ, ಮನೆಯನ್ನು ದಾವಣಗೆರೆಗೆ ಸ್ಥಳಾಂತರಿಸಿದ್ದೇನೆ, ತಾನು ಶನಿವಾರ ಭಾನುವಾರಗಳಂದು ಹುಬ್ಬಳ್ಳಿಯಲ್ಲಿ ಇರುವುದಿಲ್ಲ ಅಂತಲೋ, ಅಥವಾ ಮಗನ ಮದುವೆಯ ತಯಾರಿ ಅಂತಲೋ ಹೀಗೆ ನಮ್ಮ ಸಾಹಿತ್ಯಕ ಗುಂಪಿನೊಂದಿಗೆ ಸೇರದೇ ಇರಲು ಅವರಿಗೆ ಹಲವು ಕಾರಣಗಳಿದ್ದವು.

ಅವರ ಕತೆಗಳು ಜೀವನಾನುಭವದ ಹೊರಳುಗಳನ್ನೇ ಮೈವೆತ್ತಿ ಹೊರಬರುತ್ತಿದ್ದವು. ಹಾಗಾಗಿ ರೋಗಿಗಳು, ಆಸ್ಪತ್ರೆಯ ವಾತಾವರಣದ ಕತೆಗಳು ಸಹಜವಾಗಿ ಸೃಷ್ಟಿಯಾಗುತ್ತಿದ್ದವು. ಅವು ಅಷ್ಟೇ ಸರಳವಾಗಿ ಓದುಗರ ಮನೋಭೂಮಿಕೆಯನ್ನು ಪ್ರವೇಶಿಸುತ್ತಿದ್ದವು ಕೂಡ. ಕವಿತೆಗಳ ಮೇಲೆ ತಮಗೆ ಸರಿಯಾದ ಹಿಡಿತ ಸಾಧ್ಯವಾಗದೇ ಅದು ತನ್ನ ಮಾಧ್ಯಮವಲ್ಲ ಎಂದು ತಿಳಿದ ಕ್ಷಣದಲ್ಲಿ ಅವರು ಗದ್ಯದ ಕಡೆಗೆ ವಾಲಿದ್ದರು. ತಮಗೆ ಹೆಸರು ತಂದು ಕೊಟ್ಟ ಕಥಾ ಪ್ರಕಾರದ ಮೇಲೆ ಅವರಿಗೆ ಅಗಾಧವಾದ ಸೆಳೆತ ಇತ್ತು.

ಪ್ರಹ್ಲಾದ್ ಒಮ್ಮೆ ಕುಂ.ವೀ ಅವರ ‘ಅರಮನೆ’ ಕಾದಂಬರಿಯನ್ನು ನನಗೆ ಓದಲೆಂದು ತಂದುಕೊಟ್ಟರು. ವಿಶೇಷವಾಗಿ ಆ ಕೃತಿಯಲ್ಲಿರುವ ಭಾಷೆಯ ಬಿಕ್ಕಟ್ಟಿನಿಂದಾಗಿಯೋ ಏನೋ, ನಾನು ಮೊದಲ ಕೆಲ ಪುಟ ಓದಿ, ನಂತರ ಕೊನೆಯ ಕೆಲವು ಪುಟಗಳನ್ನು ಓದಿ ಮುಗಿಸಿಬಿಟ್ಟಿದ್ದೆ. ‘ಓದಿಯಾಗಿದೆ’ ಅಂತ ಅವರಿಗೆ ಸುಳ್ಳು ಬೇರೆ ಹೇಳಿಬಿಟ್ಟಿದ್ದೆ. ನಾನು ಓದಿ ಮುಗಿಸಿದ ಪುಸ್ತಕವನ್ನು ಮರಳಿ ಒಯ್ಯಲು ಬಂದ ಅವರು ಅರಮನೆಯ ಮಧ್ಯಭಾಗಕ್ಕಿರುವ ಏನೋ ಒಂದು ಸಂಗತಿಯನ್ನು ಕೇಳುತ್ತ ಮಾತನಾಡತೊಡಗಿದ್ದರು. ಆಗ ಅವರಿಗೆ ನಾನು ಸಮಗ್ರವಾಗಿ ಸಮರ್ಪಕವಾಗಿ ಓದಿಲ್ಲ ಎಂಬ ವಿಷಯ ತಿಳಿದುಹೋಯಿತು.

‘ಇನ್ನೊಮ್ಮೆ ಓದಿ’ ಅಂತ ನಕ್ಕು ‘ಅರಮನೆ’ಯನ್ನು ವರ್ಷಾನುಗಟ್ಟಲೇ ನಮ್ಮ ಮನೆಯಲ್ಲೇ ಬಿಟ್ಟಿದ್ದರು. ಹಾಗೆ ಒಬ್ಬ ಪ್ರಾಮಾಣಿಕ ಮಾಸ್ತರನಂತೆ ಗದರಿ ತಮ್ಮ ಸಂಗ್ರಹಲ್ಲಿರುವ ಸಾಹಿತ್ಯದ ಪುಸ್ತಕಗಳನ್ನು ನನಗೂ ಓದಿಸಿದ್ದರು ಪ್ರಹ್ಲಾದ್. ನನ್ನ ಹಿತೈಷಿಗಳೊಬ್ಬರು ‘ನೀನು ಬಂಡಾಯ ಯಾವಾಗ ಶುರು ಮಾಡಿದೆ ಅಂತ ನನಗೆ ಈಗ ಗೊತ್ತಾಯ್ತು, ಅದು ಪ್ರಹ್ಲಾದ್ ಕೊಡುವ ಪುಸ್ತಕಗಳ ಓದಿನ ಪರಿಣಾಮ!’ ಎಂದು ಯಾವಾಗಲೂ ಕಾಲೆಳೆಯುತ್ತಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ಇನ್ನೂ ಮಹತ್ವದ ಸಂಗತಿಯೊಂದಿದೆ.

ಬಂಡಾಯ ಚಳವಳಿಯ ಜೊತೆ ಜೊತೆಯಾಗಿ ಹುಟ್ಟಿಕೊಂಡ ಸ್ತ್ರೀವಾದೀ ಸಾಹಿತ್ಯದ ಅರಿವು ತಾನೇ ತಾನಾಗಿ ನನಗೆ ದಕ್ಕಿದ್ದು, ಪ್ರಹ್ಲಾದ ನನಗೆ ಪರಿಚಯಿಸಿದ ಬಂಡಾಯ ಸಾಹಿತ್ಯದ ಓದಿನಿಂದ. ಅದು ಮಹಿಳಾ ಬರಹಗಾರರೆಲ್ಲರಿಗೂ ಉಸಿರಿನಷ್ಟೇ ಅಗತ್ಯವಾದದ್ದು. ಆ ಕಾರಣಕ್ಕಾಗಿ ಪ್ರಹ್ಲಾದ ಅವರಿಗೆ ನಾನು ಋಣಿಯಾಗಿದ್ದೇನೆ.

ವಿಶ್ವೇಶ್ವರನಗರದ ಕನ್ನಡ ಭವನದಲ್ಲಿ ನಡೆದ, ಬಸೂ ಸುಳಿಭಾವಿಯವರಿಗೆ ‘ಡಾ. ಕರ್ಕಿ ಪ್ರಶಸ್ತಿ’ ಪ್ರದಾನ ಸಮಾರಂಭ ಮುಗಿಸಿ  ವಾಪಸಾಗುತ್ತಿದ್ದ ಸಂದರ್ಭ ಅದು. ಪ್ರಹ್ಲಾದ್ ಆ ದಿನ ಯಾಕೋ ತಮ್ಮ ಕಾರು ತಂದಿರಲಿಲ್ಲ. ಅಂದು ಪ್ರಹ್ಲಾದ, ಮಂಗಳೂರಮಠ ಹಾಗೂ ಸುಳಿಭಾವಿಯವರನ್ನು ಪೀಬಿ ರಸ್ತೆಯ ಬಸ್ ಸ್ಟಾಪಿನ ತನಕ ಕಾರಿನಲ್ಲಿ ಡ್ರಾಪ್ ಮಾಡುವ ಸರದಿ ನನ್ನದು. ಮೂವರನ್ನೂ ಕಾರಿನ ಬಳಿ ಕರೆದೆ, ಆದರೆ ಯಾರನ್ನು ಮುಂದಿನ ಸೀಟಿಗೆ ಆಹ್ವಾನಿಸಬೇಕು ಎಂಬ ಗೊಂದಲ ನನ್ನನ್ನು ಆ ಕ್ಷಣ ಮುತ್ತಿಕೊಂಡಿತು.

ಮಂಗಳೂರಮಠ ಎಲ್ಲರಿಗಿಂತ ಹಿರಿಯರು, ಪ್ರಹ್ಲಾದ ಬರವಣಿಗೆಯಲ್ಲಿ ನಮ್ಮೆಲ್ಲರಿಗಿಂತ ದೊಡ್ಡ ಹೆಸರು ಮಾಡಿದವರು. ಬಸೂ ಅಂದಿನ ಪ್ರಶಸ್ತಿ ವಿಜೇತರು. ನಾನು ಗೊಂದಲದ ನೋಟ ಹರಿಸಿದ್ದೇ ತಡ ಪ್ರಹ್ಲಾದ್, ಕಾರಿನ ಹಿಂದಿನ ಬಾಗಿಲು ತೆರೆದು ಮಂಗಳೂರಮಠರನ್ನೂ, ಬಸೂ ಅವರನ್ನೂ ಗೌರವಾನ್ವಿತವಾಗಿ ಕೂಡಿಸಿ ಬಾಗಿಲು ಹಾಕಿ, ತಾವು ಎದುರು ಹತ್ತಿ ನನ್ನ ಪಕ್ಕ ಕೂತಿದ್ದರು.

ಅಂದು ಹುಬ್ಬಳ್ಳಿ ರಸ್ತೆಯ ಸಂದಿಗೊಂದಿಗಳ ಪ್ರಯಾಣದುದ್ದಕ್ಕೂ ‘ಯಾಕೆ ನಾಲ್ಕನೇ ಗೇರ್ ಬದಲಿಸುವ ರೂಢಿ ಮಾಡಿಕೊಂಡಿಲ್ಲವೇ ಸುನಂದಾ?’ ಅಂತ ಕೇಳುತ್ತಲೇ, ಮುಂದುವರೆಸುತ್ತ ಅವರದೇ ಆದ ಒಂದು ಸಿಗ್ನೇಚರ್ ಟ್ಯೂನ್‌ನಲ್ಲಿ – ‘ಈ ಹುಬ್ಬಳ್ಳಿಯಂಥ, ಯಾವೊಬ್ಬನೂ ನಿಯಮ ಪಾಲಿಸದ, ಅದೂ ಅತಿಕೆಟ್ಟ ಸಾರಿಗೆ ರಸ್ತೆಯಲ್ಲಿ ಹೀಗೆ ರಾಜಾರೋಷ ಕಾರು ಓಡಿಸ್ತೀರಲ್ಲ! ನಿಮ್ಮ ಧೈರ್ಯ ಮೆಚ್ಚಬೇಕಾದ್ದೇ’ ಅನ್ನುತ್ತ ಪ್ರಶಂಸಿಸಿದ್ದರು. ಅವರ ಸಿಗ್ನೇಚರ್ ಟ್ಯೂನ್ ಇನ್ನೂ ಕಿವಿಯಲ್ಲಿ ಗುಯ್ಗುಡುತ್ತಿರುವಾಗಲೇ, ನಂಬಲಶಕ್ಯ ತಿರುವಿನಲ್ಲಿ ನಮ್ಮೆಲ್ಲರೊಳಗೆ ಒಂದು ರೀತಿಯ ಖಾಲಿತನ ತುಂಬಿ, ನಿಲ್ದಾಣ ಬರುವ ಮುಂಚೇ ಪ್ರಹ್ಲಾದ ಇಳಿದು ನಡೆದಿದ್ದಾರೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT