ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮತಗಳೆಲ್ಲವೂ ಪಥಗಳು...

ಓದುಗರ ವೇದಿಕೆ
ಅಕ್ಷರ ಗಾತ್ರ

ನಾವಿಂದು ಅತ್ಯಂತ ಮುಂದುವರೆದ ಕಾಲಘಟ್ಟದಲ್ಲಿ ಬದುಕುತ್ತಿದ್ದೇವೆ. ವೈಜ್ಞಾನಿಕ ಸಂಶೋಧನೆಗಳು ನಮ್ಮ ಜ್ಞಾನದ ಪರಿಧಿಯನ್ನು ಇನ್ನಿಲ್ಲದಂತೆ ವಿಸ್ತಾರಗೊಳಿಸಿವೆ. ಜಾಗತೀಕರಣ, ಉದಾರೀಕರಣ, ಸಂವಹನ ಮಾಧ್ಯಮಗಳು ನಮ್ಮ ಬ್ರಹ್ಮಾಂಡವನ್ನು ಕರಸ್ಥಳಕ್ಕೆ ಚುಳುಕಾಗಿಸಿವೆ. ಇಂದಿನ ಬದುಕನ್ನು ಈಗ ಇರುವುದಕ್ಕಿಂತ ಇನ್ನಷ್ಟು ಸುಂದರಗೊಳಿಸುವ, ಸುಖಮಯವಾಗಿಸುವ ದಿಸೆಯಲ್ಲಿ ಹಲವು ಪ್ರಜ್ಞಾವಂತರ ಪ್ರಯತ್ನಗಳು ವಿರಮಿಸದೇ ಚಲನಶೀಲಗೊಳ್ಳುತ್ತಲಿರುವುದಕ್ಕೆ ಸಮಾನಾಂತರದಲ್ಲಿ ಇದಕ್ಕೆ ವ್ಯತಿರಿಕ್ತವಾಗಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸಾಮಾಜಿಕ ಸ್ವಾಸ್ಥ್ಯ ಹದಗೆಡುತ್ತಿದೆ. ಸಾಮಾಜಿಕ ಮೌಲ್ಯಗಳು ಕಳಾಹೀನಗೊಂಡು ಸ್ವಾರ್ಥಪರ ನಿಲುವುಗಳು ವಿಜೃಂಭಿಸುತ್ತಿರುವುದು ಅಪಾಯಕಾರಿ ಬೆಳವಣಿಗೆಯಾಗಿದೆ. ವೈಯಕ್ತಿಕ ಹಾಗೂ ಸಾರ್ವತ್ರಿಕ ಸಮಸ್ಯೆಗಳು ನಮ್ಮನ್ನು ಚಕ್ರವೂಹ್ಯದ ರೀತಿಯಲ್ಲಿ ಬಂಧಿಸುತ್ತಲಿವೆ.

ಪರಿಸರ ಮಾಲಿನ್ಯ, ಮೂಲಭೂತವಾದಿಗಳ ಅಟ್ಟಹಾಸ, ದಾರಿದ್ರ್ಯ, ಮಹಿಳೆಯರ ಮೇಲೆ ದೌರ್ಜನ್ಯ, ಮೇಲುವರ್ಗದವರಿಂದ ಕೆಳಸ್ತರದ ಜನತೆಯ ಮೇಲೆ ನಡೆಯುತ್ತಿರುವ ಆಕ್ರಮಣಗಳು, ಭಿನ್ನಾಭಿಪ್ರಾಯಗಳನ್ನು ಒಪ್ಪಿಕೊಳ್ಳದೇ ನನ್ನದೇ ಸರಿ ಎಂದು ವಾದಿಸುವ ಹಟಮಾರಿತನ, ಅಪ್ರಾಮಾಣಿಕತೆ, ಭ್ರಷ್ಟಾಚಾರ, ಬುದ್ಧಿಜೀವಿಗಳೆನಿಸಿಕೊಂಡ ವರ್ಗದವರ ಪಾರಂಪರಿಕ ನಿಲುವುಗಳಲ್ಲಿರುವ ದೋಷಗಳನ್ನೇ ಭೂತಗನ್ನಡಿ ಹಾಕಿ ಹುಡುಕುವ ಅತಿರೇಕದ ಪ್ರಯತ್ನಗಳು, ಶಿಕ್ಷಣವನ್ನು ವ್ಯಾಪಾರೀಕರಣಗೊಳಿಸಿ ಅದನ್ನು ಲಾಭದಾಯಕ ಉದ್ದಿಮೆಯನ್ನಾಗಿ ಪರಿವರ್ತಿಸುವ ಹುನ್ನಾರಗಳು– ಇವೆಲ್ಲಕ್ಕಿಂತ ಮಿಗಿಲಾಗಿ ಜಾತಿ, ಧರ್ಮ, ಮತ, ಪಂಥ, ಗಡಿಗಳ ಹೆಸರಿನಲ್ಲಿ ದೈನಂದಿನ ಬದುಕಿನ ನೆಮ್ಮದಿಯನ್ನು ಛಿದ್ರಗೊಳಿಸುವ ಅಪಾಯಕಾರಿ ಅನಾಗರೀಕ ವರ್ತನೆಗಳು ಸಮಕಾಲೀನ ಬದುಕಿನ ಮೇಲೆ ಬರೆ ಎಳೆಯುತ್ತಿರುವುದು ಪ್ರಸ್ತುತ ಬದುಕಿನ ಅತ್ಯಂತ ದೊಡ್ಡ ದುರಂತವಾಗಿದೆ.

ನಮ್ಮ ವರ್ತಮಾನದ ಬದುಕು ಹಿಂದಣ ಬದುಕಿನ ಅನುಭವಗಳ ಪಾರಂಪರಿಕ ನಿಲುವುಗಳ ನಿರ್ದೇಶನದ ಪರಿಮಿತಿ ಮತ್ತು ಭವಿಷ್ಯತ್ತಿನ ಕನಸುಗಳ ಮುನ್ನೋಟದ ಜತೆಗೆ ಬಿಗಿಯಾಗಿ ಬೆಸೆದುಕೊಂಡಿರುತ್ತದೆ. ಈ ಹಿನ್ನೆಲೆಯಲ್ಲಿ, ‘ಹಿಂದಣ ಹೆಜ್ಜೆಯ ನೋಡಿಕಂಡಲ್ಲದೆ ನಿಂದ ಹೆಜ್ಜೆಯನರಿಬಾರದು’ ಎಂಬ ಅಲ್ಲಮಪ್ರಭು ಮಾತು ಗಮನಾರ್ಹವೆನಿಸುತ್ತದೆ. ಮಾನವ ಬದುಕನ್ನು ಸುಂದರ ಹಾಗೂ ಸುಖಮಯಗೊಳಿಸಿದ ಹತ್ತು ಹಲವು ಆಚಾರ ವಿಚಾರಗಳನ್ನು ನಾವು ಒಪ್ಪಿಕೊಂಡು ಮುಂದುವರೆಸುವುದು ಅಗತ್ಯವಾಗಿದೆ. ಹಿಂದಣ ಹೆಜ್ಜೆಗಳು ಮುಂದಣ ಹೆಜ್ಜೆಗೆ ಸಹಕಾರಿಯಾಗಬಲ್ಲವು. ಹಾಗೆಂದ ಮಾತ್ರಕ್ಕೆ ಹಳೆಯದೆಲ್ಲವೂ ಹೊನ್ನು ಎಂಬ ಭಾವನೆಯಯೂ ಸರಿ ಎನಿಸದು. ಯಾವುದೇ ಧರ್ಮದ ಎಲ್ಲ ನಿಲುವುಗಳು ಎಲ್ಲ ಕಾಲಕ್ಕೂ ಪ್ರಸ್ತುತವೆನಿಸುವುದಿಲ್ಲ. ಕಾಲಕಾಲಕ್ಕೆ ಸ್ಥಗಿತಗೊಳ್ಳುವುದು ಅವುಗಳ ಮೂಲ ಲಕ್ಷಣವೇ ಆಗಿದೆ. ನಮ್ಮ ಧಾರ್ಮಿಕ ಸಾಮಾಜಿಕ ನಿಲುವುಗಳನ್ನು ಕಾಲ ಕಾಲಕ್ಕೆ ವಿಮರ್ಶನಕ್ಕೊಳಪಡಿಸಿ ಚಲನಶೀಲಗೊಳಿಸಬೇಕಾದದ್ದು ಅಗತ್ಯ.

ಇತ್ತೀಚಿನ ದಿನಗಳಲ್ಲಿ ಬಹುತೇಕ ಜನರಲ್ಲಿ ಹಳೆಯದೆಲ್ಲವೂ ಪ್ರಾತಃಸ್ಮರಣೀಯವಾದದ್ದು, ಪ್ರಾಚೀನವಾದದ್ದೆಲ್ಲವೂ ಪವಿತ್ರವೆಂಬ ಭಾವನೆ ಬಲಗೊಳ್ಳುತ್ತಿದೆ. ತಮ್ಮ ಸ್ವಾರ್ಥ ಸಾಧನೆಗಾಗಿ ಧರ್ಮ, ಸಂಪ್ರದಾಯಗಳಲ್ಲಿನ ಹತ್ತು ಹಲವು ಅಸಂಗತ, ಅವೈಚಾರಿಕ ಸಂಗತಿಗಳನ್ನು ವೈಭವೀಕರಿಸುವ, ಆರಾಧಿಸುವ ಪ್ರವೃತ್ತಿಯನ್ನು ತಾವೂ ರೂಢಿಸಿಕೊಳ್ಳುವುದು ಮಾತ್ರವಲ್ಲದೇ ಇತರರ ಮೇಲೆ ಬಲವಂತವಾಗಿ ಹೇರುತ್ತಿದ್ದಾರೆ. ತಮ್ಮ ಧರ್ಮಗಳ ಉದಾತ್ತ, ಉತ್ತಮ ಅಂಶಗಳನ್ನು ಉದ್ದೇಶಪೂರ್ವಕವಾಗಿಯೇ ಮರೆಮಾಚಿ, ತಮ್ಮ ಅನಕೂಲತೆಗಳಿಗೆ ತಕ್ಕಂತೆ ಧರ್ಮವನ್ನು ತಿರುಚುವ ದುಸ್ಸಾಹಸಗಳಿಗೆ ಕೈಹಾಕುತ್ತಿದ್ದಾರೆ. ಎಲ್ಲ ಧರ್ಮಗಳಲ್ಲಿಯೂ ಧಾರ್ಮಿಕ ಮೂಲಭೂತವಾದಿಗಳಿಂದ ಉತ್ತಮ, ಉದಾತ್ತ ಮೌಲ್ಯಗಳು ಅಪವ್ಯಾಖ್ಯಾಗೊಳ್ಳುತ್ತಿರುವುದು ವಿಪರ್ಯಾಸ. ಧಾರ್ಮಿಕ ರಾಜಕಾರಣದ ದುಷ್ಪರಿಣಾಮಗಳು ತನ್ನ ಕಬಂಧಬಾಹುಗಳನ್ನು ಅನಂತದವರೆಗೂ ಚಾಚುತ್ತ ಕುಹಕ ನಗೆ ಬೀರುತ್ತಿದೆ.

ಯುವಜನತೆ ಪಟ್ಟಭದ್ರ ಹಿತಾಸಕ್ತಿಗಳ ಕೈಗೊಂಬೆಯಾಗಿ ವರ್ತಿಸುತ್ತಿರುವುದು ಮಾತ್ರವಲ್ಲದೆ, ಭ್ರಾಮಕತೆಗೆ ಒಳಗಾಗಿ ತಮ್ಮ ಅಮೂಲ್ಯ ಜೀವನವನ್ನು ಹಾಳು ಮಾಡಿಕೊಳ್ಳುತ್ತಿರುವುದು ಆಘಾತಕಾರಿಯಾಗಿದೆ. ಇನ್ನೊಂದು ಮುಖದಲ್ಲಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಿಟ್ಟುಕೊಂಡು ಬರುವ ಹತ್ತು ಹಲವು ಉತ್ತಮ ಮೌಲ್ಯಗಳನ್ನು ನೇಪಥ್ಯಕ್ಕೆ ಸರಿಸಿ, ಕೇವಲ ಲೋಪದೋಷಗಳನ್ನು ವೈಭವೀಕರಿಸುವ ಬುದ್ಧಿವಂತ ವರ್ಗದವರ ಹುನ್ನಾರಗಳು ಮನುಷ್ಯ ಸಂಬಂಧಗಳನ್ನು ಅಪಾಯದ ಅಂಚಿನಲ್ಲಿ ತಂದುನಿಲ್ಲಿಸುತ್ತಿವೆ. ಇಷ್ಟೆಲ್ಲ ಅವಘಡಗಳು, ದುರಂತಗಳು ನಮ್ಮ ನಡುವೆ ಹಾಸುಹೊಕ್ಕಾಗಿದ್ದರೂ ತಮಗೂ ಇದಕ್ಕೂ ಸಂಬಂಧವೇ ಇಲ್ಲವೆಂದು ಪರಿಭಾವಿಸಿ, ರೋಮ್ ಹೊತ್ತಿ ಉರಿಯುವಾಗ ನೀರೋ ಪೀಟೀಲು ಬಾರಿಸುವಂತೆ  ನಿರ್ಲಿಪ್ತ ಭಾವದಿಂದ ತಮ್ಮದೇ ಪ್ರಪಂಚದಲ್ಲಿ ಬದುಕುವ ಕೆಲವು ಯುವ ಜನತೆಯ ನಡೆಯೂ ಕೂಡ ಅತ್ಯಂತ ಅಪಾಯಕಾರಿಯಾಗಿದೆ.

ತನ್ನ ಸಮಾಜದ ಸದಸ್ಯರನ್ನು ಸ್ವಧರ್ಮದ ಅಹಂಕಾರದಿಂದ ಮುಕ್ತಗೊಳಿಸುವುದರ ಜತೆಗೆ ಜಗತ್ತಿನ ಇತರ ಎಲ್ಲ ಧರ್ಮಗಳು ಶ್ರೇಷ್ಠವೆಂದು ಪರಿಗಣಿಸುವ, ಅವುಗಳನ್ನು ಒಪ್ಪಿಕೊಳ್ಳುವ ತಿಳಿವಳಿಕೆ ಮೂಡಿಸುವುದು ಇಂದಿನ ಎಲ್ಲ ಧರ್ಮಗಳ ಮೊದಲ ಆದ್ಯತೆಯಾಗಬೇಕಿದೆ. ಗತಕಾಲದ ಅಂಶಗಳು, ಭವಿಷ್ಯತ್ತಿನ ಮುನ್ನೋಟಗಳು, ಭೌಗೋಳಿಕ ಅಂಶಗಳು, ಪ್ರಾದೇಶಿಕ ಭಿನ್ನತೆಗಳು ನಮ್ಮ ಧಾರ್ಮಿಕ ಪರಂಪರೆ, ನಂಬಿಕೆ ಆಚಾರ ವಿಚಾರಗಳನ್ನು ಬಹಳಷ್ಟು ಪ್ರಭಾವಿಸುವುದರಿಂದ ಎಲ್ಲ ಧರ್ಮಗಳನ್ನು ಒಂದು ಮಾಡುವ, ಇಲ್ಲವೇ ಎಲ್ಲರನ್ನೂ ಒಂದೇ ಧರ್ಮಿಯರನ್ನಾಗಿಸುವುದು ಕರಿಯನ್ನು ಕನ್ನಡಿಯಲ್ಲಿ ಹಿಡಿಯುವ ಹುಚ್ಚು ಪ್ರಯತ್ನವಾಗುತ್ತದೆ. ರಾಮಕೃಷ್ಣ ಪರಮಹಂಸರು ಸಾರಿದ ಸಂದೇಶದಂತೆ ‘ಮತಗಳೆಲ್ಲವೂ ಪಥಗಳು’ ಎಂದು ಒಪ್ಪಿಕೊಂಡು, ಎಲ್ಲ ಧರ್ಮಗಳ ಬಗೆಗೂ ಸಹನೆಯನ್ನು ರೂಢಿಸಿಕೊಳ್ಳುವುದು, ಜಾತಿ, ಮತ, ಪಂಥ, ಗಡಿಗಳ ಎಲ್ಲೆ ಮೀರಿ ಮಾನವೀಯ ಸಂಬಂಧಗಳನ್ನು ಕಾಪಿಟ್ಟುಕೊಳ್ಳುವುದು ಮಾತ್ರ ಸದ್ಯದ ಸಂಕ್ರಮಣ ಸ್ಥಿತಿಗೆ ಪರಿಹಾರ ನೀಡಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT