ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮ್ಯೂನಿಕ್ ಒಲಿಂಪಿಕ್ಸ್‌ ಸುಂದರ ನೆನಪುಗಳು...

Last Updated 30 ಜುಲೈ 2016, 19:30 IST
ಅಕ್ಷರ ಗಾತ್ರ

ಕ್ರಿಕೆಟ್‌ ಭಾರತದಲ್ಲಿ ಹೆಚ್ಚು ಜನಪ್ರಿಯ ಆಟವಾದರೂ, ಇಲ್ಲಿನ ಕ್ರೀಡಾಪ್ರೇಮಿಗಳ ಮನಸ್ಸಿಗೆ ಹೆಚ್ಚು ಆಪ್ತವಾದುದು ಹಾಕಿ. ಒಲಿಂಪಿಕ್ಸ್‌ ಕ್ರೀಡಾಕೂಟಗಳಲ್ಲಿ ಭಾರತ ಹಾಕಿಯಲ್ಲಿ ಹೆಕ್ಕಿದಷ್ಟು ಪದಕಗಳನ್ನು ಬೇರೆ ಯಾವ ಆಟದಲ್ಲೂ ಪಡೆದಿಲ್ಲ. 1972ರಲ್ಲಿ ಜರ್ಮನಿಯ ಮ್ಯೂನಿಕ್‌ನಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತದ ಹಾಕಿ ತಂಡವನ್ನು ಪ್ರತಿನಿಧಿಸಿದ ಆಟಗಾರರಲ್ಲಿ ಒಬ್ಬರಾದ ಕನ್ನಡದ ಎಂ.ಪಿ. ಗಣೇಶ್‌ ಅವರ ‘ಒಲಿಂಪಿಕ್ಸ್‌ ಸವಿನೆನಪು’ಗಳನ್ನು ‘ಮುಕ್ತಛಂದ’ ಪುರವಣಿಗಾಗಿ ಜಿ. ಶಿವಕುಮಾರ್  ನಿರೂಪಿಸಿದ್ದಾರೆ.

ಒಲಿಂಪಿಕ್ಸ್‌ನಲ್ಲಿ ಒಮ್ಮೆಯಾದರೂ ದೇಶವನ್ನು ಪ್ರತಿನಿಧಿಸಬೇಕೆಂಬ ಕನಸು ಪ್ರತಿಯೊಬ್ಬ ಕ್ರೀಡಾಪಟುವಿನಲ್ಲೂ ಇರುತ್ತದೆ. ಆ ಕನಸು ಕೈಗೂಡದೇ ಹೋದರೆ ತಮ್ಮ ಕ್ರೀಡಾಬದುಕು ಅಪೂರ್ಣ ಎಂಬ ಭಾವನೆ ಬಹುತೇಕ ಕ್ರೀಡಾಪಟುಗಳದ್ದಾಗಿರುತ್ತದೆ. ಈ ಭಾವನೆಗೆ ನಾನೂ ಹೊರತಲ್ಲ. ಎಲ್ಲರಂತೆ ಒಲಿಂಪಿಕ್ಸ್‌ನಲ್ಲಿ ಆಡುವ ಆಸೆ ಹೊತ್ತು ಕ್ರೀಡಾ ಬದುಕಿನ ಪಯಣ ಆರಂಭಿಸಿದವನು. ಆದರೆ, 26ರ ಹರೆಯದಲ್ಲೇ ಬದುಕಿನ ಬಹುದೊಡ್ಡ ಕನಸು ನನಸಾಗುತ್ತದೆ ಎಂದು ಭಾವಿಸಿಯೇ ಇರಲಿಲ್ಲ.

1972ರ ‘ಮ್ಯೂನಿಕ್‌ ಒಲಿಂಪಿಕ್ಸ್‌’ನಲ್ಲಿ ಭಾಗವಹಿಸಿದ್ದ ರಾಷ್ಟ್ರೀಯ ತಂಡದಲ್ಲಿ ನಾನೂ ಇದ್ದೆ. ಚೊಚ್ಚಲ ಬಾರಿ ಪ್ರತಿಷ್ಠಿತ ಕೂಟದಲ್ಲಿ ಆಡಿದ ಆ ಮಧುರ ಕ್ಷಣಗಳು ಈಗಲೂ ನನ್ನ ನೆನಪಿನ ಪುಟಗಳಲ್ಲಿ ಹಚ್ಚಹಸಿರಾಗಿವೆ.

ಹಾಕಿ ಕ್ರೀಡೆ ಭಾರತೀಯರ ಜೀವಾಳ. ವಿಶ್ವಕ್ಕೆ ಈ ಆಟದ ಪಾಠ ಹೇಳಿಕೊಟ್ಟವರು ನಾವು. 1924ರಲ್ಲಿ ಪ್ಯಾರಿಸ್‌ನಲ್ಲಿ ನಡೆದಿದ್ದ ಒಲಿಂಪಿಕ್ಸ್‌ನಿಂದ ಆರಂಭವಾದ ನಮ್ಮ ಚಿನ್ನದ ಪಯಣ 1956ರ ಮೆಲ್ಬರ್ನ್‌ ಕೂಟದವರೆಗೂ ಮುಂದುವರಿದೇ ಇತ್ತು. ಆ ಮಟ್ಟಿಗೆ ಹಾಕಿಯಲ್ಲಿ ನಮ್ಮ ತಂಡ ಪ್ರಾಬಲ್ಯ ಮೆರೆದಿತ್ತು.

ನಾನು ಆಡಲು ಶುರುಮಾಡಿದ ಕಾಲಘಟ್ಟದಲ್ಲಿ ರಾಷ್ಟ್ರೀಯ ತಂಡದಲ್ಲಿ ಸ್ಥಾನ ಸಿಗುವುದು ಅಷ್ಟು ಸುಲಭವಾಗಿರಲಿಲ್ಲ. ಆಗ ಗೋಲ್‌ ಕೀಪರ್‌, ಫಾರ್ವರ್ಡ್‌, ಡಿಫೆಂಡರ್‌ – ಹೀಗೆ ಒಂದು ವಿಭಾಗದ ಒಂದು ಸ್ಥಾನಕ್ಕಾಗಿ ಐದು ಇಲ್ಲವೇ ಆರು ಆಟಗಾರರ ನಡುವೆ ಪೈಪೋಟಿ ಇರುತ್ತಿತ್ತು. ವಿವಿಧ ಟೂರ್ನಿಗಳಲ್ಲಿ ಆಡುವ ಅವಕಾಶ ಸಿಕ್ಕಾಗ, ಜೋಗಿಂದರ್‌ ಸಿಂಗ್‌, ಬಲ್ಬೀರ್‌ ಸಿಂಗ್‌, ಜಗಜಿತ್‌ ಸಿಂಗ್‌ ಅವರಂತಹ ದಿಗ್ಗಜ ಆಟಗಾರರಿಗಿಂತಲೂ ಶ್ರೇಷ್ಠ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯಬೇಕಿತ್ತು.

ಮೊದಲ ಸಲ ನಾನು ಭಾರತ ತಂಡದ ಶಿಬಿರಕ್ಕೆ ಆಯ್ಕೆಯಾದಾಗ ನಮ್ಮನ್ನು ‘ಡಾರ್ಕ್‌ ಬ್ಲೂ’ ಮತ್ತು ‘ಲೈಟ್‌ ಬ್ಲೂ’ ಎಂದು ಎರಡು ತಂಡಗಳನ್ನಾಗಿ ವಿಂಗಡಿಸಿ, ನಮ್ಮಲ್ಲೇ ಹಲವು ಪಂದ್ಯಗಳನ್ನು ಆಡಿಸಲಾಯಿತು. ಆ ಶಿಬಿರದಲ್ಲಿ ಕೊಡಗಿನ ಆರು ಮಂದಿ ಆಟಗಾರರು ಸ್ಥಾನ ಗಳಿಸಿದ್ದೆವು. ಅವರಲ್ಲಿ ನಾನು ಒಬ್ಬನಾಗಿದ್ದೆ. ನಮ್ಮೊಳಗಿನ ಪ್ರತಿಭೆ ಗೊತ್ತಾಗಲು ಆ ಶಿಬಿರ ವೇದಿಕೆಯಾಗಿತ್ತು.

ಅಲ್ಲಿ ನಾನು ಉತ್ತಮ ಸಾಮರ್ಥ್ಯ ತೋರಿ, 1971ರಲ್ಲಿ ಬಾರ್ಸಿಲೋನದಲ್ಲಿ ನಿಗದಿಯಾಗಿದ್ದ ವಿಶ್ವಕಪ್‌ಗೆ ಆಯ್ಕೆಯಾದೆ. ಆ ಕೂಟದಲ್ಲಿ ನಾವು ಕಂಚು ಗೆದ್ದೆವು. ಆ ಬಳಿಕ 1972ರ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ 36 ಮಂದಿಯ ಸಂಭಾವ್ಯ ತಂಡವನ್ನು ಆಯ್ಕೆ ಮಾಡಲಾಯಿತು. ನಾನು ಮತ್ತು ಬಿ.ಪಿ. ಗೋವಿಂದ ಅವರು ಆ ತಂಡದಲ್ಲಿದ್ದ ಕನ್ನಡಿಗರಾಗಿದ್ದೆವು.

ಒಲಿಂಪಿಕ್ಸ್‌ಗೂ ಮುನ್ನ ಪೂರ್ವಭಾವಿ ಸಿದ್ಧತೆ ಕೈಗೊಳ್ಳಲು ನಮಗಾಗಿ ಲಖನೌದಲ್ಲಿ ತರಬೇತಿ ಶಿಬಿರ ಆಯೋಜಿಸಲಾಗಿತ್ತು. ಆ ಶಿಬಿರ ಎರಡೂವರೆ ತಿಂಗಳು ನಡೆದಿತ್ತು. ಕೋಚ್‌ ಕೆ.ಡಿ. ಸಿಂಗ್‌ ಬಾಬು ಅವರು ಅಗತ್ಯ ಮಾರ್ಗದರ್ಶನ ನೀಡಿ ನಮ್ಮಲ್ಲಿ ಹೊಸ ಹುರುಪು ತುಂಬಿದ್ದರು. ಆ ಶಿಬಿರದ ವೇಳೆ ನಡೆದ ಒಂದು ಘಟನೆ ನಮಗೆಲ್ಲಾ ದೊಡ್ಡ ಪಾಠ ಕಲಿಸಿತು. ತಂಡದ ಕೋಚ್‌ ಕೆ.ಡಿ. ಸಿಂಗ್‌ ಅವರ ತಾಯಿ ನಿಧನರಾಗಿದ್ದ ಸುದ್ದಿಯನ್ನು ಅವರ ಪರಿಚಿತರೊಬ್ಬರು ಬಂದು ತಿಳಿಸಿದ ಕೂಡಲೆ ನಾವೆಲ್ಲ ದಿಗ್ಭ್ರಾಂತರಾಗಿದ್ದೆವು.

ಸಿಂಗ್‌ ಅವರ ಜೊತೆಗೆ ನಾವೂ ಅವರ ತಾಯಿಯ ಪಾರ್ಥಿವ ಶರೀರದ ದರ್ಶನ ಪಡೆಯಲು ಹೋಗಿದ್ದೆವು. ಮಧ್ಯಾಹ್ನ ತಾಯಿಯ ಅಂತ್ಯಕ್ರಿಯೆ ಮುಗಿಸಿ ಸಂಜೆಯ ಹೊತ್ತಿಗೆ ನಾನು ಶಿಬಿರಕ್ಕೆ ಮರಳಲು ಸಜ್ಜಾಗಿದ್ದಾಗ ಸಿಂಗ್‌ ಅವರೂ ನಮ್ಮೊಂದಿಗೆ ಬಂದುಬಿಟ್ಟರು. ಕ್ರೀಡೆಯ ಬಗೆಗೆ ಅವರು ಹೊಂದಿದ್ದ ಬದ್ಧತೆ ಕಂಡು ನಾವೆಲ್ಲಾ ಅಚ್ಚರಿಗೊಂಡಿದ್ದೆವು.

ಆನಂತರ ಜಲಂಧರ್‌ನಲ್ಲಿ ಮತ್ತೊಂದು ಶಿಬಿರ ನಡೆದಿತ್ತು. ಎರಡು ತಿಂಗಳು ನಡೆದ ಶಿಬಿರದ ವೇಳೆ ನಿತ್ಯ ಒಬ್ಬೊಬ್ಬರು ಪರಿಣತ ಹಾಗೂ ಅನುಭವಿ ಆಟಗಾರರು ಬಂದು  ಮಾರ್ಗದರ್ಶನ ನೀಡುತ್ತಿದ್ದರು. ಅವೆಲ್ಲಾ ನಮ್ಮ ಆಟದ ಗುಣಮಟ್ಟವನ್ನು ಸುಧಾರಿಸಿಕೊಳ್ಳಲು ತುಂಬಾ ನೆರವಾಗಿದ್ದವು.

ಶಿಬಿರದಲ್ಲಿ ನಮ್ಮಿಂದ ಮೂಡಿಬಂದ ಪ್ರದರ್ಶನದ ಆಧಾರದಲ್ಲಿ 18 ಮಂದಿಯ ತಂಡವನ್ನು ಅಂತಿಮಗೊಳಿಸಲಾಯಿತು.  ಆ ತಂಡದಲ್ಲಿ ನಾನು ಮತ್ತು ಗೋವಿಂದ ಸ್ಥಾನ ಗಳಿಸಿದ್ದೆವು. ಆ ನಂತರ ನಾವು ಮ್ಯೂನಿಕ್‌ಗೆ ಪ್ರಯಾಣ ಬೆಳೆಸಿದೆವು. ಮ್ಯೂನಿಕ್‌ನಲ್ಲಿ ಆಡಿದ್ದು ವಿಶಿಷ್ಟ ಅನುಭವ ತಂದುಕೊಟ್ಟಿತು. ಆ ಅನುಭವ ಪದಗಳಿಗೆ ನಿಲುಕದ್ದು. ಅದನ್ನು ನಾನು ಎಂದಿಗೂ ಮರೆಯಲು ಆಗುವುದಿಲ್ಲ. ಅಲ್ಲಿ ವಿಶ್ವದ ಕ್ರೀಡಾ ದಿಗ್ಗಜರ ಸಮಾಗಮವಾಗಿತ್ತು.

ಕೂಟಕ್ಕೆ 15 ದಿನ ಮುಂಚಿತವಾಗಿಯೇ ನಾವು ಹೋಗಿದ್ದೆವು. ನಮಗೆಲ್ಲಾ ‘ಕ್ರೀಡಾ ಗ್ರಾಮ’ದಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಮಾಡಲಾಗಿತ್ತು. ನಮ್ಮ ತಂಡದ ಸಾಮರ್ಥ್ಯದ ಬಗ್ಗೆ ಅಲ್ಲಿದ್ದವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು. ಆದರೆ ಒಂದಿಬ್ಬರು ಅನುಭವಿ ಆಟಗಾರರನ್ನು ಹೊರತುಪಡಿಸಿದಂತೆ ವೈಯಕ್ತಿಕವಾಗಿ ನಮ್ಮ ಪರಿಚಯ ಯಾರಿಗೂ ಇರಲಿಲ್ಲ.

ಕೂಟದಲ್ಲಿ ಭಾಗವಹಿಸಲು ಬಂದಿದ್ದ ವಿಶ್ವದ ವಿವಿಧ ರಾಷ್ಟ್ರಗಳ ಘಟಾನುಘಟಿ ಆಟಗಾರರು ಕ್ರೀಡಾಗ್ರಾಮದಲ್ಲೇ ವಾಸ್ತವ್ಯ ಹೂಡಿದ್ದರು. ಅವರನ್ನು ತುಂಬಾ ಹತ್ತಿರದಿಂದ ಕಂಡು ನನ್ನಲ್ಲಿ ಏನೋ ಒಂದು ಬಗೆಯ ಪುಳಕ ಉಂಟಾಯಿತು. ಅವರ ಹತ್ತಿರ ಹೋಗಿ ಕೈ ಕುಲುಕಿ ಮಾತಿಗೆಳೆಯುತ್ತಿದ್ದೆ. ಅವರೊಂದಿಗೆ ಫೋಟೊ ತೆಗೆಸಿಕೊಂಡ ಆ ಕ್ಷಣಗಳು ಇಂದಿಗೂ ನನ್ನ ನೆನಪಿನ ಪುಟದಲ್ಲಿ ಅಚ್ಚಳಿಯದೆ ಉಳಿದಿವೆ. ‘ಕ್ರೀಡಾಗ್ರಾಮ’ ಎಂದರೆ ಏನು ಅದು ಹೇಗಿರುತ್ತದೆ ಎಂಬುದರ ಸ್ಪಷ್ಟ ಕಲ್ಪನೆ ನನಗೆ ಸಿಕ್ಕಿದ್ದು ಆಗಲೇ.

ಮ್ಯೂನಿಕ್‌ ನಗರದಿಂದ 30 ಕಿ.ಮೀ. ದೂರದಲ್ಲಿ ಕ್ರೀಡಾಗ್ರಾಮವನ್ನು ನಿರ್ಮಿಸಲಾಗಿತ್ತು. ಅಲ್ಲಿ ಎಲ್ಲಾ ಬಗೆಯ ಸೌಕರ್ಯಗಳೂ ಇದ್ದವು. ಕ್ರೀಡಾಪಟುಗಳ ಅಭ್ಯಾಸಕ್ಕೆಂದೇ ಸುಸಜ್ಜಿತ ಮೈದಾನಗಳು, ಟ್ರ್ಯಾಕ್‌ಗಳು ತಯಾರಾಗಿದ್ದವು. ವಿಶಾಲವಾದ ಕೊಠಡಿಗಳಲ್ಲಿ ಎಲ್ಲಾ ಕ್ರೀಡಾಪಟುಗಳು ಒಟ್ಟಿಗೆ ಕುಳಿತು ಊಟ ಮಾಡುತ್ತಿದ್ದೆವು. ವರ್ಣ, ಜನಾಂಗ – ಯಾವ ತಾರತಮ್ಯವೂ ಅಲ್ಲಿರಲಿಲ್ಲ. ಒಲಿಂಪಿಕ್ಸ್‌ ಚಾಂಪಿಯನ್‌ನಿಂದ ಹಿಡಿದು ಹೊಸಬನವರೆಗೆ ಎಲ್ಲರೂ ಸಮಾನರು ಎಂಬ ಸಂದೇಶ ಅಲ್ಲಿ ಸ್ಪಷ್ಟವಾಗಿತ್ತು. ಒಟ್ಟಾರೆ ಅದು ಸರ್ವ ಜನಾಂಗಗಳ ಶಾಂತಿಯ ತೋಟವಾಗಿತ್ತು. 

ದಿನದ ಅಭ್ಯಾಸ ಮುಗಿದ ಮೇಲೆ ನಾವೆಲ್ಲಾ ಸಂಜೆಯಲ್ಲಿ ಕ್ರೀಡಾಗ್ರಾಮವನ್ನು ಸುತ್ತುಹಾಕಲು ಹೋಗುತ್ತಿದ್ದೆವು. ಅಲ್ಲಿ ನಾವು ಏನು ತಿಂದರೂ ಕುಡಿದರೂ ಅದಕ್ಕೆ ಹಣ ಪಾವತಿ ಮಾಡುವ ಅಗತ್ಯವಿರಲಿಲ್ಲ. ನಿತ್ಯವೂ ಹಾಡು–ಕುಣಿತ ಸೇರಿದಂತೆ ವಿವಿಧ ಬಗೆಯ ಮನರಂಜನಾ ಕಾರ್ಯಕ್ರಮಗಳು ಅಲ್ಲಿ ನಡೆಯುತ್ತಿದ್ದವು. ಕಲಾವಿದರು, ಗಾಯಕರು ಹಾಡುತ್ತಿದ್ದ ಹಾಡುಗಳನ್ನು ಆಲಿಸುತ್ತಲೇ ನಾನು ಮತ್ತು ಗೋವಿಂದ ಕುಣಿಯಲು ಶುರುಮಾಡಿಬಿಡುತ್ತಿದ್ದೆವು. ತಂಡದ ಇತರೆ ಆಟಗಾರರೂ ನಮ್ಮನ್ನು ಸೇರಿಕೊಳ್ಳುತ್ತಿದ್ದರು.

ಕೋಚ್‌ಗಳು ಮತ್ತು ತಂಡದ ಸಿಬ್ಬಂದಿ ಕೂಡ ನಮ್ಮ ಸಂಭ್ರಮದಲ್ಲಿ ಸೇರಿಕೊಳ್ಳುತ್ತಿದ್ದರು. ಹೀಗೆ ಎಲ್ಲರೂ ಒಟ್ಟಾಗಿ ನರ್ತಿಸುತ್ತಿದ್ದುದರಿಂದ ಒತ್ತಡ ಕಡಿಮೆಯಾಗಿ ಮನಸ್ಸು ಹಗುರವಾಗುತ್ತಿತ್ತು. ನಮ್ಮ ಪಂದ್ಯಗಳು ಇಲ್ಲದಿದ್ದಾಗ ಟೆನಿಸ್‌, ಅಥ್ಲೆಟಿಕ್ಸ್‌ ಸೇರಿದಂತೆ ಇತರೆ ಕ್ರೀಡೆಗಳನ್ನು ವೀಕ್ಷಿಸಲು ಹೊರಟುಬಿಡುತ್ತಿದ್ದೆವು. ಹೀಗೆ ಹದಿನೈದು ದಿನ ಉರುಳಿದ್ದೇ ತಿಳಿಯಲಿಲ್ಲ.

ಮುಖ್ಯ ಸ್ಪರ್ಧೆಯ ದಿನ ಬಂದೇ ಬಿಟ್ಟಿತ್ತು. ಗುಂಪು ಹಂತದಲ್ಲಿ ನಾವು ಬ್ರಿಟನ್‌, ಪೋಲೆಂಡ್‌, ಕೆನ್ಯಾ, ಮೆಕ್ಸಿಕೊ, ನ್ಯೂಜಿಲೆಂಡ್‌ ತಂಡಗಳನ್ನು ಮಣಿಸಿದೆವು. ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ ಪ್ರವೇಶಿಸಿದೆವು. ಸೆಮಿಫೈನಲ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡದ ವಿರುದ್ಧ ಆಡಬೇಕಿತ್ತು. ಪಂದ್ಯದ ಹಿಂದಿನ ದಿನ ರಾತ್ರಿ ಒಂದು ಭೀಕರ ಘಟನೆ ನಡೆದೇ ಬಿಟ್ಟಿತು.

ನಾವು ತಂಗಿದ್ದ ಕಟ್ಟದದ ಸಮೀಪದಲ್ಲೇ ಇದ್ದ ಎರಡು ಕಟ್ಟಡಗಳ ಮೇಲೆ ಗುಂಡಿನ ದಾಳಿ ನಡೆದಿತ್ತು. ಆ ಘಟನೆ ನಮ್ಮನ್ನು ಬೆಚ್ಚಿ ಬೀಳಿಸಿತ್ತು. ಘಟನೆಯ ನಂತರದ ಎರಡು ದಿನ ಯಾವುದೇ ಸ್ಪರ್ಧೆಗಳು ನಡೆಯಲಿಲ್ಲ. ಆ ಬಳಿಕ ನಡೆದ ಸೆಮಿಫೈನಲ್‌ನಲ್ಲಿ ನಾವು 0–2 ಗೋಲುಗಳಿಂದ ಪಾಕಿಸ್ತಾನ ತಂಡಕ್ಕೆ ಸೋತೆವು. ಆ ಪಂದ್ಯದಲ್ಲಿ ನಮ್ಮಿಂದ ಒಂದೂ ಗೋಲು ಗಳಿಸಲು ಆಗಿರಲಿಲ್ಲ. ಆ ನೋವು ಇಂದಿಗೂ ಕಾಡುತ್ತಲೇ ಇದೆ.

ಮೂರನೇ ಸ್ಥಾನ ನಿರ್ಧರಿಸಲು ನಡೆದ ಪಂದ್ಯದಲ್ಲಿ 2–1 ಗೋಲುಗಳಿಂದ ನೆದರ್ಲೆಂಡ್ಸ್‌ ತಂಡವನ್ನು ಮಣಿಸಿ ಕಂಚು ಗೆದ್ದ ಕ್ಷಣವನ್ನು ಎಂದಿಗೂ ಮರೆಯಲಾಗದು. ಆ ಪಂದ್ಯದಲ್ಲಿ ಕನ್ನಡಿಗ ಗೋವಿಂದ ಅವರು ಒಂದು ಗೋಲು ದಾಖಲಿಸಿ, ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಒಲಿಂಪಿಕ್ಸ್‌ ಕೂಟವಾಗಿದ್ದರಿಂದ ಒಂದೇ ದಿನ  ಹಲವು ಕ್ರೀಡಾಕೂಟಗಳು ನಡೆಯುತ್ತಿದ್ದವು. ಪ್ರೇಕ್ಷಕರು ತಮಗೆ ಆಸಕ್ತಿ ಇದ್ದ ಕ್ರೀಡೆ ನಡೆಯುವ ಕ್ರೀಡಾಂಗಣದಲ್ಲಿ ಜಮಾಯಿಸುತ್ತಿದ್ದರು. ಆದರೆ ಹಾಕಿ ಪಂದ್ಯಗಳನ್ನು  ನೋಡಲು ಬರುತ್ತಿದ್ದವರ ಸಂಖ್ಯೆ ಮಾತ್ರ ಬೆರಳೆಣಿಕೆಯಷ್ಟಿರುತ್ತಿತ್ತು.

ಉದ್ಘಾಟನೆ ಮತ್ತು ಸಮಾರೋಪ ಸಮಾರಂಭದ ದಿನ ಕ್ರೀಡಾಂಗಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕ್ರೀಡಾಸಕ್ತರು ಭಾಗವಹಿಸುತ್ತಿದ್ದರು. ಅವರ ಎದುರು ಪಥಸಂಚಲನ ನಡೆಸುವಾಗ ಮೈನವಿರೇಳುವ ಅನುಭವವಾಗುತ್ತಿತ್ತು.

ಉದ್ಘಾಟನಾ ಸಮಾರಂಭದ ವೇಳೆ ಎಲ್ಲರೂ ಒಟ್ಟಿಗೆ ಕುಳಿತು ಮನರಂಜನಾ ಕಾರ್ಯಕ್ರಮಗಳನ್ನು ಕಣ್ತುಂಬಿಕೊಂಡಿದ್ದ ಆ ಗಳಿಗೆ ಈಗಲೂ ಮತ್ತೆ ಮತ್ತೆ ಕಣ್ಣ ಮುಂದೆ ಹಾದುಹೋಗುತ್ತಿರುತ್ತವೆ.

ಭಾರತದಲ್ಲಿ ಕ್ರೀಡಾಸಕ್ತರು ಹಾಕಿಯನ್ನು ಹೆಚ್ಚು ಪ್ರೀತಿಸುತ್ತಾರೆ. ಇತರೆ ಯಾವುದೇ ಕ್ರೀಡೆಯಲ್ಲಿ ಪದಕ ಗೆಲ್ಲದೆ ತವರಿಗೆ ವಾಪಸಾದರೂ ನಮ್ಮವರು ಸಹಿಸಿಕೊಳ್ಳುತ್ತಿದ್ದರೇನೊ, ಹಾಕಿ ವಿಷಯದಲ್ಲಿ ಮಾತ್ರ ಯಾರೂ ರಾಜಿಯಾಗುತ್ತಿರಲಿಲ್ಲ. ಈ ಕ್ರೀಡೆಯಲ್ಲಿ ಚಿನ್ನ ಗೆದ್ದೇ ಬರಬೇಕು ಎಂಬ ಬಹುದೊಡ್ಡ ನಿರೀಕ್ಷೆ ಅವರದ್ದಾಗಿರುತ್ತಿತ್ತು. ಇದು ನಮಗೆಲ್ಲಾ ಚೆನ್ನಾಗಿ ಗೊತ್ತಿತ್ತು. ಹೀಗಾಗಿಯೇ ಕಂಚು ಗೆದ್ದು  ತವರಿಗೆ ಹಿಂದಿರುಗುವ ವೇಳೆ ನಾವ್ಯಾರೂ ಒಟ್ಟಾಗಿ ಬರುವ ಧೈರ್ಯ ಮಾಡಲೇ ಇಲ್ಲ.

ನಮ್ಮಲ್ಲಿ ಒಂದು ರೀತಿಯ ಅಳುಕಿತ್ತು. ಹೀಗಾಗಿ ಪ್ರತ್ಯೇಕ ವಿಮಾನಗಳಲ್ಲಿ ಬಂದು ತವರು ಸೇರಿಕೊಂಡೆವು. 1988ರ ‘ಸೋಲ್ ಒಲಿಂಪಿಕ್ಸ್‌’ನಲ್ಲಿ ನಾನು ತಂಡದ ಕೋಚ್‌ ಆಗಿ ಪಾಲ್ಗೊಂಡಿದ್ದೆ. ಅದಾಗಲೇ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದ ನನಗೆ ಆಗ ಅಂತಹ ವಿಶೇಷ ಅನುಭವವೇನೂ ಆಗಲಿಲ್ಲ.      
  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT