ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೃಕ್ಷಪ್ರೇಮಿ ವರುಣ್

Last Updated 28 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಪರೀಕ್ಷೆಗಳು ಮುಗಿದು ಬೇಸಿಗೆ ರಜೆ ಆರಂಭಗೊಂಡಾಗ ವರುಣ್‌ಗೆ ಖುಷಿಯೋ ಖುಷಿ. ಅಜ್ಜಿ ಮನೆಗೆ ಹೋಗುವ ಅವನ ಕನಸು ಅಂದು ನನಸಾಗಿತ್ತು. ಸೋದರಮಾವ ನಂಜುಂಡನೊಂದಿಗೆ ಹಸಿರುಹಳ್ಳಿಯಲ್ಲಿದ್ದ ಅಜ್ಜಿ ಮನೆಗೆ ಬಂದ ವರುಣ್, ಇಡೀ ದಿನ ಅಜ್ಜಿ-ತಾತನೊಡನೆ ಬಾಯಿತುಂಬಾ ಹರಟೆ ಹೊಡೆದ. ರಾತ್ರಿ ಅಜ್ಜಿ ಹೇಳುವ ಕಥೆ ಕೇಳುತ್ತಾ ನಿದ್ದೆಗೆ ಜಾರಿದ್ದ.

ದಿನಕರನ ಕಿರಣಗಳು ಕಿಟಕಿ ಮೂಲಕ ಒಳಚಾಚಿ ಮುಖಕ್ಕೆ ಹೊಡೆದಾಗ ಕಣ್ಣುಬಿಟ್ಟವನಿಗೆ ಅಜ್ಜಿ ಮಾಡುವ ಪ್ರಿಯವಾದ ನೀರುದೋಸೆ - ಕಾಯಿಚಟ್ನಿ ಕಾಯುತ್ತಿತ್ತು.
ಹೊಟ್ಟೆತುಂಬಾ ತಿಂಡಿ ತಿಂದು ತಾತನೊಂದಿಗೆ ತೋಟದ ಕಡೆ ಹೊರಟ. ಅಲ್ಲಿ ಮರದ ತುಂಬಾ ತೊನೆದಾಡುತ್ತಿದ್ದ ಹಲಸು, ಮಾವು, ಸೀಬೆ, ಸೀತಾಫಲ ಮುಂತಾದ  ಹಣ್ಣುಗಳು ಕಣ್ಣಿಗೆ ಹಬ್ಬವುಂಟು ಮಾಡುತ್ತಿದ್ದವು.

 
ಹಸಿರು ಪ್ರಕೃತಿ, ಪಕ್ಕದಲ್ಲಿ ಜುಳುಜುಳು ನಿನಾದ ಮಾಡುತ್ತಾ ಹರಿಯುತ್ತಿದ್ದ ನೀರು ಪ್ರಕೃತಿ ಪ್ರಿಯನಾದ ವರುಣ್‌ಗೆ ತಾನು ಸ್ವರ್ಗದಲ್ಲಿದ್ದೇನೆ ಎಂಬ ಭಾವನೆ ಮೂಡಿಸಿತ್ತು. `ಈ ಹಸಿರು ಸಿರಿಯಲೀ ಮನಸು ಕುಣಿಯಲಿ ನವಿಲೇ...~ ಎಂದು ಭಾವಪೂರ್ಣವಾಗಿ ಹಾಡಲಾರಂಭಿಸಿದ. `ಏನಪ್ಪಾ ವರುಣ್ ಕವಿಯಾಗಿಬಿಟ್ಯಾ?~ ಎಂದು ತಾತ ಪ್ರಶ್ನಿಸಿದರು.

`ನನಗಿವತ್ತು ತುಂಬಾ ಖುಷಿಯಾಗ್ತಿದೆ ತಾತ. ನಮ್ಮ ಪಟ್ಟಣದಲ್ಲಿ ಇಂತಹ ಹಸಿರು ಕಾಣಸಿಗುವುದೇ ಇಲ್ಲ. ಅಲ್ಲಿ ಏನಿದ್ದರೂ ಬರೀ ಕಾಂಕ್ರೀಟ್ ಕಾಡು. ಇಲ್ಲಿ ನೋಡು ಎಲ್ಲವೂ ಹಸಿರು, ಇದೇ ನನ್ನ ಉಸಿರು~ ಎಂದು ಕವಿಯಂತೆ ವರುಣ್ ಮಾತಾಡತೊಡಗಿದ.
 
`ಇಷ್ಟು ಚಿಕ್ಕ ವಯಸ್ಸಿಗೇ ಎಷ್ಟೊಂದು ತಿಳ್ಕೊಂಡಿದ್ದೀಯಲ್ಲೋ~ ಎಂದ ತಾತನಿಗೆ, `ಹೂಂ ತಾತಾ ನಾನು ರಜಾ ಮುಗಿದು ವಾಪಸ್ಸು ಪಟ್ಟಣಕ್ಕೆ ಹೋಗುವಾಗ ಇಲ್ಲಿಂದ ಗಿಡಗಳನ್ನು ಕೊಂಡೊಯ್ದು ಮನೆ ಮುಂದೆ ದೊಡ್ಡ ತೋಟ ಮಾಡುತ್ತೇನೆ~ ಎಂದ. `ಸರಿ ಹಾಗೇ ಮಾಡಪ್ಪ~ ಎಂದರು ತಾತ.

ಎರಡು ತಿಂಗಳು ಅಜ್ಜಿ ಮನೆಯಲ್ಲಿ ಹಾಯಾಗಿ ಕಾಲಕಳೆದು ಮತ್ತೆ ಪಟ್ಟಣಕ್ಕೆ ಹೆತ್ತವರೊಂದಿಗೆ ಹೊರಟಾಗ ವರುಣ್ ಸಪ್ಪೆಯಾಗಿದ್ದ. ಆದರೆ ಮರೆಯದೆ ಹಲಸು, ಮಾವು, ತೆಂಗು, ಸೀಬೆ, ಸೀತಾಫಲ, ನೇರಳೆ ಮುಂತಾದ ಗಿಡಗಳನ್ನು ತನ್ನೊಂದಿಗೆ ಕೊಂಡೊಯ್ದ. ಈ ಗಿಡಗಳನ್ನು ಮನೆ ಮುಂದೆ ರಸ್ತೆ ಬದಿಯುದ್ದಕ್ಕು ನಾಟಿ ಮಾಡಿ ನೀರುಹಾಕಿ ಪೋಷಿಸತೊಡಗಿದ.

ಈತನ ವೃಕ್ಷಪ್ರೇಮವನ್ನು ಕಂಡು ಅಚ್ಚರಿಗೊಂಡ ನೆರೆಹೊರೆಯವರು, `ಏನಪ್ಪಾ ವರುಣ್ ಸಾಲುಮರ ತಿಮ್ಮಕ್ಕನಂತೆ ಗಿಡ ನೆಡುತ್ತಿದ್ದೀಯಾ. ಈ ಸಾರಿ ರಾಜ್ಯೋತ್ಸವ ಪ್ರಶಸ್ತಿ ನಿನಗೇ ಬರುತ್ತೆ ಬಿಡು~ ಎಂದು ತಮಾಷೆ ಮಾಡುತ್ತಿದ್ದರು.

ನೋಡು ನೋಡುತ್ತಿದ್ದಂತೆ ಗಿಡಗಳು ಬೆಳೆದು ಮರವಾಗಿ ಕಾಯಿ ಬಿಡಲಾರಂಭಿಸಿದುವು. ಹಸಿರು ಹಸಿರಾಗಿ ಕಂಗೊಳಿಸುತ್ತಿದ್ದ ಮರಗಳಲ್ಲಿ ಹಣ್ಣುಗಳು ತೊನೆದಾಡತೊಡಗಿದವು. ಅಕ್ಕಪಕ್ಕದವರು ಹಣ್ಣುಗಳನ್ನು ಕಿತ್ತು ಮನೆಗಳಿಗೆ ಒಯ್ಯಲಾರಂಭಿಸಿದರು. ಕೆಲವು ಪಾದಚಾರಿಗಳು ಮರದ ನೆರಳಲ್ಲಿ ವಿಶ್ರಮಿಸುತ್ತಿದ್ದರು.
 
ಮತ್ತೆ ಕೆಲವರು ಮರಗಳ ಕೆಳಗೆ ಗಾಡಿಗಳನ್ನಿಟ್ಟು ನೆರಳಲ್ಲಿ ಸಣ್ಣ ಪುಟ್ಟ ವ್ಯಾಪಾರಗಳನ್ನು ಮಾಡುತ್ತಾ ಹೊಟ್ಟೆ ಹೊರೆಯಲಾರಂಭಿಸಿದ್ದರು. ಇದೆಲ್ಲಾ ಕಂಡು ವರುಣನಿಗಾದ ಸಂತಸ ಅಷ್ಟಿಷ್ಟಲ್ಲ. ನನ್ನಿಂದ ಒಂದಷ್ಟು ಜನರಿಗಾದರೂ ಸಹಾಯವಾಯಿತಲ್ಲಾ ಎಂದು ಆನಂದಪಟ್ಟ. ಸರಕಾರವು ಆತನಿಗೆ `ವೃಕ್ಷಪ್ರೇಮಿ~ ಎಂಬ ಬಿರುದು ನೀಡಿ ಸನ್ಮಾನಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT