ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಾ ಯುಗ್ಮಕ್ಕೆ ವಿಮರ್ಶೆಯ ಗೌರವ

ನನ್ನ ಇಷ್ಟದ ಪುಸ್ತಕ: 2014
Last Updated 3 ಜನವರಿ 2015, 19:30 IST
ಅಕ್ಷರ ಗಾತ್ರ

ಇಂತಿ ನಮಸ್ಕಾರಗಳು 
ಲೇ: ನಟರಾಜ್ ಹುಳಿಯಾರ್
ಬೆ: ರೂ. 180
ಪ್ರ: ಪಲ್ಲವ ಪ್ರಕಾಶನ
ಚನ್ನಪಟ್ಟಣ, ಬಳ್ಳಾರಿ

ತಮ್ಮ ಬದುಕಿನ ಪರ್ವಕಾಲದಲ್ಲಿ ಒಡನಾಡಿದ ಇಬ್ಬರು ಮಹತ್ವದ ವ್ಯಕ್ತಿಗಳ ಕುರಿತು ಇಲ್ಲಿ ಬರೆಯುತ್ತ ನಟರಾಜ್ ಹುಳಿಯಾರ್ ಬಹು ಆಯಾಮದ ಒಂದು ಕೃತಿಯನ್ನು ಕಟ್ಟಿಕೊಡುತ್ತಾರೆ. ಇದು ಲೇಖಕ, ಪತ್ರಕರ್ತ ಪಿ. ಲಂಕೇಶ್ ಮತ್ತು ವಿಮರ್ಶಕ ಡಿ.ಆರ್. ನಾಗರಾಜ್ ಅವರ ಕೃತಿಗಳ ಹಿನ್ನೆಲೆಯಲ್ಲೇ ಬೆಳೆಯುತ್ತ ಹೋಗುವ ಕೃತಿಯಾಗಿರುವುದರಿಂದ, ಅದು ಈ ಇಬ್ಬರ ಕೃತಿಗಳ ಜೊತೆಗೇ ಅವರ ವ್ಯಕ್ತಿತ್ವವನ್ನು ವಿಮರ್ಶಿಸುತ್ತದೆ. ಒಡನಾಟಕ್ಕೆ ಹೆಚ್ಚಿನ ಒತ್ತು ಸಹಜವಾಗಿಯೇ ಇರುವುದರಿಂದ, ಇದು ಈ ಇಬ್ಬರು ವ್ಯಕ್ತಿಗಳ ವ್ಯಕ್ತಿತ್ವವನ್ನು ಅದರ ಎಲ್ಲ ಮಿತಿ, ವಿಸ್ತಾರ, ಸಾಧ್ಯತೆಗಳೊಂದಿಗೆ ಕಟ್ಟಿಕೊಡುತ್ತಲೇ ಅದನ್ನು ಗ್ರಹಿಸುತ್ತಿರುವ ವ್ಯಕ್ತಿಯನ್ನೂ ನಮಗೆ ಕಟ್ಟಿಕೊಡುತ್ತಿರುತ್ತದೆ.

ನಾವು ಬೇರೆಯವರ ಬಗ್ಗೆ ಮಾತನಾಡುವಾಗಲೆಲ್ಲ ನಮ್ಮ ಕುರಿತ ನಮ್ಮ ಕಲ್ಪನೆಯ ಚಿತ್ರವನ್ನು ಕೊಡುತ್ತಿರುತ್ತೇವೆ. ಯಾವುದು ಹೆಚ್ಚಾಗುತ್ತದೆ ಎನ್ನುವಲ್ಲೇ ಅದರ ಹದ ಇರುವುದು ಕೂಡ. ಎಲ್ಲಿಯೂ ನಟರಾಜ್ ಹುಳಿಯಾರ್ ಈ ಹದವನ್ನಾಗಲಿ ಸಮತೋಲನವನ್ನಾಗಲಿ ತಪ್ಪುವುದಿಲ್ಲ ಎನ್ನುವುದೇ ಈ ಕೃತಿಯ ಹೆಚ್ಚುಗಾರಿಕೆ. ಕೃತಿ, ವ್ಯಕ್ತಿತ್ವಗಳಾಚೆ ಇಲ್ಲಿ ಪರಸ್ಪರರ ಒಡನಾಟ, ಪ್ರೀತಿ, ಸಂಘರ್ಷ, ತುಮುಲಗಳೂ ಕಣ್ಣಿಗೆ ಕಟ್ಟುವಂತೆ ಬಂದಿರುವುದು ವಿಶೇಷ. ಈ ಮೂವರೂ ತ್ರಿಕೋನದ ಮೂರು ಬಿಂದುಗಳಂತಿದ್ದು ತ್ರಿಕೋನ ಯಾವತ್ತೂ ಇಡೀ ಕಥನದ ಚೌಕಟ್ಟಾಗಿಯೇ ಉಳಿದಿರುವುದರಿಂದ ಅದು ದಕ್ಕಿಸಿದ ಹೊಸದೊಂದು ಆಯಾಮ ಕೂಡ ಈ ಕೃತಿಗೆ ಲಭಿಸಿದೆ.

ಇಲ್ಲಿ ಲಂಕೇಶರ ಮತ್ತು ಡಿ.ಆರ್. ನಾಗರಾಜ್ ಅವರ ಸಿಟ್ಟು, ಅಸಹನೆ, ಅಹಂಗೆ ಏಟಾದ ಸಂದರ್ಭದಲ್ಲಿ ವರ್ತಿಸಿದ ಬಗೆ ಕೂಡ ದಾಖಲಾಗುತ್ತದೆ. ಒಂದು ಕಡೆ ನಟರಾಜ್ ಅವರೇ ತಮ್ಮ ನಡೆಯನ್ನು ವಿಮರ್ಶಿಸಿಕೊಂಡಿದ್ದಾರೆ. ಆದರೆ, ಒಟ್ಟಾರೆಯಾಗಿ ಈ ಎಲ್ಲ ವ್ಯಕ್ತಿತ್ವಗಳ ಔದಾರ್ಯವೇ ಮೇಲೆ ನಿಂತು ಅವರವರ ವ್ಯಕ್ತಿತ್ವದ ಕ್ಷುದ್ರ ಎನ್ನಬಹುದಾದ ಭಾಗಗಳನ್ನು ಸಹ್ಯ/ನಗಣ್ಯವಾಗಿಸಿ ಕೊನೆಗೂ ಅಭಿಮಾನವನ್ನೇ ಪೊರೆಯುತ್ತವೆ ಎನ್ನುವುದು ನಿಜ.

ಈ ಪುಸ್ತಕವನ್ನು ಓದಿ ಮುಗಿಸಿದ ನಂತರ ಮತ್ತೊಮ್ಮೆ ಲಂಕೇಶರ ಆತ್ಮಕಥೆ ‘ಹುಳಿಮಾವಿನ ಮರ’, ಮುಟ್ಟಿಸಿಕೊಂಡವನು, ಸಹಪಾಠಿ ಮುಂತಾದ ಕತೆಗಳನ್ನು, ಡಿ ಆರ್ ಅವರ ಎಲ್ಲ ಕೃತಿಗಳನ್ನು ಓದುವುದು ಅನಿವಾರ್ಯವಾದಂತೆಯೇ ಸ್ವತಃ ನಟರಾಜ್ ಹುಳಿಯಾರ್ ಅವರ ‘ಗಾಳಿಬೆಳಕು’, ‘ಮಾಯಾಕಿನ್ನರಿ’ಯ ಮರು ಓದಿಗೆ ಕೂಡಾ ಪ್ರೇರಣೆ ದೊರೆತಂತಾಗುತ್ತದೆ. ಕನ್ನಡ ನಾಡು ಕಂಡ ಎರಡು ದೊಡ್ಡ ಲೇಖಕರ ವ್ಯಕ್ತಿತ್ವವನ್ನು ಕಟ್ಟಿಕೊಡುವುದರ ಜೊತೆಗೇ ಅವರವರ ಕೃತಿಗಳ ಓದಿಗೂ ಪ್ರೇರೇಪಿಸುವಂತೆ ಅದನ್ನು ರೂಪಿಸುವುದು ಸಾರ್ಥಕ ಮಾದರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT