ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಕ್ಷಿಗಳ ಅಳಲು

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ವಾತಾಪಿಗೆ ಪ್ರಾಣಿ-ಪಕ್ಷಿಗಳೆಂದರೆ ಪಂಚಪ್ರಾಣ. ಹೆತ್ತವರೊಂದಿಗೆ ಹಠಮಾಡಿ ಮನೆಯಲ್ಲಿ ಬೆಕ್ಕು-ನಾಯಿ, ಗಿಣಿ, ಪಾರಿವಾಳ ಮುಂತಾದ ಪ್ರಾಣಿ-ಪಕ್ಷಿಗಳನ್ನು ತಂದು ಸಾಕುತ್ತಿದ್ದ. ಮಗನ ಮನಸ್ಸನ್ನು ನೋಯಿಸುವುದು ಬೇಡವೆಂದು ಹೆತ್ತವರು ಆತನಿಗೆ ವಿರೋಧ ತೋರದೆ ಪ್ರೋತ್ಸಾಹ ನೀಡುತ್ತಿದ್ದರು.

ದಿನವೂ ಮನೆಯ ತಾರಸಿಯ ಮೇಲೆ ನಿಂತು ಆಗಸದಲ್ಲಿ ಹಾರಾಡುವ ಪಕ್ಷಿಗಳ ಹಾವ-ಭಾವಗಳನ್ನೂ, ಮೂಕ ಸಂವೇದನೆಗಳನ್ನೂ ಗಮನಿಸುವುದು ಆತನಿಗೆ ಹವ್ಯಾಸವಾಗಿತ್ತು. ತನ್ಮೂಲಕ ಅವುಗಳ ಭಾವನೆಯನ್ನು ಅರ್ಥೈಸಿಕೊಳ್ಳಲಾರಂಭಿಸಿದ್ದ.

ಅಂದು ಎಂದಿನಂತೆ ಆತ ತಾರಸಿ ಮೇಲೆ ನಿಂತು ಆಗಸದತ್ತ ನೋಡುತ್ತಿದ್ದ. ಅಲ್ಲಿ ಅತ್ತಿಂದಿತ್ತ ಹಾರಾಡುತ್ತಿದ್ದ ಹಕ್ಕಿಗಳ ಹಿಂಡು ಆತನ ಗಮನ ಸೆಳೆದಿತ್ತು. ಇದ್ದಕ್ಕಿದ್ದಂತೆ ಗುಬ್ಬಚ್ಚಿಯೊಂದು ಆತನಿಂದ ಅನತಿ ದೂರದಲ್ಲಿ ದೊಪ್ಪನೆ ಬಿದ್ದು ಬಿಟ್ಟಿತ್ತು, ಅದು ವಿಲವಿಲನೆ ಒದ್ದಾಡುತ್ತಿದ್ದುದನ್ನು ಕಂಡು ಕರುಳು ಚುರುಕ್ಕೆಂದಿತು.
 
ಕಾಲಿಗೆ ತುಸು ಏಟಾಗಿದ್ದುದನ್ನು ಗಮನಿಸಿ ಓಡಿಹೋಗಿ ಅದನ್ನೆತ್ತಿ ತಲೆನೇವರಿಸಿ, ಸ್ವಲ್ಪ ನೀರು ಕುಡಿಸಿ, ಕಾಲಿಗೆ ಔಷಧಿ ಹಚ್ಚಿ ಅದರದೇ ಭಾಷೆಯಲ್ಲಿ ಸಂಜ್ಞೆ ಮಾಡುತ್ತಾ ಮಾತಾಡಲಾರಂಭಿಸಿದ.

“ಗುಬ್ಬಕ್ಕಾ ಏನಾಯಿತು? ಯಾಕೆ ಹೀಗೆ ಬಿದ್ದುಬಿಟ್ಟೆ? “ಅಣ್ಣಾ ನಮಗಿಲ್ಲಿ ಬದುಕುವುದು ತುಂಬಾ ಕಷ್ಟವಾಗಿದೆ. ಈ ನಗರಗಳೀಗ ಮೊದಲಿನಂತಿಲ್ಲ. ಮೊದಲಾದರೆ ಇಲ್ಲಿ ವಾಸಕ್ಕೆ ಯೋಗ್ಯವಾದ ಗಿಡ-ಮರಗಳು, ಕುಡಿಯುವ ನೀರು ಎಲ್ಲವೂ ಸಮೃದ್ಧವಾಗಿತ್ತು.

ಆದರೆ ಈಗ ಅವು ಯಾವುವೂ ಇಲ್ಲ. ಎತ್ತ ನೋಡಿದರೂ ಬರೀ ಕಟ್ಟಡಗಳು, ವಿದ್ಯುತ್ ತಂತಿಗಳು, ಮೊಬೈಲ್ ಟವರ್‌ಗಳು. ಇಲ್ಲಿ ನಾವು ಬದುಕುವುದಾದರೂ ಹೇಗೆ ಹೇಳಣ್ಣ? ನನ್ನ ಮಕ್ಕಳಿಗಾಗಿ ಊಟಕ್ಕೆ ಕಾಳುಗಳನ್ನು ಸಂಗ್ರಹಿಸಿ ಒಯ್ಯೋಣವೆಂದು ಅರಸುತ್ತಾ ಹೊರಟಿದ್ದೆ. ಆದರೆ ಬಿಸಿಲಿನ ತಾಪ ಜಾಸ್ತಿ ನೋಡು. ಕುಡಿಯಲು ಎಲ್ಲೂ ನೀರು ದೊರೆಯಲಿಲ್ಲ. ಅದಕ್ಕೆ ತಲೆಸುತ್ತಿ ಬಿದ್ದುಬಿಟ್ಟೆ” ಗುಬ್ಬಚ್ಚಿಯ ಕಣ್ಣೀರು ಸುರಿಸುತ್ತಾ ನುಡಿದಾಗ ವಾತಾಪಿಯ ಕಂಗಳಲ್ಲೂ ನೀರಾಡಿತು.

“ಇನ್ನು ಮೇಲೆ ಯಾವತ್ತೂ ನೀನು ಈ ರೀತಿ ಅಳಬಾರದು ಗುಬ್ಬಕ್ಕ ಇಲ್ಲೇ ನಮ್ಮ ಮನೆ ತಾರಸಿಯಲ್ಲಿ ದಿನವೂ ನಾನು ನೀರು-ಆಹಾರಗಳನ್ನು ತಂದಿಡುತ್ತೇನೆ. ನಿನಗೆ ಬೇಕಾದಷ್ಟು ನೀರು ಕುಡಿದು, ಆಹಾರವನ್ನು ಕೊಂಡೊಯ್ದು ನಿನ್ನ ಮಕ್ಕಳಿಗೆ ನೀಡು. ಬೇಕಾದರೆ ನೀನು ಇಲ್ಲೇ ಗೂಡು ಕಟ್ಟಿಕೋ ನಮ್ಮಿಂದ ನಿನಗೆ ಏನೂ ತೊಂದರೆಯಾಗಲಾರದು” ಎಂದು ಸಂತೈಸಿದ ವಾತಾಪಿ ಅದರ ತಲೆನೇವರಿಸಿ ಬೀಳ್ಕೊಟ್ಟ.

ಗುಬ್ಬಚ್ಚಿಯ ಬಾಯಿಂದ ವಿಷಯ ತಿಳಿದ ವಾತಾಪಿಗೆ ಪಕ್ಷಿಗಳ ಅಳಲು ಏನೆಂಬುದು ಅರ್ಥವಾಯಿತು. ದಿನವೂ ತಾರಸಿ ಮೇಲೆ ಹೂಜಿ ತುಂಬಾ ನೀರು ಹಾಗೂ ತಟ್ಟೆಯೊಂದರಲ್ಲಿ ಅನ್ನ ಮತ್ತು ಕಾಳುಗಳನ್ನು ತಂದಿಡಲಾರಂಭಿಸಿದ.

ಆಗಸದಲ್ಲಿ ಹಾರಾಡುವ ಹಕ್ಕಿಗಳು ದಣಿವಾದಾಗ ಅಲ್ಲಿ ಬಂದು ಮನದಣಿಯೆ ನೀರು ಕುಡಿದು ಆಹಾರ ಸೇವಿಸಿ ಮುಂದಕ್ಕೆ ಸಾಗುತ್ತಿದ್ದುವು.
ನೀತಿ: ಪ್ರಾಣಿ-ಪಕ್ಷಿಗಳಿಗೂ ಈ ಭೂಮಿ ಮೇಲೆ ನಮ್ಮಷ್ಟೇ ಬದುಕುವ ಹಕ್ಕಿದೆ. ಅವುಗಳ ಬದುಕನ್ನು ನಾವು ಕಸಿದುಕೊಳ್ಳಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT