ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ದೂರಿ ಮದುವೆ: ಜಾಗೃತಿಯೇ ಪರಿಹಾರ

Last Updated 10 ಜೂನ್ 2014, 19:30 IST
ಅಕ್ಷರ ಗಾತ್ರ

ಅದ್ದೂರಿ ವಿವಾಹಗಳಿಗೆ ತೆರಿಗೆ ವಿಧಿಸುವ ಬಗ್ಗೆ ರಾಜ್ಯದ ಕಾನೂನು ಸಚಿವರು ಪ್ರಸ್ತಾಪಿಸಿದ್ದು, ಅದರ ಬೆನ್ನಲ್ಲೇ ತರಹೇವಾರಿ ಚರ್ಚೆಗಳು ನಡೆದದ್ದು, ಮೂರೇ ದಿನದಲ್ಲಿ ಸಚಿವರು ತಮ್ಮ ಪ್ರಸ್ತಾಪವನ್ನು ಮರುಪರಿಶೀಲಿ­ಸುವ ಮಾತನಾಡಿದ್ದು ಎಲ್ಲವೂ ಆಯಿತು. ಆದರೆ ಇವೆಲ್ಲದರ ನಡುವೆ ಆಡಂಬರದ ಮದುವೆಗಳ ವಿರುದ್ಧ ಸಮಾಜದಲ್ಲಿ ನಡೆಯಬೇಕಿದ್ದ ನಿಜವಾದ ಚರ್ಚೆ ಮಾತ್ರ ತನ್ನಷ್ಟಕ್ಕೇ ನೇಪಥ್ಯಕ್ಕೆ ಸರಿದು­ಹೋಯಿತೇ ಎಂಬುದು ಸದ್ಯದ ಆತಂಕ.

ಮದುವೆ ಹೆಸರಿನಲ್ಲಿ ಮಾಡುವ ದುಂದು­ವೆಚ್ಚಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸರ್ಕಾರದ ಚಿಂತನೆ ಪ್ರಶಂಸಾರ್ಹವಾದದ್ದು ಎಂದು ಕೆಲವರು ಅಭಿಪ್ರಾಯಪಟ್ಟರೆ, ಮದುವೆ ಎಂಬುದು ಖಾಸಗಿ ಹಾಗೂ ಭಾವನಾತ್ಮಕ ವಿಚಾರ, ಅದರಲ್ಲಿ ಸರ್ಕಾರ ಮೂಗು ತೂರಿಸುವುದು ಸರಿಯಲ್ಲ ಎಂದು ಇನ್ನು ಕೆಲವರು ವಾದಿಸಿದರು.

ಸರ್ಕಾರದ ಚಿಂತನೆ ಸರಿಯಾಗಿದೆ, ಆದರೆ ಅದನ್ನು ಕಾನೂನಿನ ಮೂಲಕ ಅನುಷ್ಠಾನಗೊಳಿಸುವುದು ಸರಿಯಾದ ಹೆಜ್ಜೆಯಲ್ಲ ಎಂದು ವಿಶ್ಲೇಷಿಸುವ ಮಂದಿಯೂ ತುಂಬ ದೊಡ್ಡ ಸಂಖ್ಯೆಯಲ್ಲಿದ್ದಾರೆ. ಮೂರನೆಯ ಅಭಿಪ್ರಾಯ ಹೆಚ್ಚು ಸಮಂಜಸ ಹಾಗೂ ಸಮತೋಲಿತವಾದದ್ದು ಅನಿಸುತ್ತದೆ.

ಮದುವೆಗೆ ತೆರಿಗೆ ಎಂಬ ಪ್ರಸ್ತಾಪ ಬರುತ್ತಿ­ದ್ದಂತೆಯೇ ಕೆಲವರಂತೂ ವಾಚಾಮಗೋಚರ­ವಾಗಿ ಸರ್ಕಾರವನ್ನೂ ಸಚಿವರನ್ನೂ ತರಾಟೆಗೆ ತೆಗೆದು­ಕೊಳ್ಳಲಾರಂಭಿಸಿದರು. ವೈಭವದ ಮದುವೆ­ಗಳನ್ನು ಕಾನೂನಿನ ಮೂಲಕ ನಿಯಂತ್ರಿ­ಸುವ ಸರ್ಕಾರದ ಯೋಜನೆಯನ್ನು ಟೀಕಿಸುವುದರಲ್ಲಿ ತಪ್ಪೇನೂ ಇಲ್ಲ, ಆದರೆ ಈ ಟೀಕೆಯನ್ನು ಲೇವಡಿಯ ಮಟ್ಟಕ್ಕೆ ತೆಗೆದು­ಕೊಂಡುಹೋಗಿ ಅದರ ಹಿಂದಿನ ಸದಾಶಯವನ್ನೇ ಹೀಗಳೆಯುವ ಮತ್ತು ಮುಚ್ಚಿಹಾಕುವ ಪ್ರಯತ್ನ ಮಾತ್ರ ಒಳ್ಳೆಯ ಬೆಳವಣಿಗೆ ಅಲ್ಲ.

ಬರೀ ಕಾನೂನಿನ ಮೂಲಕವೇ ಸಮಾಜದಲ್ಲಿ ಯಾವುದಾದರೂ ಸುಧಾರಣೆ ತರುವುದು ಸಾಧ್ಯವಿದ್ದರೆ ನಮ್ಮಲ್ಲಿ ಹತ್ತು ಆದರ್ಶ ಸಮಾಜ­ಗಳನ್ನು ನಿರ್ಮಿಸುವಷ್ಟು ಕಾನೂನುಗಳಿವೆ. ದುರ­ದೃಷ್ಟವಶಾತ್ ಒಂದು ಬಾರಿಯೂ ಅದು ಸಾಧ್ಯ­ವಾಗಿಲ್ಲ. ಕಾನೂನುಗಳ ಸಂಖ್ಯೆ ಹೆಚ್ಚಾ­ದಷ್ಟೂ ಅದನ್ನು ಉಲ್ಲಂಘಿಸುವವರ ಸಂಖ್ಯೆಯೂ ಹೆಚ್ಚಾ­ಗು­ತ್ತಿರುವುದು ಹೊಸ ಸಂಗತಿಯಲ್ಲ.

ಅಂತಹ ಕಾನೂನುಗಳ ಕಣ್ಣಿಗೆ ಮಣ್ಣೆರಚಿ ಬದುಕುವುದು ಹೇಗೆಂದೂ ನಮ್ಮ ಜನಕ್ಕೆ ಗೊತ್ತು. ತಾನು ಹೇಗೆ ಟ್ರಾಫಿಕ್ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದೆ ಎಂಬಲ್ಲಿಂದ ತೊಡಗಿ ತಾನು ಈ ಬಾರಿ ಎಷ್ಟು ಲಕ್ಷ ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಂಡೆ ಎಂಬಲ್ಲಿಯವರೆಗೆ ತಾವು ಕಾನೂನಿನಿಂದ ಬಚಾವಾ­ದದ್ದನ್ನು ಒಂದು ದೊಡ್ಡ ಸಾಧನೆ­ಯೆಂಬಂತೆ ಎಲ್ಲರೆದುರು ಹೇಳಿಕೊಳ್ಳುವವರನ್ನು ದೈನಂದಿನ ಬದುಕಿನಲ್ಲಿ ನಾವು ಕಾಣುತ್ತಲೇ ಇರುತ್ತೇವೆ. ಕಾನೂನನ್ನು ಪ್ರಜ್ಞಾಪೂರ್ವಕವಾಗಿ ಪಾಲಿಸದೆ ಇರುವವರ ಮತ್ತು ಅದರಿಂದ ವಿಲಕ್ಷಣ ಸಂತೋಷ ಪಡೆಯುವವರ ಸಂಖ್ಯೆ ನಮ್ಮಲ್ಲಿ ಕಡಿಮೆಯೇನೂ ಇಲ್ಲ.

ಕಾನೂನಿನ ಮೂಲಕವೇ ಎಲ್ಲವನ್ನೂ ಸಾಧಿಸ­ಲಾಗದು; ಅದಕ್ಕೆ ಸಮಾಜದಲ್ಲಿ ಪರಿವರ್ತನೆಯೂ ನಾಗರಿಕರಲ್ಲಿ ಪ್ರಬುದ್ಧತೆಯೂ ಮತ್ತು ಆ ಮೂಲಕ ಪ್ರಜಾಪ್ರಭುತ್ವದಲ್ಲಿ ಪಕ್ವತೆಯೂ ಮೂಡಿಬರುವುದು ಅವಶ್ಯಕ ಎಂಬ ಮಾತು ಬೇರೆ ಬೇರೆ ಸಂದರ್ಭಗಳಲ್ಲಿ ಪ್ರಸ್ತಾಪ­ವಾಗಿದೆ. ಅದ್ದೂರಿ ವಿವಾಹಗಳ ನಿಯಂತ್ರಣದ ವಿಷಯಕ್ಕೆ ಬಂದಾಗಲೂ ಈ ಮಾತು ಅನ್ವಯವಾ­ಗುತ್ತದೆ.

ಒಂದು ಕಾನೂನು ತಿದ್ದುಪಡಿಯ ಮೂಲಕ ಮದುವೆಗಳಲ್ಲಿ ವೈಭವದ ಪ್ರದರ್ಶನ­ವನ್ನು ತಡೆಗಟ್ಟಬಹುದು ಎನ್ನುವುದು ಅಪ್ರಬುದ್ಧ ಯೋಚನೆ. ಇಷ್ಟೆಲ್ಲ ಕಾನೂನು ಕಟ್ಟಳೆಗಳಿದ್ದರೂ ದೇವದಾಸಿ ಪದ್ಧತಿಯನ್ನಾಗಲೀ, ಬೆತ್ತಲೆ ಸೇವೆಯನ್ನಾಗಲೀ ಸಂಪೂರ್ಣವಾಗಿ ನಿಲ್ಲಿಸಲು ನಮಗೆ ಸಾಧ್ಯವಾಗಿದೆಯೇ? ವರ್ಷದಲ್ಲಿ ಒಂದೆ­ರಡು ಬಾರಿಯಾದರೂ ದೇಶದ ಯಾವು­ದಾ­ದರೊಂದು ಮೂಲೆಯಿಂದ ಸತಿ ಪದ್ಧತಿ ಆಚರಣೆಯ ವರದಿಗಳು ಬರುತ್ತಿಲ್ಲವೇ?

ಅನೇಕ ಸಮುದಾಯಗಳಲ್ಲಿ ಇನ್ನೂ ಬಾಲ್ಯವಿವಾಹ ರೂಢಿಯಲ್ಲಿಲ್ಲವೇ? ವರದಕ್ಷಿಣೆ ನಿಷೇಧ ಕಾಯ್ದೆ ಬಂದು ಐದು ದಶಕ ಕಳೆದರೂ ವರದಕ್ಷಿಣೆ ಪಿಡುಗಿನ ಅನಾಹುತಗಳು ಕಡಿಮೆಯಾಗಿವೆಯೇ? ಅಸ್ಪೃಶ್ಯತೆ ಆಚರಣೆಯ, ದಲಿತರಿಗೆ ದೇವಾಲಯ ಪ್ರವೇಶ ನಿಷೇಧದ ಘಟನೆಗಳು ಇನ್ನೂ ಮರು­ಕಳಿಸುತ್ತಿಲ್ಲವೇ?

ಮದುವೆಯ ನೆಪದಲ್ಲಿ ಶ್ರೀಮಂತಿಕೆಯ ಅಸಹ್ಯಕರ ಪ್ರದರ್ಶನದ ಪರಿಪಾಠ ನಿಲ್ಲಬೇಕೆಂಬು­ದರಲ್ಲಿ ಎರಡು ಮಾತಿಲ್ಲ. ಮದುವೆ ಛತ್ರವನ್ನು ಸಿಂಗರಿಸಲು ಬಳಸುವ ಲೋಡುಗಟ್ಟಲೆ ಹೂವು, ಕಣ್ಣುಕೋರೈಸುವ ವಿದ್ಯುದ್ದೀಪಗಳ ಸಾಲು, ತಿಂದದ್ದಕ್ಕಿಂತಲೂ ಹೆಚ್ಚು ಎಸೆಯುವ ತರಹೇವಾರಿ ಭಕ್ಷ್ಯಭೋಜ್ಯಗಳು... ಇಂತಹ ಒಂದು ಮದುವೆ ಸರಳವಾಗಿ ನಡೆದುಬಿಟ್ಟರೆ, ಹಾಗೆ ಉಳಿಯುವ ಹಣದಲ್ಲಿ ಒಂದು ಹಳ್ಳಿಯ ನೂರು ಮಕ್ಕಳು ಇಡೀ ವರ್ಷ ನಿಶ್ಚಿಂತರಾಗಿ ಓದಬಹುದು.

ಮದುವೆಯನ್ನು ವರನ ಕಡೆಯವರ ಸ್ಥಾನಮಾ­ನಕ್ಕೆ ಅನುಗುಣವಾಗಿ ಇಂಥಾ ಕಡೆಯೇ ನಡೆಸ­ಬೇಕು, ಆಮಂತ್ರಣ ಪತ್ರಿಕೆ ಇಂಥಾ ಗುಣಮಟ್ಟದ್ದೇ ಆಗಿರಬೇಕು, ವಧುವಿಗೆ ಇಷ್ಟಿಷ್ಟು ಆಭರಣಗಳನ್ನು ತೊಡಿಸಲೇಬೇಕು, ವಾದ್ಯಗೋಷ್ಠಿ­ಯನ್ನಂತೂ ತಪ್ಪಿಸಬಾರದು, ಊಟಕ್ಕೆ ಇಂತಿಂಥ ಮೆನು ಇರಲೇಬೇಕು ಎಂಬಿತ್ಯಾದಿ ಷರತ್ತುಗಳ ಮಧ್ಯೆ ನಡೆಯುವ ವಿವಾಹಗಳಿಂದಾಗಿ ಬಡ ಮತ್ತು ಮಧ್ಯಮ ವರ್ಗದವರಿಗೆ ಮದುವೆ ನಡೆಸುವು­ದೊಂದು ದುಃಸ್ವಪ್ನವಾಗಿ ಮಾರ್ಪಟ್ಟಿರುವುದು ಸುಳ್ಳಲ್ಲ.

ಜೀವನಪೂರ್ತಿ ದುಡಿದು ಕೂಡಿಡುವುದೇ ಒಬ್ಬ ಮಗಳ ಮದುವೆ ಪೂರೈಸಿ ಹೈರಾಣಾ­ಗು­ವು­ದಕ್ಕೆ ಎಂಬಂತಾಗಿದೆ ಎಷ್ಟೋ ಮಂದಿಯ ಅವಸ್ಥೆ. ನಮ್ಮ ಸಮಾಜದಲ್ಲೊಂದು ಸಾಮೂಹಿಕ ಜಾಗೃತಿ ಮೂಡದ ಹೊರತು ಈ ಪರಿಸ್ಥಿತಿ ಸುಧಾ­ರಿಸದು. ಒಂದು ಸಾವಿರಕ್ಕಿಂತ ಹೆಚ್ಚು ಮಂದಿ ಭಾಗ­ವ­ಹಿಸುವ ಮದುವೆಗಳಿಗೆ ಸುಂಕ ವಿಧಿಸು­ವುದು ಇದಕ್ಕೆ ಪರಿಹಾರವಲ್ಲ.

ಗ್ರಾಮೀಣ ಪ್ರದೇಶದ ಒಬ್ಬ ಜನಪ್ರಿಯ ಅಧ್ಯಾಪಕನ ಮದುವೆಗೆ ಸಾವಿರಕ್ಕಿಂತ ಹೆಚ್ಚು ಜನ ಅಭಿ­ಮಾನದಿಂದ ಜಮಾಯಿಸಿಬಿಟ್ಟರೆ ಅದು ಅವನ ತಪ್ಪೇ? ಅಷ್ಟೂ ಮಂದಿಯನ್ನು ಉಪಚರಿಸಿ ಕಳುಹಿಸುವುದು ಅವನ ಧರ್ಮ. ಆದರೆ ಅದನ್ನು ಆಡಂಬರವಿಲ್ಲದೆಯೂ ನಡೆಸ­ಬಹುದು.

ಮದುವೆ ಎನ್ನುವುದು ವೈಭವದ ಪ್ರದರ್ಶನ­ಕ್ಕಿಂತಲೂ ಸಂಬಂಧಗಳನ್ನು ಹಾಗೂ ಸಾಮರಸ್ಯವನ್ನು ಪೋಷಿಸುವ ವೇದಿಕೆ ಎಂಬುದು ಸಮಾಜದ ಎಲ್ಲ ವರ್ಗದವರಿಗೂ ಮನವರಿಕೆ­ಯಾದರೆ ಅದೇ ಈ ಪಿಡುಗಿಗೆ ಎಲ್ಲದಕ್ಕಿಂತ ಸಮರ್ಪಕ ಪರಿಹಾರ. ಅವರಲ್ಲಿ ದುಡ್ಡಿದೆ, ಖರ್ಚು ಮಾಡಲಿ ಬಿಡಿ ಅಥವಾ ಜೀವನದಲ್ಲಿ ಒಮ್ಮೆ ನಡೆಯುವ ಸಮಾರಂಭ, ಅವರವರ ಸಾಮರ್ಥ್ಯಕ್ಕೆ ತಕ್ಕಂತೆ ಮಾಡುತ್ತಾರೆ ಬಿಡಿ ಎಂಬ ಮಾತುಗಳೆಲ್ಲ ಕೇವಲ ಉಡಾಫೆಯದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT