ಸೋಮವಾರ, 13 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೂರರ ಸಿರಿ ಬೆಳಕಿನಲ್ಲಿ

ಅಕ್ಷರ ಗಾತ್ರ

ಕನ್ನಡ ನಾಡು–ನುಡಿ ಅಭ್ಯುದಯದ ಆಶಯದೊಂದಿಗೆ ಆರಂಭವಾದ ‘ಕನ್ನಡ ಸಾಹಿತ್ಯ ಪರಿಷತ್ತು’ ಈಗ ಶತಮಾನೋತ್ಸವ ಸಂಭ್ರಮದಲ್ಲಿದೆ (ಸ್ಥಾಪನೆ: ಮೇ 5, 1915). ಪರಿಷತ್ತಿನ ನೂರು ವರ್ಷಗಳ ಹಾದಿ ನಾಡಿನ ಸಾಂಸ್ಕೃತಿಕ ಇತಿಹಾಸದ ಒಂದು ಪ್ರಮುಖ ಅಧ್ಯಾಯ ಕೂಡ. ಈ ನೂರರ ಸಂಭ್ರಮದ ಸಂದರ್ಭದಲ್ಲಿ ‘ಕಸಾಪ’ ಸಾಗಿಬಂದ ಹಾದಿಯ ಅವಲೋಕನದ ಜೊತೆಗೆ, ಅದು ತನ್ನನ್ನು ತಾನು ಹೊರಳಿ ನೋಡಿಕೊಳ್ಳಬೇಕಾದ ಅಗತ್ಯದ ಕುರಿತ ಚಿಂತನೆ ಇಲ್ಲಿದೆ.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿ– ಇವುಗಳನ್ನು ಕುರಿತ ಅಭ್ಯಾಸ, ಪ್ರಚಾರ ಮತ್ತು ಅಭಿವೃದ್ಧಿಗಳಿಗಾಗಿ ದುಡಿದ ಹಲವು ಸಂಸ್ಥೆಗಳು ಕನ್ನಡನಾಡಿನಲ್ಲಿ ಹೆಸರಾಗಿವೆ. ಕಳೆದ ಶತಮಾನದ ಕೊನೆಯ ಭಾಗದ ವೇಳೆಗೆ ಭಾರತದ ಎಲ್ಲ ಭಾಗಗಳಲ್ಲಿಯೂ ಜನರಿಗೆ ತಮ್ಮ ಭಾಷೆ ಸಾಹಿತ್ಯ, ಸಂಸ್ಕೃತಿಗಳ ಕಡೆಗೆ ದೃಷ್ಟಿ ಹರಿಯಿತು. ಇದಕ್ಕೆ ಮುಖ್ಯವಾಗಿ ಇಂಗ್ಲಿಷ್‌ ಭಾಷಾ ಸಾಹಿತ್ಯಗಳ ಆಳವಾದ ತಿಳಿವಳಿಕೆಯೇ ಕಾರಣವಾಯಿತು.

ಪಾಶ್ಚಾತ್ಯರು ಭಾರತೀಯರಿಗೆ ಯಾವ ಉದ್ದೇಶದಿಂದ ಇಂಗ್ಲಿಷ್‌ ಭಾಷೆಯನ್ನು ಕಲಿಸಿದರೋ ಅದಕ್ಕಿಂತಲೂ ನೂರು ಪಾಲು ಅಧಿಕವಾದ ಫಲವನ್ನು ಅದು ನಮ್ಮ ಜನರಿಗೆ ಉಂಟುಮಾಡಿತು ಎಂಬ ಬಗ್ಗೆ ಈಗ ಯಾರಿಗೂ ಅನುಮಾನವಿಲ್ಲ. ಇಂಗ್ಲಿಷ್‌ ಭಾಷೆಯ ಮೂಲಕ ನಮ್ಮ ದೇಶದ ಜನರಿಗೆ ವಿಶ್ವವ್ಯಾಪಿಯಾದ ದೃಷ್ಟಿ ಒದಗಿದುದಲ್ಲದೆ ತಮ್ಮ ಪರಂಪರೆಯ ಅಭ್ಯಾಸವನ್ನೂ ಮಾಡಬೇಕೆಂಬ ಹಂಬಲ ಅಧಿಕವಾಯಿತು. ಪಾಶ್ಚಾತ್ಯ ವಿದ್ವಾಂಸರಾದ ಕೆಲವರು ದೇಶ ಭಾಷೆಗಳಲ್ಲಿ ಮಾಡಿದ ವಿದ್ವತ್ಕಾರ್ಯವೂ ಇದಕ್ಕೆ ಪ್ರೋತ್ಸಾಹಕವೂ ಮಾರ್ಗದರ್ಶಕವೂ ಆಯಿತು.

ಕನ್ನಡ ದೇಶದಲ್ಲಿ ರೀವ್‌, ಜಿಗ್ಲರ್‌, ಮ್ಯೂರ್‌, ಆಂಡರ್‌ಸನ್‌, ಮೋಗ್ಲಿಂಗ್‌, ಕಿಟ್ಟೆಲ್‌, ರೈಸ್‌ ಮುಂತಾದ ಪಾಶ್ಚಾತ್ಯ ವಿದ್ವಾಂಸರ ನೇತೃತ್ವದಲ್ಲಿ ಭಾಷಾ ಪ್ರಸಾರ ಕಾರ್ಯವು ಭರದಿಂದ ಸಾಗಿತು. ಮಂಗಳೂರಿನಲ್ಲಿ ಸ್ಥಾಪಿತವಾದ ‘ಬೇಸಲ್‌ ಮಿಷನ್‌ ಪ್ರೆಸ್‌’ ಎಂಬುದು ಕನ್ನಡ ಮುದ್ರಣವನ್ನು ಸುಂದರಗೊಳಿಸಿ ಜನಪ್ರಿಯತೆಯನ್ನೂ ಗಳಿಸಿತು. ಶಿಕ್ಷಣ ಕ್ಷೇತ್ರದಲ್ಲಿ ಪಠ್ಯಪುಸ್ತಕಗಳೂ ಸಹಾಯಕ ಸಾಹಿತ್ಯ ಸಾಮಗ್ರಿಯೂ ಮುದ್ರಣಗೊಳ್ಳತೊಡಗಿದವು. ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜರು ಸ್ಥಾಪಿಸಿದ ರಾಜಾಸ್ಕೂಲು (1833) ನಡೆಸಿದ ಕಾರ್ಯ, 1875ರಲ್ಲಿ ಬೆಂಗಳೂರಿನ ಹೈಸ್ಕೂಲು ಸೆಂಟ್ರಲ್‌ ಕಾಲೇಜಾಗಿ ಮಾರ್ಪಟ್ಟುದು, 1916ರಲ್ಲಿ ಮೈಸೂರು ವಿಶ್ವವಿದ್ಯಾನಿಲಯ ಸ್ಥಾಪನೆ ಇವು ಶಿಕ್ಷಣ ಕ್ಷೇತ್ರದ ಮೈಲಿಗಲ್ಲುಗಳು.

ಮೈಸೂರು ಅರಸರ ಪ್ರೋತ್ಸಾಹದಿಂದ ಸ್ಥಾಪಿತವಾದ ‘ಕರ್ಣಾಟಕ ಭಾಷೋಜ್ಜೀವಿನೀ ಸಭಾ’ (1886), ‘ಸಂಸ್ಕೃತಿ ವಿದ್ಯಾಶಾಲೆ’ (1889), ‘ಓರಿಯೆಂಟಲ್‌ ಲೈಬ್ರರಿ’ (1887), ‘ಪ್ರಾಚ್ಯವಸ್ತು ಸಂಶೋಧನಾಲಯ’ (1884)– ಇವುಗಳಿಂದ ಕನ್ನಡ ಜನರಲ್ಲಿ ತಮ್ಮ ಭಾಷೆ ಸಾಹಿತ್ಯಗಳ ಬಗ್ಗೆ ಕ್ರಮವಾಗಿ ಹೊಸ ಬಗೆಯ ಅಭಿಮಾನ ಮೂಡಿಬರಲು ಸಹಾಯವಾಯಿತು.

ಕ್ರೈಸ್ತ ಮಿಷನ್‌ಗಳೂ ಮಿಷನರಿಗಳೂ ಮಾಡಿದ ಕ್ರೈಸ್ತ ಮತ ಪ್ರಚಾರ ಸಾಧಕವಾದ ಕನ್ನಡ ಗ್ರಂಥ ರಚನೆ ಮತ್ತು ಅವರ ಮತಸಂಸ್ಥೆಗಳು ಕನ್ನಡ ಸಾಹಿತ್ಯದ ನವೋದಯಕ್ಕೆ ಪರೋಕ್ಷವಾಗಿ ಸಹಾಯ ಮಾಡಿದವು. ಮೈಸೂರು ರಾಜರ ಆಸ್ಥಾನವೂ ಕೂಡ ಹೀಗೆಯೇ ಒಂದು ಸಂಸ್ಥೆಯಾಗಿ ಕನ್ನಡದ ಪುನರುದಯಕ್ಕೆ ಸಹಕಾರಿಯಾಯಿತು.

ಆದರೆ ನಿಜವಾಗಿ ವಿದ್ವಾಂಸರೇ ನಿಂತು ಜನತೆಯ ಕಡೆಯಿಂದ ಭಾಷಾ ಸಾಹಿತ್ಯಗಳಿಗೆ ಉತ್ತೇಜನ ಕೊಡಲು ಸಂಸ್ಥೆಗಳನ್ನು ಸ್ಥಾಪಿಸುವುದು ಕನ್ನಡ ನಾಡಿನಲ್ಲಿ ತಡವಾಗಿ ರೂಪುಗೊಂಡಿತೆನ್ನಬೇಕು. ‘ಕರ್ಣಾಟಕ ಗ್ರಂಥಮಾಲೆ’, ‘ಕಾವ್ಯಮಂಜರಿ’ ಮುಂತಾದ ಪತ್ರಿಕೆಗಳಲ್ಲಿ ಹಳಗನ್ನಡ ಕಾವ್ಯಗಳು ಮುದ್ರಿತವಾಗುತ್ತಿದ್ದರೂ, ‘ಗ್ರಾಜಯೇಟ್ಸ ಟ್ರೇಡಿಂಗ್‌ ಅಸೋಸಿಯೇಷನ್‌ ಪ್ರೆಸ್‌’ (ಮೈಸೂರು), ‘ಧಾರವಾಡ ಪ್ರೆಸ್‌’, ‘ವಿಚಾರ ದರ್ಪಣ ಪ್ರೆಸ್‌’, ‘ಎ.ಬಿ. ಸುಬ್ಬಯ್ಯ ಅಂಡ್‌ ಸನ್‌್ಸ’ ಮುಂತಾದ ಮುದ್ರಾಶಾಲೆಗಳಿಂದ ಪುಸ್ತಕಗಳು ಪ್ರಕಟವಾಗುತ್ತಿದ್ದರೂ ಅವುಗಳನ್ನು ಸಂಸ್ಥೆಗಳು ಎಂದು ಕರೆಯುವಂತಿಲ್ಲ.

ಮೈಸೂರಿನಲ್ಲಿ ರಾಜ್ಯಾಡಳಿತವು ಸುಗಮವಾಗಿದ್ದು ಕನ್ನಡಕ್ಕೆ ತಕ್ಕಷ್ಟು ಪ್ರೋತ್ಸಾಹವಿತ್ತು. ಆದರೆ ಮುಂಬಯಿ ಕರ್ನಾಟಕದಲ್ಲಿ ಮರಾಠಿಯ ಆಕ್ರಮಣಶೀಲತೆಯಿಂದ ನೊಂದ ಕನ್ನಡಿಗರಲ್ಲಿ ಅಭಿಮಾನವು ಪುಟಿದೆದ್ದು ಇಂಥದೊಂದು ಸಂಸ್ಥೆ ಮೊದಲು ಉದಯವಾಯಿತು. ಅದು ‘ಕರ್ನಾಟಕ ವಿದ್ಯಾವರ್ಧಕ ಸಂಘ’. ಇದು ಸ್ಥಾಪಿತವಾದುದು 1890ರಲ್ಲಿ. ಇಂಥ ಸಂಘದ ಸ್ಥಾಪನೆಯ ವಿಚಾರವಾಗಿ ರಾಮಚಂದ್ರ ಹಣಮಂತ ದೇಶಪಾಂಡೆ ಎಂಬವರು 1887ರಲ್ಲೇ ಯೋಚಿಸಿ ಅದಕ್ಕಾಗಿ ನಿಧಿಯನ್ನು ಕೂಡಿಸಿದರು.

ಕನ್ನಡದಲ್ಲಿ ಗ್ರಂಥರಚನೆ ಮಾಡುವುದು ಮತ್ತು ಕನ್ನಡದ ಬಗ್ಗೆ ಪ್ರಚಾರ ಮಾಡುವುದು ಈ ಸಂಘದ ಉದ್ದೇಶವಾಗಿತ್ತು. ಕನ್ನಡದಲ್ಲಿ ಗ್ರಂಥರಚನೆ ಮಾಡುವವರಿಗೆ ಬಹುಮಾನ ಕೊಡುವ ಯೋಚನೆಯನ್ನೂ ಈ ಸಂಘವು ಕೈಗೊಂಡಿತು. ಈ ಸಂಘದ ವರದಿಯಲ್ಲಿ ಬಹುಮಾನಗಳನ್ನು ಪ್ರಕಟಿಸಿರುವ ಪಟ್ಟಿಯಲ್ಲಿ ಕನ್ನಡಿಗರಲ್ಲಿ ದೇಶಾಭಿಮಾನ, ಭಾಷಾಭಿಮಾನ ಇತ್ಯಾದಿ ಪ್ರಚೋದಿಸುವಂಥ 100 ಹಾಡುಗಳಿಗೆ 25 ರೂಪಾಯಿಗಳ ಬಹುಮಾನವನ್ನು ರಾಮಚಂದ್ರ ಹಣಮಂತ ದೇಶಪಾಂಡೆಯವರೇ ನೀಡಿದ್ದುದನ್ನು ಉಲ್ಲೇಖಿಸಿವೆ. ಇದರಿಂದ ಆಗಿನ ಕಾಲದ ಕನ್ನಡದ ಸ್ಥಿತಿಯು ನಮಗೆ ಖಚಿತವಾಗಿ ವ್ಯಕ್ತವಾಗುತ್ತದೆ. ಈ ಸಂಘವು ಸ್ಥಾಪಿತವಾದ ಮೇಲೆ ಅದು 1896ರಲ್ಲಿ ‘ವಾಗ್ಭೂಷಣ’ ಎಂಬ ಪತ್ರಿಕೆಯನ್ನು ಪ್ರಾರಂಭಿಸಿತು.

ಅದು ಕೆಲವು ಕಾಲ ನಡೆದು ನಿಂತುಹೋಯಿತೆಂಬುದು ಈಗ ಚರಿತ್ರೆಯ ಮಾತು. ಸಂಘದ ಮೊದಲ ಹತ್ತು ವರ್ಷಗಳಲ್ಲಿ 25 ಪುಸ್ತಕಗಳು ಪ್ರಕಟವಾದವು. ಈ ಸಂಘವನ್ನು ಕಟ್ಟಿ ಬೆಳೆಸಿದವರಲ್ಲಿ ವೆಂಕಟರಂಗೋಕಟ್ಟಿ, ಫ.ಗು. ಹಳಕಟ್ಟಿ, ಶಾಂತಕವಿ (ಸಕ್ಕಂಬಾಳಾಚಾರ್ಯ), ಧೋ.ನ. ಮುಳಬಾಗಿಲ, ರಾ.ಹ. ದೇಶಪಾಂಡೆ ಮುಂತಾದವರು ‘ಮುಖ್ಯರು’. ಗಳಗನಾಥರು ತಮ್ಮ ಪ್ರಥಮ ಕಾದಂಬರಿಯಾದ ‘ಪದ್ಮನಯನಾ’ ಕಾದಂಬರಿಯನ್ನು ಸಂಘದ ಪಾರಿತೋಷಕಕ್ಕಾಗಿ ಬರೆದರೆಂಬುದು ಕುತೂಹಲದ ಸಂಗತಿಯಾಗಿದೆ.

ಕಾಲಕ್ರಮದಲ್ಲಿ ವಿದ್ಯಾವರ್ಧಕ ಸಂಘವು ಬೆಳೆಯಿತು. ಮೈಸೂರಿನ ರಾಜರಾದ ಚಾಮರಾಜ ಒಡೆಯರ್ ಈ ಸಂಘಕ್ಕೆ ಧನಸಹಾಯ ಮಾಡಿದುದರಿಂದ ವಿದ್ಯಾವರ್ಧಕ ಸಂಘದ ಕಟ್ಟಡಕ್ಕೆ ಅವರ ಹೆಸರನ್ನು ಕೊಡಲಾಗಿದೆ. ಈ ಸಂಘವು ಸ್ಥಾಪನೆಯಾದ ಮೇಲೆ ಮೈಸೂರಿನ ವಿದ್ವಾಂಸರು ಧಾರವಾಡಕ್ಕೆ ಹೋಗುವುದೂ ಅಲ್ಲಿಯ ವಿದ್ವಾಂಸರು ಮೈಸೂರು ರಾಜ್ಯಕ್ಕೆ ಬರುವುದೂ ಹೆಚ್ಚಾಯಿತು. ಎರಡು ಕಡೆಯವರೂ ಸೇರಿ ವಿಚಾರ ವಿನಿಮಯ ಮಾಡಿಕೊಂಡು ಕನ್ನಡದ ಅಭಿವೃದ್ಧಿ, ಕನ್ನಡನಾಡಿನ ಏಕೀಕರಣ ಇತ್ಯಾದಿಗಳ ಬಗ್ಗೆ ಜನರಲ್ಲಿ ಆಸಕ್ತಿಯನ್ನು ಹೆಚ್ಚಿಸಿದರು.

ಹೀಗೆ ಕನ್ನಡದ ಬಗ್ಗೆ ಹಿತವನ್ನು ಸಾಧಿಸಿದ ಮೊದಲನೆಯ ಸಂಸ್ಥೆ ಈ ವಿದ್ಯಾವರ್ಧಕ ಸಂಘ. ಸ್ವಲ್ಪಕಾಲ ಅದರ ಕಾರ್ಯ ಸ್ಥಗಿತಗೊಂಡಿದ್ದರೂ ಈಗ ಪೊರೆಯುಜ್ಜಿದ ಹಾವಿನಂತೆ ಕಾಂತಿಯುತವಾಗಿ ಸಶಕ್ತವಾಗಿ ಕಾರ್ಯಮುಖವಾಗಿದೆ. ಇಂದಿನ ಕಾರ್ಯಕರ್ತರಲ್ಲಿ ಉತ್ಸಾಹಿಗಳೂ ದಕ್ಷರೂ ಆದ ಯುವಕ ಮುಂದಾಳುಗಳು ಕಾಣಬರುತ್ತಿರುವುದು ಶುಭದ ಸಂಕೇತವಾಗಿದೆ.

ಮೈಸೂರು ರಾಜ್ಯದಲ್ಲಿ ಅಂಥ ಸಂಸ್ಥೆಯು ಇರಬೇಕೆಂಬ ಹಂಬಲ ಇಲ್ಲಿನ ಜನರಲ್ಲಿ ಮೂಡಿದ್ದರೂ ಅದು ರೂಪು ಕಳೆಯಬೇಕಾದರೆ ಈ ಶತಮಾನದ ಮೊದಲ ದಶಕವೇ ಉರುಳಬೇಕಾಯಿತು. ಆಧುನಿಕ ಮೈಸೂರು ಸಂಸ್ಥಾನದ ನಿರ್ಮಾತೃಗಳೆಂದು ಕೀರ್ತಿ ಪಡೆದಿದ್ದ ಸರ್‌ ಎಂ. ವಿಶ್ವೇಶ್ವರಯ್ಯನವರು ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿದ್ದಾಗ ಇಂಥ ಒಂದು ಯೋಜನೆ ಸಾಧ್ಯವಾಯಿತು. ಅವರ ಸೂಚನೆಯಂತೆ ಆಗಿನ ಕಾಲದಲ್ಲಿ ಪ್ರಸಿದ್ಧವಾಗಿದ್ದ ‘ಸಂಘದಭ್ಯುದಯ ಸಮಾಜ’ದ 1914ನೇ ಇಸವಿಯ ವಾರ್ಷಿಕ ಅಧಿವೇಶನದಲ್ಲಿ ಒಂದು ನಿರ್ಣಯವನ್ನು ಸಭೆಯ ಮುಂದಿಟ್ಟು ಅದರ ಒಪ್ಪಿಗೆಯನ್ನು ಪಡೆಯಲಾಯಿತು.

ಿರ್ಣಯದ ಭಾಷೆ ಹೀಗಿದೆ:
‘ಕರ್ಣಾಟಕ ಭಾಷೆಯಲ್ಲಿ ವಿವಿಧ ಗ್ರಂಥಗಳನ್ನು ರಚಿಸುವವರ ಪ್ರೋತ್ಸಾಹಕ್ಕಾಗಿ ಸ್ವತಂತ್ರಾಧಿಕಾರವುಳ್ಳ ಪರಿಷತ್ತೊಂದು ಇರಬೇಕು ಮತ್ತು ಸರ್ಕಾರದವರು ಆ ಪರಿಷತ್ತನ್ನು ಅಂಗೀಕರಿಸಿ ಅದಕ್ಕೆ ವಿಶೇಷ ಸಹಾಯ ಮಾಡುವುದು ಉಚಿತವೆಂದು ಸಂಘದಭ್ಯುದಯ ಸಮಾಜವು ಸರ್ಕಾರಕ್ಕೆ ಶಿಫಾರಸು ಮಾಡಬೇಕು’.

ಈ ನಿರ್ಣಯದಲ್ಲಿಯೇ ‘ಕರ್ನಾಟಕ’, ‘ಪರಿಷತ್ತು’ ಎಂಬ ಎರಡು ಪದಗಳು ಇರುವುದೂ ಅವುಗಳಿಂದಲೇ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಉದಯವಾದುದೂ ಇದರಿಂದ ಗೊತ್ತಾಗುತ್ತದೆ. ಈ ನಿರ್ಣಯವನ್ನು ಅನುಸರಿಸಿ 1915ನೇ ಮೇ ತಿಂಗಳು 5ನೆಯ ತಾರೀಖು ಬೆಂಗಳೂರಿನ ಗೌರ್‍ನಮೆಂಟ್‌ ಹೈಸ್ಕೂಲಿನಲ್ಲಿ ಒಂದು ಸಭೆ ಸೇರಿತು.

ಈ ಸಭೆಗೆ ಬೆಳಗಾವಿ, ಕಾರವಾರ, ಬೊಂಬಾಯಿ, ಮದರಾಸು, ಧಾರವಾಡ, ಬಳ್ಳಾರಿ, ಬೊಂಬಾಯಿಯ ದೇಶೀಯ ಸಂಸ್ಥಾನಗಳು, ಮದರಾಸಿನ ದಕ್ಷಿಣ ಕನ್ನಡ ಜಿಲ್ಲೆಗಳು ಮುಂತಾದ ಕಡೆಗಳಿಂದ ಜನರು ಪ್ರತಿನಿಧಿಗಳಾಗಿ ಉತ್ಸಾಹದಿಂದ ಬಂದಿದ್ದರು. ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘ, ಬೊಂಬಾಯಿಯ ಕರ್ಣಾಟಕ ಸಭೆ ಮುಂತಾದವೂ ಪ್ರತಿನಿಧಿಗಳನ್ನು ಕಳುಹಿಸಿದ್ದವು. ಧಾರವಾಡದ ‘ಕರ್ನಾಟಕ ವೃತ್ತ’ ಮತ್ತು ‘ಧನಂಜಯ’, ಹುಬ್ಬಳ್ಳಿಯ ‘ಸಚಿತ್ರ ಭಾರತ ಪತ್ರಿಕೆ’, ಮಂಗಳೂರಿನ ‘ಸ್ವದೇಶಾಭಿಮಾನಿ’ ಮತ್ತು ಮೈಸೂರಿನ ‘ವೃತ್ತಾಂತ ಪತ್ರಿಕೆ’ ಈ ಪತ್ರಿಕೆಗಳ ಸಂಪಾದಕರುಗಳು ಹಾಜರಿದ್ದರು.

ಹೀಗಿದ್ದುದರಿಂದ ಕನ್ನಡನಾಡಿನ ಎಲ್ಲ ಕಡೆಗಳಿಂದಲೂ ಪ್ರತಿನಿಧಿಗಳು ಬಂದ ಹಾಗಾಯಿತು. ಅಂದು ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಸ್ಥಾಪಿತವಾಗಿ, ಕೆಲವು ದಿನಗಳಲ್ಲಿಯೇ ಪರಿಷತ್ತಿನ ನಿಬಂಧನೆಗಳು ರೂಪುಗೊಂಡವು. ಆ ಸಭೆಯಲ್ಲಿ ಒಪ್ಪಿಗೆ ಪಡೆದ ಪರಿಷತ್ತಿನ ಉದ್ದೇಶಗಳಿವು:
 
1. ಕನ್ನಡ ಭಾಷೆಯಲ್ಲಿ ಪಂಡಿತ ಯೋಗ್ಯವಾದ ವ್ಯಾಕರಣ, ಚರಿತ್ರೆ, ನಿಘಂಟು ಈ ಮೂರನ್ನೂ ಬರೆಯಿಸುವುದು ಅಥವಾ ಬರೆಯುವುದಕ್ಕೆ ಸಹಾಯ ಮಾಡುವುದು.
2. ನವೀನ ಶಾಸ್ತ್ರಗಳಿಗೆ ಸಂಬಂಧಪಟ್ಟ, ಕನ್ನಡ ಗ್ರಂಥಗಳಲ್ಲಿ ಉಪಯೋಗಿಸಲು ಯೋಗ್ಯವಾದ ಪಾರಿಭಾಷಿಕ ಶಬ್ದಗಳ ಕೋಶವನ್ನು ಪ್ರಕಟಿಸುವುದು.
3. ತತ್ವಶಾಸ್ತ್ರ, ಪ್ರಕೃತಿ ವಿಜ್ಞಾನ, ಚರಿತ್ರೆ, ಸಾಹಿತ್ಯ – ಇವೇ ಮೊದಲಾದ ವಿಷಯಗಳಿಗೆ ಸಂಬಂಧಪಡುವ ಗ್ರಂಥಗಳನ್ನು ಕನ್ನಡದಲ್ಲಿ ಬರೆಯುವುದಕ್ಕೆ ಪ್ರೋತ್ಸಾಹ ಕೊಟ್ಟು ಅವುಗಳನ್ನು ಪ್ರಚುರಪಡಿಸುವುದು.
4. ಕನ್ನಡ ಭಾಷೆಗೂ ಕನ್ನಡ ಗ್ರಂಥಗಳಿಗೂ ಸಂಬಂಧಪಟ್ಟ ಎಲ್ಲಾ ಚರ್ಚಾಂಶಗಳನ್ನೂ ವಿಚಾರಮಾಡಿ ನಿರ್ಣಯಿಸುವುದು.
5. ಇತರ ಭಾಷೆಗಳಲ್ಲಿರುವ ಉತ್ತಮ ಗ್ರಂಥಗಳನ್ನು ಕನ್ನಡಿಸಿ ಪ್ರಕಟಿಸುವುದು.
6. ಉತ್ಕೃಷ್ಟ ಪ್ರಾಚೀನ ಗ್ರಂಥಗಳನ್ನೂ ಕನ್ನಡ ದೇಶಗಳ ಚರಿತ್ರೆಯನ್ನೊಳಗೊಂಡ ಗ್ರಂಥಗಳನ್ನೂ ಸಂಗ್ರಹಿಸಿ, ಅದನ್ನು ಪರಿಷ್ಕರಿಸಿ ಪ್ರಕಟಿಸುವುದೂ ಅಲ್ಲದೆ, ಕನ್ನಡನಾಡಿನ ಪೂರ್ವಸ್ಥಿತಿಯನ್ನು ವಿಶದಗೊಳಿಸುವ ವಸ್ತುಗಳನ್ನು ಕೂಡಿಟ್ಟು ಅವುಗಳನ್ನು ಕಾಪಾಡಲಿಕ್ಕಾಗಿ ಪ್ರಾಚೀನ ವಸ್ತು ಸಂಗ್ರಹಾಲಯ ಏರ್ಪಡಿಸುವುದು.
7. ಕರ್ಣಾಟಕ ಭಾಷಾ ಸಂಸ್ಕರಣ, ಕರ್ಣಾಟಕ ಗ್ರಂಥಾಭಿವೃದ್ಧಿಗಳನ್ನು ಕುರಿತು ಪಂಡಿತ ಯೋಗ್ಯವಾದ ಲೇಖನಗಳನ್ನೊಳಗೊಂಡ ಕನ್ನಡದ ಪತ್ರಿಕೆಗಳನ್ನು ಪ್ರಕಟಿಸುವುದು.
8. ಕರ್ಣಾಟಕ ಗ್ರಂಥಕರ್ತರು ಬರೆದಿರುವ ಪುಸ್ತಕಗಳನ್ನು ಕೊಂಡುಕೊಳ್ಳುವುದರಿಂದಾಗಲಿ, ಬರೆದಿರುವ ಪುಸ್ತಕಗಳನ್ನು ಅಚ್ಚು ಹಾಕಿಸಿಕೊಳ್ಳುವುದಕ್ಕೆ ಮುಂಗಡವಾಗಿ ಹಣವನ್ನು ಕೊಡುವುದರಿಂದಾಗಲಿ, ಅವರ ಗ್ರಂಥಗಳ ಮುದ್ರಣಾಧಿಕಾರವನ್ನು (copy right) ಹಣ ಕೊಟ್ಟು ತೆಗೆದುಕೊಳ್ಳುವುದರಿಂದಾಗಲಿ ಅವರಿಗೆ ಪ್ರೋತ್ಸಾಹ ಕೊಟ್ಟು, ಸ್ವತಂತ್ರ ಗ್ರಂಥಗಳನ್ನು ಬರೆದು ತಾವೇ ಹಣ ವೆಚ್ಚಮಾಡಿ ಪ್ರಕಟಿಸುವ ಗ್ರಂಥಕರ್ತರಿಗೆ ಬಿರುದನ್ನಾಗಲಿ ಸಂಭಾವನೆಯನ್ನಾಗಲಿ ಕೊಡುವುದು.
9. ಕರ್ಣಾಟಕ ಭಾಷೆಗೂ ಸಾಹಿತ್ಯಕ್ಕೂ ಸಂಬಂಧಿಸಿದ ಅಪೂರ್ವ ಪರಿಶೋಧನ ಕಾರ್ಯದಲ್ಲಿ ನಿರತರಾಗಿರುವ ಕನ್ನಡ ಅಥವಾ ಸಂಸ್ಕೃತ ವಿದ್ವಾಂಸರಿಗೆ ಪಂಡಿತ ವೇತನಗಳನ್ನು ಕೊಡುವುದು.
10. ಕರ್ಣಾಟಕ ಭಾಷೋನ್ನತಿಗೂ ಗ್ರಂಥಾಭಿವೃದ್ಧಿಗೂ ಸಂಬಂಧಪಡುವ ಸಮಸ್ತ ವಿಷಯಗಳನ್ನೂ ಆಯಾ ಸರ್ಕಾರದವರ ಪರಾಮರ್ಶಕ್ಕೆ ತಂದು ಅವನ್ನು ತೃಪ್ತಿಕರವಾಗಿ ವ್ಯವಸ್ಥೆ ಮಾಡಿಸಿಕೊಳ್ಳುವುದಕ್ಕೆ ತಕ್ಕ ಏರ್ಪಾಟು ಮಾಡುವುದು.
11. ಕನ್ನಡ ಮಾತನಾಡುವ ಪ್ರದೇಶಗಳಲ್ಲಿ ಸಾಧ್ಯವಾದಷ್ಟು ಸ್ಥಳಗಳಲ್ಲಿ ಕನ್ನಡದ ವಾಚನಾಲಯಗಳನ್ನೂ ಪುಸ್ತಕ ಭಂಡಾರಗಳನ್ನೂ ಸ್ಥಾಪಿಸುವುದು.
12. ಕನ್ನಡ ನಾಡುಗಳ ಪ್ರಮುಖರನ್ನು ಸೇರಿಸಿ ಆಗಾಗ ಸಭೆಗಳನ್ನೇರ್ಪಡಿಸುವುದು ಮತ್ತು ಸಮರ್ಥರಾದ ವಿದ್ವಾಂಸರಿಂದ ಉಪನ್ಯಾಸಗಳನ್ನು ಮಾಡಿಸುವುದು.

‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಇಂಥ ಉದಾತ್ತವಾದ ಧ್ಯೇಯಗಳನ್ನು ರೂಪಿಸುವುದಕ್ಕೆ ಸಹಾಯ ಮಾಡಿದ ಮಹನೀಯರನ್ನು ನೆನೆಸಿಕೊಳ್ಳಬೇಕಾದುದ ನಮ್ಮ ಕರ್ತವ್ಯ.

ಅಂಥವರಲ್ಲಿ ಕೆಲವರು:  1. ಸರ್‌. ಎಂ. ವಿಶ್ವೇಶ್ವರಯ್ಯ, ಸರದಾರ್‌ ಎಂ. ಕಾಂತರಾಜೇ ಅರಸು, ರಾಜಮಂತ್ರಪ್ರವೀಣ ಎಚ್‌.ವಿ. ನಂಜುಂಡಯ್ಯ, ರಾವ್‌ಬಹದ್ದೂರ್‌ ಎಂ. ಶಾಮರಾವ್‌, ಆರ್‌. ರಘುನಾಥರಾವ್‌, ಎಂ.ಎಸ್‌. ಪುಟ್ಟಣ್ಣ, ಕೆ.ಸಿ. ಪುಟ್ಟಣ್ಣಶೆಟ್ಟಿ, ಎಂ. ವೆಂಕಟಕೃಷ್ಣಯ್ಯ, ಎಚ್‌. ಲಿಂಗರಾಜ ಅರಸು, ಕರ್ಪೂರ ಶ್ರೀನಿವಾಸರಾವ್‌, ವಿ.ಎಸ್‌. ಅಚ್ಯುತರಾವ್‌, ಬಿ. ಕೃಷ್ಣಪ್ಪ, ಆರ್‌. ನರಸಿಂಹಾಚಾರ್ಯ, ಚ. ವಾಸುದೇವಯ್ಯ, ಕವಿತಿಲಕ ಅಯ್ಯಾಶಾಸ್ತ್ರಿ, ಮುದವೀಡು ಕೃಷ್ಣರಾಯ, ಕೆರೂರು ವಾಸುದೇವಾಚಾರ್ಯ, ಹುರುಳಿ ಭೀಮರಾಮ ಹಾಗೂ ಆಲೂರು ವೆಂಕಟರಾಯರು.

ಇವರುಗಳಲ್ಲದೆ ಸಭೆಗಳಲ್ಲಿ ಭಾಗಿಗಳಾಗಿದ್ದ ಎಲ್ಲರೂ ಒಂದೇ ಕೊರಳಿನಿಂದ ಇಂಥ ಪರಿಷತ್ತಿನ ಸ್ಥಾಪನೆಗೆ ಸಮರ್ಥನೆ ನೀಡಿದರು. ಈ ಸಭೆಯಲ್ಲಿ ಈ ಪರಿಷತ್ತು ಮೈಸೂರಿಗೆ ಮಾತ್ರ ಅನ್ವಯಿಸಬಾರದೆಂದೂ ಒಟ್ಟು ಕರ್ಣಾಟಕ ದೇಶಕ್ಕೆ ಪ್ರತಿನಿಧಿಯಾಗಿರಬೇಕೆಂದೂ ನಿಶ್ಚಿತವಾಯಿತು.

ಪರಿಷತ್ತು ಚಿನ್ನದ ಹಬ್ಬವನ್ನು ವಜ್ರಮಹೋತ್ಸವವನ್ನೂ ಈಗಾಗಲೇ ಆಚರಿಸಿಕೊಂಡಿದೆ. ಅದು ಹುಟ್ಟಿದಾಗ ಹೊಂದಿದ್ದ ಎಲ್ಲ ಕನ್ನಡ ನಾಡನ್ನೂ ಪ್ರತಿನಿಧಿಸುವ ಅಧಿಕಾರವನ್ನು ಇಂದಿನವರೆಗೂ ಕಾಪಾಡಿಕೊಂಡು ಬಂದಿದೆ.

ಪರಿಷತ್ತು ಸಂಸ್ಥೆಯಾದ ಮೇಲೂ ಅದಕ್ಕೆ ಒಂದು ಕಟ್ಟಡವಿಲ್ಲದೆ ಅನೇಕ ವರ್ಷಗಳು ಬಾಡಿಗೆಯ ಕಟ್ಟಡಗಳಲ್ಲಿ ಇರಬೇಕಾಯಿತು. ಈ ಬಾಡಿಗೆಯ ಕಟ್ಟಡ ಹೇಗಿತ್ತು ಎಂಬುದರ ರೀತಿಯನ್ನು ತೋರಿಸುವುದಕ್ಕೆ ದಿ. ಬಿ.ಜಿ.ಎಲ್‌. ಸ್ವಾಮಿಯವರು ಒಂದು ಚಿತ್ರವನ್ನೇ ಬಿಡಿಸಿ ತೋರಿಸಿದ್ದಾರೆ.

‘ಶ್ರೀ ಕೃಷ್ಣರಾಜ ಪರಿಷನ್ಮಂದಿರ’ ಎಂಬ ಕಟ್ಟಡ ಎದ್ದು ನಿಲ್ಲಬೇಕಾದರೆ ಅನೇಕರ ಉದಾರ ಸಹಾಯ ಅಗತ್ಯವಾಯಿತು. ಹೀಗೆ ದಾನ ಮಾಡಿದವರನ್ನು ನೆನೆಯುವುದು ಸೂಕ್ತ. ಪರಿಷತ್ತಿನ ಉಪಾಧ್ಯಕ್ಷರಾಗಿದ್ದ ಕರ್ಪೂರ ಶ್ರೀನಿವಾಸರಾಯರು ಮಾಡಿದ ಪ್ರಯತ್ನದ ಫಲವಾಗಿ ಶ್ರೀ ಕೃಷ್ಣರಾಜ ಒಡೆಯರ್‌ 5000 ರೂಪಾಯಿಗಳನ್ನು, ಶ್ರೀಮದ್ಯುಮರಾಜರು 3000 ರೂಪಾಯಿಗಳನ್ನು, ಶ್ರೀ ಎಂ. ಕಾಂತರಾಜ ಅರಸರು 5000 ರೂಪಾಯಿಗಳನ್ನು ಕೊಟ್ಟರು. ಪರಿಷತ್ತು ಸ್ವಂತವಾಗಿ 3000 ರೂಪಾಯಿಗಳನ್ನು ಕೂಡಿಸಿತು.

ಸರ್‌ ಮಿರ್ಜಾ ಇಸ್ಮಾಯಿಲ್‌ ಅವರು ದಿವಾನರಾಗಿದ್ದ ಪರಿಷತ್ತಿಗೆ ಈಗಿರುವ ನಿವೇಶನವನ್ನು ಉಚಿತವಾಗಿ ಕೊಡಿಸಿ ಸರಕಾರದಿಂದ 16000 ರೂಪಾಯಿಗಳ ಸಹಾಯವನ್ನು ಒದಗಿಸಿಕೊಟ್ಟರು. ಹೀಗೆ ಕರ್ಪೂರ ಶ್ರೀನಿವಾಸರಾಯರ ನೇತೃತ್ವದಲ್ಲಿ ಇಂಜಿನಿಯರ್‌ ಶ್ರೀಕಾಂತೋಣಿರಾಯರ ಮೇಲ್ವಿಚಾರಣೆಯಲ್ಲಿ ಶ್ರೀಕೃಷ್ಣರಾಜ ಪರಿಷನ್ಮಂದಿರವು 1934ರಲ್ಲಿ ಸಿದ್ಧವಾಯಿತು.

ಈಚೆಗೆ ಸುವರ್ಣಮಹೋತ್ಸವದ ಕಟ್ಟಡವೂ ವಜ್ರಮಹೋತ್ಸವದ ಕಟ್ಟಡವೂ ಲಕ್ಷಾಂತರ ರೂಪಾಯಿಗಳ ವೆಚ್ಚದಲ್ಲಿ ನಿರ್ಮಾಣವಾಗಿ, ಅವೆರಡು ಕಟ್ಟಡದ ಮಧ್ಯೆ ಶ್ರೀ ಕೃಷ್ಣರಾಜ ಪರಿಷನ್ಮಂದಿರವು ಇರುಕಿರುವಂತೆ ಕಾಣುತ್ತದೆ. ಆದರೆ ಆ ಸುಂದರವಾದ ಕಟ್ಟಡದ ಇತಿಹಾಸವನ್ನು ಬಲ್ಲವರಿಗೆ ಆ ಮಂದಿರ ಜಾತಕ ಫಲದಿಂದ ಈ ಎರಡು ಕಟ್ಟಡಗಳೂ ಎದ್ದು ನಿಲ್ಲುವುದು ಸಾಧ್ಯವಾಯಿತು. ಎಂಬುದರ ಅರಿವಾಗದಿರದು. ಈಗಂತೂ ಪರಿಷತ್ತಿಗೆ ಸ್ಥಳಾವಕಾಶದ ಕೊರತೆ ಇಲ್ಲ. ಒಂದು ದೊಡ್ಡ ರಂಗಮಂದಿರದ ಸೃಷ್ಟಿಯಾದರೆ ಕನ್ನಡದ ಎಲ್ಲ ಕಾರ್ಯಗಳನ್ನು ಒಂದೇ ಸ್ಥಳದಿಂದ ನಿರ್ದೇಶಿಸಿಕೊಂಡು ಹೋಗುವುದು ಸಾಧ್ಯವಾಗುತ್ತದೆ.

ಪರಿಷತ್ತಿನ ಅಂಗರಚನೆಯು ಕಾಲಕ್ರಮದಲ್ಲಿ ಅನೇಕ ಬದಲಾವಣೆಗಳನ್ನು ಪಡೆದಿದೆ. ಮೊದಲನೆಯದಾಗಿ ‘ಕರ್ಣಾಟಕ ಸಾಹಿತ್ಯ ಪರಿಷತ್ತು’ ಈಗ ‘ಕನ್ನಡ ಸಾಹಿತ್ಯ ಪರಿಷತ್ತು’ ಆಗಿದೆ. ಈಗ ಕರ್ಣಾಟಕದ ಏಕೀಕರಣವಾದ ಮೇಲೆ ಎಲ್ಲ ಜಿಲ್ಲೆಗಳಿಗೂ ಕಾರ್ಯಸಮಿತಿಯಲ್ಲಿ ಸ್ಥಾನ ಸಿಕ್ಕಿ ಅದು ವಿಸ್ತಾರಗೊಂಡಿದೆ. ಇಂದಿನ ವಿಸ್ತಾರವಾದ ಪ್ರಾತಿನಿಧ್ಯವೂ ಪರಿಷತ್ತಿನ ಅಂಗರಚನೆಯಿಂದ ಏಕೀಕರಣದ ಪರಿಣಾಮಗಳನ್ನು ಸಾರ್ವಜನಿಕವಾಗಿ ಅಳೆಯುವುದೂ ಅಭಿವೃದ್ಧಿಪಡಿಸುವುದೂ ಸಾಧ್ಯವಾಗಿದೆ.

ಪರಿಷತ್ತಿನ ಕಾರ್ಯವ್ಯಾಪ್ತಿ ಈಗ ತುಂಬ ವಿಸ್ತಾರಗೊಂಡಿದೆ. ಕನ್ನಡದ ಯಾವ ಕಾರ್ಯಕ್ಕೂ ಜನರೂ ಸರ್ಕಾರವೂ ಪರಿಷತ್ತಿನ ಸಹಕಾರವನ್ನೂ ಕೋರುವ ಮಟ್ಟಕ್ಕೆ ಅದು ಬೆಳೆದಿರುವುದು ಸಂತಸದ ವಿಷಯ.

ಪರಿಷತ್ತು ಸಾಮಾನ್ಯವಾಗಿ ವಾರ್ಷಿಕ ಸಾಹಿತ್ಯ ಸಮ್ಮೇಳನಗಳನ್ನು ಏರ್ಪಡಿಸಿ ಕನ್ನಡ ಹಿರಿಯ ವಿದ್ವಾಂಸರನ್ನು ಕವಿಗಳನ್ನು ಲೇಖಕರನ್ನೂ ಗೌರವಿಸುತ್ತಾ ಇದೆ. ಈ ಸಮ್ಮೇಳನಗಳು ದೇಶದ ವಿವಿಧ ಪ್ರಮುಖ ನಗರಗಳಲ್ಲಿ ಏರ್ಪಾಟಾಗುವುದರಿಂದ ಆಯಾ ಪ್ರದೇಶದ ಜನರಿಗೆ ಸಮ್ಮೇಳನಕ್ಕೆ ಬರುವ ಅನೇಕ ಸಾಹಿತಿಗಳ ಸಂದರ್ಶನವೂ ಸಾಹಿತಿಗಳ ಪರಸ್ಪರ ವಿಚಾರ ವಿನಿಮಯವೂ ಸಾಧ್ಯವಾಗಿ ಸಾಹಿತ್ಯ ಕಾರ್ಯಕ್ಕೆ ಇದರಿಂದ ತುಂಬ ಪ್ರಯೋಜನವಾಗುತ್ತಿದೆ. ಇಲ್ಲಿಯವರೆಗೆ 80 ಸಮ್ಮೇಳನಗಳು ಜರುಗಿ ವಿದ್ವತ್ಕಾರ್ಯಕ್ಕೆ ಪ್ರೋತ್ಸಾಹ ದೊರಕಿದೆ. ಪರಿಷತ್ತಿನ ಸಮ್ಮೇಳನಗಳಲ್ಲಿ ನಡೆದ ಗೋಷ್ಠಿಗಳ ಕಾರ್ಯಕ್ರಮವು ಅನೇಕ ವೇಳೆ ಸಾಹಿತ್ಯ ಚರಿತ್ರೆಗೆ ಪೂರಕ ವಿಷಯಗಳನ್ನು ಒದಗಿಸಿದೆ.

ಕನ್ನಡ ಸಾಹಿತ್ಯ ಪರೀಕ್ಷೆಗಳು, ಗಮಕ ಶಿಕ್ಷಣ, ಗಮಕ ಪ್ರೌಢಶಿಕ್ಷಣ, ಶೀಘ್ರಲಿಪಿ, ಬೆರಳಚ್ಚುಗಾರರ ತರಬೇತಿ, ಪತ್ರಿಕೋದ್ಯಮ ಶಿಕ್ಷಣ, ಜಾನಪದ ಕಲೆಯ ಸಮ್ಮೇಳನ, ಕೀರ್ತನಕಾರರ ಸಮ್ಮೇಳನ, ಪತ್ರಿಕಾಕರ್ತರ ಸಮ್ಮೇಳನ, ಕನ್ನಡ ಸಂಘಗಳ ಸಮ್ಮೇಳನ ಇತ್ಯಾದಿಯಾಗಿ ಅನೇಕ ಕಾರ್ಯಗಳು ಪರಿಷತ್ತಿನ ವ್ಯಾಪ್ತಿಗೆ ಸೇರಿವೆ.

ಪರಿಷತ್ತಿನಲ್ಲಿ ತುಂಬ ಉಪಯುಕ್ತ ಗ್ರಂಥಗಳ ಒಂದು ಹಳೆಯ ಗ್ರಂಥ ಭಂಡಾರವಿದೆ ಸಂಶೋಧಕರಿಗೂ ಸಾಮಾನ್ಯ ವಾಚಕರಿಗೂ ಇದರಿಂದ ಬಹಳ ಪ್ರಯೋಜನವಾಗುತ್ತಿದೆ. ಕನ್ನಡನಾಡಿನಲ್ಲಿ ಊರೂರುಗಳಲ್ಲಿಯೂ ಇರುವ ಕನ್ನಡ ಸಂಘಗಳೊಡನೆ ಪರಿಷತ್ತು ಸಂಪರ್ಕವನ್ನು ಇಟ್ಟುಕೊಂಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT