ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಚ್ಚುಕಟ್ಟಾದ ಪ್ರಯೋಗ ‘ಹೀಗೆರಡು ಕಥೆಗಳು’

ರಂಗಭೂಮಿ
Last Updated 5 ಜುಲೈ 2015, 19:30 IST
ಅಕ್ಷರ ಗಾತ್ರ

ಇತ್ತೀಚೆಗೆ ‘ರಂಗಶಂಕರ’ದಲ್ಲಿ ಸಂಚಾರಿ ಥಿಯೇಟರ್, ಲೇಖಕರಾದ ವಸುಧೇಂದ್ರ ಅವರ ‘ಶ್ರೀದೇವಿ ಮಹಾತ್ಮೆ’ ಮತ್ತು ಜಯಂತ ಕಾಯ್ಕಿಣಿಯವರ ‘ನೋ ಪ್ರೆಸೆಂಟ್ಸ್ ಪ್ಲೀಸ್’ ಎಂಬ ಎರಡು ಸಣ್ಣಕಥೆಗಳನ್ನು ಜೋಡಿಸಿ ‘ಹೀಗೆರಡು ಕಥೆಗಳು’ ಎಂಬ ಶೀರ್ಷಿಕೆಯಲ್ಲಿ ಕಿರುನಾಟಕಗಳನ್ನು ಪ್ರದರ್ಶಿಸಿತು, ಅಚ್ಚುಕಟ್ಟಾಗಿ ಮೂಡಿಬಂದ ನಾಟಕದ ರಂಗರೂಪ ಎನ್.ಮಂಗಳಾ ಅವರದು. ಎಂದಿನಂತೆ ತಮ್ಮ ‘ಮಂಗಳಾ ಟಚ್’ನೊಂದಿಗೆ ಲವಲವಿಕೆಯ ಶೈಲಿಯಲ್ಲಿ ನಿರ್ದೇಶಿಸಿದ್ದರು.ಈ ಎರಡು ಕಥೆಗಳಲ್ಲಿನ ಕನಸು, ಬಡತನ, ಮತ್ತು ಜಾತಿಯ ಅಂಶಗಳ ಸಾಮ್ಯತೆಗಾಗಿ ಇವುಗಳನ್ನು ಒಟ್ಟಿಗೆ ಬೆಸೆಯಲಾಗಿದೆ. ವಸುಧೇಂದ್ರ ಬರೆದ ‘ಶ್ರೀದೇವಿ ಮಹಾತ್ಮೆ’ಯಲ್ಲಿ ಮನೆಗೆಲಸದ ಹುಡುಗಿ ಶ್ರೀದೇವಿಯ ಸುತ್ತ ಕಥೆಯನ್ನು ಹೆಣೆಯಲಾಗಿದೆ.

ಅಪಾರ್ಟ್‌ಮೆಂಟೊಂದರಲ್ಲಿ ಕೆಲಸ ಮಾಡುವ ಅವಳು  ಜೀವನೋತ್ಸಾಹವುಳ್ಳ ಹದಿಹರೆಯದ ಹುಡುಗಿ. ಕಟ್ಟಡದ ಸೆಕ್ಯೂರಿಟಿಯವನ ಜೊತೆ ತಮಾಷೆಯಾಗಿ ಮಾತನಾಡುತ್ತ, ಲಿಫ್ಟಿನಲ್ಲಿ ಕುಪ್ಪಳಿಸಿಕೊಂಡು, ಹಾಡಿಕೊಂಡು ಖುಷಿಯಾಗಿ ಕೆಲಸ ಮಾಡುತ್ತ, ಸಜ್ಜನನಾದ ಮನೆ ಯಜಮಾನನ ಹತ್ತಿರ ಕುತೂಹಲದ ಪ್ರಶ್ನೆಗಳನ್ನು ಕೇಳುತ್ತ, ಅರಳುಹುರಿದಂತೆ ಮಾತಾಡುವ ಚೂಟಿ ಸ್ವಭಾವದವಳು.ತಮಿಳು-ತೆಲುಗು ಮತ್ತು ಕನ್ನಡ ಮಿಶ್ರಭಾಷೆಗಳನ್ನು ವಿಚಿತ್ರ ಶೈಲಿಯಲ್ಲಿ ನುಡಿವ, ಸದಾ ನಕ್ಕು ನಗಿಸುವ ಜಾಯಮಾನದವಳು. ಪುಟ್ಟ ಪುಟ್ಟ ವಿಷಯಗಳಿಗೂ ಖುಷಿಪಡುವ, ಸಂಭ್ರಮಿಸುವ ಮುಗ್ಧ  ಮನಸ್ಸು.

ಒಮ್ಮೆ ಅವಳು ಆಂಧ್ರದ ಗಡಿಪ್ರದೇಶದ ತನ್ನೂರಿಗೆ ಹೋದವಳು, ಕ್ರಿಶ್ಚಿಯನ್ ಹುಡುಗನೊಬ್ಬ ತನ್ನ ತಂದೆಗೆ 10 ಸಾವಿರ ರೂಪಾಯಿ ಕೊಟ್ಟು ತನ್ನನ್ನು ಮದುವೆಯಾಗುತ್ತಿದ್ದಾನೆಂದು, ಮದುವೆಯ ನಂತರ ತಾನು ಕಿರಿಸ್ತಾನಳಾಗಿ ಹೆಸರು ಬದಲಾಯಿಸಿಕೊಳ್ಳಬೇಕೆಂದು, ಮೆಜೆಸ್ಟಿಕ್‌ನಲ್ಲಿ ಅವನು ಪೇಂಟಿಂಗ್ ಕೆಲಸ ಮಾಡುತ್ತಾನೆಂದು ವಿವರ ನೀಡುತ್ತಾಳೆ. ಆದರೆ ಮನೆಯಾತನಿಗೆ ಅವನ ಬಗ್ಗೆ ಅನುಮಾನ ಮೂಡಿದರೂ ಅವಳ ನಂಬಿಕೆಗೆ ಪೆಟ್ಟು ಕೊಡಲಾರದೆ ಸುಮ್ಮನಾಗುತ್ತಾನೆ.

ಒಮ್ಮೆ ಅವಳು ಮೂರು ದಿನವಾದರೂ ಕೆಲಸಕ್ಕೆ ಬಾರದಿದ್ದಾಗ ಸಹಜವಾಗಿ ಆತಂಕಕ್ಕೊಳಗಾಗುತ್ತಾನೆ. ಆಗಲೇ ಅವನೂ ಮೂರು ದಿನ ಬೇರೆ ಊರಿಗೆ ಹೋಗಬೇಕಾಗುತ್ತದೆ. ಅವನಿಲ್ಲದಾಗ ಬಂದ ಅವಳು ಹಗಲೂ ರಾತ್ರಿ ಅವನ ಮನೆ ಬಳಿಯೇ ಕಾದಿರುವ ವಿಷಯ ತಿಳಿದು ಗಾಬರಿಯಿಂದ ಧಾವಿಸುತ್ತಾನೆ. ಶ್ರೀದೇವಿ ತಾನು ಊರಿಗೆ ಹೋಗುತ್ತಿರುವುದಾಗಿ ತಿಳಿಸಿ, ಮದುವೆಯ ಉಡುಗೊರೆ ತೆಗೆದುಕೊಂಡು ಹೋಗಲು ಕಾದಿರುವುದಾಗಿ ತಿಳಿಸಿದಾಗ, ಅವಳ ಮುಗ್ಧತೆ ಕಂಡ ಅವನಿಗೆ ನಗು. ಹಾಗೆಯೇ ಊರಿಗೆ ತೆರಳಿದ ಶ್ರೀದೇವಿ ಮತ್ತೆ ಹಿಂದಕ್ಕೆ ಬರುವಳೋ ಇಲ್ಲವೋ ಎಂಬ ಅನುಮಾನ-ಸಂದಿಗ್ಧಗಳಿಗೆ ಸಿಲುಕಿದರೂ, ಅವನು ಅವಳ ನಿರೀಕ್ಷೆಯಲ್ಲಿ ಕಾಯುತ್ತ ನಿಲ್ಲುವಲ್ಲಿ ಕಥೆ ಮುಗಿಯುತ್ತದೆ.

ಈ ಕಥೆಗೆ ‘ಶ್ರೀದೇವಿ ಮಹಾತ್ಮೆ’ಎಂಬ ಹೆಸರು ಎಷ್ಟು ಅನ್ವರ್ಥಕವೋ ತಿಳಿಯುವುದಿಲ್ಲ. ಬಡಕೆಲಸದ ಹುಡುಗಿಯ ಕನಸಿನ ಪುಟ್ಟ ಪ್ರಪಂಚ, ಸಣ್ಣ ಸಣ್ಣ ಖುಷಿ-ಸಂಭ್ರಮಗಳು, ಸತ್ಯಾಸತ್ಯತೆಯನ್ನು ಅರಿಯಲಾಗದ ಅಮಾಯಕ ಸ್ವಭಾವ ಇತ್ಯಾದಿಯನ್ನು ಚಿತ್ರಿಸುವ ಅವಳ ಪಾತ್ರದ ಜೀವಂತಿಕೆ ಮತ್ತು ಚೈತನ್ಯ ಎಂಥವರನ್ನೂ ಸೆಳೆಯುತ್ತ ಹೃದಯದಲ್ಲಿ ಒಂದು ಬಗೆಯ ಸಂಚಲನ ಉಂಟುಮಾಡುತ್ತದೆ. ಕಡೆಗೆ, ಅವಳ ಭಾವೀ ಜೀವನದ ಅವ್ಯಕ್ತ ನಿಗೂಢತೆಯನ್ನು ಭೇದಿಸಲಾರದ ಆರ್ದ್ರತೆ-ಆತಂಕಗಳು ನೋಡುಗರನ್ನು ಕಾಡುತ್ತವೆ.

ಯಜಮಾನನೂ ಇಲ್ಲಿ ನಿಸ್ಸಹಾಯಕ. ಯಾವುದೋ ಆಮಿಷವೊಡ್ಡಿ ಮತಾಂತರಗೊಳಿಸುವ ಹುನ್ನಾರ ಅಥವಾ ಬಡಜನರನ್ನು ನಂಬಿಸಿ, ಮುಗ್ಧ ಯುವತಿಯರನ್ನು ಲಾಭಕ್ಕಾಗಿ ದುರುಪಯೋಗಪಡಿಸಿಕೊಳ್ಳುವ ಜಾಲವೂ ಇರಬಹುದೆಂಬ ಶಂಕೆ ಕಾಡುವುದು ನಿಜ. ಇಂಥ ಪ್ರಕರಣಗಳ ಬೆನ್ನುಹತ್ತಿ ರಕ್ಷಿಸುವ ಬದ್ಧತೆ, ಸಮಯಾವಕಾಶ ಎಷ್ಟು ಜನರಿಗೆ ಸಾಧ್ಯ ಎಂಬ ಶೇಷಪ್ರಶ್ನೆಯೂ ಕಾಡುತ್ತದೆ. ಶ್ರೀದೇವಿಯ ಪಾತ್ರವನ್ನು ಸಹಜತೆಯಿಂದ ಅರಳಿಸಿದ ಸುರಭಿ ವಸಿಷ್ಠ ತಮ್ಮ ಸಹಜಾಭಿನಯದಿಂದ, ಚೂಟಿತನದಿಂದ ನೋಡುಗರಿಗೆ ಪಾತ್ರದ ಅಂತಃಕರಣವನ್ನು ಪರಿಣಾಮಕಾರಿಯಾಗಿ ಮುಟ್ಟಿಸಿದರು.

ಮನೆಯ ಯಜಮಾನನಾಗಿ ಪ್ರಸನ್ನ ಶೆಟ್ಟಿ ಲವಲವಿಕೆಯಿಂದ ಉತ್ತಮ ಅಭಿನಯ ನೀಡಿದರು. ಸೆಕ್ಯುರಿಟಿಯಾಗಿ ನಾಗರಾಜ್ ಅಲ್ಲಲ್ಲಿ ಹಾಸ್ಯದ ಮಿಂಚು ಹರಿಸಿ ಚೆನ್ನಾಗಿ ನಟಿಸಿದರು. ಆದರೆ, ನಾಟಕ ನೋಡುವ ಜನ ಸೂಕ್ಷ್ಮಸಂವೇದಿಗಳಾಗಿರುತ್ತಾರೆಂಬ ಅರಿವಿರುವುದು ಒಳಿತು. ಶ್ರೀದೇವಿ ಲಿಫ್ಟಿನ ಗುಂಡಿಯನ್ನು ಬಲಗಡೆ ಅದುಮಿದರೆ, ಯಜಮಾನ ಎಡಗಡೆ ಒತ್ತುತ್ತಾನೆ. ಮೊದಲ ಸೀನಿನಲ್ಲಿ ಅವಳು ತಮಿಳು-ತೆಲುಗು ಮಾತನಾಡುತ್ತ ಹಾಡಿ-ಕುಣಿದು ಮಾಡುತ್ತಿದ್ದವಳು,ಮುಂದಿನ ಸೀನುಗಳಲ್ಲಿ ತನ್ನ ರೂಢಿಯನ್ನು ಮರೆತು ಬರೀ ಕನ್ನಡ ಮಾತನಾಡುತ್ತ, ಗುನುಗುವುದನ್ನು ನಿಲ್ಲಿಸಿಯೇ ಬಿಡುತ್ತಾಳೆ! ಇಂಥ ಸಣ್ಣ ಪುಟ್ಟ ಅಂಶಗಳ ಕಡೆ ಲಕ್ಷ್ಯ ಕೊಡುವುದೊಳಿತು.

‘ನೋ ಪ್ರೆಸೆಂಟ್ಸ್ ಪ್ಲೀಸ್’ ಶೀರ್ಷಿಕೆ ಕೂಡ ಕತೆಯ ಆತ್ಮವನ್ನು ಬಿಂಬಿಸದು. ಮುಂಬೈ ನಗರಿಯ ಗಡಿಬಿಡಿಯ ಜೀವನದ ಮಧ್ಯೆ ಒಂದಾದ ಅಸಾವರಿ ಲೋಖಂಡೆ ಮತ್ತು ಪೋಪಟ್ ಕೆಳವರ್ಗದ ಬಡ ಪ್ರೇಮಿಗಳು. ಅಸಾವರಿ ಅನಾಥಳಾಗಿ ರಿಮ್ಯಾಂಡ್ ಹೋಮಿನಲ್ಲಿ ಬೆಳೆದರೆ, ಬಡ ಹುಡುಗ ಪೋಪಟ್ ಕೂಡ ಹೆತ್ತವರ ಪೋಷಣೆಯಿಲ್ಲದೆ ಬೀದಿ ಬದಿ ಬೆಳೆದು, ಸಣ್ಣ ಉದ್ಯೋಗವೊಂದನ್ನು ಹಿಡಿದು ಆಕಸ್ಮಿಕವಾಗಿ ಸಿಕ್ಕ ಅವಳಲ್ಲಿ ಅನುರಕ್ತನಾಗಿದ್ದು, ಈಗವರು ಮದುವೆಯಾಗಲು ನಿರ್ಧರಿಸಿದವರು.

ಕಾಡುವ ಬಡತನದ ಮಧ್ಯೆಯೂ ಹೆಣೆದ ಕನಸುಗಳಿಗೆ ಕಡಿಮೆಯಿಲ್ಲ. ಮದುವೆಯ ಕರೆಯೋಲೆಯ ನಮೂನೆಗಳನ್ನು ಆರಿಸಿ ಪ್ರಿಂಟ್ ಮಾಡಿಸುವ ಬಗ್ಗೆ, ಸಮಾರಂಭದ ಊಟಕ್ಕೆ ಹೊಂದಿಸಬೇಕಾದ ಖರ್ಚು ವೆಚ್ಚಗಳ ಯೋಜನೆ-ಯೋಚನೆಗಳಲ್ಲಿ ಆನಂದ ಕಾಣುವವರು, ಜೊತೆಗೆ ಅಷ್ಟೇ ಆತಂಕಪಡುವವರು. ಭಾವೀ ಜೀವನದ ಬಗ್ಗೆ ಗಂಭೀರವಾಗಿ ಚರ್ಚೆ ನಡೆಸುತ್ತಿದ್ದ ಪೋಪಟ್‌ನಿಗೆ,  ತಾವು ದಿನನಿತ್ಯ ಓಡಾಡುತ್ತಿದ್ದ ಲೋಕಲ್ ಟ್ರೈನ್‌ಗಳಲ್ಲಿನ ಪ್ರಯಾಣ, ನಿಲ್ದಾಣಗಳ ಗದ್ದಲ, ಗೌಜಿನಲ್ಲಿ ಬಿಜಿಯಾಗಿ ಓಡಾಡುತ್ತಿದ್ದವರು, ತಮಗೆ ಸಂಬಂಧಿಸಿದವರ ಹಲವಾರು ಹೆಸರುಗಳನ್ನು ಕರೆಯುತ್ತಿದ್ದುದನ್ನು ಕಂಡು ಇದ್ದಕ್ಕಿದ್ದ ಹಾಗೆ ಅವನನ್ನು ಅನಾಥಪ್ರಜ್ಞೆ ಆವರಿಸುತ್ತದೆ.

ಪಾಟೀಲ,ದೇಶಪಾಂಡೆ, ದೇಸಾಯಿ ಮುಂತಾಗಿ ಎಲ್ಲರಿಗೂ ಏನಾದರೊಂದು  ಮನೆತನದ ಹೆಸರುಗಳಿವೆ. ತನ್ನ ಹೆಸರು ಮಾತ್ರ ಚುಟುಕು, ತನಗೆ ಅಂಥ ಮನೆತನದ ಹಿನ್ನಲೆಯಿಲ್ಲವೆಂದು ಕೀಳರಿಮೆಯಿಂದ ಸಪ್ಪಗಾಗುತ್ತಾನೆ. ಅವಳಿಗಾದರೋ ಲೋಖಂಡೆ ಎಂಬ ‘ಸರ್ ನೇಮ್’ ಇದೆಯೆಂಬ ಭಾವ ಆವರಿಸುವಷ್ಟರಲ್ಲಿ ಈ ‘ಲೋಖಂಡೆ’ ಎಲ್ಲಿಂದ ಬಂತೆಂಬ ಜಿಜ್ಞಾಸೆಯ ಹಿಂದೆಯೇ, ಅವಳ ಜಾತಿ ಯಾವುದೆಂಬ ಕುತೂಹಲವುಂಟಾಗಿ ‘ನೀ ಯಾವ ಜಾತಿ?’ ಎಂದವಳನ್ನು ಪ್ರಶ್ನಿಸಿದಾಗ ಅವಳಿಗೆ ಆಘಾತ. ಇಷ್ಟು ದಿನ ಪ್ರೀತಿಸಿ ಈಗ ಮದುವೆಯ ಹಂತದಲ್ಲಿ ಈ ವಿಚಾರಣೆ ಕಂಡು ಕಕ್ಕಾಬಿಕ್ಕಿಯಾಗಿ ಮನಸ್ಸು ಹಿಂಡುತ್ತದೆ. ಕೇವಲ ಹೊಟ್ಟೆಪಾಡಿನ ಚಿಂತೆಯೇ ದೊಡ್ಡದಾಗಿರುವವರಿಗೆ ಮನೆತನ, ಜಾತಿಗಳ ಗೊಡವೆಯೇ ಎಂಬ ಆಶ್ಚರ್ಯ! ಇಬ್ಬರ ಮನಸ್ಸೂ ಬಿರುಕುಗೊಂಡು ವ್ಯಸ್ತವಾಗುವ ಹಂತದಲ್ಲಿ ಕಥೆ ನಿಲ್ಲುತ್ತದೆ.

ಮುಂಬೈ ವಾತಾವರಣ, ಅರ್ಧಕ್ಕೆ ನಿಂತ ಸೇತುವೆ ಕಂಬಗಳು, ಸಿಮೆಂಟು ತುಂಬಿದ ದೂಳು, ರಸ್ತೆಗುಂಡಿಗಳ ತುಂಬ ನಿಂತ ಕೊಳಚೆ ನೀರು, ಕಿವಿಗಡಚಿಕ್ಕುವ ಶಬ್ದಗಳ ನೈಜ ವಾತಾವರಣದ ಮಧ್ಯೆ ಬಿಚ್ಚಿಕೊಳ್ಳುವ ಈ ಬಡಪ್ರೇಮಿಗಳ ಬವಣೆಯ ದಿನಚರಿಯೊಂದಿಗೆ ಅವರ ಸರಸ-ಸಲ್ಲಾಪ, ಕನಸಿನ ಲೋಕವನ್ನು ನಾಟಕ ಪ್ರಭಾವಶಾಲಿಯಾಗಿ ಕಟ್ಟಿಕೊಡುತ್ತದೆ. ಪೋಪಟನಾಗಿ ಗಣಪ ತಮ್ಮ ವಿಶಿಷ್ಟಭಂಗಿ, ಆಂಗಿಕಭಾಷೆ, ‘ಲವರ್ ಬಾಯ್’ ಅಭಿನಯದಿಂದ ನುರಿತ ನಟರಾಗಿ ಮಿಂಚುತ್ತಾರೆ. ಅಸಾವರಿಯಾಗಿ ನಿಶಾ ಭಾವಪೂರ್ಣವಾಗಿ ಅಭಿನಯಿಸಿ ಉತ್ತಮ ನಟಿಯೆಂಬುದನ್ನು ಮನವರಿಕೆ ಮಾಡಿಕೊಡುತ್ತಾರೆ. ಸಹನಟರೂ ಹದವಾಗಿ ನಟಿಸಿ ನಾಟಕದ ಸಫಲತೆಗೆ ಕಾರಣರಾಗಿದ್ದಾರೆ. ಎರಡೂ ನಾಟಕಗಳ ರಂಗಸಜ್ಜಿಕೆ, ಬೆಳಕಿನ ವಿನ್ಯಾಸ ಉತ್ತಮವಾಗಿದ್ದವು. ಚಿತ್ತಾಕರ್ಷಕವಾಗಿ ಮೂಡಿಬಂದ ನಾಟಕಗಳ ಉತ್ತಮ ಪ್ರದರ್ಶನಗಳಲ್ಲಿ ‘ಸಂಚಾರಿ ಥಿಯೇಟರ್’ನ ಎಂದಿನ ವಿಶಿಷ್ಟ ಮುದ್ರೆಯನ್ನು ಗುರುತಿಸಬಹುದಿತ್ತು. v

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT