ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಸಂತ್ರಸ್ತರಿಗೆ ಪರಿಹಾರ: ಪ್ರತ್ಯೇಕ ಸಮಿತಿ ರಚನೆಗೆ ಸಲಹೆ

ತಜ್ಞರ ಸಮಿತಿಯಿಂದ ಸರ್ಕಾರಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ
Last Updated 30 ಡಿಸೆಂಬರ್ 2015, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ಅತ್ಯಾಚಾರ ಪ್ರಕರಣಗಳ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ಆಗುತ್ತಿರುವ ವಿಳಂಬ ತಪ್ಪಿಸಲು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪ್ರತ್ಯೇಕ ಸಮಿತಿ ರಚಿಸಬೇಕು. ಇದಕ್ಕಾಗಿ ಕಾನೂನಿಗೆ ತಿದ್ದುಪಡಿ ತರಬೇಕು’ ಎಂದು ಅತ್ಯಾಚಾರ ಪ್ರಕರಣಗಳಿಗೆ ಸಂಬಂಧಿಸಿದ ತಜ್ಞರ ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಿದೆ.

ಸಮಿತಿಯ ಪ್ರಾಥಮಿಕ ವರದಿಯನ್ನು ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಸಲ್ಲಿಸಿದ ನಂತರ ಸುದ್ದಿಗೋಷ್ಠಿ ನಡೆಸಿದ ಸಮಿತಿ ಅಧ್ಯಕ್ಷ ವಿ.ಎಸ್‌. ಉಗ್ರಪ್ಪ, ‘ಸದ್ಯ ಸಂತ್ರಸ್ತರಿಗೆ ಪರಿಹಾರ ಮಂಜೂರು ಮಾಡುವ ಅಧಿಕಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ನೇತೃತ್ವದ ನ್ಯಾಯಾಂಗ ಸೇವಾ ಪ್ರಾಧಿಕಾರಕ್ಕೆ ಇದೆ. ಆದರೆ, ಕಾರ್ಯಭಾರದ ಒತ್ತಡದಿಂದ ಪ್ರಾಧಿಕಾರಕ್ಕೆ ಸೂಕ್ತ ಗಮನ ಕೊಡಲು  ಆಗುತ್ತಿಲ್ಲ’ ಎಂದರು.

‘ಹಾಗಾಗಿ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್‌ ಮುಖ್ಯಸ್ಥರು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಜಿಲ್ಲಾ ಉಪನಿರ್ದೇಶಕರು ಹಾಗೂ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರ ಸಮಿತಿ ರಚಿಸಬೇಕು. ಪರಿಹಾರ ವಿತರಣೆ ಅಧಿಕಾರವನ್ನು ಸಮಿತಿಗೆ ನೀಡಬೇಕು ಎಂಬ ಸಲಹೆ ನೀಡಿದ್ದೇವೆ’ ಎಂದು ಹೇಳಿದರು.

ಮುಕ್ತಾಯ: ‘ಸಮಿತಿಯ ಅವಧಿ ಗುರುವಾರಕ್ಕೆ (ಡಿ.31) ಮುಕ್ತಾಯವಾಗಲಿದೆ.  ಅವಧಿಯನ್ನು ವಿಸ್ತರಿಸುವುದು ಬಿಡುವುದು ಮುಖ್ಯಮಂತ್ರಿಗಳಿಗೆ ಬಿಟ್ಟ ವಿಚಾರ. ಆದರೆ, ಇನ್ನಷ್ಟು ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಅಧ್ಯಯನ ನಡೆಸುವಂತೆ ಸಿದ್ದರಾಮಯ್ಯ ಮೌಖಿಕವಾಗಿ ತಿಳಿಸಿದ್ದಾರೆ. ಅಂತಿಮ ವರದಿ ನೀಡುವುದಕ್ಕೆ ಇನ್ನೂ 6  ತಿಂಗಳು ಬೇಕಾಗಬಹುದು’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ರಾಘವೇಶ್ವರರ ಪ್ರಕರಣ: ರಾಮಚಂದ್ರಾಪುರ ಮಠದ ರಾಘವೇಶ್ವರ ಶ್ರೀಗಳ ವಿರುದ್ಧ ದಾಖಲಾಗಿರುವ ಅತ್ಯಾಚಾರ ಪ್ರಕರಣಗಳನ್ನು ವರದಿಯಲ್ಲಿ ಉಲ್ಲೇಖಿಸದಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಗ್ರಪ್ಪ, ‘ಈ ಪ್ರಕರಣಗಳಲ್ಲಿ ಆರೋಪಿಗೆ ಸಮನ್ಸ್‌ ನೀಡುವ ಅಧಿಕಾರ ಸಮಿತಿಗೆ ಇದೆಯೇ ಎಂದು ಗೃಹ ಇಲಾಖೆಯಿಂದ ಸ್ಪಷ್ಟನೆ ಕೇಳಿದ್ದೆ. ಅದಕ್ಕೆ ಉತ್ತರ ಬಂದಿಲ್ಲ. ಅಲ್ಲದೆ  ಖುದ್ದಾಗಿ ಸ್ಥಳಕ್ಕೆ ತೆರಳಿ ಅಧ್ಯಯನ ಮಾಡಿದ ಪ್ರಕರಣಗಳ ಬಗ್ಗೆ ಮಾತ್ರ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಸಮಿತಿಯ ಅವಧಿ ವಿಸ್ತರಣೆಯಾದರೆ, ಅಂತಿಮ ವರದಿಯಲ್ಲಿ ರಾಘವೇಶ್ವರ ಶ್ರೀಗಳ ಪ್ರಕರಣಗಳನ್ನು ಉಲ್ಲೇಖಿಸುತ್ತೇವೆ’ ಎಂದು ಸ್ಪಷ್ಟಪಡಿಸಿದರು.

ಸಮಿತಿಯ ಶಿಫಾರಸುಗಳು :
* ಖಾಸಗಿ ಶಾಲಾ ಕಾಲೇಜುಗಳಲ್ಲಿ ಬೋಧಕ–ಬೋಧಕೇತರ, ಕಾವಲುಗಾರ, ವಾಹನಗಳ ಚಾಲಕ  ಸೇರಿದಂತೆ ಇತರೆ ಸಿಬ್ಬಂದಿ ನೇಮಕ ಮಾಡುವಾಗ, ಪೊಲೀಸ್‌ ಇಲಾಖೆಯಿಂದ ಪೂರ್ವಾಪರ ತಪಾಸಣೆ ಮಾಡಿಸಬೇಕು. ನೇಮಕಾತಿ ನಂತರ ಅವರ ಮಾಹಿತಿಗಳನ್ನು ಠಾಣೆಗೆ ನೀಡಿ ಪ್ರತಿಯೊಬ್ಬ ನೌಕರನಿಗೂ ಪೊಲೀಸರಿಂದ ನಿಗದಿತ  ಗುರುತಿನ ಚೀಟಿ ಮತ್ತು ಸಂಖ್ಯೆ ಕೊಡಬೇಕು.

* ಮೂರು ತಿಂಗಳಿಗೊಮ್ಮೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲಾ–ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ, ಪೋಷಕರ, ಸಿಬ್ಬಂದಿ ಜತೆ ಸಭೆ ನಡೆಸಬೇಕು. ಅವರ ನಡವಳಿಕೆ, ನ್ಯೂನತೆಗಳು ಮತ್ತು ಕುಂದುಕೊರತೆಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಸಂಬಂಧಿಸಿದ ವ್ಯಾಪ್ತಿಯ ಪೊಲೀಸ್‌ ಅಧಿಕಾರಿಗಳು ಪ್ರತಿ ತಿಂಗಳಿಗೊಮ್ಮೆ ಈ ರೀತಿ ಮಾಡಬೇಕು.

* ಪೊಲೀಸರು ಪ್ರತೀ ದಿನ ಕಡ್ಡಾಯವಾಗಿ ಶಾಲಾ ಕಾಲೇಜುಗಳ ಸುತ್ತ ಗಸ್ತು ತಿರುಗಬೇಕು.

* ಗೃಹ, ಶಿಕ್ಷಣ, ಆರೋಗ್ಯ, ಸಮಾಜ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳು ಪರಸ್ಪರ ಸಮನ್ವಯದಿಂದ ಕೆಲಸ ಮಾಡಬೇಕು.

* ಶಾಲಾ–ಕಾಲೇಜು, ಆಸ್ಪತ್ರೆ, ಬಸ್‌ ನಿಲ್ದಾಣ ಸೇರಿದಂತೆ ಸಾರ್ವಜನಿಕ ಕಡೆಗಳಲ್ಲಿ ಜನರ ಚಲನವಲನಗಳ ಮೇಲೆ  ನಿಗಾ ಇಡುವುದಕ್ಕೆ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಕಡ್ಡಾಯ.

* ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್‌ಗಳ ಸೌಲಭ್ಯ ದ್ವಿಗುಣಗೊಳಿಸಬೇಕು.

* ಅತ್ಯಾಚಾರ ಸಂತ್ರಸ್ತರನ್ನು ತಪಾಸಣೆಗೆ ಒಳಪಡಿಸುವಾಗ ಎರಡು ಬೆರಳುಗಳ ವೈದ್ಯಕೀಯ ಪರೀಕ್ಷೆಗೆ ನಿಷೇಧವಿದ್ದರೂ ವೈದ್ಯರು ಈಗಲೂ ಈ ಪರೀಕ್ಷೆ ನಡೆಸುತ್ತಿದ್ದಾರೆ. ಇದಕ್ಕೆ ಸಂಪೂರ್ಣ ಕಡಿವಾಣ ಹಾಕಬೇಕು. ಈಗಿರುವ ನಿಯಮವನ್ನು ವೈದ್ಯರು ಕಟ್ಟುನಿಟ್ಟಾಗಿ ಪಾಲಿಸಬೇಕು.

* ಹೊರ ರಾಜ್ಯಗಳಿಂದ ಬಂದು ವಸತಿ ಪ್ರದೇಶಗಳಲ್ಲಿ ನೆಲೆಸಿರುವವರ ಮೇಲೆ ನಿಗಾ ಇಡುವುದಕ್ಕಾಗಿ ಪೊಲೀಸ್‌  ಗಸ್ತು ಹೆಚ್ಚಬೇಕು.

* ನಿರ್ಮಾಣ ಹಂತದಲ್ಲಿರುವ ಕಟ್ಟಡಗಳಿಗೆ ಕಾವಲುಗಾರರನ್ನು ನೇಮಿಸುವುದಕ್ಕೆ ಪ್ರತ್ಯೇಕ ನಿಯಮ ರೂಪಿಸಬೇಕು.

* ಬಾಡಿಗೆಗೆ ಓಡಿಸುವ ವಾಹನಗಳಿಗೆ ಚಾಲಕ, ನಿರ್ವಾಹಕರನ್ನು ನೇಮಿಸುವುದಕ್ಕೂ ಮುನ್ನ ಮಾಲೀಕರು, ಅಭ್ಯರ್ಥಿಗಳನ್ನು ಪೊಲೀಸ್‌ ತಪಾಸಣೆಗೆ ಒಳಪಡಿಸಿ ನಿರಾಕ್ಷೇಪಣ ಪತ್ರ ಪಡೆಯುವ ವ್ಯವಸ್ಥೆ ರೂಪಿಸಬೇಕು. ನೇಮಕಗೊಂಡವರಿಗೆ ಪೊಲೀಸರು ಗುರುತಿನ ಚೀಟಿ ನೀಡಬೇಕು. ಈ ಪ್ರಮಾಣಪತ್ರಗಳನ್ನು ವಾಹನಗಳಲ್ಲಿ ಕಡ್ಡಾಯವಾಗಿ ಅಂಟಿಸಬೇಕು.  ಪ್ರಮಾಣ ಪತ್ರ ಪಡೆಯದ ಚಾಲಕರನ್ನು ನೇಮಿಸುವ ಮಾಲೀಕರ ವಿರುದ್ಧವೂ ಕ್ರಮ ಕೈಗೊಳ್ಳಬೇಕು.

* ಖಾಸಗಿ ಆಸ್ಪತ್ರೆ, ವೈದ್ಯಕೀಯ ಕಾಲೇಜುಗಳಲ್ಲಿ ಶುಶ್ರೂಷಕರು ಸೇರಿದಂತೆ ಇತರೆ ಸಿಬ್ಬಂದಿ ನೇಮಕಕ್ಕೂ ಮೇಲಿನ ನಿಯಮ ಅನ್ವಯಿಸಬೇಕು. ಆಸ್ಪತ್ರೆಗಳ ವಾಹನಗಳಿಗೆ ಚಾಲಕರನ್ನು ನೇಮಿಸುವಾಗಲೂ ಈ ನಿಯಮ ಪಾಲಿಸಬೇಕು.

* ಭದ್ರತಾ ಸಂಸ್ಥೆಗಳು ಸಂಬಂಧಿಸಿದ ಪೊಲೀಸ್‌ ಅಧಿಕಾರಿಗಳಿಂದ ಪರವಾನಗಿ ಪ್ರಮಾಣ ಪತ್ರವನ್ನು ಪಡೆಯುವುದು ಕಡ್ಡಾಯ. ಈ ಸಂಸ್ಥೆಗಳಲ್ಲಿ ಕಾರ್ಯ ನಿರ್ವ ಹಿಸುವ ಪ್ರತಿ ಕಾವಲುಗಾರನೂ ಪೊಲೀಸ ರಿಂದ ಗುರುತಿನ ಚೀಟಿ ಪಡೆದಿರಬೇಕು.

* ಪೊಲೀಸರಿಂದ ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆಯದ ಕಾವಲುಗಾರರನ್ನು ನೇಮಕ ಮಾಡಿಕೊಳ್ಳುವ ಮಾಲೀಕರು ಅಥವಾ ಗುತ್ತಿಗೆದಾರರ ವಿರುದ್ಧ ಕಾನೂನು ಕ್ರಮ ಜರುಗಿಸಲು ನಿಯಮಾವಳಿ ರೂಪಿಸಬೇಕು.

* ಕಾವಲುಗಾರ ಸೇರಿದಂತೆ ಇತರ ಹುದ್ದೆಗಳಿಗೆ ಹೊರರಾಜ್ಯದವರನ್ನು ನೇಮಕ ಮಾಡಿಕೊಳ್ಳುವಾಗ ಅವರ ನಡತೆ ಬಗ್ಗೆ ಸಂಬಂಧಿಸಿದ ಪೊಲೀಸ್ ಹಾಗೂ ಇತರೆ ಇಲಾಖೆಗಳ ಪ್ರಮಾಣಪತ್ರ  ಕಡ್ಡಾಯಗೊಳಿಸಬೇಕು.
***
ಗೌತಮಿ ಕುಟುಂಬಕ್ಕೆ ₹25 ಲಕ್ಷ ಪರಿಹಾರ
ಬೆಂಗಳೂರು ಆಡುಗೋಡಿಯ ಪ್ರಗತಿ ಪಿಯು ಕಾಲೇಜಿನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಪ್ರಾಣ ಕಳೆದುಕೊಂಡ ದ್ವಿತೀಯ ಪಿಯು ವಿದ್ಯಾರ್ಥಿನಿ ಗೌತಮಿ ಕುಟುಂಬಕ್ಕೆ ₹ 25 ಲಕ್ಷ ಮತ್ತು ಗಾಯಗೊಂಡಿದ್ದ ಶಿರಿಷಾಗೆ ₹ 10 ಲಕ್ಷ ಮೊತ್ತವನ್ನು ಪರಿಹಾರವಾಗಿ ಕಾಲೇಜು ಆಡಳಿತ ಮಂಡಳಿಯಿಂದ ಕೊಡಿಸಲು ಶಿಕ್ಷಣ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.
***
18 ಶಿಫಾರಸುಗಳು...
ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧ ಕಡೆಗಳಲ್ಲಿ ಇತ್ತೀಚೆಗೆ ಮಕ್ಕಳ ಮತ್ತು ಮಹಿಳೆಯರ ಮೇಲೆ ನಡೆದಿರುವ 10 ದೌರ್ಜನ್ಯ ಪ್ರಕರಣಗಳನ್ನು ಆಧರಿಸಿ ಸಮಿತಿಯು ಪ್ರಾಥಮಿಕ ವರದಿ ಸಲ್ಲಿಸಿದ್ದು, ಪ್ರಮುಖವಾಗಿ 18 ಶಿಫಾರಸುಗಳನ್ನು ಮಾಡಿದೆ. ಇದರ ಹೊರತಾಗಿ ಪ್ರತಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತ್ಯೇಕ ಸಲಹೆಗಳನ್ನೂ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT