ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದೂ ಗುಬ್ಬಿ ಇದೂ ಗುಬ್ಬಿ

ಚಂದ ಪದ್ಯ
Last Updated 3 ಮೇ 2014, 19:30 IST
ಅಕ್ಷರ ಗಾತ್ರ

ಗುಬ್ಬಿ ತಗೊಂಡ್ಬಾರೋ ಪುಟ್ಟಾ ಎಂದ್ರೆ
ಗುಬ್ಬಿಮರೀನ ಹಿಡಕಂಡ್ಬಂದಿ!

ಇದನ್ನ ಇರಿಸಿ ಅಂಗಿಗೆ ಹೊಲಿಯೋಕೆ
ಆಗತೇನಾ ಪುಟ್ಟಾ?

ಅದೂ ಗುಬ್ಬಿ ಇದೂ ಗುಬ್ಬಿ
ಇದು ಹೇಂಗಪ್ಪಾ ಆಗತ್ತೆ?

ಆಗತ್ತೆ ಪುಟ್ಟಾ ಆಗತ್ತೆ
ಲೋಕ ಇರೋದೇ ಹಾಗೆ

ಅತ್ತೆ ಅಂದರೆ ಏನರ್ಥ ಕತ್ತೆಗೆ ಕೂಡಾ ಗೊತ್ತಿರತೆ
ಅತ್ತುಬಿಟ್ಟರು ಅತ್ತೆ ಅತ್ತೆಮ್ಮನು ಅತ್ತೆ

ಅಂತೆಯೆ ಗುಬ್ಬಿ ಅದೂ ಗುಬ್ಬಿ ಇದೂ ಗುಬ್ಬಿ
ನಾಟಕ ಕಂಪ್ನೀನೂ ಗುಬ್ಬಿ

ಪ್ಲಾಸ್ಟಿಕ್ ಗುಬ್ಬಿ ಚಿಟಿಕಿ ಗುಬ್ಬಿ
ಕೊಳಿಕೆ ಗುಬ್ಬಿ ಚಿಂವ್ ಚಿಂವ್ ಗುಬ್ಬಿ

ಎಲ್ಲಾ ಗುಬ್ಬಿ ಯಾವ ಗುಬ್ಬಿ ಎಲ್ಲಿ ಗುಬ್ಬಿ
ಅಂತಾ ತಿಳಕೊಳ್ಳೋದೇ ಬುದ್ಧಿ!

ಹೊಣೆ

ಲೆಕ್ಕದಲ್ಲಿ ಮಕ್ಕಳು
ಸೋತ್ರೆ ಯಾರು ಹೊಣೆ
ಲೆಕ್ಕದ ಮೇಷ್ಟ್ರು ಅಲ್ಲದೆ
ಇನ್ನು ಯಾರು ಹೊಣೆ?

ವಿಜ್ಞಾನದಲ್ಲಿ ಮಕ್ಕಳು
ಸೋತ್ರೆ ಯಾರು ಹೊಣೆ
ವಿಜ್ಞಾನದ ಮೇಷ್ಟ್ರು ಅಲ್ಲದೆ
ಇನ್ನು ಯಾರು ಹೊಣೆ?

ಕನ್ನಡದಲ್ಲಿ ಮಕ್ಕಳು
ಸೋತ್ರೆ ಯಾರು ಹೊಣೆ
ಕನ್ನಡದ ಮೇಷ್ಟ್ರು ಅಲ್ಲದೆ
ಇನ್ನು ಯಾರು ಹೊಣೆ?

ಆಟದಲ್ಲಿ ಮಕ್ಕಳು
ಸೋತ್ರೆ ಯಾರು ಹೊಣೆ
ಆಟದ ಮೇಷ್ಟ್ರು ಅಲ್ಲದೆ
ಇನ್ನು ಯಾರು ಹೊಣೆ?

ಚಂದ್ರನೇ

ಬಾನಿನಲ್ಲು ಚಂದ್ರನೇ ಬಾವಿಯಲ್ಲು ಚಂದ್ರನೇ
ಕಾಡಿನಲ್ಲು ಚಂದ್ರನೇ ಕಾನಿನಲ್ಲು ಚಂದ್ರನೇ
ಕೊಳದಲ್ಲು ಚಂದ್ರನೇ ಕಡಲಲ್ಲು ಚಂದ್ರನೇ
ತೆರೆಗಳಲ್ಲು ಚಂದ್ರನೇ ತಳದಲ್ಲು ಚಂದ್ರನೇ
ಕನ್ನಡಿಯಲ್ಲು ಚಂದ್ರನೇ ಗೋಡೆಗನ್ನಡಿಯಲ್ಲು ಚಂದ್ರನೇ
ಕಣ್ಣಿನಲ್ಲು ಚಂದ್ರನೇ ಕಣ್ಣ ಹನಿಗಳಲ್ಲು ಚಂದ್ರನೇ
ಒಟ್ಟು ಎಷ್ಟು ಚಂದ್ರನೇ ಗ್ರಹಿಸಿದಷ್ಟು ಚಂದ್ರನೇ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT