ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದಗಳ ತೋಟದಲ್ಲೊಂದು ಸುತ್ತು

ಪ್ರಬಂಧ
Last Updated 23 ಏಪ್ರಿಲ್ 2016, 19:30 IST
ಅಕ್ಷರ ಗಾತ್ರ

ಸಾವು ಶಬ್ದಗಳನ್ನು ಜೊತೆಗೆ ಕರೆದುಕೊಂಡು ಹೋಗುವುದಿಲ್ಲ! ಅಮ್ಮ ಸತ್ತಿದ್ದರೂ ಆಕೆ ಬಿಟ್ಟು ಹೋದ ಶಬ್ದಗಳು ಇಲ್ಲಿಯೆ, ನನ್ನೊಳಗೇ ಇವೆಯಲ್ಲಾ? ಸಾವು ಕಲಿಸುವ ಶಬ್ದಗಳಿಗೂ ಇಲ್ಲಿ ‘ಜೀವ’ ಇರುತ್ತದೆ! ನಮಗೋ ಸಾವೆಂದರೆ ಭಯ! ಸಾವಿನ ಸುತ್ತ ಸುಳಿದಾಡುವ ಶಬ್ದಗಳನ್ನು ಮಕ್ಕಳ ಕಿವಿಗೆ ಬೀಳದಂತೆ ನೋಡಿಕೊಳ್ಳುತ್ತೇವೆ! ನಮಗೆ ಗೊತ್ತಿಲ್ಲ; ಮಕ್ಕಳು ಕಣ್ಣಿನಿಂದಲೂ ಶಬ್ದಗಳನ್ನು ಕಲಿಯುತ್ತವೆ! ಹಾಗೆ ಕಣ್ಣಿನಿಂದ ಕಲಿತ ಶಬ್ದಗಳು ನಮಗರಿವಿಲ್ಲದಂತೆ ತುಂಬಾ ಆಳಕ್ಕೆ ಇಳಿದಿರುತ್ತವೆ!

ಅಕ್ಷರಗಳು ಅನಂತಕ್ಕೆ ಸೇರಿದವುಗಳು! ಅಕ್ಷರಗಳು ಜಗದ ಉಸಿರಿನಿಂದ ಹುಟ್ಟಿ ನಮ್ಮ ಮನೆಯಂಗಳಕ್ಕೆ ಬಂದು ಮುದ್ದು ಕಂದನಂತೆ ಒಳಸೇರಿ ಬಾಲಲೀಲೆಯಾಡುತ್ತಾ, ತೊದಲು ನುಡಿಯುತ್ತಾ, ಕೇಕೆ ಹಾಕಿ ನಗುತ್ತಾ, ಅಳುತ್ತಾ, ಕೋಪಗೊಳ್ಳುತ್ತಾ, ಮಾತೃಭಾಷೆಯಾಗಿ ಉಳಿಯುವ ಅನುಭವಕ್ಕೆ ಸೇರಿದವುಗಳು! ತಾಯಿಯ ತಾಯಿಯಾಗುವ ಅಕ್ಷರಗಳು ಗುಡಿಸಲು ಕಟ್ಟಿಕೊಂಡು ಗಟ್ಟಿಯಾಗುವ ಹಾಗೆಯೇ ಅರಮನೆಯೊಳಗೂ ಬೆಳೆಯುತ್ತವೆ! ಬಯಲು ಅವುಗಳ ಆಲಯವಾದರೆ ಬದುಕು ಅವುಗಳಿಗೆ ಲಯಕೊಡುತ್ತದೆ! ಬದುಕಿನ ಲಯಕ್ಕೆ ಸರಿಯಾಗಿ ಶಬ್ದಗಳು ನೆಲೆಯಾಗುತ್ತವೆ ಮತ್ತು ಬದುಕಿಗೇ ಬೆಳಕು ನೀಡಿ ಜೀವ ಸೆಲೆಯಾಗುತ್ತವೆ!

ಶಬ್ದಗಳು ಸಂಸ್ಕೃತಿಗೆ ಸೇರಿ ಸಾರ್ವಜನಿಕವಾದ ಸಂಜೀವಿನಿಗಳು! ನಾನು ನನ್ನದೆಂದುಕೊಂಡ ಶಬ್ದಗಳೆಲ್ಲಾ ನನ್ನದಾಗಿರುವುದೆ ಇಲ್ಲ! ಅವುಗಳಲ್ಲಿ ಅನೇಕಾನೇಕ ಶಬ್ದಗಳು ನಿಮಗೂ ಪರಿಚಿತವಾದವುಗಳೆ! ಹೀಗೆ ಪರಸ್ಪರ ಪರಿಚಯವಿರುವುದರಿಂದಲೆ ಶಬ್ದಗಳು ಖಾಸಗಿಯಾಗುತ್ತಾ ವೈಯಕ್ತಿಕವಾಗುತ್ತಾ ಸಮಾಜಮುಖಿಯಾಗುತ್ತವೆ! ಕವಿ ಬರೆದ ಕವನವನ್ನು ನಾನು ಓದಿ ಮೆಚ್ಚಿಕೊಳ್ಳುವುದೆ ಆತ ಬಳಸಿದ ಶಬ್ದಗಳು ನನಗಿಷ್ಟವಾಗುವುದರಿಂದಲೆ! ಕವಿ ಕಾಗದಕ್ಕಿಳಿಸಿದ ಶಬ್ದಗಳು ನನಗೆ ಪ್ರಿಯವಾಗದಿದ್ದರೆ ನನ್ನ ಮನದಾಳಕ್ಕೆ ಅವುಗಳು ಇಳಿಯುವುದೇ ಇಲ್ಲ! ಒಳಗಿಳಿಯದ ಶಬ್ದಗಳು ನಮ್ಮದಾಗಿ ಉಳಿಯುವುದೂ ಇಲ್ಲ!

ನಾವು ನಮ್ಮದೆಂದುಕೊಂಡ ಶಬ್ದಗಳನ್ನು ಮನೆಯಂಗಳದಲ್ಲಿ ಬೆಳೆದುನಿಂತ ಹೂವಿನ ಗಿಡಗಳಿಂದ, ಬಳ್ಳಿಗಳಿಂದ, ತೆಂಗಿನ, ಮಾವಿನ, ಗೇರುಹಣ್ಣಿನ ಮರಗಳಿಂದ ಪಡೆದಿರುತ್ತೇವೆ! ಅಷ್ಟೇ ಅಲ್ಲ, ಅಂಗಳದಾಚೆಯ ಬಯಲಿನಿಂದ, ಬಯಲಿನಾಚೆಯ ಗುಡ್ಡದಿಂದ, ಸಣ್ಣ ಹೊಳೆಯಿಂದ, ಹಳ್ಳದಿಂದ, ಊರ ದೇವಸ್ಥಾನದ ಕೆರೆಯಿಂದ, ಧ್ವಜಸ್ತಂಭದಿಂದ, ಗರ್ಭಗುಡಿಯಿಂದಲೂ ಪಡೆದಿರುತ್ತೇವೆ! ಅಂದಹಾಗೆ ಜಾತ್ರೆ ಕೊಟ್ಟ ಶಬ್ದಗಳ ಲೆಕ್ಕವಿಡುವುದು ಸಾಧ್ಯವೆ ಇಲ್ಲ! ರಥಕ್ಕೆ ಶೃಂಗಾರ ಮಾಡಲು ಬಿಳಿ, ಕೆಂಪು ಧ್ವಜಗಳನ್ನೆಲ್ಲಾ ಒಂದಿಂಚೂ ಜಾಗ ಉಳಿಯದಂತೆ ಕಟ್ಟುತ್ತಾರಲ್ಲಾ, ಹಾಗೆಯೆ ಶಬ್ದಗಳ ತೋರಣವೆ ಸಿಕ್ಕಿದೆ ಜಾತ್ರೆಯ ಸಂಭ್ರಮದಿಂದ!

ಕೆಲವು ಶಬ್ದಗಳನ್ನು ಆಟವಾಡುತ್ತಾ ಕಲಿತು ನಮ್ಮದಾಗಿಸಿಕೊಂಡಿದ್ದರೆ ಹಲವು ಶಬ್ದಗಳನ್ನು ಜಗಳವಾಡುತ್ತಾ ದಕ್ಕಿಸಿಕೊಂಡಿದ್ದೇವೆ! ಮರಕೋತಿ ಕಲಿಸಿದ ಶಬ್ದಗಳು ಕುಟ್ಟಿ ದೊಣ್ಣೆಯೊಡನೆ, ಲಗೋರಿಯೊಡನೆ ಸ್ಪರ್ಧೆಗಿಳಿಯುವಾಗ ಖುಷಿ, ಸಂತಸ, ಉತ್ಸಾಹವೆನ್ನುವ ಶಬ್ದಗಳು ನಮ್ಮದಾದದ್ದೂ ಇವೆ! ಕಣ್ಣಾಮುಚ್ಚಾಲೆ ಕಾಣಿಸಿದ ಶಬ್ದಗಳ ಕಂಪೇ ಬೇರೆ! ಅಕ್ಕನೋ, ಚಿಕ್ಕಮ್ಮನೋ ನಮ್ಮ ಕಣ್ಣು ಮುಚ್ಚಿಹಿಡಿದು ‘ಕಣ್ಣಾ ಮುಚ್ಚೇ, ಕಾಡಿಗೆ ಹೋಗೇ’ ಎನ್ನುವಾಗ ಎದುರಾಗುವ ಆ ಕ್ಷಣದ ಕತ್ತಲೆಗೆ ಕಂಡದ್ದು ಕಾಡೇ? ಹಾಡಿಯೆ? ಹುಲಿಯೆ? ಪಕ್ಕದ ಮನೆಯ ನಾಯಿಯೆ? ಯಾವುದೊ ಇರಬಹುದು ಅಥವಾ ಬೇರೆ ಇನ್ನೇನೋ ಇರಬಹುದು!

ಆದರೆ ಮುಚ್ಚಿದ ಕಣ್ಣುಗಳನ್ನು ತೆರೆದು ಅಡಗಿರುವವರನ್ನು ಹುಡುಕುವಾಗ ಹಟ್ಟಿಯ ಹಿಂಬದಿ, ಹಲಸಿನ ಮರದ ತುಂಬಾ ಬೊಡ್ಡದಾಗಿ ಕುಳಿತ ಹಲಸಿನ ಹಣ್ಣುಗಳು, ತುಳಸಿಕಟ್ಟೆ, ಭಯ ಹುಟ್ಟಿಸುವ ಬಾವಿಕಟ್ಟೆ, ಬಟ್ಟೆ ಒಗೆಯುವ ಕಲ್ಲು, ಗೇಟು ಅದರ ಪಕ್ಕದ ನೀಲಂ ಮಾವಿನ ಮರಗಳೆಲ್ಲಾ ಕಂಡೇ ಕಾಣುತ್ತವೆ! ಎಷ್ಟೊಂದು ಸಿಹಿ ಸಿಹಿ ಶಬ್ದಗಳು ಸಿಕ್ಕಿವೆಯೆಂದರೆ ಹಲಸಿನ ಮೇಣ ಬೆರಳುಗಳಿಗೆ ಅಂಟಿಕೊಂಡ ಹಾಗೆ ಇನ್ನೂ ಅಂಟಿಕೊಂಡಿವೆ! ಈಗಲೂ ಬೆರಳುಗಳ ತುದಿಗಳನ್ನು ಗೋಪುರದಂತೆ ಜೋಡಿಸಿದರೆ ಶಬ್ದಗಳು ಒಂದಕ್ಕೊಂದು ಅಂಟಿಕೊಂಡು ಬಿಡಿಸಿಕೊಳ್ಳುವಾಗ ಕಿವಿಗೆ ಕೇಳುವಂತೆ ಸದ್ದು ಮಾಡುತ್ತವೆ!

ಜಗಳವಾಡುತ್ತಾ ನಮ್ಮ ತೆಕ್ಕೆಗೆ ತೆಗೆದುಕೊಂಡ ಶಬ್ದಗಳೂ ನಮ್ಮವೆ ಅಲ್ಲವೆ? ಜಗಳವಿಲ್ಲದ ಸ್ನೇಹ ಸ್ನೇಹವಾಗಿ ಉಳಿಯುವುದೆ ಇಲ್ಲ! ಸುಮ್ಮನೆ ಕಾಲೆಳೆದು ನೆಲಕ್ಕುರುಳಿಸಿದಾಗ ಸ್ನೇಹಿತ ಕೊಟ್ಟ ಶಬ್ದಗಳು, ನಾವೇ ಬಿದ್ದು ಏಳುವಾಗ ಹೆಕ್ಕಿದ ಶಬ್ದಗಳು, ‘ಸಾರ್‌s ನಾನಲ್ಲ ಶಿವಪ್ರಸಾದ್‌’ ಎಂದು ಗೆಳೆಯನನ್ನು ಹಿಡಿದುಕೊಟ್ಟಾಗ ಕನ್ನಡದ ಮಾಷ್ಟ್ರು ಗೆಳೆಯನ ಕೈಗೇ ಬಾರಿಸಿದ ಶಬ್ದಗಳು... ಒಂದೇ ಎರಡೆ? ಪ್ರೀತಿಯಿಂದಲೂ ಶಬ್ದಗಳನ್ನು ನಮ್ಮದಾಗಿಸಿಕೊಂಡಿಲ್ಲವೆ? ಅದೂ ಇನ್ನೂ ಹೈಸ್ಕೂಲಿನಲ್ಲಿರುವಾಗಲೆ!

ಈಗಲೂ ಕವನಗಳಲ್ಲಿ ಹರಿದಾಡುವುದು ಆಗ ಪಡೆದ ಶಬ್ದಗಳೇ ಇರಬೇಕು! ಶಬ್ದಗಳಿಗೇ ನೋವಾಗುವಂತೆ ನಡೆದುಕೊಂಡ ಹುಡುಗಿಯರೂ ಹೊಸ ಹೊಸ ಶಬ್ದಗಳನ್ನು ಕೊಟ್ಟಿದ್ದಂತೂ ಸತ್ಯವೆ! ವಿರಹ ವಿಹಾರಕ್ಕೆ ಹೊರಟಂತೆ, ಏಕಾಂತ ಏಣಿಯೇರಿದಂತೆ ಇಲ್ಲಿ ಶಬ್ದಗಳು ಮೈನೆರೆವಿವೆ! ಮೊತ್ತ ಮೊದಲ ಸ್ಖಲನ ಅನುಭವವೆ? ಅನುಭಾವವೆ? ಪ್ರಾಯಃ ಅದು ದೇವಲೋಕದ ಆನಂದಾನುಭವವೆ ಇರಬೇಕು! ಆಗಲೇ ಅಲ್ಲವೆ ರಂಭೆ, ಊರ್ವಶಿ, ಮೇನಕೆಯರು ಹೇಳದೆ ಕೇಳದೆ ಮನೆಯೊಳಗೆ ಬಂದದ್ದು? ಶಬ್ದಗಳಿಗೆ ಶೃಂಗಾರ, ಲವಲವಿಕೆ, ನಾಚಿಕೆ, ಭಾವುಕತೆ ಸಿಕ್ಕಿದ್ದೂ ಆವಾಗಲೆ!

ಸಾವು ಶಬ್ದಗಳನ್ನು ಜೊತೆಗೆ ಕರೆದುಕೊಂಡು ಹೋಗುವುದಿಲ್ಲ! ಅಮ್ಮ ಸತ್ತಿದ್ದರೂ ಆಕೆ ಬಿಟ್ಟು ಹೋದ ಶಬ್ದಗಳು ಇಲ್ಲಿಯೆ, ನನ್ನೊಳಗೇ ಇವೆಯಲ್ಲಾ? ಸಾವು ಕಲಿಸುವ ಶಬ್ದಗಳಿಗೂ ಇಲ್ಲಿ ‘ಜೀವ’ ಇರುತ್ತದೆ! ಎಷ್ಟು ಎಂದರೆ ನನ್ನ ಸಾವಿನ ಬಳಿಕವೂ ನನ್ನ ಮಗಳ, ಮಗನ, ಮೊಮ್ಮಕ್ಕಳ ಎದೆಯೊಳಗೆ ಅವು ಉಳಿದುಕೊಳ್ಳುತ್ತವೆ! ನಮಗೋ ಸಾವೆಂದರೆ ಭಯ! ಹೀಗಾಗಿಯೆ ಸಾವಿನ ಸುತ್ತ ಸುಳಿದಾಡುವ ಶಬ್ದಗಳನ್ನು ಮಕ್ಕಳ ಕಿವಿಗೆ ಬೀಳದಂತೆ ನೋಡಿಕೊಳ್ಳುತ್ತೇವೆ! ನಮಗೆ ಗೊತ್ತಿಲ್ಲ. ಮಕ್ಕಳು ಕಣ್ಣಿನಿಂದಲೂ ಶಬ್ದಗಳನ್ನು ಕಲಿಯುತ್ತವೆ! ಹಾಗೆ ಕಣ್ಣಿನಿಂದ ಕಲಿತ ಶಬ್ದಗಳು ನಮಗರಿವಿಲ್ಲದಂತೆ ತುಂಬಾ ಆಳಕ್ಕೆ ಇಳಿದಿರುತ್ತವೆ! ಅವುಗಳು ಕಾಡುವ ಶಬ್ದಗಳು! ಕಾಡುವ ಮೂಲಕ ಅವು ಬೆಳೆಯುತ್ತಾ ಹೋಗುತ್ತವೆ; ಬಲಿಯುತ್ತಾ ಹೋಗುತ್ತವೆ!

ಬದುಕಿಗೆ ಹೆರಿಗೆ ನೋವಿನ, ಮಗುವಿನ ಜನನದ ನಲಿವಿನ ಶಬ್ದಗಳಂತೆ ಸಾವಿನ ಶಬ್ದಗಳೂ ಬೇಕು! ತೊಟ್ಟಿಲೊಳಗಿಟ್ಟು ಮುದ್ದು ಮುದ್ದು ಶಬ್ದಗಳನ್ನು ಜೋಗುಳ ಹಾಡುತ್ತಾ ಮಲಗಿಸುವ ಪರಿಯೇ ಬೇರೆ! ಶಬ್ದಗಳು ಅಲ್ಲಿ ಮುಗ್ಧವಾಗುತ್ತವೆ! ಇಂಥ ಮುಗ್ಧ, ಮಗುವಿನಂಥ ಶಬ್ದಗಳು ನಮಗೆ ಬಾಳಿನುದ್ದಕ್ಕೂ ಬೇಕು. ಆದರೆ ದೊಡ್ಡವರಾಗುವ ದಾರಿಯಲ್ಲಿ ನಾವು ಒಂದೊಂದಾಗಿ ಈ ಶಬ್ದಗಳನ್ನು ಕೈಬಿಡುತ್ತಾ ಹೋಗುತ್ತೇವೆ! ನಮಗೂ ಅಂಥ ಶಬ್ದಗಳಿಗೂ ಸಂಬಂಧವೇ ಇಲ್ಲವೆನ್ನುವಂತೆ ಬದುಕನ್ನು ದೂಡುತ್ತೇವೆ! ದೂಡುವುದು ಬದುಕಾಗುವುದಿಲ್ಲ! ತನ್ನಿಂದ ತಾನೆ ಮುಂದುವರಿಯುವುದರಿಂದ ಬದುಕು ಸಹಜವಾಗುತ್ತದೆ. ಸಹಜ ಮತ್ತು ಸರಳ ಪದಗಳನ್ನೆ ಮರೆತರೆ ಹೇಗೆ?

ಶಬ್ದಗಳು ಮರೆಯಾಗದಿರಲೆಂದೇ ನಾವು ಅಜ್ಜ– ಅಜ್ಜಿಯಾಗಿ, ಮೊಮ್ಮಗನೋ– ಮೊಮ್ಮಗಳೊಂದಿಗೋ ಮತ್ತೆ ಆಟವಾಡುತ್ತೇವೋ ಏನೋ! ಅಜ್ಜನಾಗದವ ಅನುಭವಿಸುವುದು ಬರೀ ನೋವನಲ್ಲ! ಆತ ಅನುಭವಿಸುವುದು ‘ಶಬ್ದ ಸಂಕಟ’ವನ್ನು! ಇದು ಸಂಕಟದ ಸಂಕಟ! ಈ ಸಂಕಟದಲ್ಲಿ ತೊದಲು ನುಡಿಯುವುದೂ ಸಾಧ್ಯವಾಗುವುದಿಲ್ಲ! ಇದು ಮಾತು ಬತ್ತಿಹೋಗುವ ಸ್ಥಿತಿ! ಇದು ‘ಶಬ್ದ ಬರ’ದ ಸ್ಥಿತಿ! ಈ ಸ್ಥಿತಿಯಲ್ಲಿ ನಮಗೆ ಬೇಕಾದ ಶಬ್ದಗಳು ಸಿಗುವುದೆ ಇಲ್ಲ! ಒಳಗಿರುವ ಶಬ್ದಗಳೂ ನಿಶಬ್ದವಾಗುತ್ತವೆ! ಗೊತ್ತಿದೆ ಎಂದು ತಲೆ ತುರಿಸಿಕೊಂಡರೂ ಆ ಒಂದು ಶಬ್ದ ನೆನಪಾಗುವುದೆ ಇಲ್ಲ! ನಮ್ಮ ಶಬ್ದಗಳು ಹೀಗೆ ಮರೆತುಹೋಗುವುದೆ ಸಾವು ಇರಬಹುದೋ ಹೇಗೆ?

ಒಂದು ಮಾತಿದೆ! ಮಗುವೊಂದು ಒಂದು ವಾರದಲ್ಲಿ ಐವತ್ತು ಶಬ್ದಗಳನ್ನಾದರೂ ಕಲಿಯುತ್ತದೆಯಂತೆ! ನಾವು ದೊಡ್ಡವರು ಶಬ್ದದ ಹಿಂದೆ ಬೀಳುವುದೆ ಇಲ್ಲ. ನಮ್ಮದು ಕಲಿತಾಗಿದೆ ಎನ್ನುವ ಹಂತ! ನಮ್ಮದು ಇಷ್ಟೊಂದು ಶಬ್ದಗಳು ಗೊತ್ತಿವೆ, ಅಷ್ಟೇ ಸಾಕು ಎನ್ನುವ ನಿರ್ಣಯ!
ತೊಟ್ಟಿಲೊಳಗಿಟ್ಟು ತೂಗಿದ ಕೈಗಳೆ ಶಬ್ದಗಳಿಗೆ ಬಿಳೀ ಹೊದಿಕೆ ಸುತ್ತಿ ರುದ್ರಭೂಮಿಗೆ ಹೊತ್ತುಕೊಂಡು ಹೋಗಬೇಕಾಗುತ್ತದೆ! ಶಬ್ದಗಳನ್ನು ಸುಡುವುದೋ ಹೂಳುವುದೋ ಮಾಡಿ ಮನೆಗೆ ಬಂದು ಸ್ನಾನಮಾಡುವಾಗ ಅಪ್ಪ ಆವೊತ್ತು ಹೇಳಿದ ಶಬ್ದಗಳು ಅರ್ಥ ಬಿಟ್ಟುಕೊಡುತ್ತವೆ! ಅರ್ಥವಾಯಿತು ಎಂದರೆ ಹೊಸ ಶಬ್ದ ಸಿಕ್ಕಿದಂತೆಯೆ! ಈ ಸಾವು ಕೊಡುವ ಹೊಸ ಶಬ್ದಗಳಿವೆಯಲ್ಲಾ? ಅವು ಬೆಂಕಿಯೊಳಗಿಂದ ಬಂದು ಶಾಖ ಕೊಡುತ್ತವೆ? ಆ ಕೂಡಲೆ ಅವುಗಳನ್ನು ಮುಟ್ಟುವಂತಿಲ್ಲ! ಮುಟ್ಟುವ ಸ್ಥಿತಿಯಲ್ಲಿ ಸಾವಿನ ಮನೆಯವರೂ ಇರುವುದಿಲ್ಲ ಬಿಡಿ!

ನಿಧಾನವಾಗಿ ಅರ್ಥವಾಗುವ ಶಬ್ದಗಳೆ ಹೆಚ್ಚು ಆಪ್ತವಾಗುತ್ತವೆ! ನನ್ನ ತರಗತಿ ಮಿತ್ರ ಬೊಳುವಾರು ಮಹಮದ್ ಕುಂಞ್ಞಿ ಅವರೊಡನೆ ಒಮ್ಮೆ  ಹೀಗೆಯೇ ಮಾತನಾಡುತ್ತಿರುವಾಗ ‘ಶಬ್ದ ಆಶ್ಚರ್ಯ’ದ ರೂಪಕವೊಂದು ಎದುರಾಯಿತು. ಅವರು ಹೇಳಿದಿಷ್ಟು: ‘ನಾವು ಬಾಡಿಗೆಗೋ ಸ್ವಂತಕ್ಕೋ ಮನೆ ಹುಡುಕುವಾಗ ಹತ್ತಿರದಲ್ಲೆ ಶಾಲೆಯಿದೆಯೆ? ಹೋಟೆಲ್‌, ಮಾಲ್‌ಗಳಿವೆಯೆ? ಆಫೀಸಿಗೆ ಹತ್ತಿರವಾಗುತ್ತದೆಯೆ? ಎಂದು ನೋಡುತ್ತಲೆ ಇರುತ್ತೇವೆ. ಆದರೆ ಯಾರಾದರೂ ಮನೆ ಹುಡುಕುವಾಗ ಇಲ್ಲೇ ಹತ್ತಿರದಲ್ಲೆ ಸ್ಮಶಾನವಿದೆಯೆ ಎಂದು ಕೇಳುತ್ತಾರೆಯೆ?’. ಆ ಕ್ಷಣ ಹೌದಲ್ಲಾ ಅನಿಸಿತು. ಈ ಮಸಣ, ರುದ್ರಭೂಮಿ, ಸ್ಮಶಾನ, ಹೂಳುವುದು, ಸುಡುವುದು, ದೇಹದಾನ ಮಾಡುವುದು, ನೇತ್ರದಾನ– ಇವೆಲ್ಲಾ ಬದುಕಿಗೆ ಬೇಕಾದ ಶಬ್ದಗಳೆ ಅಲ್ಲವೆ?

ಹುಟ್ಟು–ಸಾವಿನ ನಡುವೆ ಬಂದು ಹೋಗುವ ಶಬ್ದಗಳೆಲ್ಲಾ ಬಾಳಿನ ಅರ್ಥಕೋಶದಲ್ಲಿ ಸೇರಿಕೊಳ್ಳಲೆಬೇಕು! ಮನುಷ್ಯನಿಗೆ ಪುನರ್‌ ಜನ್ಮವಿಲ್ಲದೆ ಇರಬಹುದು! ಆದರೆ ಶಬ್ದಗಳಿಗೆ ಮರುಹುಟ್ಟು ಇದೆ! ನನಗೆ ಅರ್ಥವಾಗದ ಶಬ್ದವೊಂದು ನನ್ನ ಮೊಮ್ಮಗನಿಗೋ ಮೊಮ್ಮಗಳಿಗೋ ಅರ್ಥವಾಗಿ ಪುನರ್‌ ಜನ್ಮ ಪಡದೇ ಬಿಡಬಹುದೇನೋ! ಅಥವಾ ಶಬ್ದಗಳು ಎಂದಾದರೂ ಸಾಯುತ್ತವೆಯೆ ಎನ್ನುವ ಪ್ರಶ್ನೆಯೂ ಹುಟ್ಟಬಹುದು! ಪಂಪ ಬಳಸಿದ ಶಬ್ದಗಳನ್ನು ನಾವು ಬಳಸದಿರಬಹುದು! ಆದರೆ ಆ ಶಬ್ದಗಳು ಸಾಯುವುದಿಲ್ಲ. ಮುಂದೆ, ಇನ್ನೂ ಮುಂದೆ ಯಾರೋ ಕಾಯುತ್ತಿದ್ದಾರೆ– ಆ ಶಬ್ದಗಳನ್ನು ತಮ್ಮದಾಗಿಸಿಕೊಳ್ಳಲು! ಹಾಗೆ ಬಳಸಿಕೊಂಡ ಶಬ್ದಗಳು ಅವರದ್ದಾಗಿಯೂ ಅವರದ್ದೇ ಆಗಿರುವುದಿಲ್ಲ, ಅವುಗಳು ನಮ್ಮೆಲ್ಲರದ್ದೂ ಆಗಿರುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT