ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಸಮೀಕರಣಗಳ ನುಡಿಗಣಿತ

Last Updated 20 ಫೆಬ್ರುವರಿ 2016, 19:40 IST
ಅಕ್ಷರ ಗಾತ್ರ

ಜರ್ಮನಿಯ ವ್ಯಕ್ತಿಗೋ ಚೀನಾದ ವ್ಯಕ್ತಿಗೋ ಆತನ ಭಾಷೆಯಲ್ಲಿ ಎರಡು ವಾಕ್ಯ ಹೇಳಿದರೆ, ಆತ ನಮ್ಮ ಕೆಲಸದಲ್ಲಿ ಸಹಾಯ ಮಾಡಿಯಾನು. ಈ ಭಾಷಾ ಆಮಿಷದ ಪ್ರಕ್ರಿಯೆ ಸಗೋತ್ರ ಭಾಷೆಯೊಂದಿಗೂ, ಎರಡು ರಾಜ್ಯ – ಎರಡು ದೇಶಗಳ ನಡುವೆಯೂ ನಡೆಯಬಹುದು.

ಮಾತೃಭಾಷೆಗೆ ಹೊರತಾದ ಇನ್ನೊಂದು ಭಾಷೆಯ ಅವಶ್ಯಕತೆ ಹುಟ್ಟಿನ ಮೊದಲೇ ಪ್ರಾರಂಭ ಆಗುತ್ತದೆ. ನೆರೆಹೊರೆ, ಮನೆಯ ಬಳಕೆಯ ಭಾಷೆ, ಟೀವಿ, ಇತ್ಯಾದಿ ಮಾಧ್ಯಮಗಳ ಎಡೆಬಿಡದ ಪರಿಣಾಮ, ತಂದೆ ಮತ್ತು ತಾಯಿಯ ಮಾತೃಭಾಷೆ ಬೇರೆಯಾಗಿದ್ದರೆ (ಮುಂದೆ ಚರ್ಚಿಸೋಣ), ಮಗು ಬೆಳೆಯುತ್ತಿರುವ ಮನೆ ಒಟ್ಟು ಕುಟುಂಬವಾದರೆ, ಮಗು ನೋಡಿಕೊಳ್ಳುವ ‘ಆಯಾ’ ಬೇರೆ ಭಾಷಿಕಳಾದರೆ– ಇವೆಲ್ಲವೂ ಹೊರ ಒತ್ತಡವೆಂದೆನಿಸಿದರೂ ಇದರ ಹಿಂದೆ ಒಂದು ವಿಚಿತ್ರ ಅವಶ್ಯಕತೆಯ ವರ್ತುಲ ಅನಿವಾರ್ಯವಾಗೇ ಬೆಳೆಯುತ್ತಿರುತ್ತದೆ.

ಮತ್ತು ಮುಖ್ಯವಾಗಿ ಇದರ ಹಿಂದೆ ಒಂದು ದೊಡ್ಡ ವ್ಯವಹಾರ ನಡೆಯುತ್ತದೆ. ಕೇವಲ ಜ್ಞಾನಕ್ಕಾಗಿ ಒಂದು ಭಾಷೆಯನ್ನು ಕಲಿಯುತ್ತೇನೆ ಎನ್ನುವವರಲ್ಲಿ ಕೂಡ ಒಂದು ಪೂರ್ವನಿರ್ಧಾರಿತ ವ್ಯಾಪಾರ–ವ್ಯವಹಾರದ ಯೋಜನೆ ಇದೆ. ಅವಶ್ಯಕತೆ ನೀಗಿಸುವ, ಜ್ಞಾನ ಹೆಚ್ಚಿಸುವ, ಸಂಬಂಧ ಬೆಳೆಸುವ, ಮತ್ತೊಂದು ಭಾಷೆ ನಮ್ಮದಾದರೆ ಆಗಲಿ ಎನ್ನುವ ಆಶಯ ನನ್ನದು. ರತದ ಇಂದಿನ ಸಂದರ್ಭದಲ್ಲಿ ಇಂಗ್ಲಿಷ್ ಅನ್ನು ಮಾತೃಭಾಷೆಯ ಹೊರತಾಗಿ ನೋಡುವುದೇ ಕಷ್ಟವಾಗಿ ತೋರುತ್ತದೆ. ಭಾರತದ ಯಾವ ಮಾತೃಭಾಷೆಯೂ ಇಂದಿನ ಅವಶ್ಯಕತೆಯನ್ನು ಪೂರೈಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಅದು ಸ್ವತಂತ್ರವಲ್ಲ ಎನ್ನಬೇಕಾಗುತ್ತದೆ.

ಇಂದಿನ ತಾಂತ್ರಿಕ, ವೈದ್ಯಕೀಯ, ರಾಸಾಯನ, ವಿಜ್ಞಾನ ಕ್ಷೇತ್ರಗಳ ಕಲಿಕೆ ನಮ್ಮ ಮಾತೃಭಾಷೆಯಲ್ಲಿ ಸಾಧ್ಯವಿಲ್ಲ. ಇಂಗ್ಲಿಷಿನ ಸುಲಭ ಎರವಲಿನಿಂದ ನಮ್ಮ ಯಾವ ಭಾಷೆಗಳಲ್ಲೂ ಮೇಲೆ ಉಲ್ಲೇಖಿಸಿದ ಕ್ಷೇತ್ರಗಳಿಗೆ ಸಂಬಂಧಿಸಿದ ಶಬ್ದ/ವ್ಯಾಖ್ಯಾನಗಳೇ ಇಲ್ಲ. ಆ ಶಬ್ದಗಳನ್ನು ನಮ್ಮ ಭಾಷೆಯಲ್ಲಿ ನೇರವಾಗಿ ಉಲ್ಲೇಖಿಸಿ ‘ನಮ್ಮ ಭಾಷೆಯು ಶ್ರೀಮಂತವಾಯಿತು’ ಎಂದು ಇಂಗ್ಲಿಷ್‌ನಂತೇ ಹೇಳುವುದು ಒಂದು ರೀತಿಯಲ್ಲಿ ಉಡಾಫೆಯೂ ಪಲಾಯನವಾದವೂ ಆಗುತ್ತದೆ (ಅಂತೆಯೇ ಎಲ್ಲ ಭಾಷೆಯಲ್ಲಿ ಎಲ್ಲ ಭಾಷೆ ಇದೆ ಎಂದೂ ಒಪ್ಪಿಕೊಳ್ಳುತ್ತೇನೆ). 

ನಾವು ನಮ್ಮ ಭಾಷೆಯನ್ನು ಸಶಕ್ತ–ಸ್ವತಂತ್ರ ಮಾಡುವ ಪ್ರಕ್ರಿಯೆಯಲ್ಲಿ ಕೆಲಸ ಮಾಡಲೇ ಇಲ್ಲ ಎಂದು ಹೇಳಬೇಕಾಗುತ್ತದೆ. ಅಂಥ ಕೆಲಸ ನಡೆದಿದ್ದರೆ ಅದು ಕೇವಲ ಸಾಹಿತ್ಯಿಕ ಭಾಷಾಂತರದಲ್ಲಿ. ಇದನ್ನು ಯಾಕೆ ಉಲ್ಲೇಖಿಸುತ್ತಿದ್ದೇನೆ ಎಂದರೆ, ನಮ್ಮ ನೆರೆಯ ಭಾಷೆಗಳಾದ ಚೈನಿ, ಕೊರಿಯ ಮತ್ತು ಜಪಾನಿ ಬಹಳಷ್ಟು ಮಟ್ಟಿಗೆ ಸ್ವತಂತ್ರವಾಗಿವೆ ಹಾಗೂ ವಿಜ್ಞಾನ –ತಂತ್ರಜ್ಞಾನ, ವೈದ್ಯಕೀಯವನ್ನು ಅವರು ಅವರ ಭಾಷೆಯಲ್ಲೇ ಪೂರ್ಣವಾಗಿ ಕಲಿಯಬಹುದು. ಹಾಗಾಗಿ ಈ ಭಾಷೆಗಳನ್ನು ಸ್ವತಂತ್ರ ಮತ್ತು ಇಂಗ್ಲಿಷ್‌ಗೆ ಸಮಾನಂತರವಾಗಿ ಬೆಳೆದ ಭಾಷೆಗಳು ಎನ್ನಬಹುದು. 

ಮಾತೃಭಾಷೆಯಲ್ಲಿ ಕಲಿತ ನನಗೆ ಅಧಿಕೃತವಾಗಿ ಬೇರೆ ಭಾಷೆಯ ಕಲಿಕೆ ಪ್ರಾರಂಭವಾಗಿದ್ದು ಐದನೇ ತರಗತಿಯಲ್ಲಿ, ಇಂಗ್ಲಿಷ್‌ನ ಮೂಲಕ. ನಂತರ ಆರು ಮತ್ತು ಏಳನೇ ತರಗತಿಯಲ್ಲಿ ಹಿಂದಿ ಅಭ್ಯಾಸವೂ ಎಂಟು, ಒಂಬತ್ತು ಹಾಗೂ ಹತ್ತನೇ ತರಗತಿಯಲ್ಲಿ ಸಂಸ್ಕೃತ ಭಾಷೆ ಕಲಿಕೆಯೂ ಆರಂಭವಾಯಿತು. ಈ ಯಾವುದರ ನಿರ್ಧಾರವೂ ನನ್ನದಾಗಿರದೆ, ಅದು ಆ ಸಂದರ್ಭದ ಆಡಳಿತ ವ್ಯವಸ್ಥೆಯದಾಗಿತ್ತು. ಆ ನಿರ್ಧಾರದಲ್ಲಿ ನನಗೆ ಒಪ್ಪಿಗೆ ಇದೆ. ಕಾರಣ, ಅದು ಎರಡು ಮುಖ್ಯ ಕೆಲಸ ಮಾಡುತ್ತವೆ. ಇಂಗ್ಲಿಷ್‌ ಇಂದಿನ ಅವಶ್ಯಕತೆಗೂ ಹಾಗೂ ಸಂಸ್ಕೃತ ದೇಶದ ಪರಂಪರೆಯ, ವೈಭವದ, ಜ್ಞಾನದ ಮುಂದುವರಿಕೆಯ ಭಾಗವಾಗಿ ಅಗತ್ಯ. ಆದರೆ, ಶಾಲೆಗಳಲ್ಲಿ ಸಂಸ್ಕೃತವನ್ನು ಕಲಿತದ್ದು ಮೇಲಿನ ಯಾವ ಕಾರಣಕ್ಕಾಗಿ ಅಲ್ಲ. ಅದು ಸಂಸ್ಕೃತದಿಂದ ಹೆಚ್ಚು ಅಂಕ ಗಳಿಸಬಹುದು ಎನ್ನುವ ಉದ್ದೇಶದ್ದು.

ಇದು ಬೇಸರ ತರುವಂತಹದ್ದು. ಹತ್ತನೇ ತರಗತಿಯ ನಂತರ ತಾಂತ್ರಿಕ ಮತ್ತು ವಿಜ್ಞಾನೇತರ ಶಿಕ್ಷಣದಲ್ಲಿ ಜರ್ಮನ್ ಮತ್ತು ಫ್ರೆಂಚ್ ಭಾಷೆಯ ಕಲಿಕೆ ಇದ್ದರೂ ಅದರ ಮೊದಲ ಉದ್ದೇಶ ಅಂಕ ಹೆಚ್ಚು ಗಳಿಸುವುದು. ಎರಡನೆಯ ಉದ್ದೇಶ– ಭವಿಷ್ಯದಲ್ಲಿ ನನಗೆ ಜರ್ಮನಿಯಲ್ಲಿ ಕೆಲಸ ಸಿಕ್ಕಿದರೆ, ಅಲ್ಲಿಯವನ/ಳನ್ನು ಮದುವೆಯಾದರೆ, ಈ ದೇಶದಲ್ಲಿ ಪ್ರಾರಂಭಿಸುವ ಆಯಾ ದೇಶಗಳ ಕಂಪನಿಯಲ್ಲಿ ಕೆಲಸ ದೊರೆತರೆ... ಇತ್ಯಾದಿ. ಅಂದರೆ, ಜ್ಞಾನವನ್ನು ಎಲ್ಲಿ ಹೇಗೆ ತೊಡಗಿಸಿಕೊಳ್ಳಬಹುದು ಎನ್ನುವ ಉದ್ದೇಶದಿಂದಲೇ ಆಯಾ ಭಾಷೆಯ ಕಲಿಕೆ ಪ್ರಾರಂಭವಾಗಿದ್ದು.

ಒಂದು ಭಾಷೆಯ ಉಳಿವು ಮತ್ತು ಬೆಳವಣಿಗೆ ಅದರ ನಿರಂತರ ಆರ್ಥಿಕ ಬೆಳವಣಿಗೆಯಲ್ಲಿ ತೊಡಗಿಸಿಕೊಳ್ಳುವುದರಲ್ಲಿದೆ. ಹಾಗೆ ಇನ್ನೊಂದು ದಾರಿ ಏನೆಂದರೆ– ಭಾಷೆ ಉಳಿಯುವುದು ನಿರಕ್ಷರತೆಯಿಂದಲೂ. ಇವೆರಡರ ಸಾಮಾನ್ಯ ಕೊಂಡಿಯೇ, ಆರ್ಥಿಕ ಬೆಳವಣಿಗೆಯ ಅವಶ್ಯಕತೆ ಮತ್ತು ಅನಿವಾರ್ಯತೆ. 1998ರ ಹೊತ್ತಿಗೆ ಎರಡು ಪ್ರಮುಖ ವಾಹಿನಿಗಳು ಮುಂಚೂಣಿಯಲ್ಲಿದ್ದವು. ‘ಕಾಲ್ ಸೆಂಟರ್’ ಯುಗ ಪ್ರಾರಂಭವಾಗಿದ್ದುದರಿಂದ ಇಂಗ್ಲಿಷ್‌ ಚೆನ್ನಾಗಿ ಬರುವವರು, ಅದನ್ನು ಅಮೆರಿಕ ಮತ್ತು ಇಂಗ್ಲೆಂಡಿನಲ್ಲಿ ಮಾತನಾಡುವ ಶೈಲಿ(ಎಕ್ಸೆಂಟ್)ಯನ್ನು ಕಲಿಯಲು ಪ್ರಾರಂಭಿಸಿದರು. ಅದಕ್ಕೆ ತರಬೇತಿ ಕೇಂದ್ರಗಳು ಹುಟ್ಟಿಕೊಂಡವು.

ಕಾರಣ ಕಲಿತ ಅಭ್ಯರ್ಥಿಗಳು ಬೆಂಗಳೂರು, ಪೂನಾದಲ್ಲಿ ಕುಳಿತು ಆಯಾ ದೇಶಗಳ ಗ್ರಾಹಕರೊಂದಿಗೆ ಮಾತನಾಡಬೇಕಿತ್ತು ಹಾಗೂ ಅವರ ತೊಂದರೆಯನ್ನು ನೀಗಿಸಬೇಕಿತ್ತು. ಇನ್ನೊಂದು ವಾಹಿನಿ ಎಂದರೆ, ಕಂಪ್ಯೂಟರ್ ಮತ್ತು ಎಂಜಿನೀಯರಿಂಗ್ ಸರ್ವಿಸ್ ಹೊರ ಮತ್ತು ಒಳಗುತ್ತಿಗೆ ಮಾಡುವ ಕಂಪನಿಗಳಿಗೆ ಜಪಾನ್ ದೇಶದ ಕೆಲಸಗಳು ಹೆಚ್ಚಾಗೇ ಪ್ರಾರಂಭವಾಗಿದ್ದವು. ಆಗ ಎಲ್ಲರೂ ಜಪಾನೀಸ್ ಕಲಿಯುವವರೇ. ಅನುವಾದ ಮಾಡುವವರಿಗೂ ಕೈ ತುಂಬಾ ಸಂಬಳ. ಇನ್ನೂ ಮುಖ್ಯವಾದ ವಿಷಯವೆಂದರೆ ಸುಜುಕಿ, ಟೊಯೊಟಾ, ಹುಂಡೈ ಅವರ ವಿಧಾನವೇ ಬೇರೆ.

ಅವರು ತಮ್ಮ ಹೊಸ ಉದ್ಯೋಗಿಗಳನ್ನು ಆಯಾ ದೇಶಕ್ಕೆ ಕಳುಹಿಸಿ ಅಲ್ಲಿ ಅವರ ಭಾಷೆ, ಸಂಸ್ಕೃತಿ, ಕಾರ್ಯ ಪದ್ಧತಿಗಳನ್ನು ಕಲಿಸುತ್ತಾರೆ. ಆ ಸಂದರ್ಭದಲ್ಲಿ ನಡೆದದ್ದು ಹಾಗೆಯೇ. ಅದು ಇಂದಿಗೂ ಇದೆ. 2005ರಿಂದ ಇತ್ತೀಚೆಗೆ ಇದೇ ಟ್ರೆಂಡ್ ಯೂರೋಪಿನ ಕಡೆಗೆ ಹೊರಳಿತು. ಅದರ ಕಾರಣ ಹೆಚ್ಚಿನ ಉದ್ಯೋಗವಕಾಶ, ಉಚಿತ ಉನ್ನತ ಶಿಕ್ಷಣದಿಂದಾಗಿ ಬಹಳ ಜನ ಜರ್ಮನ್ ಕಲಿಯಲು ಪ್ರಾರಂಭಿಸಿದರು. ಕಲಿಯದೇ ಅಲ್ಲಿಗೆ ಹೋದವರೂ ಜರ್ಮನ್ ಕಲಿತರು. ಜರ್ಮನೇತರರಿಗೆ ಅಲ್ಲಿ ಕಡಿಮೆ ಭವಿಷ್ಯದ ಅವಕಾಶ ಇದ್ದುದು ಹಾಗೂ ಜರ್ಮನ್ ಭಾಷೆಯ ಕಲಿಕೆಯನ್ನು ಕಾಯಂ ವೀಸಾಗೆ ಕಡ್ಡಾಯ ಮಾಡಿದ್ದು ಇದಕ್ಕೆ ಕಾರಣ.

2010ರ ನಂತರ ಚೈನಾ ವಿಶ್ವದ ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲು ಪ್ರಾರಂಭಿಸಿದ್ದರಿಂದ, ಅಮೆರಿಕ, ಯುರೋಪ್ ದೇಶಗಳ ಜನರೂ ಉದ್ಯೋಗಕ್ಕಾಗಿ ಚೀನಾದತ್ತ ಮುಖ ಮಾಡಿದರು. ಹೆಚ್ಚಿನವರಿಗೆ ಅನುವಾದಕರಿದ್ದರೂ ಭಾಷೆಯನ್ನು ಸ್ವಲ್ಪವಾದರೂ ಕಲಿಯಲೇಬೇಕಾಯಿತು. ಅಂದಹಾಗೆ, ಏಶಿಯಾ ಹೊರತು ಪಡಿಸಿ ಉಳಿದೆಲ್ಲ ರಾಷ್ಟ್ರಗಳೊಡನೆ ವ್ಯಾಪಾರ ವಹಿವಾಟು ಮಾಡಲು ಅಷ್ಟು ಭಾಷೆಯ ತೊಡಕಿಲ್ಲ. ಕಾರಣ ಹೆಚ್ಚಾಗಿ ಎಲ್ಲರಿಗೂ ಇಂಗ್ಲಿಷ್‌ ಬರುತ್ತದೆ.

ಚೈನಾ, ಜಪಾನ್, ಕೊರಿಯಾಗಳಲ್ಲಿ ವ್ಯಾಪಾರ ಕ್ಷೇತ್ರದ ಎಲ್ಲ ಕಾರ್ಯಗಳಲ್ಲೂ ಅನುವಾದಕರು ತುಂಬಿದ್ದಾರೆ. ಹಾಗಾದರೆ ನಾವ್ಯಾಕೆ ಆಯಾ ಭಾಷೆ ಕಲಿಯಬೇಕು, ಎನ್ನುವ ಪ್ರಶ್ನೆ ಬರುತ್ತದೆ. ಸಾಮಾನ್ಯವಾಗಿ ಹೇಳಿದರೆ, ನಾವು ಬೇರೆ ರಾಜ್ಯ–ದೇಶಗಳಿಗೆ ಹೋದಾಗ ಅಲ್ಲಿ ಅವರಿಗೆ ನಮಗೆ ಗೊತ್ತಿರುವ ಭಾಷೆ ಬರುವುದಿಲ್ಲ. ಬಸ್, ಹೋಟೆಲ್, ಟ್ಯಾಕ್ಸಿಗಳಲ್ಲಿ ಕಷ್ಟವಾಗುತ್ತದೆ ಎಂದು ಹೇಳಬಹುದು. ಅದು ಸರಿಯೇ. ಅದಕ್ಕಿಂತಲೂ ಮುಖ್ಯವಾಗಿ ‘ಅವರು’ ನಾವಾಗದಿದ್ದರೆ, ನಾವು ಅವರಾಗದಿದ್ದರೆ ‘ಡೀಲ್’ ಒಪ್ಪಂದ ಅಥವಾ ಒಪ್ಪಿಗೆ ಆಗುವುದೇ ಇಲ್ಲ. ಅಧಿಕಾರಿ ತನ್ನ ಅಧಿಕಾರವನ್ನು ಚಲಾಯಿಸಿ ಕೆಲಸ ಮಾಡಿಸಬಹುದು. ಕೆಲಸ ಆಗುವುದಿಲ್ಲವೆಂದಲ್ಲ. ನೌಕರನೂ ಕೂಡಾ ಅವನ ಅಧಿಕಾರ ಕಾನೂನು ಪರಿಧಿಯ ಒಳಗೆ ಹೇಗೆ ಕೆಲಸ ಮಾಡದೇ ಇರುವುದು ಮತ್ತು ಅದಕ್ಕೆ ತಕ್ಕ ಕಾರಣ ಹೇಳುವುದನ್ನೂ ಮಾಡಬಹುದು.

ಆಗಲೇ ಭಾಷೆ ತನ್ನ ವಿರಾಟ್ ಸ್ವರೂಪವನ್ನು ತೋರಿಸುವುದು (ಜಾತಿ, ಧರ್ಮ, ಬಣ್ಣ, ದೇಶಗಳ ಕಾರಣಗಳೂ ಇವೆ). ಜರ್ಮನ್‌ನಲ್ಲೋ ಚೈನೀಸ್‌ನಲ್ಲೋ ಎರಡು ವಾಕ್ಯ ಎದುರಿಗಿದ್ದ ನೌಕರನಿಗೆ ಹೇಳಿದರೆ, ಆತ ತನ್ನೆಲ್ಲ ಹಳೆಯ ದ್ವೇಷಗಳನ್ನು ಮರೆತು ನಿಮಗೆ ಸಹಾಯ ಮಾಡಿಯಾನು. ಆಫೀಸಿನಲ್ಲಿ ಹಗಲು ರಾತ್ರಿ ನಿಮ್ಮೊಂದಿಗೆ ಕೈ ಜೋಡಿಸಿಯಾನು. ಈ ಪ್ರಕ್ರಿಯೆ ಸಗೋತ್ರ ಭಾಷೆಯೊಂದಿಗೂ, ಎರಡು ರಾಜ್ಯ, ಎರಡು ದೇಶಗಳ ನಡುವೆಯೂ ನಡೆಯಬಹುದು. ನನ್ನ ಎಷ್ಟೋ ಮರಾಠಿ ಮಿತ್ರರು ಹತ್ತಿರವಾಗಿದ್ದು ಅವರು ನನ್ನೊಂದಿಗೆ ಕನ್ನಡವನ್ನೂ, ನಾನು ಹರಕು ಮುರುಕು ಮರಾಠಿಯೊಂದಿಗೆ– ಹೃದಯನಾಥ ಮಂಗೇಶ್ಕರ್, ಪು.ಲ. ದೇಶಪಾಂಡೆ, ಶ್ರೀನಿವಾಸ ಕಾಳೆ ಅವರ ಬಗ್ಗೆ ಮಾತನಾಡಿದ್ದಕ್ಕೆ.

ಸಂಬಂಧವನ್ನು ಬೆಳೆಸುವಲ್ಲಿನ ಮೊದಲ ಹೆಜ್ಜೆ ಭಾಷೆಯಾಗುತ್ತದೆ. ಜರ್ಮನಿಯಲ್ಲಿ ‘ಥಾಂಕ್ಯು’ ಹೇಳುವ ಬದಲು ‘ದಾಂಕ’ ಅಥವಾ ಚೈನಾದಲ್ಲಿ ‘ಶೆ ಶೆ’ ಹೇಳಿದರೆ, ಅವರು ನಿಮ್ಮನ್ನು ನೋಡುವ ರೀತಿ ಬದಲಿಸಬಹುದು. ಇದನ್ನೇ ಕಂಪೆನಿ ಅಥವಾ ಕಾರ್ಪೊರೇಟ್ ಭಾಷೆಯಲ್ಲಿ ‘ಅನೌಪಚಾರಿಕ ಸಂವಹನ’ (ಇನ್‌ಫಾರ್ಮಲ್ ಕಮ್ಯುನಿಕೇಶನ್) ಎನ್ನುವುದು. ಅದಕ್ಕಾಗೇ ಯಾವ ದೇಶದ ಕಂಪೆನಿಯಾದರೂ ಆಯಾ ದೇಶಗಳಲ್ಲಿ ಅಲ್ಲಿಯವರನ್ನೇ ಮುಖ್ಯಸ್ಥನನ್ನಾಗಿ ಮಾಡಿ, ಅದೊಂದು ಸ್ಥಳೀಯ ಕಂಪೆನಿಯಂತೇ ಬಿಂಬಿಸುವುದು. ಇವೆಲ್ಲವುದಕ್ಕಿಂತಲೂ ಹೆಚ್ಚು ಸಂಕೀರ್ಣತೆ ಪ್ರಸ್ತುತ ಕುಟುಂಬಗಳಲ್ಲಿ ನಡೆಯುತ್ತಿದೆ.

ಉದಾಹರಣೆಗೆ ತಂದೆ ಡಚ್, ತಾಯಿ ಇಸ್ರೇಲಿ ಇರುವ ಕುಟುಂಬ ಇರುವುದು ಚೈನಾದಲ್ಲಿ ಎಂದುಕೊಳ್ಳಿ. ಅಥವಾ ತಂದೆ ಫ್ರೆಂಚ್, ತಾಯಿ ಜಪಾನೀಸ್, ಇರುವುದು ಕೊರಿಯಾದಲ್ಲಿ ಎಂದು ಇಟ್ಟುಕೊಳ್ಳೋಣ. ಆಗ, ಮಗ ಅಥವಾ ಮಗಳನ್ನು ಯಾವ ಶಾಲೆಗೆ ಕಳುಹಿಸುವುದು ಅನ್ನುವ ಪ್ರಶ್ನೆ ಉಂಟಾಗುತ್ತದೆ. ತುಂಬಾ ಜಗಳದ ನಂತರ ‘ಯಾವ ಭಾಷೆಯೂ ಬೇಡ’ ಎಂದು ಇಂಗ್ಲಿಷ್ ಶಾಲೆಗೆ ಹಾಕಿರುವ ಉದಾಹರಣೆಗಳಿವೆ. ತಂದೆ ಫ್ರೆಂಚ್ ಶಾಲೆಗೆ ಹಾಕಿ, ಎರಡು ವರ್ಷದ ನಂತರ ತಂದೆಗೆ ಗೊತ್ತಿಲ್ಲದೇ ತಾಯಿ ಮಗುವನ್ನು ಜಪಾನೀಸ್ ಕಲಿಸುವ ಶಾಲೆಗೆ ಹಾಕಿದ್ದಿದೆ. ಇನ್ನು ಕೆಲವರು ನಮ್ಮ ಭಾಷೆಯನ್ನು ನಾವು ಮನೆಯಲ್ಲಿ ಹೇಳಿಕೊಡೋಣ, ಉಳಿದಂತೆ ಮಗು ಈ ದೇಶದ ಭಾಷೆ ಕಲಿತರೆ ಒಳ್ಳೆಯದು ಎನ್ನುವ ‘ಕಲಿಕಾ ಭಾಷೆಯ ಸಂಖ್ಯೆ’ಯನ್ನು ಹೆಚ್ಚಿಸುತ್ತಾರೆ.

ಈ ಎಲ್ಲ ಸಂದಿಗ್ಧತೆಯಲ್ಲಿ ಇಂದಿನ ಪಾಲಕರು ಮತ್ತು ಮಕ್ಕಳು ಇದ್ದಾರೆ. ಭಾರತದ ಸಂದರ್ಭದಲ್ಲಿ ಮೇಲೆ ಹೇಳಿದ ಸಮೀಕರಣ ಕಂಪೆನಿ ಅಥವಾ ಕುಟುಂಬದಲ್ಲಿ ಹೆಚ್ಚು ಲಾಗೂ ಆಗುವುದಿಲ್ಲ. ಭಾರತದ ಕಂಪೆನಿಯ ಮುಖ್ಯಸ್ಥ ಇಂಗ್ಲಿಷ್‌ನವನಾದರೆ ಆಗುವ ವ್ಯವಹಾರ, ವಹಿವಾಟು, ಒಪ್ಪಂದಗಳು ಹೆಚ್ಚು! ನಮಗೂ ನಮ್ಮ ಮೇಲಧಿಕಾರಿ ಇಂಗ್ಲಿಷ್‌ನವನಾದರೆ ಹೆಮ್ಮೆ! (ಇದು ಲೋಹಿಯಾರವರ ಕಪ್ಪು ಬಿಳುಪಿನ ಪ್ರತಿಪಾದನೆಗೆ ಹತ್ತಿರವಾಗಿದೆ). ಕುಟುಂಬದಲ್ಲಿ ತಂದೆ ತಾಯಿ ಯಾವ ಭಾಷಿಕರೇ ಇರಲಿ, ಮಗ/ಳು ಇಂಗ್ಲಿಷ್ ಮಾಧ್ಯಮದಲ್ಲಿ ಕಲಿಯಬೇಕು ಎಂದು ಇರುವುದರಿಂದ ಈ ಗೊಂದಲವಿಲ್ಲ!

ವೈಯಕ್ತಿಕವಾಗಿ ಹೇಳುವುದಾದರೆ– ಬಹಳ ಭಾಷೆ ಹಾಗೂ ಜನರ ಒಡನಾಟದಿಂದ ಇಂದಿನ ನನ್ನ ಮಾತೃಭಾಷೆಯ ಸಾಧ್ಯತೆಗಳ ಅರಿವು, ಒಂದು ಮಟ್ಟಕ್ಕೆ ಈ ಭಾಷೆ ಏರಲು ಬೇಕಾಗುವ ಸಿದ್ಧತೆಗಳು ಅರ್ಥವಾಗುತ್ತಿವೆ. ಈ ಅರಿವು ಜವಾಬ್ದಾರಿಯತ್ತ ತಿರುಗಿದೆ. ಪಾಶ್ಚಾತ್ಯ ಲೇಖಕರ ಸೌಂದರ್ಯ ಶಾಸ್ತ್ರ, ವಿನ್ಯಾಸ, ಸತ್ಯ ಮತ್ತು ಸೌಂದರ್ಯಗಳ ಕಲ್ಪನೆಗಳೊಂದಿಗೆ, ಆನಂದವರ್ಧನ – ಅಭಿನವಗುಪ್ತರ ಮೀಮಾಂಸೆಗಳನ್ನು ನೋಡಿ ಬೆರಗಾಗಿದ್ದೇನೆ, ಹೆಮ್ಮೆಪಟ್ಟಿದ್ದೇನೆ. ಹಾಗಾಗಿ ಮತ್ತೆ ನನ್ನ ಆಸಕ್ತಿ ಮಾತೃಭಾಷೆಯ ಜ್ಞಾನಸಂಪತ್ತಿನ ಕಡೆಗೆ ತಿರುಗಿದೆ. ಇದು ನನಗೆ ನೇರವಾಗಿ ಓದುವುದು, ಕೇವಲ ಕೇಳುವುದರಿಂದ ತಿಳಿಯದೇ ಒಂದು ‘ಅನುಭವ’ವಾಗಿ ನನ್ನದಾಗಿದೆ. ಹಾಗಾಗಿ ಇದರ ಮೌಲ್ಯ ದೊಡ್ಡದು.

ಇರಲಿ. ನಾಲ್ಕು ವಾರದ ಹಿಂದೆ ನನ್ನ ಕೊರಿಯ ಮಿತ್ರನೊಡನೆ ಊಟ ಮಾಡುತ್ತಿರುವಾಗ ಕೇಳಿದೆ– ‘ನಿಮ್ಮ ಭಾಷೆಯಲ್ಲಿ ತಾಯಿ, ತಂದೆಯನ್ನು ಏನೆಂದು ಕರೆಯುತ್ತಾರೆ?’. ಆತ ಹೇಳಿದ ‘ಅಮ್ಮ... ಅಪ್ಪ...’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT