ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಕರಣೀಯ ನಡೆ

Last Updated 30 ಸೆಪ್ಟೆಂಬರ್ 2014, 19:30 IST
ಅಕ್ಷರ ಗಾತ್ರ

ದಲಿತರು, ಅದರಲ್ಲೂ ಮಹಿಳೆಯರು ಎಂದ ಮೇಲೆ ಕೇಳಬೇಕೇ? ಸಮಾನತೆ ಎಂಬುದು ಅವರಿಗೆ ಮರೀಚಿಕೆಯೇ ಸೈ ಎಂಬಂಥ ಪರಿಸ್ಥಿತಿ ಸಮಾಜದಲ್ಲಿದೆ. ಆಧುನಿಕ ಯುಗದಲ್ಲೂ ತಾಂಡವವಾಡುತ್ತಿರುವ ಇಂತಹ ಸ್ಥಿತಿಯಲ್ಲಿ, ದಲಿತ ಮಹಿಳೆಯರಿಬ್ಬರನ್ನು ಗರ್ಭಗುಡಿಗೆ ಕರೆತಂದು ಅವ­ರಿಂದಲೇ ಪೂಜೆ ಮಾಡಿಸಿರುವ ಮಂಗಳೂರಿನ ಕುದ್ರೋಳಿ ಗೋಕರ್ಣನಾಥ ದೇವಾಲಯ ನಿಜಕ್ಕೂ ಇತಿಹಾಸ ಬರೆದಿದೆ.

ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಅವರ ನೇತೃತ್ವದಲ್ಲಿ ನಡೆದಿರುವ ಈ ಕಾರ್ಯ, ಧಾರ್ಮಿಕ ಕೇಂದ್ರಗಳಲ್ಲಿ ಪಂಕ್ತಿಭೇದದಿಂದ ಹಿಡಿದು ಅರ್ಚನೆಯವರೆಗೂ ಢಾಳಾಗಿ ಕಾಣುವ ಜಾತೀಯತೆಗೆ  ಸವಾಲೆಸೆಯುವಂತಿದೆ. ಇದೊಂದು ಸಾಂಕೇ­ತಿಕ ಕಾರ್ಯಕ್ರಮವಾದರೂ ಸಾಮಾಜಿಕ ಜಾಗೃತಿ ಮೂಡಿಸುವ ನಿಟ್ಟಿ­ನಲ್ಲಿ ಮಹತ್ವದ ಹೆಜ್ಜೆಯೇ ಸರಿ. ಇದೇ ಸಂದರ್ಭದಲ್ಲಿ, ಅತ್ತ ಬಿಹಾರದ ದೇವ­ಸ್ಥಾನವೊಂದು ದಲಿತ ವರ್ಗಕ್ಕೆ ಸೇರಿದ ಮುಖ್ಯಮಂತ್ರಿ ಭೇಟಿ ನೀಡಿದ್ದಕ್ಕೆ ಶುದ್ಧೀಕರಣ ಕಾರ್ಯ ನಡೆಸಿರುವುದು ಬೆಳಕಿಗೆ ಬಂದಿದೆ.

ದಲಿತ ಸಚಿವರು, ಖ್ಯಾತ ಸಂಗೀತಗಾರರು ಜಾತಿ ಕಾರಣಕ್ಕೆ ಇಂತಹ ಅವಮಾನಕ್ಕೆ ಒಳಗಾಗುವುದು ಆಗಿಂದಾಗ್ಗೆ ವರದಿಯಾಗುತ್ತಲೇ ಇದೆ. ಖ್ಯಾತ­ನಾಮರು, ಅಧಿಕಾರಸ್ಥರಿಗೇ ಇಂತಹ ಸ್ಥಿತಿಯಾದರೆ ಇನ್ನು ಸಾಮಾನ್ಯ ಜನರ ಪಾಡನ್ನು ಊಹಿಸಿಕೊಳ್ಳುವುದೂ ಅಸಾಧ್ಯ. ಜಾತೀಯತೆಯು ಕೀಳ­ರಿಮೆ ಹುಟ್ಟಿಸಿ ಮಾನಸಿಕವಾಗಿ ಕೊಲ್ಲುವ ಅನಿಷ್ಟ ಪದ್ಧತಿ. ಅನಕ್ಷರಸ್ಥರಷ್ಟೇ ತೀವ್ರ­ವಾಗಿ ಸುಶಿಕ್ಷಿತರೂ ಇದನ್ನು ಪಾಲಿಸುತ್ತಿದ್ದಾರೆ. ದಿನದಿನಕ್ಕೆ ಕಡಿಮೆ­ಯಾಗುವ ಬದಲು ತನ್ನ ಬೇರನ್ನು ಗಟ್ಟಿಗೊಳಿಸಿಕೊಳ್ಳುತ್ತಲೇ ಹೋಗುತ್ತಿರುವ ಈ ಅಂಟುಜಾಡ್ಯಕ್ಕೆ ಧಾರ್ಮಿಕ ಕೇಂದ್ರಗಳು ವೇದಿಕೆಯಾಗುತ್ತಿರುವುದು ಜಗ­ಜ್ಜಾಹೀರು.

ಬದುಕಿನ ಜಂಜಾಟದಿಂದ ತಾತ್ಕಾಲಿಕ ನೆಮ್ಮದಿಗಾಗಿ ಜನ ಅರಸಿ ಹೋಗು­ವುದು ಶ್ರದ್ಧಾ ಕೇಂದ್ರಗಳನ್ನು. ಅವು ಧಾರ್ಮಿಕ ಅಂಧಶ್ರದ್ಧೆಯನ್ನು ತೊಡೆ­ಯುವುದಿರಲಿ ಸ್ವತಃ ಅಸ್ಪೃಶ್ಯತೆ, ಕಂದಾಚಾರದ ಗೂಡುಗಳಾಗಿ ಯಾವುದೇ ಧರ್ಮ ಅಥವಾ ಸಂವಿಧಾನದ ಮೂಲ ಆಶಯಕ್ಕೇ ಕೊಡಲಿ­ಪೆಟ್ಟು ನೀಡುವಂತಾದರೆ, ಅದನ್ನು ‘ಧಾರ್ಮಿಕ ದಿವಾಳಿತನ’ ಎನ್ನದೇ ವಿಧಿ­ಯಿಲ್ಲ. ದುರದೃಷ್ಟವಶಾತ್‌ ಇಂಥದ್ದೇ ಪರಿಸ್ಥಿತಿ ಇರುವ ರಾಜ್ಯದ ಬಹುತೇಕ ಧಾರ್ಮಿಕ ಕೇಂದ್ರಗಳ ನಡುವೆ ಗೋಕರ್ಣನಾಥೇಶ್ವರ ಕ್ಷೇತ್ರ ಭಿನ್ನವಾಗಿ ನಿಲ್ಲು­ತ್ತದೆ. ಪತಿಯನ್ನು ಕಳೆದುಕೊಂಡ ಮಹಿಳೆಯರಿಗೆ ಮಂಗಳದ್ರವ್ಯ ವಿತರಿಸಿ

ದ್ದ­ಲ್ಲದೆ, ಚಂಡಿಕಾ ಹೋಮ ಮಾಡುವ, ಬೆಳ್ಳಿರಥ ಎಳೆಯುವ ಅವಕಾಶ
ಒದಗಿ­ಸಿದ್ದು, ಕಳೆದ ನವರಾತ್ರಿಯಲ್ಲಿ ದಲಿತ ಮಹಿಳೆಯೊಬ್ಬರ ಪಾದಪೂಜೆ ಮಾಡು­ವಂತಹ ಪುರೋಗಾಮಿ ಬೆಳವಣಿಗೆಗಳೂ ಇಲ್ಲಿ ನಡೆದಿವೆ.

‘ಈ ಮಹಿಳೆಯರಿಗೆ ಮಂತ್ರ ಉಚ್ಚಾರಣೆಯ ತರಬೇತಿಯೇ ಆಗಿಲ್ಲ’ ಎಂಬಂ­ತಹ ಕೊಂಕು ಮಾತುಗಳಿಗೆ ‘ದೇವರ ಪೂಜೆಗೆ ಭಕ್ತಿಗಿಂತ ಮಿಗಿಲಾದ ಮಂತ್ರ ಬೇಕಿಲ್ಲ’ ಎಂಬ ಈ ದೇವಸ್ಥಾನದ ಸ್ಥಾಪಕರಾದ ಸಮಾಜ ಸುಧಾರಕ ನಾರಾಯಣ ಗುರುಗಳ ಉಕ್ತಿಯ ಮೂಲಕವೇ ತಿರುಗೇಟು ಕೊಟ್ಟಿರುವುದು ಸರಿ­ಯಾಗಿಯೇ ಇದೆ. ದೇವಸ್ಥಾನದ ಇಂತಹ ಕ್ರಾಂತಿಕಾರಿ ಹೆಜ್ಜೆಯನ್ನು ಸಾಮಾ­ಜಿಕ ಜಾಲತಾಣದಲ್ಲಿ ಅವಹೇಳನ ಮಾಡಿದ ವ್ಯಕ್ತಿಯನ್ನು ತ್ವರಿತ­ವಾಗಿ ಹುಡುಕಿ ಬಂಧಿಸಿರುವ ಪೊಲೀಸರ ಕ್ರಮವೂ ಶ್ಲಾಘನೀಯ. ತೀವ್ರ­ವಾಗುತ್ತಿರುವ ಜಾತೀಯತೆಯನ್ನು ಎದುರಿಸಲು ಇಂತಹ ದಿಟ್ಟ ಕಾರ್ಯಗಳು ಅಸ್ತ್ರವಾಗಬಲ್ಲವೇ ಹೊರತು ವೇದಿಕೆಗಳಿಗಷ್ಟೇ ಸೀಮಿತವಾಗುವ ಬರೀ ಒಣ ಭಾಷಣಗಳಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT