ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರ್ಜಾಲ ಸ್ವಾತಂತ್ರ್ಯ

Last Updated 24 ಜುಲೈ 2015, 19:37 IST
ಅಕ್ಷರ ಗಾತ್ರ

ನ್ಯಾಯಬದ್ಧವಾಗಿ ನಿಯಂತ್ರಿಸಿ

ವಾಟ್ಸ್‌ಆ್ಯಪ್‌, ವೈಬರ್‌ ಮತ್ತು ಸ್ಕೈಪ್‌ಗಳ ಮೂಲಕ ದೇಶದೊಳಗೆ ಮಾಡುವ ಕರೆಗಳಿಗೆ ಶುಲ್ಕ ವಿಧಿಸುವ ಶಿಫಾರಸು ಕೇಂದ್ರ ಸರ್ಕಾರಕ್ಕೆ ಬಂದಿದೆ ಎಂಬುದನ್ನು ಮಾಧ್ಯಮಗಳ ಮೂಲಕ ತಿಳಿದುಕೊಂಡೆ. ನನ್ನ ಪಾಲಿಗೆ ಇದು ನಗು ತರಿಸುವಂಥ ಶಿಫಾರಸು. ಇಂಥ ಕರೆಗಳಿಗೆ ಶುಲ್ಕ ವಿಧಿಸುವುದು ಖಂಡಿತಾ ತಪ್ಪು.
ನಾನು ಈ ಮೂರೂ ಆ್ಯಪ್‌ಗಳನ್ನು ಬಳಸಿ ಸ್ನೇಹಿತರಿಗೆ ಕರೆ ಮಾಡುತ್ತಿರುತ್ತೇನೆ. ಅವರಲ್ಲಿ ಬಹುತೇಕರು ನಮ್ಮ ದೇಶದಲ್ಲೇ ಇದ್ದಾರೆ. ಹೀಗೆ ಕರೆ ಮಾಡುವಾಗ, ನನಗೆ ಇಂಟರ್ನೆಟ್‌ ಸಂಪರ್ಕ ಬೇಕೇಬೇಕು. ಇಂಟರ್ನೆಟ್‌ ಸಂಪರ್ಕ ನೀಡುವ ಕಂಪೆನಿಗೆ ನಾನು ಹಣ ಕೊಡಲೇಬೇಕು. ಅಂದರೆ, ಈ ಕರೆಗಳು ಬಿಟ್ಟಿಯಾಗಿ ಮಾಡುವುದಲ್ಲ. ಇವೂ ಶುಲ್ಕ ಪಾವತಿಸಿ ಮಾಡುವ ಕರೆಗಳೇ. ಆದರೆ ಇಲ್ಲಿ ಶುಲ್ಕ ಪಾವತಿ ಆಗುವುದು ಮೊಬೈಲ್‌ ಸೇವಾ ಕಂಪೆನಿಗಳ ಬದಲು, ಇಂಟರ್ನೆಟ್‌ ಸೇವಾ ಕಂಪೆನಿಗಳಿಗೆ. ವಾಸ್ತವ ಹೀಗಿರುವಾಗ, ಇಂಥ ಕರೆಗಳಿಗೆ ಶುಲ್ಕ ಪಾವತಿಸಬೇಕು ಎಂದು ನಿಯಮ ಮಾಡುವುದು ತಪ್ಪು. ಕೇಂದ್ರ ಈ ಶಿಫಾರಸನ್ನು ತಿರಸ್ಕರಿಸಲಿ. ಅಂತರ್ಜಾಲ ಆಧಾರಿತ ಸೇವೆಗಳನ್ನು ನ್ಯಾಯಬದ್ಧವಾಗಿ ನಿಯಂತ್ರಿಸಬಹುದು.
- ದೀಪ್ತಿ ವಿಕ್ರಮ್,
ಸಾಫ್ಟ್‌ವೇರ್‌ ತಂತ್ರಜ್ಞೆ
*
ಎಲ್ಲರೂ ಸಮಾನರು; ಸಮನಾಗಿ ಕಾಣಿ
ನಾನು ಇಂಟರ್ನೆಟ್‌ ಸೇವಾದಾತರಿಗೆ ಹಣ ಕೊಟ್ಟೇ, ಸೇವೆ ಪಡೆಯುವುದು. ಹೀಗಿರುವಾಗ ಇಂಟರ್ನೆಟ್‌ ಮೂಲಕವೇ ಮಾಡುವ ಕರೆಗಳಿಗೆ ಮತ್ತೆ ಹಣ ಕೊಡಬೇಕು

ಎಂಬ ಸಲಹೆ ಅತಾರ್ಕಿಕ. ಇಂಟರ್ನೆಟ್‌ ಮೂಲಕ ದೊರೆಯುವ ಸೇವೆಗಳನ್ನು ನಾವು ನೋಡುವ ಕ್ರಮ ಕೂಡ ಬದಲಾಗಬೇಕು. ಆನ್‌ಲೈನ್‌ ಮೂಲಕ ಬ್ಯಾಂಕಿಂಗ್‌ ವ್ಯವಹಾರ, ಬೇಕಾದ ವಸ್ತುಗಳನ್ನು ಖರೀದಿಸುವ ಕೆಲಸ ಮಾಡುತ್ತೇವೆ. ಆನ್‌ಲೈನ್‌ನಲ್ಲಿ ಒಂದು ವಸ್ತುವನ್ನು ಖರೀದಿಸಿದಾಗ, ಆ ವಸ್ತುವಿಗೆ ನಿಗದಿ ಮಾಡಿರುವ ಹಣ ಪಾವತಿಸುತ್ತೇವೆಯೇ ವಿನಾ, ಆನ್‌ಲೈನ್‌ ಮೂಲಕ ಖರೀದಿ ಪ್ರಕ್ರಿಯೆಗೆ ಪ್ರತ್ಯೇಕ ಹಣ ಪಾವತಿಸುವ ಪದ್ಧತಿ ಇಲ್ಲ. ಹಾಗಿರುವಾಗ, ಆನ್‌ಲೈನ್‌ ಮೂಲಕ ಮಾಡುವ ಕರೆಗಳಿಗೆ ಹಣ ಏಕೆ ಕೊಡಬೇಕು?ಜಾಸ್ತಿ ಹಣ ಕೊಟ್ಟವರಿಗೆ ಒಳ್ಳೆಯ ಇಂಟರ್ನೆಟ್‌ ಸೇವೆ, ಕಡಿಮೆ ಕೊಡುವವರಿಗೆ ಕಳಪೆ ಗುಣಮಟ್ಟದ ಸೇವೆ ದೊರೆಯುತ್ತಿದೆ ಎಂಬ ಆರೋಪ ಬಲವಾಗಿ ಕೇಳಿಬರುತ್ತಿದೆ. ಇದೂ ಸರಿಯಲ್ಲ. ಮುಕ್ತ ಅಂತರ್ಜಾಲ ಪ್ರಜಾಪ್ರಭುತ್ವಕ್ಕೆ ಪೂರಕ. ಇಂಟರ್ನೆಟ್‌ನಲ್ಲಿ ಎಲ್ಲರೂ ಸಮಾನರು, ಎಲ್ಲರನ್ನೂ ಸಮಾನವಾಗಿ ಕಾಣಬೇಕು.
- ವಿಕಾಸ್ ಹೆಗ್ಡೆ,
ಎಂಜಿನಿಯರ್
*
ಮಧ್ಯಮ ವರ್ಗಕ್ಕೆ ಹೊರೆ

ವಾಟ್ಸ್‌ಆ್ಯಪ್‌, ಸ್ಕೈಪ್‌ ಮೂಲಕ ಮಾಡುವ ಕರೆಗಳಿಗೆ ಶುಲ್ಕ ವಿಧಿಸಲೇಬಾರದು. ಇಂಟರ್ನೆಟ್‌ ಸೇವೆ ಪಡೆಯಲು ಹಣ ಕೊಡಲೇಬೇಕು. ಈ ಕರೆಗಳಿಗೆ ಏಕೆ ಶುಲ್ಕ? ಹೀಗೆ ಶುಲ್ಕ ವಿಧಿಸಿದರೆ ಮಧ್ಯಮ ವರ್ಗದ ಜನರಿಗೆ ಹೊರೆಯಾಗುತ್ತದೆ. ವಾಟ್ಸ್‌ಆ್ಯಪ್‌ ಬಳಕೆದಾರ ತನ್ನ ಸ್ಮಾರ್ಟ್‌ಫೋನ್‌ಗೆ ಇಂಟರ್ನೆಟ್‌ ಸಂಪರ್ಕ ಪಡೆಯಲು ಪಾವತಿಸುವ ಹಣ, ಸಾಮಾನ್ಯವಾಗಿ ಮೊಬೈಲ್‌ ಸೇವಾ ಕಂಪೆನಿಗಳಿಗೇ ಹೋಗುತ್ತದೆ.
ಮುಂದಿನ ದಿನಗಳಲ್ಲಿ ಎಲ್ಲರೂ ಸ್ಮಾರ್ಟ್‌ಫೋನ್‌ ಬಳಸಲು ಆರಂಭಿಸುತ್ತಾರೆ. ಒಮ್ಮೆ ಸ್ಮಾರ್ಟ್‌ಫೋನ್‌ ಬಳಸಲು ಆರಂಭಿಸಿದ ನಂತರ, ಇಂಟರ್ನೆಟ್‌ ಸಂಪರ್ಕ ಪಡೆಯುತ್ತಾರೆ. ಆ ಮೂಲಕ ಮೊಬೈಲ್‌ ಸೇವಾ ಕಂಪೆನಿಗಳಿಗೆ ಮತ್ತೊಂದಷ್ಟು ಹಣ ದೊರೆಯುತ್ತದೆ. ಮೊಬೈಲ್‌ ಸೇವೆ ಎಂದರೆ ಕರೆ ಮಾಡುವ ಸೇವೆ ಮಾತ್ರವಲ್ಲ, ಇಂಟರ್ನೆಟ್‌ ಸೇವೆಯೂ ಮೊಬೈಲ್‌ ಸೇವೆಯ ಒಂದು ಅಂಗವಾಗಿ ಬೆಳೆದುಬಂದಿದೆ.
- ರವಿನಾರಾಯಣ ಗುಣಾಜೆ,
ಧ್ಯೇಯ ಸಾಫ್ಟ್‌ವೇರ್‌ ಸಲ್ಯೂಷನ್ಸ್‌ ಕಂಪೆನಿ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT