ಗುರುವಾರ, 16 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷಾದದ ಕೊಳದಲ್ಲಿನ ಪೂರ್ಣಚಂದ್ರ

Last Updated 7 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಎಸ್. ಸುರೇಂದ್ರನಾಥ್ ಅವರ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’ ಕಾದಂಬರಿ, ಒಪ್ಪಿಸಿಕೊಳ್ಳುವ ಮತ್ತು ಒಪ್ಪುವ ವಿನಮ್ರತೆಯಿಂದ ಪ್ರಾರಂಭವಾಗಿ, ಲೇಖಕರ ಹತ್ತಿರದ ಹಿರಿಯ ಜೀವವನ್ನು ನೆನೆದು ಅವಳು ತೋರಿದ ಪ್ರೀತಿ, ಹಿಡಿ ಅಳತೆಯಲ್ಲಿ ದಕ್ಕಿದ ಸುಖವನ್ನು ಯಾವುದೇ ದೂರಿಲ್ಲದೇ ಉಂಡದ್ದು, ಸಂಸಾರದ ತಾಪತ್ರಯಗಳಲ್ಲಿ ಹಾಗೆ ಮುಸುಕಾದ ಪ್ರೀತಿಯ ಉಲ್ಲೇಖಗಳಲ್ಲಿ ಮುಂದುವರಿಯುತ್ತದೆ. ತನ್ನನ್ನು ಕಾಡಿದ ಹಾಗು ಕನ್ನಡದ ಓದುಗರನ್ನು ಅತೀವವಾಗಿ ಕಾಡಿದ ಕಥೆಗಾರ ರಾಘವೇಂದ್ರ ಖಾಸನೀಸರ ‘ತಬ್ಬಲಿಗಳು’ ಕಥೆಯನ್ನು ಉಲ್ಲೇಖಿಸುವ ಕಾದಂಬರಿಕಾರರು, ಕಥನದಲ್ಲಿನ ದುರಂತಕ್ಕೆ ಮುಖ ಮಾಡಿದ ಎರಡೂ ಸಂಸಾರಗಳನ್ನು ಹೋಲಿಸುತ್ತಾ ತಮ್ಮ ಕಾದಂಬರಿಯ ವಸ್ತುವಿನ ಹುಟ್ಟನ್ನು ಸೂಚಿಸುತ್ತಾರೆ.

ಕಾದಂಬರಿಯಲ್ಲಿನ ಹುಡುಗ ಆಸ್ಪತ್ರೆಯಲ್ಲಿ ಎಲ್ಲರಂತೆ ಹುಟ್ಟಿದವನಲ್ಲ. ಹುಟ್ಟಿದಾಕ್ಷಣ ಆ ವಿಚಿತ್ರ ಮುದ್ದೆಯನ್ನು ಬಿಳಿ ಬಟ್ಟೆಯಲ್ಲಿ ಸುತ್ತಿಡುತ್ತಿದ್ದಂತೆಯೇ ಆಸ್ಪತ್ರೆಯಲ್ಲೆಲ್ಲ ಗುಲ್ಲಾಗಿ, ಆ ಮಗುವಿನ ರೂಪದ ಮಾಂಸದ ಮುದ್ದೆಯನ್ನು ನೋಡಲು ಜನಸ್ತೋಮ ಎರಗುತ್ತದೆ. ಮಗನನ್ನು ತಾಯಿ, ಅಕ್ಕ ತಂದೆ ನೋಡಿ ಹೆದರಿ ಸರಿದು ಮತ್ತೆ ಹತ್ತಿರ ಬಂದು ‘ಇವನು ನಮ್ಮವನು’ ಎಂದು ಅಪ್ಪಿ ಅಳುತ್ತಾರೆ.

ನಾವು ಅಂದುಕೊಂಡದಕ್ಕಿಂತ ಹೆಚ್ಚು ಕುರೂಪಿ, ಮಣ್ಣು ಚೊಟ್ಟಾದ ಸೋರೆಕಾಯಿಯಂತೆ, ನೊಪ್ಪಿದ ಚೆಂಬಿನಂತೆ, ವಯಸ್ಸಿಗೆ ಮೀರಿದ ಬುದ್ಧಿ ಅವನದು. ಇನ್ನೂ ಮುಖ್ಯವಾಗಿ ಅವನು ಯಾವುದೋ ದೊಡ್ಡ ಕಾಯಿಲೆಯಿಂದ ನರಳುತ್ತಿದ್ದಾನೆ. ಭವಿಷ್ಯ ಅಸ್ಪಷ್ಟವಾಗುತ್ತಿದೆ. ಅವನಿಗೆ ಯಾವ ಕಾಯಿಲೆ ಎಂದು ಆತನ ಮನೆಯವರಿಗೆ ಪಕ್ಕದ ಮನೆಯವರಿಗೆ ಗೊತ್ತು. ಆದರೆ ಅವನಿಗೇ ಅದರ ಅರಿವಿಲ್ಲ. ಶಾಲೆಗೆ ಕರೆದೊಯ್ದರೆ ಪೂರ್ತಿ ಶಾಲೆಯೇ ಹೆದರಿದೆ. ಹಾಗಾಗಿ ಮೇಷ್ಟರೊಬ್ಬರು ಮನೆಗೇ ಬಂದು ಕಲಿಸುತ್ತಾರೆ. ತಿಂಗಳಿಗೆ ನಾಲ್ಕೈದು ಸಾರಿಯಾದರೂ ಜ್ವರ ಬರುವ ಕಾಯಿಲೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದೆ. ಆ ಹುಡುಗ ಮನೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ, ಮಧ್ಯಾಹ್ನ ನಿದ್ರೆ ಮತ್ತು ಮೇಷ್ಟ್ರ ಪಾಠ ಬಿಟ್ಟರೆ ಮನೆಯ ಒಂದು ಕೋಣೆಯ ಕಿಡಕಿಯ ಹತ್ತಿರವಿರುವ ಕುರ್ಚಿಯಲ್ಲಿ ಕೂತು ಜಗತ್ತನ್ನು ನೋಡುತ್ತಿರುತ್ತಾನೆ.

ಮನೆಯನ್ನು ಕೇಳಿಸಿಕೊಳ್ಳುತ್ತಾನೆ. ಆಸ್ಪತ್ರೆಗೆ ಹೋಗುವುದಿದ್ದರೂ ಅದು ಸಾಯಂಕಾಲ, ಸೂರ್ಯ ಮುಳುಗಬೇಕು, ಆಗಲೂ ತಲೆಯ ಮೇಲೆ ಒಂದು ವಸ್ತ್ರ ಹಾಕಿಕೊಂಡು ಹೋಗಬೇಕಾಗಿದೆ. ಅಂದಹಾಗೆ, ಇವೆಲ್ಲವನ್ನೂ ಹೇಳುತ್ತಿರುವುದು ಆ ಹುಡುಗನೇ. ಆತನ ಮಾತು ಅಸ್ಪಷ್ಟವಾಗಿರುವುದರಿಂದ ಮೇಷ್ಟ್ರು ನಿನಗನಿಸಿದ್ದನ್ನು ಬರೆ ಎಂದಿದ್ದಾರೆ. ಈ ಕಾದಂಬರಿ ಆ ಹುಡುಗನ ಮೂಲಕ ನಿರೂಪಣೆಗೊಳ್ಳುತ್ತದೆ. ಆತ ಕಂಡಿದ್ದು ಕೇಳಿದ್ದು ಎಲ್ಲವನ್ನೂ ದಾಖಲಿಸುತ್ತಾ ಹೋಗುತ್ತಾನೆ. ಆತನ ಬಿಳಿ ಹಾಳೆಗಳು ಅಸ್ಪಷ್ಟವಾಗಿ ಕಂಡರೂ ಮಾತನಾಡುತ್ತವೆ.

ಆತನ ಕುಟುಂಬದಲ್ಲಿ ಕೂಡಾ ಒಂದರ ಹಿಂದೊಂದು ಘಟನೆಗಳು ಮನೆಯ ಇತರ ಸದಸ್ಯರ ಸುತ್ತ ನಡೆದರೂ ಈ ಹುಡುಗ ಅದಕ್ಕೆ ತೊಡಕಾಗಿಯೂ ಸಾಕ್ಷಿಯಾಗಿಯೂ ನಿಲ್ಲುತ್ತಾನೆ.
ಈ ಕಾದಂಬರಿಯಲ್ಲಿ ಉಲ್ಲೇಖವಾಗುವ ದೇವರ ಜೊತೆಗಿನ ಜಗಳ, ಜೀರುಂಡೆಯ ಉಲ್ಲೇಖ, ಮನೆಯಲ್ಲಿ ಗುಬ್ಬಿ ಮರಿಗಳ ಸಾವು, ಕುರೂಪಿ ಆದದ್ದರಿಂದ ನಾನು ಎಲ್ಲಿಗೆ ಹೋಗಬೇಕು, ಎಲ್ಲಿಗೆ ಹೋಗಬಾರದು, ಯಾರಿಗೆ ಯಾವಾಗ ಮುಖ ತೋರಿಸಬಾರದು ಎನ್ನುವ ಆ ಹುಡುಗನ ನಿರ್ಧಾರದಿಂದ, ಆತ ವಯಸ್ಸಿಗೆ ಮೀರಿದ ಜ್ಞಾನ ಅನುಭವಗಳನ್ನು ತೋರಿಸುತ್ತಾನೆ. ಅಂತರ್ಯದಲ್ಲಿ ಕುರೂಪವನ್ನು ಮೀರುತ್ತಾನೆ.

ಹಿತ್ತಲಲ್ಲಿ ಕಾಣುವ ಚಂದ್ರ, ಅಲ್ಲಿನ ಸಣ್ಣ ಸಣ್ಣ ಕೊಳ್ಳಗಳು, ಅಲ್ಲೇ ಪ್ರತಿಫಲಿಸುವ ಚಂದ್ರ, ನಕ್ಷತ್ರಗಳನ್ನು ಕಿತ್ತು ಹೊಳಪಾಗುವುದು, ಬುಟ್ಟಿಯಲ್ಲಿ ಕನಸನ್ನು ಮಾರಲು ಹೋಗುವುದು– ಎಲ್ಲವೂ ಆ ಪರಿಸರವನ್ನು ಸ್ವಲ್ಪ ಮಟ್ಟಿಗೆ ಹಸಿರು ಮಾಡುವ ಮೊದಲೇ ದೊಡ್ಡದೊಂದು ಗಾಳಿ, ಮಳೆಬಂದು ರೂಪಕಗಳ ಒಟ್ಟಿಗೆ ಬದುಕೂ ಚೂರು ಚೂರುಗಳಾಗುತ್ತವೆ, ಬಣ್ಣಗಳನ್ನು ಕಳೆದುಕೊಳ್ಳುತ್ತವೆ.

ಗಟ್ಟಿ ಭಾಷೆಯೊಂದಿಗೆ ಮನೆ, ಸರ್ಕಲ್ಲು, ಟಾಕೀಸು, ಸೈಕಲ್ ಶಾಪ್, ಮೈದಾನ, ಪೇರಲೇ ಮರ ಹಿಂದಿನ ಹಿತ್ತಲುಗಳ ಮೂಲಕ ಅಲ್ಲಿಯ ಪರಿಸರ ಕಣ್ಣಿಗೆ ಕಟ್ಟುವಂತೆ ಬಂದರೂ ಈ ಮನೆಗೆ ಬರುವುದಕ್ಕೂ ಒಂದೇ ದಾರಿ ಹೋಗುವುದಕ್ಕೂ ಒಂದೇ ದಾರಿ; ಇದು ಚಕ್ರವ್ಯೂಹದಂತೆಯೇ ಎಂದು ಹೊರಗಿನಿಂದ ಮದುವೆಯಾಗಿ ಬಂದ ಹೆಣ್ಣು (ಅಂದರೆ ತಾಯಿ) ಹೇಳುವಾಗ ನಮ್ಮ ಮನಸ್ಸು ಹೆದರಿ ಅಲ್ಲಿಂದ ಸರಿಯುತ್ತದೆ.

ಹೀಗೆ ಹೆಜ್ಜೆ ಹೆಜ್ಜೆಗೂ ತಾಪತ್ರಯ, ಗಂಡಾಂತರ ಅನುಭವಿಸುತ್ತ ಭವಿಷ್ಯದಲ್ಲಿ– ಮುಂದೆ– ಸುಖ ಇದೆ ಎನ್ನುವುದರ ಅರ್ಥ ನಂಬಿಕೆ ಕಳೆದುಕೊಂಡ, ದಿನದಿಂದ ದಿನಕ್ಕೆ ಭೀಕರವಾಗುತ್ತಾ ವಿಷಾದ ಆವರಿಸುವ ಒಂದು ಮದ್ಯಮ ವರ್ಗದ ಸಂಸಾರವನ್ನು ಈ ಕಾದಂಬರಿ ಆಪ್ತವಾಗುವಂತೆ ಚಿತ್ರಿಸಿ ನಮ್ಮ ಒಳಗಿನ ಸಮಾನ ದುಃಖಿಗಳನ್ನು ಹುಡುಕಿಸುತ್ತದೆ ಮತ್ತು ಸಾಂತ್ವನಿಸುತ್ತದೆ.

ಭವಿಷ್ಯದಲ್ಲಿ ಮಗ ಸರಿಯಾಗುವುದಿಲ್ಲ ಎಂದು ಎಲ್ಲ ರೀತಿಯಲ್ಲಿ ಗೊತ್ತಿದ್ದರೂ ಒಂದಿಷ್ಟೂ ನಂಬಿಕೆಯನ್ನು ಕಳೆದುಕೊಳ್ಳದೇ ತನ್ನ ಮಗ ಸರಿಯಗುತ್ತಾನೆ ಎಂದು ಔಷಧಿಯನ್ನೂ ಡಾಕ್ಟರನ್ನು ಬದಲಿಸುತ್ತಿರುವುದನ್ನು ನಮ್ಮ ಸುತ್ತ ನೋಡಿದ್ದೇವೆ. ಆ ನಂಬಿಕೆಯಲ್ಲಿ ತಾಯಿಯ ಪಾತ್ರ ದೊಡ್ಡದಿರುತ್ತದೆ. ಈ ಕಾದಂಬರಿಯಲ್ಲಿ ಆ ಪಾತ್ರ ತಂದೆಯದು. ಮನೆಯಲ್ಲಿನ ಹೆಚ್ಚಿನ ಸದಸ್ಯರು ಈ ಅನಾರೋಗ್ಯ ಕುರೂಪಿ ಬಾಲಕನನ್ನು ಉತ್ಕಟವಾಗಿ ಪ್ರೀತಿಸಿ ಮುದ್ದಿಸುತ್ತಾರೆ. ಇನ್ನೊಂದು ಗಮಿನಿಸಬೇಕಾದ ಅಂಶವೆಂದರೆ, ಈ ಕಾದಂಬರಿಯ ಸ್ಫೂರ್ತಿಯಾದ ಲೇಖಕರ ಹತ್ತಿರದ ಹಿರಿಯ ಜೀವದ ಪಕ್ವತೆಯ ಮುಂದುವರಿದ ಭಾಗವೇ ಹುಡುಗನ ಸ್ವಭಾವದಲ್ಲಿ, ನಡೆಯಲ್ಲಿ ಕಾಣುತ್ತೇವೆ.

ಕಥೆಯ ಸ್ಫೂರ್ತಿಯು ಬರಹಗಾರನ ಬದುಕಿಗೆ ಭಾಗವಾಗಿದ್ದಾಗ ಅಥವಾ ಸಮೀಪವಿದ್ದಾಗ ಲೇಖಕರಿಗೆ ಒಂದು ಕಷ್ಟವಿರುತ್ತದೆ. ತನಗೆ ಬೇಕಾದಂತೇ ಸೃಜನಶೀಲತೆಯನ್ನು ದುಡಿಸಿಕೊಳ್ಳಲು ಕಷ್ಟವಾಗುವ ತೊಡಕದು. ಮುಖ್ಯವಾಗಿ ಅದರ ಘಟನೆಯ ಆಗುವಿಕೆಯಲ್ಲಿ, ಕಾರಣ ಅದು ತಾನು ಹಿಂದೆ ತಿಳಿದ ಸತ್ಯಕ್ಕೆ ವಿರುದ್ಧವಾಗುತ್ತಿರುತ್ತದೆ. ಆದರೆ ಈ ಕಾದಂಬರಿ ತನ್ನ ಶಕ್ತಿಯುತ ಕಥಾವಸ್ತುವಿನಿಂದಾಗಿ ಈ ಕಷ್ಟದಿಂದ ದೂರವಾಗಿ ಸಮರ್ಥವಾಗುತ್ತದೆ.

ಕಾದಂಬರಿಯ ಮುಖ್ಯ ಪಾತ್ರವಾದ, ಕುರೂಪಿ ಹುಡುಗನ ಮೂಲಕವೇ ನಿರೂಪಣೆಗೊಳ್ಳುವ ತಂತ್ರದಲ್ಲೂ ವಿಶೇಷವಿದೆ. ತನಗೆ ಈಗ ತೋಚುವುದು ಇಷ್ಟೇ, ತನ್ನ ತಲೆ ನೋಯುತ್ತಿದೆ ಮಲಗುತ್ತೇನೆ... ಎಂದು ಆ ವಿಷಯ ಅಲ್ಲೇ ನಿಲ್ಲಿಸುವ ಹುಡುಗ, ನಂತರ ಇನ್ನೊಂದು ವಿಷಯವನ್ನು ಹೊಸದಾಗಿ ಎತ್ತಿಕೊಳ್ಳುತ್ತಾನೆ. ನಾವು ಗಮನಿಸುವ ಈ ಪಾತ್ರದ ಚಲನೆಯನ್ನೇ ಕಾದಂಬರಿಯ ಮುಖ್ಯ ತಂತ್ರವಾಗಿ ಪ್ರಜ್ಞಾಪೂರ್ವಕವಾಗಿ, ಪರಿಣಾಮಕಾರಿಯಾಗಿ ಬಳಸಿಕೊಳ್ಳಲಾಗಿದೆ. ಕಲಾವಿದ ಅಪಾರ ಅವರ ಚಿತ್ರಗಳು ಕಥಾವಸ್ತುವಿಗೆ ಪೂರಕವಾಗಿಯೂ ಹಾಗೂ ಸ್ವತಂತ್ರವಾಗಿಯೂ ನಿಲ್ಲುತ್ತವೆ.
ಸಹೃದಯರ ಮನಸ್ಸಿನಲ್ಲಿ ಕಂಪನಗಳನ್ನು ಉಂಟುಮಾಡುವ ಶಕ್ತಿಯಿರುವ ವಿಶಿಷ್ಟ ಕೃತಿ ‘ಗಾಳಿಗೆ ಬಿದ್ದ ಚಂದ್ರನ ತುಂಡುಗಳು’ ಕಾದಂಬರಿ.

ಗಾಳಿಗೆ ಬಿದ್ದ ಚಂದ್ರನ ತುಂಡುಗಳು
ಲೇ:
ಎಸ್. ಸುರೇಂದ್ರನಾಥ್
ಪು: 112; ಬೆ: ರೂ. 65
ಪ್ರ: ಅಂಕಿತ ಪುಸ್ತಕ, ನಂ. 53, ಶ್ಯಾಮ್‌ಸಿಂಗ್ ಕಾಂಪ್ಲೆಕ್ಸ್‌. ಗಾಂಧಿಬಜಾರ್ ಮುಖ್ಯರಸ್ತೆ, ಬಸವನಗುಡಿ, ಬೆಂಗಳೂರು–04

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT