ಮಂಗಳವಾರ, 21 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ನಮ್ಮೂರು’ ಎನಿಸಿಕೊಂಡ ಲಾಸ್ ಏಂಜಲೀಸ್

Last Updated 3 ಜನವರಿ 2016, 11:49 IST
ಅಕ್ಷರ ಗಾತ್ರ

‘ಆಹಿತಾನಲ’ ಹೆಸರಿನಿಂದ ಪ್ರಖ್ಯಾತರಾದ ಅಮೆರಿಕನ್ನಡಿಗ ನಾಗ ಐತಾಳರು ಶಿಕಾಗೋ ವಿಶ್ವವಿದ್ಯಾಲಯದಲ್ಲಿ ಸಂಶೋಧನಾ ಅಧ್ಯಾಪಕರಾಗಿ 27 ವರ್ಷ ಕೆಲಸ ಮಾಡಿದವರು. ‘ದೂರ ತೀರದಿಂದ ಹರಿದು ಬಂದ ಕತೆಗಳು’, ‘ಕಡಲಾಚೆಯ ಕಾರಂತರು’, ‘ಯದುಗಿರಿಯ ಬೆಳಕು’, ‘ಬೇಂದ್ರೆ ಅಂದ್ರೆ’, ‘ಕಾದೇ ಇರುವಳು ರಾಧೆ’ ಅವರ ಕೆಲವು ಕೃತಿಗಳು. ‘ಕನ್ನಡ ಸಾಹಿತ್ಯ ರಂಗ’ ಸಂಘಟನೆಯ ಮೂಲಕ ಐತಾಳರು ಅಮೆರಿಕದಲ್ಲಿ ಕನ್ನಡ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದಾರೆ. ಅವರ ‘ಅಮೆರಿಕದಲ್ಲಿ ಕಂಡ ಕನಸು, ಕಟ್ಟಿದ ನೆನಪು’ ಕೃತಿ ಅವರ ಹುಟ್ಟೂರಾದ ದಕ್ಷಿಣ ಕನ್ನಡದ ಕೋಟದಲ್ಲಿ ಜ. 9ರಂದು ಬಿಡುಗಡೆ ಆಗಲಿದೆ. ಆ ಕೃತಿಯಿಂದ ಆಯ್ದ ಒಂದು ಭಾಗ ಇಲ್ಲಿದೆ.

ಲಾಸ್ ಏಂಜಲೀಸ್– ಹೆಸರೇ ಸೂಚಿಸುವಂತೆ, ಇದು ಅಂಜಲಿಯರ ಊರು; ಅಥವಾ ‘ವಿಲಾಸಿನಿ’ಯರ ಊರೆನ್ನಬಹುದೇನೋ! ಇದಕ್ಕೆ ಒಪ್ಪುವಂತೆ ಈ ನಗರದ ಮಹಿಳೆಯರು ಬೆಡಗಿನ ಬಿನ್ನಾಣಗಿತ್ತಿಯರು; ಆದುದರಿಂದಲೇ ಇದು ಒಂದು ಚಲನಚಿತ್ರ ತಯಾರಿಸುವ ಅತ್ಯಂತ ಪ್ರಖ್ಯಾತ ಊರು. ಲಾಸ್ ಏಂಜಲೀಸ್ ಉತ್ತರ ಅಮೆರಿಕದಲ್ಲಿ ನಾವು ನೆಲೆಸಿದ ಪ್ರಪಥಮ ನಗರವಾದುದರಿಂದ ಅದರ ಮೇಲೆ ನಮಗೆ ಒಂದು ರೀತಿಯ ಮಮತೆಯ ನಂಟುತನದ ಭಾವನೆ ಬೆಳೆದು ಬಂದಿದೆ. ಹಲವು ದೋಷಗಳಿದ್ದರೂ, ಆ ನಗರವು ನಮ್ಮನ್ನು ಈಗಲೂ ಆಕರ್ಷಿತ್ತಿದೆ. ಇಲ್ಲಿ ಈ ನಗರದ ಸುತ್ತುಮುತ್ತಲಿನ ಆಕರ್ಷಿಕ ವಿಶೇಷಗಳನ್ನು ಬಹಳ ಸಂಕಿಪ್ತವಾಗಿ ಹೇಳುತ್ತಿದ್ದೇನೆ.

ರಮಣೀಯತೆ ಈ ನಗರದಲ್ಲಿ ಕರಗಿ ಹೋದಂತಿದೆ. ಇದೊಂದು ಪ್ರೇಕ್ಷಣೀಯ ನಗರ. ಇಲ್ಲಿನ ಹವೆ ಹಲವರನ್ನು ಇಲ್ಲಿ ಬಂದು ನೆಲೆಸುವಂತೆ ಮಾಡಿದೆ. ಬೆಂಗಳೂರಿನಂತಹ ಹವೆಯೆಂದು ಹಲವರು ಹೇಳಿದರೂ, ಇಲ್ಲಿ ಸೆಕೆಗೇನೂ ಕಮ್ಮಿ ಇಲ್ಲ. ಆದರೆ ಸಾಮಾನ್ಯವಾಗಿ ಬೆವರು ಬರಿಸುವಂಥ ಸೆಕೆಯಲ್ಲ. ಪಶ್ಚಿಮದಲ್ಲಿ ಶಾಂತ ಸಾಗರ ವಿಶಾಲವಾಗಿ ಹರಡಿಕೊಂಡಿದೆ. ಪೂರ್ವದಲ್ಲಿ ಎತ್ತರದ ಸ್ಯಾನ್ ಬರ್ನಡೀನೊ ಪರ್ವತ ಶ್ರೇಣಿ ಎದ್ದು ನಿಂತಿದೆ.

ಈ ಪರ್ವತ ಶ್ರೇಣಿಯಿಂದಾಗಿ, ಈ ನಗರದಲ್ಲಿ Smogನ ಹಾವಳಿ ತಡೆಯಲಸಾಧ್ಯ. ಲಾಸ್ ಏಂಜಲೀಸ್‌ನಲ್ಲಿ ಮನುಷ್ಯರ ಸಂಖ್ಯೆಗಿಂತ ಕಾರುಗಳ ಸಂಖ್ಯೆಯೇ ಜಾಸ್ತಿ ಎಂಬಂತೆ, ಎಲ್ಲೆಲ್ಲೂ ಕಾರುಗಳ ಓಡಾಟ. ಅವು ಕಾರುವ ಹೊಗೆಯು ಮಂಜಿನ ತರಹ ಇಡೀ ಪ್ರದೇಶವನ್ನು ಹರಡಿಕೊಂಡಿದ್ದು, ಹಾರಿ ದೂರ ಚದರಿಸಲು ಪರ್ವತ ಶ್ರೇಣಿ ಅಡ್ಡ ಬಂದು, Smog ಎನಿಸಿಕೊಂಡು ಆರೋಗ್ಯ ಹಾನಿಗೆ ಕಾರಣವಾಗಿದೆ. ಆ ಸಮಯ ಅತ್ಯಾಮ್ಲ (ozone) ಅಂಶವು ಜಾಸ್ತಿಯಾಗಿ ಉಸಿರಾಟಕ್ಕೆ ತೊಂದರೆಯಾಗಲು ಕಾರಣವಾಗುತ್ತದೆ. ಈ ಸ್ಮಾಗ್ ಕಣ್ಣುರಿಯನ್ನೂ ಉಂಟು ಮಾಡುತ್ತದೆ. ಇದೊಂದು ಲಾಸ್ ಏಂಜಲೀಸ್‌ನ ಹಾನಿಕಾರಕ ವೈಶಿಷ್ಟ್ಯ.

ಇಲ್ಲಿನ ಚಳಿಗಾಲ ಬಹಳ ಸೌಮ್ಯವಾದುದು; ಆದರೂ, ಆ ಕಾಲದಲ್ಲಿ ದಪ್ಪ ತೊಡಿಗೆಯನ್ನು ಉಡುತ್ತಾರೆ. ಇಲ್ಲಿ ಸ್ನೋ ಬೀಳದೆ ಇದ್ದರೂ, ಕೆಲವೇ ಮೈಲಿ ದೂರದ ಸ್ಯಾನ್ ಬರ್ನಡಿನೊ ಬೆಟ್ಟದ ಶ್ರೇಣಿಯು ಸ್ನೋ ಮುಚ್ಚಿಕೊಂಡಿರುವುದನ್ನು ನೋಡಬಹುದು. ಅಲ್ಲಿ ಸ್ಕೀ ಮಾಡಲೂ ಅನುಕೂಲವಿದೆ. ಒಮ್ಮೆ ಗೆಳೆಯ ಬಲ್ಲಾಳರು ನಮ್ಮನ್ನು ಅತಿ ಸೆಕೆಯ ಊರಾದ, ಲಾಸ್ ಏಂಜಲೀಸ್‌ಗೆ ಸಮೀಪದ ಪಾಮ್‌ಸ್ಪ್ರಿಂಗ್‌ ಎಂಬಲ್ಲಿಗೆ ಕರೆದುಕೊಂಡು ಹೋಗಿದ್ದರು. ಅಲ್ಲಿಂದ ಸ್ಕೀ ಲಿಫ್ಟಿನ ಮೂಲಕ ಹತ್ತಿರದ, ಮೌಂಟ್ ಹಸಿಂಟೊ ಬೆಟ್ಟ ಹತ್ತಿ ಮೇಲೇರಿ ಸುತ್ತೆಲ್ಲ ದಪ್ಪ ಸ್ನೋ ಹರಡಿದ ಸ್ಥಳಕ್ಕೆ ಹೋಗಿದ್ದೆವು. ಅಲ್ಲಿ ನಾವೆಲ್ಲರೂ ತುಂಬ ಹೊತ್ತು ಆಟವಾಡಿದೆವು. ನೆಲವನ್ನೆಲ್ಲ ಮುಚ್ಚಿದ ಆ ಅಚ್ಚ ಬಿಳಿಯ ಸ್ನೋ ಕಣ್ಣಿಗೆ ಹಬ್ಬ ನೀಡುತ್ತಿತ್ತು.

ಈ ನಗರಕ್ಕೆ ಹಚ್ಚಿಕೊಂಡಂತೆ ಕಡಲು ಕಿನಾರೆಗಳು ಬೇಕಾದಷ್ಟಿವೆ. ಶನಿವಾರ, ಭಾನುವಾರಗಳಲ್ಲಿ ಜನರು ಇಂತಹ ಬೀಚಿನಲ್ಲಿ ಕಿಕ್ಕಿರಿದು ಸೇರುತ್ತಾರೆ. ಅಲ್ಲಿ ಗಾಳಿ ಬೀಸುತ್ತಿದ್ದು, ಸ್ಮಾಗ್ ಹಾವಳಿ ಕಮ್ಮಿ ಎಂತಲೋ ಏನೋ! ಲಾಸ್ ಏಂಜಲೀಸ್ ಹಾಲಿವುಡ್ ಕಾರಣದಿಂದಲೂ ಪ್ರಖ್ಯಾತವಾಗಿದೆ. ಅಲ್ಲಿ ಸಿನಿಮಾ ನಟ-ನಟಿಯರನ್ನು ಶಾಪಿಂಗ್ ಮಾಡುತ್ತಿರುವಾಗಲೂ, ರೊಡೇವೋ ಡ್ರೈವ್‌ನಲ್ಲೂ (Rodeo Drive) ನೋಡಬಹುದು. ಬೆವರ್ಲಿ ಹಿಲ್ಸ್ ಎಂಬ ಬಡಾವಣೆಯಲ್ಲಿ ನೂತನ, ಆಧುನಿಕವಾಗಿ ಸಜ್ಜುಗೊಳಿಸಿದ ಮನೆಗಳಲ್ಲಿ ಹೆಚ್ಚಾಗಿ ಸಿನಿಮ ನಟ-ನಟಿಯರ ವಾಸ. ಇಂತಹ ಸುಂದರ ಬಂಗಲೆಗಳು ನೋಡಲು ಪ್ರೇಕ್ಷಣೀಯ. ಅಲ್ಲಿನ ಅಗಲವಾದ ರಸ್ತೆಗಳು, ಬಂಗಲೆಗಳ ಮುಂದಿನ ಹುಲ್ಲಿನ ದಪ್ಪನೆಯ ಹಾಸಿಗೆ ಹರಡಿದಂತಿರುವ ಅಂಗಳ, ಮಧ್ಯೆ ಕಣ್ಣರಳಿಸುವ ಹೂದೋಟ, ರಸ್ತೆಯ ಎರಡೂ ಪಕ್ಕದಲ್ಲಿ ಆಕಾಶವನ್ನೇ ಮುಟ್ಟಲು ಹೊರಟಿರುವಂತಹ ಎತ್ತರದ ತಾಳೆ ಮರಗಳ ಸಾಲು, ಎಲ್ಲವೂ ಪ್ರವಾಸಿಗಳನ್ನು ಆಕರ್ಷಿಸುತ್ತವೆ.

ಹಾಲಿವುಡ್ ಬುಲವಾರ್ಡ್ ಎಂಬ ರಸ್ತೆಯ ಸೈಡ್ ವಾಕ್‌ನಲ್ಲಿ (ಇದನ್ನು ಹಾಲಿವುಡ್ ವಾಕ್ ಆಫ್ ಫೇಮ್ ಎಂದು ಕರೆಯುತ್ತಾರೆ) ಹೆಸರಾಂತ ನಟ-ನಟಿಯರ ಹೆಸರು ಕೆತ್ತಿದ ನಕ್ಷತ್ರಗಳ ಸಾಲು ಉದ್ದಕ್ಕೂ ಹರಡಿದೆ. ಪ್ರಖ್ಯಾತ ಗ್ರೋಮನ್ಸ್ ಚೈನೀಸ್ ಥಿಯೇಟರ್ ಕೂಡ ಪ್ರೇಕ್ಷಕರನ್ನು ಆಕರ್ಷಿಸುವುದು. ಸನ್‍ಸೆಟ್ ಬುಲವಾರ್ಡ್ ಕೂಡ ರಮಣೀಯವಾಗಿದೆ. ಒಂದು ಕಡೆ, ದೀಪಗಳಿಂದ ರಾರಾಜಿಸುವ ಲಾಸ್ ಏಂಜಲೀಸ್ ನಗರವು ಕಣ್ಣಿಗೆ ಹಬ್ಬವನ್ನೇ ನೀಡುತ್ತದೆ. ರಾತ್ರಿಯೆಲ್ಲ, ನಿಯಾನ್ ದೀಪಗಳಿಂದ ಜಗಜಗಿಸುವ ಹಲವಾರು ನೈಟ್ ಕ್ಲಬ್‌ಗಳೂ ಇವೆ. ಕೆಲವು ನೈಟ್ ಕ್ಲಬ್‌ಗಳಂತೂ ‘ಪಾಪ ಕುಂಡ’ಗಳೆಂದರೂ ಸರಿಯೇ!.

ಯುನಿವರ್ಸಲ್ ಸ್ಟುಡಿಯೊ ಕೂಡ ಲಾಸ್‌ ಏಂಜಲೀಸ್‌ನ ಬಹಳ ಪ್ರೇಕ್ಷಣೀಯ ಸ್ಥಳ. ಸಿನಿಮಾಗಳಲ್ಲಿ ನೋಡುವ ಕೆಲವು ಅಸಾಧಾರಣ ಸನ್ನಿವೇಶಗಳನ್ನು ಕಣ್ಣಿಗೆ ನೀರೆರಚಿ, ಮಂಗ ಮಾಯಕವಾಗಿ ಕಾಣುವಂತೆ ಮಾಡುತ್ತಾರೆಂಬುದನ್ನು ಅಲ್ಲಿ ಚೆನ್ನಾಗಿ ಮನವರಿಕೆ ಮಾಡಿಕೊಳ್ಳಬಹುದು. ಲಾಸ್‌ ಏಂಜಲೀಸ್‌ಗೆ ಹೋದಾಗ ಈ ಯುನಿವರ್ಸಲ್ ಸ್ಟುಡಿಯೋವನ್ನು ಸಂದರ್ಶಿಸಲೇ ಬೇಕಾದ ಸ್ಥಳವೆಂದು ಧಾರಾಳವಾಗಿ ಹೇಳಬಹುದು. ಇಲ್ಲಿಯ ಮುಖ್ಯ ಟೀವಿ ಸಂಸ್ಥೆಗಳನ್ನೂ– ABC, CBS, NBC– ನಾವು ಸಂದರ್ಶಿಸಬಹುದು. ಇಲ್ಲಿಯ ಡಿಸ್ನಿ ಲ್ಯಾಂಡ್ ಪ್ರಪಂಚದಲ್ಲೆಲ್ಲ ಹೆಸರುವಾಸಿಯಾಗಿದೆ. ಫ್ಲಾರಿಡದಲ್ಲೂ ಈಗ ಅದೇ ಪ್ರತಿರೂಪದ ಡಿಸ್ನಿ ವರ್ಲ್ಡ್ ಎಂದು ಕರೆದುಕೊಳ್ಳುವ ಪ್ರೇಕ್ಷಣೀಯ ಸ್ಥಳವಿದೆ. ಇದಲ್ಲದೆ, ಜಪಾನು, ಯುರೋಪು ಮುಂತಾದ ಕಡೆಗಳಲ್ಲೂ ಈ ಸಂಸ್ಥೆ ಈಗ ಸ್ಥಾಪನೆಯಾಗಿದೆ.

ಅಲ್ಲಿಯೇ ಸುತ್ತುಮುತ್ತಲಿನ Wax Museum, Knottsberry Farm, Japanese Gardens, Lion Country Safari ಮುಂತಾದ ಹಲವಾರು ಪ್ರೇಕ್ಷಣೀಯ ಸ್ಥಳಗಳೂ ಪ್ರವಾಸಿಗಳು ಸಂದರ್ಶಿಸಬೇಕಾದವುಗಳು. ಸಮೀಪದ ಸ್ಯಾಂಡಿಯಾಗೋದಲ್ಲೂ ಹಲವಾರು ಪ್ರೇಕ್ಷಣೀಯ ಸ್ಥಳಗಳಿವೆ. ಅಲ್ಲಿಯ ಮೃಗಾಲಯ ಪ್ರಪಂಚದಲ್ಲೇ ಹೆಸರಾದುದು. ಅಲ್ಲಿನ ‘ಸೀ ವರ್ಲ್ಡ್’ನಲ್ಲಿ ಡಾಲ್ಫಿನ್‌ಗಳು ತೋರಿಸುವ ಚಟುವಟಿಕೆಗಳು ಕಣ್ಣಿಗೆ ಆನಂದ ನೀಡುತ್ತದೆ. ಸ್ಯಾಂಡಿಯಾಗೋಗೆ ಹೋಗುವ ದಾರಿಯೂ ಬಲು ರಮಣೀಯ. ಪಕ್ಕದಲ್ಲಿ ಶಾಂತ ಸಾಗರ ಹರಡಿದ್ದು, ನಮ್ಮ ಜೊತೆಗೇ ಭೋರ್ಗರೆಯುತ್ತ ಓಡೋಡಿ ಬರುವಂತಿದೆ.

ಲಾಸ್‌ ಏಂಜಲೀಸ್‌ನಲ್ಲಿ UCLA, USC, Caltech, ಮುಂತಾದ ಹೆಸರಾಂತ ವಿಶ್ವ ವಿದ್ಯಾನಿಲಗಳಲ್ಲದೆ, ಹಲವಾರು ಚಿಕ್ಕ ವಿದ್ಯಾ ಸಂಸ್ಥೆಗಳು ಹರಡಿಕೊಂಡಿದೆ. ಪ್ರತೀ ಜನವರಿ 1ರಂದು ಬೆಳಿಗ್ಗೆ ಪ್ಯಾಸೆಡೀನಾದ ಕೊಲರಾಡೋ ಬುಲವಾರ್ಡ್‌ನಲ್ಲಿ ನಡೆಯುವ ‘ರೋಸ್ ಬೌಲ್ ಪೆರೇಡ್’ ಬಲು ಜನಪ್ರಿಯವಾದುದು. ಇದನ್ನು ನೋಡಲೂ ಅಸಂಖ್ಯಾತ ಜನರು ರಸ್ತೆಯ ಪಕ್ಕದಲ್ಲಿ ಬಂದು ಸೇರುತ್ತಾರೆ. ಮೊದಲಿನ ರಾತ್ರಿಯೇ ಒಳ್ಳೆಯ ಸ್ಥಳಗಳನ್ನು ಕಾದಿರಿಸಲು ಬಂದು ಅಲ್ಲಿಯೇ ನಿದ್ರೆ ಹೋಗುತ್ತಾರೆ. ವಿವಿಧ ಬಗೆಯ ಹೂಗಳಿಂದ ಅಲಂಕೃತವಾದ ತೇಲು ಬಂಡಿಗಳು, ದೇಶದ ಹಲವು ಸ್ಥಳಗಳನ್ನೂ ಸನ್ನಿವೇಶಗಳನ್ನು ಪ್ರತಿನಿಧಿಸುತ್ತ, ನಮ್ಮ ಮುಂದೆ ನಿಧಾನವಾಗಿ ಚಲಿಸುತ್ತಿದ್ದಂತೆ, ಸ್ವರ್ಗದಲ್ಲೇ ತೇಲಾಡಿದಂಥ ಅನುಭವ ಸಿಗುತ್ತದೆ. ಸುಂದರವಾಗಿ ಅಲಂಕೃತರಾಗಿ ಆ ಬಂಡಿಯಲ್ಲಿ ನರ್ತಿಸುವ ಅಂಜನೆ/ಅಂಜಲಿಯರು ಆ ಪೆರೇಡ್‌ಗೆ ಇನ್ನೂ ಕಳೆಗೊಡುತ್ತಾರೆ.

ಇಂತಹ ಸುಂದರ ನಗರದ ಪರಿಸರದಲ್ಲಿ ನೆಲೆಸಿದ್ದ ನಮಗೆ ಆ ನಗರವೇ ಮನೆಯಾಗಿ ಬಿಟ್ಟಿತ್ತು, ತಾತ್ಕಾಲಿಕವಾದರೂ. ಒಂದು ಮುಖ್ಯ ವಿಷಯ ಹೇಳಲು ಮರೆತಿದ್ದೆ: ಲಾಸ್‌ ಏಂಜಲೀಸ್‌ ಪ್ರದೇಶದಲ್ಲಿ ಆಗಾಗ್ಗೆ ಭೂಕಂಪನವಾಗುತ್ತಲೇ ಇರುತ್ತದೆ. 1971ರಲ್ಲಿ ನಾವಿದ್ದಾಗ, ಒಂದು ಬಲವಾದ ಕಂಪನವಾಗಿದ್ದು, ನಾವು ಗಾಬರಿಗೊಳಗಾಗಿದ್ದೆವು. ಆದರೂ, ಆ ನಗರದ ಮೇಲೆ ಒಂದು ಅವ್ಯಕ್ತ ಆತ್ಮೀಯ ಭಾವನೆ ಇದ್ದೇ ಇದೆ. ನನ್ನ ಮಗಳು, ಅನುರಾಧಾ ಈಗ ಇಲ್ಲಿ ನೆಲೆಸಿದ್ದು, ನಾನು ಶಿಕಾಗೋ ಯುನಿವರ್ಸಿಟಿಯಿಂದ ನಿವೃತ್ತನಾದ ಮೇಲೆ, ಪುನಃ ಲಾಸ್‌ ಏಂಜಲೀಸ್‌ಗೇ ಬಂದು ನೆಲೆಸುವಂತೆ ಮಾಡಿದೆ. ಆಗಾಗ್ಗೆ ಹಿಂದಿನ ನೆನಪುಗಳು ಮರುಕಳಿಸಿ, ‘ನೆನಪಿನ ಗಲ್ಲಿ’ಯಲ್ಲಿ ಅಲೆಯುವ ಹಿತ ಅನುಭವ ಈಗ ನಮ್ಮದಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT