ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಕೆಲಸಕ್ಕೆ ಮಕ್ಕಳ ಬಳಕೆ ಅಪರಾಧ

Last Updated 21 ಅಕ್ಟೋಬರ್ 2014, 8:12 IST
ಅಕ್ಷರ ಗಾತ್ರ

ರಾಮನಗರ:  ‘ವಿದ್ಯಾರ್ಥಿನಿಲಯ ಮತ್ತು ಶಾಲೆಗಳಲ್ಲಿ ಅಡುಗೆ ಕೆಲಸಕ್ಕೆ ಮಕ್ಕಳನ್ನು ಬಳಸಿಕೊಳ್ಳುವಂತಿಲ್ಲ. ಒಂದು ವೇಳೆ ಬಳಸಿಕೊಂಡರೆ ಅದು ಅಪರಾಧವಾಗುತ್ತದೆ. ಅದನ್ನು ಮಕ್ಕಳ ಮೇಲಿನ ಶೋಷಣೆ ಎಂದೇ ಪರಿಗಣಿಸ­ಲಾಗುತ್ತದೆ’ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ತಾಲ್ಲೂಕು ಅಧಿಕಾರಿ ನಳಿನಾ ಸಿ ಕಾಗಿನೆಲೆ ತಿಳಿಸಿದರು.

ಹಿಂದುಳಿದ ವರ್ಗಗಳ ಮತ್ತು ಅಲ್ಪ­ಸಂಖ್ಯಾತರ ಕಲ್ಯಾಣ ಇಲಾಖೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಜಂಟಿ­ಯಾಗಿ ರಾಮನಗರದ ಐಜೂರಿನ ಸರ್ಕಾರಿ ಬಿಸಿಎಂ ವಿದ್ಯಾರ್ಥಿ ನಿಲಯ­ದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ನಿಲಯ ಪಾಲಕರು, ನಿಲಯ ಮೇಲ್ವಿ­ಚಾರಕರು ಮತ್ತು ಅಡುಗೆಯವರಿಗೆ ತರಬೇತಿ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.

ಮನೆಯಲ್ಲಿ ಮಕ್ಕಳು ತಾಯಿಗೆ ಅಡುಗೆ ಕೆಲಸಕ್ಕೆ ನೆರವು ನೀಡಿದರೆ ಅದು ತಪ್ಪಾಗುವುದಿಲ್ಲ. ಆದರೇ ಅದೇ ಕೆಲಸವನ್ನು ಮಕ್ಕಳು ಹಾಸ್ಟೆಲ್‌ಗಳಲ್ಲಿ ಮಾಡಿದರೆ ತಪ್ಪಾಗುತ್ತದೆ. ಹಾಗಾಗಿ ಅಡುಗೆ ಕೆಲಸದವರು ಎಚ್ಚರದಿಂದ ಇರಬೇಕು ಎಂದು ಅವರು ಕಿವಿಮಾತು ಹೇಳಿದರು.

ಅಡುಗೆ ಮನೆಯಲ್ಲಿ ಅಡುಗೆ ಅನಿಲದ ಸಿಲಿಂಡರ್‌, ಬೆಂಕಿ ಪಟ್ಟಣ, ಹರಿತವಾದ ಚಾಕು ಮತ್ತಿತರು ವಸ್ತು­ಗಳು ಇರುತ್ತವೆ. ಹಾಗಾಗಿ ಅಡುಗೆ ಮನೆಯೊಳಗೆ ವಿದ್ಯಾರ್ಥಿಗಳು ಪ್ರವೇಶಿಸ­ದಂತೆ ನೋಡಿಕೊಳ್ಳಬೇಕು. ಮಾನಸಿಕ ಖಿನ್ನತೆ ಎದುರಿಸುತ್ತಿರುವ ಮಕ್ಕಳು ತನಗೆ ಗೊತ್ತಾಗದೆ ಅನಾಹುತಗಳನ್ನು ಮಾಡಿಕೊಳ್ಳಬಹುದು. ಆದ್ದರಿಂದ ಯಾವುದೇ ಮಕ್ಕಳು ಅಡುಗೆ ಮನೆ­ಯೊಳಗೆ ಬಾರದಂತೆ ನೋಡಿಕೊಳ್ಳಿ ಎಂದು ಅವರು ತಿಳಿಸಿದರು.

ತರಕಾರಿ, ಸೊಪ್ಪನ್ನು ಸರಿಯಾಗಿ ತೊಳೆದು ಅಡುಗೆ ಮಾಡಬೇಕು. ಅಡುಗೆ ಮನೆಯಲ್ಲಿ ಸ್ವಚ್ಛತೆ ಕಾಪಾಡಿ­ಕೊಳ್ಳಬೇಕು. ಮಕ್ಕಳೊಂದಿಗೆ ಉತ್ತಮ­ವಾಗಿ ಮಾತನಾಡಿ, ಅವರ ಹಸಿವನ್ನು ನೀಗಿಸುವ ಕೆಲಸವನ್ನು ಅಡುಗೆಯವರು ಮಾಡಬೇಕು. ಮಕ್ಕಳ ಮನಸ್ಸಿಗೆ ನೋವಾಗುವ ರೀತಿಯಲ್ಲಿ ಮಾತನಾಡ­ಬಾರದು ಎಂದು  ತಿಳಿಹೇಳಿದರು.

ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ತಾಜುದ್ದೀನ್‌ ಖಾನ್‌ ಮಾತನಾಡಿ, 1989ರಲ್ಲಿ ವಿಶ್ವದ ಬಹುತೇಕ ರಾಷ್ಟ್ರಗಳು ಒಗ್ಗೂಡಿ ವಿಶ್ವಸಂಸ್ಥೆ­ಯೊಂದಿಗೆ ಮಕ್ಕಳ ಹಕ್ಕುಗಳ ರಕ್ಷಣೆ ಕುರಿತು ಒಡಂಬಡಿಕೆ ಮಾಡಿಕೊಂಡವು. ಭಾರತ 1992ರಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಿತು. ಬಾಲ ಕಾರ್ಮಿಕ ಪದ್ಧತಿ ಸೇರಿದಂತೆ ಮಕ್ಕಳ ಮೇಲಿನ ದೌರ್ಜನ್ಯ­ವನ್ನು ಯಶಸ್ವಿಯಾಗಿ ತಡೆಯಲು 10 ವರ್ಷ ಕಾಲಾವಕಾಶವನ್ನು ಭಾರತ ಕೋರಿತ್ತು. ಆದರೆ 2014 ಮುಗಿ­ಯುತ್ತಾ ಬಂದರೂ ಈ ಒಪ್ಪಂದ ದೇಶ­ದಲ್ಲಿ ಸಮಪರ್ಕವಾಗಿ ಜಾರಿಯಾಗಿಲ್ಲ ಎಂದು ವಿಶಾದಿಸಿದರು.

ದೇಶದಲ್ಲಿ ಶೇ 58ರಷ್ಟು ಬಾಲಕಿಯರ ಮೇಲೆ ಕುಟುಂಬ­ದಲ್ಲಿಯೇ ಶೋಷಣೆ ನಡೆಯುತ್ತಿದೆ. ಕಳೆದ ವರ್ಷ ಭಾರತದಲ್ಲಿ ಅಂದಾಜು 50 ಲಕ್ಷ ಭ್ರೂಣ ಹತ್ಯೆಗಳು ನಡೆದಿವೆ. ಶಾಲೆ, ರಸ್ತೆ, ಬಸ್‌, ಕುಟುಂಬದ ನಾಲ್ಕು ಗೋಡೆಯಲ್ಲಿಯೇ ಮಕ್ಕಳ ಮೇಲೆ ವಿವಿಧ ರೀತಿಯ ದೌರ್ಜನ್ಯ, ಲೈಂಗಿಕ ಕಿರುಕುಳ, ಶೋಷಣೆ ನಡೆಯುತ್ತಿದೆ ಎಂದು ಅವರು ಅಂಕಿ ಅಂಶ ನೀಡಿದರು.

ವಿಶ್ವ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಪೂರಕವಾಗಿ ಮಕ್ಕಳಿಗೆ ಬದುಕುವ ಹಕ್ಕು, ರಕ್ಷಣೆಯ ಹಕ್ಕು, ಅಭಿವೃದ್ಧಿಯ ಹಕ್ಕು, ಭಾಗವಹಿಸುವ ಹಕ್ಕು ಪ್ರಾಪ್ತಿ­ಯಾಗಿದೆ. ಆದರೆ ಇವು ದೇಶದಲ್ಲಿ ಸಮರ್ಪಕ ಅನುಷ್ಠಾನವಾಗಿಲ್ಲ. ಇದನ್ನು ಅನುಷ್ಠಾನಗೊಳಿಸುವ ಸಲುವಾಗಿ ಹೆಣ್ಣು ಶಿಶು ಭ್ರೂಣಹತ್ಯೆ ನಿಷೇಧ ಕಾಯ್ದೆ, ಬಾಲ ಕಾರ್ಮಿಕ ಪದ್ಧತಿ ನಿಷೇಧ ಕಾಯ್ದೆ, ಬಾಲ್ಯ ವಿವಾಹ ನಿಷೇಧ, ಪೋಕ್ಸೊ ಕಾಯ್ದೆ, ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಸೇರಿದಂತೆ ಹಲವು ಕಾನೂನುಗಳು ಜಾರಿಯಾಗಿವೆ. ಆದರೆ ಅವುಗಳ ಪಾಲನೆಯಲ್ಲಿ ದೇಶದ ಪ್ರಜ್ಞಾವಂತ ನಾಗರಿಕರು ಎಡವುತ್ತಿರುವುದು ವಿಪರ್ಯಾಸವೇ ಸರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT