ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅದ್ಭುತಗಳ ರಾಶಿ `ದಕ್ಷಿಣ ಕಾಶಿ'

Last Updated 19 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ಒಂದೆಡೆ ಜಲಪಾತದ ನಿನಾದ, ಇನ್ನೊಂದೆಡೆ ಹಕ್ಕಿಗಳ ಚಿಲಿಪಿಲಿ. ಸುತ್ತಲೂ ಬಂಡೆ, ಬಂಡೆಯ ನಡುವೆ ನೀರಿನ ಚಿಲುಮೆ. ಈ ಸುಂದರ ತಾಣದ ನಡುವೆ ದೇಗುಲದ ದರ್ಶನ...

ಇದು ಬೆಳಗಾವಿ ಜಿಲ್ಲೆ ಸವದತ್ತಿ ತಾಲ್ಲೂಕಿನ ಶ್ರೀಕ್ಷೇತ್ರ ಸೊಗಲ ಸೋಮೇಶ್ವರ ದೇವಾಲಯದ ಚಿತ್ರಣ. ಸುಮಾರು 40 ಅಡಿ ಎತ್ತರದಿಂದ ಕವಲೊಡೆದು ಧುಮುಕುವ ಜಲಪಾತದ ನಡುವೆ ನಯನ ಮನೋಹರವಾಗಿ ಕಣ್ಮನ ಸೆಳೆಯುತ್ತಿದೆ ಈ ಕ್ಷೇತ್ರ. ಶಿವನಿಂದ ಆತ್ಮಲಿಂಗ ಪಡೆದ ಶಿವಭಕ್ತ ರಾವಣನ ಬಂಟರಾದ ಮಾಲಿ ಸುಮಾಲಿಯರು ಸ್ಥಾಪಿಸಿದ ಕ್ಷೇತ್ರ `ದಕ್ಷಿಣ ಕಾಶಿ' ಎಂದೇ ಪ್ರಸಿದ್ಧ.

10ನೇ ಶತಮಾನದ ಶಿಲಾಶಾಸನ, ಶೈವ ಸಂಪ್ರದಾಯದಂತೆ ಶಿವ-ಪಾರ್ವತಿ ಹಸೆಮಣೆ ಏರಿರುವ ಕುರಿತಾಗಿ ಕೆತ್ತಲಾದ ಮೂರ್ತಿ ಅಭೂತಪೂರ್ವವಾದುದು. ವರನಾದ ಶಿವ ಧೋತಿ ಉಟ್ಟು ಬಾಸಿಂಗ ಕಟ್ಟಿಕೊಂಡಿದ್ದರೆ, ವಧುವಾದ ಪಾರ್ವತಿ ಸೀರೆ ಕುಪ್ಪಸ ತೊಟ್ಟು ತಲೆಗೆ ದಂಡೆ ಕಟ್ಟಿಕೊಂಡಿದ್ದಾಳೆ. ಇಂತಹ ಮೂರ್ತಿ ಬೇರೆಲ್ಲೂ ಇಲ್ಲ ಎನ್ನುತ್ತಾರೆ ಇತಿಹಾಸಕಾರರು.

ಇವರ ವಿವಾಹದ ಸಂದರ್ಭದಲ್ಲಿ ಶಿವನ ದಿಬ್ಬಣ ಬಂದಾಗ ಬಸವಣ್ಣನು `ದಿಬ್ಬಣ ಬರುತ್ತಿದೆ' ಎಂದು ಕೂಗಿದ್ದನಂತೆ. ಅದಕ್ಕೇ ಇಲ್ಲಿರುವ ಬಸವಣ್ಣ ಈಗ `ಕೂಗು ಬಸವಣ್ಣ'. ಪಾರ್ವತಿ ಪರಮೇಶ್ವರ ಪಗಡೆ ಆಟದ ದೃಶ್ಯ ನಯಮಮನೋಹರ.

ಈ ಆಟಕ್ಕೆ ಬಸವಣ್ಣ, ಸಿಂಹಗಳು ವೀಕ್ಷಕರು. ಶಿವನು ಚತುರ್ಭುಜಗಳಲ್ಲಿ ತ್ರಿಶೂಲ, ಡಮರು ಹಿಡಿದಿದ್ದರೆ, ಪಾರ್ವತಿಯ ಅಕ್ಷಮಾಲೆ ಹಿಡಿದಿದ್ದಾಳೆ. ಇದರ ಸನಿಹದಲ್ಲಿಯೇ ಇರುವ ಜಲಪಾತಗಳಲ್ಲಿ ಸ್ನಾನ ಮಾಡಿದರೆ ರೋಗ-ರುಜಿನ ವಾಸಿಯಾಗುತ್ತವೆ, ತಿಳಿಯದೇ ಮಾಡಿದ ಪಾಪಗಳೆಲ್ಲ ನಿವಾರಣೆಯಾಗುವುದು ಎನ್ನುತ್ತಾರೆ ಭಕ್ತರು.

ಇಲ್ಲಿಯ ಪ್ರವಾಸಿ ಮಂದಿರ ಸಕಲ ಸೌಲಭ್ಯಗಳನ್ನು ಹೊಂದಿದ್ದು, ಸಭೆ ಸಮಾರಂಭಗಳಿಗೆ ಸೂಕ್ತ ಸ್ಥಳ. ಶ್ರೀಕ್ಷೇತ್ರ ಟ್ರಸ್ಟಿನ ಆಡಳಿತ ಮಂಡಳಿ ಕೋಟ್ಯಂತರ ಹಣ ಖರ್ಚು ಮಾಡಿ ಬೆಟ್ಟ, ಗುಡ್ಡ, ದೊಡ್ಡ ಬಂಡೆ ಕಲ್ಲಿನಲ್ಲಿದ್ದ ಕ್ಷೇತ್ರವನ್ನು ಪ್ರವಾಸಿಗರ ಕೇಂದ್ರವನ್ನಾಗಿ ಪರಿವರ್ತಿಸಿದೆ. ಎಲ್ಲಿ ನೋಡಿದರಲ್ಲಿ ಮೆಟ್ಟಿಲುಗಳದ್ದೇ ರಾಜ್ಯ. ಗುಡ್ಡದಲ್ಲಿ ಪ್ರಾಣಿ ಸಂಗ್ರಹಾಲಯವೂ ಇದೆ. ವಿವಿಧ ಪಕ್ಷಿಗಳು ಇಲ್ಲಿ ಚಿಲಿ ಪಿಲಿಗುಟ್ಟುತ್ತಿವೆ. ಇಲ್ಲಿರುವ ಬೃಹದಾಕಾರದ ಪರಮೇಶ್ವರ ಮೂರ್ತಿ ಪ್ರವಾಸಿಗರನ್ನು ಸ್ವಾಗತಿಸುತ್ತಿದೆ. 

ಈ ಕ್ಷೇತ್ರದಿಂದ 5 ಕೀ.ಮೀ ದೂರದಲ್ಲಿ ಚಿಕ್ಕ ಸೋಮೇಶ್ವರ ದೇವಸ್ಥಾನ ಇದೆ. ಈ ದೇವಸ್ಥಾನವು ನಡುಗುಡ್ಡದ ಬಂಡೆಗಳ ಮಧ್ಯೆ ಇದ್ದು, ಇವುಗಳ ನಡುವೆ ಹನಿ ಹನಿ ನೀರು ಬೀಳುತ್ತಿರುವುದು ಅಚ್ಚರಿ ತರುವಂಥದ್ದಾಗಿದೆ.  ಈ ನೀರು ಕೂಡ ಎಲ್ಲ ರೀತಿಯ ರೋಗ ರುಜಿನಗಳನ್ನು ವಾಸಿ ಮಾಡುತ್ತದೆ ಎಂಬ ಭಾವನೆ ಇದೆ. ಈ ನೀರು ಹಾಗೂ ಸ್ಥಳವನ್ನು ವಿಜ್ಞಾನಿಗಳು ಹಲವಾರು ಬಾರಿ ಪರೀಕ್ಷಿಸಿ ಇಂತಹ ಅದ್ಭುತ ಜಗತ್ತಿನ ಬೇರೆಲ್ಲೂ ಇರದು ಎಂದು ಹೇಳಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT