ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈಜಿ ಜೈಸಿದ ಬದುಕು...

ವಿಮರ್ಶೆ
Last Updated 18 ಜುಲೈ 2015, 19:30 IST
ಅಕ್ಷರ ಗಾತ್ರ

ಇದ್ದೇನಯ್ಯ ಇಲ್ಲದಂತೆ
ಲೇ:
ಶಶಿಕಲಾ ವೀರಯ್ಯಸ್ವಾಮಿ
ಪ್ರ: ನಿರ್ದೇಶಕರು, ಪ್ರಸಾರಾಂಗ, ಮಾನಸಗಂಗೋತ್ರಿ, ಮೈಸೂರು– 06
ಪು: 312
ರೂ. 200

ಶಶಿಕಲಾ ವೀರಯ್ಯಸ್ವಾಮಿಯವರ ಆತ್ಮಕಥಾನಕ ಸ್ವರೂಪದ ಕಾದಂಬರಿ ‘ಇದ್ದೇನಯ್ಯ ಇಲ್ಲದಂತೆ’ ಓದುತ್ತಿದ್ದರೆ, ಹೆಣ್ಣು, ಅವಳ ಕೊನೆಯಿಲ್ಲದ ಹೋರಾಟ , ಅದನ್ನು ಬಲಪಡಿಸಲು ಬೇಕಾದ ಬೌದ್ಧಿಕ ತಯಾರಿ, ಅವಳ ಕಥೆಗಳನ್ನು ನಿರೂಪಿಸುವ ಮತ್ತು ಅರ್ಥೈಸುವ ಬಗೆಯಲ್ಲಿನ ಪಲ್ಲಟದಿಂದ ಇತಿಹಾಸ, ವರ್ತಮಾನ ಮತ್ತು ಭವಿಷ್ಯದ ನಕಾಶೆಯನ್ನು ಬದಲಿಸಬಹುದೆನ್ನುವ ಭರವಸೆ ಎಲ್ಲವೂ ಕ್ಷಣ ಮಾಯವಾಗಿ ಹೆಣ್ಣಾದವಳು ಹೆಣ್ಣೆನ್ನುವ ಕಾರಣಕ್ಕಾಗಿ ತನ್ನೆಲ್ಲ ಆತ್ಮಬಲದ ನೆರವಿದ್ದೂ ಅನುಭವಿಸಬೇಕಾದ ದುರಂತಾವಳಿಗಳ ಜೊತೆ ಬದುಕಿನ ಅನೂಹ್ಯ , ಅನಿರೀಕ್ಶ್ಜಿತ ಸಂಗತಿಗಳೂ ‘ವಿಧಿ ವಿಳಸನದ ನೆರಂಬಡೆದು’ ಹೆಣ್ಣೊಬ್ಬಳ ಬದುಕನ್ನು, ವ್ಯಕ್ತಿತ್ವವನ್ನು ‘ಕೊಂದು ಕೂಗಿದ’ ದುರಂತ ಕಾವ್ಯವೊಂದನ್ನು ಎದುರಾದ ಅನುಭವವಾಗುತ್ತದೆ.

ಜನಪದ ಕಥೆಯೊಂದರಲ್ಲಿ ಅದೆಷ್ಟೋ ಜನ್ಮವಿರುವ ರಾಕ್ಷಸನನ್ನು ಮತ್ತೆ ಮತ್ತೆ ಕೊಲ್ಲುತ್ತಲೇ ಹೋಗುವ ನಾಯಕನ ನೆನಪಾಗುತ್ತದೆ. ತನ್ನದೇ ಆದ ಬದುಕೊಂದನ್ನು ಕಟ್ಟಿಕೊಳ್ಳಲು ನಡೆಸುವ ಯಾವ ಪ್ರಯತ್ನವೂ ಕೊನೆಗೆ ಗಂಡಿನ ಅಧಿಕಾರಕೇಂದ್ರಕ್ಕೆ ಆಹುತಿಯಾಗುವ ಬದುಕಿನ ವಿವರಗಳು ಸಾವೇ ಇಲ್ಲದ ರಾಕ್ಷಸ ಸ್ವರೂಪಿಯಾದ ವ್ಯವಸ್ಥೆಯ ವಾಸ್ತವವನ್ನು ಕಣ್ಣೆದುರಿಗೆ ನಿಲ್ಲಿಸುತ್ತದೆ. ‘ರಾವಣನಿಗೆ ಹತ್ತೆ ತಲೆ? ನೂರಾರು’ ಎನ್ನುವ ಕವಿತೆಯ ಸಾಲೂ ನೆನಪಾಗುತ್ತದೆ.

ನಿಜವೆಂದರೆ, ಯಾವ ಜನಪದ ಸಾಹಿತ್ಯದ ನಾಯಕನೂ, ಪುರಾಣೇತಿಹಾಸಗಳ ನಾಯಕರೂ ಹತ್ತಿರಕ್ಕೂ ಬರಲಾಗದ ಧೀರೋದಾತ್ತ ಹೋರಾಟ ಹೆಣ್ಣಿನದು. ಆದ್ದರಿಂದಲೇ ಅದಕ್ಕೆ ದುರಂತ ಕಾವ್ಯದ ಸ್ವರೂಪವಿದ್ದರೂ ಅದನ್ನು ದುರಂತವೆಂದು ಚರ್ಚಿಸಬಾರದು. ದಟ್ಟ ವಿಷಾದ ಮತ್ತು ದುಃಖ ನಮ್ಮ ಮನಸ್ಸನ್ನು ಆವರಿಸಿದರೂ ಅದರಾಚೆಗೆ ಅದರ ಸಾಮಾಜಿಕ ಮತ್ತು ಮೌಲ್ಯವ್ಯವಸ್ಥೆಯ ಹಿನ್ನೆಲೆಯಲ್ಲಿ ಈ ಬಗೆಯ ಕೃತಿಗಳನ್ನು ಚರ್ಚಿಸುವುದು ಕೃತಿ ಮತ್ತು ಹೆಣ್ಣಿನ ಹೋರಾಟ ಎರಡಕ್ಕೂ ಸಲ್ಲಿಸುವ ಗೌರವ.

ಶಶಿಕಲಾ ಅವರು ‘ಲೇಖ-ಲೋಕ’ ದಲ್ಲಿ ನಿರೂಪಿಸುವ ತಮ್ಮ ಬದುಕು ಮತ್ತು ವ್ಯಕ್ತಿತ್ವಕ್ಕೂ ಈ ಕೃತಿಯಲ್ಲಿನ ದೃಷ್ಟಿಕೋನಕ್ಕೂ ಅಪಾರ ವ್ಯತ್ಯಾಸವಿದೆ.( ಲೇಖ-ಲೋಕ ಕರ್ನಾಟಕ ಲೇಖಕಿಯರ ಸಂಘದವರ ಐತಿಹಾಸಿಕ ಪ್ರಯತ್ನ. ಕನ್ನಡದ ಲೇಖಕಿಯರು ತಮ್ಮ  ಬದುಕು ಮತ್ತು ತಾವು ಲೇಖಕಿಯರಾಗಿ ರೂಪುಗೊಂಡ ಪ್ರಕ್ರಿಯೆಯನ್ನು ಇತರ ಲೇಖಕಿಯರೊಂದಿಗೆ ಹಂಚಿಕೊಂಡ ನಂತರ ಅವುಗಳನ್ನು ಲೇಖ-ಲೋಕ ಹೆಸರಿನಲ್ಲಿ ಪ್ರಕಟಿಸಲಾಗಿದೆ. ಕನ್ನಡಿಗರು ಓದಲೇಬೇಕಾದ ಸಂಪುಟಗಳಿವು).

ಕಾಲದ ಅಂತರದಲ್ಲಿ ತನ್ನ ವ್ಯಕ್ತಿತ್ವವನ್ನು, ಬದುಕಿನ ಗತಿಯನ್ನು ಇನ್ನೊಂದೇ ನೆಲೆಯಲ್ಲಿ ನೋಡಲು ಇವರಿಗೆ ಸಾಧ್ಯವಾಗಿದೆ. ಪಟ್ಟ ಪಾಡನ್ನು ಹುಟ್ಟು ಹಾಡಾಗಿಸುವ ಪ್ರಯತ್ನ ಇಲ್ಲಿದೆ. ‘ಒಂದು ಹೆಣ್ಣಿನ ಕಥೆ’ಯಾಗಿದ್ದು ’ಅನೇಕ ಹೆಣ್ಣುಗಳ ಕಥೆಯೂ ’ ಆಗಬಹುದಾದ ವಿಸ್ತಾರ ಮತ್ತು ಸಾಧಾರಣೀಕರಣದ ಆಯಾಮವೊಂದನ್ನು ಪಡೆಯುವ ಹವಣಿಕೆಯಲ್ಲಿ ಈ ಕೃತಿ ಇದೆ.

ಹೆಣ್ಣಿನ ಆಸೆ ಆಕಾಂಕ್ಷೆಗಳ ಅಗತ್ಯವೇ ಇಲ್ಲದ, ಹೆಣ್ಣು ಒಂದು ಸಾಮಾಜಿಕ ಸಂಗತಿಯ ಅನಾಮಿಕ ಮತ್ತು ಗೌಣ ಪಾತ್ರ ಮಾತ್ರವಾಗುವ ಲಕ್ಷಾಂತರ ಹೆಣ್ಣುಗಳ ಹಾಗೆಯೇ  ಈ ಕಾದಂಬರಿಯ ನೀಲಾಳ ದಾಂಪತ್ಯವೂ ಆರಂಭವಾಗುತ್ತದೆ. ತವರಿನ ಪ್ರೀತಿ ವಿಶ್ವಾಸಗಳಿಂದ ಗಂಡನ ಮನೆಯ  ಅವಿಶ್ವಾಸದ ಬದುಕಿಗೆ ಅವರು ಕಾಲಿಡಬೇಕಾಗುತ್ತದೆ. ಸಂಕೀರ್ಣವಾದ ನಮ್ಮ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯಲ್ಲಿ ಹೆಣ್ಣು ಮದುವೆಯ ನಂತರ ಪಡೆಯಬೇಕಾದ ರೂಪಾಂತರದ ಅವಸ್ಥೆಯೊಂದಿದೆ.

ಬದಲಾಗಿದೆ ಎಂದುಕೊಳ್ಳುತ್ತಿರುವ ಸನ್ನಿವೇಶಗಳಲ್ಲೂ ಇದು ಇನ್ನೂ ಜಾರಿಯಲ್ಲಿದೆ ಎನ್ನುವುದೇ ಅದರ ಅಸೀಮ ಶಕ್ತಿಯ ಸಂಕೇತ. ಅನೇಕ ಬಾರಿ ಅದೊಂದು ನಿರಾವಲಂಬಿತನದ ಮತ್ತು ಪರಾವಲಂಬಿತನದ ಗೊಂದಲಮಯ ಸನ್ನಿವೇಶ. ಅದರಿಂದ ಪಾರಾಗಬಹುದಾದರೆ ಅದೇ ಒಂದು ಮರುಜನ್ಮ. ನೀಲಾಳ ಬದುಕಿನಲ್ಲಿಯೂ ಎದುರಾದ ಇಂಥದೇ ಸನ್ನಿವೇಶದಲ್ಲಿ ಆಕೆಯ ಕೈಹಿಡಿಯುವುದು ಆಕೆ ಮುಂದುವರಿಸುವ ಶಿಕ್ಷಣ.

ಸೋದರಮಾವನನ್ನೇ ಮದುವೆಯಾಗುವ ಹೆಣ್ಣುಮಗಳೊಬ್ಬಳು ಕುದುರದ ದಾಂಪತ್ಯದಿಂದ ಬಿಡಿಸಿಕೊಂಡು ಶಿಕ್ಷಣ, ಉದ್ಯೋಗ, ಪ್ರತಿಭೆ ಎಲ್ಲದರ ನೆರವಿನಿಂದ ತನ್ನ ಜೀವನವನ್ನು ನಡೆಸುತ್ತಾ , ಜೀವನದ ಸಹಜ ವಿನ್ಯಾಸವನ್ನು ಕಟ್ಟಿಕೊಳ್ಳಲು ಇನ್ನಿಲ್ಲದಂತೆ ಪ್ರಯತ್ನಿಸುತ್ತಾ ಹೋಗುವ ಸಾಹಸದ ಈ ಕಥೆ ಪ್ರತಿ ಪ್ರಯತ್ನದಲ್ಲೂ ಆಕೆ ಎದುರಿಸುವ ಸವಾಲುಗಳನ್ನು, ಆ ಸವಾಲುಗಳು ನಿರ್ದಿಷ್ಟವಾಗಿ ಹೆಣ್ಣಾದ ಕಾರಣಕ್ಕಾಗಿಯೇ ಎದುರಿಸಬೇಕಾದ್ದನ್ನು ಹೇಳುವುದು ಒಂದು ಕಡೆಯಾದರೆ, ಈ ಎಲ್ಲ ಸಂದರ್ಭಗಳಲ್ಲೂ ಗಂಡು ತಾನು ಗಂಡು ಎನ್ನುವ ಕಾರಣಕ್ಕಾಗಿಯೇ ಸುರಕ್ಷಿತವಾಗಿ ಈ ಸವಾಲುಗಳ ಆಚೆಗೇ ಉಳಿಯುವ, ಪಿತೃ ಸಂಸ್ಕೃತಿಯ ಸ್ವಯಂದತ್ತ ಅಧಿಕಾರ ಕೇಂದ್ರವನ್ನು ಎಗ್ಗಿಲ್ಲದೆ ಬಳಸುವ ಅನೇಕ ಸನ್ನಿವೇಶಗಳನ್ನು ಈ ಕೃತಿ ನಮ್ಮ ಮುಂದಿಡುತ್ತದೆ. ಅದು ಬಳಸುವ ನಿರ್ಲಜ್ಜ ಅಧಿಕಾರದೆದುರು ಹೆಣ್ಣಿನ ಬದುಕು ಸಹಜವಾಗಿಯೇ ಸೋತಂತೆಯೂ, ಅವಳ ವ್ಯಕ್ತಿತ್ವವು ಅಸಹಾಯಕವಾದಂತೆಯೂ ಕಾಣಿಸತೊಡಗುತ್ತದೆ.

ಮೊದಲ ಮದುವೆಯ ಅನಿರೀಕ್ಷಿತ ಸೋಲಿನ ನಂತರ , ಇನ್ನೊಂದು ದಾಂಪತ್ಯದ ಸಹಜ ಆಸೆಗೆ ನೀಲಾ ಆಸೆ ಪಡುವ ಮೊದಲೇ ತಂದೆಯೇ ಈ ನಿಟ್ಟಿನಲ್ಲಿ ನಡೆಸುವ ಪ್ರಯತ್ನ ಕೊನೆಗೊಳ್ಳುವುದು ಈಗಾಗಲೇ ಮದುವೆಯಾದವನು   ಮಕ್ಕಳಿಲ್ಲದ ಕಾರಣಕ್ಕೆ ಈಕೆಯನ್ನು ಮದುವೆಯಾಗಲು ಒಪ್ಪುವುದರೊಂದಿಗೆ. ಈ ಸಂಬಂಧದ ಅಸಂಗತ ಸನ್ನಿವೇಶಗಳಂತೂ ಮನುಷ್ಯರ ಮೇಲಿನ ನಂಬಿಕೆಯೇ ಕಳೆದು ಹೋಗುವಷ್ಟು ಬಲವಾಗಿವೆ.

೩-೪ ವರ್ಷಗಳಷ್ಟು ಅವಧಿಯಲ್ಲಿ ಈಕೆಯಿಂದ ಪಡೆಯಬಹುದಾದ ಎಲ್ಲವನ್ನೂ ಪಡೆದೂ ಒಂದಾನೊಂದು ದಿನ  ತನಗೆ  ಈಕೆಯೊಂದಿಗೆ ಯಾವ ಸಂಬಂಧವೂ ಇಲ್ಲ ಎನ್ನುವ ಮಟ್ಟಿಗೆ ಹೋಗುವುದು, ಆ ಮಟ್ಟದ ಭಂಡತನ ಗಂಡಿಗೆ ಬರುವ ಮೂಲ ಯಾವುದೆನ್ನುವುದೇ ತಿಳಿಯದಷ್ಟು ಗೊಂದಲ ಹುಟ್ಟಿಸುತ್ತದೆ, ಮನುಷ್ಯನ ಕ್ರೌರ್ಯದ ಆಳ ಎಷ್ಟೆಂದು ಹೇಳುವುದು ಸಾಧ್ಯವೇ ಇಲ್ಲ ಎನ್ನುವ ಮಟ್ಟಿಗಿನ ಕ್ರೌರ್ಯ ಇದು.

ಈ ವಿಷಮ ಘಳಿಗೆಯಲ್ಲೇ ಸಿಗುವ ಸರ್ಕಾರಿ ನೌಕರಿ ಬದುಕಿಗೆ ಆರ್ಥಿಕ ಭದ್ರತೆಯನ್ನು ಒದಗಿಸುತ್ತಿದೆ ಎನ್ನುವ ಹೊತ್ತಿಗೇ ಈತನ ಪುನರಾಗಮನ. ಮಕ್ಕಳ ಆಸೆಯಲ್ಲಿ ಆತನನ್ನು ಮತ್ತೆ ಸ್ವೀಕರಿಸುವುದನ್ನು ದೌರ್ಬಲ್ಯವೆನ್ನುವುದೆ? ಹೆಣ್ಣಿನ ಸಹಜ ಆಸೆಯೆನ್ನುವುದೆ? ತಾಯ್ತನದ ಹಕ್ಕಿನ ಪ್ರತಿಪಾದನೆ ಎನ್ನುವುದೆ? ಈ ಎಲ್ಲವೂ ಸೇರಿದ್ದೇ ಆಕೆಯ ಮನಸ್ಥಿತಿಯಿದ್ದೀತು. ಗಂಡಿನ ಸ್ವಾರ್ಥ ಮತ್ತು ಅವಕಾಶವಾದಿತನವೇ ಮೂಲವಾದ ಈ ಸಂಬಂಧ ಬಾಳಿಕೆ ಬರುವುದು ಸಾಧ್ಯವಿರಲಿಲ್ಲ. ಮುಂದೊಂದು ದಿನ ಇನ್ನೊಂದು ಸಂಬಂಧಕ್ಕೆ ಈಕೆ ತನ್ನನ್ನು ಕೊಟ್ಟುಕೊಳ್ಳುವ ಅಧ್ಯಾಯ ಆರಂಭವಾಗುತ್ತದೆ.

ಮನುಷ್ಯರ ಬದುಕು ತನ್ನಷ್ಟಕ್ಕೆ ತಾನೆ ಪಡೆಯುವ ತಿರುವಲ್ಲ ಇದು. ಹೆಣ್ಣೊಬ್ಬಳು ತನ್ನ ವಿವೇಚನೆ, ಭವಿಷ್ಯದ ಆಲೋಚನೆ, ಮನುಷ್ಯ ಸಹಜವಾದ ಬಯಕೆ ಎಲ್ಲವನ್ನೂ ಬಳಸಿ ತೆಗೆದುಕೊಳ್ಳುವ ತೀರ್ಮಾನ ಇದು. ಕಳೆದುಕೊಂಡದ್ದನ್ನ್ನು ಮತ್ತೆ ಪಡೆಯುವ ಹಟವೆ? ಕಳೆದುಕೊಂಡದ್ದನ್ನು ಕಳೆದುಕೊಂಡಲ್ಲಿಯೇ ಹುಡುಕುವ ಭ್ರಮೆಯೆ? ತನ್ನೆಲ್ಲ ಮನೋನಿಗ್ರಹದಾಚೆಗೂ ಮತ್ತೊಮ್ಮೆ ಮದುವೆಯಾದವನನ್ನೇ ತನ್ನ ಸಖನಾಗಿ ಪಡೆಯುವ ನೀಲಾಳ ಬದುಕಿನ ದುರಂತದ ವೃತ್ತವೇ ಇಲ್ಲಿ ಪೂರ್ಣಗೊಂಡಂತೆ ಭಾಸವಾಗುತ್ತದೆ.

ಆ ಪರಿ ನೋವುಂಡ ಮೇಲೂ ಮತ್ತೂ ಮುಂಚಿನಂಥದ್ದೇ ವಿನ್ಯಾಸದ ಬದುಕಿಗೆ ಈ ಹೆಣ್ಣುಮಗಳು ತನ್ನನ್ನು ಯಾಕೆ ಒಡ್ಡಿಕೊಳ್ಳುತ್ತಾಳೆ? ಯಾವ ಸಖ್ಯವೂ ಹೆಣ್ಣಿಗೆ ವ್ಯವಹಾರವಲ್ಲ. ನಿಜ, ಆದರೆ ಅನುಭವ ಕಲಿಸಿಯೆ ಕಲಿಸುತ್ತದೆ ಎನ್ನುವ ಸಂಗತಿಗಳಾಚೆಗೇ ಸಖ್ಯವನ್ನು ನೋಡಬೇಕೆ? ಆದರೆ ಈ ನಿಲುವು, ನಿರ್ಧಾರ ಅಚ್ಚರಿ ಹುಟ್ಟಿಸುವುದಂತೂ ನಿಜ. ಅಥವಾ ಇದನ್ನು ಹೆಣ್ಣಿನ ಪ್ರೀತಿಸುವ ಅನಂತ ಶಕ್ತಿಯ ಸಂಕೇತ ಎಂದು ತಿಳಿಯಬಹುದೆ? ಉತ್ತರ ಕಷ್ಟ. ಇನ್ನೊಬ್ಬರ ಬದುಕಿನ ಮೇಲೆ ತೀರ್ಪು ಕೊಡುವ ಅಧಿಕಪ್ರಸಂಗತನದಲ್ಲಿ ಈ ಪ್ರಶ್ನೆ ಏಳುತ್ತಿಲ್ಲ. ದುರಂತಗಳು ಘಟಿಸುವುದಕ್ಕೂ ನಾವೇ ಆವುಗಳನ್ನೂ ಆಹ್ವಾನಿಸುವುದಕ್ಕೂ ಇರುವ ವ್ಯತ್ಯಾಸವನ್ನು ಗುರುತಿಸುವ ಪ್ರಯತ್ನ ಮಾತ್ರ.

ಈ ಸಂಬಂಧದಲ್ಲೂ ಕೊನೆಗೂ ಸಿಕಿದ್ದು ನೋವಿನ ಸಮುದ್ರ. ಆದರೆ ಜೀವನದ ಈ ಅಳುವ ಕಡಲನ್ನು ನೀಲಾ ಉದ್ದಕ್ಕೂ ಈಜುವುದು ಕಾವ್ಯದ ಹರಿಗೋಲಿನಲ್ಲಿ. ಕುಸಿದು, ಕುಗ್ಗಿ ಮುಗಿದು ಹೋಗಿಬಿಡಬಹುದಾಗಿದ್ದ ಈಕೆ ತನ್ನನ್ನು ತನ್ನೊಳಗನ್ನು ಕಾಪಾಡಿಕೊಳ್ಳುವುದು ಮಾತ್ರವಲ್ಲ ಅದು ಸದಾ ಹಾಡುವ ಹಕ್ಕಿಯಾಗಿಯೂ ಉಳಿಯುವಂತೆ ಮಾಡಿದ್ದು ಆಕೆಯೊಳಗಿನ ಕಾವ್ಯವೇ. ತಂದೆ ತಾಯಿ, ಪ್ರೀತಿಯಿಂದ ಸಾಕಿ ಬೆಳೆಸಿದ್ದ ತಮ್ಮ, ತಂಗಿ, ತಂಗಿಯ ಮಕ್ಕಳು ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಮಣ್ಣಿಗಿಡುತ್ತಾ , ತನ್ನ ಬದುಕಿನ ಸಾಹಸ ಮತ್ತು ಪ್ರಯತ್ನಗಳನ್ನೂ ಜಾರಿಯಲ್ಲಿಡುತ್ತಾ ಹೋದ ನೀಲಾ ಬದುಕಿನ ಶೋಧವನ್ನೇ ಮುಂದುವರಿಸಿದವಳಂತೆಯೂ ಭಾಸವಾಗುತ್ತಾಳೆ. ಬದುಕು ಕೆಲವರ ಪಾಲಿಗೆ ಬಲು ನಿಷ್ಕರುಣಿಯಾದಂತೆ ಕಾಣಿಸುವುದು ನೀಲಾಳಂಥವರನ್ನು ನೋಡಿದಾಗಲೆ.

ಕೆಲವು ತನ್ನಿಂತಾನೇ ಮತ್ತೆ ಕೆಲವು ತಾನೇ ಮೂಲವಾಗಿ ಘಟಿಸಿದ ಸಂಗತಿಗಳು ಮೇಲ್ನೋಟಕ್ಕೆ ನೀಲಾಳ ಬದುಕನ್ನು ಮೂರಾಬಟ್ಟೆ ಮಾಡಿದಂತೆ ಕಾಣಿಸುತ್ತದೆ. ಆದರೆ ಉದ್ದಕ್ಕೂ ನೀಲಾ ಕೊಡುತ್ತಲೇ ಹೋಗುವ ಪರಿ ಮಾತ್ರ ಹೆಣ್ಣಿನ ಇನ್ನೊಂದೇ ಸಾಧ್ಯತೆಯನ್ನು ಸೂಚಿಸುತ್ತಿದೆಯೇನೋ. ಕೊಟ್ಟು ಬರಿದಾಗದ ಹೆಣ್ಣಿನ ಪ್ರೀತಿಯ ಅಕ್ಷಯ ಪಾತ್ರೆ, ಅಪಾತ್ರರಿಗೆ ಸಲ್ಲತಕ್ಕದ್ದೇ ಅಲ್ಲವೆ? ಪ್ರೀತಿಯಲ್ಲಿ ಅಪಾತ್ರರು ಎನ್ನುವ ವರ್ಗೀಕರಣವೇ ಬರುವುದಿಲ್ಲವೆ ಎನ್ನುವ ಪ್ರಶ್ನೆಯೂ ಉತ್ತರ ಸಿಗದೇ ಉಳಿಯುತ್ತದೆ.

ಲೇಖ ಲೋಕದ ನಿರೂಪಣೆಗೂ ಈ ಕೃತಿಗೂ ಇರುವ ವ್ಯತ್ಯಾಸದ ಬಗ್ಗೆ ಆರಣ್ಭದಲ್ಲಿ ಪ್ರಸ್ತಾಪಿಸಿದ್ದೆ. ಆ ನಿರೂಪಣೆಯಲ್ಲಿ ಸ್ವ ಮರುಕದ ಆಯಾಮವೇ ಮುಖ್ಯವಾಗಿದೆ. ತಾನೆ ತೆಗೆದು ಕೊಂಡ ತೀರ್ಮಾನಗಳಿಗೆ ಅನುಗುಣವಾಗಿ ಬದುಕು ತೆಗೆದುಕೊಳ್ಳುವ ತಿರುವುಗಳಿಗೆ ನಾವೇ ಹೊಣೆಯಲ್ಲದೆ, ಆ ಇನ್ನೊಬ್ಬರನ್ನು ಆರೋಪಿಯ ಸ್ಥಾನದಲ್ಲಿ ನಿಲ್ಲಿಸುವುದರ ಬಗ್ಗೆ ನಾವು ತಕರಾರು ಎತ್ತುವುದು ಸಾಧ್ಯ. ಗಂಡು ತನ್ನ ದತ್ತ ಅಧಿಕಾರವನ್ನು ಬಳಸಿ, ಹೆಣ್ಣನ್ನೂ, ಹೆಣ್ಣಿನ ಜೊತೆಗಿನ ಸಂಬಂಧವನ್ನೂ ಬಳಸಿ ಬಿಸಾಡುತ್ತಾನೆ. ಅದರ ಅರಿವಿದ್ದೂ ಆ ಸಂಬಂಧಕ್ಕೆ ಒಳಗಾಗುವ ಹೆಣ್ಣಿಗೆ ಇರಬೇಕಾದ ಸ್ಪಷ್ಟತೆಗಳೆಂದರೆ, ಒಂದೋ ಅದನ್ನು ಅದರ ತಾರ್ಕಿಕ ಅಂತ್ಯದಲ್ಲಿ ಕೊನೆಗಾಣಿಸುವ ಬೌದ್ಧಿಕ ಸ್ಪಷ್ಟತೆ, ಇದಕ್ಕೆ ಪೂರಕವಾದ ಮನೋಬಲವೂ ಸೇರಿ ಹೋರಾಟವೊಂದನ್ನು ನಡೆಸಲು ಬೇಕಾದ ಮನಸ್ಥಿತಿ ರೂಪುಗೊಳ್ಳುತ್ತದೆ.

ಇಲ್ಲವೇ ಇದರ ಮುಂದುವರಿದ ಸ್ಥಿತಿಯಲ್ಲಿ, ಇದು ನನಗೆ ಬೇಕಾಗಿ  ನಾನೇ ತೆಗೆದುಕೊಂಡ ನಿರ್ಧಾರ, ಇದರ ಆಗು ಹೋಗುಗಳಿಗೆ ‘ಆತನನ್ನು’ ಹೊಣೆ ಮಾಡಲಾರೆ ಎನ್ನುವ ದೃಷ್ಟಿಕೋನ. ಈ ಎರಡೂ ಸಾಧ್ಯವಾಗದಾಗ ಮತ್ತು ನಾವು ಬಯಸಿದ ಸಾರ್ಥಕತೆಯ ಆಯಾಮ ಸಿದ್ಧಿಸದೇ ಹೋದಾಗ, ಅದನ್ನು ಎದುರಿಸುವ ಮನೋಬಲವೂ ಇಲ್ಲದಾಗ ಸಹಜವಾಗಿಯೇ ಆತನ ಮೇಲೆ ಆರೋಪ ಪಟ್ಟಿ ಸಿದ್ದವಾಗುತ್ತದೆ. ಶಶಿಕಲಾ ವೀರಯ್ಯಸ್ವಾಮಿಯವರು ಈ ಕೃತಿಯ ನೀಲಾಳ ಚಿತ್ರಣದಲ್ಲಿ ಈ ಎಲ್ಲ ಸಾಧ್ಯತೆಗಳ ಪ್ರಕ್ರಿಯೆಯನ್ನೂ ಕಾಣಿಸಿದ್ದಾರೆ.

ಸ್ವಮರುಕದಿಂದ ಹೆಣ್ಣು ಕೊಡುವುದರಲ್ಲಿ ಪಡೆಯುವ ಸಾರ್ಥಕ್ಯದ ಘಳಿಗೆಯನ್ನು ಹುಡುಕುವ ಪ್ರಯತ್ನ ಇಲ್ಲಿದೆ. ಏನು ಮಾಡಿಯೂ ಬದುಕು ತನ್ನ ಪಾಲಿಗೆ ಕ್ರೂರಿಯಾದಾಗ ತನ್ನ ಔದಾರ್ಯದಲ್ಲೇ ಅದನ್ನು ಎದುರಿಸುವ ಮನಸ್ಥಿತಿಯನ್ನು ಇಲ್ಲಿನ ನೀಲಾ ನಿಧಾನವಾಗಿ ಪಡೆದುಕೊಳ್ಳುತ್ತಾ ಹೋಗುತ್ತಾಳೆ. ಈ ಔದಾರ್ಯದಲ್ಲೇ ತನ್ನನ್ನು ಕಡೆಗಣಿಸಿದವರನ್ನು ಆಕೆ ಮಣಿಸುತ್ತಾಳೆ. ಇದು ದೌರ್ಬಲ್ಯವಲ್ಲ, ಶಕ್ತಿ ಎನ್ನುವ ಅರಿವು ಇದನ್ನೊಂದು ಕರುಣಾಜನಕ ಕತೆಯಾಗಿಸದೇ ಧೀರೋದಾತ್ತ ಹೋರಾಟವಾಗಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT