ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾ‘ಮಾರ್ಗ’ದ ಗುರು

Last Updated 5 ಸೆಪ್ಟೆಂಬರ್ 2015, 19:51 IST
ಅಕ್ಷರ ಗಾತ್ರ

ಯಾವುದೇ ಭಾಷೆ ಹೆಮ್ಮೆ ಪಡಬಹುದಾದ ವಿದ್ವತ್ತು ಡಾ. ಎಂ.ಎಂ. ಕಲಬುರ್ಗಿ ಅವರದು. ಕನ್ನಡ ಜಗತ್ತಿನ ಅಸ್ಮಿತೆಯ ನಿರ್ಮಾಣದಲ್ಲಿ ಅವರ ಪಾತ್ರ ಮಹತ್ವದ್ದು. ಮಾನವೀಯತೆಯನ್ನು, ವಾತ್ಸಲ್ಯವನ್ನು ಊರುಗೋಲಾಗಿಸಿಕೊಂಡು ಸತ್ಯದ ಹುಡುಕಾಟದ ಹಾದಿಯಲ್ಲಿ ಕೊನೆಯವರೆಗೂ ನಡೆದ ಕಲಬುರ್ಗಿ ಮೇಷ್ಟ್ರು ಸಮಾಜ ಹಾಗೂ ಸಂಸ್ಕೃತಿ ಕುರಿತಂತೆ ಹಲವು ಅಪೂರ್ವ ಮಾದರಿಗಳನ್ನು ನಮಗೆ ಬಿಟ್ಟುಹೋಗಿದ್ದಾರೆ. ಅವರ ಕಣ್ಮರೆ ಕನ್ನಡದ ಜಗತ್ತಿಗಾದ ನಷ್ಟವಷ್ಟೇ ಅಲ್ಲ, ಅದು ‘ಮಾನವೀಯತೆಯ ಮಹಾಮಾರ್ಗ’ಕ್ಕೆ ಉಂಟಾದ ಬಹುದೊಡ್ಡ ಹಾನಿಯೂ ಹೌದು.

ಅವರೊಬ್ಬ ಹುಟ್ಟಾ ಸಂಶೋಧಕರಾಗಿದ್ದರು. ಅವರ ದೇಹ, ಬುದ್ಧಿ ಭಾವಗಳನ್ನೆಲ್ಲ ಅವರು ಸತ್ಯದ ಅನಾವರಣದ ಸಂಶೋಧನೆಗೆ ಸದಾ ಸನ್ನದ್ಧ ಸ್ಥಿತಿಯಲ್ಲಿ ಸಜ್ಜುಗೊಳಿಸಿಕೊಂಡಿರುತ್ತಿದ್ದರು. ಅವರನ್ನು ನೋಡಿದಾಗಲೆಲ್ಲ ನನಗೆ, ಓಟಕ್ಕೆ ಸಿದ್ಧನಾದ ಓಟಗಾರನ ನೆನಪಾಗುತ್ತಿತ್ತು. ಮಾತು, ನಡಿಗೆ , ಓದು ಎಲ್ಲದರಲ್ಲೂ ಕಾಣಿಸುತ್ತಿದ್ದ ತೀಕ್ಷ್ಣತೆ, ಸೂಕ್ಷ್ಮತೆ ಮತ್ತು ವೇಗ ಅವರ ನಿಶಿತಮತಿಯ ರೂಪಗಳು.  ಸಾಮಾನ್ಯವಾಗಿ ಸಂಶೋಧಕರ ಗುಣಲಕ್ಷಣವೆಂದೇ ಭಾಸವಾಗುವ ತಾನುಂಟೋ ಮೂರುಲೋಕವುಂಟೋ ಎನ್ನುವ ದೃಷ್ಟಿಕೋನಕ್ಕೆ ಅವರು ಸಂಪೂರ್ಣ ವಿರುದ್ಧವಾಗಿದ್ದರು.

ಈ ಅಂಶವೇ ಕಲ್ಬುರ್ಗಿಯವರನ್ನು ಕನ್ನಡ ಜಗತ್ತಿನ ಮಹತ್ವದ ಮತ್ತು ಅನನ್ಯ ವ್ಯಕ್ತಿತ್ವವಾಗಿಸಿತು. ಈ ಅರ್ಥದಲ್ಲಿ ಅವರು ವಚನ ಪರಂಪರೆಯ ಉತ್ತಾರಾಧಿಕಾರಿಯೂ ಆಗಿದ್ದರು. ಅವರ ಸಂಶೋಧನೆಯು ಸತ್ಯದ ಹುಡುಕಾಟದಷ್ಟೇ ಕನ್ನಡ ಜಗತ್ತಿನ ಅಸ್ಮಿತೆ ಮತ್ತು ವೈಶಿಷ್ಟ್ಯಗಳ ಹುಡುಕಾಟ ಮತ್ತು ರಚನೆಯ ಸ್ಪಷ್ಟ ಗುರಿಯನ್ನೂ ಹೊಂದಿತ್ತು. ಆದ್ದರಿಂದಲೇ ಕಲ್ಬುರ್ಗಿಯವರನ್ನು ಕನ್ನಡದ ಮಹತ್ವದ ಸಂಶೋಧಕರೆಂದು ಗುರುತಿಸುವುದು ಅವರ ವ್ಯಕ್ತಿತ್ವದ ಶಕ್ತಿ ಮತ್ತು ಸಾಧ್ಯತೆಗಳ ಅಪೂರ್ಣ ವ್ಯಾಖ್ಯಾನವಾಗುತ್ತದೆ. ಅವರ ಶಕ್ತಿ ಮತ್ತು ಸಾಧ್ಯತೆಗಳಿಗೆ ಹಲವು ಆಯಾಮಗಳಿದ್ದವು.

ಕನ್ನಡವನ್ನು ಭಾರತದ ಬಹುರತ್ನಾ ವಸುಂಧರೆಯ ಭಿತ್ತಿಯಲ್ಲಿಟ್ಟು ನೋಡುತ್ತಲೇ ಕನ್ನಡವನ್ನು ನಿರ್ಣಾಯಕ ಸ್ಥಾನದಲ್ಲಿ ಸ್ಥಾಪಿಸಲು ಬೇಕಾದ ವಿದ್ವಾಂಸರ ಪಡೆಯೊಂದನ್ನು ರೂಪಿಸುವುದರಲ್ಲಿ ಅವರು ಸದಾ ಮಗ್ನರಾಗಿದ್ದರು. (ಪ್ರಶಸ್ತಿಯೊಂದು ಬಂದ ಸಂದರ್ಭದಲ್ಲಿ ಅವರು ವಿಮರ್ಶಕರೊಬ್ಬರಿಗೆ, ‘ನೀ ಬಾಳ ಕೆಲಸ ಮಾಡಿ ಅಂತ ಇದನ್ನ ಕೊಟ್ಟಿಲ್ಲ, ಇನ್ನೂ ಕನ್ನಡದ ಕೆಲಸ ಮಾಡೂದು ಬಾಳ ಅದ, ಅದನ್ನು ಮಾಡ್ಲಿ ಅಂತ, ಮಾಡು ಅಂತ ಕೊಟ್ಟಿರೋ ಆದೇಶ ಅದ ಇದು’ ಎಂದಿದ್ದರು.

ಇಂಥ ಮಾತನ್ನು ಅವರು ಇನ್ನೆಷ್ಟೋ ಜನರಿಗೆ ಖಂಡಿತಾ ಹೇಳಿದ್ದರು). ಈ ಎರಡರ ಜೊತೆಗೆ ಇನ್ನೂ ಒಂದು ಅಂಶವನ್ನು ಗುರುತಿಸಿದಾಗ ಮಾತ್ರ ಕಲ್ಬುರ್ಗಿಯವರ ವ್ಯಕ್ತಿತ್ವದ ಸಮಗ್ರ ಚಿತ್ರ ಸಿಕ್ಕುತ್ತದೆ. ಷಟ್‌ಸ್ಥಲ ಸಿದ್ದಾಂತಕ್ಕೆ ಅವರದೇ ಆದ ವ್ಯಾಖ್ಯಾನವಿತ್ತು. ಅದರಲ್ಲಿ ಅವರು ಶರಣ ಸ್ಥಲವನ್ನು ವ್ಯಾಖ್ಯಾನಿಸುತ್ತಿದ್ದ ಪರಿ ಅವರ ಬದುಕಿನ ದೃಷ್ಟಿಕೋನವೇ ಆಗಿತ್ತು. ಶರಣ ಸ್ಥಲವೆಂದರೆ, ವ್ಯಕ್ತಿ ತನ್ನ ಸ್ವಮಗ್ನತೆಯಿಂದ ಬಿಡುಗಡೆಗೊಂಡು ಸಮುದಾಯದ ಕಲ್ಯಾಣಕ್ಕಾಗಿ ತನ್ನನ್ನು ಕೊಟ್ಟುಕೊಳ್ಳುವ ಪ್ರಕ್ರಿಯೆಯೆಂದು, ಈ ಕಾರಣಕ್ಕಾಗಿಯೇ ವಚನ ಚಳವಳಿ ಯಾವ ಕಾಲಕ್ಕೂ ಪ್ರಸ್ತುತ ಎಂದು ಅವರು ಹೇಳುತ್ತಿದ್ದರು. ಅವರು ತಮ್ಮ ತಂದೆ ಹೇಳಿದ್ದೆಂದು ಸದಾ ಹೇಳುತ್ತಿದ್ದ, ಪಾಲಿಸುತ್ತಿದ್ದ ಮಾತೊಂದಿತ್ತು, ‘ಅಂಬಲಿ, ಕಂಬಳಿ ಆಸ್ತಿ, ಮಿಕ್ಕಿದ್ದೆಲ್ಲಾ ಜಾಸ್ತಿ’.

ಅಪರಿಗ್ರಹವನ್ನು ಪಾಲಿಸಲು ಅವರು ಸದಾ ನಡೆಸುತ್ತಿದ್ದ ಪ್ರಯತ್ನಗಳು ನನ್ನ ಪಾಲಿಗಂತೂ ಬೆರಗು ಹುಟ್ಟಿಸುತ್ತಿದ್ದವು. ಪ್ರಶಸ್ತಿ, ಹಣ, ಅಧಿಕಾರ ಈ ಎಲ್ಲವುಗಳ ಬಗೆಗೂ ಈ ಬಗೆಯ ನಿಲುವೊಂದನ್ನು ನಿಧಾನವಾಗಿ ಬೆಳೆಸಿಕೊಳ್ಳುವಲ್ಲಿ ಅವರು ಯಶಸ್ವಿಯಾದರೆಂದೇ ನಾನು ತಿಳಿದಿದ್ದೇನೆ. ಶಿವಮೊಗ್ಗದ ‘ಕರ್ನಾಟಕ ಸಂಘ’ ಕೊಡಬಯಸಿದ ಅತ್ಯುತ್ತಮ ಸಂಶೋಧಕ ಪ್ರಶಸ್ತಿಯನ್ನು ನಿರಾಕರಿಸಿದ್ದು, ಮೈಸೂರಿನ ಸೆಂಟ್ರಲ್ ಇನ್‌ಸ್ಟಿಟ್ಯೂಟ್ ಆಫ್ ಲಾಂಗ್ವೇಜ್’ನ ಮುಖ್ಯಸ್ಥ ಪದವಿಯನ್ನು ನಿರಾಕರಿಸಿದ್ದು, ಜ್ಞಾನ, ವಿದ್ವತ್ತುಗಳನ್ನು ನಿರಪೇಕ್ಷವಾಗಿ ಎಲ್ಲರಿಗೂ ಹಂಚುವುದರ ಜೊತೆಗೇ ನಮ್ಮ ಕಾಲದ ತಲ್ಲಣಗಳಿಗೆ ಪ್ರಾಮಾಣಿಕವಾಗಿ ಸ್ಪಂದಿಸುತ್ತಾ ತನ್ನ ಆತ್ಮಸಾಕ್ಷಿಗೆ ಅನುಗುಣವಾಗಿ ನುಡಿಯುವ ಮತ್ತು ನಡೆಯುವ ಮೂಲಕವೇ ಅವರು ಶರಣ ಸ್ಥಲವನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದ್ದರು.

ವ್ಯಕ್ತಿಗತವಾದ ನೆಲೆಯಲ್ಲಿ ತಾವು ಅಪಾರ ಶ್ರಮ ಶ್ರದ್ಧೆಯಲ್ಲಿ ಪಡೆದ ವಿದ್ವತ್ತನ್ನು ಅದೆಷ್ಟು ನಿರ್ವ್ಯಾಜತೆಯಲ್ಲಿ ಅವರು ಎಲ್ಲರೊಂದಿಗೂ  ಹಂಚಿಕೊಳ್ಳಲು ಸಿದ್ದರಾಗಿದ್ದರು ಎನ್ನುವುದು ಬೆರಗನ್ನು ಹುಟ್ಟಿಸುತ್ತಲೇ ಅವರ ಬಗೆಗಿನ ಗೌರವವನ್ನು ಹೆಚ್ಚಿಸುತ್ತದೆ. ಆದ್ದರಿಂದಲೇ ಸಂಶೋಧನೆ, ಅಧ್ಯಾಪನ, ಬರವಣಿಗೆ, ಹಿರಿಕಿರಿಯರೊಂದಿಗಿನ ಚರ್ಚೆಗಳು ಎಲ್ಲವೂ ಅವರಿಗೆ ಒಂದೇ ಗುರಿಯನ್ನು ತಲುಪುವ ದಾರಿಗಳಾಗಿದ್ದವು. ಈ ಎಲ್ಲ ಕಾರಣಗಳಿಗಾಗಿ ಕಲ್ಬುರ್ಗಿಯವರು ಒಟ್ಟಂದದಲ್ಲಿ ಕನ್ನಡ ಜಗತ್ತನ್ನು ಅದರ ಭಾಷೆ, ಸಂಸ್ಕೃತಿ ಮತ್ತು ಸಾಹಿತ್ಯ ಪರಂಪರೆಗಳ ಮೂಲಕ ಮರುಶೋಧಿಸುವುದರಲ್ಲಿ ಆಸಕ್ತರಾಗಿದ್ದರು ಅನಿಸುತ್ತದೆ.

ಆದರೆ ಈ ಕನ್ನಡ ಜಗತ್ತು ಆರಾಧನೆಯ, ದೇಶಪ್ರೇಮದ ಭಾವುಕ ನೆಲೆಗಳನ್ನು ದಾಟಿದ ವಾಸ್ತವದ ನೆಲೆಗಟ್ಟಿನಲ್ಲಿ ಸಾಕಾರಗೊಳ್ಳಬೇಕು ಎನ್ನುವುದೂ ಕಲ್ಬುರ್ಗಿಯವರ ಆಶಯವಾಗಿತ್ತು. ಆದ್ದರಿಂದಲೇ ಸಾಧಾರವಾಗಿ ನಿರೂಪಿತವಾಗದ ಯಾವುದನ್ನೂ ಅವರು ಒಪ್ಪಲಿಲ್ಲ, ಬೆಂಬಲಿಸಲಿಲ್ಲ. ಈ ನಿಟ್ಟಿನಲ್ಲಿ ಯಾರನ್ನು ಬೇಕಾದರೂ ಎದುರುಹಾಕಿಕೊಳ್ಳಲು ಅವರು ಸಿದ್ಧರಾಗಿದ್ದರು. ಒಂದು ಶಬ್ದದ ಮೂಲವನ್ನು ಹುಡುಕಿಕೊಂಡು ಎಷ್ಟು ದೂರ ಬೇಕಾದರೂ ಅವರು ಹೋಗಬಲ್ಲವರಾಗಿದ್ದರು. ಅದನ್ನು ಎಲ್ಲ ರೀತಿಯಿಂದಲೂ ಪರಿಶೀಲಿಸಿದ ಮೇಲೆಯೇ ಅವರು ಅದನ್ನು ಸಾರ್ವಜನಿಕಗೊಳಿಸುತ್ತಿದ್ದರು. ವೈಯಕ್ತಿಕ ಹಿತಾಸಕ್ತಿಗಳಿಗಿಂತ ಸಮುದಾಯದ ಹಿತವನ್ನು ಕಾಯಬೇಕೆನ್ನುವ ಅವರ ನಿಲುವು, ಅದು ಸತ್ಯದ್ದೂ ಆಗಿರಬೇಕು ಎನ್ನುವ ನಿಲುವಾಗಿ ವಿಕಾಸಗೊಂಡಿತು.

ಇದು ಕಷ್ಟದ ದಾರಿಯಾದರೂ ಇದೇ ಸರಿಯಾದ ದಾರಿ ಎನ್ನುವ ನಂಬಿಕೆ ಅವರಿಗೆ ಅಭಿಮಾನಿಗಳಷ್ಟೇ ಶತ್ರುಗಳನ್ನೂ ಸೃಷ್ಟಿಸಿಬಿಟ್ಟಿತು. ನ್ಯಾಯ ನಿಷ್ಠುರಿಗಳ ಹಾಡು ಪಾಡು ಇತಿಹಾಸದುದ್ದಕ್ಕೂ ಇದೇ. ಒಂದು ವಿಶ್ವವಿದ್ಯಾಲಯ ಮಾಡಬಹುದಾದಷ್ಟು ಕೆಲಸವನ್ನು ಅವರು ಏಕಾಂಗಿಯಾಗಿ ಮಾಡಿದ್ದರು. ‘ಮಾರ್ಗ’ದ ಆರು ಸಂಪುಟಗಳನ್ನು ನೋಡಿದರೆ, ಕನ್ನಡ ಜಗತ್ತನ್ನು ಪುನರ್ ರಚಿಸುವಲ್ಲಿ ಅದೆಂಥ ಮಗ್ನತೆಯಲ್ಲಿ ತಮ್ಮನ್ನು ಹೂಡಿಕೊಂಡಿದ್ದರು ಎನ್ನುವುದು ಯಾರಿಗೂ ತಿಳಿಯುತ್ತದೆ.

ಎಲ್ಲ ಭಾಷಿಕ ಸಂಸ್ಕೃತಿಗಳಲ್ಲಿಯೂ ಸಾಮಾನ್ಯವಾಗಿ ಆಗುವಂತೆ ಇಂಥ ದೈತ್ಯ ಕೆಲಸಗಳ ಐತಿಹಾಸಿಕ ಮಹತ್ವ, ಸಾಂಸ್ಕೃತಿಕ ಪ್ರಸ್ತುತತೆಗೆ ಬೆಲೆ ಬರುವುದು ತೀರ ತಡವಾಗಿ. ಕಲ್ಬುರ್ಗಿಯವರ ಮಟ್ಟಿಗೆ ಅವರಿಗೆ ಏನೆಲ್ಲ ಗೌರವಾದರಗಳು ದೊರಕಿಯೂ ಅವರ ಸಾಧನೆಯ – ಕೊಡುಗೆಯ ಅರಿವು ಅದರ ಸಮಗ್ರತೆಯಲ್ಲಿ ಆಗಿಲ್ಲ. ಕನ್ನಡ ಭಾಷೆ ಮತ್ತು ಸಾಹಿತ್ಯದ ಹಲವು ತೊಡಕುಗಳನ್ನು ಬಿಡಿಸುವಲ್ಲಿ ಅವರು ವಹಿಸಿದ ಪಾತ್ರ, ಇನ್ನಾವುದೇ ಭಾಷೆಯಲ್ಲಿ ಆಗಿದ್ದಿದ್ದರೆ, ಲೋಕಮನ್ನಣೆಯನ್ನು ದೊರಕಿಸಿಕೊಡುತ್ತಿತ್ತು.

***
ಸುಮಾರು ಒಂದು, ಒಂದೂವರೆ ದಶಕಗಳ ಅವರ ಜೊತೆಗಿನ ಒಡನಾಟವನ್ನು ಈಗ ಹಿಂತಿರುಗಿ ನೋಡಿದರೆ, ತಿದ್ದಿ ಕಲಿಸಿದ ಗುರುವಾಗಿ, ಏಳ್ಗೆಯನ್ನೇ ಬಯಸಿದ ಹರಕೆಯ ದೈವವಾಗಿ ನನ್ನನ್ನು ಪೊರೆದ ಚಿತ್ರ ಮನಸ್ಸಿನಲ್ಲಿ ಮೂಡುತ್ತದೆ. ಅವರ ಜೊತೆಗಿನ ಕೊನೆಯ ಮಾತುಕತೆ ನೆನಪಾಗುತ್ತಿದೆ. ಬೆಳಗಾವಿಗೆ ಹೋಗಲು ನಾನು ವಿಮಾನಕ್ಕಾಗಿ ಕಾಯುತ್ತಿದ್ದಾಗ ಅವರ ಕರೆ ಬಂತು. ‘‘ನಿನ್ನ ಮ್ಯಾಲ ಬಹಳ ಸಿಟ್ಟು ಬಂದದ ನನಗ’’ ಎಂತಲೆ ಮಾತು ಶುರುವಾಯಿತು.

ಈ ಸಿಟ್ಟು ಅವರಿಗೆ ನನ್ನ ಮೇಲೆ ಬಹಳ ಕಾಲದಿಂದಲೇ ಇತ್ತು. ‘ಭಾಷಣ ಮಾಡೋದು ಕಮ್ಮಿ ಮಾಡು’ ಎನ್ನುವುದು ಅವರ ಅಪೇಕ್ಷೆ, ಕರಾರು, ಹಿತವಚನ, ಬೈಗುಳ ಎಲ್ಲವೂ ಆಗಿತ್ತು. ‘ಕೂತು ಬರಿ’ ಅನ್ನುವುದು ಅವರ ನಿರಂತರ ಆದೇಶ. ಬರವಣಿಗೆಯ ಮಹತ್ವದ ಬಗ್ಗೆ, ಅಗತ್ಯದ ಬಗ್ಗೆ ಎಂದಿಗಿಂತ ಹೆಚ್ಚು ಗಂಭೀರವಾಗಿ ಮಾತನಾಡಿದರು. ‘‘ಬರವಣಿಗೆ ಬಗ್ಗೆ ನನಗ ಮಾತು ಕೊಟ್ಟಿ ನೆನಪ ಅದನ ಇಲ್ಲೊ’’ ಅಂದಾಗ, ‘‘ಖಂಡಿತಾ ನೆನಪಿದೆ ಸರ್’’ ಎಂದೆ. ಮಾತು ಕಟುವಾಯಿತೆಂದು ಅವರಿಗೇ ಅನಿಸಿತೋ ಏನೋ, ‘‘ಈ ಮಾತೆಲ್ಲ ನಾ ಅಲ್ಲದೆ ನಿನಗ ಯಾರು ಹೇಳಬೇಕು’’ ಅಂದರು. ಇದು ನಿಜವೇ.

ಆ ಅಧಿಕಾರ ಅವರಿಗೆ ಇತ್ತು. ನಂತರ, ಅವರ ‘ಕೆಟ್ಟಿತ್ತು ಕಲ್ಯಾಣ’ ನಾಟಕದ ಇಂಗ್ಲಿಷ್ ಅನುವಾದ ಮತ್ತು ಅದಕ್ಕೆ ಭಾರತದ ಇತರ ಭಾಷೆಗಳ ವಿದ್ವಾಂಸರ ಪ್ರತಿಕಿಯೆಗಳನ್ನು ಸಂಕಲಿಸಿದ ಪುಸ್ತಕದ ಬಗ್ಗೆ ಮಾತು ಬಂತು. (ಶ್ರೀ ಗುಂಡೂರ್ ಅವರು Fall of Kalyana ಶೀರ್ಷಿಕೆಯಲ್ಲಿ ಈ ಕೃತಿಯನ್ನು ಸಂಪಾದಿಸುತ್ತಿದ್ದು, ಇಷ್ಟರಲ್ಲೇ ‘ಸಪ್ನ ಬುಕ್ ಹೌಸ್’ನಿಂದ ಪ್ರಕಟವಾಗಲಿದೆ). ಅಲ್ಲಿನ ಲೇಖನಗಳ ಬಗ್ಗೆ ಮಾತನಾಡುತ್ತಿರುವಾಗಲೇ ಅವರು, ಯಾರೋ ಒಬ್ಬ ವಿದ್ವಾಂಸರು ಈ ನಾಟಕವನ್ನು ‘ಮರ್ಡರ್ ಇನ್ ದ್ ಕ್ಯಾಥಡ್ರಲ್’ ನಾಟಕಕ್ಕೆ ಹೋಲಿಸಿದ್ದಾರಲ್ಲ ಎನ್ನುತ್ತಾ ಅವರಲ್ಲಿ ತೀರಾ ಅಪರೂಪ ಎನ್ನಬಹುದಾದ ಗೊಂದಲದಲ್ಲಿ ‘ಅದು ಷೇಕ್ಸ್‌ಪಿಯರನ ನಾಟಕ ಅಲ್ಲವೆ’ ಎಂದು ಕೇಳಿದರು, ‘ಅದು ಎಲಿಯೆಟ್‌ನ ನಾಟಕ’ ಅಂದೆ.

‘‘ನಿನಗ ಸಂತೋಷ ಆಗುವಂಥ ಒಂದು ಲೇಖನ ಬರಿತಿದೀನಿ, ಹನ್ನೆರಡನೆಯ ಶತಮಾನದಿಂದ ಹದಿನಾರನೆಯ ಶತಮಾನದ ತನಕ ಕನ್ನಡದಲ್ಲಿ ಯಾಕೆ ಲೇಖಕಿಯರು ಬರಲಿಲ್ಲ ಎನ್ನುವುದರ ಬಗ್ಗೆ’’ ಅಂದಾಗ, ‘‘ಕಳಿಸಿಕೊಡಿ ಸರ್, ಓದಬೇಕು’’ ಅಂದೆ. ‘‘ಮುಗಿಲಿಕ್ಕೆ ಹತ್ತಿದೆ, ಮುಗಿದ ಕೂಡಲೇ ಕಳಿಸಿಕೊಡ್ತೀನಿ’’ ಎಂದರು. ಸಾಹಿತ್ಯ ಲೋಕದ ಇನ್ನೂ ಕೆಲವು ಅಸಂಗತ ಘಟನೆಗಳ ಬಗ್ಗೆ ಮಾತಾಡಿ, ‘‘ಬೆಳಗಾವಿ ಕಾರ್ಯಕ್ರಮ ಹೆಂಗಾಯ್ತು ತಿಳಿಸು’’ ಎಂದವರೇ– ‘‘ನೀ ಹೇಳದಿದ್ದರೂ ನನಗೆ ತಿಳಿತದ ಬಿಡು’’ ಎಂದು ನಕ್ಕು ಫೋನ್ ಇಟ್ಟಿದ್ದರು.

ಪ್ರತಿ ಮಾತುಕತೆಯಲ್ಲೂ ಭೇಟಿಯಲ್ಲೂ ವಾತ್ಸಲ್ಯ, ಮೆಚ್ಚುಗೆ, ಎಚ್ಚರಿಕೆ, ಹಿತವಚನ, ಮಾರ್ಗದರ್ಶನ ಎಲ್ಲವೂ ಇರುತ್ತಿತ್ತು. ಅವರ ಜೊತೆಗಿನ ಮೊದಲ ಭೇಟಿಯಲ್ಲೇ ಅವರ ಹಿರಿತನದ ಅನುಭವ ಆಗಿತ್ತು. ಶಿವಮೊಗ್ಗದಲ್ಲಿ ಪುಸ್ತಕ ಬಿಡುಗಡೆಯ ಕಾರ್ಯಕ್ರಮ ಅದು. ಕಾರ್ಯಕ್ರಮ ಮುಗಿದದ್ದೇ ‘‘ಅದು ಹೇಗೆ ನೀನು ನನ್ನ ಕಣ್ಣು ತಪ್ಪಿಸಿದ್ದಿ ಇಷ್ಟು ದಿನ’’ ಎಂದಾಗ ಅವರ ಏಕವಚನದ ಸಲಿಗೆ, ಆಪ್ತತ್ವ ಯಾವ ಔಪಚಾರಿಕತೆಯ ಹಂಗಿಲ್ಲದೆ ಅವರು ನಡೆದುಕೊಂಡ ರೀತಿ ಪ್ರಿಯವಾಗಿತ್ತು. ಅಲ್ಲಿಂದಲೇ ಒಂದು ಬಗೆಯ ಮಾನಿಟರಿಂಗ್, ಮೆಂಟರಿಂಗ್ ಶುರುವಾಯಿತು.

ಅವರು ವಹಿಸಿದ ಕೆಲಸ ಅವಧಿಯೊಳಗೆ ಮುಗಿಯದಿದ್ದರೆ, ‘‘ನಿರಾಶಾದೇವಿ ಅಂದ್ರ ನೀವೆ ಏನು’’ ಅನ್ನುವ ಕರೆಗೆ ಸಿದ್ಧವಾಗಿರಬೇಕಾಗಿತ್ತು! ಅಲ್ಲಲ್ಲಿ ಚದುರಿ ಹೋಗುವಂಥ ಸಣ್ಣ ಪುಟ್ಟ ಕೆಲಸಗಳನ್ನು ಬಿಟ್ಟು, ದೊಡ್ಡ ಭಿತ್ತಿಯ ಕೆಲಸಗಳನ್ನು ಕೈಗೆತ್ತಿಕೊಳ್ಳಬೇಕು ಎನ್ನುವುದು ಅವರ ಶಿಷ್ಯರಿಗೆ ಅವರು ಯಾವಾಗಲೂ ಹೇಳುತ್ತಿದ್ದ ಮಾತಾಗಿತ್ತು. ‘‘ಅದು ನಿಮ್ಮ ಕೆಲಸ ಅಂತ ತಿಳಿಬೇಕಾಗಿಲ್ಲ, ಅದು ಕನ್ನಡದ ಸಲುವಾಗಿ ಮಾಡಬೇಕಾದ ಕೆಲಸ, ಅದನ್ನ ಆಯ್ಕೆ ಅಂತಲೂ ತಿಳಿಬಾರದು, ಅದು ನಮ್ಮ ಕರ್ತವ್ಯ ಇರ್ತದ’’ ಎನ್ನುವುದು ಅವರ ಪಲ್ಲವಿಯೇ ಆಗಿರುತ್ತಿತ್ತು.

ವೈಯಕ್ತಿಕ ನೈತಿಕತೆಯ ಜೊತೆಗೇ ಸಾರ್ವಜನಿಕ ನೈತಿಕತೆಯಲ್ಲಿಯೂ ನಂಬಿಕೆ ಇಟ್ಟವರು ಕಲ್ಬುರ್ಗಿಯವರು. ಯಾವುದೇ ಸಂಸ್ಥೆಯಲ್ಲಿಯೂ ಮೂರು ವರ್ಷಕ್ಕಿಂತ ಹೆಚ್ಚು ನೇತೃತ್ವ ವಹಿಸಬಾರದು ಎನ್ನುವ ನಿಲುವನ್ನು ಅವರು ಎಂದೂ ಸಡಿಲಿಸಲಿಲ್ಲ. ಮೊನ್ನೆ ಮೊನ್ನೆ ‘ಕಟ್ಟಿಮನಿ ಟ್ರಸ್ಟ್’ನ ಅವರ ಅಧಿಕಾರಾವಧಿ ಮುಗಿದಾಗ, ಎಷ್ಟು ಒತ್ತಡವಿದ್ದರೂ ಅವರು ಮುಂದುವರಿಯಲಿಲ್ಲ. ಮೂರು ವರ್ಷದೊಳಗೇ ಅವರು ಬಸವರಾಜ ಕಟ್ಟಿಮನಿಯವರ ಸಮಗ್ರ ಸಾಹಿತ್ಯವನ್ನು ಅದೆಷ್ಟು ಶ್ರಮ ಮತ್ತು ಬದ್ಧತೆಯಲ್ಲಿ ಮುಗಿಸಿದರು ಎನ್ನುವುದು ಅವರ ಹತ್ತಿರದ ಎಲ್ಲರಿಗೂ ಗೊತ್ತು.

ಸರ್ಕಾರದ ನಿಧಾನಗತಿಯ, ಬೇಜವಾಬ್ದಾರಿತನದ ಕಾರ್ಯವ್ಯವಸ್ಥೆಯ ನಡುವೆಯೂ ಬೆನ್ನು ಹತ್ತಿ ಅವರು ಇದನ್ನು ಮುಗಿಸಿದರು. ಇತ್ತೀಚೆಗೆ ಅವರು ಆದಿಲ್ ಷಾಹಿ ಕಾಲಘಟ್ಟದ ಕೃತಿಗಳಲ್ಲಿ ಮೊದಲನೆಯ ಕಂತಾಗಿ ಹೊರತಂದ ಆರು ಕೃತಿಗಳನ್ನು ನೋಡಿದರೆ ಎಪ್ಪತ್ತೇಳರ ವಯಸ್ಸಿನಲ್ಲಿನ ಅವರ ಕರ್ತತ್ವಶಕ್ತಿಯ ದರ್ಶನವಾಗುತ್ತದೆ.

ಎರಡು ಮೂರು ತಿಂಗಳ ಹಿಂದೆ, ಮಧ್ಯಾಹ್ನ ಮೂರು ಗಂಟೆಯ ಸುಮಾರಿಗೆ ಮೇಷ್ಟ್ರ ಫೋನ್– ‘‘ಬ್ರಿಟಿಷ್ ಕೌನ್ಸಿಲ್ ಲೈಬ್ರರಿಗೆ ಹೋಗಬೇಕು, ಫ್ರೀ ಇದ್ದರೆ ಬಾ’’. ಹೋದೆ. 1906ರಲ್ಲಿ ಪ್ರಕಟವಾದ ‘ಲಿಂಗಾಯತ ಧರ್ಮವು’ ಕೃತಿಯ ಇಂಗ್ಲಿಷ ಅನುವಾದ ಕೃತಿ ಬೇಕಾಗಿತ್ತು ಅವರಿಗೆ. ಎಲ್ಲ ವಿವರಗಳೊಂದಿಗೆ ಅವರು ಸಿದ್ಧವಾಗಿದ್ದರು. ಅವರ ಉತಾವಳಿಯನ್ನು ನೋಡಿ ಅಲ್ಲಿನ ಸಿಬ್ಬಂದಿ ಭೂಮಿ ಆಕಾಶ ಒಂದು ಮಾಡಿ ಹುಡುಕಿದರೂ ಅದರ ಸುಳಿವು ಸಿಗಲಿಲ್ಲ.

ಕೊನೆಗೆ ನಾನು ‘ನನ್ನ ತಮ್ಮ ಲಂಡನ್‌ಗೆ ಹೋಗುತ್ತಿದ್ದಾನೆ, ಅಲ್ಲಿನ ಬ್ರಿಟಿಷ್ ಕೌನ್ಸಿಲ್‌ನಲ್ಲಿ ನೋಡೋಣ ಸರ್’ ಎಂದೆ. ಕೂಡಲೆ ಹೇಳಿದರು, ಒಂದು ದಿನ ತನ್ನ ಪ್ರಯಾಣ ಹೆಚ್ಚಿಸಿಕೊಂಡು ತಮ್ಮನಿಗೆ ಹುಡುಕಲಿಕ್ಕೆ ಹೇಳಬೇಕು ಅಂತ! ಏನೆಲ್ಲ ಮಾಡಿದರೂ ಇನ್ನೂ ಆ ಪುಸ್ತಕ ಸಿಗದ ಬಗ್ಗೆ ಅವರಿಗೆ ಅಪಾರ ಬೇಸರವಿತ್ತು. ಯಾವ ಕೆಲಸ ಒಪ್ಪಿಕೊಂಡರೂ ಅವರು ‘ಹಚ್ಚಿಕೊಂಡು’ ಮಾಡುತ್ತಿದ್ದರು. ಅವರ ಜೊತೆಯವರಿಂದಲೂ ಇದನ್ನೇ ಅಪೇಕ್ಷಿಸುತ್ತಿದ್ದರು.

ಮಧ್ಯಕಾಲೀನ ಮಹಿಳಾ ಕಾವ್ಯವನ್ನು ಕುರಿತ ನನ್ನ ಅಧ್ಯಯನವನ್ನು ಅವರಿಗೆ ಓದಲು ಕೊಟ್ಟಿದ್ದೆ. ಓದಿದ್ದಾದ ಮೇಲೆ ಇಂಥ ದಿನ, ಇಷ್ಟು ಹೊತ್ತಿಗೆ ಅದರ ಬಗ್ಗೆ ಚರ್ಚೆ ಎಂದು ನಿರ್ಧಾರವಾಯಿತು. ಅಪೂರ್ವಕ್ಕೊಮ್ಮೆ ಎನ್ನುವಂತೆ ಅದನ್ನು ಅಪಾರವಾಗಿ ಮೆಚ್ಚಿಕೊಂಡು, ಕೆಲವು ಅಂಶಗಳನ್ನು ಗಂಭೀರವಾಗಿ ಚರ್ಚಿಸಿ ಕೊನೆಗೆ ಹೇಳಿದರು, ‘‘29 ಪ್ರೂಫ್ ಮಿಸ್ಟೇಕ್ ಅವ ಇದರಾಗ, ಇದು ನಿನ್ನ ಪಿಹೆಚ್.ಡಿ ಥೀಸಿಸ್ ಆಗಿ ನಾ ಏನಾರ ಎಕ್ಸಾಮಿನರ್ ಆಗಿದ್ರ ನಿನ್ನನ್ನ ನಪಾಸ ಮಾಡ್ತಿದ್ದೆ!’’ ‘‘ದೇವರು ದೊಡ್ಡವನು ಸರ್, ನನ್ನನ್ನ ಪಾರು ಮಾಡಿದ’’ ಅಂದೆ.

‘‘ಸೆಕ್ಯುರಿಟಿ ಬ್ಯಾಡ ಅಂತ ಹೇಳಿದೆ’’ ಎಂದು ಅವರಂದಾಗ, ‘‘ಇರಲಿ ಸರ್‌’’ ಅಂತ ನಾ ಹೇಳಿದ್ದೆ. ‘‘ಇಲ್ಲ, ಆಗಲೇ ವಾಪಸ್ ಕಳಿಸಿದೆ’’ ಅಂದು, ‘‘ಪಾಪ ಆ ಪೊಲೀಸ್‌ನವರು ಒಣಮಾರಿ ಹಾಕ್ಕೊಂಡು ನಮ್ಮ ಮನಿ ಗೇಟ್ ಮುಂದ ಯಾಕೆ ಕೂರಬೇಕು?’’ ಅಂದರು. ಅವರ ಉಟ ತಿಂಡಿ ಇತ್ಯಾದಿ ಇವರ ಮನೆಯಲ್ಲೇ ಆಗುತ್ತಿತ್ತು. ಆ ಪೊಲೀಸರ ಮನಸ್ಥಿತಿ ಈಗ ಹೇಗಿದ್ದಿರಬಹುದು? ನೆನಪಿಸಿಕೊಂಡರೆ ಸಂಕಟವಾಗುತ್ತದೆ.

ಇಷ್ಟು ವರ್ಷಗಳ ಒಡನಾಟದಲ್ಲಿ ಒಂದೇ ಒಂದು ದಿನವೂ ಅವರು ಇನ್ನೊಬ್ಬರ ಬಗ್ಗೆ ದ್ವೇಷದ ಮಾತುಗಳನ್ನಾಡಿದ್ದನ್ನು ನಾನು ಕೇಳಿಲ್ಲ. ಭಿನ್ನಾಭಿಪ್ರಾಯಗಳನ್ನು ಅವರು ಎಂದೂ ಬೆನ್ನ ಹಿಂದೆ ವ್ಯಕ್ತಪಡಿಸಲಿಲ್ಲ. ಕೆಲವೊಮ್ಮೆ, ಕೆಲವು ಬೆಳವಣಿಗೆಗಳಲ್ಲಿ ನಾನು ಬೇಸರ ಮಾಡಿಕೊಂಡಾಗಲೂ ಅವರು ‘‘ಬುದ್ಧಿ ಇಲ್ಲೇನು ನಿನಗೆ, ಪಕ್ಕಕ್ಕಿಡು ಅವನ್ನೆಲ್ಲ. ನಡಿಯೊ ದಾರಿ ಬಹಳ ಅದ, ಇವೆಲ್ಲ ಇದ್ದದ್ದ’’ ಎಂದು ಗದರಿದ್ದು ಹಲವು ಬಾರಿ.

***
ಹೇಳಬೇಕಾದ ಸಂಗತಿಗಳು ಇನ್ನೆಷ್ಟೋ ಇವೆ ಅನಿಸಿದರೂ ಹೇಳುವ ಮನಸ್ಸಿನ ಏಕಾಗ್ರತೆಯೇ ಸಾಧ್ಯವಾಗುತ್ತಿಲ್ಲ. ನಾನು ನೋಡಿರುವ ವ್ಯಕ್ತಿಗಳಲ್ಲೇ ಮನುಷ್ಯ ಘನತೆಯನ್ನು ಸದಾ ಉಳಿಸಿಕೊಂಡ ಅಪರೂಪದ ವ್ಯಕ್ತಿತ್ವ ಕಲ್ಬುರ್ಗಿಯವರದು. ಯಾರಿಗೂ ಕೇಡು ಬಯಸದ, ಬಯಸಬಾರದು ಎನ್ನುವುದನ್ನು ಪ್ರಜ್ಞಾಪೂರ್ವಕವಾಗಿ ತನ್ನ ದೃಷ್ಟಿಕೋನದಲ್ಲಿ, ನಡವಳಿಕೆಯಲ್ಲಿ ಜಾಗೃತವಾಗಿರಿಸಿಕೊಳ್ಳಲು ಪ್ರಯತ್ನಿಸಿದವರು ಕೇಡಿಗೆ ಬಲಿಯಾದದ್ದು ಇತಿಹಾಸದ ಮುಂದುವರಿಕೆಯಾಗಿ ನನಗೆ ಕಾಣಿಸುತ್ತದೆ. ಆದರೆ ವಿಪರ್ಯಾಸ ನೋಡಿ, ಒಳಿತನ್ನು ಎದುರಿಸಲು ಕೇಡು ಕೂಡ ಒಳಿತಿನ ವೇಷ ಧರಿಸಿಯೇ ಬರಬೇಕಾಗುತ್ತದೆ.

ಹಂತಕರು ಮೇಷ್ಟ್ರನ್ನು ಹತ್ಯೆ ಮಾಡುವ ಮೊದಲು, ‘‘ಸರ್ ಬೇಕು’’ ಎನ್ನುವ ವೇಷದ ಮೂಲಕವೇ ಬಂದದ್ದು, ಗಾಂಧಿ ಹತ್ಯೆಗೆ ಮುಂಚಿನ ನಮನದ ವೇಷವನ್ನೇ ನೆನಪಿಸುತ್ತದೆ. ತರ್ಕಕ್ಕೆ ಸಿಗದ, ಉತ್ತರವಿರದ ಕೆಲವು ಪ್ರಶ್ನೆಗಳು ಉಳಿದೇ ಬಿಟ್ಟಿವೆ ಮನಸ್ಸಿನಲ್ಲಿ. ಯಾಕಾಗಿ ಅವತ್ತು ‘ಮರ್ಡರ್ ಇನ್ ದ್ ಕ್ಯಾಥಡ್ರಿಲ್’ನ ಮಾತು ಬಂತು? ಯಾವತ್ತಿಗಿಂತ ಹೆಚ್ಚಿನ ತೀವ್ರತೆಯಲ್ಲಿ ಅವರು ನನಗೆ ಸೂಚನೆಗಳನ್ನು ಕೊಟ್ಟದ್ದು ಯಾಕೆ? ಇಷ್ಟು ಹತ್ತಿರದಿಂದ ಅವರನ್ನು ನೋಡಿದ, ಒಡನಾಡಿದ, ಕಲಿತ ಸೌಭಾಗ್ಯದ ಎದುರಿಗೆ ಈ ಪ್ರಶ್ನೆಗಳನ್ನು ತುಸು ಪಕ್ಕಕ್ಕಿಟ್ಟು ಗುರು ಕಾರುಣ್ಯವನ್ನು ಧರಿಸಿ ಮುಂದುವರಿಯಲು ಪ್ರಯತ್ನಿಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT