ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸ ಹೊಸ ಊರು ಮತ್ತು ಉತ್ತಮ ನಾನ್‌ವೆಜ್ ಹೋಟೆಲ್ಲು

ಮಂದಹಾಸ
Last Updated 26 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಹುಬ್ಬಳ್ಳಿಯಲ್ಲಿ ಸಮ್ಮೇಳನವಾದಾಗ 1991ನೇ ಇಸ್ವಿ. ಆಗ ನಾವು ಹಳಿಯಾಳದಲ್ಲಿದ್ದೆವು. ನಾನಿನ್ನೂ ಬರವಣಿಗೆ ಆರಂಭಿಸಿರಲಿಲ್ಲ. ಆಗ ಕವಿಗೋಷ್ಠಿಯೊಂದನ್ನೇ ಆಲಿಸಿ (ಆಗ ಬಂಡಾಯ ಕವಿ ಸುಕನ್ಯಾ ಮಾರುತಿ ‘ಸೀತೆ’ ಕವಿತೆ ಓದಿದ್ದರು) ಹೊರಬಂದು ಹುಬ್ಬಳ್ಳಿ ಮಾರ್ಕೆಟ್ಟು ಸುತ್ತಾಡಿ; ಮನೆಗೆ ಬೇಕಾಗುವ ಬೆಡ್‌ಶೀಟು, ಗೋಡೆ ಗಡಿಯಾರ, ಚಹದ ಬಾಂಡಲಿಯನ್ನು ಖರೀದಿಸಿ ಹಿಂತಿರುಗಿದ್ದೆವು. ಹಾಗಾಗಿ ಇವತ್ತಿಗೂ ಆ ಚಹದ ಬಾಂಡಲೆ ಹಿಡಿದಾಗಲೆಲ್ಲ ಹುಬ್ಬಳ್ಳಿಯ ಸಮ್ಮೇಳನ ಮತ್ತು ಸುಕನ್ಯಾ ಕವನ ವಾಚನ ನೆನಪಾಗುತ್ತದೆ.

ಬೆಳಗಾವಿಯಲ್ಲಿ ಪಾಟೀಲ ಪುಟ್ಟಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಾಹಿತ್ಯ ಸಮ್ಮೇಳನವು ನಾನು ಮೂರೂ ದಿನಗಳ ಕಾಲ ವಿರಾಮದಲ್ಲಿ ಕೂತು ಸವಿದ ಸಮ್ಮೇಳನ. ಆಗ ನಮ್ಮ ಅಂಕೋಲಾದ ರಾಘವೇಂದ್ರ ಪ್ರಕಾಶನದ ಪುಸ್ತಕದಂಗಡಿಯಲ್ಲಿ ವಿಷ್ಣು ನಾಯ್ಕರ ಪತ್ನಿ ಕವಿತಕ್ಕನೊಂದಿಗೆ ಕೂತು; ಪುಸ್ತಕ ಪ್ರೀಯರನ್ನು ವೀಕ್ಷಿಸುತ್ತಲೇ ವೇದಿಕೆ ಭಾಷಣ, ಚರ್ಚೆಗಳನ್ನು ಆಲಿಸುವ ಉತ್ಸಾಹ. ಆ ದಿನ ರಾಘವೇಂದ್ರ ಪ್ರಕಾಶನದಿಂದಲೇ ಪ್ರಕಟಣೆಗೊಂಡ ನನ್ನ ಗಂಡ ಪ್ರಕಾಶ್‌ನ ‘ಆ ಹುಡುಗಿ’ ಸಂಕಲನವನ್ನು ಸಮ್ಮೇಳನಕ್ಕೆ ಬಂದ ಒಬ್ಬ ಸ್ನೇಹಿತರಿಗೆ ಉಚಿತವಾಗಿ ಒಂದು ಪ್ರತಿ ಕೊಟ್ಟು, ವಿಷ್ಣು ನಾಯ್ಕರ ಹತ್ತಿರ ಬೈಸಿಕೊಂಡಿದ್ದೆ. ಅಂದು ಕವಿತಕ್ಕ ರಮಿಸುತ್ತ ಊಟ ಮಾಡಿಸಿದ್ದರು.

ಗದುಗಿನ ಸಮ್ಮೇಳನವನ್ನು ಒಂದು ದೊಡ್ಡ ಬಯಲಲ್ಲಿ ಹಾಕಿದ ಪೆಂಡಾಲಿನಡಿ ಏರ್ಪಡಿಸಿದ್ದುದರಿಂದ; ಜನದಟ್ಟಣೆಯ ಸರಭರಕ್ಕೆ ಮಣ್ಣಿನ ಹುಡಿ ಹಾರುತ್ತ ಆವರಣದ ತುಂಬ ಕಾಲ್ದೂಳಿ ಮೋಡ ತೀರಾ ಸಾಮಾನ್ಯವಾಗಿತ್ತು. ಸೆಖೆ ಬಾಯಾರಿಕೆ ಬಿಸಿಲಿನ ಝಳವಂತೂ ಎಲ್ಲ ಸಮ್ಮೇಳನದಲ್ಲೂ ಇದ್ದದ್ದೇ. ಟೀವಿ ವಾತೆಯಲ್ಲಿ ಬಂದ ಸುದ್ದಿಯಂತೆ ಅಲ್ಲಿನ ದೂಳಿಗೆ ಬೆದರಿ, ಸೈನರೈಟಿಸ್ ಸಮಸ್ಯೆ ಶುರುವಾದೀತೆಂದು ನಾನು ಮಾಸ್ಕ್ ತೊಟ್ಟು ಹೋಗಿದ್ದೆ, ಎದುರಿಗೇ ಹಾದು ಹೋದ ಆತ್ಮೀಯ ಬರಹಗಾರರೊಬ್ಬರು ನನ್ನ ಗುರುತೇ ಹಿಡಿದಿರಲಿಲ್ಲ. ನಾನೇ ಓಡಿ ಹೋಗಿ ಮಾಸ್ಕ್ ತೆಗೆದು ಅವರನ್ನು ಮಾತಾಡಿಸಬೇಕಾಯ್ತು. ಈಗಲೂ ಅವರು ನನ್ನನ್ನು ಮಾಸ್ಕ್ ಕಥೆಗಾರ್ತಿ ಅಂತ ತಮಾಷೆ ಮಾಡುವುದಿದೆ.

ತುಂಬ ದಿನಗಳಿಂದ ಭರತನಾಟ್ಯ ಕಲೆಯ ಪುಸ್ತಕವೊಂದನ್ನು ಹುಡುಕುತ್ತಿದ್ದ ನನ್ನ ಮಗಳಿಗೆ ಗಂಗಾವತಿಯಲ್ಲಿ ನಡೆದ ಸಮ್ಮೇಳನದ ಪುಸ್ತಕದಂಗಡಿಯೊಂದರಲ್ಲಿ ಅದನ್ನು ಕಂಡು ಎಲ್ಲಿಲ್ಲದ ಹರ್ಷೋದ್ಘಾರ ಹೊಮ್ಮಿಬಿಟ್ಟಿತ್ತು. ಅಲ್ಲಿಯೇ ನನ್ನ ಮಗಳು ತನಗೊಂದು ಸ್ಕೂಲ್ ಬ್ಯಾಗೂ ಬೇಕೆಂದು ಹಟ ಹಿಡಿದಾಗ ಅದರ ಖರೀದಿಯೂ ಆದದ್ದುಂಟು. ಈ ಸಮ್ಮೇಳನದಲ್ಲಿ ಮೊದಲ ಸಲ ಸಿಕ್ಕ ಹೊಸ ಬರಹಗಾರನೊಬ್ಬ ಈಗ ಯಾವುದೇ ಸಮ್ಮೇಳನದಲ್ಲಿ ಪುನಃ ಮುಖಾಮುಖಿಯಾಗಿಯೇ ಬಿಟ್ಟರೆ ‘ಗಂಗಾವತಿ  ಸಮ್ಮೇಳನ’ ಅಂತ ಮತ್ತೆ ಮತ್ತೆ ನೆನಪಿಸುವುದಿದೆ.

ಕೆಲ ಸ್ನೇಹಿತರ ಪುಸ್ತಕ ಮಳಿಗೆಗಳಲ್ಲಿ ಅವರನ್ನು ಊಟಕ್ಕೋ; ಕಾಲಾಡಿಸಿಕೊಂಡು ಬರಲೋ ಬಿಟ್ಟು, ನಾವು ಅವರ ಪುಸ್ತಕದಂಗಡಿಗಳಲ್ಲಿ ಕೂತುಕೊಳ್ಳುವ ಅನುಭವ ಇನ್ನೂ ಸ್ವಾರಸ್ಯರವಾದದ್ದು. ಆಗೆಲ್ಲ ಇಡೀ ಪುಸ್ತದಂಗಡಿಗೆ ನಾವೇ ಯಜಮಾನರೆಂಬ ಹುಸಿ ಹೆಮ್ಮೆಯೊಂದು ಮುತ್ತಿಕೊಂಡಿರುತ್ತದೆ. ಆ ಅರ್ಧ ಗಂಟೆಯಲ್ಲಿ ವ್ಯಾಪಾರವಾದ ಹಣವನ್ನು ಹಾಕಿಡಲು ಅವರ ದುಡ್ಡಿನ ಪೆಟ್ಟಿಗೆ ತೆರೆಯುವಾಗ ಮಾತ್ರ ಕೈ ಕೊಂಚ ಅದುರುತ್ತದೆ.

ಅಲ್ಲೆಲ್ಲ ರಂಗುರಂಗಿನ ವಸ್ತ್ರ ತೊಟ್ಟ ಹೆಂಗಸರು ತಮ್ಮ ಮಕ್ಕಳನ್ನು ಕರಕೊಂಡು ಪುಸ್ತಕದಂಗಡಿ ಪರಿವೀಕ್ಷಣೆಯಲ್ಲಿ ತೊಡಗಿರುವ ನೋಟ ನನಗೆ ಯಾವಾಗಲೂ ಖುಷಿ ತರುವ ಸಂಗತಿ. ‘ಮಕ್ಕಳು ಓದುವಂಥ ಪುಸ್ತಕ ಯಾವುದಿದೆ?’ ಅನ್ನುವ ಅವರ ಪ್ರಶ್ನೆಗೆ ತಡಬಡಾಯಿಸುತ್ತ ಆರೆಂಟು ಮಕ್ಕಳ ಸಾಹಿತಿಗಳ ಹೆಸರನ್ನು ನೆನಪಿಸಿಕೊಳ್ಳುವಲ್ಲಿ ಸುಸ್ತಾಗಿದ್ದಿದೆ, ಅಂಥ ಅನುಪಮವಾದೊಂದು ಗಳಿಗೆಯಲ್ಲೇ ನನಗೆ ಮಕ್ಕಳ ಸಾಹಿತ್ಯದ ಮೇಲೆ ಆದರ ಹುಟ್ಟಿದ್ದು.

ವಾರ್ಷಿಕ ಚಂದಾ ಪಡೆವ ಕೆಲ ಪ್ರಕಾಶಕರು ತಮ್ಮ ಪ್ರಕಾಶನದಿಂದ ಆ ವರ್ಷ ಹೊರಬಂದ ಪುಸ್ತಕಗಳನ್ನು ಅಲ್ಲಿಯೇ ನಮಗೆ ತಲುಪಿಸಿ; ಸಾಗಿಸಿಬಿಡುವದಂತೂ ಎಲ್ಲ ಸಮ್ಮೇಳನಗಳಲ್ಲೂ ನಡೆಯುತ್ತವೆ. 

ನಾನಂತೂ ಬೆಳಗಾವಿ ಸಮ್ಮೇಳನ ಹೊರತುಪಡಿಸಿ ಉಳಿದ ಒಂದೇ ಒಂದು ಸಮ್ಮೇಳನದಲ್ಲೂ ಅಲ್ಲಿಯ ನೂಕು ನುಗ್ಗಲಿನಲ್ಲಿ ಊಟ ಉಪಹಾರ ಮಾಡಿದ ಸ್ವಾನುಭವ ಪಡೆದವಳಲ್ಲ. ಸಮ್ಮೇಳನಗಳೆಂದರೆ ನಮಗೆ ಮೈಸೂರು ಮಂಡ್ಯ ಗಂಗಾವತಿ ಗದಗ ಹೀಗೆ ಹೊಸ ಹೊಸ ಊರುಗಳ ಮೇನ್ ರಸ್ತೆಯನ್ನು ಸುತ್ತಾಡಿ, ಅವರಿವರಲ್ಲಿ ವಿಚಾರಿಸಿ ಶೋಧಿಸಿದ ಅಲ್ಲಿಯ ಉತ್ತಮ ನಾನ್‌ವೆಜ್ ಹೋಟಲ್ಲುಗಳಲ್ಲಿ ಊಟ ಸವಿಯುವ ಒಂದು ಒಳ್ಳೆಯ ಅವಕಾಶ.

ಈ ಸಲ ಸಮ್ಮೇಳನದ ಪುಸ್ತಕದಂಗಡಿಗಳಲ್ಲಿ, ಎರಡ್ನೂರು ರೂಪಾಯಿಯ ಪುಸ್ತಕ ಕೊಂಡ ಗ್ರಾಹಕ ಎರಡು ಸಾವಿರದ ಗುಲಾಬಿ ನೋಟು ನೀಡಿದರೆ, ಅವನಿಗೆ ಹಿಂದಿರುಗಿಸುವ ಸಾವಿರದೆಂಟನೂರು ಚಿಲ್ಲರೆ ಹಣವನ್ನು ಪುಸ್ತಕದಂಗಡಿಯ ಮಾಲೀಕ ಎಲ್ಲಿಂದ ತರಬೇಕು? ಅಥವಾ ರದ್ದಾದ ಸಾವಿರ ಹಾಗೂ ಐನೂರರ ನೋಟುಗಳು ಚಲಾವಣೆಯಾದೀತೇ? ಮೋದಿ ನೋಟಿನ ಪ್ರಕರಣದಿಂದ ಸಮ್ಮೇಳನದ ಪುಸ್ತಕ ವ್ಯಾಪಾರದಲ್ಲಿ ಬಿಕ್ಕಟ್ಟು ತಲೆದೋರೀತೋ ಕಾದು ನೋಡಬೇಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT