ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ‘ಅಭಿವೃದ್ಧಿ’: ಎಲ್ಲರಿಗೂ ಬಿಸಿ ಮುಟ್ಟಲಿ

ಕೆರೆ ಒತ್ತುವರಿ
Last Updated 1 ಮೇ 2015, 19:30 IST
ಅಕ್ಷರ ಗಾತ್ರ

ಒಂದು ಕಾಲಕ್ಕೆ ಸುಖೀ ಕೌಟುಂಬಿಕ ಜೀವನ, ಸಂಭ್ರಮ ತುಂಬಿಕೊಂಡಿದ್ದ ಮನೆಗಳು, ಹೊರಚಾಚಿದ ಸರಳುಗಳೊಂದಿಗೆ ಭಗ್ನಾವಶೇಷಗಳಾಗಿ ಕಾಣಿಸುವುದು ನಿಜಕ್ಕೂ ಆಘಾತಕಾರಿ ವಿಚಾರ. ಈ ವಿನಾಶವು ಭೂಕಂಪದಿಂದ ಆಗಿರಬಹುದು ಅಥವಾ ಕೆರೆಗಳನ್ನು ಒತ್ತುವರಿ ಮಾಡಿಕೊಂಡು ಅಕ್ರಮವಾಗಿ ನಿರ್ಮಿಸಿಕೊಂಡ ಮನೆಗಳನ್ನು ಕೆಡವಿ ಹಾಕಿದ್ದರಿಂದ ಆಗಿರಬಹುದು.

ಕೆರೆ ಒತ್ತುವರಿಯನ್ನು ಮರಳಿ ಪಡೆದುಕೊಳ್ಳಲು ಸರ್ಕಾರ ಇದೀಗ ನಡೆಸುತ್ತಿರುವ ಕಾರ್ಯಾಚರಣೆಯಲ್ಲಿ ಮನೆಗಳನ್ನು ಕಳೆದುಕೊಂಡ ಕುಟುಂಬಗಳಿಗೆ  ಒದಗಿಸಬಹುದಾದ ಯಾವುದೇ ಪರಿಹಾರವೂ ಅವರ ನೋವಿಗೆ ಸಮಾಧಾನ ಹೇಳಲಾರದು. ಒಂದು ಕಾಲದಲ್ಲಿ ಕೆರೆಗಳಿದ್ದ ಸ್ಥಳದಲ್ಲಿ ಇಂತಹ ಮನೆಗಳು ತಲೆ ಎತ್ತಿದ್ದಾದರೂ ಏಕೆ ಎಂಬ ಆಳವಾದ ಪ್ರಶ್ನೆಯನ್ನು ಈ ಬೆಳವಣಿಗೆ ಸಹಜವಾಗಿಯೇ ಹುಟ್ಟುಹಾಕುತ್ತದೆ.

ಇದಕ್ಕೆ ಉತ್ತರ ಕಂಡುಕೊಳ್ಳಲು ನಾವು 1976ರಷ್ಟು ಹಿಂದಕ್ಕೆ ತೆರಳಬೇಕು. ಅಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಎಂಬ ಅತ್ಯಂತ ಪ್ರಜಾಪ್ರಭುತ್ವ ರಹಿತ ನಗರ ಯೋಜನಾ ಸಂಸ್ಥೆ ಜನ್ಮ ತಳೆಯಿತು. ಅದು ತುರ್ತು ಪರಿಸ್ಥಿತಿಯ ಸಂದರ್ಭವಾಗಿತ್ತು. ಬಹುತೇಕ ಎಲ್ಲವೂ ಪ್ರಧಾನಿ ಬದಲಿಗೆ ಮುಖ್ಯಮಂತ್ರಿಯ ನೇರ ನಿಯಂತ್ರಣದಲ್ಲೇ ಇತ್ತು. ಹೀಗಾಗಿ ಬಿಡಿಎ ಎಂಬ ಸಂಸ್ಥೆಯನ್ನು ಜನರ ಹಿತದೃಷ್ಟಿಯ ಬದಲಿಗೆ ರಾಜಕೀಯ ನಾಯಕರ ದೂರದೃಷ್ಟಿಗೆ ಹೊಂದಿಕೊಳ್ಳುವ ರೀತಿಯಲ್ಲಿ ಬೆಂಗಳೂರನ್ನು ಅಭಿವೃದ್ಧಿಪಡಿಸುವ ಯೋಜನೆ ತಯಾರಿಸುವುದಕ್ಕಾಗಿ ರೂಪಿಸಲಾಯಿತು.

ಬೆಂಗಳೂರಿನ ಜನಸಂಖ್ಯೆ ಬೆಳೆಯುತ್ತಿದ್ದಂತೆಯೇ ಜನರಿಗೆ ಸೂಕ್ತ ವಸತಿ ವ್ಯವಸ್ಥೆ ಕಲ್ಪಿಸುವ ಸವಾಲೂ ಎದುರಾಯಿತು. ದೊಡ್ಡ ಪ್ರಮಾಣದಲ್ಲಿ ವಸತಿ ವ್ಯವಸ್ಥೆ ಮಾಡಿಕೊಡುವ ಭರವಸೆಗಳೂ ಕೇಳಿಬರತೊಡಗಿದವು. ಬಸ್ ನಿಲ್ದಾಣ, ಸ್ಟೇಡಿಯಂಗಳಂತಹ ಮೂಲಸೌಲಭ್ಯಗಳಿಗೆ ಸಹ ಬೇಡಿಕೆ ಹೆಚ್ಚಾದಾಗ ಜಮೀನು ಖರೀದಿಗೆ ಹಣ ಇಲ್ಲವಾಯಿತು. ಆಗ ಬಿಡಿಎ ಮಾಡಿದ್ದೇನೆಂದರೆ, ನಗರ ಪ್ರದೇಶದಲ್ಲಿದ್ದ ಎಲ್ಲ ಕೆರೆಗಳನ್ನೂ ತನ್ನ ಸ್ವಾಧೀನಕ್ಕೆ ಪಡೆದುಕೊಂಡದ್ದು ಮತ್ತು ಹಲವು ವೈವಿಧ್ಯದ ಮೂಲಸೌಲಭ್ಯವಾಗಿ ಅವುಗಳನ್ನು ‘ಅಭಿವೃದ್ಧಿ’ಪಡಿಸಿದ್ದು. ಶೀಘ್ರವೇ ಅದು ಸಾಂಕ್ರಾಮಿಕವಾಯಿತು.

ಕೇಂದ್ರೀಕೃತ ಸರ್ಕಾರಿ ವ್ಯವಸ್ಥೆಯಲ್ಲಿ ಭೂ ಬಳಕೆಯ ಯೋಜನೆ ಮತ್ತು ಅಭಿವೃದ್ಧಿಯು ಬಹು ವಿಧದ ಬಾಡಿಗೆ ಬಯಸುವ ಪರಿಹಾರ ಕ್ರಮವಾಗಿ ಬದಲಾಯಿತು. ಇದಕ್ಕಾಗಿಯೇ ಕಾದು ಕುಳಿತಂತಿದ್ದ ಈ ಹಿಂದಿನ ಭೂ ಮಾಲೀಕರು ರಿಯಲ್ ಎಸ್ಟೇಟ್ ಏಜೆಂಟ್‌ಗಳಾಗಿ ಬದಲಾದರು. ಕೆರೆ ಇರಲಿ, ಹುಲ್ಲುಗಾವಲು ಇರಲಿ, ಅವೆಲ್ಲವೂ ‘ಲೇಔಟ್‌’ಗಳಾಗಿ ಬದಲಾದವು. ಶುದ್ಧ ಅಸಂಬದ್ಧ ನಕ್ಷೆಗಳು ತಯಾರಾದವು ಮತ್ತು ಭೂ ದಾಖಲೆಗಳು ಶೋಧಗೊಂಡವು. ಶೀಘ್ರದಲ್ಲೇ ರಿಯಲ್ ಎಸ್ಟೇಟ್ ಏಜೆಂಟ್– ಅಧಿಕಾರಶಾಹಿ–  ರಾಜಕಾರಣಿಗಳ ನಡುವಿನ ಸಖ್ಯ ಎಷ್ಟು ಆಳವಾಗಿ ಹೋಯಿತು ಎಂದರೆ, ಈ ಲೇಔಟ್‌ಗಳು ಸಂಪೂರ್ಣ ಕಾನೂನುಬದ್ಧ ಎಂದು ಬಿಂಬಿಸಲಾಯಿತು. ಬಿಡಿಎ ನಿವೇಶನ ದೊರಕದೆ ಮನೆ ನಿವೇಶನಕ್ಕಾಗಿ ಹತಾಶರಾಗಿ ಕಾಯುತ್ತಿದ್ದ ಕುಟುಂಬಗಳು ಇಂತಹ ಖಾಸಗಿ ಬಡಾವಣೆಗಳಲ್ಲಿ ನಿವೇಶನಗಳನ್ನು ಖರೀದಿಸುವುದಕ್ಕೆ ಮುಂದಾದವು.

ಇದು ಖಾಸಗಿ ಲೇಔಟ್‌ಗಳ ಕತೆಯಾದರೆ, ಬಿಡಿಎ ಲೇಔಟ್‌ಗಳ ಪ್ರಸಂಗವೂ ಇದಕ್ಕೆ ಭಿನ್ನವಲ್ಲ. ಬಿಡಿಎ ಸಹ ಕೆರೆಯೊಳಗೇ ಲೇಔಟ್‌ಗಳನ್ನು ಅಭಿವೃದ್ಧಿಪಡಿಸಿ ಖಾಸಗಿ ಲೇಔಟ್‌ಗಳು ಮಾಡಿದ ತಪ್ಪನ್ನೇ ಮಾಡಿದೆ. ಉತ್ತರಹಳ್ಳಿ ಹೋಬಳಿಯ ಗುಬ್ಬಲಾಲ ಹಳ್ಳಿಯಲ್ಲಿನ ವೆಂಕಟರಾಯನ ಕೆರೆಯ ವಿಚಾರದಲ್ಲಿ ಈಚೆಗೆ ಬಿಡಿಎ ಮಾಡಿದ ತಪ್ಪು ಬಯಲಾಗಿದೆ. ಈ ಕೆರೆಗೆ ಕೆಳಭಾಗದಲ್ಲಿನ ಸುಬ್ರಹ್ಮಣ್ಯ ಕೆರೆಯೊಂದಿಗೆ ಸಂಪರ್ಕ ಇದೆ. ಅಲ್ಲಿಂದ ರಾಜ ಕಾಲುವೆಯೂ ಸಾಗುತ್ತದೆ. ಆದರೆ ಈ ರಾಜ ಕಾಲುವೆಯನ್ನು ಮಂತ್ರಿ ಡೆವಲಪರ್ಸ್‌ನವರು ಒತ್ತುವರಿ ಮಾಡಿಕೊಂಡು ಅಲ್ಲೊಂದು ಬೃಹತ್ ಅಪಾರ್ಟ್‌ಮೆಂಟ್ ನಿರ್ಮಿಸಿಬಿಟ್ಟಿದ್ದಾರೆ.

ಹಲವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದರಿಂದ ಹೈಕೋರ್ಟ್, ಕೆರೆಗಳನ್ನು ರಕ್ಷಿಸುವಂತೆ ರಾಜ್ಯ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದೆ. ಅದರ ಫಲವಾಗಿ ಕೆರೆ ಒತ್ತುವರಿಯನ್ನು ನಿವಾರಿಸುವ ಮತ್ತು ಕೆರೆಗಳನ್ನು ಮಲಿನಗೊಳಿಸುವ ಕ್ರಮಗಳನ್ನು ತಡೆಯುವ ಕಾರ್ಯ ಆರಂಭವಾಗಿದೆ. ದಶಕಗಳ ಹಿಂದೆಯೇ ಮಾಡಬೇಕಾಗಿದ್ದ ಈ ಕೆಲಸವನ್ನು ಸರ್ಕಾರಿ ಏಜೆನ್ಸಿಗಳು ಕೊನೆಗೂ ಕೈಗೆತ್ತಿಕೊಂಡಿವೆ. ಆದರೆ ಇದೇ ಕಾರ್ಯಾಚರಣೆ ಹಲವಾರು ಪ್ರಶ್ನೆಗಳನ್ನು ನಮ್ಮ ಮುಂದಿಟ್ಟಿದೆ. ಈ ಲೇಔಟ್‌ಗಳು ಮತ್ತು ಅಪಾರ್ಟ್‌ಮೆಂಟ್‌ಗಳು ತಲೆ ಎತ್ತುವುದಕ್ಕೆ ಏನು ಕಾರಣ? ಈ ಪೈಕಿ ಅಪಾರ್ಟ್‌ಮೆಂಟ್‌ಗಳು ಕೆಲವೇ ವರ್ಷಗಳ ಹಿಂದೆ ತಲೆ ಎತ್ತಿರುವುದು ಸುಳ್ಳಲ್ಲ.

ಹೈಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ರಿಟ್ ಅರ್ಜಿಗಳು, ನೆಲದ ಕಾನೂನಿನ ವಿಚಾರ ಒಂದು ಕಡೆ ಇರಲಿ, ಆದರೆ ಪ್ರಶ್ನೆ ಎದುರಾಗಿರುವುದು ಇಂತಹ ನಿವೇಶನಗಳು ಸಂಪೂರ್ಣ ‘ಕಾನೂನುಬದ್ಧ’ ಎಂದು ಹೇಳಿಸಿಕೊಂಡು ಈ ನಿವೇಶನಗಳನ್ನು ಖರೀದಿಸಿದ ಜನರ ಪಾಡು. ಬಿಬಿಎಂಪಿ ಮತ್ತು ಇತರ ಏಜೆನ್ಸಿಗಳು ಈ ಆಸ್ತಿಗಳನ್ನು ನೋಂದಾಯಿಸಿವೆ, ಮನೆ ಮತ್ತು ಇತರ ತೆರಿಗೆಗಳನ್ನು ಸಂಗ್ರಹಿಸಲಾಗಿದೆ. ಇಂತಹ ಆಸ್ತಿಗಳಿಗೆ ‘ಅನುಮತಿ’ ನೀಡಿದ ಅಧಿಕಾರಿಗಳ ವಿರುದ್ಧ ಏನು ಕ್ರಮ ಕೈಗೊಳ್ಳುತ್ತೀರಿ ಎಂದು ನಾವು ಕೇಳಬಾರದೇಕೆ? ಮೋಸ ಹೋದವರು ಇದೀಗ ತಮ್ಮ ಮನೆಗಳನ್ನೇ ಕಳೆದುಕೊಂಡಿದ್ದಾರೆ, ಅವರು ಮಾತ್ರ ಏಕೆ ನಿರ್ದಯವಾಗಿ ಮತ್ತು ಅಮಾನುಷವಾಗಿ ದಂಡ ತೆರಬೇಕು? ನಮ್ಮ ಕೆರೆಗಳನ್ನು ರಕ್ಷಿಸಬೇಕಾದದ್ದು ತೀರಾ ಅಗತ್ಯ.

ಕೆರೆ ಒತ್ತುವರಿಯನ್ನು ತಡೆಗಟ್ಟಲು ನಾವು ಪ್ರಯತ್ನಿಸುವುದರ ಜತೆಗೆ ಇಂತಹ ಭಾರಿ ದೊಡ್ಡ ಅಕ್ರಮಗಳಿಗೆ ‘ಅನುಮತಿ’ ನೀಡಿದ ಪ್ರತಿಯೊಬ್ಬ ಅಧಿಕಾರಿಯೂ ಭಾರಿ ದೊಡ್ಡ ಬೆಲೆಯನ್ನು ತೆರುವಂತೆ ನೋಡಿಕೊಳ್ಳಬೇಕು, ಜತೆಗೆ ಅವರ ವಿರುದ್ಧ ಕ್ರಿಮಿನಲ್ ಕ್ರಮಗಳನ್ನೂ ಕೈಗೊಳ್ಳಬೇಕು. ಹೀಗೆ ಮಾಡದೆ ಹೋದರೆ ಮೋಸ ಹೋದವರಷ್ಟೇ ದಂಡ ಪಾವತಿಸುವಂತಾಗುತ್ತದೆ. ಹಾಗಾದಾಗ ಅದೊಂದು ಬಹು ದೊಡ್ಡ ಅನ್ಯಾಯವಾಗುತ್ತದೆ.
(ಲೇಖಕ ಎನ್ವಿರಾನ್‌ಮೆಂಟ್‌ ಸಪೋರ್ಟ್‌ ಗ್ರೂಪ್‌ನ ಸಂಚಾಲಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT