ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಡ್ಡಾರಾಧನೆ’ ಹೆಸರು: ಒಂದು ಸ್ಪಷ್ಟೀಕರಣ

Last Updated 20 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

‘ಮುಕ್ತಛಂದ’ ಪುರವಣಿಯಲ್ಲಿ ಜುಲೈ 17ರಂದು ಪ್ರಕಟವಾದ ಡಾ. ಬಿ. ರಾಜಶೇಖರಪ್ಪ ಅವರ ಬರಹಕ್ಕೆ ಈ ಸೃಷ್ಟೀಕರಣ. ಕನ್ನಡ ಸಾಹಿತ್ಯದ ಉಜ್ವಲ ಮಾನಸ್ತಂಭಗಳಲ್ಲಿ ಒಂದಾದ ‘ವಡ್ಡಾರಾಧನೆ’ ಕುರಿತಂತೆ ರಾಜಶೇಖರಪ್ಪನವರು ಇದೀಗ ಕೃತಿಯ ಹೆಸರು ಕುರಿತು ತಮ್ಮ ಚಿಂತನೆ ಮತ್ತು ಸಂಶೋಧನೆಯನ್ನು ತಿಳಿಸಿದ್ದಾರೆ.

‘ವಡ್ಡಾರಾಧನೆ ಎಂಬ ಹೆಸರಲ್ಲಿ ಇರುವ ‘ಆರಾಧನೆ ಎಂಬ ಉತ್ತರಾರ್ಧದ ವಿಚಾರದಲ್ಲಿ ಚರ್ಚೆಗಳಿಲ್ಲ. ‘ವಡ್ಡ’ ಎಂಬ ಪೂರ್ವಾರ್ಧ ಶಬ್ದ ಕುರಿತು ಜಿಜ್ಞಾಸೆ ನಡೆಸಿ ತಮ್ಮ ನಿಲುವು ಏನೆಂಬುದನ್ನು ಸಾರಿದ್ದಾರೆ. ಅವರ ಚರ್ಚೆಯಲ್ಲಿ ಕೇಂದ್ರಿಕೃತವಾಗಿರುವುದು ‘ವಡ್ಡ’ ಶಬ್ದದ ನಿಷ್ಪತ್ತಿ, ಅರ್ಥ, ವ್ಯಾಪ್ತಿ ಕುರಿತು. ಅವರ ಅಭಿಪ್ರಾಯಗಳನ್ನು ಒಂದೊಂದಾಗಿ ಮರುಪರಿಶೀಲಿಸಬೇಕಾಗಿದೆ.

ಸಂಸ್ಕೃತ–ಪ್ರಾಕೃತ ಭಾಷೆಗಳ, ಶಬ್ದಗಳ ರಾಚನಿಕ ವಿಶ್ಲೇಷಣೆ ಮತ್ತು ನಿಷ್ಪತ್ತಿಯ ಪರಿಪ್ರೇಕ್ಷ್ಯದಲ್ಲಿ ಪಡೆದುಕೊಳ್ಳುವ ಆಕೃತಿಕ ಹಾಗೂ ಸ್ವನ ಮಾರ್ಪಾಟುಗಳನ್ನು ಅನುಸಂಧಾನಿಸಬೇಕು. ಸಂಸ್ಕೃತದ ವರ್ಧಮಾನ ಪ್ರಾಕೃತದಲ್ಲಿ ವಡ್ಡಮಾಣ ಎಂದು ವ್ಯತ್ಯಾಸ ಪಡೆಯುತ್ತದೆ, ಸರಿಯೆ. ಹೀಗೆ ವ್ಯತ್ಯಾಸಗೊಳ್ಳುವಾಗ ವರ್ಧಮಾನ ಹೆಸರಲ್ಲಿ ಮೊದಲರ್ಧವಾದ ‘ವರ್ಧ’ವು ವಡ್ಡ ಎಂದು ಮಾರ್ಪಾಟು ಪಡೆದಿದೆ, ದಿಟ. ಆದರೆ ‘ವಡ್ಡ’ ಎಂಬುದಷ್ಟೇ ಇದ್ದಾಗ ಅದರಿಂದ ವರ್ಧಮಾನ ಎಂಬರ್ಥ ಪ್ರತೀತವಾಗುವುದಿಲ್ಲ.

ವಡ್ಡ ಎಂಬ ಶಬ್ದ ಶಾಸನದಲ್ಲಾಗಲಿ ಸಾಹಿತ್ಯಕೃತಿಗಳಲ್ಲಾಗಲಿ ವರ್ಧಮಾನ ಎಂಬ ಅರ್ಥದಲ್ಲಿ ಪ್ರಯೋಗವಾದಂತಿಲ್ಲ. ವಡ್ಡಾಚಾರ್ಯ, ವಡ್ಡದೇವ ಎಂಬುವು ಹಿರಿಯ ಆಚಾರ್ಯ ಹಿರಿಯದೇವ ಎಂಬರ್ಥದ ಹೆಸರುಗಳು. ಇವು ದೊಡ್ಡಪ್ಪ, ದೊಡ್ಡೇಗೌಡ, ದೊಡ್ಡಸ್ವಾಮಿ, ಹಿರೇಗೌಡ ಎಂಬಂತಹ ಹೆಸರುಗಳು. ರಾಜಶೇಖರಪ್ಪ ಅವರ ಅಭಿಪ್ರಾಯಗಳಿಗೆ ಸೃಷ್ಟೀಕರಣ ಅಗತ್ಯ.

* ಅರ್ಥದ ಗೊಂದಲವಾಗದಂತೆ ‘ವರ್ಧಮಾನ’ ಎಂಬುದಕ್ಕೆ ‘ವಡ್ಡ’ ಪದವನ್ನು ಬಳಸಿರುವುದು ಒಂದು ವಿಶೇಷ ಎನಿಸುತ್ತದೆ. ವಡ್ಡ ಎಂಬ ಪದವನ್ನು ವರ್ಧಮಾನ ಎಂಬುದಕ್ಕೆ ಪರ್ಯಾಯವಾಗಿ ಬಳಸಿಲ್ಲ. ಅದರಿಂದ ಇಲ್ಲಿ ಯಾವ ವಿಶೇಷತೆಯೂ ಬಂದಿಲ್ಲ.

*ಸಂಸ್ಕೃತದ ‘ವರ್ಧಮಾನ’ಕ್ಕೆ ಪ್ರಾಕೃತದ ಶಾಹೆಗಳಲ್ಲಿ ‘ವಡ್ಡಮಾಣ’ ಎಂದೂ ಕನ್ನಡದ ಶಾಸನಗಳಲ್ಲಿ ‘ವಡ್ಡ’ ಎಂದೂ ಬಂದಿರುವುದನ್ನು ನೋಡಿದರೆ ವಡ್ಡಾರಾಧನೆಯ ಹೆಸರಲ್ಲಿರುವ ವಡ್ಡ ಎಂಬ ಭಾಗ ವರ್ಧಮಾನ ಎಂಬುದರ ಬದಲಿಗೇ ಬಂದಿರುವ ಶಬ್ದ ಎಂಬಲ್ಲಿ ಅನುಮಾನವಿಲ್ಲ.

ಸಂಸ್ಕೃತದ ವರ್ಧಮಾನ ಎಂಬುದು ಪ್ರಾಕೃತದಲ್ಲಿ ‘ವಡ್ಡಮಾಣ’ ಎಂದು ತದ್ಭವ ಗೊಳ್ಳುತ್ತದೆಯೇ ಹೊರತು ‘ವಡ್ಡ’ ಎಂದಲ್ಲ. ಕನ್ನಡದ ಶಾಸನಗಳಲ್ಲಿ ಸಂಸ್ಕೃತದ ವರ್ಧಮಾನ ಅಥವಾ ಪ್ರಾಕೃತದ ವಡ್ಡಮಾಣ ಎಂಬುದು ಎಲ್ಲಿಯೂ ‘ವಡ್ಡ’ ಎಂದು ಬಂದಿಲ್ಲ. ವಡ್ಡ ಎಂಬ ಶಬ್ದ ಬಿಡಿಯಾಗಿ ಅಥವಾ ವರ್ಧ ಎಂಬುದಷ್ಟೇ ಒಂಟಿಯಾಗಿ ಇರುವಾಗ ಅವು ವಡ್ಡಮಾಣ ಅಥವಾ ವರ್ಧಮಾಣ  ಎಂಬ ಅರ್ಥವನ್ನು ಕೊಡಲಾರವು.

ಪ್ರಾಕೃತದ ‘ವಡ್ಡ’ ಶಬ್ದಕ್ಕೆ, ಹಾಗೆಯೇ ಸಂಸ್ಕೃತದ ‘ವರ್ಧ’ ಶಬ್ದಕ್ಕೆ ಮಾಣ ಅಥವಾ ಮಾನ ಎಂದು ಉತ್ತರ ಪದ ಸೇರಿದಾಗ ಮಾತ್ರ ವಡ್ಡಮಾಣ–ವರ್ಧಮಾನ ಎಂಬ ಹೆಸರು ಸಿದ್ಧಿಸುತ್ತದೆ. ಆದ್ದರಿಂದ ವಡ್ಡಾರಾಧನೆಯ ಹೆಸರಲ್ಲಿರುವ ‘ವಡ್ಡ’ ಎಂಬ ಭಾಗ ವರ್ಧಮಾನ ಎಂಬ ಹೆಸರು ಸಿದ್ಧಿಸುತ್ತದೆ ಮತ್ತು ಅರ್ಥ ಬರುತ್ತದೆ. ಅದರಿಂದ ವಡ್ಡಾರಾಧನೆಯ ಹೆಸರಲ್ಲಿರುವ ‘ವಡ್ಡ’ ಎಂಬ ಭಾಗ ವರ್ಧಮಾನ ಎಂಬುದರ ಬದಲಿಗೇ ಬಂದಿರುವ ಶಬ್ದ ಎಂಬಲ್ಲಿ ಅನುಮಾನವಿಲ್ಲ ಎಂಬ ಅವಧಾರಣೆ, ಒತ್ತು ಕೊಟ್ಟು ಹೇಳಿರುವುದು ಸರಿಯಲ್ಲ.ಈ ಗ್ರಹಿಕೆ ತಪ್ಪು. ಇದು ಪ್ರಾಕೃತ, ಸಂಸ್ಕೃತ ಭಾಷೆಗಳಲ್ಲಿ ಶಬ್ದರೂಪಗಳು ಸಿದ್ಧಿಸುವ ಮತ್ತು ಶಬ್ಧಾರ್ಥ ಪ್ರತೀತವಾಗುವ ವಿಧಾನಕ್ಕೆ ಹೊರತಾದ ನಿರ್ಧಾರ.

* ಈ ಗ್ರಂಥಕ್ಕೆ ಕೃತಿಕಾರನು ಮೂಲತಃ ‘ವರ್ಧಮಾನಾರಾಧನೆ’ ಅಥವಾ ‘ವಡ್ಡಮಾಣಾರಾಧನೆ’ ಎಂಬ ಹೆಸರಿಟ್ಟಿದ್ದು ಅದೇ ಮುಂದೆ ವಡ್ಡಾರಾಧನೆ ಎಂದಾಗಿರಬೇಕು.

* ವರ್ಧಮಾನ ಮಹಾವೀರ ಮತ್ತು ಅವರ ಕಠೋರವಾದ ಮಹಾ ಆರಾಧನೆ – ತಪಸ್ಸು ಮಾದರಿ ಎನಿಸಿದ್ದರಿಂದ ಅಂಥವರ ಕಥೆಗಳ ಈ ಗ್ರಂಥಕ್ಕೆ ‘ವರ್ಧಮಾನ’ ರೀತಿಯ ಆರಾಧನೆ ಎಂಬಂತೆ, ಕೃತಿಕಾರ ಇದನ್ನು ‘ವರ್ಧಮಾನಾರಾಧನೆ’ ಅಥವಾ ‘ವಡ್ಡಮಾಣಾರಾಧನೆ’ ಎಂದು ಹೆಸರಿಸಿರಬೇಕು. ಅದೇ ಅಮೇಲೆ ಸಂಕ್ಷೇಪಗೊಂಡು ‘ವಡ್ಡಾರಾಧನೆ’ ಆಗಿರಬೇಕು. ಈ ಕೃತಿಯ ಹೆಸರಿಗೆ ಇದು ಉಚಿತವಾಗಿ ಒಪ್ಪುವ ವಿವರಣೆಯಾಗಿ ಕಾಣುತ್ತದೆ. ಇದರಿಂದ ಈ ಕೃತಿಯ ಹೆಸರಿನ ಒಗಟನ್ನು ಬಿಡಿಸುವ ಸರಿಯಾದ ಕೀಲಿಕೈ ಈಗ ದೊರೆತಂತಾಗಿದೆ.

ವರ್ಧಮಾನಾರಾಧನೆ ಎಂಬುದು ಇಲ್ಲ. ಇಲ್ಲದಿರುವುದನ್ನು ಹುಟ್ಟಿಸಿ, ಅದು ವಡ್ಡಾಮಾಣಾರಾಧನೆ ಎಂದು ರೂಪಾಂತರಗೊಂಡು ಕಡೆಗೆ ‘ವಡ್ಡಾರಾಧನೆ’ ಆಗಿರಬೇಕು, ಎಂಬಿತ್ಯಾದಿ ವಿವರಿಸಿರುವುದು ಸರಿಯಲ್ಲ. ಆಯಿತು, ಒಂದು ಪಕ್ಷ ಈ ಗ್ರಂಥಕ್ಕೆ ‘ವರ್ಧಮಾನಾರಾಧನೆ’, ‘ವಡ್ಡಮಾಣಾರಾಧನೆ’ ಎಂಬ ಹೆಸರು ಇದ್ದಿದ್ದರೆ ವರ್ಧಮಾನ (ವಡ್ಡಮಾಣ)ನನ್ನು ಕುರಿತು ಪ್ರತಿಕತೆಯಲ್ಲೂ ಪ್ರಸ್ತಾಪ ಹಾಗೂ ಆತನ ಆರಾಧನೆಯ ವಿಚಾರ ಬರಬೇಕಿತ್ತು. ಆದರೆ ಯಾವ ಕಥೆಯಲ್ಲೂ ಬಂದಿಲ್ಲ. ಈ ಕೃತಿಯ ಹೆಸರು ಈಗಿರುವಂತೆ ಸರಿಯಾಗಿಯೇ ಇದೆ.

* ಈ ಮೊದಲಿಗೆ ಬಂದಿರುವ ವಿವರಣೆಗಳು, ಈ ಕೃತಿಯ ಹೆಸರಿನ ಹಿನ್ನೆಲೆಯಲ್ಲಿ ‘ವರ್ಧಮಾನ’ ಅಥವಾ ‘ವಡ್ಡಮಾಣ’ ಇರುವುದು ಗೋಚರಿಸದೆ ಅಥವಾ ಗ್ರಹಿಕೆಗೆ ಬಾರದೆ ನೀಡಿದ ಪಂಡಿತನಿಷ್ಪತ್ತಿಯ ವಿವರಣೆಗಳಾಗಿವೆ ಎಂದು ಹೇಳಬೇಕಾಗಿದೆ.

ಈ ಮೊದಲಿಗೆ ಬಂದಿರುವ ವಿವರಣೆಗಳು ಈ ಕೃತಿಗೆ ಇಟ್ಟಿರುವ ‘ವಡ್ಡಾರಾಧನೆ’ ಹೆಸರಿನ ಹಿನ್ನೆಲೆಯಲ್ಲಿಯೇ ನಡೆದಿವೆ. ‘ವರ್ಧಮಾನ’ ಅಥವಾ ‘ವಡ್ಡಾಮಾಣ’ ಎಂಬ ರೂಪವನ್ನು ಯಾಕೆ  ಹಿಂದಿನ ವಾಗ್ವಾದ ವಿವೇಚನೆಗಳಲ್ಲಿ ಪರಿಗಣಿಸಿಲ್ಲವೆಂದರೆ ಆ ಹೆಸರು ಇದರಲ್ಲಿ ಇಲ್ಲವೇ ಇಲ್ಲ. ಹೀಗೆ ಇಲ್ಲದಿರುವುದು ‘ಗೋಚರಿಸುವುದು’ ಹೇಗೆ, ಇಲ್ಲದಿರುವುದು ‘ಗ್ರಹಿಕೆಗೆ ಬರುವುದು’ ಹೇಗೆ? ಹಿಂದಿನವರು ನೀಡಿದ್ದು ‘ಪಂಡಿತನಿಷ್ಪತ್ತಿಯ ವಿವರಣೆಗಳಾಗಿವೆ’ ಎಂದು ಸರಳೀಕರಿಸಿದ್ದು ಉಚಿತವಲ್ಲ.

* ಕೆಲವು ಸಾಹಿತ್ಯ ಕೃತಿಗಳ ಹೆಸರುಗಳು ದೀರ್ಘವೆನಿಸಿದಾಗ ಮೊಟಕು ಮಾಡಿಕೊಂಡೊ ಇಲ್ಲವೆ ಮೊಟಕಾದ ಬೇರೆ ಹೆಸರನ್ನೊ ಬಳಸುತ್ತ ಬ(ಂದಿ)ರುವುದುಂಟು. ಹಾಗೆಯೇ ವರ್ಧಮಾನಾರಾಧನೆ ಅಥವಾ ವಡ್ಡಮಾಣಾರಾಧನೆ ಎಂಬುದನ್ನು ವಡ್ಡಾರಾಧನೆ ಎಂದು ಸಂಕ್ಷೇಪ ಮಾಡಿಕೊಂಡು, ‘ವರ್ಧಮಾನ’ ಕ್ಕೆ ಕನ್ನಡದಲ್ಲಿ ‘ವಡ್ಡ’ ಎನ್ನುವ ಪದ ಬಳಕೆಯಾಗುತ್ತಿದ್ದುದರಿಂದ ಕೃತಿಕಾರ ನೇರವಾಗಿಯೆ ಇದಕ್ಕೆ ‘ವರ್ಧಮಾನಾರಾನೆ’ ಎಂಬರ್ಥದಲ್ಲಿ ‘ವಡ್ಡಾರಾಧನೆ’ ಎಂಬ ಹೆಸರು ಕರೆದಿರಲಿಕ್ಕೂ ಸಾಕು, ಒಟ್ಟಿನಲ್ಲಿ ‘ವಡ್ಡಾರಾಧನೆ’ ಎಂದರೆ ‘ವರ್ಧಮಾನಾರಾಧನೆ’ ಎಂದೇ ಅರ್ಥ.

ವಡ್ಡಾರಾಧನೆಗೆ ಮೂಲ ಆಕರ ‘ಆರಾಧನಾ’ ಹೆಸರಿನ ಪ್ರಾಚೀನ ಪ್ರಾಕೃತ ಗ್ರಂಥ. ಅದು 2166 ಗಾಥಾ (ಗಾಹೆ)ಗಳನ್ನು ಒಳಗೊಂಡಿದೆ. ಅದು ಸಮಸ್ತ ಭಾರತೀಯ ವಾಙ್ಮಯದಲ್ಲಿಯೇ ವಿಶಿಷ್ಟವಾದುದು. ವಿಶ್ವಕೋಶ ಮಹತ್ವದ ಈ ತಾತ್ವಿಕ ಕೃತಿಯನ್ನು ರಚಿಸಿದ್ದು ಶಿವಕೋಟಿ (ಶಿವಾರ್ಯ, ಸಿವಜ್ಜ) ಹೆಸರಿನ ಯತಿ. ಚಾರಿತ್ರ ಪ್ರಧಾನವಾದ ಈ ಆರಾಧನಾ ಗ್ರಂಥದಲ್ಲಿ ತಪಸ್ಸು, ಮೋಕ್ಷದ ಚಿಂತನ, ಮಂಥನ, ಮನನ ಮತ್ತು ಧ್ಯಾನ ನಿರತ ಮುನಿ ಮತ್ತು ಗೃಹಸ್ಥರ ವಿವರಗಳೂ ಇವೆ.

ಸುದೀರ್ಘ ಇಲ್ಲವೇ ಅಲ್ಪಾಯು ಜೀವನ ಸೌಧಕ್ಕೆ ಮರಣವು ಸುವರ್ಣ ಕಳಶ ಎಂಬ ಗ್ರಹಿಕೆಯ ನೆಲೆಯಲ್ಲಿ ‘ಆರಾಧನಾ’ ರಚಿತವಾಗಿದೆ. ೪೦ ಅಧ್ಯಾಯಗಳಿರುವ ಈ ಗ್ರಂಥದ 35ನೆಯದರ ಹೆಸರು ‘ಕವಚಾಧಿಕಾರ’. ನಾಲ್ಕು ಬಗೆಯ ಅಟ್ಟುಳಿ (ಉಪಸರ್ಗ) ಸಹಿಸಿ ನಿಧನರಾದ ಕೇವಲಿಗಳ ಕಥೆಗಳು ‘ವಡ್ಡಾರಾಧನೆ’ಯಲ್ಲಿವೆ. ಅದರಿಂದಲೇ ವಡ್ಡಾರಾಧನೆಗೆ ‘ಉಪಸರ್ಗ ಕೇವಲಿಗಳ ಕಥೆ’ ಎಂಬ ಅಡ್ಡ ಹೆಸರು ಬಂದಿರುವುದು.

‘ಆರಾಧನಾ’ 157ಕ್ಕೂ ಮಿಕ್ಕ ಕಥಾಕೋಶಗಳ ತಾಯಿ. ಸಂಸ್ಕೃತ ಮತ್ತು ಪ್ರಾಕೃತ ‘ಆರಾಧನಾ’ ಕಥಾಕೋಶಗಳಲ್ಲಿ ಹೆಚ್ಚು ಕಥೆಗಳಿವೆ. ಕನ್ನಡ ವಡ್ಡಾರಾಧನೆ ಕವಚಾಧಿಕಾರವನ್ನು ಮಾತ್ರ ಅವಲಂಬಿಸಿ ಅಲ್ಲಿ ಬರುವ 19 ಕಥೆಗಳನ್ನು ಕೊಟ್ಟಿದೆ. ‘ಆರಾಧನಾ’ ಗ್ರಂಥ ಪೂರ್ವಾಚಾರ್ಯನಿಬದ್ಧ ರಚನೆ. ಆಗಮಗ್ರಂಥಗಳಿಗೆ ತೋರುವ ಮನ್ನಣೆ ಇದಕ್ಕೂ ಸಂದಿರುವುದರಿಂದ ‘ಭಗವತೀ ಆರಾಧನಾ’ ಎಂಬ ಹೆಸರುಂಟು.

ಇದು ಮೂಲ ಆಕರ ಸ್ವರೂಪದ ಕೃತಿಯಾದುದರಿಂದ ‘ಮೂಲಾರಾಧನಾ’ ಎಂದೂ ಬೃಹತ್ ಪ್ರಮಾಣದ ಕೃತಿಯಾದುದರಿಂದ ‘ಬೃಹದಾರಾಧನಾ’ ಎಂದೂ ಬೇರೆ ಬೇರೆ ಹೆಸರುಗಳಾದುವು. ಈ ವಿವಿಧ ಹೆಸರುಗಳಲ್ಲಿ ಒಂದಾದ ‘ಬೃಹದಾರಾಧನಾ’ ಎಂಬುದು ಅಖಂಡವಾಗಿ ತದ್ಭವಗೊಂಡು ‘ವಡ್ಡಾರಾಧನಾ’ ಎಂಬ ರೂಪ ಪಡೆಯಿತು.

ಗುಣಾಢ್ಯಕವಿಯು ಪೈಶಾಚಿಪ್ರಾಕೃತ ಭಾಷೆಯಲ್ಲಿ ಬರೆದ ‘ಬೃಹತ್ಕಥಾ’ ಎಂಬುದರ ಪ್ರಾಕೃತರೂಪ ವಡ್ಡಕಥಾ. ಗಂಗವಂಶದ ದುರ್ವಿನೀತರಾಜನಿಗೆ ವಡ್ಡಕಥಾ ತಿಳಿದಿತ್ತು.ಪ್ರಾಕೃತ ಆರಾಧನಾ ಗ್ರಂಥದ ಉಪಾದೇಯತೆ, ಮಾನ್ಯತೆ ಎಷ್ಟೆಂದರೆ ವ್ಯಾಖ್ಯಾನಗಳು ರಚಿತವಾಗಿವೆ. ಅಪರಾಜಿತ ಸೂರಿಯ ವಿಜಯೋದಯಾ ವ್ಯಾಖ್ಯಾನ, ಆಶಾಧರ ಸೂರಿಯ ಮೂಲಾರಾಧನಾದರ್ಪಣ ಮೊದಲಾದ ಟೀಕಾಗಳಿವೆ.

ವಡ್ಡಾರಾಧನೆಯೂ ಇಂತಹದೊಂದು ವ್ಯಾಖ್ಯಾನ. ವಾಸ್ತವವಾಗಿ ‘ವಡ್ಡಾರಾಧನೆ’ ಎಂಬುದು ಇದರ ಮೂಲ ಹೆಸರಲ್ಲ. ‘ಆರಾಧನಾ ಕರ್ಣಾಟ ಟೀಕಾ’ ಎಂಬುದು ಕನ್ನಡಕೃತಿಕಾರ ಇಟ್ಟಿದ್ದ ಹೆಸರು. ಅಂದರೆ ‘ಆರಾಧನಾ’ ಟೀಕಾಗ್ರಂಥಗಳ ಸಾಲಿಗೆ ಸೇರಿದ ಕನ್ನಡಟೀಕೆ.ವಡ್ಡಾರಾಧನೆಗೆ ಮೂಲ ಆಕರ ಹಾಗೂ ನೇರ ಆಕರ ‘ಬೃಹದಾರಾಧನಾ’ ಗ್ರಂಥ. ‘ಬೃಹದಾರಾಧನಾ’ ಎಂಬ ಹೆಸರು ವಡ್ಡರಾಧನಾ(ನೆ) ಆಗಿದೆ. ಪ್ರೊ. ಹಂಪ ನಾಗರಾಜಯ್ಯ, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT