ಭಾನುವಾರ, 26 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಾಪಿಂಗ್ ಮಾಡಿದರೆ ನೆಮ್ಮದಿ ಉಚಿತ!

Last Updated 22 ಮಾರ್ಚ್ 2014, 19:30 IST
ಅಕ್ಷರ ಗಾತ್ರ

ಹದ ಬೆಚ್ಚಗಿನ ನೀರು. ಅದರಲ್ಲಿ ಹಾಕಿದ ಉಪ್ಪು ಕರಗಿದೆ. ಅಗಲ ಪಾತ್ರೆಯೊಳಗಿನ ಆ ನೀರಿನಲ್ಲಿ ಪಾದ ಮುಳುಗಿಸಿಕೊಂಡ ಬೆಡಗಿಯ ಕಣ್ಣುಗಳ ತುಂಬಾ ಒಂದೊಂದೂ ಕಾಲುಬೆರಳಿನ ಬಿಂಬ. ಅವನ್ನು ಇನ್ನೂ ನಾಜೂಕು ಮಾಡಲು ಪಾದಗಳನ್ನು ಅವಳು ನೆನೆಹಾಕಿದ್ದಾಳೆ ಎನ್ನಿಸುವ ಪ್ರಕ್ರಿಯೆ ಅದು. ಕಾಲ ಬೆರಳುಗಳ ಸಂದುಗಳಲ್ಲಿ ಹಾಗೆಯೇ ನಿಂತ ಕೊಳೆ ಬಿಟ್ಟುಕೊಳ್ಳುವುದನ್ನು ಅವಳು ನೋಡುತ್ತಿದ್ದಾಳೆ. ಉದ್ದುದ್ದ ಬಿಟ್ಟ ಉಗುರುಗಳ ಸಂದು ಕೊಳೆ ಕಳೆದುಕೊಂಡು ಫಳಫಳ ಹೊಳೆಯಬೇಕೆಂಬ ಬಯಕೆ.

ವರ್ಷಗಳ ಹಿಂದೆ ಭಾನುವಾರ ಮುದ್ದಿನ ಮಗಳಿಗೆ ಅವ್ವ ಅಭ್ಯಂಜನ ಮಾಡಿಸುತ್ತಿದ್ದುದು ಹೀಗೆಯಾ ಅಲ್ಲವೇ? ಹದವಾಗಿ ಬಿಸಿ ಮಾಡಿದ ಎಣ್ಣೆಯನ್ನು ತಲೆಗೂದಲಿನ ಎಲ್ಲಾ ಭಾಗಗಳಿಗೂ ತಲುಪುವಂತೆ ಮಾಡಿ, ನೆತ್ತಿ ಮೇಲೆ ತಟ್ಟಿ, ಕೈಕಾಲುಗಳಿಗೆ ಎಣ್ಣೆ ಮೆತ್ತುತ್ತಲೇ, ಅವುಗಳಲ್ಲಿ ಅಡಗಿದ ನೋವನ್ನು ಹೊರತೆಗೆದು ಅವ್ವ ನಿವಾಳಿಸುತ್ತಿದ್ದಳು. ಸುಡುನೀರಿನಲ್ಲಿ ಅಭ್ಯಂಜನ ಮಾಡುವ ಆ ಕ್ಷಣಗಳ ಪರಮಸುಖವನ್ನು ಈಗಲೂ ಮುಂದುವರಿಸಿಕೊಂಡು ಹೋಗುತ್ತಿರುವವರೂ ಇದ್ದಾರೆ. ಅಂಥವರಿಗೆ ಆಧುನಿಕ ಲಲನೆಯ ಪಾದದ ಆರೈಕೆ ಹೊಸತೇ ರೂಪದಲ್ಲಿ ಕಂಡೀತು.

ಪಾದದ ಆರೈಕೆ ಅಷ್ಟಕ್ಕೇ ಮುಗಿಯುವುದಿಲ್ಲ. ಹಿಮ್ಮಡಿಯಲ್ಲಿ ಸಣ್ಣ ಬಿರುಕು ಕಂಡರೂ ಮನಸ್ಸು ಕಲ್ಲವಿಲಗೊಳ್ಳುತ್ತದೆ. ಅದಕ್ಕೆಂದೇ ಇರುವ ಮುಲಾಮನ್ನು ಲೇಪಿಸುವ ಮೊದಲು ಆ ಭಾಗವನ್ನು ಮೃದುವಾದ ಟವೆಲ್ಲಿನಿಂದ ಅಚ್ಚುಕಟ್ಟಾಗಿ ಒರೆಸುವುದು ಅಭ್ಯಾಸವಾಗಿದೆ. ಉಗುರಿನ ಸಂದುಗಳಲ್ಲಿ ಕೊಳೆಯ ಲವಲೇಶವೂ ಇಲ್ಲವೆಂಬುದನ್ನು ಖಾತರಿಪಡಿಸಿಕೊಂಡ ಮೇಲೆ ಅದಕ್ಕೊಪ್ಪುವ ಬಣ್ಣದ ಹುಡುಕಾಟ. ಢಾಳು ಬಣ್ಣದ ಕಾಲವಿದು. ಕಡುನೀಲಿಯೋ, ಕಡುಗೆಂಪೋ? ಕಳೆದ ವಾರ ಲೇಪಿಸಿಕೊಂಡದ್ದು ನಸುಗೆಂಪು ಅಲ್ಲವೇ? ರಾತ್ರಿ ಇಡೀ ಒದ್ದಾಡಿದ ಮನಸ್ಸಿಗೆ ನೀಲಿ ಮುದಗೊಟ್ಟೀತು.

ನೀಲಿಯಲ್ಲಿ ಆಕಾಶವಿದೆ. ಅದು ಮನಸ್ಸಿಗೆ ತಂಪು. ಕಣ್ಣಿಗೆ ಹಿತ. ಉಗುರುಬಣ್ಣದ ಬ್ರಶ್ಶನ್ನು ನಾಜೂಕಾಗಿ ಸಣ್ಣ ಉಗುರುಗಳಿಗೆ ಸೋಕಿಸಿ, ಚರ್ಮದ ಭಾಗಕ್ಕೆ ಬಣ್ಣ ದಾಟಿಕೊಳ್ಳದಂತೆ ನಿಗಾ ವಹಿಸುತ್ತಾ ಹೋದಂತೆ ಮನಸ್ಸಿನಲ್ಲಿ ಅಸಾಧಾರಣ ಏಕಾಗ್ರತೆ. ಮೊನ್ನೆ ಅದ್ಯಾವುದೋ ಸಮಸ್ಯೆ ಅಟಕಾಯಿಸಿಕೊಂಡಾಗ ಕೈಕೊಟ್ಟಿದ್ದ ಏಕಾಗ್ರತೆ ಈಗ ಬಂದದ್ದಾದರೂ ಹೇಗೆ? ರಾತ್ರಿ ಇಡೀ ನಿದ್ದೆ ಕದ್ದ ಆ ಸಮಸ್ಯೆಯಿಂದ ಹೊರಬರಲು ಇದಕ್ಕಿಂತ ಬೇರೆ ದಾರಿ ಯಾವುದು ಇದೆ? ಇಷ್ಟೆಲ್ಲಾ ವಿಚಾರ ತರಂಗ ಮನಸ್ಸಿನಲ್ಲಿ ಏಳುತ್ತದೆ. ಆದರೆ ಏಕಾಗ್ರತೆಗೆ ತುಸುವೂ ಭಂಗವಿಲ್ಲ. ಅಂದುಕೊಂಡಂತೆ ಹಚ್ಚಿಕೊಂಡ ನೀಲಿ ಉಗುರುಬಣ್ಣ ಕೊನೆಗೂ ದಿವ್ಯ ಸಮಾಧಾನ ಕೊಟ್ಟಿದೆ.

ಸರಿ, ಸ್ನಾನವಾಯಿತು; ಪಾದೋಪಚಾರವೂ ಆಯಿತು. ಏನಾದರೂ ಒಂದಿಷ್ಟನ್ನು ಕೊಂಡರೆ ಮನಸ್ಸು ಇನ್ನಷ್ಟು ಸರಿಹೋಗಬಹುದು. ಪರ್ಸ್ನಲ್ಲಿ ಜತನವಾಗಿ ಇರಿಸಿದ ಕ್ರೆಡಿಟ್ ಕಾರ್ಡು, ಡೆಬಿಟ್ ಕಾರ್ಡ್ಗಳನ್ನು ಒಮ್ಮೆ ನೋಡಿದ ಮೇಲೆ ಪಯಣ ಶುರು. ಅದು ಶಾಪಿಂಗ್ ಟೈಮ್ ಗುರು!

ಮಾಲ್‌ನಲ್ಲಿ ಮೊದಲಿಗೆ ವಿಂಡೋ ಶಾಪಿಂಗ್. ಪ್ರೈಸ್ ಟ್ಯಾಗ್‌ಗಳ ಮೇಲೆ ಪ್ರಜ್ಞಾಪೂರ್ವಕ ನೋಟ. ಯಾವ ಬ್ರಾಂಡಿನ ಕಿಮ್ಮತ್ತು ಎಷ್ಟೆಂಬ ಲೆಕ್ಕಾಚಾರ. ಈಗಿನ ಟ್ರೆಂಡ್ ಯಾವುದು ಎಂಬುದು ಯೋಚಿಸಲೇಬೇಕಾದ ವಿಚಾರ. ಅದಾದ ಮೇಲೆ ಅಳತೆ ಪಕ್ಕಾ ಇದೆಯೇ– ಜಿಜ್ಞಾಸೆ. ಶ್ರಿಂಕ್ ಆಗುವುದಿಲ್ಲ ಎಂಬುದಕ್ಕೆ ಏನು ಗ್ಯಾರಂಟಿ– ಓರೆಪ್ರಶ್ನೆ. ಒಮ್ಮೆ ನೋಡಿಯೇ ಬಿಡೋಣ ಎಂದುಕೊಂಡು ಟ್ರಯಲ್ ರೂಮ್‌ನಲ್ಲಿ ಕದವಿಕ್ಕಿಕೊಂಡದ್ದೂ ಆಯಿತು. ಯಾಕೋ, ಏನೋ ಮಿಸ್ ಹೊಡೆಯುತ್ತಿದೆ ಎನ್ನುತಿದೆ ಮನಸ್ಸು. ಕೆಲವೇ ದಿನಗಳ ಹಿಂದೆ ಆನ್‌ಲೈನ್ ಶಾಪಿಂಗ್‌ನ ಅಡ್ವಾಂಟೇಜಸ್ ಬಗೆಗೆ ಗೆಳತಿ ಕೊಟ್ಟಿದ್ದ ಟಿಪ್ಸ್‌ನ ನೆನಪು. ರಿಯಾಯಿತಿಯ ಬೋರ್ಡ್ ಕಣ್ಣಿಗೆ ಬಿದ್ದದ್ದೇ ಮನಸ್ಸು ಮರ್ಕಟ. ಆದರೂ ಒಮ್ಮೆ ಆನ್‌ಲೈನ್‌ನ ಕಲೆಕ್ಷನ್ನನ್ನೂ ನೋಡಿಯೇಬಿಡುವ ತವಕ.

ಇಷ್ಟಕ್ಕೂ ಹೋಗಿರುವುದು ಮಾಲ್‌ಗೆ; ಒಂದು ಸಣ್ಣ ಊಟ ಮಾಡಿ, ಸಿನಿಮಾ ನೋಡಿ, ಆ ಗ್ಯಾಪ್‌ನಲ್ಲೇ ಇಂಟರ್ನೆಟ್‌ನಲ್ಲಿ ಜಾಲಾಡಿ, ಆ ಜಗತ್ತಿನ ಅಂಗಡಿಗಳ ಬಂಡವಾಳವನ್ನೂ ತಿಳಿದುಕೊಂಡರಾಯಿತು. ಆಯ್ಕೆಗಳು ನೂರಾರು, ಯಾಕೋ ಏನೇನೋ ಕನ್‌ಫ್ಯೂಸು. ಇರಲಿ, ಶಾಪಿಂಗ್ ಮಾಡಿದ್ದರ ಕುರುಹು ಇರದಿದ್ದರೆ ಸರಿಹೋಗುವುದಿಲ್ಲ. ಕೊಂಡ ಬಟ್ಟೆಯ ಬ್ಯಾಗು ಕೈಲಿ ಹಿಡಿದು ಹೋದರೆ ಭೂಷಣ. ಪೇಬ್ಯಾಕ್ ಹೆಸರಿನಲ್ಲಿ ಒಂದು ಕೂಪನ್ ಕೂಡ ಸಿಗುತ್ತದೆ. ಮತ್ತೆ ಶಾಪಿಂಗ್ ಮಾಡಲು ಅದುವೇ ಪ್ರೇರಣೆ. ಈ ಬ್ರಾಂಡ್‌ಗಳು, ಕಂಪೆನಿಗಳು ಹೇಗೆಲ್ಲಾ ಜನರನ್ನು ತಗಲುಹಾಕಿಕೊಳ್ಳುತ್ತವೆ ಎಂದು ಹೇಳುವ ಅದೇ ಮನಸ್ಸು, ಕೊಂಡುಕೊಳ್ಳುವುದರಲ್ಲಿ ಏನೋ ಒಂಥರಾ ಸುಖವಿದೆ ಎಂದೂ ಹೇಳುತ್ತದೆ.

ಇದೊಂದು ಚಿಕಿತ್ಸೆ!
ಹೀಗೆ ಒಂದು ಅರೆಮೋಡ ಕವಿದ ವಾತಾವರಣದ ಭಾನುವಾರ ಸಂಪನ್ನವಾಯಿತು. ಇದನ್ನು ಮಾರ್ಕೆಟಿಂಗ್ ಪರಿಭಾಷೆಯಲ್ಲಿ ‘ಶಾಪಿಂಗ್ ಥೆರಪಿ’ ಎನ್ನುತ್ತಾರೆ. ಮತ್ತೆ ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ‘ರಿಟೇಲ್ ಥೆರಪಿ’ ಎನ್ನುವುದೂ ಉಂಟು.

ಒಂದು ಸಣ್ಣ ಫ್ಲಾಷ್‌ಬ್ಯಾಕ್:
ತಾಲ್ಲೂಕು ಕೇಂದ್ರದಲ್ಲಿ ವಾರಕ್ಕೊಂದು ಸಂತೆ. ಮಾತಾಡಿಕೊಂಡು ಹಳ್ಳಿ ಗೆಳತಿಯರು ಅರ್ಥಾತ್ ವನಿತೆಯರು ಖರೀದಿಗೆಂದು ಹೊರಟರು. ದೊಡ್ಡದೊಂದು ಬ್ಯಾಸ್ಕೆಟ್. ಸಣ್ಣದೊಂದು ಕೈಚೀಲ. ಬಾಸ್ಕೆಟ್‌ನಲ್ಲಿ ತರಕಾರಿ, ದಿನಸಿ, ಮಕ್ಕಳಿಗೊಂದಿಷ್ಟು ತಿನಿಸಿ ಇತ್ಯಾದಿ. ತಮಗೆ ಬಿಂದಿ, ಹೇರ್‌ಪಿನ್, ಸಮಾರಂಭಕ್ಕೆ ಇರಲಿ ಎಂದು ಸಣ್ಣ ಸೈಜಿನ ಪೌಡರ್, ಯಾವುದಕ್ಕೂ ಇರಲೆಂದು ತುಟಿಬಣ್ಣ. ಇವೆಲ್ಲಾ ಯಾವ ಬ್ರಾಂಡ್‌ಗಳೆಂಬುದು ಅವರಿಗೆ ಮುಖ್ಯವಲ್ಲ. ಅವರೆಲ್ಲಾ ಈಗಿನವರಂತೆ ಅಕ್ಕ ಬ್ರಾಂಡ್ಗಳಲ್ಲ. ತುಂಬಿಸಿಕೊಂಡು ತಂದ ಬ್ಯಾಸ್ಕೆಟ್, ಚೀಲಗಳ ಬಹುತೇಕ ಮಾಲು ಚೌಕಾಸಿ ಮಾಡಿದ್ದು. ಒಟ್ಟಾರೆ ಉಳಿಸಿದ ಹಣ ಲೆಕ್ಕ ಹಾಕಿದೊಡನೆ, ಮನಸ್ಸಿನಲ್ಲಿ ಆ ಹಣದಲ್ಲಿ ಇನ್ನೇನು ಮಾಡಬಹುದು ಎಂಬ ಹೊಸ ಯೋಚನೆ ಮೂಡಿ ಮುಖ ಅರಳುತ್ತದೆ.

ಹೀಗೆ ಸಂತೆ ಕೊಡುತ್ತಿದ್ದ ಖರೀದಿಯ ಸುಖವನ್ನು ಆಗ ಯಾರೂ ಚಿಕಿತ್ಸೆ ಎಂದು ಕರೆದಿರಲಿಲ್ಲ. ಆಧುನಿಕ ಮಾರುಕಟ್ಟೆ ಪರಿಣತರು ಗ್ರಾಹಕರಲ್ಲಿ ದಿಢೀರನೆ ಜಾಗೃತಗೊಳ್ಳುವ ಕೊಳ್ಳುಬಾಕ ಮನಸ್ಥಿತಿಯನ್ನು ‘ಥೆರಪಿ’ ಅರ್ಥಾತ್ ‘ಚಿಕಿತ್ಸೆ’ ಎಂದು ವ್ಯಾಖ್ಯಾನಿಸುತ್ತಿದ್ದಾರೆ.

ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ಶಾಪಿಂಗ್ ಮಾಡುವ ಆಯ್ದ ಗ್ರಾಹಕರನ್ನು ಮೂರು ರೀತಿಯ ಸಂಶೋಧನೆಗೆ ಒಳಪಡಿಸಿದರು. ಅವರಲ್ಲಿ ಯಾವ್ಯಾವುದೋ ಕಾರಣಕ್ಕೆ ದುಃಖತಪ್ತರಾಗಿರುವವರನ್ನು ಪ್ರತ್ಯೇಕಿಸಿ, ಅಂಥವರಲ್ಲಿ ಶಾಪಿಂಗ್ ನಂತರ ಏನೆಲ್ಲಾ ಬದಲಾವಣೆಗಳಾಗುತ್ತವೆ ಎಂಬುದನ್ನು ಪಟ್ಟಿ ಮಾಡಿಕೊಂಡರು. ಖಿನ್ನ ಮನಸ್ಸಿಗೆ ಶೇ ೪೦ರಷ್ಟು ಹೆಚ್ಚು ಪರಿಣಾಮಕಾರಿ ನಿಯಂತ್ರಣ ಶಕ್ತಿಯನ್ನು ಶಾಪಿಂಗ್ ನೀಡುತ್ತದೆ ಎಂಬುದು ಅವರ ಸಂಶೋಧನೆಯ ಸಾರ.

ಒಂದು ಜೋಕ್ ಕೇಳಿದಾಗ, ಹರಟೆ ಹೊಡೆದಾಗ ಆಗುವ ಸಂತೋಷಕ್ಕಿಂತ ಮೂರು ಪಟ್ಟು ಹೆಚ್ಚು ಆನಂದವನ್ನು ಶಾಪಿಂಗ್ ಕಟ್ಟಿಕೊಡುತ್ತದೆ ಎಂಬುದು ಆ ವಿಶ್ವವಿದ್ಯಾಲಯದ ಸಂಶೋಧಕರು ಸ್ಪಷ್ಟಪಡಿಸಿದ ಇನ್ನೊಂದು ಅಂಶ. ಇಷ್ಟೆಲ್ಲಾ ಹೇಳಿದ ಅವರಿಗೆ ಒಂದು ಪ್ರಶ್ನೆ ಎದುರಾಯಿತು– ಜನರಿಗೆ ನಿಜಕ್ಕೂ ವಸ್ತುಗಳನ್ನು ಕೊಳ್ಳುವುದರಿಂದ ಸಂತೋಷವಾಗುತ್ತದೋ ಅಥವಾ ಆ ನೆಪದಲ್ಲಿ ಆಪ್ತೇಷ್ಟರ ಜೊತೆಗೋ ತಮ್ಮ ಪಾಡಿಗೆ ತಾವೋ ಕಳೆದ ಚಿಂತೆ ಕಳೆಯುವ ಸಮಯದಿಂದ ಮನಸ್ಸು ಪ್ರಫುಲ್ಲಗೊಳ್ಳುತ್ತದೋ? ಇದಕ್ಕೆ ಮಾತ್ರ ಇನ್ನೂ ಸ್ಪಷ್ಟ ಉತ್ತರ ಕಂಡುಕೊಳ್ಳಲು ಆಗಿಲ್ಲ.

‘ಯಾವಾಗಲೂ ಖಿನ್ನರಾಗಿರುವ ಹೊತ್ತಿನಲ್ಲಿ ಹೆಚ್ಚು ಆಯ್ಕೆಗಳ ಶಾಪಿಂಗ್ ನಡೆಸಿದರೆ ವೈಯಕ್ತಿಕ ನಿಯಂತ್ರಣ ಸಾಧ್ಯವಾಗುತ್ತದೆ. ದುಃಖದಲ್ಲಿ ಕೋಪ, ವಿಷಾದ, ಹತಾಶೆ ಇಂಥ ಬೇರೆ ಭಾವಗಳೂ ಸ್ಫುರಿಸುತ್ತವೆ. ಆದರೆ ಶಾಪಿಂಗ್ ಮಾಡುವುದರಿಂದ ಒಂದು ಮಟ್ಟಿಗೆ ಮನೋ ಪರಿವರ್ತನೆ ಸಾಧ್ಯ. ಅದಕ್ಕೇ ಎಷ್ಟೋ ಆಧುನಿಕ ಲಲನೆಯರು ಮನೆಯಲ್ಲಿ ದೊಡ್ಡವರು ಬೈಯ್ದರೆ ಸಿಟ್ಟಿಗೆದ್ದು ಸೀದಾ ಪಾರ್ಲರ್ ಕಡೆಗೆ ನಡೆದುಬಿಡುತ್ತಾರೆ. ಅಲ್ಲಿ ಅವರಿಗೆ ಸಿಗುವ ಶೋಡಷೋಪಚಾರದಿಂದ ಪ್ರಫುಲ್ಲರಾಗುತ್ತಾರೆ. ಮನೆಗೆ ಮರಳಿದಾಗ ಅವರು ಒಂದಿಷ್ಟು ಹೊತ್ತು ಮನೆಯವರಲ್ಲಿ ಮಾತು ಬಿಟ್ಟರೂ ತಮ್ಮ ಪಾಡಿಗೆ ತಾವು ಖುಷಿಯಾಗಿರುತ್ತಾರೆ. ಇದನ್ನು ನಾವು ಮನಸ್ಸು ಸರಿಮಾಡಿಕೊಳ್ಳುವ ಸ್ವಾರ್ಥದ ದಾರಿ ಎಂದೂ ಕರೆಯಬಹುದು’– ಮಿಶಿಗನ್ ವಿಶ್ವವಿದ್ಯಾಲಯದ ಸಂಶೋಧಕರು ರಿಟೇಲ್ ಥೆರಪಿಗೆ ಕೊಡುವ ವಿವರ ಇದು.

ಅದೊಂದು ತಂತ್ರ!
ಸೂಪರ್‌ಮಾರ್ಕೆಟ್ ತಜ್ಞರು ಈ ವಿಷಯವಾಗಿ ಹೇಳುವುದೇ ಬೇರೆ. ಅವರ ಪ್ರಕಾರ ‘ರಿಟೇಲ್ ಥೆರಪಿ’ ಉತ್ತಮ ಗ್ರಾಹಕರನ್ನೇನೂ ಒದಗಿಸುವುದಿಲ್ಲ. ಅದು ಆರೋಗ್ಯಕರ ಶಾಪಿಂಗ್ ಅಂತೂ ಅಲ್ಲವೇ ಅಲ್ಲ. ಮನಸ್ಸು ನೊಂದಿರುವ ಹೊತ್ತಿನಲ್ಲಿ ತಮಗೆ ಹೊಂದದ ಬಣ್ಣದ ಬಟ್ಟೆಯನ್ನೋ ಪರಿಕರವನ್ನೋ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು. ವ್ಯಾಕುಲಗೊಂಡ ಸ್ಥಿತಿಯಲ್ಲಿರುವವರಂತೂ ಸುಖಾಸುಮ್ಮನೆ ರೇಗುತ್ತಾರೆ. ಬಿಲ್ಲಿಂಗ್ ಸಾಲಿನಲ್ಲಿ ನಿಲ್ಲುವ ವ್ಯವಧಾನವೂ ಅಂಥವರಿಗೆ ಇರುವುದಿಲ್ಲ. ಈ ದೃಷ್ಟಿಯಿಂದ ನೋಡಿದರೆ ರಿಟೇಲ್ ಥೆರಪಿ ಮಾರ್ಕೆಟ್‌ಗೆ ವರದಾನವೇನೂ ಅಲ್ಲ. ಆದರೆ ಬದಲಾದ ಅಗತ್ಯಕ್ಕೆ ಸ್ಪಂದಿಸುವುದು ವ್ಯಾಪಾರಿ ಜಾಣತನ.

ಹಾಗಾಗಿ ಕೆಲವು ಸೂಪರ್‌ಮಾರ್ಕೆಟ್ ಚೈನ್‌ಗಳು ವಿವಿಧ ದೇಶಗಳಲ್ಲಿ ರಿಟೇಲ್ ಥೆರಪಿ ಜೋನ್ ತರಹದ ಸ್ಥಳಗಳನ್ನು ವಿನ್ಯಾಸಗೊಳಿಸುತ್ತಿದ್ದಾರೆ. ಅಲ್ಲಿ ಒಂದಿಷ್ಟು ಪುಸ್ತಕಗಳು, ಪೆನ್ನುಗಳು, ಉಡುಗೊರೆ ಕೊಡುವಂಥ ಸಣ್ಣ ಸಣ್ಣ ಸ್ಮರಣಿಕೆಗಳು, ಬಟ್ಟೆಗಳು, ಮೇಕಪ್ ಸೆಟ್‌ಗಳು ಮೊದಲಾದವನ್ನು ಇರಿಸುತ್ತಾರೆ. ಅಲ್ಲಿ ಖರೀದಿಯಿಂದ ಆಗುವ ಲಾಭಕ್ಕಿಂತ ಹೆಚ್ಚಾಗಿ ಗ್ರಾಹಕರ ಮನಸ್ಸಿಗೆ ನೆಮ್ಮದಿ ಸಿಗಬೇಕು ಎಂಬುದು ಉದ್ದೇಶ. ಮುಂದೆ ಮನಸ್ಸು ಸರಿ ಇದ್ದಾಗಲೂ ಅಂಥ ಗ್ರಾಹಕರು ತಮ್ಮ ಮಳಿಗೆಗೇ ಬರಲಿ ಎಂದು ಆಕರ್ಷಿಸುವ ತಂತ್ರವೂ ಇದಾಗಿದೆ.

ವಾಲ್‌ಮಾರ್ಟ್, ಟೆಸ್ಕೊ, ಕೇರ್‌ಫೋರ್ ತರಹದ ಸೂಪರ್‌ಮಾರ್ಕೆಟ್ ದಿಗ್ಗಜ ಕಂಪೆನಿಗಳಿಗೂ ದಿಡ್ಡಿಬಾಗಿಲು ತೆರೆದಿಟ್ಟಿದೆ ಭಾರತ. ಅವೆಲ್ಲವೂ ಬರಲಿ, ರಿಯಾಯಿತಿ ಕೊಡಲಿ ಎಂಬುದು ಕೊಳ್ಳುಬಾಕರ ನಿರೀಕ್ಷೆ. ಮಹಾತ್ಮ ಗಾಂಧಿ ಹೇಳಿದ ಸರಳತೆ ಸಂಕೇತಗಳಲ್ಲಿ ಒಂದಾದ ಖಾದಿ ಕೂಡ ಈಗ ವಿನ್ಯಾಸಕರ ಕೈಗೆ ಸಿಲುಕಿ, ಸೂಪರ್‌ಮಾರ್ಕೆಟ್‌ಗಳ ತಂತ್ರದ ಭಾಗವಾಗಿ ಎಂದಿನ ಬೆಲೆಗಿಂತ ದುಬಾರಿ ದರದಲ್ಲಿ ಬಿಕರಿಯಾಗುತ್ತಿರುವ ಕಾಲಮಾನವಿದು. ಈ ಹಿನ್ನೆಲೆಯಲ್ಲಿ ರಿಟೇಲ್ ಥೆರಪಿ ಎಂಬುದು ಇಲ್ಲವೇ ಇಲ್ಲ, ಅದೊಂದು ಕಲ್ಪನೆ; ಬೊಗಳೆ ಎಂಬ ವಾದ ಮಂಡಿಸಿದ ಮಾರ್ಕೆಟ್ ಪರಿಣತರೂ ಇದ್ದಾರೆ.

ನಗರದಲ್ಲಿ ಉದ್ಯೋಗಾವಕಾಶದ ಹೊಸ ದಾರಿಗಳನ್ನು ತೆರೆದಿಟ್ಟ ಜಾಗತಿಕ ಶಾಪ್‌ಗಳು, ಮತ್ತೆ ತಮ್ಮ ಆ ಉದ್ಯೋಗಿಗಳನ್ನೇ ಕೊಳ್ಳುಬಾಕರನ್ನಾಗಿಸುತ್ತಿರುವ ಕಾಲವಿದು. ಪಗಾರಕ್ಕೆ ತಕ್ಕಂತೆ ಶಾಪಿಂಗ್ ಮಾಡಬಹುದಾದ ದಾರಿಗಳೀಗ ನೂರಾರುಂಟು. ರಿಯಾಯಿತಿ ಬೋರ್ಡ್‌ಗಳು ವರ್ಷದ ಎಲ್ಲ ಕಾಲದಲ್ಲೂ ಒಂದಲ್ಲ ಒಂದು ಕಡೆ ನೇತಾಡುತ್ತಿರುತ್ತವೆ. ಹಾಗಾಗಿ ‘ರಿಟೇಲ್ ಥೆರಪಿ’ಯನ್ನು ‘ಚಿಕಿತ್ಸಕ ಶಾಪಿಂಗ್’ ಎಂದು ಇನ್ನೊಂದು ಅರ್ಥದಲ್ಲೂ ಕರೆಯಬಹುದು. ಕೊಳ್ಳುವವರಿಗೆ ಕಡಿಮೆ ಬೆಲೆಯಲ್ಲಿ ಒಳ್ಳೆಯ ಬಟ್ಟೆಯೋ ಬೂಟೋ ಸಿಕ್ಕಿದರೆ ಅವರಿಗೆ ಸಹಜವಾಗಿಯೇ ಖುಷಿಯಾಗುತ್ತದೆ; ಹಟ ಮಾಡಿದ ಮಗುವಿಗೆ ಒಂದು ಆಟಿಕೆ ಕೊಡಿಸಿದರೆ ಅದಕ್ಕೆ ಪರಮಾನಂದವಾಗುತ್ತದಲ್ಲ ಹಾಗೆ.

ನತಾಶಾ ಚವಾಣ್ ಎಂಬ ತೆರಿಗೆ ಸಲಹಾಧಿಕಾರಿ ಒಬ್ಬರು ಶಾಪಿಂಗ್ ಹೇಗೆ ಒಂದು ಥೆರಪಿ ಎಂಬುದಕ್ಕೆ ತಮ್ಮ ಅನುಭವವನ್ನೇ ಆಧರಿಸಿ ಇಂಗ್ಲಿಷ್ ನಿಯತಕಾಲಿಕೆಯೊಂದರಲ್ಲಿ ಲೇಖನ ಬರೆದಿದ್ದರು. ತಾವು ಖುಷಿಯಾಗಿದ್ದಾಗ, ಒತ್ತಡದಲ್ಲಿದ್ದಾಗ, ದುಃಖತಪ್ತರಾಗಿದ್ದಾಗ ಶಾಪಿಂಗ್ ಮಾಡುವುದು ಅವರಿಗೆ ನೆಮ್ಮದಿ ತರುತ್ತದಂತೆ. ಮಹಿಳೆಯರಿಗೆ ಶಾಪಿಂಗ್ ಮಾಡಲು ಕಾರಣವೇ ಬೇಡ ಎಂದೂ ಅವರು ಬರೆದುಕೊಂಡಿದ್ದಾರೆ.

ಒಂದು ಕೊಂಡರೆ ಒಂದು ಉಚಿತ ಎನ್ನುವ ಕಾಲವೀಗ ಹಳತು. ಒಂದು ಕೊಂಡರೆ ಇಷ್ಟು ಪಾಯಿಂಟ್ಸ್. ಇನ್ನೊಂದು ಖರೀದಿಯಲ್ಲಿ ರಿಯಾಯಿತಿಗೆ ಆ ಪಾಯಿಂಟ್ಸ್ ನೆರವಾಗುತ್ತದೆಂಬ ಆಮಿಷ. ರಿಯಾಯಿತಿಯ ಮೋಹಕ್ಕೆ ಮಣಿದು ಮತ್ತೆ ಶಾಪಿಂಗ್ ಮಾಯಾವಿಯ ಹಿಂದೆ ಬೀಳುವ ಮಂದಿಯಲ್ಲಿ ನಾವೂ ಒಬ್ಬರಲ್ಲವೇ?

ಇಷ್ಟಕ್ಕೂ ಶಾಪಿಂಗ್ ಒಂದು ಚಿಕಿತ್ಸೆ ಹೌದೋ ಅಲ್ಲವೋ? ಅದು ಅವರವರ ಭಾವಕ್ಕೆ ಬಿಟ್ಟ ವಿಚಾರ. ಉಗುರನ್ನು ಅಷ್ಟೆಲ್ಲಾ ಕಾಳಜಿ ಮಾಡುವ ಮನಸ್ಥಿತಿಯ ಹೆಣ್ಣುಮಕ್ಕಳಿಗೇ ಗೊತ್ತು ಅದರ ಸುಖ–ಕಷ್ಟ.

ಶಾಪಿಂಗ್ ಖುಷಿ
ಅದೃಷ್ಟವಶಾತ್ ಬದುಕಿನಲ್ಲಿ ನಾನು ಖಿನ್ನಳಾದದ್ದೇ ಇಲ್ಲವೆನ್ನಬೇಕು. ಆ ಕಾರಣದಿಂದಲೋ ಏನೋ ಶಾಪಿಂಗ್ ಒಂದು ಥೆರಪಿ ಎಂದು ನನಗೆ ಅನಿಸಿಲ್ಲ. ಹದಿನೈದು ಹದಿನಾರು ಗಂಟೆ ಸತತವಾಗಿ ಶೂಟಿಂಗ್ ಮಾಡಿದರೆ ದೇಹ ದಣಿಯುತ್ತದಷ್ಟೆ. ಆಗ ಹತ್ತೇ ನಿಮಿಷಕ್ಕೆ ನನ್ನ ಮನಸ್ಸು ಸರಿಹೋಗುತ್ತದೆ. ಅದಕ್ಕಾಗಿ ಶಾಪಿಂಗ್ ಮಾಡುವುದಿಲ್ಲ.

ನಾನು ವಿದೇಶಗಳಿಗೆ ಸಿನಿಮಾ ಚಿತ್ರೀಕರಣಕ್ಕೆಂದು ಹೋದಾಗ, ಭಾರತದಲ್ಲಿ ಇಲ್ಲದ ಹಲವು ಬ್ರಾಂಡ್‌ಗಳನ್ನು ಗಮನಿಸುತ್ತೇನೆ. ಇಷ್ಟವಾದರೆ ತಕ್ಷಣ ಕೊಂಡುಕೊಳ್ಳುತ್ತೇನೆ. ಹಾಗೆಂದು ಒಂದೇ ಏಟಿಗೆ ಅರ್ಥವಿಲ್ಲದಂತೆ ಶಾಪಿಂಗ್‌ಗೆಂದು ಖರ್ಚು ಮಾಡುವವಳು ನಾನಲ್ಲ. ಬಹುತೇಕ ಹೆಣ್ಣುಮಕ್ಕಳಂತೆ ನನ್ನ ಬಳಿ ಬಟ್ಟೆಗಳ ದೊಡ್ಡ ಸಂಗ್ರಹವಿದೆ. ಚಪ್ಪಲಿಗಳು, ಶೂಗಳು, ಬೂಟುಗಳು ಎಷ್ಟಿವೆ ಎಂಬುದನ್ನು ನಿಖರವಾಗಿ ಹೇಳಲಾರೆ. ಅವನ್ನೆಲ್ಲಾ ಸೇರಿಸಿದರೆ ಒಂದು ಬುಟಿಕ್ ತೆರೆಯಬಹುದು ಎಂದು ನಿಸ್ಸಂದೇಹವಾಗಿ ಹೇಳಬಲ್ಲೆ. ನನಗೆಂದು ಅಮ್ಮ ಕೂಡ ಶಾಪಿಂಗ್ ಮಾಡುತ್ತಾರೆ. ಅದನ್ನು ನಾನು ಎಂದೂ ಚಿಕಿತ್ಸೆ ಎಂದು ಭಾವಿಸಿಲ್ಲ. ಮಾರುಕಟ್ಟೆ ಜನರ ಕೊಳ್ಳುವ ಮನಸ್ಥಿತಿಗೆ ಏನೆಲ್ಲಾ ಅರ್ಥ ಕಲ್ಪಿಸುತ್ತದೆ ಎಂದು ಅಚ್ಚರಿಯಾಗುತ್ತದೆ.
– ಪ್ರಿಯಾಮಣಿ, ಬಹುಭಾಷಾ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT