ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೊಜ್ಜಿನ ಶಿಲಾಬಾಲಿಕೆಯ ಸ್ವರ್ಗಾರೋಹಣ...

Last Updated 25 ನವೆಂಬರ್ 2017, 19:30 IST
ಅಕ್ಷರ ಗಾತ್ರ

ಪಾತಾಳಕೂ ಇಳಿಯದ ವ್ಯೋಮಕೂ ನೆಗೆಯದ

ಸತ್ತ ಲಿಫ್ಟ್‌ ಶವದ ಮನೆಯಂತಿರುವಾಗ

ಅಪಾರ್ಟ್‌ಮೆಂಟಿನ ಹನ್ನೊಂದು ಮಹಡಿಗಳ ಹತ್ತಿ ಹೋಗುವ

ಬೊಜ್ಜಿನ ಶಿಲಾಬಾಲಿಕೆಯ ಪೃಷ್ಠದಲಿ ಜಕಣಾಚಾರಿ

ಜೋಕರ್‌ನಂತೆ ಇಸ್ಪೀಟ್ ಎಲೆ ಕಲೆ ಕಲೆಸಿ

ಅಂದರ್ ಬಹಾರ್‌ಗೆ ಆಹ್ವಾನಿಸುವ

ದಣಿಯದ ಬೆವರದ ರೆಪ್ಪೆ ಬಡಿಯದ

ಬೆತ್ತಲೆ ಮಾಂಸ ಪರ್ವತಗಳನೆದುರಿಗಿಟ್ಟುಕೊಂಡು

ಕೆತ್ತುವನು ಮುಖ ನಗು ಮೊಲೆಗಳ

ಯುದ್ಧವಿಲ್ಲದೆ ಲೋಕಗೆಲ್ಲುವ ಹತಾರುಗಳ

ಯಾವುದದು ಮುಖದ ಮೇಲಿಹ ದೈವಕಳೆಯೊಂದು

ಮುಟ್ಟಲು ಮೆಲ್ಲನಾವಿಯಾಗುವ ಘಳಿಗೆ?

ಯಾವುದದು ಮುಪ್ಪಾದ ಮೇಲೆ ಮೈಯೆಲ್ಲಾ ಇಂದ್ರಿಯವಲ್ಲ ಅತೀಂದ್ರಿಯವಾಗುವ ಘಳಿಗೆ?

ವ್ರಣ ಕೀವು ರಾಗ ರೋಗ ಕಾಯ ಮಾಯದ ಕೂಗು ಸಾಕು ಸಾಕಿನ್ನು

ಪರುಷದ ಮಣಿಯಾಡಿದ ಮೇಲೆ

ಕಿಲುಬು ಸೂರ್ಯನೂ ಸ್ವರ್ಣವಾಗಬೇಕು

ಹರುಷದ ಬೆರಳಾಡಿದ ಮೇಲೆ

ನಾಭಿಯಾಳದಿಂದ ನಾದ ಹೊಮ್ಮಬೇಕು

ಕಟಕಟಕಟಕಟಕಟಕಟ

ದಿನಾ ಆಕಾರ ನಿರಾಕಾರಗಳಲಿ ಮುಳುಗಿ ಸಾಕಾರಗೊಳ್ಳುವನು

ಕಲ್ಲು ಕಟೆಯುವ ಕಲ್ಲುಕುಟಿಗ ಜಕಣಾಚಾರಿ

ಶಿವನ ಹೆಂಗಸುತನ ಶಿವೆಯ ಗಂಡಸುತನ ಒಂದಾಗಿ

ಕರೆಂಟು ಬಂತೋ ಅಂಗೋಪಾಂಗಗಳಿಗೆ

ಮುಗಿಯಿತು ಕಲಾಸೃಷ್ಟಿ ವಿದ್ಯುತ್ ಸಂಚಾರ

ನೆಲ ಬಿಟ್ಟೇಳುವ ಲಿಫ್ಟಿನ ಶಿಲಾಬಾಲಿಕೆಯ ಸಂಸಾರ

ಕಲೆಯ ಮೊಲೆ ಕಂಪನಕೆ ಭೂಕಂಪನವಾದಂತೆ

ಮಲ ಮೂತ್ರ ಅವಸರವಿರದ ಸ್ವರ್ಗಾರೋಹಣ...

ಥತ್ !

ನಾಯಿಗೆ ಹುಟ್ಟಿದ ನರಕದವ

ಬೀಸಿ ಬಿಟ್ಟ ಉಳಿಯ ಚಳ್ಳನೆ

ಆಕಾಶ ಮುಖಕ್ಕೆ ಬಡಿದು ಚಕಳೆ ಹಾರಿದಂತೆ

ಮದನಕನ್ನಿಕೆಯ ಮೊಲೆ ತುದಿ ಸಿಡಿದು

ಧೊಪ್ಪನೆ ಬಿತ್ತು ಕೆಳಗೆ ಕೈಲಾಸದ ತಂತು ಕಡಿದು

ಎಷ್ಟಾದರೂ

ಪೂರ್ಣಗೊಂಡದ್ದು ಸ್ವರ್ಗಕ್ಕೆ

ಊನಗೊಂಡದ್ದು ಮರ್ತ್ಯಕ್ಕೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT