ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಕ್ಕಳ ಸಾಹಿತ್ಯವು ಸಂತೋಷ ಕೊಡುವಂಥದ್ದಾಗಿದ್ದರೆ ಸಾಕು...

Last Updated 9 ನವೆಂಬರ್ 2013, 19:30 IST
ಅಕ್ಷರ ಗಾತ್ರ

ಸಮಾನತೆ, ಅಸಹನೆ, ಧಾರ್ಮಿಕ ಅಸಹಿಷ್ಣುತೆಗಳು ಹೆಚ್ಚುತ್ತಿರುವ ಮತ್ತು ಮಕ್ಕಳನ್ನೂ ಒಂದು ಸರಕಾಗಿ ಗ್ರಹಿಸುವ ಜಾಗತೀಕರಣದ ಈ ಸಂದರ್ಭದಲ್ಲಿ ಮಕ್ಕಳ ಸಾಹಿತ್ಯದ ಜವಾಬ್ದಾರಿ ಏನಾಗಿರಬೇಕು? ‘ನಮಗಿಂತ ನಮ್ಮ ಸಮಾಜ, ಸಮಾಜಕ್ಕಿಂತ ನಾಡು, ನಾಡಿಗಿಂತ ದೇಶ ದೊಡ್ಡದು. ಅದರ ರಕ್ಷಣೆಗಾಗಿ ಪ್ರಾಣತ್ಯಾಗ ಮಾಡಲೂ ಸನ್ನದ್ಧರಾಗಬೇಕೆಂಬ ಮನೋಭಾವ ಮಕ್ಕಳಲ್ಲಿ ಉದಿಸುವಂತೆ ಸಾಹಿತ್ಯ ಮೂಡಿ ಬರಬೇಕು...’

ಎಂಬಿತ್ಯಾದಿ ಗದ್ಯಗಳನ್ನೂ, ‘ಕೆಚ್ಚೆದೆಯ ಮಕ್ಕಳಿರ, ಮೈಜೋಡ ತೊಡಿರೋ! ಬಿಚ್ಚುಗತ್ತಿಯ ಝಲವ ಕೈ ಝಾಡಿಸಿಡಿರೋ!’ ಎಂಬಿತ್ಯಾದಿ ಪದ್ಯಗಳನ್ನೂ (ಕಾಳಗದ ಪದಗಳು–೧೯೨೧)  ದೊಡ್ಡವರಾದ ನಾವು ಈಗಾಗಲೇ ಬರೆದು ಭಯ ಹುಟ್ಟಿಸಿದ್ದಾಗಿದೆ; ಇನ್ನು ಸಾಕು. ಈ ಅಸಮಾನತೆ, ಅಸಹನೆ, ಧಾರ್ಮಿಕ ಅಸಹಿಷ್ಣುತೆ, ಜಾಗತೀಕರಣ, ಔದ್ಯೋಗೀಕರಣ, ಖಾಸಗೀಕರಣ, ದೇಶಪ್ರೇಮ, ಭಯೋತ್ಪಾದನೆಗಳೆಲ್ಲವೂ ನಮ್ಮಂಥ -ದೊಡ್ಡವರ ‘ಟೈಮ್ ಪಾಸ್’ ಪದಬಂಧಗಳು.

ವಯಸ್ಕರ ಬದುಕಿಗೆ ತೀರಾ ಅಗತ್ಯದ ಅವೆಷ್ಟೋ ಜ್ಞಾನಗಳನ್ನು– ಅವೆಲ್ಲವನ್ನೂ ಪ್ರಕೃತಿಯೇ ಸಕಾಲದಲ್ಲಿ ಕಲಿಸಿಕೊಡುತ್ತದೆ– ಎಂಬ ಸಮರ್ಥನೆಯೊಂದಿಗೆ ಮಕ್ಕಳಿಗೆ ಹೇಳಿಕೊಡಲು ನಾಚುವ ನಮಗೆ, ‘ದೇಶ-ಭಾಷೆಗಳಿಗಾಗಿ, ಜಾತಿ-ಧರ್ಮಗಳಿಗಾಗಿ ಪ್ರಾಣತ್ಯಾಗ ಮಾಡಿರಿ’ ಎಂದು ಬೇರೆಯವರ ಮಕ್ಕಳಿಗೆ ಉಪದೇಶಿಸುವ ಹಕ್ಕು ಇಲ್ಲ. ‘ನಿಮ್ಮ ಮಕ್ಕಳನ್ನು ನಿಮ್ಮಂತೆ ಮಾಡಲು ಯತ್ನಿಸಿರಿ, ಜೀವನವನ್ನು ಹಿಮ್ಮುಖವಾಗಿ ಹರಿಸಬೇಡಿರಿ’ ಎಂದಿದ್ದ ಮುತ್ತಾತ ಖಲೀಲ್ ಗಿಬ್ರಾನಿನ ಮಾತಿನಂತೆ, ನಮ್ಮ ಮಕ್ಕಳನ್ನು ಈ ಬಗೆಯ ಅನಗತ್ಯ ಪದ-ಬಂಧಗಳಿಂದ ಸಾಧ್ಯವಾದಷ್ಟು ದೂರ ಉಳಿಸುವುದು ತೀರಾ ಅಗತ್ಯ.

ಈ ಹಿಂದೆ ಮಕ್ಕಳ ಸಾಹಿತ್ಯವೆಂದರೆ ‘ಫ್ಯಾಂಟಸಿ’ ಲೋಕ ಎನ್ನುವ ನಂಬಿಕೆ ಇತ್ತು. ನಂತರ ಅದು ‘ರಿಯಲಿಸ್ಟಿಕ್’ ಜಗತ್ತನ್ನು ಒಳಗೊಳ್ಳಬೇಕು ಎನ್ನುವ ಬದಲಾವಣೆಯಾಯಿತು. ಹಾಗಾದರೆ ಇಂದು ನಿಜವಾದ ಮಕ್ಕಳ ಸಾಹಿತ್ಯ ಹೇಗಿರಬೇಕು? ‘ಫ್ಯಾಂಟಸಿ’ಯೆಂಬುದು ಕೇವಲ ಮಕ್ಕಳ ಲೋಕವಲ್ಲವೆಂಬ ನನ್ನ ನಿಲುವನ್ನು, ಒಂದು ತಾಸಿನ ಹಿಂದೆಯಷ್ಟೇ ಮೊಮ್ಮಗನ ಜೊತೆಗೆ ನೋಡಿದ್ದ ‘ಕ್ರಿಷ್-೩’ ಚಲನಚಿತ್ರ ಸಮರ್ಥಿಸಿದೆ.

‘ಫ್ಯಾಂಟಸಿ’ಯನ್ನೇ ವ್ಯಾಪಾರಕ್ಕಿಟ್ಟಿರುವ ಈ ಚಿತ್ರವನ್ನು ನೋಡಲೆಂದು ಥಿಯೇಟರಿನ ಒಳಗೆ ತುಂಬಿಕೊಡಿದ್ದ ವಯಸ್ಕ ಪ್ರೇಕ್ಷಕರ ನಡುವೆಯಿದ್ದ ಬಾಲ ಪ್ರೇಕ್ಷಕನೆಂದರೆ ನನ್ನ ಮೊಮ್ಮಗ ಮಾತ್ರ. ಮಕ್ಕಳ ಸಾಹಿತ್ಯದಲ್ಲಿ ಪ್ರಾಣಿ-ಪಕ್ಷಿಗಳು, ಮರ-ಗಿಡಗಳೂ, ಪಾತ್ರೆ-ಪಗಡಿಗಳೂ ಮನುಷ್ಯರ ಭಾಷೆಯಲ್ಲಿ ಮಾತನಾಡಿದರೆ, ಅವೆಲ್ಲವನ್ನೂ ಮಕ್ಕಳು ‘ರಿಯಲಿಸ್ಟಿಕ್’ ಆಗಿಯೇ ಸ್ವೀಕರಿಸಿ ಸಂತೋಷಪಡುತ್ತಾರೆ.

ಅವುಗಳಿಗೆ ‘ಫ್ಯಾಂಟಸಿ’ಯೆಂದು ಹೆಸರಿಟ್ಟವರು ದೊಡ್ಡವರು. ‘ಫ್ಯಾಂಟಸಿ’ಯನ್ನು ಮಕ್ಕಳು ಬಹಳ ಇಷ್ಟಪಡುತ್ತಾರಾದರೂ, ‘ರಿಯಲಿಸ್ಟಿಕ್’ ಆಗಿ ಸುಲಭವಾಗಿ ದಕ್ಕದ ‘ಫ್ಯಾಂಟಸಿ’ಗಾಗಿ ಹೆಚ್ಚು ಆಸೆ ಪಡುವವರು ವಯಸ್ಕರು. ಮಕ್ಕಳ ಸಾಹಿತ್ಯವು ‘ರಿಯಲಿಸ್ಟಿಕ್’ ಜಗತ್ತನ್ನೇ ಒಳಗೊಳ್ಳಬೇಕೆಂಬ ಬದಲಾವಣೆಯಾಗಿದೆ ಎಂಬ ವದಂತಿಯೂ ನಿಜವಲ್ಲ. ಮೊದಲೇ ಹೇಳಿದಂತೆ, ಮಕ್ಕಳ ಸಾಹಿತ್ಯವು ‘ಉಪದೇಶ’ವಾಗದೆ ಕೇವಲ ಸಂತೋಷವನ್ನು ಕೊಡುವಂಥದ್ದಾಗಿದ್ದರೆ ಸಾಕು.

ಮಕ್ಕಳ ಸಾಹಿತ್ಯ ಮತ್ತು ದೊಡ್ಡವರ ಸಾಹಿತ್ಯವನ್ನು, ಆಶಯ ಮತ್ತು ಸ್ವರೂಪದ ದೃಷ್ಟಿಯಿಂದ ವಿಭಾಗಿಸಬಹುದಾದರೆ, ವಿಭಾಜಕ ಗೆರೆ ಯಾವುದು?
ಮಕ್ಕಳ ಸಾಹಿತ್ಯ ಮತ್ತು ದೊಡ್ಡವರ ಸಾಹಿತ್ಯಗಳ ಒಟ್ಟಾರೆ ಆಶಯಗಳ ನಡುವೆ ಯಾವುದೇ ವಿಭಾಜಕ ಗೆರೆ ಇಲ್ಲ. ವ್ಯತ್ಯಾಸಗಳೇನಾದರೂ ಇದ್ದರೆ ಸ್ವರೂಪಗಳಲ್ಲಿ ಮಾತ್ರ.

ಹಾಗಂತ, ೧೪ ಅಥವಾ ೧೬ ಫಾಂಟ್ ಸೈಜಿನಲ್ಲಿ ಮುದ್ರಿತವಾದ ಪುಸ್ತಕಗಳೆಲ್ಲವೂ ಮಕ್ಕಳ ಸಾಹಿತ್ಯವಲ್ಲ. ದೊಡ್ಡವರು, ತಾವು ಅನುಭವಿಸಿದ ನೋವು–ನಲಿವುಗಳನ್ನು, ನಿರ್ದಿಷ್ಟ ‘ನಿಲುವಿ’ನಿಂದ (ಅಥವಾ ಯಾವುದೇ ನಿಲುವಿಗೆ ಬದ್ಧನಾಗದ ‘ನಿಲುವಿ’ನಿಂದ) ಇತರರಿಗೆ ಹೇಳುವುದನ್ನು ‘ದೊಡ್ಡವರ ಸಾಹಿತ್ಯ’ ಅನ್ನಬಹುದಾದರೆ, ಮಕ್ಕಳಿಗೆ ಸಂತೋಷವನ್ನುಂಟುಮಾಡುವ ‘ನಿಲುವು’ ಹೊರತಾಗಿ ಬೇರಾವುದೇ ‘ಹಿಡನ್ ಅಜೆಂಡಾ’ ಇಲ್ಲದ ಸಾಹಿತ್ಯವನ್ನು ‘ಮಕ್ಕಳ ಸಾಹಿತ್ಯ’ ಎನ್ನಬಹುದು.

ಬಂಡಾಯ ಸಾಹಿತ್ಯದೊಂದಿಗೆ ಗುರುತಿಸಿಕೊಂಡಿದ್ದ ನಿಮ್ಮ ಕತೆ–ಕಾದಂಬರಿಗಳು ಹೋರಾಟ, ಚಳುವಳಿ, ಕ್ರಾಂತಿಗಳ ಕುರಿತೇ ಮಾತನಾಡುತ್ತಿದ್ದವು. ಅಲ್ಲಿಂದ ಮಕ್ಕಳ ಸಾಹಿತ್ಯದತ್ತ ನೀವು ಹೊರಳಿದ್ದು ಹೇಗೆ? ‘ತಟ್ಟು ಚಪ್ಪಾಳೆ ಪುಟ್ಟ ಮಗು’, ‘ಸಂತಮ್ಮಣ್ಣ’, ‘ಪಾಪು ಗಾಂಧಿ ಬಾಪು ಆದ ಕತೆ’ ಎಂಬಂತಹ ಉತ್ತಮ ಮಕ್ಕಳ ಪುಸ್ತಕಗಳು ನಿಮ್ಮಿಂದ ಹೇಗೆ ಸಾಧ್ಯವಾಯಿತು?

‘ನನ್ನ ಕನಸಿನಲ್ಲಿ ಬಂದಿದ್ದ ಖಲೀಲ್ ಗಿಬ್ರಾನ್, –ಹಾಗಲ್ಲ ವತ್ಸಾ, ಹೀಗೆ ಮಾಡು– ಅಂತ ಹೇಳಿದ್ದರಿಂದ ಹಾಗೆ ಹೊರಳಿದೆ’ ಎಂದು ಉತ್ತರಿಸಿಬಿಟ್ಟರೆ ನೀವು ನಗುತ್ತೀರಾ. ನನ್ನ ಬರಹಗಳಲ್ಲಿ ನೀವು ಗುರುತಿಸುವ ಹೋರಾಟ, ಚಳವಳಿಗಳು, ‘ಬಂಡಾಯ- ಸಮುದಾಯ’ಗಳಂತಹ ಜನರಪರ ಸಾಹಿತ್ಯ–ಸಾಂಸ್ಕೃತಿಕ ಸಂಘಟನೆಗಳ ಬಳುವಳಿಗಳಾಗಿದ್ದರೆ, ‘ಮಕ್ಕಳ ಸಾಹಿತಿ’ ಅನ್ನಿಸಿಕೊಂಡದ್ದು ಆಕಸ್ಮಿಕವಾಗಿ. ಕಾಲು ಶತಮಾನದಷ್ಟು ಹಿಂದೊಮ್ಮೆ ಸಾಹಿತಿ ಮಿತ್ರ ಡಿ.ಕೆ. ಶ್ಯಾಮಸುಂದರ ರಾಯರೊಂದಿಗಿನ ಮಾತುಕತೆಯಲ್ಲಿ, ‘ಮಕ್ಕಳಿಗಾಗಿ ಹೀಗೂ ಒಂದು ಪುಸ್ತಕ ಮಾಡಿದರೆ ಒಳ್ಳೆಯದು’ ಎಂಬ ಯೋಚನೆ ಮೊಳಕೆಯೊಡೆದಿತ್ತು.

ಹಿಡಿದ ಕೆಲಸವನ್ನು ‘ನಿಷ್ಠೆ’ಯಿಂದ ಮಾಡುವ ತಂತ್ರವನ್ನು ಉದ್ಯೋಗ ಕೊಟ್ಟಿದ್ದ ‘ಬ್ಯಾಂಕು’ ಕಲಿಸಿತ್ತು. ಅಲ್ಲಿ ಅದು ಅನಿವಾರ್ಯ; ತಪ್ಪಿದರೆ ಅಪಾಯ. ಅದೇ ‘ತಂತ್ರ’ದಿಂದ ಈ ಕೆಲಸ ಶುರು ಮಾಡಿದೆ; ಕನ್ನಡದ ಮಕ್ಕಳಿಂದ ‘ಚಪ್ಪಾಳೆ’ಯನ್ನೂ ಗಿಟ್ಟಿಸಿದೆ. ಆನಂತರ, ಕನ್ನಡ ಪುಸ್ತಕ ಪ್ರಾಧಿಕಾರದ ಆಗಿನ ಅಧ್ಯಕ್ಷರಾಗಿದ್ದ ದೇವೇಗೌಡರ ಅಣತಿಯಂತೆ ‘ಸಂತಮ್ಮಣ್ಣ’ ಎಂಬ ಮಕ್ಕಳ ಪದ್ಯ ಸಂಕಲನವನ್ನೂ, ಮುಂದೆ ಎರಡು ದಶಕಗಳ ಬಳಿಕ ಅದೇ ಪ್ರಾಧಿಕಾರದ ಅಧ್ಯಕ್ಷರಾಗಿ ಬಂದಿದ್ದ ಪ್ರೊ. ಎಸ್.ಜಿ. ಸಿದ್ಧರಾಮಯ್ಯನವರ ಆದೇಶದಂತೆ ‘ಪಾಪು ಗಾಂದಿ, ಗಾಂಧಿ ಬಾಪು ಆದ ಕತೆ’ಯನ್ನೂ ಬರೆದೆ.

‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ ಪುಸ್ತಕದಲ್ಲಿ ಇದುವರೆಗೆ ನಾವು ಯಾರೂ ಓದಿರದ, ಹೊಸತೇ ಆದ ಗಾಂಧಿಯನ್ನು ಚಿತ್ರಿಸುವ ಅಗತ್ಯವೇನಿತ್ತು? ಇದರಲ್ಲಿ ನಿಮ್ಮ ಕಲ್ಪನೆಯೆಷ್ಟು? ಇತಿಹಾಸದ ಭಾಗಗಳೆಷ್ಟು? ಮಕ್ಕಳಿಗಾಗಿ ಗಾಂಧೀಜಿಯವರ ಕತೆ ಬರೆಯಲು ಒಪ್ಪಿಕೊಂಡ ಬಳಿಕ, ಅವರ ಬಾಲ್ಯದ ವಿವರಗಳಿಗಾಗಿ ತಡಕಾಡಿದ್ದೆ. ಬಾಲ್ಯದ ಬಗ್ಗೆ ಜನಜನಿತವಾಗಿರುವ ಕತೆಗಳು ಎರಡೋ, ಮೂರೋ ಮಾತ್ರ. ಪರೀಕ್ಷೆಯಲ್ಲಿ ‘ಕಾಪಿ’ ಮಾಡಲು ಅವಕಾಶವಿದ್ದರೂ, ಹಾಗೆ ಮಾಡದಿದ್ದದ್ದು, ಮಾಂಸ ತಿಂದದ್ದು, (ಒಂದು ಪುಸ್ತಕದಲ್ಲಿ ಮೆಹತಾಬ್ ಎಂಬ ‘ದುಷ್ಟನು’ ಗಾಂಧೀಜಿಗೆ ಒತ್ತಾಯದಿಂದ ಮಾಂಸ ತಿನ್ನಿಸಿದನು  ಎಂದೂ  ಇದೆ), ಸಿಗರೇಟು ಸೇದಿದ್ದು; ಅಷ್ಟೆ. ಆಗ ನೆನಪಾದದ್ದು ‘ಮಹಾಭಾರತ’ ಮಹಾಕಾವ್ಯ.

ಹದಿನೆಂಟು ಸಹಸ್ರ ಶ್ಲೋಕಗಳಲ್ಲಿ ವ್ಯಾಸಮಹರ್ಷಿ ಬರೆದಿದ್ದ ‘ಮಹಾಭಾರತ’ದೊಳಗೆ ಮತ್ತೆಷ್ಟೋ ಸಹಸ್ರ ‘ಪ್ರಕ್ಷಿಪ್ತ’ ಶ್ಲೋಕಗಳು ನುಸುಳಿಕೊಂಡು, ಶ್ಲೋಕಗಳ ಸಂಖ್ಯೆ ಲಕ್ಷ ದಾಟಿದೆಯಂತೆ. ನೂರಾರು ಪುಣ್ಯಾತ್ಮರು ನೀತಿಪಾಠದ ಸಾವಿರಾರು ಶ್ಲೋಕಗಳನ್ನು ಸೃಜಿಸಿ, ತಮ್ಮ ಹೆಸರಲ್ಲಿ ಪ್ರಕಟಿಸಿದರೆ ಬದುಕಿ ಉಳಿಯದು ಎಂಬ ಅಳುಕಿನಿಂದ, ‘ವ್ಯಾಸ ಮಹಾಭಾರತ’ದೊಳಕ್ಕೆ ತುರುಕಿಬಿಟ್ಟಿದ್ದರಂತೆ. ಇದು ಒಂದು ರೀತಿಯಲ್ಲಿ, ‘ಕಳಬೇಡ, ಕೊಲಬೇಡ, ಹುಸಿಯ ನುಡಿಯಲು ಬೇಡ’ ಎಂಬ ಮಾತುಗಳನ್ನು ಧರ್ಮರಾಯನ ಬಾಯಿಯಲ್ಲಿ ಹೇಳಿಸಿದರೆ, ಹೇಗೆ ಅಧರ್ಮವಾಗುವುದಿಲ್ಲವೋ, ಹಾಗೆ.

‘ತಾನು ಸತ್ಯ ಹರಿಶ್ಚಂದ್ರನ ಕತೆಯಿಂದ ಪ್ರಭಾವಿತನಾಗಿದ್ದೆ’ ಎಂದು ಗಾಂಧೀಜಿಯವರು ತಮ್ಮ ಆತ್ಮ ಚರಿತ್ರೆಯಲ್ಲಿ ದಾಖಲಿಸಿದ್ದರು. ಅದನ್ನೇ ಸ್ವಲ್ಪ ವಿಸ್ತರಿಸಿ– ಅವರು ನಾಟಕ ನೋಡಲು ಹೋಗುವುದು, ನೋಡುವುದು ಮತ್ತು ಮರುದಿನ ಅದೇ ಗುಂಗಿನಲ್ಲಿ ಒಂಟಿಯಾಗಿ ಅಳುವುದು– ಇತ್ಯಾದಿಗಳನ್ನು ಸೃಷ್ಟಿಸಿ ಒಂದು ‘ಎಪಿಸೋಡು’ ಬರೆದರೆ ಹೇಗೆ? ಎಂಬ ಗುಂಗಿನಲ್ಲಿ ಆರಂಭಿಸಿದ ಬರವಣಿಗೆಯಲ್ಲಿ, ಅದೇ ಬಗೆಯ ಸುಮಾರು ಇಪ್ಪತ್ತರಷ್ಟು ‘ಎಪಿಸೋಡು’ಗಳು  ತಾವಾಗಿಯೇ ಸೇರಿಕೊಂಡವು. ಉದಾಹರಣೆಗೆ, ಅವರು ನನ್ನೂರು ಪುತ್ತೂರಿಗೆ ಬಂದುದ್ದಕ್ಕೆ ದಾಖಲೆ ಸಿಕ್ಕಿತ್ತು; ವಿವರಗಳಿರಲಿಲ್ಲ.

ಆ ಕಾಲಘಟ್ಟದ ಕೆಲವು ಗಾಂಧಿವಾದಿಗಳ ಹೆಸರುಗಳನ್ನು (ಶಿವರಾಮ ಕಾರಂತರು, ಕಾರ್ನಾಡು ಸದಾಶಿವರಾಯರು...) ಸೇರಿಸಿಕೊಂಡು ನಾನೇ ವಿವರಿಸಿದೆ. ಅಂತೆಯೇ, ಇಂಗ್ಲೆಂಡಿನಲ್ಲಿ ರೈಲುಗಾಡಿಯಿಂದ ಬಿಳಿಯನೊಬ್ಬನಿಂದ ಹೊರದಬ್ಬಲ್ಪಟ್ಟ ಗಾಂಧಿಗೆ ನಾನೇ ಹುಟ್ಟಿಸಿದ ಕರಿಯನೊಬ್ಬನಿಂದ ನೆರವು ಕೊಡಿಸಿದೆ. ‘ಸತ್ಯಾಗ್ರಹ’ ಎಂಬ ಬ್ರಹ್ಮಾಸ್ತ್ರವನ್ನು ಮಕ್ಕಳಿಗೆ ಆಕರ್ಷಕವಾಗಿ ತಿಳಿಸಲು ಅನುಕೂಲವಾಗುವಂತೆ, ತಮ್ಮ ತಲೆಗೂದಲನ್ನು ತಾವೇ ಕತ್ತರಿಕೊಳ್ಳುತ್ತಿದ್ದ ಗಾಂಧೀಜಿಯ ಸ್ವಾವಲಂಬೀ ಕಸರತ್ತುಗಳನ್ನು ತಮಾಷೆಯಾಗಿಯೇ ಸೃಷ್ಟಿಸಿದೆ.

ಹಂತಕನ ಗುಂಡೇಟಿನಿಂದಾಗಿ ಬಿದ್ದ ಗಾಂಧೀಜಿಯನ್ನು ಎದೆಗಾನಿಸಿಕೊಂಡು ಕುಳಿತ ಪಾತ್ರವೊಂದರ ಮೂಲಕ –ಕುರುಕ್ಷೇತ್ರದ ಕೃಷ್ಣನಂತೆ– ಅಮರಶಿಲ್ಪಿ ಜಕಣಾಚಾರಿಯ ಕತೆಯನ್ನು, ಗಾಂಧೀಜಿಯವರಿಗೇ ಕೇಳಿಸಿದೆ. ಹೀಗೆ, ಹಲವಾರು ‘ಕತೆ’ಗಳನ್ನು ಗಾಂಧೀಜಿಯವರ ದೊಡ್ಡತನಕ್ಕೆ ಪೂರಕ ಸಾಕ್ಷ್ಯಗಳನ್ನಾಗಿ ದಾಖಲಿಸುತ್ತಲೇ, ಮಕ್ಕಳ ಸಂತೋಷಕ್ಕೆ ಅಡ್ಡಿಯಾಗಬಹುದಾಗಿದ್ದ ಕೆಲವು ಐತಿಹಾಸಿಕ ಸತ್ಯಗಳನ್ನು– ದೊಡ್ಡವರಾದ ಬಳಿಕ ಮಕ್ಕಳೇ ಓದಿಕೊಂಡಾರು– ಎಂಬ ತರ್ಕದಲ್ಲಿ ಮರೆ ಮಾಚಿದೆ. ಈಗ ಕನ್ನಡದ ಮಕ್ಕಳಿಗೆ ಮಾತ್ರವಲ್ಲ, ನನ್ನನ್ನೂ ಸೇರಿಸಿಕೊಂಡಂತೆ ಹಲವು ದೊಡ್ಡವರಿಗೂ ಈ ‘ಪಾಪು ಗಾಂಧಿ, ಗಾಂಧಿ ಬಾಪು ಆದ ಕತೆ’ಯೇ ಪುರಾಣ, ಇತಿಹಾಸ ಎಲ್ಲವೂ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT