ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಮತ್ತು ಶಿಕ್ಷೆ

Last Updated 23 ಡಿಸೆಂಬರ್ 2012, 19:59 IST
ಅಕ್ಷರ ಗಾತ್ರ

ಕಳೆದ ಒಂದು ದಶಕದಲ್ಲಿ ಕರ್ನಾಟಕದಲ್ಲಿ ಅತ್ಯಾಚಾರಕ್ಕೊಳಗಾದ 4479 ಮಹಿಳೆಯರು ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿದ್ದಾರೆ. ಸಾಮಾಜಿಕ ಕಳಂಕದ ಭೀತಿಯ ನಡುವೆಯೂ ದೂರುಗಳನ್ನು ಸಲ್ಲಿಸುವ ಧೈರ್ಯ ಮಾಡಿದ್ದಾರೆ ಈ ಮಹಿಳೆಯರು. ನ್ಯಾಯ ಪಡೆಯುವ ನಿರೀಕ್ಷೆಯಲ್ಲಿ ಸುದೀರ್ಘ ಕಾಲದ ಕಾನೂನು ಹೋರಾಟದ ಕಷ್ಟಗಳನ್ನೂ ಅನುಭವಿಸಿದ್ದಾರೆ. ಆದರೆ, ಕೇವಲ 315 ಪ್ರಕರಣಗಳಲ್ಲಿ ಎಂದರೆ ಶೇಕಡ 7ರಷ್ಟು ಪ್ರಕರಣಗಳಲ್ಲಿ ಮಾತ್ರವೇ ಅತ್ಯಾಚಾರಿಗಳಿಗೆ ಶಿಕ್ಷೆಯಾಗಿದೆ. ದೆಹಲಿಯ ಸಾಮೂಹಿಕ ಅತ್ಯಾಚಾರ ಪ್ರಕರಣ, ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟಗಳಲ್ಲಿ ಪ್ರಚಾರ ಪಡೆದುಕೊಂಡಿರುವ ಈ ಹೊತ್ತಿನಲ್ಲಿ, ರಾಜ್ಯದಲ್ಲಿನ ಅತ್ಯಾಚಾರ ಪ್ರಕರಣಗಳ ಬಗ್ಗೆ ಗಮನ ಹರಿದಿರುವುದು ಸಹಜವೇ ಆಗಿದೆ. ರಾಜ್ಯದಲ್ಲಿ ಸುಮಾರು 344ರಷ್ಟು ಪ್ರಕರಣಗಳು ಇನ್ನೂ ತನಿಖೆಯ ಹಂತದಲ್ಲಿಯೇ ಇವೆ. ಇವುಗಳಲ್ಲಿ ಕೆಲವು ಪ್ರಕರಣಗಳಂತೂ 2003ರಷ್ಟು ಹಳೆಯವು ಎಂಬುದು ನಮ್ಮ ತನಿಖಾ ವ್ಯವಸ್ಥೆಯ ಕಾರ್ಯವೈಖರಿಗೆ ಕನ್ನಡಿ ಹಿಡಿಯುತ್ತದೆ. ಆರೋಪಿಗಳಿಗೆ ಶಿಕ್ಷೆಯಾಗುತ್ತಿರುವ ಪ್ರಮಾಣ ಕಡಿಮೆ ಇರುವುದಕ್ಕೆ ಪೊಲೀಸ್ ಇಲಾಖೆಯನ್ನಷ್ಟೇ ದೂರಲಾಗದು ಎಂಬುದು ರಾಜ್ಯ ಪೊಲೀಸ್ ಮಹಾನಿರ್ದೇಶಕರ ಹೇಳಿಕೆ. `ನಿಮ್ಮ ಮಗಳನ್ನು ರಾತ್ರಿ ವೇಳೆ ಒಬ್ಬಂಟಿಯಾಗಿ ಹೊರಗೆ ಕಳಿಸಲು ಸಿದ್ಧರಿರುತ್ತೀರಾ? ಖಂಡಿತವಾಗಿಯೂ ಇಲ್ಲ. ಕೆಲವು ನಿರ್ಜನ ಪ್ರದೇಶಗಳಲ್ಲಿ ಇಂತಹ ಪ್ರಕರಣಗಳು ನಡೆದಲ್ಲಿ ಪೊಲೀಸರನ್ನು ದೂಷಿಸಲಾಗುವುದಿಲ್ಲ.

ಎಲ್ಲಾ ಅತ್ಯಾಚಾರ ಪ್ರಕರಣಗಳನ್ನು ತಡೆಯುವುದು ಸಾಧ್ಯವಿಲ್ಲ' ಎಂದು ಪೊಲೀಸ್ ಮಹಾನಿರ್ದೇಶಕರು ಹೇಳಿರುವ ಮಾತುಗಳು, ಯಥಾಸ್ಥಿತಿಯ ಪೊಲೀಸ್ ಮನಸ್ಥಿತಿಯನ್ನೇ ಬಿಂಬಿಸುತ್ತವೆ. ಮಾರುಕಟ್ಟೆ ಆರ್ಥಿಕತೆಯ ಈ ದಿನಗಳಲ್ಲಿ ಉದ್ಯೋಗಗಳ ಅವಧಿ ಹಾಗೂ ಜೀವನಶೈಲಿಗಳ ವ್ಯಾಖ್ಯೆಯೇ ಬದಲಾಗಿದೆ. ಕತ್ತಲಾಗುವ ವೇಳೆಗೆ ಹೆಣ್ಣುಮಗಳು ಮನೆಯೊಳಗಿರಬೇಕು ಎಂಬಂಥ ಮಾತುಗಳು ಇಂದು ಸವಕಲಾಗಿವೆ. ಅಷ್ಟೇ ಅಲ್ಲ, ಎಲ್ಲಾ ಅತ್ಯಾಚಾರಗಳೂ ಕತ್ತಲಲ್ಲೇ, ನಿರ್ಜನ ಪ್ರದೇಶಗಳಲ್ಲೇ ನಡೆಯುತ್ತವೆ ಎಂಬುದೂ ಕೂಡ ಮಿಥ್ಯೆ. ಮಹಿಳೆಯ ಚಲನಶೀಲತೆ ಹಾಗೂ ಸ್ವಾತಂತ್ರ್ಯವನ್ನು ನಿಯಂತ್ರಿಸುವ ಮನೋಭಾವ ಪ್ರದರ್ಶಿಸುವ ಇಂತಹ ಧೋರಣೆಗಳು, ಅತ್ಯಾಚಾರ ಪ್ರಕರಣಗಳ ದಕ್ಷ ತನಿಖೆಗೆ ಅಡ್ಡಗಾಲಾಗುತ್ತಿವೆ ಎಂಬುದು ಕಟು ವಾಸ್ತವ.

`ಅತ್ಯಾಚಾರಕ್ಕೊಳಗಾಗಬೇಡಿ' ಎಂದು ಮಹಿಳೆಗೇ ನೂರಾರು ಉಪದೇಶಗಳನ್ನು ಪೊಲಿಸ್‌ವ್ಯವಸ್ಥೆ ಹಾಗೂ ಸಮಾಜ ಸದಾ ನೀಡುತ್ತದೆ. ಆದರೆ, `ಅತ್ಯಾಚಾರ ಮಾಡಬೇಡಿ', `ಕಠಿಣ ಶಿಕ್ಷೆಯಿಂದ ಅತ್ಯಾಚಾರಿ ಪಾರಾಗುವುದು ಅಸಾಧ್ಯ' ಎಂಬಂಥ ಸಂದೇಶಗಳನ್ನು ಗಟ್ಟಿಯಾಗಿ ರವಾನಿಸುವಲ್ಲಿ ಇದೇ ವ್ಯವಸ್ಥೆ ವಿಫಲವಾಗಿರುವುದು ವಿಪರ್ಯಾಸ. ಯಾವುದೇ ಅಪರಾಧಕ್ಕೆ ಶಿಕ್ಷೆ ತ್ವರಿತವಾಗಿ ಅನುಷ್ಠಾನಗೊಂಡಲ್ಲಿ ಅದು ಕಾನೂನಿನ ಭಯವನ್ನು ಹುಟ್ಟುಹಾಕುತ್ತದೆ ಎಂಬುದು ಸಾಬೀತಾಗಿರುವ ಸಂಗತಿ.

ಭಾರತೀಯ ದಂಡ ಸಂಹಿತೆಯ(ಐಪಿಸಿ) ಸೆಕ್ಷನ್ 376ರ ಅಡಿ ಅತ್ಯಾಚಾರಕ್ಕೆ ಕನಿಷ್ಠ ಏಳು ವರ್ಷಗಳ ಜೈಲುಶಿಕ್ಷೆ ವಿಧಿಸುವುದು ಸಾಧ್ಯವಿದೆ. ಜೊತೆಗೆ ಹೆಚ್ಚುವರಿಯಾಗಿ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರವೂ ನ್ಯಾಯಾಲಯಗಳಿಗಿದೆ. ಆದರೆ, ಈ ಶಿಕ್ಷೆಗೆ ಆರೋಪಿಗಳನ್ನು ಗುರಿ ಪಡಿಸುವಲ್ಲಿ ಪೊಲೀಸ್ ಇಲಾಖೆಯ ಜವಾಬ್ದಾರಿ ಹೆಚ್ಚಿನದು ಎಂಬುದನ್ನು ಮರೆಯುವಂತಿಲ್ಲ. ಇದಕ್ಕಾಗಿ ಮೊಕದ್ದಮೆ ದಾಖಲು ಮಾಡುವುದರಿಂದ ಹಿಡಿದು ತನಿಖೆಯ ವಿವಿಧ ಹಂತಗಳಲ್ಲಿ ಪೊಲೀಸ್ ವ್ಯವಸ್ಥೆ ಹೆಚ್ಚಿನ ವೃತ್ತಿಪರತೆ  ಪ್ರದರ್ಶಿಸಬೇಕಿರುವುದು ಸದ್ಯದ ಅಗತ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT