ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾರಿತ್ರಿಕ ಅಗತ್ಯದ ಮಹತ್ವದ ವಾಚಿಕೆ

ವಿಮರ್ಶೆ
Last Updated 12 ಡಿಸೆಂಬರ್ 2015, 19:36 IST
ಅಕ್ಷರ ಗಾತ್ರ

ಬಹುಭಾಷಾ ಸಂಬಂಧ ಮತ್ತು ಸಂದರ್ಭ ಕನ್ನಡಕ್ಕೆ ಹೊಸದಲ್ಲ. ಪಶ್ಚಿಮದಿಂದ ಮಾತ್ರವಲ್ಲದೆ ಎಲ್ಲ ದಿಕ್ಕಿನಿಂದ ಅರಿವಿನ ತೊರೆ ಕನ್ನಡ ತಿಳಿವಳಿಕೆಯನ್ನು ತೋಯಿಸಿ ರೂಪಿಸಿದೆ. ಏಕಮುಖಿಯಾದ ಈ ಹರಿವು ಉಭಯಮುಖಿಯಾಗಿ ಚಲಿಸಬೇಕು. ಭಾರತೀಯ ಭಾಷೆಗಳಲ್ಲಿ ಕನ್ನಡ ಸಾಹಿತ್ಯಧಾರೆಯನ್ನು ಅನ್ಯಾನ್ಯ ಭಾಷೆಗಳಲ್ಲಿ ಹರಿಸುವ ಪ್ರಯತ್ನಗಳು ಅಲ್ಪಸ್ವಲ್ಪ ಪ್ರಮಾಣದಲ್ಲಿ ನೂರೈವತ್ತು ವರ್ಷಗಳಿಂದ ನಡೆದಿದೆ.

ಹಾಗೆಯೇ ಇಂಗ್ಲಿಷಿನ ಮೂಲಕ ಕನ್ನಡವನ್ನು ಜಾಗತಿಕ ವೇದಿಕೆ ಹತ್ತಿಸುವ ಪ್ರಯತ್ನಗಳು ಆಗಿವೆ. ಎಡ್ವರ್ಡ್ ಪಿ. ರೈಸ್, ಬೆಂಜಮಿನ್ ಲೂಯಿ ರೈಸ್, ರೆವರೆಂಡ್ ಎಫ್. ಕಿಟೆಲ್, ಆರ್. ನರಸಿಂಹಾಚಾರ್, ವಿ. ಸೀತಾರಾಮಯ್ಯ, ರಂ.ಶ್ರೀ. ಮುಗಳಿ, ಎ.ಕೆ. ರಾಮಾನುಜನ್, ಟಿ.ಆರ್. ಶರ್ಮ, ಎಲ್.ಎಸ್. ಶೇಷಗಿರಿರಾವ್, ಸ್ಟೆಫನ್ ಅನೆಕರ್, ಶೆಲ್ಡನ್ ಪೊಲ್ಲಾಕ್, ಹಂಪನಾ  ಇನ್ನೂ ಮುಂತಾದವರು ಆಂಗ್ಲ ಭಾಷೆಯಲ್ಲಿ ಕನ್ನಡ ಸಾಹಿತ್ಯ ಭಾಗಗಳನ್ನು ಬಿಂಬಿಸಿದ್ದಾರೆ.

ವಚನ ವಾಙ್ಮಯವನ್ನೂ ಕನಕದಾಸರ ಮತ್ತು ಕುವೆಂಪುರವರ ಸಾಹಿತ್ಯವನ್ನೂ ಅನ್ಯಾನ್ಯ ಭಾಷೆಗಳಿಗೆ ಇಳಿಸುವ ಪ್ರಯತ್ನಗಳು ನಡೆದಿವೆ. ಇದುವರೆಗೆ ಆಗಿರುವುದಕ್ಕಿಂತ ಇನ್ನೂ ಆಗಬೇಕಾಗಿರುವುದು ಅಗಾಧವಾಗಿದೆ. ಹೋಲಿಕೆಯಿತ್ತು ಹೇಳುವುದಾದರೆ, ನಮ್ಮ ನೆರೆಯ ತಮಿಳು ಭಾಷಾ ಸಾಹಿತ್ಯದ ಕುರಿತು ಇಂಗ್ಲಿಷಿನಲ್ಲಿಯೂ ಯೂರೋಪು ಭಾಷೆಗಳಲ್ಲೂ ವಿಪುಲವಾದ ಬರೆಹ ಬಂದಿದೆ. ಕನ್ನಡ ಸಾಹಿತ್ಯವನ್ನು ಕನ್ನಡೇತರರಿಗೆ, ಅದರಲ್ಲಿಯೂ ಭಾರತೀಯೇತರರಿಗೆ, ಪರಿಚಯಿಸುವ ಕಾರ್ಯ ಜರೂರಾಗಿ ಆಗಬೇಕಾದ ಕೆಲಸ.

ಇದು ಕಷ್ಟಸಾಧ್ಯವೆನಿಸಲು ಎದುರಾಗುವ ತೊಡಕುಗಳು. ಹೆಚ್ಚು ಓದನ್ನೂ ವಿದ್ವತ್ತನ್ನೂ ಸಾಹಿತ್ಯದೊಂದಿಗೆ ಉಭಯ ಭಾಷಾಜ್ಞಾನವನ್ನೂ ಈ ಕಾರ್ಯ ಬಯಸುತ್ತದೆ. ಜತೆಗೆ ಭಾಷಾಂತರಕಾರರು ಪೂರ್ವಗ್ರಹ ಮುಕ್ತರಾಗಿದ್ದು ವಸ್ತುನಿಷ್ಠ ಮತ್ತು ಪ್ರಾತಿನಿಧಿಕ ಕೃತಿ(ಭಾಗ)ಗಳನ್ನು ಆಯ್ದುಕೊಳ್ಳುವ ಹೊಣೆಗಾರಿಕೆ ಇರುತ್ತದೆ. ಕನ್ನಡ ಸಾಹಿತ್ಯದ ಸಾತತ್ಯದಲ್ಲಿನ ಪ್ರಧಾನ ಒಲವು, ಪ್ರವೃತ್ತಿ, ಬದಲಾವಣೆಗಳು, ಸಾಹಿತ್ಯ ಚಳವಳಿಗಳ ಸ್ವರೂಪ ಮತ್ತು ಲಕ್ಷಣಗಳನ್ನು ಅರಿಯುವ ಕುತೂಹಲ ಇತ್ತೀಚಿನ ದಶಕಗಳಲ್ಲಿ ಗರಿಗೆದರಿದೆ. ಕನ್ನಡದ ವೈವಿಧ್ಯ, ಸಮೃದ್ಧಿ, ವಿಸ್ತಾರ ಮತ್ತು ಮಹತ್ವವನ್ನು ಅನ್ಯಭಾಷಾ ಸಾಹಿತ್ಯ ವಲಯಕ್ಕೆ ತಲಪಿಸುವ ಜವಾಬ್ದಾರಿ ಬಹು ಭಾಷಾವಿಶಾರದ ಲೇಖಕರ ಮೇಲಿದೆ.

ವಿಶ್ವಜ್ಞಾನವನ್ನು ಕನ್ನಡಿಗರಿಗೂ ಕನ್ನಡದ ಅರಿವನ್ನು ಲೋಕಕ್ಕೂ ಆದಾನ ಪ್ರದಾನ ಮಾಡುವ ನೋಂಪಿ ಹೊತ್ತು ಹುಟ್ಟಿದ್ದು ಕನ್ನಡ ವಿಶ್ವವಿದ್ಯಾಲಯ. ಕನ್ನಡ ಸಾಹಿತ್ಯದ ಮೂಲ ಚೂಲಗಳನ್ನು ಉಭಯಭಾಷಾ ಸಾಹಿತ್ಯ ಪರಿಣತರಿಂದ ಸುವ್ಯವಸ್ಥಿತವಾಗಿ ಬರೆಸಿ ಹೊರತರುವ ಸಾಂಸ್ಥಿಕ ಪ್ರಯತ್ನದಲ್ಲಿ ಕನ್ನಡ ವಿವಿ ಮುಂಚೂಣಿಯಲ್ಲಿದೆ. ‘ದಿ ಸೈನ್’ (ಅಂಕಿತ), ‘ಸ್ಟ್ರಿಂಗ್ಸ್ ಅಂಡ್ ಸಿಂಬಲ್’ (ತಂತಿ ಮತ್ತು ತಾಳ), ‘ಕುವೆಂಪುರವರ ಆಯ್ದ ಕವಿತೆಗಳು’, ‘ರಾಮಧಾನ್ಯ ಚರಿತೆ’ ಮೊದಲಾದ ಅನುವಾದಗಳನ್ನು ವಿವಿ ಹೊರ ತಂದಿದೆ.

ಇದೀಗ ಆಸಕ್ತ ಅಕನ್ನಡಿಗರಿಗೆ ಕನ್ನಡದ ಐಸಿರಿ–ಅಸ್ಮಿತೆಗಳನ್ನು ಬಿತ್ತಿ ಹಬ್ಬಿಸಲು ‘ಕ್ಲಾಸಿಕಲ್ ಕನ್ನಡ ಪೊಯೆಟ್ರಿ ಅಂಡ್ ಪ್ರೋಸ್ : ಎ ರೀಡರ್’ (ಅಭಿಜಾತ ಕನ್ನಡ ಕಾವ್ಯ ಮತ್ತು ಗದ್ಯ) ಎಂಬ ವಾಚಿಕೆಯನ್ನು ಇಬ್ಬರು ಪ್ರಾಜ್ಞರ ಸಂಪಾದಕತ್ವದಲ್ಲಿ ಹೊರತಂದಿದೆ. ಸಿ.ಎನ್. ರಾಮಚಂದ್ರನ್ ಭಾರತದ ಒಳಗೂ ಹೊರಗೂ ಇಂಗ್ಲಿಷ್ ಸಾಹಿತ್ಯ ಬೋಧನಾನುಭವ ಇರುವ ಹಿರಿಯ ಬರೆಹಗಾರರು. ಬಿ.ಎ. ವಿವೇಕರೈ ಕನ್ನಡ-ತುಳು-ಇಂಗ್ಲಿಷ್ ಭಾಷಾ ಸಾಹಿತ್ಯದಲ್ಲಿ ಸಮದಂಡಿಯಾದ ಪರಿಶ್ರಮವಿರುವ ಹಿರಿಯ ವಿದ್ವಾಂಸರು.

ಈ ಅಭಿಜಾತ ಸಾಹಿತ್ಯ ವಾಚಿಕೆಯ ಸ್ವರೂಪ ಮತ್ತು ಆಧರಿಸಿರುವ ಸೂತ್ರವನ್ನು ಮನಗಾಣಬೇಕು. ಕನ್ನಡದಲ್ಲಿ ಪೂರ್ಣಪ್ರಮಾಣದಲ್ಲಿ ಸಿಗುವ ಮೊಟ್ಟ ಮೊದಲನೆಯದಾದ ಹಲ್ಮಿಡಿ ಶಾಸನದಿಂದ ತೊಡಗಿ, ಆಂಡಯ್ಯ ಕವಿಯವರೆಗೆ ಈ ಅಭಿಜಾತ ಕನ್ನಡ ಕಾವ್ಯ ಮತ್ತು ಗದ್ಯ ವಾಚಿಕೆಯ ಹರಹು ಇದೆ. ಅಂದರೆ ಸುಮಾರು ಆರು ನೂರು ವರ್ಷಗಳ ವ್ಯಾಪ್ತಿಯಲ್ಲಿ ಅರಳಿ ಪಲ್ಲವಿಸಿದ ಕನ್ನಡ ಸಾಹಿತ್ಯ ಚರಿತ್ರೆಯ ಮುಖ್ಯ ಮಜಲುಗಳ ಶಿಖರಗಳನ್ನು ಪರಿಚಯಿಸಿದ್ದಾರೆ.

ಉಪೋದ್ಘಾತದಲ್ಲಿ ಕನ್ನಡ ಭಾಷಾಸಾಹಿತ್ಯದ ಆಕೃತಿ, ಆಶಯ, ಅನನ್ಯತೆಯನ್ನು ಹರಳುಗೊಳಿಸಿ ಮಂಡಿಸಿದ್ದಾರೆ. ವಾಚಿಕೆಯ ಓದುಗರಿಗೆ ಇದು ಉಪಯುಕ್ತ ಪ್ರವೇಶದಾಯಿನಿ. ಕರ್ನಾಟಕದ ಭೌಗೋಳಿಕ ಚೌಕಟ್ಟು, ಕನ್ನಡ ಭಾಷೆ, ಹಾಗೂ ಸಾಹಿತ್ಯ ಸಂಬಂಧವಾಗಿ ಈ ಸ್ಥೂಲ ರೂಪರೇಖೆಗಳು ವಾಚಕರ ಓದಿಗೆ ನೆರವಾಗಿವೆ. ಇದಲ್ಲದೆ ಅನುಬಂಧದಲ್ಲಿ ಕನ್ನಡ ಭಾಷೆಯ ವಿಕಾಸದಲ್ಲಿ ಕಾಣುವ ಮುಖ್ಯ ಮಜಲುಗಳು, ಕೆಲವು ಪಾರಿಭಾಷಿಕ ಶಬ್ದಗಳ ಅರ್ಥ, ಸಹಾಯಸಾಹಿತ್ಯ ಸೂಚಿಗಳಿವೆ.

ಮುನ್ನೂರು ಪುಟಗಳ ವಾಚಿಕೆಯಲ್ಲಿ ಎರಡು ಪ್ರಧಾನ ಭಾಗಗಳಿವೆ. ಮೊದಲನೆಯ ಭಾಗದಲ್ಲಿ ಆರು ಹಾಗೂ ಎರಡನೆಯ ಭಾಗದಲ್ಲಿ ಹನ್ನೆರಡು ಉಪವಿಭಾಗಗಳಿವೆ. ಸಂಪಾದಕರ ಪೀಠಿಕೆಯಲ್ಲಿ ಇಡೀ ವಾಚಿಕೆಯ ಪರಿಕಲ್ಪನೆಯ ಸ್ವರೂಪದ ನಿರ್ವಚನವಿದೆ. ತರುವಾಯದ ಐದು ಉಪಶೀರ್ಷಿಕೆಗಳಲ್ಲಿ– ಕ್ರಮವಾಗಿ, ಕರ್ನಾಟಕದ ಭೌಗೋಳಿಕ ಹರಹು, ಇತಿಹಾಸ, ಕನ್ನಡ ಭಾಷೆಯ ಚರಿತ್ರೆ, ಕನ್ನಡ ಶಾಸನಗಳು ಮತ್ತು ಅಭಿಜಾತ ಕಾವ್ಯದ ಪ್ರಮುಖ ಲಕ್ಷಣಗಳ ಸ್ವರೂಪ ಕುರಿತಾದ ಹರಳುಗೊಳಿಸಿಟ್ಟ ಪರಿಚಯವಿದೆ. ಕನ್ನಡ ಸಾಹಿತ್ಯ ಕಣ್ಣು ತೆರೆದದ್ದು ಶಾಸನಗಳ ರೂಪದಲ್ಲಿ. ಸುಮಾರು ಇಪ್ಪತ್ತು ಸಾವಿರ ಶಾಸನಗಳು ಕರ್ನಾಟಕದಲ್ಲಿ ಬೆಳಕಿಗೆ ಬಂದಿವೆ.

ಅಪಾರ ಶಾಸನ ಸಂಪತ್ತು ವೀರಗಲ್ಲು, ಮಾಸ್ತಿಗಲ್ಲು, ನಿಶಿಧಿಗಲ್ಲು, ದಾನಶಾಸನ, ಪ್ರಶಸ್ತಿ ಶಾಸನ, ಪ್ರಕಾರಗಳಲ್ಲಿರುವುದನ್ನು ಹೇಳಿದ್ದಾರೆ. ಹಲ್ಮಿಡಿ ಮತ್ತು ಬಾದಾಮಿಯ ಶಿಲಾಶಾಸನಗಳನ್ನು ಪ್ರಾತಿನಿಧಿಕವಾಗಿ ಅಳವಡಿಸಿರುವುದು ಔಚಿತ್ಯಪೂರ್ಣವಾಗಿದೆ. ಈ ಎರಡು ಶಾಸನಗಳನ್ನು ಕನ್ನಡ ಲಿಪಿಯ ಜತೆಗೆ ಲಿಪ್ಯಂತರ ರೂಪದಲ್ಲಿ ಕೊಟ್ಟು ಅನಂತರ ಇಂಗ್ಲಿಷ್ ಭಾಷಾಂತರವೂ ಪೂರಕ ಟಿಪ್ಪಣಿಗಳೂ ಯಥೋಚಿತವಾಗಿ ಬಂದಿವೆ. ಹೆಚ್ಚು ತಿಳಿಯಬಯಸುವವರ ಮಾಹಿತಿಗಾಗಿ. ಅನುಬಂಧದಲ್ಲಿ ಇವೆರಡರ ಜತೆಗೆ ಇನ್ನೂ ಏಳು ಪ್ರಮುಖ ಶಾಸನಗಳನ್ನು ಹೆಸರಿಸಿದ್ದಾರೆ.

ಒಂದನೆಯ ಭಾಗದ ಮೂರನೆಯ ಉಪವಿಭಾಗದಿಂದ ಮುಂದಿನ ಎಲ್ಲ ಉಪಶೀರ್ಷಿಕೆಗಳ ಆರಂಭದಲ್ಲಿ ಪುಟ್ಟ ಪ್ರವೇಶಿಕೆಯಿದ್ದು ಆಯಾ ಕವಿ-ಕೃತಿಯ ಪರಿಚಯವಿದೆ. ಅನಂತರ ಆಯಾ ಕಾವ್ಯದಿಂದ ಆಯ್ದ ಭಾಗ ಮತ್ತು ಸಾರಾಂಶವನ್ನು ಕೊಡಲಾಗಿದೆ. ಕಾಲಾನುಕ್ರಮಣಿಕೆಯನ್ನು ಅನುಸರಿಸಿದ್ದಾರೆ. ಶ್ರೀವಿಜಯ ಕವಿಯ ‘ಕವಿರಾಜಮಾರ್ಗ’ದ ವೈಶಿಷ್ಟ್ಯ ತೋರಿಸುವ ಪದ್ಯಗಳ ಭಾಷಾಂತರವಿದೆ. ‘ವಡ್ಡಾರಾಧನೆ’ಯ ಕರ್ತೃ-ಕಾಲದ ಚರ್ಚೆಯನ್ನು ಮಿತವಾಗಿ ಪ್ರಸ್ತಾಪಿಸಿದ ಮೇಲೆ ಅದ್ಭುತವೆನಿಸುವ ವಿದ್ಯುಚ್ಚೋರನ ಮತ್ತು ಗಜಕುಮಾರನ ಕಥೆಗಳನ್ನು ಸೊಗಸಾಗಿ ಭಾಷಾಂತರಿಸಿದ್ದಾರೆ. ‘ವಿದ್ಯುಚ್ಚೋರನ ಕಥೆ’ ರೋಚಕವಾಗಿದ್ದು ಕನ್ನಡೇತರರಿಗೆ ಪ್ರಿಯವಾಗುತ್ತದೆ.

ಇದೇ ರೀತಿ ಇನ್ನೊಂದು ಗದ್ಯಕೃತಿ ‘ಚಾವುಂಡರಾಯಪುರಾಣ’ದಲ್ಲಿ ನೇಮಿನಾಥಪುರಾಣ ಅಂತರ್ಗತ ಬಲಿ ಮತ್ತು ಕೃಷ್ಣನ ಕಥಾ ಭಾಗವನ್ನು ಆರಿಸಿರುವುದು ಲೇಸಾಗಿದೆ. ದುರ್ಗಸಿಂಹನ ‘ಕರ್ಣಾಟಕ ಪಂಚತಂತ್ರ’ವನ್ನೂ ಅದರ ಎರಡು ಸಂಪ್ರದಾಯಗಳನ್ನೂ ತಿಳಿಸಲು ಮರೆತಿಲ್ಲ. ಪಂಚತಂತ್ರ ಕಾವ್ಯದ ರಾಚನಿಕ ವಿಶೇಷತೆಯನ್ನು ಸೂಚಿಸಿ ಸುಪ್ರಸಿದ್ಧ ಕೋತಿ-ಮೊಸಳೆ ಹಾಗೂ ಬಿಳಿಕತ್ತೆ-ಗುಳ್ಳೆನರಿ ಎಂಬ ಕಥಾಪ್ರಸಂಗವನ್ನು ಸ್ವಾರಸ್ಯಗೆಡದಂತೆ ನಿರೂಪಿಸಲಾಗಿದೆ.

ಎರಡನೆಯ ಭಾಗ ‘ಅಭಿಜಾತ ಕನ್ನಡ ಕಾವ್ಯ’ ವಾಚಿಕೆಯ ಹೃದಯ. ಒಟ್ಟು ಮುನ್ನೂರು ಪುಟದ ಗ್ರಂಥದಲ್ಲಿ ಈ ಭಾಗ 187 ಪುಟ ಎಡೆಪಡೆದು ಕನ್ನಡ ಕಾವ್ಯಗಳ ವೈಶಿಷ್ಟ್ಯ, ವೈವಿಧ್ಯ, ವೈಭವಗಳ ರನ್ನಗನ್ನಡಿಯಾಗಿ ಮೈತುಂಬಿ ಬಂದಿದೆ. ಸಿರಿಗನ್ನಡದ ಸಾರಸರ್ವಸ್ವವೆನಿಸಿದ ಚಂಪೂ ಕವಿ-ಕಾವ್ಯಗಳ ಸೋಪಜ್ಞತೆ, ಹಿರಿಮೆ ಹಾಗೂ ಅಗ್ಗಳಿಕೆಯನ್ನು ಬಿಚ್ಚಳಿಸುವ ಪ್ರಕರಣಗಳು ಒಂದಾದ ಮೇಲೆ ಒಂದೊಂದು ಬಂದು ಸುರಚಾಪವಾಗಿವೆ.

ಚಂಪೂ ಕಾವ್ಯ ಪ್ರಕಾರ ಪ್ರಧಾನ ಸಾಹಿತ್ಯ ಪ್ರಕಾರವಾಗಿರುವ ಹಳಗನ್ನಡ ಸಾಹಿತ್ಯ ಭಂಡಾರವನ್ನು ಆಯ್ದ ಪಠ್ಯಭಾಗಗಳೆಂಬ ಪ್ರಿಸಮ್ಮಿನ ಮೂಲಕ ಉಜ್ವಲವಾಗಿ ಬಿಂಬಿಸಲಾಗಿದೆ. ಪಂಪ. ಪೊನ್ನ, ರನ್ನ, ನಾಗವರ್ಮ, ನಾಗಚಂದ್ರ, ಶಾಂತಿನಾಥ, ನಯಸೇನ, ನೇಮಿಚಂದ್ರ, ರುದ್ರಭಟ್ಟ, ಬ್ರಹ್ಮಶಿವ, ಜನ್ನ ಮತ್ತು ಆಂಡಯ್ಯ– ಈ ಹನ್ನೆರಡು ಕವಿಗಳ ಮತ್ತು ಕಾವ್ಯಗಳ ಸ್ಥೂಲ ಪರಿಚಯವಿತ್ತು, ತದನಂತರ ಕಾವ್ಯದ ಸೂಕ್ಷ್ಮ ಭಾಗಗಳ ಭಾಷಾಂತರವಿದೆ.

ಮಾರ್ಗ ಹಾಗೂ ವಸ್ತುಕ ಕವಿಗಳು ತುಂಬಿ ತುಳುಕುವ ಎರಡನೆಯ ಭಾಗ ಪ್ರತಿಭಾನ್ವಿತ ವರಕವಿಗಳ ಪರಿಚಯದ ಮೂಲಕ ಉದ್ಘಾಟಿತವಾಗಿರುವುದು ಅರ್ಥಪೂರ್ಣವಾಗಿದೆ. ಅರೆಕೊರೆ ಆಗದಂತೆ ಪಂಪನ ವಂಶಾವಳಿ, ಜೀವನ ವಿವರ ಭಟ್ಟಿಯಿಳಿದಿದೆ. (ಪಂಪನ ತಮ್ಮ ಹಾಗೂ ಮೂರು ಭಾಷೆಗಳ ಕವಿ ಜಿನವಲ್ಲಭನ ಉಲ್ಲೇಖವೂ ಬರಬೇಕಿತ್ತು). ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ದ (ಪಂಪ ಭಾರತ) ಆಕರ ತಿಳಿಸಿ, ಸಾರಾಂಶವಿತ್ತು, ವಸ್ತು-ಛಂದಸ್ಸು ಮತ್ತು ಕಾವ್ಯ ನಿರ್ವಹಣೆಯ ಹೆಚ್ಚಳವನ್ನು ಸೂಚಿಸಿದ್ದಾರೆ. ಪಂಪನ ಕಾವ್ಯಸೃಷ್ಟಿ ಶಕ್ತಿಗೆ ನೀಲಾಂಜನೆಯ ನೃತ್ಯ ಮತ್ತು ಭರತ-ಬಾಹುಬಲಿ ವಿರಸ ಪ್ರಸಂಗಗಳನ್ನು ‘ಆದಿಪುರಾಣ’ದಿಂದ ಎತ್ತಿಕೊಂಡಿದ್ದಾರೆ.

ದ್ರೋಣ-ದ್ರುಪದ ಸಂವಾದ, ಕರ್ಣ-ಅರ್ಜುನ ಬಿಲ್ವಿದ್ಯೆ ಪ್ರದರ್ಶನದಲ್ಲಿ ನಡೆದ ವಾಗ್ವಾದ ಪ್ರಕರಣ, ಬನವಾಸಿಯ ವರ್ಣನೆ, ಖಾಂಡವವನ ದಹನ, ಶಿಶುಪಾಲವಧೆ ಪ್ರಕರಣ, ಕೌರವನ ರಾಜಸಭೆಯಲ್ಲಿ ದ್ರೌಪದಿಯನ್ನು ಕರೆಸಿದ ಹಗರಣ, ಕೃಷ್ಣನ ರಾಯಭಾರ, ಕೌರವ ಸೇನೆಗೆ ಭೀಷ್ಮನಿಗೆ ನಾಯಕಪಟ್ಟ ಕಟ್ಟುವುದು, ಕರ್ಣಾವಸಾನ ಮತ್ತು ಕವಿಯ ಆತ್ಮವೃತ್ತಾಂತ  ಪಂಪಭಾರತದಿಂದ ಈ ಹತ್ತು ಉತ್ತಮ ಪ್ರಸಂಗಗಳ ಸೇರ್ಪಡೆ ಸಾಧುವಾಗಿದೆ. ಅನುವಾದಕರಿಗೆ ಸವಾಲಾಗುವ ಮಹತ್ವದ ಮತ್ತು ಅಷ್ಟೇ ಸ್ವಾರಸ್ಯವಾದ ಸನ್ನಿವೇಶಗಳಿವು.

ಪಂಪನ ಔನ್ನತ್ಯವನ್ನು ಸ್ಥಾಪಿಸಲು ಗ್ರಂಥದ ಐದನೆಯ ಒಂದು ಭಾಗ ವಿನಿಯೋಗಿಸಿರುವುದು ಸಮಂಜಸವಾಗಿದೆ. ಪೊನ್ನ ಕವಿಯ ಬದುಕು, ಅನುಪಲಬ್ಧ ‘ಭುವನೈಕರಾಮಾಭ್ಯುದಯ’ ಕಾವ್ಯದ ವಿಚಾರ ಸರಿಯಾಗಿ ಮೂಡಿದೆ. ಆದರೆ ‘ಶಾಂತಿಪುರಾಣ’ದ ಗರಿಮೆಯನ್ನು ಒಂದಾದರೂ ಸನ್ನಿವೇಶದ ಮೂಲಕ ತೋರಿಸಬಹುದಿತ್ತು. ಉದಾಹರಣೆಗೆ ಚಾರಿತ್ರಿಕ ಪಾತ್ರಗಳಾದ ಮಲ್ಲಪಯ್ಯ - ಪುನ್ನಮಯ್ಯರ ಅಪೂರ್ವ ಸೋದರತ್ವವನ್ನು ಪ್ರಚುರಪಡಿಸುವ ಪದ್ಯಗಳನ್ನು ಅಳವಡಿಸಬಹುದಿತ್ತು. ಈ ಇತಿಹಾಸ ಪುರುಷರನ್ನು ಪೌರಾಣಿಕ ಪಾತ್ರಗಳೊಂದಿಗೆ ಧಾರ್ಮಿಕ ಕಾವ್ಯದಲ್ಲಿ ತಗುಳ್ಚಿರುವುದು ಪೊನ್ನನ ಸ್ವಂತಿಕೆ ಮತ್ತು ಅವನ ಕಾವ್ಯದ ಮನೋಜ್ಞ ಭಾಗ.

ಪಂಪನ ತರುವಾಯ ಆದ್ಯತೆಯಿತ್ತು ಬಿತ್ತರಿಸಿರುವ ಶಕ್ತಿಕವಿ ರನ್ನನಿಗೆ ನ್ಯಾಯ ದೊರೆತಿದೆ. ರನ್ನಕವಿಯ ಏರೇರಿಕೆಯ ಬಾಳಿನ ಹಾದಿಯನ್ನು ಸೂಚಿಸಿ ಆತನ ಉಪಲಬ್ಧ ಕಾವ್ಯಗಳೆರಡರ ಸ್ವರೂಪವನ್ನು ಮನಗಾಣಿಸಿದ್ದಾರೆ. ‘ಸಾಹಸಭೀಮವಿಜಯ’ (ಗದಾಯುದ್ಧ) ಕಾವ್ಯದಿಂದ– ಕುರುಕ್ಷೇತ್ರ ರಣರಂಗ, ವೈಶಂಪಾಯನ ಸರೋವರ, ಭೀಮ-ದುರ್ಯೋಧನರ ಮುಖಾಮುಖಿ ಮತ್ತು ಗದಾಯುದ್ಧ ಪ್ರಸಂಗಗಳಲ್ಲಿ ರನ್ನತನ ಮೈದೋರಿರುವುದನ್ನು ಪ್ರಕಟಿಸಲಾಗಿದೆ. ಈ ಆಯ್ಕೆಯಲ್ಲಿ ಕಥಾವಸ್ತುವಿನ ಕ್ರಮಪ್ರಾಪ್ತ ಬೆಳವಣಿಗೆಯೊಂದಿಗೆ ಒಳನೋಟಗಳೂ ಮಿನುಗಿವೆ.

ನಾಗವರ್ಮ ಹೆಸರಿನ ಬೇರೆ ಬೇರೆ ಕವಿಗಳು ಇರುವುದನ್ನು ಸೂಚಿಸಿ ಮುಖ್ಯವಾಗಿ ‘ಕರ್ಣಾಟಕ ಕಾದಂಬರಿ’ ಕಾವ್ಯದ ಮಹೋನ್ನತಿಯನ್ನು ಮನೋಜ್ಞವಾಗಿ ಕನ್ನಡಿಸಲಾಗಿದೆ. ಚಂದ್ರಾಪೀಡ, ಮಹಾಶ್ವೇತೆ, ಕಾದಂಬರಿಯರ ಪಾತ್ರಗಳು ಓದುಗರ ಚಿತ್ತಭಿತ್ತಿಯಲ್ಲಿ ಅಚ್ಚೊತ್ತಿ ನಿಲ್ಲುತ್ತವೆ. ಅಭಿನವಪಂಪ ನಾಗಚಂದ್ರನ ‘ರಾಮಚಂದ್ರಚರಿತಪುರಾಣ’ (ಪಂಪರಾಮಾಯಣ)ದ ಸೀತಾಪಹರಣ ಮತ್ತು ಸೀತಾಪರಿತ್ಯಾಗದ ಚಿತ್ರಣ ಹೃದ್ಯತರವಾಗಿದೆ.

ಶಾಂತಿನಾಥನ ‘ಸುಕುಮಾರಚರಿತೆ’, ನಯಸೇನನ ‘ಧರ್ಮಾಮೃತ’, ರುದ್ರಭಟ್ಟನ ‘ಜಗನ್ನಾಥವಿಜಯ’ ಮತ್ತು ಬ್ರಹ್ಮಶಿವನ ‘ಸಮಯಪರೀಕ್ಷೆ’ ಕಾವ್ಯಗಳನ್ನು ಈ ವಾಚಿಕೆಗಿರುವ ಪುಟ ಪರಿಮಿತಿಯಿಂದಾಗಿ, ನಾಲ್ಕು ನಾಲ್ಕು ಪುಟಗಳಲ್ಲಿ ಹರಳುಗೊಳಿಸಲಾಗಿದೆ. ಕಾವ್ಯ ಭಾಗಗಳ ಆಯ್ಕೆ ಇಲ್ಲವಾದರೂ ಕವಿ-ಕಾವ್ಯದ ಮಾಹಿತಿಗಳೆಲ್ಲ ಅಚ್ಚುಕಟ್ಟಾಗಿ ಬಂದಿವೆ. ಆಂಡಯ್ಯನ ಅಚ್ಚಗನ್ನಡ ಒಲವರವನ್ನು ಹೊರಹೊಮ್ಮಿಸುವ ‘ಕಬ್ಬಿಗರ ಕಾವ’ದಿಂದಲೂ ಉದಾಹರಣೆಗಳಿವೆ. ನೇಮಿಚಂದ್ರನ ಸೃಷ್ಟಿಸಾಮರ್ಥ್ಯವನ್ನು ತುಂಬಿಕೊಂಡ ಒಂದೆರಡು ಒಳ್ಳೆಯ ಉದಾಹರಣೆಗಳನ್ನು ‘ಲೀಲಾವತೀಪ್ರಬಂಧಂ’ ಮತ್ತು (ಅರ್ಧ)‘ನೇಮಿನಾಥಪುರಾಣ’ ಕಾವ್ಯಗಳಿಂದ ಹೆಕ್ಕಿ ತೆಗೆದಿದ್ದಾರೆ.

ಹೊಸ ಕಾಲದ ವಿಮರ್ಶಕರ ಮತ್ತು ಕಾವ್ಯೋಪಾಸಕರ ಮೆಚ್ಚಿನ ಕವಿ ಜನ್ನ. ಜನ್ನಕವಿ ಧ್ವನಿರಮ್ಯವಾಗಿ ಸೂಚಿಸಿರುವ ಕಾಮ-ಪ್ರೇಮಗಳ ತರತಮಗಳ ವಿಶ್ಲೇಷಣೆ ಬಹುವಾಗಿ ಚರ್ಚಿತವಾಗಿದೆ. ಗಾತ್ರದಲ್ಲಿ ಪುಟ್ಟದಾದರೂ ಮಹತ್ವತರ ಕಾವ್ಯವಾದ ಜನ್ನನ ‘ಯಶೋಧರಚರಿತೆ’ಯಿಂದ ಪ್ರಭಾವಶಾಲಿಯಾದ ಪದ್ಯಗಳನ್ನು ಆರಿಸಿ ಅನುವಾದಿಸಲಾಗಿದೆ. ಈ ವಾಚಿಕೆಯಲ್ಲಿ ಕ್ರಿ.ಶ. ಐದರಿಂದ ಹದಿಮೂರನೆಯ ಶತಮಾನದವರೆಗಿನ ಚಿರಸ್ಥಾಯಿ ಸ್ಥಾನ ಪಡೆದಿರುವ ಚಿರಂಜೀವ ಕೃತಿಕಾವ್ಯಗಳನ್ನು ಆರಿಸಲಾಗಿದೆ. ಆಯ್ಕೆ ಮಾಡಿದ ಕೃತಿಗಳ ಭಾಗವು ಮತಧರ್ಮಾತೀತವಾಗಿ ಸಾರ್ವತ್ರಿಕವಾಗಬಲ್ಲ ಜೀವನ ದೃಷ್ಟಿಕೋನ ಮತ್ತು ಮೌಲಿಕತೆ ಪಡೆದಿವೆ.

ಇಂಗ್ಲಿಷಿಗೆ ಅನುವಾದಕ್ಕಾಗಿ ಯಾವ ಭಾಗವನ್ನು ಆಯ್ದುಕೊಳ್ಳಬೇಕೆಂಬುದು ಸಂಪಾದಕರ ವಿವೇಚನೆಗೆ, ಅಭಿರುಚಿಗೆ ಸೇರಿದ್ದು. ಆದರೆ ಸ್ವೀಕರಿಸಿರುವ ಭಾಗ, ಸಂದರ್ಭ–ಸನ್ನಿವೇಶ ಮೂಲ ಕವಿಯ ತತ್ವ-ಸತ್ವ-ಸೃಜನ ಸಾಮರ್ಥ್ಯಗಳನ್ನು ಸಮರ್ಥವಾಗಿ ಪ್ರತಿಫಲಿಸಿದೆಯೆ ಎಂದು ಓದುಗರು ವಿಮರ್ಶಿಸಬಹುದು. ಈ ಸವಾಲನ್ನು ಸಂಪಾದಕರು ಸಾಕಷ್ಟು ಸಮರ್ಪಕವಾಗಿ ನಿಭಾಯಿಸಿದ್ದಾರೆ. ಇಂಗ್ಲಿಷ್ ಭಾಷಾಂತರ ಅತ್ಯುಕ್ತಿ–ಅನುಕ್ತಿಗಳಿಗೆ ಅವಕಾಶ ಆಗದಹಾಗೆ ಮೂಲ ಪಾಠಕ್ಕೆ ನಿಷ್ಠವಾಗಿದೆ. ವಿಶೇಷವೆಂದರೆ ಸಂಪಾದಕರು ಲೇಖಕರಾಗಿಯೂ ಮಿಂಚಿದ್ದಾರೆ.

ಓದುಗರ ನೆರವಿಗೆ ಒದಗುವ ಮಾಹಿತಿ ಇರುವ ನಾಲ್ಕು ಅನುಬಂಧಗಳಿವೆ: ಕನ್ನಡದ ಮಹತ್ವದ ಶಿಲಾಲೇಖ-ಶಾಸನಗಳು, ಕನ್ನಡ ಭಾಷೆಯ ವಿಕಾಸದ ವಿನ್ಯಾಸ, ಪರಿಭಾಷಾ ಶಬ್ದಾರ್ಥಕೋಶ ಹಾಗೂ ಗ್ರಂಥ ಸೂಚಿ. ಜತೆಗೆ ಅಲ್ಲಲ್ಲಿ ಗ್ರಂಥಾಂತರ್ಗತ ಸಮುಚಿತ ಅಡಿಟಿಪ್ಪಣಿಗಳಿವೆ. ಇದು ಮತ್ತೆ ಮತ್ತೆ ಮುದ್ರಣವಾಗುತ್ತ ಅನೇಕ ಆವೃತ್ತಿ ಕಾಣುವ ಗ್ರಂಥ. ಮುಂದಿನ ಮುದ್ರಣಕ್ಕೆ ಕೆಲವು ಸಲಹೆಗಳು: ವಾಚಿಕೆಯಲ್ಲಿ ಅನುಸರಿಸಿರುವ ಸಂಕೇತ ಸೂಚಿ, ವ್ಯಕ್ತಿನಾಮ-ಸ್ಥಳನಾಮ ಸೂಚಿ ಅವಶ್ಯ ಇರಬೇಕಿತ್ತು. ಇವಲ್ಲದೆ ಮುಂದಿನ ಪರಿಷ್ಕೃತ ಆವೃತ್ತಿಗೆ ಅವಶ್ಯ ಸೇರಿಸಬೇಕಾದ ಇನ್ನಿಬ್ಬರು ಮಹತ್ವದ ಕವಿಗಳಿದ್ದಾರೆ.

ಕವಿಯೂ ಬಹುಶ್ರುತ ಶಾಸ್ತ್ರಕಾರನೂ ಆದ ನಾಗವರ್ಮನ ವಿಚಾರ ಬರಬೇಕು. ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಆತ ಗಣ್ಯ ಲೇಖಕ. ವ್ಯಾಕರಣ, ಅಲಂಕಾರ, ನಿಘಂಟು, ಶಾಸ್ತ್ರ ಕೃತಿಗಳಲ್ಲದೆ ಚಂಪೂ ಕಾವ್ಯವನ್ನೂ ರಚಿಸಿರುವ ಅಪರೂಪದ ಬಹು ಆಯಾಮಿ ಬರಹಗಾರ. ಮರೆಯಬಾರದ ಇನ್ನೊಬ್ಬ ವಿಶಿಷ್ಟ ಕವಿ ಬಂಧುವರ್ಮ. ಹಿಂಡನಗಲಿದ ಒಂಟಿಸಲಗದಂತೆ ಗಮನ ಸೆಳೆಯುವ ಬಂಧುವರ್ಮನ ‘ಜೀವಸಂಬೋಧನೆ’ ಮತ್ತು ‘ಹರಿವಂಶಾಭ್ಯುದಯ’ ಅಪೂರ್ವ ಕಾವ್ಯಗಳು. ಪಂಪ ಹೇಳಿದ ‘ಅರಿವುದು ಧರ್ಮಮುಮಂ ಕಾವ್ಯಧರ್ಮಮುಮಂ’ ಎಂಬ ಲಕ್ಷಣಕ್ಕೆ ಬಂಧುವರ್ಮನ ಕಾವ್ಯಗಳು ಲಕ್ಷ್ಯವಾಗಿ ನಿಂತಿವೆ. ‘ಅಜಿತಪುರಾಣ’ದಿಂದ ಜೀವಸಂಬೋಧನೆ ಹಾಗೂ ಸಗರನ ಸಂಯಮ ಧ್ವನಿಸುವ ಕೆಲವು ಪದ್ಯಗಳನ್ನು ಆರಿಸಬಹುದು.

ಪರಿಮಿತ ಪ್ರಮಾಣದ ಚೌಕಟ್ಟಿನೊಳಗೆ ಅಪರಿಮಿತವಾದ ಕನ್ನಡ ಸಾಹಿತ್ಯದ ಸೊಬಗನ್ನೂ ಸೊಗಡನ್ನೂ ಸ್ವಾರಸ್ಯವನ್ನೂ ಪ್ರಸ್ತುತ ವಾಚಿಕೆ ಪ್ರಭಾವಿಯಾಗಿ ಬಿಂಬಿಸಿದೆ. ನಮ್ಮ ಸಮೃದ್ಧ ಸಾಹಿತ್ಯದ ವಿಹಂಗಮ ನೋಟವೂ ಸಾರವತ್ತಾದ ವರಕವಿಗಳ ಕೃತಿಗಳ ಕೆನೆಗಟ್ಟಿದ ಸವಿಯೂ ಕನ್ನಡೇತರ ಓದುಗರಿಗೆ ದೊರಕಿದಂತಾಗಿದೆ. ಯಾರೇ ಇಂಥ ಸಂಕಲನ ಸಿದ್ಧಪಡಿಸಿದರೂ ಆಯ್ಕೆಯ ವಿಚಾರದಲ್ಲಿ ಅಭಿಪ್ರಾಯಭೇದ ಸಹಜ.

ಆದರೆ ಪ್ರಸ್ತುತ ವಾಚಿಕೆಯಲ್ಲಿರುವ ಆಯ್ಕೆಯ ಬಗ್ಗೆ ತಕರಾರುಗಳಿಲ್ಲ. ಅದು ಸೇರಬಹುದಿತ್ತು, ಇದು ಬರಬೇಕಿತ್ತು ಎಂದು ಬಲ್ಲಿದರು ಹೇಳಬಹುದಾದರೂ ಈ ವಾಚಿಕೆಯಲ್ಲಿ ಸೇರಿರುವ ಯಾವುದೇ ಭಾಗವನ್ನು ಅಸಮಂಜಸವೆಂದು ಅಲ್ಲಗಳೆಯುವಂತಿಲ್ಲ. ಇದು ಈ ಸಂಕಲನದ ಹಿರಿಮೆ. ‘ಈ ವಾಚಿಕೆ ಹೊರ ಬರುವವರೆಗೆ ಯಾವುದೇ ಸುವ್ಯವಸ್ಥಿತ ಪ್ರಯತ್ನ ಅಭಿಜಾತ ಕನ್ನಡ ಕಾವ್ಯದ ತಿರುಳು ಕನ್ನಡೇತರ ಸಾಹಿತ್ಯಾಸಕ್ತರಿಗೆ ಸಿಗುವಂತೆ ನಡೆದಿರಲಿಲ್ಲ. ಪ್ರಸ್ತುತ ವಾಚಿಕೆ ಬಹುಕಾಲದ ಈ ತೆರಪನ್ನು ತುಂಬುತ್ತದೆಂದು ಪ್ರಾಮಾಣಿಕವಾಗಿ ಭಾವಿಸುತ್ತೇವೆ’ ಎಂಬ ಸಂಪಾದಕರ ಅರಿಕೆ ಈಡೇರಿದೆ. ಐತಿಹಾಸಿಕ ಅಗತ್ಯವೊಂದನ್ನು ಪೂರೈಸಿದ ಸಂಪಾದಕರಿಗೆ ಅಭಿನಂದನೆಗಳು. 

ಕ್ಲಾಸಿಕಲ್‌ ಕನ್ನಡ ಪೊಯೆಟ್ರಿ ಅಂಡ್‌
ಪ್ರೋಸ್‌:
ಎ ರೀಡರ್‌
ಪುಟ: 322
ರೂ.400
ಅನುವಾದ: ಸಿ.ಎನ್‌. ರಾಮಚಂದ್ರನ್, ಬಿ.ಎ. ವಿವೇಕ ರೈ
ಪ್ರ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ– 583 276.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT