ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿಂಹವನ್ನು ರಕ್ಷಿಸಿದ ಪ್ರಾಣಿಗಳು

ಮಕ್ಕಳ ಕತೆ
Last Updated 1 ಆಗಸ್ಟ್ 2015, 19:59 IST
ಅಕ್ಷರ ಗಾತ್ರ

ಅದೊಂದು ದಟ್ಟವಾದ ಕಾಡು. ಬಿಸಿಲು ನೆಲದ ಮೇಲೆ ಬೀಳದ ರೀತಿಯಲ್ಲಿ ಮರಗಳು ಎತ್ತರ ಎತ್ತರವಾಗಿಯೂ, ದಟ್ಟವಾಗಿಯೂ ಬೆಳೆದುಕೊಂಡಿದ್ದವು. ಇಂತಹ ಕಾಡಿನಲ್ಲಿ ಅನೇಕ ವಿಧದ ಪ್ರಾಣಿಗಳೂ, ಪಕ್ಷಿಗಳೂ ಅವುಗಳ ಪಾಡಿಗೆ ಅವು ಸುಖವಾಗಿ ಜೀವಿಸಿಕೊಂಡಿದ್ದವು.

ಈ ಎಲ್ಲ ಪ್ರಾಣಿಗಳಿಗೂ ಸಿಂಹನೇ ರಾಜ. ಅವನು ಹೇಳಿದ ಹಾಗೆ ಎಲ್ಲವೂ ಕೇಳಿಕೊಂಡಿದ್ದವು. ಈ ಸಿಂಹರಾಜನು ಪ್ರಾಣಿಗಳ ಸುಖ–ದುಃಖಗಳಲ್ಲಿ ಸಹಕಾರ ನೀಡುತ್ತಿದ್ದನು. ಹಾಗಾಗಿ ಸಿಂಹರಾಜನೆಂದರೆ ಎಲ್ಲ ಪ್ರಾಣಿಗಳಿಗೂ ಬಹಳ ಅಚ್ಚುಮೆಚ್ಚು.

ಹೀಗೆಯೇ ದಿನಗಳು, ತಿಂಗಳುಗಳು, ವರುಷಗಳು ಕಳೆದವು. ಅದೊಂದು ದಿನ ಸಿಂಹರಾಜನು ಆಹಾರ ಹುಡುಕುವ ಸಲುವಾಗಿ ಕಾಡಿನೊಳಗೆ ಅಲೆದಾಡತೊಡಗಿದ. ಬಹಳ ಹೊತ್ತು ಅಲೆದಾಡಿದರೂ ಅವನಿಗೆ ಆಹಾರ ಸಿಗದೆ ಹೋಯಿತು. ಅಲೆದೂ ಅಲೆದೂ ದಣಿವಾದ ಸಿಂಹರಾಜನಿಗೆ ಹಸಿವೆಯ ಜೊತೆಗೆ ಅಸಾಧ್ಯ ಬಾಯಾರಿಕೆಯೂ ಉಂಟಾಯಿತು. ದೂರದಲ್ಲಿ ಅವನಿಗೆ ಪಾಳು ಬಾವಿಯೊಂದು ಕಾಣಿಸಿತು. ಅದರಲ್ಲಿ ನೀರೇನಾದರೂ ಇದ್ದರೆ ಕುಡಿದು ದಣಿವಾರಿಸಿಕೊಳ್ಳೋಣವೆಂದು ಆತ ಆ ಕಡೆ ಹೆಜ್ಜೆ ಹಾಕಿದನು.

ಹಾಗೂ ಹೀಗೂ ಸಿಂಹರಾಜ ಪಾಳುಬಾವಿಯನ್ನು ಸಮೀಪಿಸಿದ. ನೀರೇನಾದರೂ ಇದೆಯೋ, ಇದ್ದರೆ ಅದು ಎಟುಕುತ್ತದೆಯೋ ಅಂತ ಅವನು ಸ್ವಲ್ಪ ಬಾವಿಯೊಳಗೆ ಬಗ್ಗಿದನು. ಬಾವಿಗೆ ಕಟ್ಟೆ ಇರಲಿಲ್ಲ. ಸಿಂಹರಾಜ ಬಗ್ಗಿದ್ದು ಸ್ವಲ್ಪ ಹೆಚ್ಚೇ ಆಯಿತು ಅಂತ ಕಾಣುತ್ತದೆ. ಅವನು ಆಯ ತಪ್ಪಿ ಧಬಾರನೆ ಬಾವಿಯೊಳಗೆ ಬಿದ್ದುಬಿಟ್ಟ! ಬಾವಿಯಲ್ಲಿ ನೀರಂತೂ ಇರಲೇ ಇಲ್ಲ. ಹಾಗಾಗಿ ಬಿದ್ದ ರಭಸಕ್ಕೆ ಸಿಂಹರಾಜನ ಸೊಂಟ, ತಲೆಗಳಿಗೆ ಏಟಾಯಿತು. ನೋವು ತಾಳಲಾರದೆ ಘೋರವಾಗಿ ಗರ್ಜಿಸಿದ. ಅವನ ಗರ್ಜನೆಗೆ ಕಾಡೆಲ್ಲ ಮಾರ್ದನಿಸಿತು.

ಬಾವಿಯು ಹೆಚ್ಚು ಆಳವಾಗಿರದಿದ್ದರೂ ಸಿಂಹರಾಜ ನೆಗೆದು ಹೊರಗೆ ಹಾರಲು ಸಾಧ್ಯವಾಗದಷ್ಟು ಆಳವಿದ್ದಿತು. ಸಿಂಹರಾಜ ಐದು ಆರು ಸಾರಿ ನೆಗೆದು ನೋಡಿದ. ಹೊರಗೆ ಹಾರಲು ಆಗುವ ಹಾಗೆ ಕಾಣಲಿಲ್ಲ. ತಾನು ಬಾವಿಯಿಂದ ಹೊರಬರಲು ಯಾರಾದರೂ ಸಹಾಯ ಮಾಡಿಯಾರೇ ಅಂತ ಸಿಂಹರಾಜ ಬಾವಿಯೊಳಗೇ ಕುಳಿತು ಕತ್ತು ಉದ್ದ ಮಾಡಿಕೊಂಡು ಪಿಳಿ ಪಿಳಿ ನೋಡತೊಡಗಿದ.

ಬಹಳ ಸಮಯ ಸಿಂಹರಾಜ ಕಾಣಿಸದಾದಾಗ ಸಿಂಹರಾಜನ ಹೆಂಡತಿ ಸಿಂಹಣಿಗೂ, ಸಚಿವ ನರಿರಾಯ ಹಾಗೂ ಇತರ ಪ್ರಾಣಿಗಳಿಗೂ ದಿಗಿಲಾಯಿತು. ಇವನು ಆಹಾರ ಹುಡುಕಿಕೊಂಡು ಎಲ್ಲಿಗೆ ಹೋದ ಅಂತ ಅವುಗಳಿಗೆ ತಿಳಿಯಲಿಲ್ಲ.

ಸಿಂಹರಾಜ ಹೋದ ದಿಕ್ಕಿನಲ್ಲಿ ಅವನನ್ನು ಹುಡುಕುತ್ತಾ ಪ್ರಾಣಿಗಳೂ ಪಕ್ಷಿಗಳೂ ಹೊರಟವು. ಬಹಳ ಸಮಯ ಹುಡುಕಿದಾಗ ಸಿಂಹರಾಜನಿರುವ ಬಾವಿಯೊಳಗೆ ಮಂಗವೊಂದು ಇಣಕಿ ನೋಡಿತು. ಮಂಗನ ಮುಖ ಕಂಡ ಸಿಂಹರಾಜ ದೊಡ್ಡದಾಗಿ ನಿಟ್ಟುಸಿರು ಬಿಟ್ಟು ನಡೆದುದನ್ನೆಲ್ಲಾ ವಿಚರಿಸಿ, ‘ನಾನು ಮೇಲಕ್ಕೆ ಬರುವಂತೆ ಮಾಡಲು ಏನಾದರೂ ಉಪಾಯವನ್ನು ಯೋಚಿಸಿರಿ’ ಅಂತ ಆರ್ತನಾಗಿ ಕೇಳಿಕೊಂಡ. ಮಂಗನಿಗೆ ಸಿಂಹರಾಜನ ಸ್ಥಿತಿಯನ್ನು ನೋಡಿ ಮರುಕವೆನಿಸಿತು.

ಮಂಗ ಎಲ್ಲ ಪ್ರಾಣಿಗಳನ್ನೂ ಬಾವಿಯ ಬಳಿಗೆ ಕರೆಯಿತು. ಎಲ್ಲವೂ ಸಭೆ ಸೇರಿ ಚರ್ಚಿಸತೊಡಗಿದವು. ಸಮಸ್ಯೆ ಬಗೆಹರಿಯಲಿಲ್ಲ. ಸಿಂಹರಾಜನನ್ನು ಬಾವಿಯಿಂದ ಮೇಲೆತ್ತುವ ಉಪಾಯ ಹೊಳೆಯಲಿಲ್ಲ. ಪ್ರಾಣಿಗಳೆಲ್ಲ ಸಭೆ ಸೇರಿ ಬಹಳ ಸಮಯವಾದಾಗ ಕಾಗೆಯೊಂದು ಎಲ್ಲಿಂದಲೋ ಹಾರಿಬಂತು. ವಿಚಾರವೇನೆಂದು ಕೇಳಿ ತಿಳಿದುಕೊಂಡಿತು. ‘ಹೀಗೆ ಮಾಡಿದರೆ ಹೇಗೆ?’ ಅಂತ ಕಾಗೆ ಕೇಳಿತು.

ಪ್ರಾಣಿಗಳೆಲ್ಲ ಒಕ್ಕೊರಲಿನಿಂದ ‘ಹೇಗೆ, ಹೇಗೆ? ವಿವರಿಸು’ ಅಂತ ಕೇಳಿದವು ಕುತೂಹಲದಿಂದ.

‘ನನ್ನ ಪೂರ್ವಿಕನೊಬ್ಬ ಹೂಜಿಯೊಂದರ ತಳದಲ್ಲಿದ್ದ ನೀರನ್ನು ಕಲ್ಲುಗಳನ್ನು ಹೂಜಿಯೊಳಗೆ ಹಾಕಿ ಮೇಲೆ ಬರಿಸಿದ್ದ...’ ಅಂತ ಕಾಗೆ ಶುರುಮಾಡಿತು. ಕಾಗೆಯ ಮಾತನ್ನು ಮಧ್ಯದಲ್ಲೇ ತಡೆದು ‘ಆ ಹಳೆಯ ಕತೆಗೂ ಸಿಂಹರಾಜನನ್ನು ಮೇಲೆ ಬರುವಂತೆ ಮಾಡುವುದಕ್ಕೂ ಏನು ಸಂಬಂಧವಯ್ಯಾ? ಬಾವಿ ಹೂಜಿಯೂ ಅಲ್ಲ; ಸಿಂಹರಾಜ ನೀರೂ ಅಲ್ಲ’ ಅಂದಿತು ಒಂದು ಮುದಿ ಮಂಗ.

‘ನೀನು ಸ್ವಲ್ಪ ಸುಮ್ಮನಿರು ಮಾರಾಯ. ಅವನು ಮಾತಾಡಲಿ’ ಅಂದಿತು ಸಚಿವ ನರಿ.

ಕಾಗೆ ಮಾತು ಮುಂದುವರಿಸಿತು. ‘ಹೂಜಿಯೊಳಗೆ–ತಳದಲ್ಲಿದ್ದ ನೀರು ಮೇಲೆ ಬರಲು ನನ್ನ ಪೂರ್ವಿಕ ಮಾಡಿದ ಉಪಾಯ ಅನೇಕರಿಗೆ ತಿಳಿದಿದೆಯಲ್ಲವೇ? ಅದೇ ರೀತಿಯಲ್ಲಿ ನಾವೆಲ್ಲರೂ ಸೇರಿ ಕಲ್ಲು, ಮಣ್ಣು, ಕಸ, ಕಡ್ಡಿ– ಹೀಗೆ ಏನೇನು ಸಿಗುವುದೋ ಅವನ್ನೆಲ್ಲಾ ತಂದು ಬಾವಿಯೊಳಗೆ ನಿಧಾನವಾಗಿ ಹಾಕೋಣ. ಆಗ ಬಾವಿಯ ಆಳ ಕ್ರಮೇಣ ಕಡಿಮೆಯಾಗುತ್ತಾ ಬರುತ್ತದೆ. ಕೊನೆಗೆ, ಬಾವಿಯು ನೆಲದ ಮಟ್ಟಕ್ಕೆ ಬರುತ್ತದೆ. ಅಂದರೆ ಅದು ಕಸಕಡ್ಡಿಗಳಿಂದ ತುಂಬಿಕೊಂಡು ಮುಚ್ಚಿಯೇ ಹೋಗುತ್ತದೆ. ಆಗ ಸಿಂಹರಾಜ ಮೇಲೆ ಬರುವುದು ಸುಲಭವಲ್ಲವೇ?’ ಅಂತ ಮಾತು ಮುಗಿಸಿತು.

ಪ್ರಾಣಿಗಳೆಲ್ಲ ಒಂದರ ಮುಖ ಒಂದು ನೋಡಿಕೊಂಡವು. ಆಗ ಸಚಿವ ನರಿಯು, ‘ನೀನು ಹೇಳುವುದು ಸರಿಯಾಗೇ ಇದೆ ಕಾಕಣ್ಣ. ಆದರೆ ಒಂದು ವಿಚಾರದ ಬಗೆಗೆ ನಾವು ನಿಗಾವಹಿಸಬೇಕು. ನಾವು ಬಾವಿಯೊಳಗೆ ಹಾಕುವ ಕಲ್ಲು–ಮಣ್ಣುಗಳು ಸಿಂಹರಾಜನ ಶರೀರದ ಮೇಲೆ ಬೀಳದ ಹಾಗೆ ನೋಡಿಕೊಳ್ಳಬೇಕು. ಅವನಿಗೆ ಯಾವ ರೀತಿಯಿಂದಲೂ ನೋವಾಗಬಾರದು ಮತ್ತೆ’ ಎಂದು ಸೂಚಿಸಿತು.

ಒಟ್ಟಿನಲ್ಲಿ ಕಾಗೆ ಸೂಚಿಸಿದ ಉಪಾಯವೂ ಎಲ್ಲ ಪ್ರಾಣಿಗಳಿಗೂ ಒಪ್ಪಿಗೆಯಾಯಿತು.

ಸರಿ. ಪ್ರಾಣಿಗಳೆಲ್ಲ ಕೆಲಸ ಶುರುಹಚ್ಚಿಕೊಂಡವು. ಮಂಗಗಳು ಕಲ್ಲುಗಳನ್ನು ಹೊತ್ತು ತಂದು ಬಾವಿಯೊಳಗೆ ಸಿಂಹರಾಜನಿಲ್ಲದ ಜಾಗವನ್ನು ನೋಡಿ ಹಾಕತೊಡಗಿದವು. ಇನ್ನು ಕೆಲವು ಪ್ರಾಣಿಗಳು ಕಸ, ಮಣ್ಣು, ಮರದ ತುಂಡು– ಹೀಗೆ ಏನೇನು ಸಿಗುತ್ತವೋ ಅವನ್ನೆಲ್ಲ ತಂದು ಬಾವಿಯೊಳಗೆ ಹಾಕತೊಡಗಿದವು. ಒಳಗಿದ್ದ ಸಿಂಹರಾಜನು ಪ್ರಾಣಿಗಳು ಹಾಕಿದ ವಸ್ತುಗಳ ಮೇಲೆ ನಿಂತುಕೊಳ್ಳುತ್ತಿದ್ದ.

ಈ ರೀತಿ ಬಹಳ ಸಮಯ ಕೆಲಸ ನಡೆಯಿತು. ನಿಮಿಷ ನಿಮಿಷಕ್ಕೂ ಬಾವಿಯು ಕಲ್ಲು, ಮಣ್ಣು, ಕಸ, ಕಡ್ಡಿಗಳಿಂದ ತುಂಬತೊಡಗಿತು. ನಿಧಾನವಾಗಿ ಸಿಂಹರಾಜ ಮೇಲೆ ಮೇಲೆ ಬರತೊಡಗಿದ. ಕೊನೆಗೆ ಇನ್ನೂ ಮೂರು ನಾಲ್ಕು ಅಡಿ ಮಾತ್ರ ಬಾಕಿ ಇದೆ ಅನ್ನುವಾಗ ಸಿಂಹರಾಜ ನೆಗೆದು ಮೇಲೆ ಬಂದುಬಿಟ್ಟನು. ಪ್ರಾಣಿಗಳಿಗೆಲ್ಲಾ ಸಂತೋಷವಾಯಿತು. ಎಲ್ಲವೂ ‘ಸಿಂಹರಾಜನಿಗೆ ಜಯವಾಗಲಿ’ ಎಂದು ಒಕ್ಕೊರಲಿನಿಂದ ಕಿರುಚಿದವು. ಅವುಗಳ ಕಿರುಚಾಟಕ್ಕೆ ಇಡೀ ಕಾಡೇ ಪ್ರತಿಧ್ವನಿಸಿತು.

ಸಿಂಹರಾಜನು, ‘ಇದು ನನ್ನ ಜಯವಲ್ಲ; ಕಾಗೆಯ ಉಪಾಯಕ್ಕೆ ಸಂದ ಜಯ. ನಿಮ್ಮೆಲ್ಲರ ದುಡಿಮೆಗೆ ಸಂದ ಜಯ’ ಅಂತ ಹೊಗಳಿದನು. ಸಿಂಹರಾಜನನ್ನು ಕಾಪಾಡಲು ಯಾರು ಯಾರು ಕೆಲಸ ಮಾಡಿದ್ದರೋ ಅವರೆಲ್ಲರಿಗೂ ಸಿಂಹರಾಜ ತಕ್ಕ ಬಹುಮಾನವನ್ನಿತ್ತು ಆದರಿಸಿದನು. ಪ್ರಾಣಿಗಳ ಸಂತೋಷಕ್ಕೆ ಪಾರವೇ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT