ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆನಪಿನ ಮಳೆ ಸುರಿಯಿತು ಇಳೆಗೆ

ಪ್ರಬಂಧ
Last Updated 11 ಜುಲೈ 2015, 19:30 IST
ಅಕ್ಷರ ಗಾತ್ರ

ಮಳೆ ನಮ್ಮನ್ನು ನೆನಪಿನಂಗಳಕ್ಕೆ ಕರೆದುಕೊಂಡು ಹೋದಂತೆ ಬೇರಾವುದೂ ಮಾಡುವುದಿಲ್ಲ! ಮೋಡಗಳಿಗೆ, ಅವುಗಳ ಒಡಲೊಳಗಿರುವ ಹನಿಗಳಿಗೆ ಎಲ್ಲಿಂದಲೋ ತೇಲಿಸಿಕೊಂಡು ಬಂದ ನೆನಪುಗಳನ್ನು ಮನೆಯ ಮಾಡಿಗೇ ಸುರಿದು ಹಂಚಿನ ದಾರಿಯ ಮೂಲಕ ಅಂಗಳಕ್ಕೆ ಹರಡುವ ಅದ್ಭುತ ಶಕ್ತಿಯಿದೆ. ಬೇಸಿಗೆಯಲ್ಲಿ ನೆನಪುಗಳು ಬೆವರಾಗಿ ಹೊರಬಂದು ಕಸಿವಿಸಿಯಾಗುವುದೂ ಇದೆ! ಮೊದಲೇ ಉರಿಬಿಸಿಲು, ಅದರ ಮೇಲೆ ನೆನಪಿನ ಭಾರ! ನೆನಪೇ ಹೋಗು ಎನ್ನುವ ಸ್ಥಿತಿಯದು. ಆದರೆ ಮಳೆಗಾಲದಲ್ಲಿ ಹನಿ ಹನಿ ನೀರು ನೆನಪುಗಳನ್ನು ಒದ್ದೆ ಮಾಡಿ ಖುಷಿಕೊಡುತ್ತದೆ. ಇದು ‘ಬಾ ನೆನಪೇ ಬಾ’ ಎನ್ನುವ ಮುಂಗಾರಿನ ಕಾಲ!

ಅಂಗಳವಷ್ಟೇ ಅಲ್ಲ, ಮಳೆ ನೆನಪುಗಳನ್ನು ನೀರಿನೊಂದಿಗೆ ಸೇರಿಸಿ, ತೇಲಿಸಿ, ಮುಳುಗಿಸಿ ಹಳ್ಳ ಕೊಳ್ಳದ ಹಾದಿ ಹಿಡಿದು ಊರ ನದಿಯಲ್ಲಿ ಸ್ನಾನ ಮಾಡಿಸಿ ಸಮುದ್ರ ಸೇರುವಂತೆ ಮಾಡುತ್ತದೆ. ಇಲ್ಲಿಂದ ಮುಂದೆ ನೆನಪುಗಳು ಅಲೆಗಳಾಗಿಬಿಡುತ್ತವೆ. ನೀವು ಸಮುದ್ರ ತೀರದಲ್ಲಿ ನಿಂತರೂ ಸಾಕು. ಈ ಅಲೆಗಳಿಗೆ ನಿಮ್ಮ ಗುರುತು ಸಿಗುತ್ತದೆ. ಅದಕ್ಕೇ ಅಲ್ಲವೇ ಅವುಗಳು ಓಡೋಡಿ ನಿಮ್ಮ ಪಾದಗಳ ಬಳಿಯೇ ಬರುವುದು?

ನಿಮಗೆ ನೆನಪುಗಳೆಷ್ಟು ಮುಖ್ಯವೋ ಕಡಲಿಗೂ ಅಷ್ಟೇ ಮುಖ್ಯ! ನಿಮ್ಮೂರಿನ ಹಳ್ಳಗಳು, ನದಿಗಳು ನೀವು ಬರುವುದನ್ನೆ ಕಾಯುತ್ತಿರುತ್ತವೆ! ಅದೂ ಮಳೆಗಾಲದಲ್ಲಿ! ಅದೂ ಜೋರಾಗಿ ಮಳೆ ಬರುತ್ತಿರುವಾಗಲೆ! ಅವುಗಳಿಗೂ ನೆನಪುಗಳನ್ನು ಹಂಚಿಕೊಳ್ಳುವ ಆತುರ ಮತ್ತು ಕಾತುರ!

ನೆನಪುಗಳು ನೆನೆಯಬೇಕು; ಒದ್ದೆಯಾಗಬೇಕು! ಆಗಲೇ ಅವುಗಳಿಗೆ ಜೀವ ಬರುವುದು! ಒದ್ದೆಯಾದ ನೆನಪುಗಳಿಗೆ ಥಂಡಿಯಾಗಿ ಶೀತವೂ ಆಗಬೇಕು; ಶೀನೂ ಬರಬೇಕು! ಆಗಲೇ ಅವುಗಳಿನ್ನೂ ಚುರುಕಾಗಿವೆಯೆಂದು ತಿಳಿಯುವುದು! ಎರಡು ಶೀನು ಒಟ್ಟೊಟ್ಟಿಗೆ ಬಂದರೆ ‘ಕೆಲಸವಾಯ್ತು’ ಎನ್ನುತ್ತಿದ್ದ ಅಜ್ಜಿಯೂ ಮಳೆಗಾಲದಲ್ಲೇ ಯಾಕೆ ಮತ್ತೆ ಮತ್ತೆ ನೆನಪಾಗುತ್ತಾಳೆ? ಅಜ್ಜಿ ಮನೆ ಇರುವುದೆ ಹೊಳೆಗೆ ಅಂಟಿಕೊಂಡು! ಅಲ್ಲಿ ಆಟವಾಡುವ ಅಂಗಳ ಸಣ್ಣದು! ಆದರೆ ನೀರಾಟವಾಡುವ ಹೊಳೆ ತುಂಬಾ ದೊಡ್ಡದು. ನೀರು ಇರುವಾಗ ಅಂಗಳ ಯಾರಿಗೆ ಬೇಕು ಎನ್ನುತ್ತೀರಾ? ಇದು ಆ ಹೊಳೆಗೂ ಗೊತ್ತು! ಅದಕ್ಕೇ ಇರಬೇಕು, ಪ್ರತೀ ಮುಂಗಾರಿನಲ್ಲೂ ಹೊಳೆಗೆ ನೆರೆ ಬರುತ್ತದೆ! ಆಗ ಅಂಗಳ ನೀರಿನೊಳಗೆ ಅಡಗುತ್ತದೆ!

ಆಗೊಮ್ಮೆ ಈಗೊಮ್ಮೆ ನೆನಪುಗಳಿಗೂ ನೆರೆ ಬರಬೇಕು! ಒಂದು ನೆನಪು ಬಂದು ಕಾಡುವುದಕ್ಕೂ ನೆನಪಿನ ನೆರೆ ಬಂದು ಏರು ಧ್ವನಿಯಲ್ಲಿ ಹಾಡುವುದಕ್ಕೂ ತುಂಬಾ ವ್ಯತ್ಯಾಸವಿದೆ! ನೆರೆ ಅಂಗಳವನ್ನು, ದಾರಿಯನ್ನು, ಗದ್ದೆಯನ್ನು ಎರಡು ದಿನಗಳ ಮಟ್ಟಿಗಾದರೂ ಮುಳುಗಿಸಿಬಿಡುತ್ತದೆ! ಈಗ ಬರಿಗಣ್ಣಿಗೆ ಕಾಣುವುದು ನೀರು ಮಾತ್ರ! ಆ ನೀರಿನಲ್ಲಿ ನೆನಪಿನ ದೋಣಿ ವಿಹರಿಸಿದಾಗಲೇ ಅಲ್ಲವೆ ಒಂದರ ಹಿಂದೆ ಒಂದರಂತೆ ನೆನಪು ನೀರಾಗಿ ಬರುವುದು?

ಅಜ್ಜಿ ನೆನಪಾದರೆ ನೆರೆ ಬಂತೆಂದೇ ಅರ್ಥ! ಅದು ನೆನಪಿನ ನೆರೆ! ಗೆಣಸಿನ ಹಪ್ಪಳದ, ಹಲಸಿನ ಹಣ್ಣಿನ ಗರಿಗರಿ ನೆನಪು! ಅಜ್ಜಿ ಕತೆ ಹೇಳುತ್ತಿದ್ದುದು ತುಂಬಾ ಕಡಿಮೆ; ಅಥವಾ ಅವಳ ಬದುಕೇ ಕತೆಯಾದುದರಿಂದ ಬೇರೆ ಕತೆ ಹೇಳುವ ಅಗತ್ಯವಿರಲಿಲ್ಲವೋ ಏನೋ! ಬೆಳಗಿನ ತಿಂಡಿಯಿಂದ ಹಿಡಿದು ರಾತ್ರಿಯ ಊಟದ ತನಕ ಅಜ್ಜಿ ಮಾಡಿ ಬಡಿಸುತ್ತಿದ್ದ ತಿನಿಸುಗಳಿಗಿಂತ ರುಚಿಯಾದ ಕತೆಗಳು ಬೇರುಂಟೆ? ನಿತ್ಯಕ್ಕಾದರೆ ಗಂಜಿಯೂ ನಡೆದೀತು. ಆದರೆ ಮೊಮ್ಮಕ್ಕಳಿಗೆ ಗಂಜಿ ಉಣಿಸಿದರೆ ಹೇಗೆ? ಅದೂ ಮಳೆಗಾಲದಲ್ಲಿ?

ಅಜ್ಜನ ಭಜನೆ ನೆನಪಾಗುವುದೂ ಮಳೆಗಾಲದಲ್ಲೆ! ಅದೂ ನೀರು ಅಂಗಳಕ್ಕೆ ಬಂದು ಅಲ್ಲಿಂದ ನೇರವಾಗಿ ಮನೆಯೊಳಗೆ ಬಂದಾಗಲೆ. ಹೊರಗೆ ನಿಲ್ಲದ ಮಳೆ! ಮನೆಯೊಳಗೆ ಏರುತ್ತಿರುವ ನೆರೆ ನೀರು. ನಮ್ಮನ್ನೆಲ್ಲಾ ದೇವರ ಗೂಡಿನೆದುರು ಸಾಲಾಗಿ ಕುಳ್ಳಿರಿಸಿ, ಕೈಗಳಿಗೆ ತಾಳಕೊಟ್ಟು ಅಜ್ಜ ಭಜನೆ ಮಾಡಿಸುತ್ತಿದ್ದುದು ಆವಾಗಲೆ. ಅದು ನಿತ್ಯದ ಮುಸ್ಸಂಜೆ ಭಜನೆಯಲ್ಲ. ಅದು ನೆರೆ ಇಳಿಸುವ ವಿಶೇಷ ಭಜನೆ!

ಆಶ್ವರ್ಯವೆಂದರೆ ನೆರೆಗೆ ಆ ಭಜನೆಯ ಭಾವ ಅರ್ಥವಾಗುತ್ತಿತ್ತು. ನಮ್ಮ ಭಜನೆ ಕೇಳಿಯೇ ನೆರೆ ತಗ್ಗಿ ಮನೆ ಮಂದಿ ಹಿಗ್ಗಿ ಹೋಗುತ್ತಿದ್ದರೆನ್ನುವ ವಿಶ್ವಾಸ ನಮ್ಮೊಳಗಿತ್ತೋ ಏನೋ! ಅಂತೂ ನೆರೆ ಇಳಿದು ಹೊಸ್ತಿಲಿನಾಚೆ ಸರಿದಾಗಲೆ ಅಲ್ಲವೇ ನಾವು ಕಾಗದ ದೋಣಿ ಬಿಡುತ್ತಿದ್ದುದು? ಈಗ ನಗರದ ಮನೆಯಲ್ಲಿ ಯಾವ ಮಳೆಗೂ ನೀರು ಅಂಗಳದಲ್ಲಿ ನಿಲ್ಲುವುದೇ ಇಲ್ಲ! ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಿದ್ದೂ ನಾವೇ ತಾನೆ? ಹೀಗಿರುವಾಗ ಕಾಗದ ದೋಣಿ ಬಿಡುವುದಾದರೂ ಹೇಗೆ? ಆ ಚಿತ್ರ ಮಾಸಬಾರದೆಂದು ಕಾಗದದ ದೋಣಿ ಮಾಡಿ ಬಕೇಟಿನೊಳಗೆ ಹುಟ್ಟು ಹಾಕಿದ್ದೂ ಇದೆ!

ಆದರೆ ನೆನಪಿನ ದೋಣಿಗೆ ಹುಟ್ಟು ಹಾಕುವ ಬಗೆಯೆ ಬೇರೆ! ಈ ಬಗೆಯ ದೋಣಿ ವಿಹಾರದಿಂದಲೆ ಮನಸಿಗೆ ಬೇಕಾದ ಉಲ್ಲಾಸ, ಉತ್ಸಾಹ ಸಿಗುತ್ತಲೆ ಇರುತ್ತವೆ! ನೆನಪುಗಳ ಮಳೆ ನಿಂತರೆ ಮನಸಿನ ಇಳೆಗೆ ಬರಗಾಲ ಬರುತ್ತದೆ, ಮನಸು ಬಂಜರಾಗುತ್ತದೆ.

ಇಷ್ಟಕ್ಕೂ ಮಳೆ ಬರುವುದು ಮೇಲಿನಿಂದಲ್ಲ; ಕೆಳಗಿನಿಂದಲೆ! ಇಳೆಯಲ್ಲಿರುವ ನೀರು ಆವಿಯಾಗಿ ಬಿಟ್ಟುಕೊಟ್ಟ ಪಸೆಯೆ ಮಳೆಯಾಗಿ ಮತ್ತೆ ಕೆಳಗಿಳಿಯುತ್ತದೆ! ನೆನಪುಗಳೂ ಹಾಗೆಯೆ! ಈ ಮಣ್ಣಿನೊಳಗಿಂದ ಮೇಲೆದ್ದು ಹೋಗಿ ಮನದೊಳಗಿನ ಮುಗಿಲಾಗಿ ಸೂಕ್ತ ಸಮಯಕ್ಕಾಗಿ ಕಾದು ಕುಳಿತು ನೆನಪಿನ ಮಳೆಯಾಗಿ ರೂಪಾಂತರಗೊಳ್ಳುತ್ತದೆ! ನೆಲವಿಲ್ಲದ ಮೇಲೆ ಮುಗಿಲೆಲ್ಲಿ? ಮಳೆಯೆಲ್ಲಿ? ನೆನಪಿನ ಮಣ್ಣಿಲ್ಲದೆ ಮನವೆಲ್ಲಿ? ಮುದವೆಲ್ಲಿ?

ಮುಂಗಾರಿನ ಅಭಿಷೇಕಕ್ಕೆ ಗದ್ದೆ ಬದಿಯ ಬಾವಿಗಳೆಲ್ಲಾ ತುಂಬಿ ತುಳುಕುತ್ತವೆ! ಮೊನ್ನೆ ಮೊನ್ನೆಯ ತನಕ ತಳ ಸೇರಿದ್ದ ನೀರು ಒಂದು ಕೊಡಪಾನದಷ್ಟೂ ತುಂಬುತ್ತಿರಲಿಲ್ಲ! ಆ ನೀರನ್ನು ಮೇಲೆತ್ತಲು ಹತ್ತು ಸಲ ಹಗ್ಗ ಜಗ್ಗಬೇಕಿತ್ತು! ಈಗ ಹಾಗಲ್ಲ! ಕೊಡಪಾನವನ್ನು ಕೈಯಿಂದಲೇ ಬಾವಿಯೊಳಗಿಟ್ಟು ನೀರು ತುಂಬಿದರಾಯ್ತು! ಅಷ್ಟು ಸಲೀಸು; ಅಷ್ಟು ಆರಾಮ! ತೆಂಗಿನ ಗಿಡಗಳಿಗೆ; ಹೂವಿನ ಗಿಡಗಳಿಗೆ ನೀರು ಹಾಕುವ ಪ್ರಶ್ನೆಯೇ ಇಲ್ಲ! ಅಮ್ಮನ ಕೆಲಸವನ್ನು ‘ಮುಂಗಾರಮ್ಮ’ ಮಾಡುವುದು ಹೀಗೆಯೇ ಅಲ್ಲವೆ?

ನೆನಪುಗಳ ಬಾವಿ ತುಂಬುವುದೂ ಈ ಋತುವಿನಲ್ಲೆ! ಸುಮ್ಮನೆ ಹಾಸಿಗೆ ಸೇರಿ ಹೊದಿಕೆಯನ್ನು ಕುತ್ತಿಗೆಯ ತನಕ ಎಳೆದುಕೊಂಡು ಕಣ್‌ಮುಚ್ಚಿ ಮಲಗಿದರೂ ಸಾಕು, ಸತ್ತು ಮುಗಿಲಾದ ಅಮ್ಮ ಒಮ್ಮೆ ಗುಡುಗಾಗಿ ಮೊಳಗಿ ‘ಹೇಗಿದ್ದಿ?’ ಎಂದು ಕೇಳಿಯೆ ಕೇಳುತ್ತಾಳೆ! ಶೀತ, ಕೆಮ್ಮಿಗೆ ಅವಳು ಮಾಡಿಕೊಟ್ಟ ಕಷಾಯ, ಜ್ವರಕ್ಕೆ ಅವಳಿಟ್ಟ ಒದ್ದೆ ಬಟ್ಟೆಯ ತಂಪು ಶಾಖ, ಪೀಟಿ ಮಾಸ್ಟ್ರು ಸುಮ್ಮನೆ ಹೊಡೆದಿದ್ದಕ್ಕೆ ಶಾಲೆಗೇ ಬಂದು ಕ್ಲಾಸ್‌ ತೆಗೆದುಕೊಂಡ ರಂಪಾಟ, ದನದ ಹಾಲಿಗೆ ನೀರು ಬೆರೆಸಿದ್ದಕ್ಕೆ ‘ಮಕ್ಕಳ ಆರೋಗ್ಯಕ್ಕೆ ನೀರು ಹಾಕುತ್ತೀಯಾ’ ಎಂದು ಹಾಲಿನವಳೊಡನೆ ಮಾಡಿದ ಜಗಳಗಳೆಲ್ಲಾ ನೆನಪಾಗಿ ಹೊರಬಂದು ಬೆಚ್ಚನೆಯ ಅನುಭವ ಕೊಟ್ಟೇ ಕೊಡುತ್ತದೆ! ಜೊತೆಗೇ, ನಿಮ್ಮ ತಂಟೆಯೋ, ಲೂಟಿಯೋ, ‘ದೇವರೆ ಇಂಥ ಮಕ್ಕಳನ್ನು ಯಾರಿಗೂ ಕೊಡಬೇಡ’ವೆಂದು ಆಕೆ ಗೊಣಗುತ್ತಿದ್ದುದೂ ನೆನಪಾಗಿ ಗುಡುಗು ಸಿಡಿಲು ಒಟ್ಟೊಟ್ಟಿಗೆ ಬಂದ ಹಾಗೆ ಆಗುವುದೂ ಇದೆ! ಹೋಗಲಿ ಬಿಡಿ, ಅಮ್ಮನಿಗೆಂಥ ಕೋಪವೆಂದು ನಿದ್ದೆಗೆ ಜಾರುವುದೂ ಮಳೆಗಾಲದಲ್ಲೆ!

ಮುಂಗಾರು ಒಂದೆರಡು ದಿನಗಳ ಬಿಡುವು ತೆಗೆದುಕೊಂಡು ಅಪರೂಪದ ಬಿಸಿಲು ಬಂದಾಗ ಒದ್ದೆ ಒದ್ದೆ ನೆನಪುಗಳನ್ನು ಒಣಗಿಸಿಕೊಳ್ಳಲೇ ಬೇಕು! ಎರಡು ಕುರ್ಚಿಗಳನ್ನು ಅಂಗಳದಲ್ಲಿಟ್ಟು ಅದರ ಮೇಲೆ ಹಾಸಿಗೆಯನಿಟ್ಟು ಲೌಕಿಕವನ್ನು ಒಣಗಿಸಿದ ಹಾಗೆಯೇ ನೆನಪುಗಳನ್ನು ಬಿಸಿಲಿಗೊಡ್ಡಿ ಒಣಗಿಸಬೇಕು! ಬಿಸಿಲು ಕಾಣದ ಹಾಸಿಗೆ, ದಿಂಬು, ಹೊದಿಕೆಗಳು ಹಳಸಿದ ವಾಸನೆ ಹರಡಿದಂತೆ ನೆನಪುಗಳೂ ನೀರವತೆಯ ಕಮಟು ವಾಸನೆಯನ್ನು ಹರಡುತ್ತವೆ! ಈ ವಾಸನೆ ಹೋಗಿ ಪರಿಮಳ ಬರಲು ನೆನಪುಗಳನ್ನು ಬಿಸಿಲಿನಲ್ಲಿ ವಾಕಿಂಗ್‌ ಕರೆದುಕೊಂಡು ಹೋಗಲೇಬೇಕು! ಒಂದು ಸುತ್ತು ಹೋಗಿ ಬಂದಾಗ ನೆನಪುಗಳಿಗೆ ಮತ್ತೆ ಹದವಾದ ಬಿಸಿ ಸಿಗುತ್ತದೆ; ಖುಷಿಯೂ ಸಿಗುತ್ತದೆ!

ಅಂದಹಾಗೆ ಮುಂಗಾರು ಇನ್ನೂ ನಿಂತಿಲ್ಲ! ಬಿಡುವಿನ ಬಳಿಕ ಮಳೆ ಮತ್ತೆ ಸುರಿಯುತ್ತಿದೆ! ಹೊರಗೆ ಮಳೆಯ ಜೋಗುಳವಾದರೆ ಒಳಗೆ ನೆನಪಿನ ಲಾಲಿ ಮತ್ತೆ ಕೇಳಿಸುತ್ತಿದೆ! ‘ಬಾ ಮಳೆಯೇ ಬಾ, ನೆನಪಿನ ಹೊಳೆಯಾಗಿ ಬಾ, ಮನಸಿನ ಕೊಳೆ ತೊಳೆವಂತೆ ಬಾ’. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT