ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುವಾದ ಒಂದು ಸವಾಲಿನ ಕೆಲಸ: ವಾನಳ್ಳಿ

Last Updated 28 ಜೂನ್ 2014, 6:12 IST
ಅಕ್ಷರ ಗಾತ್ರ

ಧಾರವಾಡ: ‘ಅನುವಾದ ಒಂದು ಸವಾಲಿನ ಕೆಲಸ­ವಾಗಿದ್ದು, ಸಮಯದ ಒತ್ತಡ, ಮುದ್ರಣ ಸ್ಥಳದ ಮಿತಿ ಹಾಗೂ ತನ್ನದಲ್ಲದ ವಿಷಯವನ್ನು ಸಮಯ ಪ್ರಜ್ಞೆಯಿಂದ ಸರ್ವರಿಗೂ ಉಪಯುಕ್ತ­ವಾಗುವಂತೆ ಪ್ರಸ್ತುತ ಪಡಿಸುವುದು ಉಪಸ­ಂಪಾದಕರ ಜವಾ­ಬ್ದಾರಿ’ ಎಂದು ಮೈಸೂರು ವಿಶ್ವ­ವಿದ್ಯಾ­ಲ­ಯದ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ  ಪ್ರೊ. ನಿರಂಜನ ವಾನಳ್ಳಿ ಹೇಳಿದರು. 

ಅವರು ಕರ್ನಾಟಕ ಕಲಾ ಮಹಾವಿದ್ಯಾಲಯ­ದಲ್ಲಿ ಕೇಂದ್ರೀಯ ಭಾಷಾ ಸಂಸ್ಥಾನ ಮೈಸೂರಿನ ರಾಷ್ಟ್ರೀಯ ಅನುವಾದ ಮಿಶನ್ ಆಯೋಜಿಸಿರುವ ಐದು ದಿನಗಳ ಅನುವಾದ ಕಮ್ಮಟದಲ್ಲಿ ‘ಮಾಧ್ಯಮ ಉತ್ಪನ್ನಗಳಲ್ಲಿ ಅನುವಾದ ತಂತ್ರಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ, ಮಾತನಾಡುತ್ತಿದ್ದರು.

ಪತ್ರಕರ್ತರು, ವಿಷಯತಜ್ಞರಾಗಿ­ರುವ ಜತೆ ಸಾಮಾನ್ಯ ಜ್ಞಾನವನ್ನು ಹೊಂದಿರುವುದು ಅಗತ್ಯ.  ಅವರು ಸಮಾಜದಲ್ಲಿ ಘಟಿಸುವ ಘಟನೆಗಳನ್ನು ಓದುಗರಿಗೆ ಸರಳವಾಗಿ ತಿಳಿಯುವಂತೆ ಕಟ್ಟಿಕೊಡುತ್ತಾರೆ. ವಿಜ್ಞಾನ, ತಂತ್ರಜ್ಞಾನ, ಸಾಹಿತ್ಯ, ಸಂಗೀತ, ನಾಟ್ಯ ಹಾಗೂ ರಾಜಕೀಯ, ಆರ್ಥಿಕ ಘಟನೆಗಳನ್ನು ವಿವಿಧ ಭಾಷೆಗಳಿಂದ ತರ್ಜುಮೆ ಮಾಡಿ ನೀಡುತ್ತಾರೆ. ಆದ್ದರಿಂದ ಪತ್ರಕರ್ತರಿಗೆ ಕನಿಷ್ಠ ಎರಡಕ್ಕಿಂತಲೂ ಹೆಚ್ಚು ಭಾಷೆ ಬರೆಯಲು ಮತ್ತು ಓದಲು ಬರುವುದು ಅವಶ್ಯಕ’ ಎಂದರು. 

‘ಇಂದು ಕನ್ನಡ ಪತ್ರಿಕೋದ್ಯಮ ಅನೇಕ ತಲ್ಲಣಗಳಿಗೆ ಸಾಕ್ಷಿಯಾಗುತ್ತಿದೆ. ಮುಖ್ಯವಾಗಿ ವ್ಯಾಕರಣ ದೋಷ, ಅಪೂರ್ಣ ಮಾಹಿತಿ ಹಾಗೂ ವಿಷಯ ಪುನರಾವರ್ತನೆಯಂತಹ ಘಟನೆಗಳು ಮಾಧ್ಯಮ ಲೋಕದಲ್ಲಿ ಸಹಜವಾಗುತ್ತಿವೆ. ಇದಕ್ಕೆ ಕೇವಲ ಪತ್ರಿಕಾ ಕಚೇರಿಯ ಸಿಬ್ಬಂದಿ ಮಾತ್ರ ಕಾರಣರಾಗಿರದೇ ಶೈಕ್ಷಣಿಕ ವಲಯದಲ್ಲಿರುವ ವಿದ್ಯಾರ್ಥಿ ಮತ್ತು ಬೋಧಕವರ್ಗವು ಕಾರಣವಾಗಿದೆ’ ಎಂದು ಅವರು ಹೇಳಿದರು.

ಮೈಸೂರು ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಪ್ರಧಾನ ಗುರುದತ್ತ ಅವರು ‘ಅನುವಾದ ಪರಿಭಾಷೆಯ ತೊಂದರೆಗಳು’ ಕುರಿತು ವಿಶೇಷ ಉಪನ್ಯಾಸ ನೀಡಿ, ‘ಭಾಷೆಯ ಸ್ವರೂಪವನ್ನು ಸಮಕಾಲಿನ ಅಗತ್ಯಕ್ಕೆ ತಕ್ಕಂತೆ ಬದಲಿಸಬೇಕು. ಪಾರಿಭಾಷಿಕ ಪದಗಳ ಬಳಕೆ ಹೆಚ್ಚಾಗಬೇಕು. ಪರ­ಭಾಷೆಯ ಪದಗಳ ಬಳಕೆಯಲ್ಲಿ ಅನು­ವಾದಕರು ಮಡಿವಂತಿಕೆ ತೋರ­ಬಾರದು’ ಎಂದು ಸಲಹೆ ಮಾಡಿದರು.

ರಾಷ್ಟ್ರೀಯ ಅನುವಾದ ಮಿಶನ್‌ನ ಹಿರಿಯ ಸಮಾಲೋಚಕಿ ಡಾ. ಮಂಜುಳಾಕ್ಷಿ ಎಲ್. ಸ್ವಾಗತಿಸಿದರು. ಡಾ. ರಾಜೇಶ್ವರಿ ಮಹೇಶ್ವರಯ್ಯ ವಂದಿ­ಸಿದರು. ಶೈಕ್ಷಣಿಕ ಸಮಾಲೋಚಕ ಜ್ಞಾನಮೂರ್ತಿ ಬಿ.ಆರ್. ಕಾರ್ಯಕ್ರಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT