ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸಿವೆಂಬ ಹೆಬ್ಬಾವು ಮತ್ತು ನಾವು

ಓದುಗರ ವೇದಿಕೆ
ಅಕ್ಷರ ಗಾತ್ರ

ಕೆಲವು ದಿನಗಳ ಹಿಂದೆ ವಿಶ್ವಸಂಸ್ಥೆಯ ‘ಆಹಾರ ಮತ್ತು ಕೃಷಿ ಸಂಸ್ಥೆ’ (ಎಫ್.ಎ.ಓ) ಬಿಡುಗಡೆಗೊಳಿಸಿದ ವರದಿ, ಶೇ 33ರಷ್ಟು ಯಾರೂ ತಿನ್ನಲಾಗದೇ ಪೋಲಾಗುತ್ತಿದೆ ಎಂದು ಹೇಳಿದೆ. ಎಲ್ಲರಿಗೂ ಸಾಕಾಗುವಷ್ಟು ಆಹಾರ ಉತ್ಪಾದನೆಯಾಗುತ್ತಿದ್ದರೂ ಸುಮಾರು ೮೦ ಕೋಟಿ ಜನರಿಗೆ ಆಹಾರ ಸಿಗುತ್ತಿಲ್ಲ ಎನ್ನುವ ವಿಪರ್ಯಾಸ ನಮ್ಮದು.

ಪ್ರಸ್ತುತ ಪೋಲಾಗುತ್ತಿರುವ ಶೇ. ೩೩ರಷ್ಟು ಆಹಾರದಲ್ಲಿ 200 ಕೋಟಿಗೂ ಹೆಚ್ಚು ಜನರ ಹಸಿವನ್ನು, ಅಪೌಷ್ಟಿಕತೆಯನ್ನು ಸುಲಭವಾಗಿ ದೂರ ಮಾಡಬಹುದು. ಇನ್ನೊಂದು ಅರ್ಥದಲ್ಲಿ, ಎಲ್ಲ ಜನರೂ ಒಟ್ಟು ಹಾಳು ಮಾಡುತ್ತಿರುವ ಆಹಾರದಿಂದ ಪ್ರತಿ ಹಸಿದ ಹೊಟ್ಟೆಗೂ ದಿನಕ್ಕೆ ಮೂರು ಬಾರಿ ಊಟ ಹಾಕಬಹುದು. ಬೆಳೆದ ಆಹಾರವನ್ನು ಸಂರಕ್ಷಿಸದ ಮತ್ತು ವ್ಯರ್ಥವಾಗಿ ಪೋಲು ಮಾಡುವ ನಮ್ಮ ವಿವೇಚನಾರಹಿತ ನಡೆ ನಿಜಕ್ಕೂ ಅಕ್ಷಮ್ಯ.

ಜಗತ್ತಿನ ಬಹುತೇಕ ರಾಷ್ಟ್ರಗಳಲ್ಲಿ ಬೆಳೆದ ಆಹಾರವನ್ನು ಸೂಕ್ತವಾಗಿ ಸಂರಕ್ಷಿಸುವ ಸೌಲಭ್ಯಗಳ ಕೊರತೆಗಳನ್ನು ಕಾಣುತ್ತೇವೆ. ಬೆಳೆದ ಆಹಾರ ಧಾನ್ಯಗಳನ್ನು ಬಯಲಿನಲ್ಲಿಯೇ ಸುರಿಯುವ ಪಾರಂಪರಿಕ ಪದ್ಧತಿಯನ್ನು ಕೆಲವರು ಅನುಸರಿಸುತ್ತಿದ್ದಾರೆ.

ಇದರಿಂದ ಹೆಚ್ಚು ಪ್ರಮಾಣದ ಆಹಾರ ಹಸಿದ ಹೊಟ್ಟೆ ಸೇರುವ ಮುನ್ನವೇ ಕೊಳೆತು ನಾಶವಾಗುತ್ತಿದೆ. ಹಣ್ಣು ತರಕಾರಿಗಳನ್ನು ಸಂರಕ್ಷಿಸುವ ಶೈತ್ಯಾಗಾರಗಳ ಕೊರತೆಯಿಂದಾಗಿ ಅವು ಕೂಡ ವ್ಯರ್ಥವಾಗಿ ಹಾಳಾಗುತ್ತಿವೆ. ಸರಿಯಾದ ಸಾರಿಗೆ ಸಂಪರ್ಕದ ವ್ಯವಸ್ಥೆಯಿಲ್ಲದಿರುವುದು ಕೂಡ ಮತ್ತೊಂದು ಕಾರಣವೇ ಆಗಿದೆ.

ಇದಕ್ಕೆ ಸಮಾನಾಂತರವಾಗಿ ಮಹಾನಗರಗಳಲ್ಲಿರುವ ದೊಡ್ಡ ದೊಡ್ಡ ಉದ್ದಿಮೆದಾರರು ಕೇವಲ ಲಾಭಗಳಿಸುವ ಉದ್ದೇಶದಿಂದ ಅಗತ್ಯಕ್ಕಿಂತ ಹೆಚ್ಚು ಆಹಾರ ಧಾನ್ಯ, ತರಕಾರಿ, ಹಣ್ಣು ಇತ್ಯಾದಿಗಳನ್ನು ಸಗಟಾಗಿ ಖರೀದಿಸಿ ಮಾಲ್‌ಗಳಲ್ಲಿ ಸರಿಯಾಗಿ ಸಂರಕ್ಷಿಸದೇ ತಿಪ್ಪೆಗೆ ಎಸೆಯುವ ಪದ್ಧತಿಯನ್ನು ಅನುಸರಿಸುತ್ತಲೇ ಇದ್ದಾರೆ.

ಮದುವೆ, ಸಭೆ, ಸಮಾರಂಭಗಳಲ್ಲಿ ಪ್ರತಿಷ್ಠೆಯ ಕಾರಣಕ್ಕಾಗಿ ನೂರೆಂಟು ರೀತಿಯ ಆಹಾರವನ್ನು ತಯಾರಿಸುವುದು, ಅಲ್ಲಿಗೆ ಹೋದ ಜನರೆಲ್ಲ ತಮಗೆ ಬೇಕು ಬೇಡಾದದ್ದನ್ನೆಲ್ಲ ತಟ್ಟೆಗೆ ವಿವೇಚನೆಯಿಲ್ಲದೇ ಹಾಕಿಸಿಕೊಂಡು ಕಾಟಾಚಾರಕ್ಕೆ ಸ್ವಲ್ಪ ಮಾತ್ರವೇ ತಿಂದು, ಉಳಿದೆಲ್ಲವನ್ನೂ ಮುಲಾಜಿಲ್ಲದೇ ಕಸದ ಬುಟ್ಟಿಗೆ ಸುರಿಯುವ ಪದ್ಧತಿ ಮುಂದುವರೆದೇ ಇದೆ.

ಇನ್ನು ಪಾರ್ಟಿ ನೆಪದಲ್ಲಿ ಪ್ರತಿಷ್ಠಿತ ಹೋಟೆಲ್‌ಗಳಿಗೆ, ತಮ್ಮ ಅಗತ್ಯಕ್ಕಿಂತ ಹೆಚ್ಚು ಆರ್ಡ್‌ರ ಮಾಡಿ ತಿನ್ನದೇ ಉಳಿಸುವವರು ಒಂದಡೆಯಾದರೆ, ತಟ್ಟೆಯಲ್ಲಿ ಎಲ್ಲವನ್ನೂ ತಿನ್ನದೇ ಉಳಿಸಿ ದೊಡ್ಡಸ್ತಿಕೆಯನ್ನು ಪ್ರದರ್ಶಿಸುವವರ ಸಂಖ್ಯೆಗೇನೂ ಕೊರತೆಯಿಲ್ಲ. ಮನೆಯಲ್ಲಿ ಕೂಡ ತಮ್ಮ ಕುಟುಂಬಕ್ಕೆ ಎಷ್ಟು ಅಗತ್ಯವಿದೆ ಎಂಬ ಲೆಕ್ಕಾಚಾರ ಮಾಡದೇ ಬೇಕಾಬಿಟ್ಟಿಯಾಗಿ ಆಹಾರ ತಯಾರಿಸಿ ಉಳಿದದ್ದನ್ನು ಚೆಲ್ಲುವ ಜನರೂ ಸಾಕಷ್ಟಿದ್ದಾರೆ.

ತಿಂದಿದ್ದನ್ನು ಜೀರ್ಣಿಸಿಕೊಳ್ಳಲು ಗುಳಿಗೆ ತಿನ್ನುವ ಜನರ ಮಧ್ಯೆಯೇ ತಮ್ಮ ಹಸಿವೆ ಹಿಂಗಿಸಲು ತುತ್ತು ಆಹಾರಕ್ಕಾಗಿ ಅಂಗಲಾಚುವ ಜನರ ಬದುಕಿನ ಬವಣೆಯನ್ನು ನಾವು ಗಮನಿಸಬೇಕಿರುವುದು ನಮ್ಮ ಇಂದಿನ ತುರ್ತಾಗಿದೆ. ಹಸಿವಿನ ಕಠೋರತೆಯ ಮುಖವನ್ನು ನಾವು ಅರಿತುಕೊಂಡು ಅನ್ನವನ್ನು ವ್ಯರ್ಥಗೊಳಿಸುವ ನಮ್ಮ ವಿವೇಚನಾ ರೀತಿ ನೀತಿಗಳಿಗೆ ಕಡಿವಾಣ ಹಾಕಬೇಕಿದೆ.

ಪ್ರತಿ ಅನ್ನದ ಅಗುಳನ್ನೂ ದೇವರೆಂದೇ ಪೂಜಿಸಿದ ನಮ್ಮ ನೆಲದ ಜೇಡರ ದಾಸಿಮಯ್ಯನ ದಂತಕಥೆಯನ್ನೊಮ್ಮೆ ನೆನಪಿಸಿಕೊಳ್ಳುವುದು ಸೂಕ್ತ. ಬಡ ನೇಕಾರ ಕುಟುಂಬದಲ್ಲಿ ಜನಿಸಿದ ದಾಸಿಮಯ್ಯ ಮನೆಯಲ್ಲಿ ಪಾರಂಪಾರಿಕವಾಗಿ ಸಾಗಿ ಬಂದಿದ್ದ ನೇಕಾರಿಕೆ ಉದ್ಯೋಗ ಮುಂದುವರೆಸಿದ ಸಮಯದಲ್ಲಿ, ದುಗ್ಗಳೆ ಅವನ ಧರ್ಮಪತ್ನಿಯಾಗಿ ಬದುಕಿನ ಬಂಡಿ ಎಳೆಯಲು ಜೊತೆಯಾಗುತ್ತಾಳೆ.

ತನ್ನ ಊರಿನ ಸುತ್ತಲಿನ ಗ್ರಾಮದ ಹೊಲಗಳಿಗೆ ಅಲೆದು ಹತ್ತಿಯನ್ನು ಸಂಗ್ರಹಿಸಿ ತಂದು, ಅದನ್ನು ತಾಳ್ಮೆಯಿಂದ ಹಿಂಜಿ ನೂಲನ್ನಾಗಿ ಪರಿವರ್ತಿಸಿ ಗಂಡನಿಗೆ ನೀಡಿದಾಗ ಅವನು ಅದನ್ನು ಅತ್ಯಂತ ಭಕ್ತಿಯಿಂದ – ರಾಮನಾಥನ ಪೂಜೆಯೆಂದೇ ಭಾವಿಸಿ ವಸ್ತ್ರವನ್ನು ತಯಾರಿಸುತ್ತಾನೆ. ಆ ವಸ್ತ್ರದ ಮಾರಾಟದಿಂದ ಬಂದ ಹಣದಿಂದ ಬೇಕಾದ ವಸ್ತು ತಂದು ದುಗ್ಗಳೆಗೆ ನೀಡಿದಾಗ ಅವಳು ಅದರಿಂದ ಪ್ರಸಾದ ತಯಾರಿಸಿ ಪತಿಗೆ ಬಡಿಸುತ್ತಿದ್ದಳು.

ಮದುವೆಯಾದ ಮೊದಲ ದಿನವೇ ಊಟಕ್ಕೆ ಬಡಿಸುವಾಗ ರಾಮನಾಥ ದುಗ್ಗಳೆಗೆ ಊಟದ ತಟ್ಟೆ, ಕೂಡಲು ಮಣೆ, ನೀರು ಇವುಗಳ ಜೊತೆಗೆ ಒಂದು ಸೂಜಿಯನ್ನು ಇಡು ಎಂದು ಹೇಳುತ್ತಾನೆ. ದುಗ್ಗಳೆಗೆ ಸೂಜಿ ಇಡುವುದು ಏಕೆ ಎಂದು ಅರ್ಥವಾಗದೇ ಹೋದರೂ ಅವಳು ಎಂದು ಅದನ್ನು ಕುರಿತು ಮರುಪ್ರಶ್ನಿಸಿದೆ ಅವನು ಹೇಳಿದಂತೆ ನಿತ್ಯವೂ ಅದನ್ನು ಪರಿಪಾಲಿಸುತ್ತಾಳೆ.

ದೀರ್ಘ ಕಾಲದ ಅನ್ಯೋನ್ಯ ದಾಂಪತ್ಯದ ಕೊನೆಯ ಕ್ಷಣಗಳಲ್ಲಿ ದಾಸಿಮಯ್ಯ ಕೊನೆ ಉಸಿರು ಎಳೆಯುವಾಗ ಪಕ್ಕದಲ್ಲಿ ಇದ್ದ ದುಗ್ಗಳೆ – ‘ನಾನು ಇಂದು ನನ್ನ ಮನದಾಳದಲ್ಲಿ ಕಾಡುವ ಒಂದು ಪ್ರಶ್ನೆಗೆ ಉತ್ತರ ಕೇಳದೇ ಹೋದರೆ ಅದು ನನಗೆ ಪ್ರಶ್ನೆಯಾಗಿ ಉಳಿದು ಬಿಡುತ್ತದೆ. ಆ ಕಾರಣಕ್ಕಾಗಿ ತಾವು ಒಪ್ಪಿದರೆ ಒಂದು ಪ್ರಶ್ನೆ ಕೇಳಲೆ?’ ಎಂದು ಬಿನ್ನವಿಸಿದಾಗ ದಾಸಿಮಯ್ಯ ನಕ್ಕು ‘ಎಂಥ ಮುಗ್ಧಳು ನೀನು? ಅದೇನು ಕೇಳು’ ಎನ್ನುತ್ತಾನೆ.

ಆಗ ದುಗ್ಗಳೆ ‘ಊಟಕ್ಕೆ ಬಡಿಸುವಾಗ ಎಲ್ಲ ವಸ್ತುಗಳ ಜೊತೆಗೆ ಸೂಜಿ ಇಡು ಎನ್ನುವ ಮಾತು ನನಗೆ ಇಲ್ಲಿಯವರೆಗೂ ಅರ್ಥವಾಗಲಿಲ್ಲ, ಅದು ಏಕೆ?’ ಎನ್ನುತ್ತಾಳೆ. ‘ನೀನು ಊಟ ಬಡಿಸುವಾಗ, ಕೈಯಿಂದ ಎತ್ತಲಾರದಷ್ಟು ಚಿಕ್ಕದಾದ ಅನ್ನದ ಅಗುಳು ಚೆಲ್ಲಿದರೆ, ಅಥವಾ ನಾನು ಚೆಲ್ಲಿದರೆ, ಉಳಿಸಿದರೆ, ಅದನ್ನು ವ್ಯರ್ಥ ಮಾಡದಿರಲು ಸೂಜಿಯಿಂದ ಎತ್ತಿ ಸ್ವೀಕರಿಸಬೇಕೆಂದುಕೊಂಡಿದ್ದೆ. ಆದರೆ ಒಂದೂ ದಿನವೂ ಹಾಗೆ ನೀನು ಮಾಡಲೇ ಇಲ್ಲ’ ಎಂದು ಹೇಳಿ ದಾಸಿಮಯ್ಯ ಕೊನೆಯುಸಿರು ಎಳೆಯುತ್ತಾರೆ. ಈ ಕಥೆಯ ತಿರುಳು ಇಂದಿಗೆ ಹೆಚ್ಚು ಅಗತ್ಯ.

ಭೋಗ ಸಂಸ್ಕೃತಿಯ ಅಂಧಾನುಕರಣೆಯಲ್ಲಿ ಸಾಗುತ್ತಿರುವ ನಮಗೆ ಅನ್ನದ ಅಗುಳನ್ನು ರಾಮನಾಥ ಎಂದೇ ಭಾವಿಸಿ ಪೂಜಿಸಿದ ದಾಸಿಮಯ್ಯನ ವ್ಯಕ್ತಿತ್ವ, ‘ಅನ್ನ ದೇವರಿಗಿಂತ ಇನ್ನು ದೇವರಿಲ್ಲ’ ಎನ್ನುವ ನಮ್ಮ ಹಿರಿಯ ನಂಬಿಕೆ, ‘ಅನ್ನವೇ ಬ್ರಹ್ಮ’ ಎಂಬ ವೇದದ ವಾಕ್ಯ, ‘ಎಷ್ಟು ನೀನುಂಡರೇನ್ ಪುಷ್ಟಿ ಮೈಗಾಗುವುದು, ಹೊಟ್ಟೆ ಜೀರ್ಣಿಸಿದಷ್ಟೇ ಮಿಕ್ಕುದೆಲ್ಲ ಕಸ’ ಎನ್ನುವ ಡಿ.ವಿ.ಜಿ. ಅವರ ಮಾತುಗಳೆಲ್ಲವನ್ನು ನಾವು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಿದೆ.

ಇದು ನಮ್ಮ ನಿತ್ಯದ ನಡೆಯಾಗಬೇಕಿದೆ. ಮುಂದಿನ ದಿನಮಾನಗಳಲ್ಲಿ ಆಹಾರದ ಸಮಸ್ಯೆ ಇನ್ನಷ್ಟು ಬಿಗಡಾಯಿಸುವ ಮುನ್ನ ನಾವೆಲ್ಲ ವಿವೇಚನೆಯಿಂದ ಹೆಜ್ಜೆ ಇರಿಸಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT