ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀವಾದದ ಅನೇಕ – ಅನನ್ಯ ಅರ್ಥಗಳ ಶೋಧ

Last Updated 2 ಜನವರಿ 2016, 19:30 IST
ಅಕ್ಷರ ಗಾತ್ರ

ಒಂದೇ ವಿಷಯದ ಬಗ್ಗೆ ಅದೆಷ್ಟು ಸಲ ಬರೆಯಬಹುದು? ಅಥವ ಯಃಕಶ್ಚಿತ್ ಎನಿಸಿಕೊಂಡ ಹೆಣ್ಣಿನ, ಆಗೀಗ ಇಣುಕಿ ನೋಡುವ, ಅಲ್ಲಲ್ಲಿ ಕಾಣುವ, ಎಲ್ಲೋ ಒಮ್ಮೊಮ್ಮೆ ಮಾತಾಡುವ, ಇಲ್ಲವೇ ವಿನಾಯಿತಿ ಎಂಬಂತೆ ಧುತ್ತೆಂದು ಅವತರಿಸಿ, ತನ್ನ ಸುತ್ತಲಿನ ಬದುಕಲ್ಲಿ ದಿಗ್ಮೂಢತೆಯನ್ನು ಉಂಟುಮಾಡುವ ಹೆಣ್ಣಿನ ಬಗ್ಗೆ ಎಷ್ಟು ಸಲ ಮಾತಾಡಬಹುದು? ಡಾ. ಎಂ.ಎಸ್. ಆಶಾದೇವಿಯವರು ‘ನಾರೀಕೇಳಾ’ ಅಂಕಣದಲ್ಲಿ ಈ ಪಂಥಾಹ್ವಾನವನ್ನು ಸಲೀಸಾಗಿ ಸ್ವೀಕರಿಸಿ, ಎರಡು ವರ್ಷಗಳ ಕಾಲ ಇಂಥ ಹೆಣ್ಣುಗಳ ಬಗ್ಗೆ ಬರೆಯುತ್ತಲೇ ಹೋದರು. ಅವರು ಹೀಗೆ ಒಂದೇ ವಿಷಯದ ಬಗ್ಗೆ ಓತಪ್ರೋತವಾಗಿ ಬರೆಯುತ್ತಿದ್ದರೂ, ಏಕತಾನತೆಗೆ ತಾವೇ ಇಲ್ಲದಂತೆ ಪರಿಕಲ್ಪಿಸಿಕೊಂಡ, ಓದಿಸಿಕೊಂಡ ಒಂದು ಅಂಕಣ ಎಂದರೆ, ಅದು ನಿಸ್ಸಂದೇಹವಾಗಿ ‘ನಾರೀಕೇಳಾ’.

ಆರಂಭದಲ್ಲಿ, ಕನ್ನಡ ಸಾಹಿತ್ಯದಲ್ಲಿ ರೂಪುಗೊಂಡ ಹೆಣ್ಣಿನ ಚಿತ್ರಗಳು, ಕನ್ನಡದ ಲೇಖಕಿಯರು ಚಿತ್ರಿಸಿದ ಹೆಣ್ಣುಗಳು ಚರ್ಚೆಯ ಕೇಂದ್ರವಾಗಿದ್ದರೂ, ನಂತರದಲ್ಲಿ ಅದು ಸಂಗೀತ, ಚಿತ್ರಕಲೆ, ಸಿನಿಮಾ, ರಾಜಕಾರಣ, ಪುರಾಣ, ಚರಿತ್ರೆ, ಅನ್ಯಭಾಷೆ, ಅನ್ಯ ದೇಶದ, ಸಾಂಸ್ಕೃತಿಕ ವಲಯದ ಹೆಣ್ಣುಗಳ ಬದುಕನ್ನು ಬಗೆಯುವ ವಿರಾಟ ವ್ಯಾಪ್ತಿಯನ್ನು ಸಹಜ ಎಂಬಂತೆ ದಕ್ಕಿಸಿಕೊಳ್ಳುತ್ತಾ ಹೋಯಿತು. ಈ ಪ್ರಕ್ರಿಯೆಯಲ್ಲಿ ಭಿನ್ನ ಕಾಲ, ಪ್ರದೇಶ, ವಿವಿಧ ರೀತಿಯ ಹಿನ್ನೆಲೆಯ – ಕ್ಷೇತ್ರದ ಹೆಣ್ಣುಗಳ ಬದುಕು, ವ್ಯಕ್ತಿತ್ವ ಮತ್ತು ಅರ್ಥಗಳ ದಣಿವಿಲ್ಲದ, ಆದರೆ ತಾದಾತ್ಮ್ಯತೆಯ ಶೋಧವೊಂದಕ್ಕೆ ಕನ್ನಡದ ಸಂಸ್ಕೃತಿ ಸಾಕ್ಷಿಯಾಯಿತು.

‘ನಾರೀಕೇಳಾ’ ಉದ್ದೇಶದ ಬಗ್ಗೆ ಲೇಖಕರಿಗೆ ಸ್ಪಟಿಕ ಸದೃಶ್ಯವಾದ ಸ್ಪಷ್ಟತೆ ಇದೆ. ಅದು, ಆಧುನಿಕ ಕಾಲದ ಹೆಣ್ಣಿನ ಸಂರಚನೆಯ ಸಂಕೀರ್ಣತೆಯನ್ನು ಅರ್ಥಮಾಡಿಕೊಳ್ಳುವುದು ಹಾಗೂ ಅವಳ ಬಗ್ಗೆ ಇರುವ ಸುಧಾರಣಾವಾದದ ವಿಪರ್ಯಾಸಕಾರಿ ನಿಲುವುಗಳನ್ನು ಇನ್ನೂ ಆಳವಾದ ಶೋಧಕ್ಕೆ ಒಡ್ಡುವುದು; ಈ ಮೂಲಕ ಪಿತೃಸಂಸ್ಕೃತಿಯ ಇಬ್ಬಂದಿತನ ಮತ್ತು ಛದ್ಮವೇಷಗಳ ಅನಾವರಣದತ್ತಲೂ ಗಮನಹರಿಸುವುದು. ಇದನ್ನು ಸಾಧಿಸುವುದಕ್ಕೆ ಪಠ್ಯಕೇಂದ್ರಿತ ವಿಧಾನದ ಸಾಧ್ಯತೆಯನ್ನು ವಿಸ್ತರಿಸುವ ಕೆಲವು ಮುಖ್ಯವಾದ ರಹದಾರಿಗಳನ್ನು ಆಶಾದೇವಿ ಕಂಡುಕೊಂಡಿದ್ದಾರೆ. ಎಂದರೆ, ಪಠ್ಯದ ಬಹುಮುಖಿ ಧ್ವನಿಗಳನ್ನು ಹಿಡಿಯುವ ಮತ್ತು ಅಂತರಪಠ್ಯೀಯತೆಯ ಸೂಕ್ಷ್ಮಗಳ ಜೊತೆಗೆ ಕಥನವನ್ನು ತಳಕು ಹಾಕುತ್ತಲೇ, ಅದರ ಮೌನದ ಮುಸುಕನ್ನು ಸರಿಸಿ ನೋಡುವ ಕೆಲಸಕ್ಕೆ ಅವರು ಕೈ ಹಾಕಿದ್ದಾರೆ. ಹೀಗೆ ಮಾಡುವಾಗ ಅಕಡೆಮಿಕ್ ವಿಮರ್ಶೆಯ ನಿಷ್ಠುರತೆಯನ್ನು ಬಿಟ್ಟು ಎಲ್ಲಾ ರೀತಿಯ ಓದುಗರಿಗೂ ಅಪೀಲ್ ಆಗುವಂತೆ ಚೇತೋಹಾರಿಯಾದ ವಿವರಣೆಯ ಮೂಲಕ ವಿಷಯವನ್ನು ನಿರೂಪಿಸಿದ್ದಾರೆ.

ಲೇಖಕರು, ಅಂಕಣದ ಪ್ರತಿಯೊಂದು ಭಾಗದಲ್ಲೂ, ಸ್ತ್ರೀತ್ವದ ಸಂಕಥನವನ್ನು ವಿಭಿನ್ನ ಆಯಾಮ ಮತ್ತು ಅನೇಕ ಮಜಲುಗಳ ಮೂಲಕ ಅರ್ಥ ಮಾಡಿಕೊಳ್ಳುವ ಗಂಭೀರವಾದ ಪ್ರಯತ್ನದಲ್ಲಿ ತೊಡಗಿಕೊಳ್ಳುತ್ತಾರೆ. ಅದು ಈಗಾಗಲೇ ಬಳಸಲಾಗಿರುವ ಪಾಶ್ಚಾತ್ಯ, ಭಾರತೀಯ, ಮಾರ್ಕ್ಸ್‌ವಾದಿ ಅಥವ ನಾಲ್ಕನೆಯ ಅಲೆಯ ಸ್ತ್ರೀವಾದಕ್ಕಿಂತ ಭಿನ್ನವಾದುದು. ಅದನ್ನು ಇನ್ನಷ್ಟು ನಿರ್ದಿಷ್ಟವಾಗಿ ಹೇಳುವುದಾದರೆ, ಈ ಎಲ್ಲಾ ಸಿದ್ಧಾಂತಗಳ ಗ್ರಹೀತಗಳ ಹಿನ್ನೆಲೆಯಲ್ಲಿಯೇ, ಈ ನೆಲದ, ಬದುಕಿನ ಸತ್ವವನ್ನು ಪರಿಭಾವಿಸಿಕೊಂಡ ಗಾಢತೆಯಲ್ಲಿ ಮೂಡುವ ತಿಳಿವಳಿಕೆಯ ಸಂಕಥನವಾಗುತ್ತದೆ.

ಆದ್ದರಿಂದಲೇ, ಇಂದಿರಾ ಗಾಂಧಿ ‘ಅಭಿನವ ದುರ್ಗೆ’ಯಾದರೆ, ಆಂಡಾಳ್ ‘ಭಕ್ತಿ ಎನ್ನುವ ಬಂಡಾಯ’ವಾಗಿ ಬಿಡುತ್ತಾಳೆ. ಈ ಅಂಕಣದಲ್ಲಿ ಚರ್ಚೆಗೊಳಗಾದ ಅನೇಕ ಹೆಣ್ಣುಗಳ ಅಸ್ತಿತ್ವದ ಪ್ರಶ್ನೆ ಮತ್ತು ಹೋರಾಟದ ಸವಾಲುಗಳ ಜೊತೆಗೆ ತನ್ನನ್ನೂ ಒಳಗೊಂಡ ಸುತ್ತಲನ್ನು ಕಟ್ಟಿಕೊಳ್ಳುವ ತಲ್ಲೀನತೆಗಳನ್ನು ಹಿಡಿಯುವ ರೀತಿಯಲ್ಲೇ, ಹೆಣ್ಣುಗಳ ಬದುಕಿನ ಬಹುತ್ವಕ್ಕೆ ಅಧಿಕೃತತೆಯನ್ನು ಕಟ್ಟಿಕೊಡುವ ಪ್ರಜ್ಞಾಪೂರ್ವಕವಾದ, ಪೊಲಿಟಿಕಲ್ ಆದ ಎಚ್ಚರ­ವೊಂದು ಸದಾ ಜಾಗೃತವಾಗಿರುತ್ತದೆ.

ಇದು ಹೆಣ್ಣನ್ನು ಒಂದು ಸರಳ ಚೌಕಟ್ಟಿನೊಳಗೆ ಅಳವಡಿಸುವ ಮತ್ತು ಪಡಿ­ಯಚ್ಚಿಗೆ ಇಳಿಸುವ ಅಪಾಯಗಳನ್ನು ಮೀರಿ ಬೆಳೆಯುತ್ತದೆ. ಬಹುದೇಶ, ಬಹುಕಾಲದ ಹೆಣ್ಣುಗಳೊಂದಿಗೆ ಮುಖಾಮುಖಿಯಾಗುತ್ತಾ ಹೋದಂತೆ, ಪಿತೃಪ್ರಾಧಾನ್ಯತೆ ಮತ್ತು ಪುರುಷಾಧಿಕಾರದ ಸೂಕ್ಷ್ಮವಾದ ತಂತ್ರ, ಹಾಗೂ ಹ್ಯಾಬಿಟಸ್ ಆಗಿಬಿಟ್ಟಿರುವ ಅದರ ಅನೇಕ ಇಬ್ಬಂದಿತನಗಳನ್ನು ಆಶಾದೇವಿಯವರು ಅದ್ಭುತವಾಗಿ ಹಿಡಿಯುತ್ತಾರೆ. ಉದಾಹರಣೆಗೆ, ‘ತಾಯಿಬಾಯಿಯ ಮುನ್ನೋಟದ ಆರತಿ’ಯಲ್ಲಿ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟದ ಹೆಣ್ಣಿನ ರಚನೆಯ ವಿಧಾನದ ಬಗ್ಗೆ ಮಾತನಾಡುತ್ತಾ, ‘ಹೆಣ್ಣನ್ನು ಮುನ್ನೆಲೆಗೆ ತರುವಲ್ಲಿ ಪಿತೃಸಂಸ್ಕೃತಿಗಿದ್ದ ವಿರೋಧ ಮತ್ತು ಅಸಹನೆಗಳನ್ನು ದೇಶ ರಕ್ಷಣೆಯ ಕವಚದಲ್ಲಿ ಮುಚ್ಚಲಾಯಿತು.

ತುಸು ಧಾರ್ಷ್ಟ್ಯದಲ್ಲಿ ಹೇಳಬಹುದಾದರೆ, ಅನೇಕ ನಾಯಕರಿಗೆ ಇದು ತಾತ್ಕಾಲಿಕವಾದ ಮತ್ತು ದೇಶಕ್ಕೆ ಸ್ವತಂತ್ರ ಬಂದ ಮೇಲೆ ಮುಗಿಯಬಹುದಾದ ಹೆಣ್ಣಿನ ಪ್ರಯಾಣವಾಗಿತ್ತು ಎಂದರೆ, ಇನ್ನೊಂದು ಕಡೆ,  ಹೆಣ್ಣಿನ ವ್ಯಕ್ತಿತ್ವ ಮತ್ತು ಅಭಿವ್ಯಕ್ತಿ ಎಲ್ಲವನ್ನೂ ಪಿತೃಸಂಸ್ಕೃತಿ ತನ್ನ ಹಿತಾಸಕ್ತಿಯ ರಕ್ಷಣೆಗಾಗಿಯೇ ಕಟ್ಟುತ್ತದೆ’ ಎಂದು ಹೇಳುತ್ತಾರೆ. ಇಂಥ ಅನೇಕ ಸಂಗತಿಗಳನ್ನು ಹೇಳುವಾಗ ಒಂದು ಕಾಮನ್‌ಸೆನ್ಸ್ ಗ್ರಹಿಸುವಂತೆ ಪುರುಷರ ವಿರುದ್ಧದ ಸಿಟ್ಟು ಸೆಡವುಗಳ ಬದಲಾಗಿ ಮಾಗಿದ ನವುರು ವ್ಯಂಗ್ಯ ಮತ್ತು ವಿಡಂಬನೆ ವ್ಯಕ್ತವಾಗುತ್ತದೆ.

ಎರಡು ವರ್ಷದ ದೀರ್ಘವಾದ ಈ ಪ್ರೀತಿಯ ಪಯಣದಲ್ಲಿ, ಲೇಖಕರು, ಸ್ತ್ರೀವಾದ ಜ್ಞಾನಮೀಮಾಂಸೆ­ಯಲ್ಲ – ಲೋಕಮೀಮಾಂಸೆ ಎನ್ನುವ ಸೌಹಾರ್ದದ ನಿಲುವನ್ನು ಬಿರುಕು ಮತ್ತು ದ್ವಂದ್ವವಿಲ್ಲದೆ, ನಿರಂತರವಾಗಿ ಮಂಡಿಸುತ್ತಾ ಹೋಗುತ್ತಾರೆ. ‘ಸ್ತ್ರೀವಾದವು ಗಂಡು ಮತ್ತು ಹೆಣ್ಣು ಇಬ್ಬರೂ ಸೇರಿ ಕಟ್ಟಬೇಕಾಗಿರುವ ಒಂದು ಬದುಕಿನ ಕ್ರಮವಾಗಿದೆ... ಇದು ಪ್ರಚಲಿತ ಮೌಲ್ಯ ವ್ಯವಸ್ಥೆ  ವಿರುದ್ಧ ಸಾರಿರುವ ಯುದ್ಧವಲ್ಲ, ಇದರ ಆತ್ಯಂತಿಕ ನಂಬಿಕೆ ಇರುವುದು ಪರಿವರ್ತನೆಯಲ್ಲಿ’ ಎಂದು ಪದೇ ಪದೇ ಬೇರೆ ಬೇರೆ ಪದಗಳಲ್ಲಿ ಒತ್ತಿಹೇಳುತ್ತಾರೆ. ಹೀಗೆ ಹೇಳುವಾಗ ಸ್ತ್ರೀವಾದ ಒಂದು ಬದಲಾವಣೆಯ ಮಾನದಂಡ ಆಗಬೇಕೆಂಬ ಅದಮ್ಯವಾದ ಆಶಯವೂ ಅಂಕಣದ ಅಂತಃಸತ್ವದಲ್ಲಿ ಹಾಸುಹೊಕ್ಕಾಗಿದೆ. ‘ನಾನು ಅರ್ಧ ಹೆಣ್ಣು’ ಎಂದ ಗಾಂಧಿ ಇದಕ್ಕೆ ಆತ್ಯಂತಿಕ ಪ್ರತಿಮೆಯಾಗಿ ನಿಲ್ಲುತ್ತದೆ.

ಸ್ತ್ರೀವಾದವನ್ನು ಒಂದು ವಿಲಕ್ಷಣವಾದ ಅಸಹನೆಯಲ್ಲಿಯೋ ಅಥವಾ ಒಂದು ಉದಾರವಾದಿ ಧಿಮಾಕಿನ ಧೋರಣೆಯಲ್ಲಿಯೋ ನೋಡುವ, ಗ್ರಹಿಸುವ ಜನಜನಿತವಾದ ಕ್ರಮವನ್ನೂ ಮೀರಿ, ‘ನಾರೀಕೇಳಾ’ ಅಷ್ಟು ಜನಪ್ರಿಯವಾಗಿದ್ದು ಯಾಕೆ? ಈ ಪ್ರಶ್ನೆಯ ಉತ್ತರದಲ್ಲಿ ಲೇಖಕರ ಆಶಯದ ಗೆಲುವೂ ಮತ್ತು ಚರ್ವಿತ ಚರ್ವಣ ಎನಿಸಿಕೊಂಡ ವಿಷಯಕ್ಕೆ ಗಹನತೆ ಪ್ರಾಪ್ತವಾದ ಪುರಾವೆಗಳು ದಕ್ಕುತ್ತವೆ. ಆಶಾದೇವಿಯವರ ಕಥನದ ಶೈಲಿ ಅನಂತ ಸಾಧ್ಯತೆಗಳನ್ನು ಅತ್ಯಂತ ಲೀಲಾಜಾಲವಾಗಿ ಕಂಡುಕೊಂಡಿತು. ಒಂದೇ ವಿಷಯವನ್ನು ನಿಬ್ಬೆರಗಾಗುವಷ್ಟು ವಿಭಿನ್ನತೆಯಲ್ಲಿ ನಿರಾಳವಾಗಿ ನಿರೂಪಿಸುತ್ತಿತ್ತು.

ವಿಷಯ ಏನೇ ಆಗಿರಲಿ, ಅದನ್ನು ಸಣ್ಣ ಪುಟ್ಟ ಕಥಾನಕಗಳು, ಉದ್ಧರಣೆಗಳು, ಗಾದೆಗಳು, ಜನನಂಬಿಕೆಗಳು, ಬಾಯಿಮಾತಿನ ಮೂಲಕ ಹರಡಿರುವ ಆಸಕ್ತಿದಾಯಕವಾದ ವಿಷಯಗಳು, ಓದನ್ನು ಚೇತೋಹಾರಿಯಾಗಿಸುತ್ತಿದ್ದವು. ನಿರೂಪಣೆಯನ್ನು ನಾಟಕೀಯವಾಗಿ ಕಟ್ಟುತ್ತಿದ್ದ ರೀತಿಯು ಕಥನಗಳನ್ನು ಆಪ್ತವಾದ ಒಂದು ನೆಲೆಯಲ್ಲಿ ಪರಿಭಾವಿಸಿಕೊಳ್ಳುವುದಕ್ಕೆ ನೆರವಾಗುತ್ತಿತ್ತು. ಆಶಾದೇವಿಯವರು ಕನ್ನಡ ಭಾಷೆಯ ಸಾಧ್ಯತೆಗಳನ್ನು ಸಲೀಸಾಗಿ ಈಡಾಡುತ್ತಾ, ಅವರು ಉದ್ದೇಶಿಸಿದ ಪಾಲಿಟಿಕ್ಸ್‌ ಅನ್ನು ನುಣುಪಾದ ರೂಪಕಗಳಾಗಿ ಇಡುತ್ತಿದ್ದುದರಿಂದ ಪ್ರತಿಯೊಂದು ಕಥನದ ನಿರೂಪಣೆಗೆ ಘನವಾದ ಒನಪು, ವಯ್ಯಾರ ಪ್ರಾಪ್ತವಾಗುತ್ತಿತ್ತು (ಎಷ್ಟೇ ಆಗಲಿ ಸ್ತ್ರೀವಾದ ಅಲ್ಲವೇ? ಆಶಾದೇವಿಯವರು ನನ್ನನ್ನು ಅಟ್ಟಿಸಿಕೊಂಡು ಬರುವುದಿಲ್ಲ ಎಂಬ ನಂಬಿಕೆಯಿಂದ).

ಇದೆಲ್ಲದರಿಂದ ಓದುಗರು ಮೋಡಿಗೊಳಗಾಗದೆ ತಪ್ಪಿಸಿಕೊಳ್ಳುವುದು ಸಾಧ್ಯವೇ ಇರಲಿಲ್ಲ. ಜೊತೆಗೆ ಲೇಖಕರು ಸಾಂಪ್ರದಾಯಿಕ ಸರಹದ್ದುಗಳಾಚೆಗಿನ ವಿಷಯಗಳಿಗೆ ಲಗ್ಗೆ ಹಾಕುತ್ತಿದ್ದರು. ಅದು, ಜೈಬುನ್ನೀಸಾ ಆಗಿರಬಹುದು ಅಥವ ಗೀತಾ ಹಿರಣ್ಯನ್ ಆಗಿರಬಹುದು. ಇಂಥವನ್ನು ಓದದೇ ಇರುವುದು ಯಾರಿಗೆ ತಾನೇ ಸಾಧ್ಯವಾಗುತ್ತಿತ್ತು ? ಆದರೆ, ಎಲ್ಲಾ ರೀತಿಯ ಬರಹಗಳಲ್ಲೂ ಕೆಲವು ಸಮಸ್ಯೆಗಳು ಉಳಿದುಬಿಡುತ್ತವೆ. ಇದಕ್ಕೆ ‘ನಾರೀಕೇಳಾ’ ಕೂಡ ಹೊರತಾಗಿರಲಿಲ್ಲ. ಮಹಿಳಾ ಚಳವಳಿಯ ಹೊರಗೆ ನಿಂತು ಮಾತಾಡುವಾಗ ಉಂಟಾಗುವ ಒಂದು ಮಿತಿ ಇಲ್ಲಿ ಮುಖ್ಯವಾಗಿ ಕಂಡುಬರುತ್ತಿತ್ತು.

ಲೇಖಕರೇ ಒಂದು ಕಡೆ, ತುಂಬಾ ಮುಖ್ಯವಾಗಿ ಗೃಹಿಣಿಯರು, ಮತ್ತು ಈ ತಲೆಮಾರಿನ ಹುಡುಗ ಹುಡುಗಿಯರು ಇದಕ್ಕೆ ಸ್ಪಂದಿಸಿದ್ದು... ಎಂದು ಹೇಳುತ್ತಾರೆ; ಎಂದರೆ, ಮಧ್ಯಮವರ್ಗದ ಧೋರಣೆಯನ್ನು ತಣಿಸುವಲ್ಲಿ ‘ನಾರೀಕೇಳಾ’ ಅತ್ಯಂತ ಸಫಲವಾಗಿತ್ತು ಎಂಬುದನ್ನು ಇದು ಸೂಚಿಸುತ್ತದೆ. ಕೆಳಜಾತಿ ಮತ್ತು ಕೆಳಸ್ತರದ ಹೆಣ್ಣುಮಕ್ಕಳ ದೈನಂದಿನ, ಜೀವನ್ಮರಣದ ಪ್ರಶ್ನೆಯನ್ನು ಸ್ವಲ್ಪವಾದರೂ ಹದಕ್ಕೆ ತರದೇ ಹೋದರೆ, ಅರ್ಥ ಮಾಡಿಕೊಳ್ಳದಿದ್ದರೆ ಎಲ್ಲಾ ಡೆಮಾಕ್ರೆಟಿಕ್ ಮೌಲ್ಯಗಳೂ, ಆಚರಣೆಗಳೂ ಅಂತಿಮವಾಗಿ ಅರ್ಥವಿಹೀನ ಆಗಿಬಿಡುತ್ತವೆ. ಹೀಗೆ ಹೇಳುವಾಗ, ಲೇಖಕರು, ಸಾವಿತ್ರಿಬಾಯಿ ಫುಲೆ ಇಂಥ ಒಂದು ಹೋರಾಟಕ್ಕೆ ಹಾಡಿದ ನಾಂದಿಯನ್ನು ದಾಖಲಿಸಿದ್ದಾರೆ ಎನ್ನುವುದು ಕೂಡ ಉಲ್ಲೇಖನೀಯ.

ಫ್ರಾನ್ಜ್ ಫ್ಯಾನನ್, ನಮ್ಮ ಸುಪ್ತಪ್ರಜ್ಞೆಯ ಮೇಲೆ ವಸಾಹತು ಚಿಂತನೆಯ ಮಾದರಿಗಳು ಗಾಢವಾದ ಪ್ರಭಾವವನ್ನು ಉಂಟುಮಾಡಿರುತ್ತವೆ ಎಂದು ಹೇಳುತ್ತಾನೆ. ನಮ್ಮ ಬಹಳಷ್ಟು ವಿಮರ್ಶೆ ಮತ್ತು ಸಂಶೋಧನೆ­ಗಳು, ಸಾಂಸ್ಕೃತಿಕ ಕಥನಗಳನ್ನು ಗ್ರಹಿಸು­ವಾಗ, ಹೀಗೆ  ಕಂಡೀಶನಿಂಗ್ ಆಗಿರುವ ರಚನೆಗಳಿಂದ ಬಿಡಿಸಿಕೊಂಡಿರುವುದಿಲ್ಲ. ‘ನಾರೀಕೇಳಾ’ದಲ್ಲೂ ವಸಾಹತು ಗ್ರಹಿಕೆಯ ಕ್ರಮಗಳು ಅಲ್ಲಲ್ಲಿ ಇಣುಕುತ್ತವೆ.

ಇದೆಲ್ಲದರ ಆಚೆಗೆ ‘ನಾರೀಕೇಳಾ’ ಇಂದಿಗೂ ಬಿರುಕಾಗಿಯೇ ಉಳಿದಿರುವ ಅಕಡೆಮಿಕ್ಸ್ ಮತ್ತು ಜನಪ್ರಿಯ ಸಂಕಥನಗಳ ಒಂದು ಅದ್ಭುತವಾದ ಸಮತೋಲನವನ್ನು ಉದ್ದಕ್ಕೂ ಕಾಯ್ದಿಟ್ಟುಕೊಂಡಿತು. ಜೊತೆಗೆ ಜಡವಾಗಿಬಿಡಬಹುದಾದ ಹಾಗೂ ಭಾರವಾಗಬಹುದಾದ ಪರಿಭಾಷೆಗಳ ಆಚೆಗೆ ಒಂದು ಮಧ್ಯಮಮಾರ್ಗವಾಗುವ ಭಾಷೆ ಮತ್ತು ಚಿಂತನೆಯನ್ನು ಎವಾಲ್ವ್ ಮಾಡಿಕೊಳ್ಳುವಲ್ಲಿ ಅಪಾರವಾದ ಯಶಸ್ಸನ್ನು ಪಡೆದುಕೊಂಡಿತು. ‘ನಾರೀಕೇಳಾ’ ಅಷ್ಟು ಸುಲಭವಾಗಿ ನಮ್ಮ ಮನಸ್ಸುಗಳಿಂದ ಮರೆಯಾಗುವುದಿಲ್ಲ. ಆಶಾದೇವಿ ಅವರಿಗೆ ನಾವೆಲ್ಲರೂ ಕೃತಜ್ಞರು. 
*
ಹೊಸ ಹೊಳಪಿನ ಬರಹಗಳು

ಆಶಾದೇವಿ ಅವರ ‘ನಾರೀಕೇಳಾ’ ಅಂಕಣದ ಬರಹಗಳನ್ನು ಓದಿದ ನನಗೆ ಮಹಿಳೆಯರ ಕುರಿತ ಅವರ ಚಿಂತನೆಗಳ ಬಗ್ಗೆ ತುಂಬಾ ಹೆಮ್ಮೆ ಎನಿಸಿತು. ಕಾರಣ, ಈ ವ್ಯಕ್ತಿಗಳ ವಿಷಯವಾಗಿ ಅವರ ಅಂತರಂಗದಲ್ಲಿ ಉದ್ಭವಿಸಿರಬಹುದಾದ ಭಾವನೆಗಳ ಕುರಿತು ಚರ್ಚಿಸಿರುವುದು. ಇದಕ್ಕೆ ಉದಾಹರಣೆಯಾಗಿ ರಾಧೆಯ ಬಗೆಗಿನ ಅವರ ಅಪೂರ್ವ ಬರಹವನ್ನು ನೋಡಬಹುದು. ‘ನಮ್ಮೆಲ್ಲರ ಆತ್ಮಸಖಿ ರಾಧೆ’ ಎನ್ನುವ ಆ ಲೇಖನದಲ್ಲಿ– ‘‘ಸೋತ, ಸೋತಿರಬಹುದಾದ ದಾಂಪತ್ಯದಲ್ಲಿ ‘ಹೇಗೂ ಹೆಂಡಿರಾಗಿ ಬದುಕಬೇಕಾದ್ದು ಎಲ್ಲ ಹೆಣ್ಣಿನ ಹಣೆಯಲ್ಲಿ ಬರೆದದ್ದು’ ಎಂದು ಹೆಣ್ಣಿನ ಬಾಯಲ್ಲಿ ಹೇಳಿಸುತ್ತಲೇ ಇರಲಾಗುತ್ತದೆಯಷ್ಟೆ.

ಅಂಥ ದತ್ತ ಬದುಕನ್ನೇ ಚಿಮ್ಮುಹಲಗೆಯಾಗಿ ಮಾಡಿ ಬದುಕಿನ ಅನಂತ ವಿಸ್ತಾರದ ಕಡೆಗೆ ಮುಖ ಮಾಡುವ ಬಾನಾಡಿ ರಾಧೆ. ನೂರು ಬೇಡಗಳ, ನೂರು ಬೇಡಿಗಳ ಲಕ್ಷ್ಮಣರೇಖೆಯೊಳಗೆ ಬದುಕಬೇಕಾದ ಬದುಕನ್ನು ‘ಲಘಿಮಾ ಕೌಶಲದಲ್ಲಿ’ ಲೀಲಾಜಾಲವಾಗಿ ಮೀರುವ ರೂಪಕ ರಾಧ’’ ಎಂದು ಆಶಾದೇವಿ ಅವರು ಹೇಳುತ್ತಾರೆ. ನನಗೆ ಇದು ತುಂಬಾ ಇಷ್ಟವಾಯಿತು.

ಸೀತೆ, ಯಶೋಧರೆ, ಶಾಕುಂತಲೆ, ಮುಂತಾದ ರೂಪಕಗಳ ಮೂಲಕ ಗದ್ದಲಗಳಿಲ್ಲದೆ, ದ್ವಂದ್ವಗಳಿಲ್ಲದೆ ಸ್ತ್ರೀವಾದವನ್ನು ಆಶಾದೇವಿಯವರು ಅತ್ಯಂತ ಸಶಕ್ತವಾಗಿ ಪ್ರತಿಪಾದಿಸಿದ್ದಾರೆ. ಈ ಕಾರಣಕ್ಕೆ ‘ನಾರೀಕೇಳಾ’ ಲೇಖನಗಳು ನನಗೆ ಇಷ್ಟ. ಸ್ತ್ರೀವಾದವನ್ನು ಎತ್ತಿ ಹಿಡಿಯುತ್ತ, ಯೋಚನೆಗಳನ್ನು ತೂಗುತ್ತ, ಹೆಣ್ಣು ತನ್ನ ಸ್ಥಾನಮಾನಕ್ಕಾಗಿ, ತನ್ನತನವನ್ನು ತನ್ನ ಹಕ್ಕನ್ನು ಪಡೆಯಲು ನಡೆಸುವ ಹೋರಾಟವನ್ನು ಆಶಾದೇವಿ ಅವರ ವಿಮರ್ಶೆ ಬೇರೆಯದೇ ತೂಕದಲ್ಲಿ ಸಾಧಿಸಿದೆ. ಸ್ತ್ರೀ ವಾದ ನಮಗೆ ಪಶ್ಚಿಮ ದೇಶಗಳ ಕೊಡುಗೆ ಎನ್ನುವುದನ್ನು ಅವರ ಬರಹಗಳು ಅಲ್ಲಗಳೆಯುತ್ತವೆ.

ಈ ಬರಹಗಳನ್ನು ಓದಿದ ಮೇಲೆ ನಾವು, ನಮ್ಮ ಭಾರತದ ಸ್ತ್ರೀಯರು, ನಮ್ಮ ಪುರಾಣಗಳ ಕಾಲದಲ್ಲಿ ತೋರಿಸಿರುವ ವ್ಯಕ್ತಿ ಚಿತ್ರಣಗಳು ಚೆನ್ನಾಗಿ ಮನದಟ್ಟಾಗುತ್ತದೆ. ಹೊಸ ಆಯಾಮಗಳು ಅವರ ಬರವಣಿಗೆಯಲ್ಲಿ ತಿಳಿಯುತ್ತದೆ. ಪ್ರಬುದ್ಧವಾದ ಚಿಂತನಶೀಲವಾದ ಬರಹಗಳು ಈ ಅಂಕಣದಲ್ಲಿ ಬಂದಿವೆ.
–ಭಾರ್ಗವಿ ನಾರಾಯಣ್,
ರಂಗಭೂಮಿ, ಸಿನಿಮಾ ಕಲಾವಿದರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT