ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಳ್ಳಿತೆರೆಯ ಭಾವ-ಬಂಧ

Last Updated 22 ಜೂನ್ 2013, 19:59 IST
ಅಕ್ಷರ ಗಾತ್ರ

ಸಂಬಂಧಗಳ ಅದಲು ಬದಲು ಕಂಚಿ ಕದಲಿನ ಗೂಡು ಬಾಲಿವುಡ್. ಅಲ್ಲಿ ಓಣಿಗೊಂದು ಭಗ್ನ ಪ್ರೇಮ. ಇನ್ನೊಂದು ಓಣಿಯಲ್ಲಿ ಚಿಗುರಿದ ಪ್ರೀತಿ. ಮತ್ತೊಂದರಲ್ಲಿ ಲಿವ್-ಇನ್. ಮಗದೊಂದರಲ್ಲಿ ಮದುವೆಯಾದ ನಟನೊಂದಿಗೆ ಒಡನಾಟದ ಸಂರಕ್ಷಣೆಯ ಕವಚದಲ್ಲಿ ಬೀಗುವ ಹೆಣ್ಣುಮಗಳು. ಸಿನಿಮಾ ಅವಕಾಶಕ್ಕೂ ಗಂಡು-ಹೆಣ್ಣಿಗೂ ಅಲ್ಲಿ ಸಂಬಂಧ ಸಲ್ಲುತ್ತದೆ. ಅಲ್ಲಿಯಷ್ಟೇ ಏಕೆ, ಕನ್ನಡದಲ್ಲಿ ಪೂಜಾ ಗಾಂಧಿ ನಿಶ್ಚಿತಾರ್ಥ ಮುರಿಯಲಿಲ್ಲವೇ? ನಟ ವಿಜಯ್ ದಾಂಪತ್ಯದಲ್ಲಿ ಅಪಸ್ವರ ಎದ್ದಿತ್ತಲ್ಲ. ದರ್ಶನ್ ಜೈಲಿಗೂ ಹೋಗಿ ಬಂದದ್ದಾಯಿತಲ್ಲ.

ಅದೇ ರೀತಿ ಬಾಲಿವುಡ್‌ನಲ್ಲೂ ಅಡಿಗಡಿಗೆ ಸಂಬಂಧದ ಕತೆಗಳು ಚೆಲ್ಲಾಡುತ್ತವೆ. ನಂಬಿದ ಹುಡುಗ ಮೋಸ ಮಾಡಿದ ಎಂದು ನೋಟ್ ಬರೆದಿಟ್ಟು, ಜಿಯಾ ಖಾನ್ ಮೊನ್ನೆಮೊನ್ನೆಯಷ್ಟೆ ಆತ್ಮಹತ್ಯೆ ಮಾಡಿಕೊಂಡರಲ್ಲ. ಕನ್ನಡ ಸಿನಿಮಾದಲ್ಲಿಯೂ ನಟಿಸಿರುವ, ಪಾಕಿಸ್ತಾನಿ ಮೂಲದ ವೀಣಾ ಮಲ್ಲಿಕ್ ಅವರದ್ದೂ ಒಂದು ಕತೆ ಇದೆ. ಅದನ್ನು ಅವರ ಮಾತಿನ ಧಾಟಿಯಲ್ಲೇ ಹೇಳುವುದಾದರೆ: “ಮುಹಮ್ಮದ್ ಆಸಿಫ್ ಜೊತೆಗಿನ ಸಂಬಂಧದಲ್ಲಿ ನಾನು ಕಂಡುಂಡ ಕಷ್ಟಗಳು ಅಷ್ಟಿಷ್ಟಲ್ಲ. ಅವನು ನನ್ನ ಜಗತ್ತಾಗಿದ್ದ.

ಪ್ರಾಮಾಣಿಕವಾಗಿ ಅವನನ್ನು ಪ್ರೀತಿಸಿದೆ. ಕೆಲಸ ಹಾಗೂ ಅವನು ಬಿಟ್ಟರೆ ನನ್ನ ಜಗತ್ತಿನಲ್ಲಿ ಬೇರೇನೂ ಇರಲಿಲ್ಲ. ಅವನು ಸ್ನೇಹಿತರ ಎದುರು ನನ್ನ ಬಗೆಗೆ ಹೀನಾಯವಾಗಿ ಮಾತನಾಡತೊಡಗಿದ.  ಬರಬರುತ್ತಾ ನನ್ನ ಜಗತ್ತಿನ ಮುಹಮ್ಮದ್ ಪುರುಷ ಪ್ರಧಾನ ಸಮಾಜದ ಎಲ್ಲ ಗಂಡಸರಂತೆ ಆದ. ಹೊತ್ತಿಗೆ ಸರಿಯಾಗಿ ಅಡುಗೆ ಮಾಡದಿದ್ದರೆ ಬಯ್ಯುತ್ತಿದ್ದ. ನಿಂದನೆ ಅನುಭವಿಸಿದರೂ ಕೆಲ ಹುಡುಗಿಯರಿಗೆ ಕೆಟ್ಟ ಹುಡುಗರು ಇಷ್ಟವಾಗಲು ಸಾಮಾಜಿಕ ಕಾರಣಗಳಿವೆ.

ಬ್ಯಾಡ್ ಬಾಯ್ಸ ಎಲ್ಲರಿಗಿಂತ ಹೆಚ್ಚು ಸಾಮಾಜಿಕ ರಕ್ಷಣೆ ನೀಡುತ್ತಾರೆ ಎಂದು ನನ್ನಂಥವರು ನಂಬಿರುತ್ತೇವೆ. ಅವರ ಪ್ರೀತಿಯ ಉತ್ಕಟತೆಯೂ ನನಗೆ ಗೊತ್ತು. ಬಯ್ಗುಳಗಳ ಪರಿಚಯವೂ ಇದೆ. ಆದರೂ ಸಹನೆಯ ಕಟ್ಟೆ ಎಂದಾದರೂ ಒಡೆಯಲೇಬೇಕಲ್ಲ. ಸಾಮಾಜಿಕ ಚೌಕಟ್ಟಿನಲ್ಲಿ ಹೆಣ್ಣುಮಕ್ಕಳ ಭಾವಲೋಕದ ಬಿರುಕುಗಳಿಗೆ ಶಾಶ್ವತ ತೇಪೆಯನ್ನು ದೇವರೇ ಹಾಕಬೇಕು”.

ಹೀಗೆಲ್ಲಾ ಬದುಕು, ಭಾವ, ಸಂಬಂಧದ ಸೂಕ್ಷ್ಮಗಳ ಕುರಿತು ತಾತ್ವ್ವಿಕ ನೆಲೆಗಟ್ಟಿನಲ್ಲಿ ಮಾತನಾಡುವ ವೀಣಾ, ನಟಿಯಾದ ಮೇಲೆ ಹಳೆಯದನ್ನು ಮರೆತಿದ್ದಾರೆ. ತಮ್ಮ ತುಟಿ ಬಟ್ಟಲು ಈಗ ಜಾಗತೀಕರಣಗೊಂಡಿದೆ ಎಂದೂ ಹೆಮ್ಮೆಯಿಂದ ಹೇಳಿಕೊಳ್ಳುವ ಗಟ್ಟಿಗಿತ್ತಿ ಅವರು. ತಮ್ಮ ಇಂಥ ಮಾತುಗಳು ಕೆಲವರಿಗೆ ದಾರಿ ಬಿಟ್ಟ ಹೆಣ್ಣುಮಗಳ ನುಡಿಯಂತೆ ಕೇಳಬಹುದು; ಆದರೆ ಅದು ಸತ್ಯವಲ್ಲ ಎಂದೂ ಅವರು ಇನ್ನೊಂದು ಮಾತನ್ನು ತೇಲಿಬಿಟ್ಟೇ ಆಡುವವರಿಗೆ ತಾವು ಸೊಪ್ಪಾಗುವುದಿಲ್ಲ ಎಂಬುದನ್ನೂ ಸ್ಪಷ್ಟಪಡಿಸುತ್ತಾರೆ.
ಈಗ ನಿರ್ಮಾಪಕಿಯಾಗಿರುವ ಒಂದು ಕಾಲದ ನಟಿ ಪೂಜಾ ಭಟ್ ಪ್ರಕಾರ ಇದು ಪರಮ ಖಾಸಗಿಯಾದ ಸಂಕೀರ್ಣ ಸಮಸ್ಯೆ.

ಮೊದಲಿಗೆ ಯಾರಾದರೂ ದೈಹಿಕವಾಗಿ, ಮಾನಸಿಕವಾಗಿ ನಿಂದಿಸಲು ಮುಂದಾದಾಗ ಮೌನದಿಂದ ಇದ್ದಲ್ಲಿ ಅದನ್ನು ಶಾಶ್ವತವಾಗಿ ಬರಮಾಡಿಕೊಂಡಂತೆ. ನಟಿಯರು ಅಭಿನಯ ಲೋಕಕ್ಕೆ ಕಾಲಿಟ್ಟಾಗ ಅವರ ತಲೆಯಲ್ಲಿ ಅವಕಾಶದ ಆಕಾಶ ಅಷ್ಟೇ ಇರುತ್ತದೆ. ಆ ಆಕಾಶದತ್ತ ಕೈಚಾಚಿ ಹಾರತೊಡಗಿದರೆ ಹಾದಿಯಲ್ಲಿ ರಣಹದ್ದುಗಳು ತಾಕಬಹುದು ಎಂಬ ಅರಿವು ಇರುವುದಿಲ್ಲ. ಯಶೋಪುರಕ್ಕೆ ಹೊತ್ತೊಯ್ಯುವ ಗರುಡ ವೇಷದ ಹದ್ದುಗಳೂ ಬಾಲಿವುಡ್ ಜಗತ್ತಿನಲ್ಲಿವೆ ಎಂದು ಉಪಮೆಗಳ ಮೂಲಕ ಪೂಜಾ ಕಿವಿಮಾತು ಹೇಳುತ್ತಾರೆ. ಒಂದು ಕಾಲದಲ್ಲಿ ಬೆತ್ತಲೆ ದೇಹಕ್ಕೆ ಬಣ್ಣ ಮೆತ್ತಿಕೊಂಡು ಪೋಸ್ ಕೊಟ್ಟ, ತಂದೆಗೆ ಅಧರ ಚುಂಬನ ನೀಡಿ ಬೆಚ್ಚಿಬೀಳಿಸಿದ ಹೆಣ್ಣುಮಗಳು ಈ ಪೂಜಾ. `ಈ ಕಾಲದಲ್ಲಿ ದಗಲಬಾಜಿ ಸಂಬಂಧಗಳೇ ಹೆಚ್ಚಾಗಿವೆಯೇನೋ' ಎಂಬ ಆತಂಕ ಅವರದ್ದು.

ಯಶಸ್ವಿ ಮಹಿಳೆ ಬಹುಶಃ ಭಾವುಕ ಅನಿವಾರ್ಯದ ಕಾರಣಕ್ಕೆ ನಿಂದನೆಯನ್ನು ನುಂಗಿಕೊಳ್ಳುತ್ತಾಳೆ ಎಂಬುದು ನಟಿ ಗುಲ್ ಪನಾಗ್ ನುಡಿ. ಇನ್ನೊಬ್ಬ ನಟಿ ಅಮೃತಾ ರಾವ್ ಕೂಡ ಈ ಮಾತನ್ನು ಸಮರ್ಥಿಸುತ್ತಾರೆ. ಇದು ಸಾರ್ವತ್ರಿಕಗೊಳಿಸುವಂಥ ಸಮಸ್ಯೆಯಲ್ಲ ಎನ್ನುವ ಅಮೃತಾ, ಲಿವ್-ಇನ್ ಸಂಬಂಧಗಳಿಗೂ, ಪ್ರೇಮಿಸುತ್ತಾ ಇರುವುದಕ್ಕೂ, ಡೇಟಿಂಗ್‌ಗೂ ಒಂದು ಸಾಮಾನ್ಯ ಭಾವಲೋಕವಿದೆ ಎನ್ನುತ್ತಾರೆ. ಗುಲ್ ಪನಾಗ್ ಸಂಬಂಧದ ವ್ಯಾಖ್ಯೆಯನ್ನು `ಖಾಸಗಿ ಔಚಿತ್ಯ'ಕ್ಕೆ ಸೀಮಿತಗೊಳಿಸುತ್ತಾರೆ.

ಶೋಷಣೆ ಎಂದರೆ ದೈಹಿಕ ಹಿಂಸೆಯಷ್ಟೇ ಅಲ್ಲ, ಜಾಣತನದಿಂದ ನಿರಂತರವಾಗಿ ಕುಗ್ಗಿಹೋಗುವಂತೆ ಮಾಡುವ ಗಂಡಸರು ಹೊಡೆಯುವವರಿಗಿಂತ ಅಪಾಯಕಾರಿ ಎನ್ನುವ ಅಮೃತಾ, ಅದಕ್ಕೆ ತಮ್ಮ ಬದುಕಿನ ಕೆಲವು ಅಧ್ಯಾಯಗಳಲ್ಲೇ ಉದಾಹರಣೆಗಳಿವೆ ಎಂದು ಕಣ್ಣಂಚಲ್ಲಿ ನೀರು ತುಂಬಿಕೊಳ್ಳುತ್ತಾರೆ.

ಅಭಿನಯ ಲೋಕದ ಮಹಿಳೆಯರು ನಿಂದನಾ ಸಂಬಂಧವನ್ನು ಯಾಕೆ ಸಹಿಸಿಕೊಳ್ಳುತ್ತಾರೋ ಎಂದು ಸೆಲೆನಾ ಜೈಟ್ಲಿ ಆಶ್ಚರ್ಯಭರಿತ ಪ್ರಶ್ನೆ ಹಾಕುತ್ತಾರೆ. ಮಹಿಳೆ ಸ್ವತಂತ್ರಳೂ ಯಶಸ್ವಿಯೂ ಆದಮೇಲೆ ಬಯ್ಗುಳಗಳನ್ನು ನುಂಗಿಕೊಂಡು ಏಕೆ ಏಗಬೇಕು, ಯಾರು ಅಂಥ ಧೋರಣೆಯನ್ನು ಹೇರುತ್ತಾರೋ ಅವರಿಗೆ ಅಂಥ ಧೋರಣೆಯಿಂದಲೇ ಉತ್ತರ ಕೊಡದೇ ಇರುವುದಾದರೂ ಏಕೆ? - ಹೀಗೆ ಪ್ರಶ್ನೆಗಳ ಮೇಲೆ ಪ್ರಶ್ನೆಗಳನ್ನು ಕೇಳುತ್ತಾರೆ ಸೆಲೆನಾ. ತಾವೆಂದೂ ಅಂಥ ಸಂಬಂಧಕ್ಕೆ ಒಳಪಡುವುದಿಲ್ಲ ಎಂಬುದು ಅವರ ಆತ್ಮವಿಶ್ವಾಸದ ನುಡಿ.

ನಟಿ ದಿವ್ಯಾ ದತ್ತ ಅಭಿಪ್ರಾಯ ಮಾತ್ರ ತುಸು ಸಂಪ್ರದಾಯ ನಿಷ್ಠ ಭಾವದಲ್ಲಿದೆ: “ಸಮಾಜದಲ್ಲಿ ಮಹಿಳೆಯ ಯಶಸ್ಸಿಗೂ ಖಾಸಗಿ ಬದುಕಿಗೂ ದಿವ್ಯ ಕಂದಕವಿದೆ. ಹೊರಜಗತ್ತಿನಿಂದ ಬಾಯಿತುಂಬಾ ಹೊಗಳಿಸಿಕೊಳ್ಳುವ ನಟಿ ಕೋಣೆಯೊಳಗೆ ಮೆಚ್ಚಿದವನಿಂದ ಹಿಂಸೆ ಅನುಭವಿಸುವುದು ಅಪರೂಪವೇನಲ್ಲ. ಕೋಣೆಯ ಸತ್ಯ ಹೊರಬಂದರೆ ಬದುಕು ಇನ್ನೂ ಘೋರವಾದೀತು ಎಂಬ ಆತಂಕದಿಂದ `ಅವಳು' ಒಳಜಗತ್ತನ್ನು ತನ್ನೊಳಗೇ ಇಟ್ಟುಕೊಳ್ಳುತ್ತಾಳೆ. ಹೊರಜಗತ್ತು ಅವಳ ನಗುಮೊಗವನ್ನು, ತುಟಿರಂಗನ್ನು, ನಟಿಸುವ ವಯ್ಯಾರವನ್ನು ಕಂಡು ಸುಖವಾಗಿದ್ದಾಳೆ ಎಂದು ಭಾವಿಸುತ್ತದೆ. ನಿರಂತರ ಸುಖ ಯಾರಿಗೆ ತಾನೆ ಇದೆ?”.

ಸೈಫ್ ಅಲಿ ಖಾನ್, ಕರೀನಾ ಜೋಡಿಯ ವಿಚಿತ್ರ ಪ್ರೇಮ ವರ್ಷಗಟ್ಟಲೆ ಮಾರುಕಟ್ಟೆಯ `ಬ್ರಾಂಡ್' ಆದ ದೇಶವಿದು. ಸೈಫ್ ಮೊದಲ ಹೆಂಡತಿಯ ಮಕ್ಕಳಿಗೆ ಐಸ್ ಕ್ರೀಮ್ ಕೊಡಿಸಿ, ಅವರ ಎದುರೇ ಅಪ್ಪನಿಗೆ ಮುತ್ತಿಕ್ಕುವ ಕರೀನಾ, ಮೇಲ್ಪಂಕ್ತಿಯ ಬಾಲಿವುಡ್ ನಟಿಯರಲ್ಲಿ ಒಬ್ಬರು. ಒಟ್ಟಿನಲ್ಲಿ ಬಾಲಿವುಡ್ ಸಂಬಂಧಗಳ ಹೃದಯದ ಬಡಿತದ ಸಮಾಚಾರ ಒಂಥರಾ ಸಾಪೇಕ್ಷವಾದದ್ದೇ ಸರಿ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT