ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯಕ್ಕೆ ಸಾವಿರ ಕಾಲು

Last Updated 25 ಮಾರ್ಚ್ 2017, 19:30 IST
ಅಕ್ಷರ ಗಾತ್ರ

ಒಂದಾನೊಂದು ಕಾಲದಲ್ಲಿ, ಒಮ್ಮೆ ಅತ್ಯಂತ ಭೀಕರ ಬರಗಾಲ ಆವರಿಸಿತು. ನಾಡಿನ ಜನರಿಗೆ ತಿನ್ನಲು ಆಹಾರ–ನೀರು ಸಿಗುತ್ತಿರಲಿಲ್ಲ. ಪ್ರಾಣಿಗಳನ್ನಂತೂ ಕೇಳುವವರೇ ಇಲ್ಲ. ಸಿಕ್ಕ ಸಿಕ್ಕ ಬೆಲೆಗೆ ಜಾನುವಾರುಗಳನ್ನು ಕೆಲವರು ಮಾರಿದರೆ, ಕೆಲವರು ಬೇರೆ ಕಡೆಗೆ ಗುಳೆ ಹೊರಟರು. ಕೆಲವು ಜಾನುವಾರುಗಳು ಹೊಟ್ಟೆ ಬೆನ್ನಿಗೆ ಹತ್ತಿಸಿಕೊಂಡು ಸತ್ತೇಹೋದವು. ಕಾಡಿನ ಪ್ರಾಣಿಗಳೂ ಆಹಾರವನ್ನು ಅರಸುತ್ತಾ ದಿನವಿಡೀ ಅಲೆಯುವಂತಾಯಿತು.

ಒಂದು ದಿವಸ ರಾಮಪ್ಪನೆಂಬ ರೈತ ತನ್ನಲ್ಲಿದ್ದ ಒಂದಷ್ಟು ಮೇಕೆಗಳನ್ನು ಕಟ್ಟಿಕೊಂಡು ನೀರು ಮೇವಿಗಾಗಿ ಕಾಡಿನಲ್ಲೆಲ್ಲಾ ಅಲೆಯುತ್ತಿದ್ದ. ಒಂದು ಮರದಲ್ಲೂ ಒಂಚೂರು ಚಿಗುರು ಕಾಣದೆ ಬಸವಳಿದ ಆತನಿಗೆ ಬತ್ತಿಹೋಗಿದ್ದ ತೊರೆಯ ಬಳಿಯಲ್ಲಿದ್ದ ಜಾಲಿಮರದಲ್ಲಿ ಒಂದು ಚೂರು ಹಸಿರು ಕಂಡಿತು. ಅದನ್ನೇ ತನ್ನ ಮೇಕೆಗಳಿಗೆ ಗಣೆಯಿಂದ ಸೆಳೆದು ಹಾಕಿ, ತಾನು ಮರದ ಅರೆಬರೆ ನೆರಳಿನಲ್ಲಿ ಕುಳಿತ. ಆಯಾಸದಿಂದ ತೂಕಡಿಕೆ ಬಂದು ಮಲಗಿಯೇ ಬಿಟ್ಟ.

ಆಗ ಅಲ್ಲಿಗೆ ಬಂದ ಕಳ್ಳನೊಬ್ಬ ಆ ಮೇಕೆಗಳನ್ನೆಲ್ಲಾ ಹೊಡೆದುಕೊಂಡು ಹೊರಟ. ಆದ ಸದ್ದಿನಿಂದ ಎಚ್ಚೆತ್ತ ರಾಮಪ್ಪ ‘ಕಳ್ಳ, ಕಳ್ಳ’ ಎಂದು ಕೂಗುತ್ತಾ, ಆತನನ್ನು ಹಿಡಿದು – ‘ನನ್ನ ಮೇಕೆಗಳನ್ನು ಕದ್ದೊಯ್ಯುತ್ತಿದ್ದೀಯಾ?’ ಎಂದ. ಅಪಾಯವನ್ನರಿತ ಕಳ್ಳ ತಕ್ಷಣ ಬುದ್ಧಿವಂತಿಕೆಯಿಂದ, ‘ಯಾರೊ ನೀನು? ನನ್ನ ಮೇಕೆಗಳನ್ನು ನಾನು ಹೊಡೆದುಕೊಂಡು ಹೋಗುತ್ತಿದ್ದೇನೆ. ಅವನ್ನು ಕಸಿದುಕೊಳ್ಳಲು ಬಂದಿದ್ದೀಯಾ! ಕಳ್ಳ’ ಎಂದು ರಾಮಪ್ಪನನ್ನೇ ಹಿಡಿದುಕೊಂಡುಬಿಟ್ಟ. ಅವರಿಬ್ಬರ ಕೂಗಾಟ ಕೇಳಿ, ದೂರದಲ್ಲಿದ್ದ ಗೆಡ್ಡೆ ಗೆಣಸು ಅರಸುತ್ತಿದ್ದ ಜನರೆಲ್ಲಾ ಓಡೋಡಿ ಬಂದು ಜಗಳ ಬಿಡಿಸಿದರು. ಆದರೆ ‘ಮೇಕೆಗಳು ಯಾರವು?’ ಎಂಬ ಪ್ರಶ್ನೆ ಬಗೆಹರಿಯಲಿಲ್ಲ. ರಾಮಪ್ಪನ ವಾದ ಕೇಳಿದಾಗ ಜನ ‘ಅವನವೇ ಇರಬಹುದು’ ಎಂದರು. ಕಳ್ಳನ ಮಾತು ಕೇಳಿದಾಗ ‘ಇವನವೂ ಇರಬಹುದು’ ಎಂದರು. ಸಮಸ್ಯೆ ಜಟಿಲವಾಯಿತು.

ಅದೇ ಸಂದರ್ಭದಲ್ಲಿ ನರಿಯೊಂದು ಆಹಾರ ಅರಸುತ್ತಾ ಆ ಕಡೆ ಬಂದಿತು. ಅದೂ ಕೆಲವು ದಿನಗಳಿಂದ ಆಹಾರ ಸಿಗದೆ, ಕುಡಿಯಲು ನೀರೂ ಸಿಗದೆ ಬಸವಳಿದಿತ್ತು. ಮೇಕೆಗಳ ಗುಂಪು ಕಣ್ಣಿಗೆ ಬಿದ್ದರೂ ಅಲ್ಲಿ ಸೇರಿದ್ದ ಜನರನ್ನು ಕಂಡು ಭಯವಾಯಿತು. ‘ಏನಾದರೂ ಮಾಡಬಹುದೆ?’ ಎಂದು ಯೋಚಿಸುತ್ತಾ ಜನರ ಬಳಿಗೆ ಬಂತು. ‘ಏಕೆ ಕೂಗಾಡುತ್ತಿದ್ದೀರಾ? ಅಲ್ಲಿ ನಮ್ಮ ಕಾಡಿನ ಮಹಾರಾಜ  ಸಿಂಹರಾಯರು ಮಲಗಿದ್ದಾರೆ. ಏನು ಸಮಸ್ಯೆ ನಿಮ್ಮದು?’ ಎಂದು ರೇಗಿದಂತೆ ನಟಿಸಿತು. ಜನರು ‘ಈ ಮೇಕೆಗಳು ಇವರಿಬ್ಬರಲ್ಲಿ ಯಾರಿಗೆ ಸೇರಿದವು ಎಂಬುದು ತೀರ್ಮಾನವಾಗಬೇಕಿದೆ’ ಎಂದು ರಾಮಪ್ಪನನ್ನು ಕಳ್ಳನನ್ನು ತೋರಿಸಿದರು.

ನರಿಗೆ ತಕ್ಷಣ ‘ಈ ಜಗಳದಲ್ಲಿ ನನಗೊಂದಿಷ್ಟು ಆಹಾರ ಸಂಪಾದಿಸಿಕೊಳ್ಳಬಹುದು’ ಎಂದು ಹೊಳೆಯಿತು. ರಾಮಪ್ಪ ಮತ್ತು ಕಳ್ಳ ಇಬ್ಬರನ್ನೂ ಕಣ್ಣಲ್ಲಿ ಕಣ್ಣಿಟ್ಟು ನೋಡಿತು. ಜನಗಳ ಕಡೆ ನೋಡಿ ‘ನಾನು ಈ ಮೇಕೆಗಳ ನಿಜವಾದ ಒಡೆಯ ಯಾರು ಎಂದು ಸಾಕ್ಷಿ ಸಮೇತ ನಿರೂಪಿಸುತ್ತೇನೆ. ಆದರೆ ಒಂದು ಷರತ್ತು’ ಎಂದಿತು. ಎಲ್ಲರೂ ‘ಏನು? ಏನು?’ ಎಂದು ನರಿಯನ್ನು ಸುತ್ತುವರೆದರು.

ನರಿ ‘ನಾನು ನ್ಯಾಯ ತೀರ್ಮಾನಿಸಿದ ಮೇಲೆ, ಈ ಮೇಕೆಗಳ ನಿಜವಾದ ಒಡೆಯನಿಂದ ನನಗೆ ಒಂದು ಮೇಕೆಯನ್ನು ಕೊಡಿಸಬೇಕು, ಅಷ್ಟೆ’ ಎಂದಿತು. ಜನರು ಅವರಿಬ್ಬರ ಕಡೆ ನೋಡಿದರು. ರಾಮಪ್ಪ ‘ಸದ್ಯ, ಒಂದು ಹೋದರೆ ಹೋಗಲಿ’ ಎಂದುಕೊಂಡು – ‘ಆಗಲಿ’ ಎಂದನು. ಆದರೆ ಕಳ್ಳ ‘ನಮ್ಮಪ್ಪನ ಮನೆ ಗಂಟೇನು ಹೋಗಬೇಕು?’ ಎಂದುಕೊಂಡು, ‘ಒಂದೇನು? ಎರಡನ್ನೇ ಕೊಡುತ್ತೇನೆ’ ಎಂದನು.

ತಕ್ಷಣ ನರಿಗೆ ನಿಜವಾದ ಕಳ್ಳ ಯಾರೆಂದು ತಿಳಿಯಿತು. ಆದರೂ ಸಾಕ್ಷಿ ಸಮೇತ ನಿರೂಪಿಸಬೇಕಾಗಿದ್ದುದರಿಂದ, ಕಳ್ಳನ ಕಡೆ ತಿರುಗಿ, ‘ಏನಪ್ಪಾ ಮೇಕೆಗಳಿಗೆ ಇಂದು ಏನು ತಿನ್ನಿಸಿದೆ?’ ಎಂದಿತು. ಕಳ್ಳ ‘ಒಣರೊಟ್ಟಿ, ಹುರುಳಿಕಾಳು ತಿನ್ನಿಸಿದ್ದೆ’ ಎಂದ. ನರಿ ರಾಮಪ್ಪನ ಕಡೆ ತಿರುಗಿ ‘ಮೇಕೆಗಳಿಗೆ ನೀನು ಏನು ತಿನ್ನಿಸಿದೆ?’ ಎಂದಿತು. ರಾಮಪ್ಪ ‘ಏನು ತಿನ್ನಿಸಲಿ? ನನಗೇ ಏನು ತಿನ್ನಲು ಇಲ್ಲ. ಈಗ ಸ್ವಲ್ಪ ಹೊತ್ತಿನ ಕೆಳಗಷ್ಟೇ ಒಂಚೂರು ಜಾಲಿಮರದ ಎಲೆಗಳನ್ನು ತಿಂದಿರಬಹುದು, ಅಷ್ಟೆ’ ಎಂದನು.

ನರಿ ಮೇಕೆಯೊಂದನ್ನು ಹಿಡಿದು, ಅದರ ಮುಖಕ್ಕೆ ಒಂದು ದೊಡ್ಡ ಹೂಸು ಬಿಟ್ಟಿತು. ಅದರ ದುರ್ವಾಸನೆ ಸಹಿಸಲಾರದೆ, ಮೇಕೆ ತಾನು ಆಗಷ್ಟೇ ತಿಂದಿದ್ದನ್ನೆಲ್ಲಾ ವಾಂತಿ ಮಾಡಿಕೊಂಡಿತು. ಅದರಲ್ಲಿ ಜಾಲಿ ಎಲೆಗಳಿದ್ದವೇ ಹೊರತು, ಹುರುಳಿಕಾಳು, ಒಣರೊಟ್ಟಿ ಏನೂ ಇರಲಿಲ್ಲ. ಜನರಿಗೆ ನಿಜ ಗೊತ್ತಾಗಿ ‘ಹೋ’ ಎಂದು ಕಳ್ಳನನ್ನು ಹಿಡಿದರು. ‘ಸುಳ್ಳಿಗೆ ಒಂದೇ ಕಾಲು; ಸತ್ಯಕ್ಕೆ ಸಾವಿರ ಕಾಲು’ ಎನ್ನುತ್ತ ನರಿ ಮೇಕೆಯೊಂದನ್ನು ಹಿಡಿಯಿತು. ರಾಮಪ್ಪನಿಗೆ ಒಂದು ಮೇಕೆ ಹೋಗಿದ್ದಕ್ಕೆ ದುಃಖವಾದರೂ ಉಳಿದ ಮೇಕೆಗಳನ್ನು ನೋಡಿ ಸಂತೋಷದಿಂದಲೆ ಊರಿನ ಕಡೆ ಹೊರಟನು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT