ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನನ್ಯ ಹುಡುಕಾಟ

Last Updated 23 ಜನವರಿ 2014, 19:30 IST
ಅಕ್ಷರ ಗಾತ್ರ

ಒಬ್ಬ ನಿರ್ದೇಶಕ ತನ್ನ ಸುತ್ತಲಿನ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗ್ರಹಿಸಬೇಕು ಮತ್ತು ಚಿತ್ರದ ಮೂಲಕ ಸ್ಪಂದಿಸಬೇಕು ಎನ್ನುವ ಅನುಭವಿ ನಿರ್ದೇಶಕರ ಮಾತನ್ನು ಯುವ ನಿರ್ದೇಶಕಿ ಅನನ್ಯ ಕಾಸರವಳ್ಳಿ ಅಕ್ಷರಶಃ ರೂಢಿಸಿಕೊಳ್ಳುತ್ತಿದ್ದಾರೆ. ಪುಣೆಯಲ್ಲಿ ನಡೆದ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಅನನ್ಯ ನಿರ್ದೇಶಿಸಿದ 20 ನಿಮಿಷಗಳ ಕಿರುಚಿತ್ರ ‘ಕಪ್ಪು ಕಲ್ಲಿನ ಸೈತಾನ’ಕ್ಕೆ ವಿದ್ಯಾರ್ಥಿ ಚಿತ್ರ ವಿಭಾಗದಲ್ಲಿ ಶ್ರೇಷ್ಠ ಕಿರುಚಿತ್ರ ಪ್ರಶಸ್ತಿ ಲಭಿಸಿದೆ. ಕನ್ನಡದ ಮುಖ್ಯ ಬರಹಗಾರರಲ್ಲಿ ಒಬ್ಬರಾದ ಬೊಳುವಾರ ಮೊಹಮ್ಮದ್ ಕುಂಞಿ ಅವರ ಕಥೆ ಆಧರಿಸಿದ ಕಿರುಚಿತ್ರ ಇದು. ಜಗತ್ತಿನ ವಿವಿಧ ರಾಷ್ಟ್ರಗಳು ಸೇರಿದಂತೆ ಭಾರತದ ಕಿರುಚಿತ್ರಗಳು ಸ್ಪರ್ಧೆಯಲ್ಲಿದ್ದರೂ ಅನನ್ಯರ ಸೃಜನಶೀಲ ಅಭಿವ್ಯಕ್ತಿ ಮುಂಚೂಣಿಯಲ್ಲಿ ಕಾಣಿಸಿಕೊಂಡಿದೆ. ಈಗಾಗಲೇ ಎಂಟು ಚಿತ್ರೋತ್ಸವಗಳಲ್ಲಿ ಈ ಕಿರುಚಿತ್ರ ಪ್ರದರ್ಶನಗೊಂಡು ಮೆಚ್ಚುಗೆ ಪಡೆದಿದೆ.

ಊರ ಹೊರವಲಯದಲ್ಲಿ ಬೀಡಿ ಕಟ್ಟುತ್ತ ಬದುಕಿನ ಬಂಡಿ ದೂಡುತ್ತಿರುವ ಹಿರಿಯ ಜೀವ ಕುಂಞಿಪಾತುಮ್ಮನ ಸಂಸಾರದ ಕಥೆ ಇಲ್ಲಿದೆ. ಸರ್ಕಾರ 2 ರೂಪಾಯಿಗೆ ಒಂದು ಕೆ.ಜಿ. ಅಕ್ಕಿ ಕೊಡುತ್ತಿದೆ ಎಂದು ತಿಳಿದಾಗ ಆಕೆಯ ಮನದಲ್ಲಿ ಮತ್ತು ಕುಟುಂಬದಲ್ಲಾಗುವ ಸ್ಥಿತ್ಯಂತರ ಕಥಾವಸ್ತು. ಈ ಕಥಾವಸ್ತು ಅನನ್ಯರ ಗ್ರಹಿಕೆಗೆ ಸಿಕ್ಕಿದ್ದು, ಇತ್ತೀಚೆಗೆ ಸರ್ಕಾರವು ಜಾರಿಗೆ ತಂದ ಒಂದು ರೂಪಾಯಿಗೆ ಒಂದು ಕೆ.ಜಿ. ಅಕ್ಕಿಯ ಯೋಜನೆಯಿಂದ.

‘ಸರ್ಕಾರದ ಅಕ್ಕಿ ವಿತರಣೆ ಯೋಜನೆಯ ಬಗ್ಗೆ ಪತ್ರಿಕೆಯೊಂದರಲ್ಲಿ ಲೇಖನ ಬಂದಿತ್ತು. ಬೊಳುವಾರು ಅವರು ಈ ಕಥೆ ಬರೆದಿದ್ದು ಸುಮಾರು ಇಪ್ಪತ್ತು ವರುಷಗಳ ಹಿಂದೆ. ಕುಂಞಿಪಾತುಮ್ಮನ ಬದುಕು ಹೇಗೆಲ್ಲಾ ಬದಲಾಗುತ್ತದೆ ಅನ್ನಿಸಿತ್ತು. ಈ ಕಥೆಯ ಅಂಶಗಳು ಪ್ರಸ್ತುತ ಕಾಲಕ್ಕೂ ಸಲ್ಲುತ್ತದೆ’ ಎಂದು ಕಥೆಯ ಆಯ್ಕೆ ಹಿಂದಿನ ಗ್ರಹಿಕೆಗಳನ್ನು ಬಿಚ್ಚಿಡುತ್ತಾರೆ ಅನನ್ಯ. ಚೆನ್ನೈನ ಎಲ್.ವಿ. ಪ್ರಸಾದ್ ಫಿಲ್ಮ್ ಅಂಡ್ ಟೆಲಿವಿಷನ್ ಅಕಾಡೆಮಿಯಲ್ಲಿ ನಿರ್ದೇಶನದ ಹೊರಒಳಗುಗಳನ್ನು ಕಲಿತು ಬಂದಿರುವ ಅವರು, ಬೆಳ್ಳಿಪರದೆಯಲ್ಲಿ ನಿರ್ದೇಶನದಲ್ಲಿ ತೊಡಗುವ ಸಿದ್ಧತೆಯಲ್ಲಿರುವವರು. ಕಥೆಯ ಹುಡುಕಾಟ ಸಹ ನಡೆಸಿದ್ದಾರೆ. 

‘ಈಗಷ್ಟೇ ಸ್ಕೂಲ್ ಮುಗಿಸಿಕೊಂಡು ಬಂದಿದ್ದೇನೆ. ಚಿತ್ರ ನಿರ್ದೇಶನಕ್ಕೆ ಕಥೆಯ ಹುಡುಕಾಟದಲ್ಲಿದ್ದು ಸದ್ಯದಲ್ಲಿಯೇ ತೊಡಗುವೆ’ ಎನ್ನುವ ಅನನ್ಯ, ಅವಕಾಶ ಸಿಕ್ಕರೆ ವ್ಯಾಪಾರಿ ಚಿತ್ರಗಳಲ್ಲೂ ಪ್ರಯೋಗಕ್ಕೆ ಒಡ್ಡಿಕೊಳ್ಳುವ ಮನಸ್ಥಿತಿ ಹೊಂದಿರುವವರು. ‘ವ್ಯಾಪಾರಿ ಮತ್ತು ಕಲಾತ್ಮಕ ಚಿತ್ರಗಳನ್ನು ಬೇರೆ ಬೇರೆ ನುಡಿಗಟ್ಟು ಬಳಸಿ ರೂಪಿಸಬೇಕು. ಆದರೆ ಎರಡಕ್ಕೂ ಅಷ್ಟೇ ಬುದ್ಧಿಮತ್ತೆ ಅವಶ್ಯ. ಮುಂದೆ ಆಸಕ್ತಿ ಬಂದರೆ ವ್ಯಾಪಾರಿ ಚಿತ್ರವನ್ನು ಮಾಡಬಹುದು’ ಎಂದು ಭವಿಷ್ಯದ ಹುಡುಕಾಟವನ್ನು ವಿವರಿಸುತ್ತಾರೆ.

ಸಾದತ್ ಹಸನ್ ಮಾಂಟೋ ಅವರ ಒಂದು ಕಥೆ ಮತ್ತು ಶಂಕರಾಚಾರ್ಯರ ಸೌಂದರ್ಯ ಲಹರಿಯ ಶ್ಲೋಕ ಆಧರಿಸಿದ ಕಿರುಚಿತ್ರ ಮತ್ತು ‘ಬಿಯಾಂಡ್ ಬೈನರಿ’ ಎನ್ನುವ ಸಾಕ್ಷ್ಯಚಿತ್ರವನ್ನು ರೂಪಿಸಿ, ಮೆಚ್ಚುಗೆ ಪಡೆದಿದ್ದಾರೆ. ಒಟ್ಟು ನಾಲ್ಕು ಚಿತ್ರಗಳು ಎಂಟು ತಿಂಗಳ ಅವಧಿಯಲ್ಲಿ ರೂಪುಗೊಂಡಿದ್ದು ಅನನ್ಯರ ಸೃಜನಶೀಲತೆಯ ಪ್ರತೀಕದಂತಿವೆ.

‘ಮಾಂಟೋ ಅವರ ಉರ್ದು ಕಥೆಯನ್ನು ಐದೂವರೆ ನಿಮಿಷದ ಕಿರುಚಿತ್ರದ ಚೌಕಟ್ಟಿಗೆ ಒಗ್ಗಿಸಬೇಕಿತ್ತು. ಆ ಕಥೆಗೆ 1947ರ ಅವಧಿಯನ್ನು ಸೃಷ್ಟಿಸಬೇಕು. ಅಲ್ಲದೆ ಐದೂವರೆ ನಿಮಿಷ ಒಂದೇ ಶಾಟ್‌ ಅದು. ಸನ್ನಿವೇಶ, ಭಾವನೆ ಎಲ್ಲವನ್ನೂ ಒಂದೇ ದೃಶ್ಯದಲ್ಲಿ ಸೆರೆ ಹಿಡಿಯಬೇಕು. ಆ ಚಿತ್ರಕ್ಕೆ ಟಾಟಾ ಇನ್‌ಸ್ಟಿಟ್ಯೂಟ್ ಪ್ರಶಸ್ತಿ ಸಹ ಬಂದಿತು. ಚಿತ್ರ ಕಟ್ಟುವುದು ಹೇಗೆ ಎನ್ನುವುದಕ್ಕೆ ಮಾದರಿಯಾಗಿ ‘ಎಸ್‌ಟಿಐಐ’ನಲ್ಲಿ ಈ ಚಿತ್ರವನ್ನು ಪ್ರದರ್ಶಿಸಿದ್ದರಂತೆ. ಅದು ಪ್ರಶಸ್ತಿಗಿಂತಲೂ ತುಂಬಾ ಖುಷಿಕೊಟ್ಟಿತು’ ಎಂದು ಮೊದಲ ಕಿರುಚಿತ್ರಕ್ಕೆ ಸಿಕ್ಕ ಪ್ರತಿಕ್ರಿಯೆಯನ್ನು ನೆನೆಯುತ್ತಾರೆ.    

‘ನಾಯಿನೆರಳು’, ‘ಕಾಡಬೆಳದಿಂಗಳು’ ಸೇರಿದಂತೆ ಐದು ಚಿತ್ರಗಳಲ್ಲಿ ಮತ್ತು ಹತ್ತಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿರುವ ಅನನ್ಯ, ಒಳ್ಳೆಯ ಅವಕಾಶಗಳು ಸಿಕ್ಕರೆ ಮತ್ತೆ ಬಣ್ಣ ಹಚ್ಚುವ ಬಯಕೆಯುಳ್ಳವರು.

ಐದು ಚಿತ್ರಗಳಲ್ಲಿ ನಟಿಸಿರುವ ಅನನ್ಯ ಅವರನ್ನು ಹೆಚ್ಚು ಕಾಡಿದ್ದು ‘ನಾಯಿ ನೆರಳು’ ಚಿತ್ರದಲ್ಲಿನ ಪಾತ್ರ. ‘ಚಿತ್ರದಲ್ಲಿ ನನ್ನದು ಸಂಕೀರ್ಣವಾಗಿ ಸಾಗುವ ಪಾತ್ರ. ಈಗ ನೋಡಿದರೆ ಮತ್ತಷ್ಟೂ ಚೆನ್ನಾಗಿ, ಬೇರೆ ರೀತಿ ಪಾತ್ರ ಮಾಡಬಹುದು ಎನಿಸುತ್ತದೆ. ರೀಟಾ ದತ್ ನಿರ್ದೇಶನದ ಬೆಂಗಾಲಿ ಸಿನಿಮಾ ‘ಇಚ್ಚಾದಾನ್’ ಸಹ ಕಾಡಿಸಿದ ಚಿತ್ರ. ಬಾಂಗ್ಲಾದೇಶದ ಒಬ್ಬ ಅಸಂಘಟಿತ ಕಾರ್ಮಿಕಳು, ಕೋಲ್ಕತ್ತಾದಲ್ಲಿ ಅನ್ನ ಅರಸುವುದು... ಮಗು ಹೆರುವ ಆಸೆ ಹೊಂದಿರುವ ಆಕೆಗೆ ಗಂಡನ ಅಡ್ಡಿ. ಕೊನೆಗೆ ಮನೆಯನ್ನೇ ಆಕೆ ತೊರೆಯುವುದು...

ಈ ಸುತ್ತ ಚಿತ್ರಕಥೆ ನಡೆಯುತ್ತದೆ. ಬೆಂಗಾಲಿ ಭಾಷೆ ಕಲಿಕೆ– ಹೀಗೆ ಪ್ರತಿ ಹಂತದಲ್ಲಿಯೂ ಹೊಸತನಗಳನ್ನು ನನಗೆ ಈ ಚಿತ್ರ ಕೊಟ್ಟಿತು’ ಎಂದು ಕಾಡಿಸಿದ ಪಾತ್ರ ಮತ್ತು ಚಿತ್ರಗಳನ್ನು ಮುಕ್ತಗೊಳಿಸುತ್ತಾರೆ.

ಸಿನಿಮಾ ಮತ್ತು ಬದುಕಿಗೆ ಗಿರೀಶ್ ಕಾಸರವಳ್ಳಿ ಅವರಿಂದ ಅನನ್ಯ ಕಲಿತದ್ದು ಅಪಾರ. ಸಿನಿಮಾದ ಎಲ್ಲ ಕಲಿಕೆ ಅಪ್ಪನಿಂದಲೇ ಆಗಿದ್ದು ಎನ್ನುವ ಅನನ್ಯ, ಸಿನಿಮಾ ಓದುವಾಗ ಪ್ರಬಂಧಕ್ಕೆ ಆಯ್ಕೆ ಮಾಡಿಕೊಂಡಿದ್ದು ‘ಕಾಸರವಳ್ಳಿ ಸಿನಿಮಾಸ್’ ವಿಷಯವನ್ನು.

‘ಚೆನ್ನೈಗೆ ತೆರಳುವಾಗ ನೀನು ಥಿಯರಿ ಕ್ಲಾಸ್‌ಗಳನ್ನು ಯಾವುದೇ ಕಾರಣಕ್ಕೂ ಬಿಡಬೇಡ ಅಂದು ಅಪ್ಪ ಹೇಳಿದ್ದರು. ಅಪ್ಪನ ಸಿನಿಮಾಗಳಲ್ಲಿ ಕಲಿತಿದ್ದು ಮತ್ತು ನನ್ನ ಪ್ರಭಾವಿಸಿದ್ದು ಎಂದರೆ ಅವರು ಕಥೆ ಹೇಳುವ ಬಗೆ. ‘ಗುಲಾಬಿ ಟಾಕೀಸ್’ ಚಿತ್ರವನ್ನೇ ಗಮನಿಸುವುದಾದರೆ, ‘ಗುಲಾಬಿ’ ತನ್ನ ವಿರುದ್ಧದ ಕ್ರಿಯೆಗಳಿಗೆ ನೇರವಾಗಿ ಪ್ರತಿಭಟಿಸುವುದಿಲ್ಲ. ಆಕೆ ಆ ಪ್ರತಿಭಟನೆಯನ್ನು ಬೇರೆಯದ್ದೇ ರೀತಿ ಅಭಿವ್ಯಕ್ತಿಸುತ್ತಾಳೆ. ರೂಪಕಗಳ ಮೂಲಕ ಕಥೆಯನ್ನು ವಿಭಿನ್ನವಾಗಿ ಹೇಳುವ ಪ್ರಯತ್ನ ಅವರ ಚಿತ್ರಗಳಲ್ಲಿದೆ. ಅವರು ಕಥೆ ಕಟ್ಟವ ಕ್ರಮದಲ್ಲಿ ಪರ್ಯಾಯ ಮಾರ್ಗದ ಬಗ್ಗೆ ಮಾತನಾಡುತ್ತಾರೆ ಆ ಕಲೆ ನನಗೆ ಇಷ್ಟ’ ಎಂದು ಗಿರೀಶ್ ಕಾಸರವಳ್ಳಿ ಅವರ ಕಲೆಯನ್ನು ಬಳುವಳಿಯನ್ನಾಗಿಸಿಕೊಳ್ಳುವ ಸುಳಿವು ಬಿಟ್ಟುಕೊಡುತ್ತಾರೆ.

‘ಅಪ್ಪನಂತೆ ಮುಕ್ತತೆ ಇರುವ ವ್ಯಕ್ತಿಯನ್ನು ನಾನು ಇದುವರೆಗೂ ಕಂಡಿಲ್ಲ. ಅವರಿಗೆ ಯಾರ ಬಗ್ಗೆ ಯಾವ ಸಂದರ್ಭದಲ್ಲಿಯೂ ಬೇಸರವಿಲ್ಲ. ಎಲ್ಲರನ್ನೂ ಅವರವರ ಸ್ಥಾನದಲ್ಲಿ ನಿಂತು ಆ ಕ್ಷಣದಲ್ಲಿ ಅವರವರ ಸ್ಥಿತಿಯಲ್ಲಿ ನೋಡುವ ಗುಣವಿದೆ. ಆ ಗುಣ ನನಗೆ ತುಂಬಾ ಖುಷಿ ನೀಡುತ್ತದೆ’ ಎನ್ನುತ್ತಾರೆ ಅನನ್ಯ. ಸದ್ಯ ಲಿಂಗತಾರತಮ್ಯದ ಕುರಿತು ಅನನ್ಯ ರೂಪಿಸುತ್ತಿರುವ ಸಾಕ್ಷ್ಯಚಿತ್ರ ಅಂತಿಮ ಹಂತದಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT