ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾತಿನ ಕುಲುಮೆಯೊಳಗೆ ಕಾಲದ ಪರೀಕ್ಷೆ

Last Updated 13 ಜೂನ್ 2015, 19:30 IST
ಅಕ್ಷರ ಗಾತ್ರ

ಭಾರತದಲ್ಲಿ ಇಂದು ಮುನ್ನೂರೈವತ್ತಕ್ಕೂ ಹೆಚ್ಚು ನ್ಯೂಸ್ ಚ್ಯಾನೆಲ್‌ಗಳಿವೆ. ಪ್ರತೀ ನ್ಯೂಸ್ ಚ್ಯಾನೆಲ್ಲಿನಲ್ಲೂ ದಿನವೊಂದಕ್ಕೆ ಕನಿಷ್ಠ ಎರಡು ಗಂಟೆಗಳ ಕಾಲ ಚರ್ಚೆಗೆ ಮೀಸಲು. ತಜ್ಞರನ್ನೊಳಗೊಂಡ ಕಾರ್ಯಕ್ರಮವಲ್ಲದೆ, ಜನ ಸಾಮಾನ್ಯರು ಪ್ರೇಕ್ಷರಾಗಿದ್ದು ಕೊನೆಯಲ್ಲಿ ತಮ್ಮ ಪ್ರಶ್ನೆ, ಅಭಿಪ್ರಾಯ, ಆಕ್ಷೇಪಗಳನ್ನು ವ್ಯಕ್ತಪಡಿಸಲು ಅವಕಾಶಗಳಿರುವಂಥ, ಆ ಮೂಲಕ ದೇಶದ ಪ್ರತಿಯೊಬ್ಬ ಪ್ರಜೆಗೂ ವಾಕ್ ಸ್ವಾತಂತ್ರ್ಯದ ಅವಕಾಶ ಒದಗಿಬಂದಿದೆ ಎನ್ನುವ ಭಾವನೆ ಮೂಡಿಸುವ ಕಾರ್ಯಕ್ರಮಗಳೂ ಇವೆ. ಕೆಲವೊಮ್ಮೆ ದಿನವಿಡೀ ಒಂದೇ ವಿಷಯದ ಕುರಿತು ಚರ್ಚಿಸುತ್ತಲೇ ಕಾಲ ತಳ್ಳುವ ಕಾರ್ಯಕ್ರಮಗಳಿವೆ.

ನ್ಯೂಸ್ ‘ರೀಡಿಂಗ್’ ಅನ್ನುವುದೂ ಸಹ ರಂಜನೀಯವಾದ ಚರ್ಚೆ ವಿಶ್ಲೇಷಣೆಯ ಧಾಟಿಯಲ್ಲಿ ಸಾಗುತ್ತಿದೆ. ಅದಲ್ಲದೆ ದಿನಪತ್ರಿಕೆಗಳಲ್ಲೂ ಆಯಾ ಕಾಲದ ಬೆಳವಣಿಗೆ, ಸಮಸ್ಯೆ, ವಿವಾದ, ರಾಜಕೀಯ ನಿರ್ಧಾರಗಳ ಕುರಿತು ಸಾಕಷ್ಟು ಲೇಖನ – ಪ್ರತಿಲೇಖನಗಳು ಪ್ರಕಟವಾಗುತ್ತವೆ. ಜನರಿಂದ ಪ್ರತಿಕ್ರಿಯೆಗಳನ್ನು ಆಹ್ವಾನಿಸಿ, ಯಾವುದೇ ವಿಷಯದ ಬಗ್ಗೆ ಯಾರು ಏನು ಬರೆದರೂ ಅದನ್ನು ಪ್ರಕಟಿಸಿ ಜನಾಂದೋಲನವನ್ನೇ ಹುಟ್ಟುಹಾಕುವ ಮಟ್ಟಿಗೆ ಪತ್ರಿಕೆಗಳು ಸಕ್ರಿಯವಾಗಿವೆ.

ಉದಾರೀಕರಣ ಮತ್ತು ಜಾಗತೀಕರಣ ತರುವಾಯದ ಮಾಧ್ಯಮಗಳ ಇಂಥ ಬಿರುಸಿನ ವಾತಾವರಣದಲ್ಲಿ ದಿನವಿಡೀ ಬಿಡುವಿಲ್ಲದೆ ನಡೆಯುತ್ತಿರುವ ಮಾತು, ಚರ್ಚೆ, ವಾದ, ಪ್ರತಿವಾದಗಳು ಬಹುದೊಡ್ಡ ಕಲಾಪಗಳಾಗಿ ಕಾಣುತ್ತಿವೆ. ಲೋಕಸಭೆ, ರಾಜ್ಯಸಭೆ, ಎಲ್ಲಾ ವಿಧಾಸಭೆಗಳೂ ಸೇರಿದಂತೆ ಎಲ್ಲ ರಾಜ್ಯಗಳ ಒಟ್ಟು ಅಧಿವೇಶನಗಳ ಅವಧಿಯ ಮೊತ್ತ ವರ್ಷಕ್ಕೆ ಸುಮಾರು ಎಂಬತ್ತು ಸಾವಿರ ಗಂಟೆಗಳು. ಕಲಾಪ ಮುಂದೂಡಿಕೆ, ಕಾಲಹರಣ, ಇದ್ಯಾವುದನ್ನೂ ಪರಿಗಣಿಸದೆ ಎಂಬತ್ತು ಸಾವಿರ ಗಂಟೆ! ಅಂದರೆ ಜನಪ್ರತಿನಿಧಿಗಳ ಅಧಿವೇಶನದ ಒಳಗೆ ನಡೆಯುವ ಜನಹಿತದ ಚರ್ಚೆಗಿಂತ ಸುಮಾರು ನಾಲ್ಕು ಪಟ್ಟು ಹೆಚ್ಚಿನ ಚರ್ಚೆ ಅಧಿವೇಶನದ ಹೊರಗೇ ನಡೆಯುತ್ತಿದೆ!

ಇದು ಭಾರತದ ಡೆಮಾಕ್ರಸಿಯ ಪ್ರಬುದ್ಧತೆಯ ಪರಮೋಚ್ಛ ಸ್ಥಿತಿಯೋ ಎಂಬಂತೆ ಇಡೀ ದೇಶಕ್ಕೆ ದೇಶವೇ ನಿರಂತರ ಚರ್ಚೆಯಲ್ಲಿ ಮುಳುಗಿರುವಂತಿದೆ. ಇದರ ನಿಜವನ್ನು ಚಿಂತಿಸುವುದೇ ಈ ಬರಹದ ಉದ್ದೇಶ.

ಇದಕ್ಕೆ ಪೂರಕವಾಗಿ ಜೇಸನ್ ರೀಟ್ಮನ್ ನಿರ್ದೇಶನದ ‘ಥ್ಯಾಂಕ್ಯೂ ಫಾರ್ ಸ್ಮೋಕಿಂಗ್’ ಸಿನಿಮಾದ ಕೆಲವೊಂದು ಅಂಶಗಳನ್ನು ಬದಿರೆಕ್ಕೆಯ ಹಾಗೆ ಬಳಸಿಕೊಳ್ಳುತ್ತೇನೆ. ‘ಥ್ಯಾಂಕ್ಯೂ ಫಾರ್ ಸ್ಮೋಕಿಂಗ್’ ಸಿನಿಮಾದ ನಾಯಕ ನಿಕ್ ನೇಲರ್. ಅಕ್ಯಾಡೆಮಿ ಆಫ್ ಟೊಬ್ಯಾಕೊ ಸ್ಟಡೀಸ್‌ನ ವೈಸ್ ಪ್ರೆಸಿಡೆಂಟ್ ಹುದ್ದೆಯಲ್ಲಿದ್ದು, ಟಾಕ್ ಶೋ, ಚರ್ಚೆ, ಸೆಮಿನಾರುಗಳಲ್ಲಿ ಪರೋಕ್ಷವಾಗಿ ಸಿಗರೇಟಿನ ಪರ ವಾದಿಸುತ್ತ ಜನಮನದ ಪರವಾನಗಿ ಪಡೆದುಕೊಳ್ಳುವುದು ಅವನ ವೃತ್ತಿ. ತನ್ನನ್ನು ತಾನು ‘ಲಾಬಿಯಿಸ್ಟ್’ ಅಂತ ಕರೆದುಕೊಳ್ಳುತ್ತಾನೆ!

ದಿನವೊಂದಕ್ಕೆ ಸಾವಿರದ ಇನ್ನೂರು ಜನರನ್ನು ಬಲಿ ತೆಗೆದುಕೊಳ್ಳುವ ಉದ್ಯಮದ ಅನೈತಿಕ ನಂಟಸ್ತಿಕೆಯ ಉತ್ಪನ್ನವಾಗಿರುವ ಆತನ ಹೆಸರು ಕೇಳುತ್ತಲೇ ಜನರೆಲ್ಲ ವಾಚಾಮಗೋಚರವಾಗಿ ಬೈಯುತ್ತಾರೆ. ಆತನ ಕುರಿತು ಎಲ್ಲರ ಕಣ್ಣಲ್ಲು ಜಿನುಗುವುದು ದ್ವೇಷವೊಂದೇ. ಹೋದಲ್ಲೆಲ್ಲ ತನ್ನನ್ನು ಇಷ್ಟಪಡದ ಜನರೇ ಎದುರಾದರೂ, ‘ಪಾಪ! ಜನರ ತಪ್ಪೇನಿದೆ’ ಎಂದುಕೊಂಡು ತನ್ನ ಪಾಡಿಗೆ ತನ್ನ ಮಾತುಗಾರಿಕೆಯ ಕಸುಬಿನಲ್ಲಿ ಹುರುಪಿನಿಂದ ತೊಡಗುತ್ತಾನೆ.

ಮಾತಿನಲ್ಲಿ ನಿಕ್ ನೇಲರ್‌ನನ್ನು ಗೆಲ್ಲಲಾಗದು. ಅವನ ಚರ್ಚೆಯ ವೈಖರಿಯೇ ಅಂಥದ್ದು. ಟೀವಿ ಚಾನೆಲ್ ಒಂದು ನಡೆಸುತ್ತಿರುವ ಚರ್ಚೆಯಲ್ಲಿ, ಸಿಗರೇಟು ವಿರೋಧಿ ಸಮಿತಿಯ ಸರ್ಕಾರಿ ಪ್ರತಿನಿಧಿ ಸೇರಿದಂತೆ ಇನ್ನೊಂದೆರಡು ಸಂಸ್ಥೆಯ ಪ್ರತಿನಿಧಿಗಳು, ಹದಿನೆಂಟು ವರ್ಷದ ಕ್ಯಾನ್ಸರ್ ಪೀಡಿತ ಹುಡುಗನೊಬ್ಬ ಮತ್ತು ನಿಕ್ ನೇಲರ್ ಸೇರಿರುತ್ತಾರೆ. ನಿರ್ವಿಣ್ಣನಾಗಿ ಕುಳಿತ ಕ್ಯಾನ್ಸರ್ ಪೀಡಿತ ಹುಡುಗನ ಪರಿಸ್ಥಿತಿಯ ಬಗ್ಗೆ ಮರುಕಪಡುತ್ತ ಎಲ್ಲರೂ ಸಿಗರೇಟಿನ ದುಷ್ಪರಿಣಾಮದ ಕುರಿತು ಆಕ್ರೋಶದಿಂದ ಮಾತಾಡುತ್ತಾರೆ.

ಎಲ್ಲರ ಮಾತು ಮುಗಿದ ಮೇಲೆ ನಿಕ್ ತನ್ನ ವಾದ ಮಂಡಿಸುತ್ತಾನೆ. ಮಾತಿನ ನಡುವೆ ಕೇಳುತ್ತಾನೆ: ‘ಸುಮ್ಮನೇ ಹೀಗೇ ಆಲೋಚಿಸಿ. ಈ ಹುಡುಗನ ಸಾವಿನಿಂದ ಸಿಗರೇಟು ಕಂಪನಿಗಳಿಗೆ ಯಾವ ಲಾಭವಿದೆ? ನಾನಿದನ್ನು ಹೇಳಬಾರದು, ಕ್ಷಮಿಸಿ, ಆದರೆ, ನಿಜ ಹೇಳಬೇಕೆಂದರೆ ಈ ಹುಡುಗನ ಸಾವಿನೊಂದಿಗೆ ನಾವು ಒಬ್ಬ ಗ್ರಾಹಕನನ್ನು ಕಳೆದುಕೊಳ್ಳುತ್ತಿದ್ದೇವೆ! ನಿಮ್ಮಂಥ ಸಂಘ ಸಂಸ್ಥೆಗಳಿಗೆ ಈ ಹುಡುಗರು ಸಾಯುವುದು ಬೇಕಿದೆ. ಇಲ್ಲದಿದ್ದರೆ ನಿಮಗೆ ಫಂಡ್ಸ್ ದೊರೆಯುವುದಿಲ್ಲ!

ನಾನಿವತ್ತು ಘೋಷಿಸುತ್ತಿದ್ದೇನೆ. ನಮ್ಮ ಸಂಸ್ಥೆಯಿಂದ ಅಮೇರಿಕದ ಟೀನೇಜ್ ಹುಡುಗ ಹುಡುಗಿಯರಲ್ಲಿ ಸಿಗರೇಟಿನ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಐವತ್ತು ಮಿಲಿಯನ್ ಡಾಲರ್ ಹಣ ನೀಡಲಿದ್ದೇವೆ. ಯಾಕೆಂದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಅಮೆರಿಕದ ಯುವಕ ಯುವತಿಯರ ಜೀವ ನಮಗೆ ಬಹಳ ಮುಖ್ಯ!’ ಯಾರಲ್ಲೂ ಮಾತಾಡುವುದಕ್ಕೇನೂ ಉಳಿದಿರುವುದಿಲ್ಲ. ಚರ್ಚೆಯನ್ನು ವೀಕ್ಷಿಸಲು ಬಂದ ಜನರೆಲ್ಲ ತಲೆ ಆಡಿಸುತ್ತ ಚಪ್ಪಾಳೆ ತಟ್ಟುತ್ತಾರೆ!

ಇಂಥ ಹಲವಾರು ಸಂವಾದಗಳನ್ನು ನಾವಿಂದು ದಿನನಿತ್ಯ ಕಿರುತೆರೆಯಲ್ಲಿ ನೋಡುತ್ತಿದ್ದೇವೆ. ಇವು ನಮ್ಮ ವಿವೇಚನಾ ಶಕ್ತಿಯನ್ನು ಹೆಚ್ಚಿಸಿವೆಯೇ? ನಮ್ಮ ದನಿಗೆ ಸರಿಯಾದ ಗೌರವಯುತವಾದ ಸ್ಥಾನವನ್ನು ದೊರಕಿಸಿವೆಯೇ? ಮತ್ತು ಇವು ನಮ್ಮ ಚಿಂತನೆಯನ್ನು ರೂಪಿಸುವಲ್ಲಿ ಸಹಕಾರಿಯಾಗಿವೆಯೇ?– ಹೀಗೆ ಕೇಳಿದರೆ ನಾನಾ ಬಗೆಯ ಅಭಿಪ್ರಾಯಗಳು ಸಿಗಬಹುದು. ಆದರೆ ಚರ್ಚೆ ಅಥವ ತರ್ಕ ಎಂದು ನಾವು ಕರೆಯುವ ಪ್ರಕ್ರಿಯೆಯೇ ಸರಿಯಾದ ಕ್ರಮದಲ್ಲಿ ಜರುಗುತ್ತಿದೆಯೇ? ಅನ್ನುವುದನ್ನು ಮೊದಲು ಪರಾಮರ್ಶಿಸಬೇಕಿದೆ.
* * *
ಸಾರ್ವಜನಿಕ ಸಂವಾದಕ್ಕೆ ಅಥವ ಡಿಬೇಟಿಗೆ ಆಧುನಿಕ ಭಾರತದಲ್ಲಿ ಚಾಲನೆ ಕೊಟ್ಟವರು ಮಹಾತ್ಮ ಗಾಂಧಿ. 1915ರಲ್ಲಿ ಗಾಂಧಿ ಆಫ್ರಿಕಾದಿಂದ ಭಾರತಕ್ಕೆ ಮರಳುವುದರ ಜೊತೆಜೊತೆಗೇ ಸಂವಾದ ಸಂಸ್ಕೃತಿಯನ್ನೂ ಹುಟ್ಟುಹಾಕಿದರು. ಇಂದಿಗೂ ಜಗತ್ತಿನ ಅತ್ಯಂತ ಮಹತ್ವದ ಸಂವಾದಗಳಲ್ಲಿ ಒಂದೆನಿಸಿರುವ ಗಾಂಧಿ ಮತ್ತು ರವೀಂದ್ರನಾಥ್ ಟ್ಯಾಗೋರ್ ನಡುವಿನ ಸಂವಾದ ಶುರುವಾದದ್ದು 1915ರಲ್ಲಿ. ಹಾಗಾಗಿ, ‘2015’ ಆಧುನಿಕ ಭಾರತದಲ್ಲಿನ ಸಂವಾದ ಸಂಸ್ಕೃತಿಗೆ ಶತಮಾನದ ವರ್ಷವೂ ಹೌದು.

ಗಾಂಧೀಜಿ ಹಾಕಿಕೊಟ್ಟ ಬುನಾದಿಯ ಮೇಲೆ ಇಂದಿಗೂ ಪ್ರಜಾಪ್ರಭುತ್ವದಲ್ಲಿ ಚರ್ಚೆಗೆ ಮಹತ್ವದ ಸ್ಥಾನವಿದೆ. ಡೆಮಾಕ್ರಸಿಯ ಆಧಾರಸ್ಥಂಭವೇ ಚರ್ಚೆ (ಡಿಸ್‌ಕಷನ್). ಆದರೆ ಇದರ ಪರಿಕಲ್ಪನೆ ನಮ್ಮಲ್ಲಿ ಮೊದಲಿನಿಂದಲೂ ಇತ್ತು. ಕುಟುಂಬದ ಹಂತದಲ್ಲೂ ಎಂಥ ವ್ಯಾಜ್ಯಗಳಿದ್ದರೂ ಎಲ್ಲವನ್ನೂ ಮಾತನಾಡಿ ಬಗೆಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಹಿರಿಯರ ರಿವಾಜು. ‘ಅದೇನೇ ಇದ್ದರೂ ಒಮ್ಮೆ ಹೋಗಿ ಮಾತಾಡಿದರೆ ಎಲ್ಲವೂ ಸರಿಹೋಗುವುದು’ ಅನ್ನುವುದು ನಮ್ಮಲ್ಲಿ ರೂಢಿಗತವಾಗಿ ಬಂದಿರುವ ನಂಬಿಕೆ. ಹಳ್ಳಿಗಳಲ್ಲಿನ ಪಂಚಾಯಿತಿ ವ್ಯವಸ್ಥೆಯು ಮೂಲತಃ ನ್ಯಾಯವ್ಯವಸ್ಥೆಯಾಗಿದ್ದರೂ ಅಲ್ಲಿಯೂ ಮಾತುಕತೆ, ಚರ್ಚೆ, ವಾಗ್ವಾದಗಳಿರುತ್ತಿದ್ದವು. ಇಂದಿನ ನ್ಯಾಯವ್ಯವಸ್ಥೆಯಲ್ಲೂ ಅವೆಲ್ಲವೂ ಇದೆ. ಆ ನ್ಯಾಯವ್ಯವಸ್ಥೆಯಲ್ಲೇ ಸಂಧಾನ ವ್ಯವಸ್ಥೆಯ ವಿಭಾಗವೂ ಇದೆ. ಈ ಎಲ್ಲದರಲ್ಲೂ ಸಂವಾದವು ಸಂಧಾನಕ್ಕೆ ಎಡೆಮಾಡಿಕೊಡುತ್ತದೆ.

ಕೆಲವೊಂದನ್ನು ಪಡೆದು, ಕೆಲವೊಂದನ್ನು ಬಿಟ್ಟುಕೊಡುವ ಎರಡೂ ಪಕ್ಷದವರಿಗೆ ಸಮ್ಮತವಾಗುವಂಥ ಒಡಬಂಡಿಕೆಗೆ ಬರುವ ಉದ್ದೇಶ ಇಂಥ ಸಂವಾದಗಳಿಗಿರುತ್ತವೆ. ಕಾರ್ಪೊರೇಟ್ ಜಗತ್ತಿನಲ್ಲಿ ಚರ್ಚೆಯ ಮೂಲಕ ಗೆಲ್ಲುವುದಕ್ಕಿಂತಲೂ ಹೆಚ್ಚಾಗಿ ಚರ್ಚೆಯ ಮೂಲಕ ಓಲೈಸುವ, ಇಬ್ಬರೂ ಗೆದ್ದೆವೆಂದು ಭಾವಿಸುವ (Win-Win situation) ಸ್ಥಿತಿಗೆ ಬರುವಂತೆ ಮಾಡುವುದೇ ನಿಜವಾದ ಗೆಲುವು. ಇದನ್ನು
‘ಆರ್ಗ್ಯುಮೆಂಟ್’ ಅನ್ನುವುದಕ್ಕಿಂತಲೂ ‘ನೆಗೋಸಿಯೇಷನ್’ ಅಂತನ್ನಬಹುದು. ಅಥವಾ ಇನ್ನೂ ಕೆಳಕ್ಕಿಳಿಸಿ ‘ಚೌಕಾಸಿ’ ಎನ್ನಬಹುದು. ಇವೆಲ್ಲವೂ ಸಂಧಾನ ಪ್ರಕ್ರಿಯೆಗಳೇ ಆದರೂ ಅಂಥ ಸಂಧಾನದ ಹಿಂದೆ ಸುದೀರ್ಘವಾದ ಮಾತುಕತೆ ಸಂವಾದಗಳಿರುತ್ತವೆ ಅನ್ನುವುದನ್ನು ನೆನಪಿಡಬೇಕು.

ಭಾರತೀಯ ದರ್ಶನಗಳಲ್ಲೂ ಚರ್ಚೆಗೆ ಮಹತ್ವದ ಸ್ಥಾನವಿದೆ. ತರ್ಕ ಎನ್ನುವುದು ಸರಿಯಾದ ಪದ. ತಾರ್ಕಿಕರು ಅಥವ ನೈಯಾಯಿಕರು ಎನ್ನುವ ಪಂಡಿತ ಪಂಥವೇ ಇದೆ. ಬೌದ್ಧ, ಅದ್ವೈತ, ದ್ವೈತಿಗಳೆಲ್ಲರು ತರ್ಕದ ಆಸರೆ ಪಡೆದಿದ್ದಾರೆ. ನ್ಯಾಯಶಾಸ್ತ್ರವು ಎಲ್ಲರಿಗೂ ಸಾಧನಶಾಸ್ತ್ರ. ಅಂದರೆ ಎಲ್ಲರಿಗೂ ತರ್ಕವು ಸಾಧನವೇ ಹೊರತು ತರ್ಕವೇ ಪ್ರಧಾನವಲ್ಲ. ತಾರ್ಕಿಕರಿಗೆ ಮಾತ್ರ ತರ್ಕವೇ ಪ್ರಧಾನ. ತರ್ಕದಿಂದ ಸಿದ್ಧವಾಗದ ವಸ್ತು ಅಸ್ತಿತ್ವದಲ್ಲೇ ಇರಲಿಕ್ಕೆ ಸಾಧ್ಯವಿಲ್ಲ ಅಥವ ಇರುವುದೆಲ್ಲವನ್ನೂ ತಿಳಿಯಬಹುದು ಅನ್ನುವುದು ತಾರ್ಕಿಕರ ನಿಲುವು. ತರ್ಕವು ಒಂದು ಹಂತದವರೆಗೆ ಬುದ್ಧಿಯ ತೀಕ್ಷ್ಣತೆಯನ್ನು ಹೆಚ್ಚಿಸುವುದಕ್ಕಷ್ಟೇ ಸಹಾಯಕಾರಿ. ತರ್ಕವನ್ನು ಮೀರಿದ ಅನುಭವವೇ ಪ್ರಧಾನ. ಅಂಥ ಅನುಭವವನ್ನು ತರ್ಕವು ಹಿಡಿದಿಡಲು ಅಸಮರ್ಥ ಎನ್ನುವುದು ಇತರ ದಾರ್ಶನಿಕರ ನಿಲುವು.

ನನಗೊಂದು ಕುತೂಹಲವಿತ್ತು. ತಾರ್ಕಿಕರಲ್ಲೇ ಯಾರಾದರೂ ತರ್ಕದ ಮಿತಿಯ ಬಗ್ಗೆ ಎಲ್ಲಿಯಾದರೂ ಸೂಚ್ಯವಾಗಿಯಾದರೂ ಉಲ್ಲೇಖಿಸಿರಬಹುದೇ ಎಂದು. ನ್ಯಾಯಶಾಸ್ತ್ರ ವಿದ್ವಾಂಸರಾದ ಉಮಾಕಾಂತ ಭಟ್ಟರಲ್ಲಿ ಈ ಕುರಿತು ಕೇಳಿದಾಗ ಅವರ ಉತ್ತರ ಸ್ವಾರಸ್ಯಕರವಾಗಿತ್ತು. ಅವರದೇ ಮಾತಿನಲ್ಲಿ ಹೇಳುವುದಾದರೆ, ‘‘ತಾರ್ಕಿಕರು ನೇರವಾಗಿ ತರ್ಕದ ಇತಿಮಿತಿಗಳನ್ನು ಘೋಷಿಸಿದರೆ ಅವರದೇ ಪಕ್ಷವನ್ನು ಸ್ವತಃ ಅವರೇ ನಿರಾಕರಿಸಿದಂತಾಗುತ್ತದೆ. ಆದರೆ, ತಾರ್ಕಿಕರಿಗೂ ತರ್ಕವು ಪ್ರಮಾಣಬದ್ಧವಾಗಿಯೇ ಇರಬೇಕು. ಅವರು ತರ್ಕದ ದೋಷಗಳ ಬಗ್ಗೆ ಅತ್ಯಂತ ವಿಸ್ತಾರವಾಗಿ ವಿವರಿಸುತ್ತಾರೆ (‘ತಾರ್ಕಿಕ ರಕ್ಷಕ’ ಮುಂತಾದ ಗ್ರಂಥಗಳಲ್ಲಿ). ತರ್ಕದ ಆಭಾಸಗಳನ್ನು ಹೀಗೆ ವಿಸ್ತಾರವಾಗಿ ಹೇಳುವುದೇ ತರ್ಕದ ಇತಿಮಿತಿಗಳ ಅಪಾಯಗಳ ಕುರಿತು ಸೂಚ್ಯವಾಗಿ ಹೇಳಿದಂತೆ’’.
ಅಂದರೆ ತರ್ಕದಲ್ಲಿ ಹೆಜ್ಜೆ ತಪ್ಪುವ ಅಪಾಯವೇ ಹೆಚ್ಚು. ತನಗೆ ಅನ್ನಿಸಿದ್ದನ್ನು ಹೇಳುವ, ಅನಿಸಿಕೆಗಳನ್ನು ಹಂಚಿಕೊಳ್ಳುವ ಪ್ರಲಾಪಗಳು ತರ್ಕವೆನಿಸಲಾರದು.

ಅದೊಂದು ಸತ್ಯಾನ್ವೇಷಣೆಗೆ ತೊಡಗಿದ ವೈಚಾರಿಕ ಮನೋಧರ್ಮ. ಅದರಿಂದಲೇ ಎಲ್ಲವನ್ನೂ ಸಿದ್ಧಗೊಳಿಸಲು ಸಾಧ್ಯವಿರದಿದ್ದರೂ ಅದೊಂದು ಭೂಮಿಕೆಯನ್ನಂತೂ ಒದಗಿಸಿಕೊಡುತ್ತದೆ. ಹೀಗೆ, ಕೌಟುಂಬಿಕ ವ್ಯವಸ್ಥೆಯಲ್ಲಿನ ಮನವೊಲಿಸುವ ಸಂವಾದ ಹಾಗೂ ದಾರ್ಶನಿಕ ನೆಲೆಯಲ್ಲಿನ ಸತ್ಯಾನ್ವೇಷನೆಯ ತರ್ಕಗಳೆರಡನ್ನೂ ಮೇಳೈಸಿ ಅದನ್ನು ಸಾರ್ವಜನಿಕ ಸಂವಾದಕ್ಕೆ ವಿಸ್ತರಿಸಿದವರು ಗಾಂಧಿ. ಸ್ವಾತಂತ್ರ್ಯ, ಸ್ವರಾಜ್ಯ, ಅಸಹಕಾರ ಚಳವಳಿ, ಸತ್ಯಾಗ್ರಹ, ರಾಷ್ಟ್ರೀಯತೆ, ಇತ್ಯಾದಿ ವಿಷಯಗಳ ಬಗ್ಗೆ ತರ್ಕಬದ್ಧವಾದ ಆಲೋಚನೆ, ಪ್ರಾಯೋಗಿಕತೆಯ ಪರಾಮರ್ಶೆ, ಮನವೊಪ್ಪಿಸುವ ವಿಚಾರ ಸರಣಿ ಟ್ಯಾಗೋರ್ ಮತ್ತು ಗಾಂಧೀಜಿ ನಡುವಿನ ಚರ್ಚೆಯಲ್ಲಿ ಕಾಣುತ್ತದೆ.

ಟ್ಯಾಗೋರ್ ನಿರಂತರವಾಗಿ ಗಾಂಧೀಜಿಯವರ ವಿಚಾರಗಳ ಬಗ್ಗೆ ಅನುಮಾನ – ಆಕ್ಷೇಪಗಳನ್ನು ವ್ಯಕ್ತಪಡಿಸುತ್ತಿರುವಾಗಲೂ ಅವರ ನಡುವೆ ಕಿಂಚಿತ್ತೂ ಕಹಿ ಮೂಡದಿರುವುದು ಇಂದಿನ ಮಾಧ್ಯಮ ಯುಗದಲ್ಲಿ ನಂಬಲಾಗದ ಸಂಗತಿ.

ಈ ಎಲ್ಲದರ ಹಿನ್ನಲೆಯಲ್ಲಿ ಇಂದಿನ ಮಾಧ್ಯಮ ವ್ಯವಸ್ಥೆಯನ್ನು ನೋಡಿದರೆ– ಕ್ಷಣಕ್ಕೊಂದು ಸುದ್ದಿ, ದಿನಕ್ಕೊಂದು ಚರ್ಚೆ, ಆ ಕ್ಷಣ ಅನ್ನಿಸಿದ್ದನ್ನು ಹೇಳಿಬಿಡುವ implusiveness, ಯಾವ ಸಂಗತಿಯನ್ನೂ ಧಾರಣ ಮಾಡಲು ಸಾಧ್ಯವಾಗ ದಂಥ ಆತುರತೆ, ವಿಷಯಜ್ಞಾನ ವಿವೇಚನೆಯ ಕೊರತೆ, ಈ ಎಲ್ಲದರಿಂದ ವಿಷಯವೊಂದು ಬುಗ್ಗೆಯೊಡೆದು ಜನಮಾನಸವನ್ನು ವ್ಯಾಪಿಸಿ, ಅದರ ಅವಲೋಕನದಲ್ಲಿ ಬುದ್ಧಿಯನ್ನು ಬೆಳಗಿಸುವ ಸುದೀರ್ಘವಾದ ಮಂಥನಗಳೇ ಇಲ್ಲವಾಗಿದೆ. ನಾಳೆ ಮತ್ತೊಂದು ವಿಷಯ ಸಿಗುವವರೆಗೆ ಇಂದಿನ ವಿಷಯದ ಕುರಿತು ತನ್ನ ಧ್ವನಿಯನ್ನು ಛಾಪಿಸುವ ಲೋಲುಪತೆ ರೋಚಕತೆಯೇ ಮಾಧ್ಯಮಗಳ ಹಾಗೂ ಅಭಿಪ್ರಾಯ ಶೂರರ ಹವ್ಯಾಸವಾಗಿದೆ. ಆರ್ಭಟಗಳಿಲ್ಲದೆ ಯಾವ ಚರ್ಚೆಗೂ ಅರ್ಥವಿಲ್ಲ ಎಂಬುದೇ ಇಂದಿನ ಮಾಧ್ಯಮದ ಖಚಿತವಾದ ನಂಬಿಕೆ.

ಕೆಲವು ಸುದ್ದಿ ವಾಹಿನಿಗಳ ಸಂವಾದಗಳಲ್ಲಿ ನಾನೂ ಚರ್ಚಾರ್ಥಿಯಾಗಿ ಪಾಲ್ಗೊಂಡಿರುವೆ. ನಮ್ಮ ಮಾತುಗಳು ಗಂಭೀರವಾಗುತ್ತಿವೆ ಅಥವಾ ವಿಷಯದ ಕುರಿತಾದ ಚರ್ಚೆ ಮಂದವಾಯಿತು ಅನ್ನಿಸಿದ ಕೂಡಲೇ ಅದನ್ನು ನಡೆಸಿಕೊಡುತ್ತಿರುವ ನಿರೂಪಕರಿಗೆ ಕೂಡಲೇ ಸಂದೇಶ ರವಾನಿಸಲಾಗುತ್ತದೆ. ಅವರದನ್ನು ರೋಚಕವಾಗಿಸಲು, ಚರ್ಚೆಯ ಬಿಸಿಯೇರಿಸಲು ಬೇಕಾದ ಮಾತುಗಳನ್ನು ತುರುಕಿ ಒಬ್ಬರನ್ನೊಬ್ಬರು ಕೆಣಕುವಂತೆ ಮಾಡಿ ಗೊಂದಲ–ಗಲಭೆ ಎಬ್ಬಿಸಿ ಈ ದೇಶದ ಮಹಾನ್ ಹತಾಶ ಪ್ರಜೆಯ ಹಾಗೆ ಸುಮ್ಮನೆ ಕೂತುಬಿಡುತ್ತಾರೆ.

ಅಲ್ಲಿ ಪಾಲ್ಗೊಂಡಿರುವ ಪ್ರತಿಯೊಬ್ಬರಿಗೂ ಅವರ ನಿಲುವನ್ನು ಗಟ್ಟಿಯಾಗಿ ಸ್ಥಾಪಿಸಲೇ ಬೇಕಿರುವುದರಿಂದ ಯಾವ ಕಾರಣಕ್ಕೂ ಸೋಲಬಾರದೆನ್ನುವ ಹಟ. ತನ್ನಲ್ಲಿ ಹೇಳುವುದಕ್ಕೇನೂ ಇರದಿದ್ದರೂ ಮತ್ತೊಬ್ಬರು ಹೇಳುವುದು ಯಾರಿಗೂ ಕೇಳಿಸದಿದ್ದರಾಯಿತೆಂದು ಕಿರುಚಾಡುತ್ತಾರೆ. ಹೀಗೆ ಅನಗತ್ಯ ಕಿರುಚಾಟಗಳಲ್ಲಿ ಕೆಲವು ನಿಮಿಷಗಳನ್ನು ಸುಡದೇ ಹೋದರೆ ಕಾರ್ಯಕ್ರಮ ನಡೆಸಿಕೊಡುವವರು ಯಶಸ್ವೀ ನಿರೂಪಕ ಎನ್ನಿಸಿಕೊಳ್ಳುವುದಿಲ್ಲ.

ಕೊನೆಗೂ ಜನರಿಗೆ ಯಾವ ಸಂದೇಶವನ್ನು ತಲುಪಿಸಬೇಕೆಂದು ಅವರು ಅಂದುಕೊಂಡಿರುತ್ತಾರೋ ಅದಕ್ಕೆ ತಕ್ಕ ಮಾತುಗಳನ್ನು ಎಲ್ಲರಿಂದಲೂ ಹೆಣೆಸಲಾಗುತ್ತರೆ. ಹಿರಿಯ ಬರಹಗಾರ ಮಿತ್ರರೊಬ್ಬರು ಇಂಗ್ಲಿಷ್ ವಾಹಿನಿಗಳಲ್ಲಿ ಬರುವ ‘ಜನತಾ ಸಂವಾದ’ ಕಾರ್ಯಕ್ರಮದ ಒಳಗುಟ್ಟುಗಳನ್ನೂ ಹೇಳುತ್ತಿದ್ದರು. ಅಲ್ಲಿ ಜನರ ನಡುವಿಂದ ಬರುವ ಪ್ರಶ್ನೆಗಳ್ಯಾವುದೂ ಆ ಕ್ಷಣಕ್ಕೆ ಉದ್ಭವಿಸಿದ ಪ್ರಶ್ನೆಗಳಲ್ಲ.

ಯಾರು ಯಾವ ಪ್ರಶ್ನೆಗಳನ್ನು ಯಾವಾಗ ಕೇಳಬೇಕೆನ್ನುವುದು ಮೊದಲೇ ನಿಗದಿಯಾಗಿರುತ್ತದೆ. ಅದಕ್ಕೆ ತಕ್ಕ ಹಾಗೆ ಪ್ರಶ್ನೋತ್ತರಗಳು ಬರುತ್ತವೆ. ಹಾಗೊಂದು ವೇಳೆ ಏನಾದರೂ ಸರಿಯಾದ ವಿಚಾರಗಳು ಬರುತ್ತಿವೆ ಅನ್ನಿಸುವ ಹೊತ್ತಿಗೇ ನಿರೂಪಕನಿಗೆ ಮತ್ತೆ ಸಂದೇಶ ರವಾನಿಸಲಾಗುತ್ತದೆ. ‘ಸಣ್ಣದೊಂದು ಬ್ರೇಕ್ ನಂತರ ಚರ್ಚೆ ಮುಂದುವರೆಯುತ್ತದೆ’ ಎಂದು ಜಾಹೀರಾತು ಶುರುವಾಗುತ್ತದೆ! ಜಾಹೀರಾತು ಗಳನ್ನು ಸಾದರಪಡಿಸುವ ಸಲುವಾಗಿ ನಡುನಡುವೆ ಸುದ್ದಿಗಳನ್ನು ತುರುಕಿ ರೋಚಕಗೊಳಿಸುವ ಅನಿವಾರ್ಯತೆ ನಿರೂಪಕನಿಗಿರುತ್ತದೆ.

ತನ್ನ ಸಿದ್ಧಾಂತವನ್ನು ಪ್ರತಿಪಾದಿಸಲು ಚರ್ಚೆಗೆ ತೊಡಗುವುದನ್ನು ಅಥವ ಇತರರ ಸಿದ್ಧಾಂತವನ್ನು ಖಂಡಿಸುವ ಸಲುವಾಗಿ ಚರ್ಚಿಸುವುದನ್ನು ಭಾರತೀಯ ತರ್ಕ ಶಾಸ್ತ್ರವು ಕ್ರಮವಾಗಿ ‘ಜಲ್ಪ’ ಮತ್ತು ‘ವಿತಂಡ’ ಎಂದು ಗುರುತಿಸುತ್ತದೆ. ಆದರೆ, ಹೀಗೆ ಕೃತಕ ಚರ್ಚೆಯೊಂದನ್ನು ರೂಪಿಸುವುದು, ನಿರಾಧಾರ ಆರೋಪ-ಪ್ರತ್ಯಾರೋಪದ ಕಿರುಚಾಟದಲ್ಲಿ ತೊಡಗುವುದು ಬಹುಶಃ ತರ್ಕದ ಆಭಾಸಗಳೆಲ್ಲವನ್ನೂ ಮೀರಿದ ಈ ಕಾಲದ ‘ಟಿ.ಆರ್.ಪಿ’ ಪೋಷಿತ ಸುದ್ದಿ ಮಾಧ್ಯಮಗಳ ಹೊಸ ಅನ್ವೇಷಣೆಯೇ ಇರಬೇಕು!

ಆದರೂ ನಾವು ಇಂಥದ್ದೊಂದು ಸಾರ್ವಜನಿಕ ಚರ್ಚೆಯು ಅನಿವಾರ್ಯವೆಂದೇ ನಂಬಿದ್ದೇವೆ. ತನಗೆ ಬೇಕೆನಿಸಿದ್ದನ್ನು ಹೇಗಾದರೂ ಮಾಡಿ ಜಾರಿಗೆ ತರುವ ಸರ್ಕಾರಗಳೂ ಕೂಡ ಕೆಲವೊಂದು ನಿರ್ಧಾರಗಳನ್ನು ಪ್ರಕಟಿಸುವ ಮುನ್ನ ಯಾಕೆ ಆ ವಿಷಯವನ್ನು ಸಾರ್ವಜನಿಕ ಚರ್ಚೆಗೆ ತೆರೆದಿಡುತ್ತದೆ? ಇಂಥ ತರ್ಕಗಳು ಏನನ್ನು ಬಿತ್ತರಿಸುತ್ತಿವೆ? ಸಿಗರೇಟು, ಕುಡಿತಗಳ ಬಗ್ಗೆ ಗಾಂಧಿ ಯಾವತ್ತೂ ಚರ್ಚಿಸಿದವರಲ್ಲ. ನೈತಿಕತೆ, ವೈಯಕ್ತಿಕ ಮೌಲ್ಯಗಳ ಬಗ್ಗೆ ಅವರಿಗೆ ಯಾವ ಗೊಂದಲಗಳೂ ಇರಲಿಲ್ಲ. ಅದರ ಕುರಿತು ಸಾರ್ವಜನಿಕ ಚರ್ಚೆಯಿಂದ ನಿರ್ಣಯಿಸಬೇಕಾದ ಅನಿವಾರ್ಯತೆಯೂ ಇರಲಿಲ್ಲ.

ಹಾಗಿದ್ದರೆ, ಇದು ಸ್ವಂತ ವಿವೇಚನೆಯಿಂದ ಒಂದು ನಿರ್ಧಾರಕ್ಕೆ ಬರಲಾಗದ ನಮ್ಮ ಸರ್ಕಾರಗಳ ಅಸಾಮರ್ಥ್ಯವೇ? ಮೇಲ್ನೋಟಕ್ಕೆ ಇದು ನಮ್ಮ ಜನಪ್ರತಿನಿಧಿಗಳ ಬೌದ್ಧಿಕ ದಿವಾಳಿತನದಂತೆಯೋ ಅಥವಾ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯ ಮಹಾನ್ ಶಕ್ತಿಯಂತೆಯೋ ಕಾಣುತ್ತದೆ. ಆದರೆ ವಾಸ್ತವಾಗಿ ಇದು ತರ್ಕದ ದುರುಪಯೋಗ. ಅದು ಹೇಗೆ ಎನ್ನುವುದನ್ನು ‘ಥ್ಯಾಂಕ್ಯೂ ಫಾರ್ ಸ್ಮೋಕಿಂಗ್’ ಸಿನಿಮಾ ಸ್ಪಷ್ಟವಾಗಿ ತೆರೆದಿಡುತ್ತದೆ.

ಇತ್ತೀಚೆಗೆ ನಮ್ಮ ಕೇಂದ್ರ ಸರ್ಕಾರವು ಆಲೋಚಿಸಿದಂತೆ, ‘ಥ್ಯಾಂಕ್ಯೂ ಫಾರ್ ಸ್ಮೋಕಿಂಗ್’ ಸಿನಿಮಾದಲ್ಲಿಯೂ ಸಿಗರೇಟು ಪ್ಯಾಕುಗಳ ಮೇಲೆ ತಲೆ ಬುರುಡೆಯ ಚಿತ್ರವನ್ನು ಡೇಂಜರ್ ಸಿಂಬಲ್ ಎನ್ನುವಂತೆ ಕಡ್ಡಾಯವಾಗಿ ಹಾಕಬೇಕು ಎಂದು ಅಮೆರಿಕದ ಪ್ರಭುತ್ವ ಶಾಸನ ತರಲು ತಯಾರಿ ನಡೆಸುತ್ತದೆ. ಅದರ ಅಂಗವಾಗಿ ಸಾರ್ವಜನಿಕ ಚರ್ಚೆಯೊಂದನ್ನು ಏರ್ಪಡಿಸುತ್ತದೆ. ಭಾರತದಲ್ಲೂ ಇತ್ತೀಚೆಗೆ ಬಂದ ವಾದದಂತೆ– ‘ಹಾಗಿದ್ದರೆ ವಿಮಾನಗಳು, ಟ್ರೈನುಗಳು, ಸಕ್ಕರೆ, ಎಲ್ಲದರ ಮೇಲೂ ಅಪಾಯ ಸೂಚಕ ಚಿಹ್ನೆ ಹಾಕಿ. ಯಾಕೆಂದರೆ ಒಂದು ವರ್ಷದಲ್ಲಿ ಸಿಗರೇಟು ಸೇದಿ ಸಾಯುವವರಿಗಿಂತ ಹೆಚ್ಚು ಜನ ವಿಮಾನ ಅಪಘಾತದಲ್ಲಿ ಸಾಯುತ್ತಾರೆ’ ಎಂದು ಸಿನಿಮಾದಲ್ಲಿ ನಿಕ್ ತನ್ನ ವಾದ ಮಂಡಿಸುತ್ತಾನೆ!

ಯಾವ ವಿಷಯವನ್ನು ತರ್ಕದಿಂದ ತೀರ್ಮಾನಿಸಬಹುದು? ಯಾವುದಕ್ಕೆ ತರ್ಕವು ಅವಶ್ಯಕ? ಯಾವ ವಿಚಾರಕ್ಕೆ ತರ್ಕವು ಅರ್ಥಹೀನ ಎನ್ನುವುದರ ಬಗ್ಗೆಯೇ ನಮಗೆ ಎಚ್ಚರವಿಲ್ಲ. ಅದನ್ನೂ ನಿಕ್ ಲೇವಡಿ ಮಾಡುತ್ತಾನೆ. ‘ಅಮೆರಿಕವು ಯಾಕೆ ಪ್ರಪಂಚದ ಅತ್ಯುತ್ತಮ ರಾಷ್ಟ್ರವಾಗಿದೆ?’ ಎಂದು ಆತನ ಮಗ ಶಾಲೆಯ ಪ್ರಬಂಧದ ವಿಷಯದ ಕುರಿತು ಕೇಳಿದಾಗ, ‘ಒಂದು ವೇಳೆ ಅಮೆರಿಕವು ಪ್ರಪಂಚದ ಅತ್ಯುತ್ತಮ ರಾಷ್ಟ್ರ ಎನ್ನುವುದು ನಿಜವೇ ಆಗಿದ್ದರೂ, ಅದನ್ನು ಸಾಬೀತುಪಡಿಸಲು ಯಾರಿಂದಲೂ ಸಾಧ್ಯವಿಲ್ಲ. ಹಾಗಾಗಿ ನೀನು ಏನು ಹೇಳಿಯೂ ಅದನ್ನು ಸಾಬೀತು ಪಡಿಸಬಹುದು. ಸರಿಯಾಗಿ ತರ್ಕಿಸಿದರೆ ನಿನ್ನ ಮಾತು ಯಾವತ್ತೂ ತಪ್ಪಾಗುವುದಿಲ್ಲ’ ಎಂದು ನಿಕ್ ತನ್ನ ಮಗನಿಗೆ ಪ್ರಬಂಧ ಬರೆಯಲು ಸಹಾಯ ಮಾಡುತ್ತಾನೆ.

‘ಯಾವಾಗಾಲೂ ನೀನೇ ಸರಿಯಾಗಿರಲು ಹೇಗೆ ಸಾಧ್ಯ? ನೀನೂ ತಪ್ಪಬಹುದಲ್ಲ?’ ಅಂತ ಕೇಳಿದರೆ, ‘Thats the beauty of an argument. When your job is to be right, you are never wrong!’ ಎಂದು ನಿಕ್ ತನ್ನ ಮಗನಿಗೆ ತರ್ಕದ ಸೋಜಿಗ ಸೋಪಾನಗಳನ್ನೆಲ್ಲ ತಿಳಿಸಿಕೊಡುತ್ತಾನೆ. ‘ಅದು ಹೇಗೆ ಸಾಧ್ಯ? ನನ್ನ ನಂಬಿಕೆಯನ್ನು ನೀನು ಕೇವಲ ತರ್ಕದ ಮೂಲಕ ಹೇಗೆ ಬದಲಾಯಿಸಲು ಸಾಧ್ಯ?’ ಎಂದು ಮಗ ಮತ್ತೆ ಅನುಮಾನಿಸಿದಾಗ, ನಿಕ್ ಅದಕ್ಕೊಂದು ಉದಾಹರಣೆ ಕೊಡುತ್ತಾನೆ. ‘ನಿನಗೆ ವೆನಿಲಾ ಐಸ್ ಕ್ರೀಮ್ ಎಂದರೆ ಇಷ್ಟ; ನನಗೆ ಚಾಕೊಲೇಟ್ ಐಸ್ ಕ್ರೀಮ್ ಇಷ್ಟ. ಈಗ ತರ್ಕಿಸುವುದಕ್ಕೆ ಏನೂ ಇಲ್ಲ ಅಂತಲ್ಲವೆ ನೀನು ಹೇಳುವುದು? ಸರಿ, ನಿನಗೆ ವೆನಿಲಾ ಯಾಕಿಷ್ಟ ಹೇಳು?’ ಅಂತ ಕೇಳುತ್ತಾನೆ. ‘ಯಾಕೆಂದರೆ ವೆನಿಲಾ ಈಸ್ ದಿ ಬೆಸ್ಟ್. ಅದಕ್ಕಿಂತ ಮಿಗಿಲಾದದ್ದು ಬೇರೆ ಯಾವುದೂ ಇಲ್ಲ’ ಅನ್ನುತ್ತಾನೆ ಮಗ.

‘ಹೌದಾ? ನನಗೆ ವೆನಿಲಾಕ್ಕಿಂತಲೂ ಮಿಗಿಲಾದದ್ದು ಬೇಕು. ಅದಕ್ಕೆಂದೇ ನಾನು ಚಾಕೊಲೇಟ್ ತಿನ್ನುತ್ತೇನೆ. ಅಷ್ಟೇ ಏಕೆ, ಚಾಕೊಲೇಟಿಗಿಂತಲೂ ಮಿಗಿಲಾದದ್ದು ಇದ್ದರೆ ನನಗೆ ಅದೂ ಬೇಕು. ನನ್ನ ಮನಸ್ಸು ಮತ್ತು ಬುದ್ಧಿ ಒಳ್ಳೆಯದಕ್ಕೆ ಉತ್ತಮವಾದುದಕ್ಕೆ ಯಾವಾಗಲೂ ತೆರೆದಿದೆ. ಇದು ಆಯ್ಕೆಯ ಸ್ವಾತಂತ್ರ್ಯದ ಪ್ರಶ್ನೆ. ನೀನೂ ಒಮ್ಮೆ ಚಾಕೊಲೇಟ್ ತಿಂದು ನೋಡು’ ಎನ್ನುತ್ತಾನೆ. ಮಗನಿಗೆ ಗೊಂದಲವಾಗುತ್ತೆ. ‘ಅದು ಸರಿ, ನೀನು ಹೇಳಿದ್ದೇ ಸರಿ ಅಂತ ನೀನೆಲ್ಲಿ ಸಾಬೀತು ಮಾಡಿದೆ’ ಅಂತ ಕೇಳುತ್ತಾನೆ. ‘ನಿನ್ನ ಮಾತು ತಪ್ಪು ಅಂತಾಯಿತಲ್ಲ. ನಿನ್ನದು ತಪ್ಪು ಅಂತಾದರೆ ನನ್ನದು ಸರಿ’ ಎಂದು ನಿಕ್ ಐಸ್ ಕ್ರೀಮ್ ನೆಕ್ಕುತ್ತಾನೆ.

‘ಇಲ್ಲ, ನನಗಿನ್ನೂ ಮನದಟ್ಟಾಗಿಲ್ಲ’ ಎಂದಾಗ, ‘ನಿನ್ನ ಮನವೊಲಿಸುವುದು ನನ್ನ ಉದ್ದೇಶವಲ್ಲ. ನಾನು ನಿನ್ನ ಹಿಂದೆ ಬಿದ್ದಿಲ್ಲ. ಅಗೋ ಅಲ್ಲಿ ಕೂತಿದ್ದಾರಲ್ಲ- ನಾನು ಅವರ ಹಿಂದೆ ಬಿದ್ದಿದ್ದೇನೆ. ಅವರಿಗೆ ಏನನ್ನು ರವಾನಿಸಬೇಕೋ ಅದನ್ನು ರವಾನಿಸಿಯಾಗಿದೆ’ ಎಂದು ಸುತ್ತ ನೆರೆದ ಜನರನ್ನು ತೋರಿಸುತ್ತಾನೆ. ಸಂಗತಿಗಳನ್ನು ಹರಡುವುದಷ್ಟೇ ನನ್ನ ಕೆಲಸ. ನನ್ನ ನಂಬಿಕೆಯನ್ನು ಮತ್ತೊಬ್ಬರ ಮೇಲೆ ಹೇರುವ ಕೆಲಸವನ್ನು ನಾನು ಮಾಡುವುದಿಲ್ಲ. ಅವರವರ ನಂಬಿಕೆಗೆ ತಕ್ಕಂತೆ ಅವರವರೇ ಆಯ್ಕೆ ಮಾಡಿಕೊಳ್ಳುತ್ತಾರೆ. ನಿರ್ಧಾರಗಳನ್ನು ಅವರವರೇ ತೆಗೆದುಕೊಳ್ಳುತ್ತಾರೆ ಎನ್ನುತ್ತಾನೆ.

ಇದು ವಿತಂಡವಾದದ ಮತ್ತೊಂದು ರೂಪ. ಇಂಥ ಮಾತುಗಳನ್ನು ನಾವೂ ದಿನನಿತ್ಯ ಆಡುತ್ತಿರುತ್ತೇವೆ. ಹಿಂದೊಮ್ಮೆ ತಂಪು ಪಾನೀಯಗಳಲ್ಲಿರುವ ಹಾನಿಕಾರಕ ಅಂಶಗಳ ಬಗ್ಗೆ ದೊಡ್ಡ ಸುದ್ದಿಯಾದಾಗ ನನ್ನ ಸ್ನೇಹಿತನೊಬ್ಬ ಅದೇ ಪಾನೀಯ ಕುಡಿಯುತ್ತಿದ್ದ. ಕೇಳಿದರೆ, ‘ನಾವು ಕುಡಿಯುವ ನೀರು ಶುದ್ಧವಾಗಿದೆಯೇನು? ಎಲ್ಲವೂ ಕಲುಷಿತವೇ’ ಎಂದು ವಿಚಿತ್ರವಾದ ವಾದದ ಆಸರೆ ಪಡೆದಿದ್ದ.

ತರ್ಕದಿಂದ ಸಾಧಿಸಲಾಗದ ಲೌಕಿಕದ್ದೇ ಸಾವಿರಾರು ಸಂಗತಿಗಳಿವೆ. ಅಂಥ ಸಂಗತಿಯನ್ನು ಸಮರ್ಥಿಸಿಕೊಳ್ಳುವುದಕ್ಕೆ ತರ್ಕವನ್ನು ಹೇಗೆ ಬೇಕಾದರೂ ಬಳಸಿಕೊಳ್ಳಬಹುದು. ಇಂಥ ಜಾಣ ಮಾರ್ಗದ ಲಾಭ ಪಡೆವ ಜನರು ಸಾರ್ವಜನಿಕ ಚರ್ಚೆಯ ದೊಂಬರಾಟ ನಡೆಸಿ ಅದರಿಂದ ತಮಗೆ ಬೇಕಾದ ಅಭಿಪ್ರಾಯಗಳೇ ಜನರ ಮನಸ್ಸಿನಲ್ಲಿ ಮೂಡುವಂತೆ ತರ್ಕವನ್ನು ಹರಡುತ್ತಾರೆ. ಒಂದು ವಿಷಯದ ಕುರಿತು ಸಾವಿರಾರು ವಿಚಾರಗಳನ್ನು ಹೊರಬಂದರೂ ಕೊನೆಗೂ ಜನರು ಅವರವರ ನಂಬಿಕೆಗೆ ಪೂರಕವಾಗುವಂಥ ಮಾತುಗಳನ್ನೇ ಆಯ್ದುಕೊಂಡು ತಮ್ಮ ನಿಲುವುಗಳಿಗೇ ಜೋತುಬಿದ್ದಿರುತ್ತಾರೆ. ವಿತಂಡವಾದವು ವಿಜೃಂಭಿಸುತ್ತದೆ. ಮಾತಿನಲ್ಲಿ ಗೆಲ್ಲುವುದು ಸುಲಭವಾಗುತ್ತದೆ. ‘If you attain success in the war, it will not prove that you were in the right. It will only prove that your power of destruction was greater’– ಗಾಂಧೀಜಿ ಹಿಟ್ಲರನಿಗೆ ಬರೆದ ಪತ್ರದಲ್ಲಿನ ಈ ಸಾಲನ್ನು ಮಾತಿನ ಚರ್ಚೆಯ ಗೆಲುವಿಗೂ ಅನ್ವಯಿಸಬಹುದೇನೋ.

ತರ್ಕ (ಲಾಜಿಕ್), ಚರ್ಚೆ (ಆರ್ಗ್ಯುಮೆಂಟ್), ಸಂವಾದ (ಡಿಸ್‌ಕಶನ್)– ಈ ಮೂರಕ್ಕೂ ಸೂಕ್ಷ್ಮವಾದ ಅರ್ಥ ವ್ಯತ್ಯಾಸಗಳಿದ್ದರೂ, ಈ ಬರವಣಿಗೆಯಲ್ಲಿ ಅವೆಲ್ಲದರಲ್ಲಿಯೂ ಇರುವ ಮಾತುಕತೆಯ ಅಂಶವನ್ನು ಮುಖ್ಯವಾಗಿ ಪರಿಗಣಿಸಲಾಗಿದೆ. ಚರ್ಚೆಯ ಸುಸಂಬದ್ಧತೆಯಿಂದಲೇ ನಿರೂಪಿತವಾಗಿರುವ ‘ದಿ ಗ್ರೇಟ್ ಡಿಬೇಟರ್ಸ್’ ಎನ್ನುವ ಸಿನಿಮಾದಲ್ಲಿ ಬರುವ ಚರ್ಚೆಯನ್ನು ಆಸಕ್ತರು ಗಮನಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT