ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅರ್ಥಪೂರ್ಣ ಪ್ರಯೋಗ ‘ಗಾಂಧಿಗೆ ಸಾವಿಲ್ಲ’

ರಂಗಭೂಮಿ
Last Updated 24 ಸೆಪ್ಟೆಂಬರ್ 2015, 19:30 IST
ಅಕ್ಷರ ಗಾತ್ರ

ಗಾಂಧೀಜಿಯವರ ಸಿದ್ಧಾಂತಗಳಿಗೆ ಸಾವಿಲ್ಲವೆಂಬ ಅರ್ಥಪೂರ್ಣ ಶೀರ್ಷಿಕೆಯ ನಾಟಕ ‘ಗಾಂಧಿಗೆ ಸಾವಿಲ್ಲ’ ನೋಡುಗರನ್ನು ಮಂತ್ರಮುಗ್ಧಗೊಳಿಸಿ ಸೆರೆಹಿಡಿಯಿತು. ಯುವ ನಿರ್ದೇಶಕ ಅಭಿಮನ್ಯು ಭೂಪತಿ ಅವರ ನಿರ್ದೇಶನದ ಈ ನಾಟಕವನ್ನು ‘ಬೆಂಗಳೂರು ಥಿಯೇಟರ್ ಎನ್‌ಸೆಂಬಲ್’ ರಂಗತಂಡ ಇತ್ತೀಚೆಗೆ ಕೆ.ಎಚ್.ಕಲಾಸೌಧದಲ್ಲಿ ಪ್ರಸ್ತುತಿಗೊಳಿಸಿತು.  ಲೇಖಕ ಅಸ್ಗರ್ ವಜಾಹತ್‌ ಅವರ ಹಿಂದೀ ನಾಟಕವನ್ನು ಕನ್ನಡಕ್ಕೆ ತಂದವರು ಹಸನ್‌ನಯಿಂ ಸುರಕೋಡ.

ಮಹಾತ್ಮ ಗಾಂಧೀಜಿಯವರು ಒಂದುವೇಳೆ, ನಾಥೂರಾಂ ಗೋಡ್ಸೆಯ ಗುಂಡಿಗೆ ಎದೆಯೊಡ್ಡಿಯೂ ಬದುಕುಳಿದಿದ್ದರೆ ಏನಾಗುತ್ತಿತ್ತು ಎಂಬ ಸುಂದರ ಪರಿಕಲ್ಪನೆಯ  ಅರ್ಥವತ್ತಾದ ಉತ್ತಮ ನಾಟಕ. ಕಡಿಮೆ ಮಾತುಗಳ, ಪರಿಣಾಮಕಾರಿ ಪಾತ್ರಚಿತ್ರಣಗಳ, ಗಂಭೀರ ಸನ್ನಿವೇಶಗಳಿಂದ ಒಡಗೂಡಿ ನಿಜಕ್ಕೂ ಅನನ್ಯ ಅನುಭೂತಿಯನ್ನು ನೀಡಿತು. ನಾಟಕಕಾರನ ಹೊಸ ಕಾಣ್ಕೆ, ವಿಚಾರ ಮಂಥನಗಳ ಈ ಗಂಭೀರ ನಾಟಕ ಕುತೂಹಲ-ತೀವ್ರ ಆಸಕ್ತಿಯಿಂದ ವೀಕ್ಷಿಸುವಂತೆ ಪ್ರೇಕ್ಷಕರನ್ನು ಕಟ್ಟಿಹಾಕಿತು.

ಗೋಡ್ಸೆಯ ಗುಂಡಿಗೆ ತುತ್ತಾದ ಗಾಂಧೀಜಿಯವರು ಪ್ರಾಣಾಪಾಯದಿಂದ ಪಾರಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ನಂತರ, ಸ್ವಾತಂತ್ರ್ಯ ಹೋರಾಟಕ್ಕೆ ಅನಿವಾರ್ಯವಾಗಿದ್ದ ಕಾಂಗ್ರೆಸ್ ಸಂಘಟನೆಯನ್ನು ವಿಸರ್ಜಿಸಬೇಕೆಂಬ ತಮ್ಮ ಸಲಹೆಗೆ ಒಪ್ಪಿಗೆ ದೊರೆಯದೇ ಇದ್ದುದರಿಂದ, ಕಾಂಗ್ರೆಸ್ ತೊರೆದು, ಬಿಹಾರದಲ್ಲಿ ಗ್ರಾಮ ಸ್ವರಾಜ್ಯ ಕಲ್ಪನೆಯ ಪ್ರಯೋಗಾಶ್ರಮ ಸ್ಥಾಪಿಸುವ ಮೂಲಕ ಪರ್ಯಾಯ ಆಡಳಿತ ನಡೆಸುತ್ತಾರೆ. ಇದನ್ನು ಅಪರಾಧವೆಂದು ಭಾವಿಸಿದ ನ್ಯಾಯಾಲಯ, ಅವರನ್ನು ಜೈಲಿಗೆ ಅಟ್ಟುತ್ತದೆ. ಅದೇ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ನಾಥೂರಾಂ ಗೋಡ್ಸೆಯೊಡನೆ ಮುಖಾಮುಖಿಯಾಗಿ ಗಾಂಧೀಜಿ ನಡೆಸುವ ಸಂವಾದವೇ ನಾಟಕದ ತಿರುಳು.

ಸಾತ್ವಿಕ ಮತ್ತು ತಾಮಸ ಗುಣಗಳ ನಡುವಣ ಸಂಘರ್ಷದ ಈ ನಾಟಕದಲ್ಲಿ ಗಾಂಧೀಜಿ, ಗೋಡ್ಸೆಯೊಡನೆ ತಾತ್ವಿಕ ಜಿಜ್ಞಾಸೆ ನಡೆಸುತ್ತಾರೆ. ಬಿಸಿರಕ್ತದ ಯುವಕ ಗೋಡ್ಸೆ,   ಹಿಂದುತ್ವವನ್ನು ಪ್ರತಿಪಾದಿಸುತ್ತ, ಅವನರಿವಿಲ್ಲದೆ ಅವರ ಸಿದ್ಧಾಂತದ ನೆಲೆಯನ್ನು ತಲುಪುತ್ತಾನೆ. ಇಬ್ಬರ ಕೈಯಲ್ಲೂ ತಾವು ನಂಬಿದ ಭಗವದ್ಗೀತೆಯೇ ಇದ್ದರೂ ಅದನ್ನು ಅರ್ಥೈಸಿಕೊಳ್ಳುವ ರೀತಿ ವಿಭಿನ್ನವಾಗಿದ್ದು, ಗಾಂಧೀಜಿ ಕಡೆಗೆ ತಮ್ಮ ಸಾತ್ವಿಕವಾದದೊಂದಿಗೆ ಆರೋಗ್ಯಪೂರ್ಣ ಚರ್ಚೆ ನಡೆಸುತ್ತ ಅವನನ್ನು ತಮ್ಮತ್ತ ಸೆಳೆದುಕೊಳ್ಳುವ ಮೂಲಕ ಅವನಲ್ಲೊಂದು ಸಂಚಲನ ಉಂಟು ಮಾಡುವುದೇ ನಾಟಕದ ಸ್ವಾರಸ್ಯ.

ನಾಟಕಕಾರರು ಯಾವುದೇ ಪೂರ್ವಗ್ರಹವಿಲ್ಲದೆ ನಿಷ್ಪಕ್ಷಪಾತವಾಗಿ ಪಾತ್ರ ಚಿತ್ರಣಗಳನ್ನು ಕಂಡರಿಸಿರುವುದರಲ್ಲಿ ಅಪಾರ ಸಂಯಮವಿದೆ. ಈ ಸಂವಾದವನ್ನು ಬಾಪು ‘ದ್ವೇಷ ಮತ್ತು ಪ್ರೇಮದ ನಡುವಣ ಹೊಸ ದಾರಿ’ ಎನ್ನುತ್ತಾರೆ. ಸಮನ್ವಯ ಮತ್ತು ಏಕತೆಯ ಮಹತ್ವವನ್ನು ಅವನಿಗೆ ಸೌಮ್ಯವಾಗಿ ಮನವರಿಕೆ ಮಾಡಿಕೊಡುವ ರೀತಿ ಅನನ್ಯ.

‘ಪಾಕಿಸ್ತಾನ ನನ್ನ ಮೃತ ದೇಹದ ಮೇಲೆ ನಿರ್ಮಾಣವಾಗುವುದು’ ಎಂದ ಗಾಂಧಿ ಈಗ ವಿಭಜನೆಗೆ ಕಾರಣವಾಗಿ, ಹಿಂದೂ ವಿರೋಧಿಯಾಗಿ ಮುಸಲ್ಮಾನರನ್ನು ಓಲೈಸುವ    ಗಾಂಧೀಜಿಯ ದ್ವಂದ್ವ ನೀತಿಯನ್ನು ಅವನು ಖಂಡಿಸಿದಾಗ, ಅವರು ತಮ್ಮ ಅಸಹಾಯಕತೆ ವ್ಯಕ್ತಪಡಿಸಿ, ತಾವು ಹಿಂದೂ ವಿರೋಧಿ ಅಲ್ಲ ಎನ್ನುವುದನ್ನು ನಿರೂಪಿಸುವ ಸನ್ನಿವೇಶ ಮನನೀಯವಾಗಿದೆ. ಗೋಡ್ಸೆಗೆ ಭಗವದ್ಗೀತೆಯನ್ನು ಕುರಿತು ಗಾಂಧೀಜಿ ಹೇಳುವ ಮಾತುಗಳು ಬಹು ಮಾರ್ಮಿಕವಾಗಿವೆ: ‘ನಮ್ಮಿಬ್ಬರಿಗೂ ಭಗವದ್ಗೀತೆಯೇ ಜೀವನದರ್ಶನವಾಗಿದೆ. ಅದು ನಿನಗೆ ನನ್ನನ್ನು ಹತ್ಯೆ ಮಾಡಲು ಪ್ರೇರಣೆ ನೀಡಿದರೆ, ನನಗೆ ನಿನ್ನನ್ನು ಕ್ಷಮಿಸಲು... ರಣರಂಗದಲ್ಲಿ ಹತ್ಯೆ ಮಾಡುವುದಕ್ಕೂ ಮತ್ತು ಪ್ರಾರ್ಥನಾಸಭೆಯಲ್ಲಿ ಹತ್ಯೆ ಮಾಡುವುದಕ್ಕೂ ವ್ಯತ್ಯಾಸವಿದೆ.

ನಾನು ಜೀವನವಿಡೀ ಭಗವದ್ಗೀತೆಯನ್ನು ಅರ್ಥೈಸಿಕೊಳ್ಳಲು ಶ್ರಮವಹಿಸಿದ್ದೇನೆ. ಭಗವದ್ಗೀತೆ ಕರ್ಮದ ವ್ಯಾಖ್ಯೆ ಸಹ ಮಾಡುತ್ತದೆ. ಇದು ಒಳಿತು ಮಾಡುವುದಕ್ಕಾಗಿಯೇ ಹೊರತು ಕೆಡುಕುಂಟು ಮಾಡುವುದಕ್ಕಲ್ಲ... ನನ್ನ ಆತ್ಮವನ್ನು ಕೊಲ್ಲಲು ನೀನೇಕೆ ಪ್ರಯತ್ನಿಸಲಿಲ್ಲ? ಶತ್ರು ಮತ್ತು ಮಿತ್ರರ ವಿಷಯವಾಗಿ ಒಂದೇ ಭಾವ ಹೊಂದಿರಬೇಕೆಂದು ಹೇಳುತ್ತೆ. ಭಗವದ್ಗೀತೆ ಸುಖ-ದುಃಖ, ಸಫಲತೆ-ವಿಫಲತೆ, ಬಂಗಾರ ಮತ್ತು ಮಣ್ಣು, ಮಿತ್ರ ಮತ್ತು ಶತ್ರುವಿನ ನಡುವೆ ವ್ಯತ್ಯಾಸ ಮಾಡುವುದಿಲ್ಲ. ಇದರಲ್ಲಿ ಸಮಾನತೆ, ಸೋದರತ್ವದ ಭಾವನೆ ಇದೆ. ನಿಜವಾದ ಸ್ವಾತಂತ್ರ್ಯ ಮನಸ್ಸು ಮತ್ತು ವಿಚಾರಗಳ ಸ್ವಾತಂತ್ರ್ಯ, ಹಿಂದೂಧರ್ಮ ಎಂದೂ ಪರಾಭವಗೊಂಡಿಲ್ಲ’.

ಆಶ್ರಮದ ಯುವತಿ ಸುಷುಮಾಳಿಗೆ ಅವಳ ಪ್ರೇಮಿ ಅಲಿಯೊಡನೆ ಅಂತರ್ಜಾತೀಯ ವಿವಾಹ ಮಾಡಿಸಿ, ಗಾಂಧೀಜಿ ಅವರಿಗೆ ‘ಭಗವದ್ಗೀತೆ’ಯನ್ನು ಕಾಣಿಕೆಯಾಗಿ ನೀಡಿದ ಸನ್ನಿವೇಶ ಮತ್ತು ಆ ಪ್ರಣಯಿಗಳ ಕನಸಿನ ವಿಹಾರದ ಅಪೂರ್ವ ದೃಶ್ಯ ಬಹುನವಿರಾಗಿ ಚಿತ್ರಿತವಾಗಿದ್ದು ಖುಷಿನೀಡಿತು.  ಬಾಪುವಿನ ಕನಸಿನಲ್ಲಿ ಕಸ್ತೂರಬಾ ಕಾಣಿಸಿಕೊಂಡು ಅವರ ತಪ್ಪುಗಳನ್ನು ಎತ್ತಿತೋರಿಸಿದ ದೃಶ್ಯ ಮನಮುಟ್ಟಿತು. ರೇಡಿಯೊ ವಾರ್ತೆಗಳ ಮೂಲಕ ನಿರೂಪಣಾ ಭಾಗವನ್ನು ನಿರ್ವಹಿಸಿರುವುದು ಒಂದು ಉತ್ತಮ ರಂಗತಂತ್ರವಾಗಿದೆ. ಒಟ್ಟಾರೆ ಗಾಂಧೀಜಿಯವರ ಜೀವನ ಮೌಲ್ಯಗಳಾದ ಅಹಿಂಸೆ, ದಯೆ, ಕ್ಷಮೆ, ಕರುಣೆ, ಸಹಿಷ್ಣುತೆ,ಕಾಯಕಧರ್ಮ,ವ್ಯಕ್ತಿ-ವಿಚಾರ ಸ್ವಾತಂತ್ರ್ಯಗಳು ಮತ್ತು ಗ್ರಾಮಸ್ವರಾಜ್ಯದ ಕಲ್ಪನೆಯನ್ನು ಮರುಪ್ರತಿಪಾದಿಸಲಾಗಿದೆ.

ಗಂಭೀರ ನೆಲೆಯಲ್ಲಿ ಸಾಗುವ ಈ ನಾಟಕದ ಪ್ರತಿಯೊಂದು ಪಾತ್ರವೂ ಪರಿಣಾಮಕಾರಿಯಾಗಿ ಪಾತ್ರ ನಿರ್ವಹಿಸಿದ್ದು ವಿಶೇಷ. ಮಾವಳ್ಳಿ ಕಾರ್ತಿಕ್-ಗಾಂಧೀಜಿಯಾಗಿ ಬಹು ಸಹಜಾಭಿನಯದೊಂದಿಗೆ ಪಕ್ವವಾದ ಉತ್ತಮ ಅಭಿನಯ ನೀಡಿದರೆ, ಗೋಡ್ಸೆಯಾಗಿ ರೋಹಿತ್ ನರೇಂದ್ರನಾಥ್ ಭಾವಾವೇಶದಿಂದ ಸೊಗಸಾಗಿ ನಟಿಸಿ ಮನದುಂಬಿದರು. ವಲ್ಲಭಭಾಯ್‌ ಆಗಿ ಜೀವನ್ ಗಂಗಾಧರಯ್ಯ ತಮ್ಮ ಗಾಂಭೀರ್ಯದಿಂದ ಗಮನಸೆಳೆದರೆ, ಪ್ಯಾರೇಲಾಲ್( ಶಿವಶಂಕರ್ ನಾಯಕ್), ನೆಹರೂ (ಕೌಶಿಕ್ ವಿಕ್ರಂ) ಶ್ರೀಬಾಬು(ಎಚ್.ರಕ್ಷಿತ್), ಸುಷುಮಾ(ಶ್ವೇತಾಗೌಡ) ಮತ್ತು ನಿರ್ಮಲಾದೇವಿ(ಪುಷ್ಪಾ ಸುಧೀಶ್) ಚೆನ್ನಾಗಿ ನಟಿಸಿದರು.

ಪರಿಣಾಮಕಾರಿ ವಾದ್ಯ ಸಂಗೀತ(ವರುಣ್ ಪ್ರದೀಪ್) ಕೈಮಗ್ಗದ ವಸ್ತ್ರವಿನ್ಯಾಸ, ಬೆಳಕಿನ ಸಂಯೋಜನೆ(ಮಂಜುನಾರಾಯಣ್) ಪ್ರಸಾಧನ ಹೀಗೆ ಪ್ರತಿಯೊಂದು ಅಂಶದಲ್ಲೂ ಅಪಾರ ಕಾಳಜಿ ವಹಿಸಲಾಗಿತ್ತು. ನಾಟಕದ ಪೂರ್ವಭಾವಿಯ ತಯಾರಿಯಲ್ಲಿ ನಿರ್ದೇಶಕರು ತಲಸ್ಪರ್ಶಿ ಅಧ್ಯಯನ ನಡೆಸಿ, ಚಿರಸ್ಮರಣೀಯ ನಾಟಕವನ್ನು ನಿರ್ದೇಶಿಸಿದ್ದು ಸ್ತುತ್ಯರ್ಹ. 25ರೊಳಗಿನ ಯುವಕರನ್ನು ಮೊದಲ ಬಾರಿಗೆ ರಂಗಮಂಚವೇರಿಸಿ ಸೂಕ್ತ ತರಬೇತಿ ನೀಡಿ ಸಮರ್ಥವಾಗಿ ಬಳಸಿಕೊಂಡಿದ್ದು ಮೆಚ್ಚುಗೆಯ ಸಂಗತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT